ಸೋಮವಾರ, ಮಾರ್ಚ್ 28, 2016

ಬಿಡುಗಡೆ

ವೇದಿಕೆ ಸಿದ್ಧವಾಗುತಿದೆ
ಜಿಗಿ ಮಿಗಿ ಬೆಳಕುಗಳ, ಬಣ್ಣ ಬಣ್ಣದ ಪರದೆಗಳ,
ಧೂಪ, ದೀಪಾದಿ ಅಲಂಕಾರಗಳಿಂದ 
ರಂಗ ಪ್ರವೇಶಕೆ ಸನ್ನದ್ಧವಾಗುತಿದೆ.

ಮತ್ತೆರಡು ತಾಸು ಕುಣಿತವೋ ಕುಣಿತ.. 
ದಣಿವಿಲ್ಲದ ಭೋರ್ಗರೆತ!
ತಾಳ, ಮೇಳ, ಶೃತಿ, ಲಯ ಎಲ್ಲವೂ ಮೇಳೈಸಿದ
ಒಮ್ಮೆ ಥಕ ಧಿಮಿ ತಾಂ, ಮಗದೊಮ್ಮೆ 
ಧಳಾಂಗು ತಕದಿಕು ತಕತದಿಗಿಣ ತೋಂ

ಪ್ರೇಕ್ಷಕ ಮಹಾಶಯರೋ ಬರಿಯ ಸಾಕ್ಷಿಗಳು ಆ ಕುಣಿತಕೆ...
ಬಲಗಡೆ ಮೆಚ್ಚುಗೆ, ಎಡಗಡೆ ಕೊಂಗು, ಕೊರಗು, 
ನಡುವೆ ತಪ್ಪು ಒಪ್ಪುಗಳ ಕೊರೆತ
ನೋಡುತ್ತಿರುವಷ್ಟು ಹೊತ್ತು, ಅಲ್ಲಿ ನಿಲ್ಲದು ಕುಣಿತ

ನೃತ್ಯ ನಿಂತಾಕ್ಷಣ, ಪ್ರೇಕ್ಷಕರೆಲ್ಲಾ ಖಾಲಿ,
ವೇದಿಕೆಯೂ ಮೌನ, ನಿಃಶ್ಯಬ್ಧ ‘ರಂಗ’ವಲ್ಲಿ.

~ತೇಜಸ್ವಿನಿ.

ಕಾಮೆಂಟ್‌ಗಳಿಲ್ಲ: