‘ಅಸುರಗುರು ಶುಕ್ರಾಚಾರ್ಯ’- ಈ ಕಾದಂಬರಿಯ ಕುರಿತು ಮಾಹಿತಿ ದೊರೆತ ಕ್ಷಣದಿಂದ ಓದಲು ಕೌತುಕಳಾಗಿದ್ದೆ. ಇದಕ್ಕೆ ಪ್ರಮುಖ ಕಾರಣ ಉಶನ ಎಂಬ ಹೆಸರು! ಬಿ.ಎಸ್ಸಿ. ಮುಗಿಸಿದ ವರುಷ ನಾನು ನನ್ನ ಮೊತ್ತಮೊದಲ ಈ-ಮೈಲ್ ಐಡಿ Yahoo.comನಲ್ಲಿ ತೆಗೆದದ್ದು “Ushana”ಎನ್ನುವ ಹೆಸರನಲ್ಲೇ ಆಗಿತ್ತು! ಈ ಹೆಸರಿನ ಮೇಲೆ ಆಕರ್ಷಣೆ ನನಗೆ ಮೊದಲಬಾರಿ ಮೂಡಿದ್ದು ಪ್ರೈಮರಿಯಲ್ಲಿ ಟೀಚರ್ ಭಗವದ್ಗೀತೆಯ ಹತ್ತನೇ ಅಧ್ಯಾಯದ ಶ್ಲೋಕವೊಂದನ್ನು ಪಠಿಸಿದಾಗ. “ಕವೀನಾಮ್ ಉಶನಾ ಕವಿಃ” ಎಂಬ ಸಾಲೊಂದು ಭಗವದ್ಗೀತೆಯ ವಿಭೂತಿಯೋಗದಲ್ಲಿ ಬರುತ್ತದೆ. ಆ ಕ್ಷಣದಿಂದ ‘ಉಶನ’ ಎನ್ನುವ ಹೆಸರನ್ನು ಮನಸ್ಸು ಕಚ್ಚಿಹಿಡಿದೇಬಿಟ್ಟಿತ್ತು. ಹೀಗಾಗಿ ಅದೇ ಮುಂದೆ ನನ್ನ ಪ್ರಥಮ ಈ-ಮೈಲ್ ಐಡಿಯಾಗಿಯೂ ಬಂದು ಕೂತಿದ್ದು. ಆಮೇಲೆ ಗೊತ್ತಾಗಿದ್ದು ಗೀತೆಯೊಳಗಿನ ಉಶನಕವಿಯೇ ದೈತ್ಯಗುರು ಶುಕ್ರಾಚಾರ್ಯರಾಗಿ ಜಗತ್ಪ್ರಿಸಿದ್ಧರಾದವರು ಎಂದು! ಈ ಎಲ್ಲಾ ಕಾರಣಗಳಿಂದಾಗಿಯೇ ನಾನು ಶುಕ್ರಾಚಾರ್ಯರ ಬಯೋಗ್ರಫಿಯಾಗಿರುವ ಶ್ರೀಯುತ ಶ್ರೀಧರ ಡಿ.ಎಸ್. ಅವರು ಬರೆದ “ಅಸುರಗುರು ಶುಕ್ರಾಚಾರ್ಯ” ಕಾದಂಬರಿಯನ್ನೋದಲು ಬಹಳ ಕಾತುರಳಾಗಿದ್ದು.
ಪ್ರಸ್ತುತ ಕಾದಂಬರಿಯು ಉಶನ ಎಂಬ ಮಹಾನ್ ಕವಿ ಹೇಗೆ ತನ್ನ ಸಾಧನೆಗಳ ಮೂಲಕ ಮಹಾನ್ ಗುರು ಶುಕ್ರಾಚಾರ್ಯನಾದ… ಆಮೇಲೆ ಅದೆಂತು ಅಸುರಗುರವೆಂಬ ಪದವಿ ಪಡೆದು, ಅಂತಿಮವಾಗಿ ಹರಿಯ(ವಾಮನ) ವರದಿಂದ ಶುಭಫಲ ಸೂಚಿಸುವ ಶುಕ್ರಗ್ರಹ ಪಟ್ಟವನ್ನೇರುತ್ತಾನೆ ಎಂಬುದನ್ನು ಸವಿಸ್ತಾರವಾಗಿ ಹಂತಹಂತದಲ್ಲಿ ಓದಗರಿಗೆ ಉಣಬಡಿಸುತ್ತದೆ.ಯಾರು ಎಷ್ಟೇ ವಿವೇಕಿ, ಜ್ಞಾನಿಯಾಗಿದ್ದರೂ, ಮಹಾನ್ ಸಾಧನೆಗಳನ್ನು ಮಾಡಿದ್ದರೂ, ಅನೇಕ ವಿದ್ಯೆಗಳನ್ನು ಗಳಿಸಿಕೊಂಡಿದ್ದರೂ, ದೈವಬಲದ ಕೊರತೆಯಿಂದ ಹಾಗೂ ವಿಧಿಯ ನಿಯಮಕ್ಕೆ ಒಳಪಟ್ಟು ಸಾಮಾನ್ಯರು ಪಡುವ ಎಲ್ಲಾ ಸಂಕಟವನ್ನೂ, ಹಿಂಸೆಯನ್ನೂ ಅನುಭವಿಸಲೇಬೇಕಾಗುತ್ತದೆ. ಅಂತೆಯೇ ‘ಅನುಭವಿಸುವುದೂ ಒಂದು ತಪಸ್ಸು’ ಎಂಬಂತೆ ಬಾಳಿಬದುಕಿ ಆದರ್ಶ ತೋರಿದ ಅಸುರಗುರು ಶುಕ್ರಾಚಾರ್ಯರ ಜೀವನಚರಿತ್ರೆಯಿದು.
ಗುರುವಾದವನು ಯಾವರೀತಿ ಔದಾರ್ಯ ತೋರಬೇಕು, ತಾನು ನಿಷ್ಪಕ್ಷಪಾತಿಯಾಗಿದ್ದು ತನ್ನ ಶಿಷ್ಯರ ಏಳಿಗೆಗಾಗಿ ಹೇಗೆ ನಿಷ್ಠನಾಗಿರಬೇಕು ಎಂಬುದನ್ನು ಶುಕ್ರಾಚಾರ್ಯರಲ್ಲಿ ನಾವು ಕಾಣುತ್ತೇವೆ. ತನಗೆ ಸಿಕ್ಕ ಶಿಷ್ಯರೇ ಅಸಮರ್ಥರು, ಆಸುರೀ ಸ್ವಭಾವವುಳ್ಳವರು, ಅಧಮರು – ಎಂದೆಲ್ಲಾ ಕೈಕೊಡವಿ ಅವರು ದೂರವಿದ್ದುಬಿಡಬಹುದಿತ್ತು. ಆದರೆ ಅದನ್ನೇ ಸವಾಲಾಗಿಸಿಕೊಂಡು ಪ್ರಹ್ಲಾದನಿಗೆ ಮಾರ್ಗದರ್ಶನನೀಡಿ ಅಂತಿಮವಾಗಿ ಬಲಿಚಕ್ರವರ್ತಿಯಂತಹ ಅಪ್ರತಿಮ ಅಸುರನನ್ನು ಸುರರ ಮಟ್ಟಕ್ಕೆ ಬೆಳೆಸುವಲ್ಲಿ ಸಫಲರಾಗುತ್ತಾರೆ. ಅಸುರರ ಏಳಿಗೆಗಾಯೇ ಕಠಿಣ ತಪಸ್ಸನ್ನು ಗೈದು ಶಿವನನ್ನು ಒಲಿಸಿಕೊಂಡು ಮೃತಸಂಜೀವಿನಿ ವಿದ್ಯೆಯನ್ನೂ ಪಡೆಯುತ್ತಾರೆ. ದೃಢಸಂಕಲ್ಪವಿದ್ದರೆ ಸಾಧನೆ ವ್ಯರ್ಥವಾಗದು ಎಂಬುದು ಅಲ್ಲಿ ಸಾಬೀತಾಗುತ್ತದೆ.
“’ಎಂತಹ ಸಾಧನೆಯಾದರೂ ಅರ್ಥವಾಗುವವರ ನಡುವೆ ಬೆಲೆ ಬರುತ್ತದೆ. ಗುಣಿಗಳ ಗುಣ ತಿಳಿಯುವುದೂ ಗುಣಿಗಳಿಗೇ ಹೊರತು ದುರ್ಗುಣಿಗಳಿಗಲ್ಲ.” – ಈ ಒಂದು ಸಾಲು ಶುಕ್ರಾಚಾರ್ಯರ ಸಾಮರ್ಥ್ಯವನ್ನು, ಸಾಧನೆಗಳ ಸಾಫಲ್ಯವನ್ನು, ಮತ್ತು ಅದು ಹೇಗೆ ಪ್ರಕಟಗೊಳ್ಳಲು ಬೇಕಾಗಿದ್ದ ಉತ್ತಮ ವಾತಾವರಣ ಹಾಗೂ ಸದ್ಗುಣಿ ಶಿಷ್ಯಗಣದ ಕೊರತೆಯಿಂದ ಹೊರಹೊಮ್ಮಲು ಪರದಾಡಿತು, ಆಮೂಲಕ ಅವರಿಗೆ ಮುಳುವಾಯಿತು ಎಂಬುದನ್ನೂ ಎತ್ತಿಹಿಡಿಯುತ್ತದೆ.
ತಮಗೆ ದೊರೆತ ಶಿಷ್ಯವೃಂದಕ್ಕೆ ಯಾವ ಲೋಪವೂ ಬರದಂತೇ ವಿದ್ಯೆಯನ್ನು ಧಾರೆಯೆರೆದು, ಅವರನ್ನು ಸುರರಿಗೆ ಸಮನಾಗಿಸಲು ಶುಕ್ರಾಚಾರ್ಯರು ಪಡುವ ಪ್ರಯಾಸ, ಒದ್ದಾಟಗಳು ನಿಜಕ್ಕೂ ಅಭಿನಂದನೀಯ. ಆದರೆ ತಮ್ಮ ಶಿಷ್ಯವೃಂದ ಅಸುರರಾಗಿದ್ದರೂ, ಪ್ರತಿದಿವಸ ಅವರೊಂದಿಗಿದ್ದರೂ ಶುಕ್ರಾಚಾರ್ಯರೆಂದೂ ಅವರಂತಾಗಲಿಲ್ಲ, ಬದಲು, ಅವರನ್ನು ತಮ್ಮ ದಾರಿಗೆ ತರಲು ಶ್ರಮಿಸಿದರು. ಇವೆಲ್ಲವೂ ಅವರನ್ನು ನನ್ನ ದೃಷ್ಟಿಯಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಒಯ್ದುಬಿಟ್ಟವು.
ಗುರುವಿನಷ್ಟೇ ಶಿಷ್ಯನೂ ಸಮರ್ಥನಾಗಿದ್ದಾಗ ಮಾತ್ರ ಸಂಪೂರ್ಣ ವಿದ್ಯೆ ಫಲಿತವಾಗುತ್ತದೆ ಎನ್ನುತ್ತಾರೆ. ಅಸುರರೊಳಗಿನ ಆಸುರೀಭಾವ, ಶಿಸ್ತಿಗೆ ಒಳಪಡಲು ಒಪ್ಪದ ಸ್ವಚ್ಛಂದತೆ, ದೈವೀಬಲದ ಕುರಿತು ತೋರುವ ತಿರಸ್ಕಾರ, ಹುಂಬತನ – ಈ ಎಲ್ಲಾ ಅವಗುಣಗಳಿಂದ ಅವರ ಬೆನ್ನಿಗೆ ಓರ್ವ ಶ್ರೇಷ್ಠ ಗುರುವಿದ್ದರೂ ‘ನಾವು ಇರುವಲ್ಲೇ ಇರುತ್ತೇವೆ’ ಎಂದು ಹಠ ಹಿಡಿದು ನೆಲಕಚ್ಚಿದ್ದೇ ಹೆಚ್ಚು. ಆದರೆ ಅವರೆಲ್ಲರ ನಡುವೆ ವಿಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುತ್ತಾರೆ ಅಸುರರಾದ ಪ್ರಹ್ಲಾದ ಮತ್ತು ಬಲಿಚಕ್ರವರ್ತಿ.
ಕಾದಂಬರಿಯಲ್ಲೇ ಒಂದೆಡೆ ಬರುವಂತೆ - “ಒಳ್ಳೆಯ ಪ್ರಜೆಗಳಿಗೆ ಒಳ್ಳೆಯ ಅರಸ ಸಿಗುವುದು ದುರ್ಲಭವಾದಂತೆ, ಒಳ್ಳೆಯ ಅರಸನಿಗೆ ಒಳ್ಳೆಯ ಪ್ರಜೆಗಳು ಸಿಗುವುದೂ ಕಷ್ಟ.”
ಇನ್ನು ಕಾದಂಬರಿಯೊಳಗಣ ಪಾತ್ರಚಿತ್ರಣದ ಕುರಿತು ಹೇಳಬಹುದಾದರೆ…
ಇಂದ್ರಾದಿ ದೇವತೆಗಳಿರಲಿ, ವೃಷಪರ್ವನಂತಹ ಅಸುರನೇ ಆಗಿರಲಿ – ಎಲ್ಲಿಯೂ ಲೇಖಕರು ತಮ್ಮ ಅಭಿಪ್ರಾಯವನ್ನು ಹೇರಿಂದತೆ ಕಾಣುವುದಿಲ್ಲ. ಪ್ರತಿ ಪಾತ್ರಗಳನ್ನೂ ಇದ್ದಹಾಗೆ ಬಿಂಬಿಸಲಾಗಿದೆ. ದೇವತೆಗಳಾದ್ದರಿಂದ ಎಲ್ಲವೂ ಒಳ್ಳೆಯದೇ, ಅಸುರರೆಂದರೆ ರಕ್ಕಸರು ಮಾತ್ರ ಎಂಬಂತೆ ಕಪ್ಪು-ಬಿಳುಪಾಗಿ ತೋರದೇ ಒಳಿತು ಮತ್ತು ಕೆಡುಕುಗಳು ಎಲ್ಲರಲ್ಲೂ ಹೇಗೆ ಹುದುಗಿರುತ್ತದೆ, ಯಾವ ರೀತಿ ಕೆಡುಕಿಗೆ ಪ್ರಾಶಸ್ತ್ಯಕೊಟ್ಟಾಗ ಅದೇ ಹೆಚ್ಚು ಪ್ರಕಟಗೊಂಡು ಕೆಡುಕನ್ನೇ ಮಾಡುತ್ತದೆ, ಯಾಕಾಗಿ ನಮ್ಮೊಳಗಿನ ಅಸುರನನ್ನು ಮಟ್ಟಹಾಕಿ ಒಳಿತಿಗೆ ಮಣೆಹಾಕಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಇಂದ್ರನೊಳಗಿನ ಕಪಟತನದ ಜೊತೆಗೆ, ಪ್ರಹ್ಲಾದನಂತಹ ಸಾತ್ವಿಕ ಗುಣಗಳುಳ್ಳ ಅಸುರ ಅರಸನನ್ನೂ ಕಾಣುತ್ತೇವೆ. ಬಲಿಚಕ್ರವರ್ತಿಯಂತಹ ಅಪ್ರತಿಮ ಸಾಹಸಿ, ಪ್ರಾಮಾಣಿಕ ಅಸುರನ ಜೊತೆಗೆ ಇಕ್ಷ್ವಾಕು ವಂಶದ ದಂಡಕನಂತಹ ನೀಚನಿರುವುದನ್ನೂ ಕಾಣುತ್ತೇವೆ. ಕಾದಂಬರಿಯುದ್ದಕ್ಕೂ ನನ್ನನ್ನು ಸೆಳೆದದ್ದು ಅಸುರಗುರ ಶುಕ್ರಾಚಾರ್ಯರ ಕಾರ್ಯ ನಿಷ್ಠೆ, ಅಸುರರ ಉನ್ನತಿಗಾಗಿ ಅವರು ಪಡುವ ಶ್ರಮ, ತಮ್ಮ ಶಿಷ್ಯರ ಶ್ರೇಯೋಭಿವೃದ್ಧಿಯ ಪ್ರತಿ ಅವರಿಗಿದ್ದ ಬದ್ಧತೆ – ಇವೆಲ್ಲವನ್ನು ಹಲವು ಕಥೆಗಳು/ಉಪಕಥೆಗಳ ಮೂಲಕ, ಸೋದಾರಣವಾಗಿ, ಮನವನ್ನು ಹೊಕ್ಕಿ ಕಾಡುವ ಸಂಭಾಷಣೆಗಳು, ಸ್ವಗತಗಳಿಂದ ಸೂಕ್ಷ್ಮವಾಗಿ ನೇಯ್ದು ತೋರಿಸಲಾಗಿದೆ. ವಂಚನೆಯಿಂದ ಮೃತಸಂಜೀವನಿ ವಿದ್ಯೆತರಲು ಮಗನನ್ನು ಕಳುಹಿಸುವ ಸುರಗುರು ಬ್ರಹಸ್ಪತಿ ಒಂದೆಡೆಯಾದರೆ, ಅಪ್ಪಟ ಪ್ರಾಮಾಣಿಕ, ಸಚ್ಚಾರಿತ್ರ್ಯನಾದ ಅವನದೇ ಮಗ ಕಚ ಇನ್ನೊಂದೆಡೆ! ಋಷಿಕುಮಾರಿಯಾಗಿಯೂ ದರ್ಪ, ಅಹಂಕಾರ, ಶ್ರೇಷ್ಠತೆಯ ವ್ಯಸನ ತೋರುವ ದೇವಯಾನಿ ಒಂದೆಡೆಯಾದರೆ, ಅಸುರ ಕುವರಿಯಾಗಿಯೂ ನುಡಿದಂತೇ ನಡೆವ ಛಲ, ತನ್ನ ಮನೋಸಂಕಲ್ಪದಿಂದಲೇ ಮಗ ಪುರುವಿನೊಳಗೆ ಆದರ್ಶತುಂಬಿ ಬೆಳೆಸಿ ಅವನನ್ನು ಚಕ್ರವರ್ತಿಯನ್ನಾಗಿಸುವ ಶರ್ಮಿಷ್ಠೆ ಮತ್ತೊಂದೆಡೆ. ಹೀಗೆ ಪ್ರತಿ ಪಾತ್ರದೊಳಗೂ ಒಳಿತು-ಕೆಡುಕುಗಳ ಮಿಶ್ರಣ ಕಾಣಸಿಗುತ್ತದೆ. ನನಗೆ ಪೂರ್ವಾಗ್ರಹ ಕಾಣಿಸಲಿಲ್ಲ. ಸ್ವತಃ ಶುಕ್ರಾಚಾರ್ಯರೇ ಎಷ್ಟೇ ದೊಡ್ಡ ಸಾಧಕರೆನಿಸಿಕೊಂಡಿದ್ದರೂ ತಮ್ಮ ಕೆಲವೊಂದು ದುಡುಕು ನಿರ್ಧಾರಗಳು, ಮಗಳ ಮೇಲಣ ಅತಿಯಾದ ಮೋಹ ಹಾಗೂ ತಮ್ಮ ಅನಿಯಂತ್ರಿತ ಸಿಟ್ಟಿಗೆ ಸಿಲುಕಿ ಬಹಳಷ್ಟು ಅವಗಡಗಳಿಗೆ, ಅನಾಹುತಗಳಿಗೆ ಕಾರಣರಾಗುತ್ತಾರೆ. ಮನುಷ್ಯದೇಹವನ್ನು ಹೊತ್ತ ಮೇಲೆ ಯಾರೆಷ್ಟೇ ಶ್ರೇಷ್ಠರಾಗಿದ್ದರೂ ಮನುಜ ಜನ್ಮದ ಕಟ್ಟುಪಾಡುಗಳಿಂದ, ಲೋಪದೋಷಗಳಿಂದ ಮುಕ್ತರಾಗುವುದು ಸುಲಭವಲ್ಲ, ವಿಧಿಯ ನಿಯಮಗಳಿಂದ ಪಾರಾಗಲು ಸಾಧ್ಯವಿಲ್ಲ ಎಂಬುದನ್ನು ಕಾಣುತ್ತೇವೆ.
ಮನದಲ್ಲಿ ಕೂತ ಸಾಲುಗಳು ಹಲವು, ಅವುಗಳಲ್ಲಿ ಒಂದಿಷ್ಟು-
*ಆಲದಮರ ಒಳ್ಳೆಯದೇ, ಅದರಡಿಯಲ್ಲಿ ಬೆಳೆದ ಮುಳ್ಳು ಚುಚ್ಚದಿರುತ್ತದೆಯೇ?
*ಒಳ್ಳೆಯ ಆಡಳಿತ ಒಳ್ಳೆಯ ವ್ಯಕ್ತಿತ್ವದಿಂದ ಮಾತ್ರ ಬರಲಾರದು. ತಂತ್ರಗಾರಿಕೆ, ಚಾತುರ್ಯ ಮೊದಲಾದ ಗುಣಗಳು ಬೇಕಾಗುತ್ತದೆ.
*ಗೊಬ್ಬರವಿಕ್ಕಿ ಬೆಳೆಸಿದ ತೋಟಕ್ಕೆ, ಗೊಬ್ಬರವೂ ಬೇಡದೇ ಬೆಳೆಯುವ ಕಳೆಯೇ ತೊಂದರೆ ಕೊಡುತ್ತದೆ.
*ಕಟುಕನ ಕತ್ತಿ ಎಷ್ಟು ಹೊಳೆದರೇನು? ಮಾಡುವ ಕಾರ್ಯ ಕಡಿಯುವುದೇ.
*ಬೇರು ಕತ್ತರಿಸುವ ದಾನ ಧರ್ಮವೇ ಆಗದು.
*ಮೃತ್ಯುವಿನಿಂದ ಪಾರುಮಾಡಲು ಮೃತ್ಯುವಾಗುವುದು ತಪ್ಪಲ್ಲ.
*ಸುಖವಿರಲಿ, ದುಃಖವಿರಲಿ, ಭೋಗ-ಯೋಗ ಏನೇ ಇದ್ದರೂ ಪ್ರಾಪ್ತಿಸಿಕೊಂಡ ಪುಣ್ಯ-ಪಾಪಗಳಿಂದಲೇ ಜಗತ್ತಿನಲ್ಲಿ ಬದುಕು ಸಾಗುತ್ತದೆ.
*ಈ ಜಗದ್ವ್ಯವಸ್ಥೆಯಲ್ಲಿ ಎಲ್ಲರೂ ಸುರರಾದರೆ ಮತ್ತೇನು ಉಳಿದೀತು? ಸುರತ್ವದ ಸ್ವಾರಸ್ಯ ಇರುವುದೇ ಅಸುರತ್ವದಲ್ಲಲ್ಲವೇ? ಸುರರು ಸರಿಯಾದ ಎಚ್ಚರದಲ್ಲಿಲ್ಲದೆ ಅನೇಕ ಬಾರಿ ಅಸುರರಾದುದೂ ಉಂಟಲ್ಲ. ಸುರಾಸುರ ಸಂಘರ್ಷದಲ್ಲಿ ಲೋಕ ಪಕ್ವಗೊಳ್ಳುತ್ತಾ ಸಾಗುವುದು ನಿರಂತರ ಪ್ರಕ್ರಿಯೆ.
ಈ ರೀತಿ ಶುಕ್ರಾಚಾರ್ಯರ ಬದುಕಿನ ಸುದೀರ್ಘ ಪಯಣವನ್ನು ಸತ್ವಯುತವಾಗಿ, ಶಕ್ತಿಯುತ ಹಾಗೂ ರಸವತ್ತಾದ ನಿರೂಪಣೆಯಿಂದ, ಮನಮುಟ್ಟುವ ಸಂಭಾಷಣೆಗಳಿಂದ ಸವಿಸ್ತಾರವಾಗಿ ವಿವರಿಸುತ್ತಾ ಹೋಗಿದ್ದಾರೆ ಲೇಖಕರು. ಆ ಪಯಣದಲ್ಲೇ ನಮಗೆ ಅನೇಕ ಹೊಸ ಹೊಳಹುಗಳು, ಚಿಂತನೆಗಳು, ಈವರೆಗೂ ವಿವರವಾಗಿ ದೊರಕದಿದ್ದ ಹಲವಾರು ಪ್ರಸಂಗಗಳ ಕುರಿತು ಮಾಹಿತಿಗಳು – ಇವೆಲ್ಲವೂ ದೊರಕುತ್ತಾ ಹೋಗುತ್ತದೆ. ಹೀಗಾಗಿ ನಿಶ್ಚಿತವಾಗಿಯೂ ಇದೊಂದು ಸಂಗ್ರಹಯೋಗ್ಯ ಕಾದಂಬರಿ.
#ಅಸುರಗುರು_ಶುಕ್ರಾಚಾರ್ಯ
#ಉಶನಕವಿ
#ಪುಸ್ತಕ_ವಿಮರ್ಶೆ
~ತೇಜಸ್ವಿನಿ ಹೆಗಡೆ.
ಪುಸ್ತಕ : ಅಸುರಗುರು ಶುಕ್ರಾಚಾರ್ಯ
ಲೇಖಕರು : ಶೀಧರ ಡಿ.ಎಸ್.
ಪ್ರಕಾಶಕರು : ಸಾಹಿತ್ಯ ಭಂಡಾರ
ಪುಟಗಳು : ೩೭೯
ಬೆಲೆ : ೩೫೦
1 ಕಾಮೆಂಟ್:
ಧನ್ಯವಾದಗಳು, ಉಶನಾ! ಕಾದಂಬರಿಯ ವಿಶ್ಲೇಷಣೆಯನ್ನು ಚೆನ್ನಾಗಿ ಮಾಡಿದ್ದೀರಿ. ಓದಬೇಕೆನ್ನುವ ಕುತೂಹಲವನ್ನು ಹುಟ್ಟಿಸುತ್ತದೆ. ಶುಕ್ರಾಚಾರ್ಯರ ಬಗೆಗೆ ನನಗೂ ಪೂರ್ವಾಗ್ರಹ ಇದ್ದೇ ಇದೆ. ಈ ಕಾದಂಬರಿಯನ್ನು ಓದುವ ಮೂಲಕ ನನ್ನ ಅಭಿಪ್ರಾಯ ಬದಲಾಗಬಹುದು.
ಕಾಮೆಂಟ್ ಪೋಸ್ಟ್ ಮಾಡಿ