ಬುಧವಾರ, ಅಕ್ಟೋಬರ್ 14, 2015

ಅಸತ್ಯದ ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ ‘ನನ್ನಿ’


ಕಾರಣಾಂತರಗಳಿಂದಾಗಿ ನಾನು ನನ್ನ ಹೈಸ್ಕೂಲ್‌ಅನ್ನು (೮, ೯ ಮತ್ತು ೧೦ನೆಯ ತರಗತಿ) ಓದಿದ್ದು ಕ್ರಿಶ್ಚನ್ ಸಂಸ್ಥೆಯೊಂದರಲ್ಲಿಯೇ. ಮೊತ್ತ ಮೊದಲಬಾರಿ ನನ್ನದಲ್ಲದ ಧರ್ಮವೊಂದರ ಪರಿಚಯವಾಗಿದ್ದು ಅಲ್ಲಿಯೇ ನನಗೆ. ನಾನು ಅಲ್ಲಿ ಯಾವ ಪೂರ್ವಾಗ್ರಹಗಳಿಲ್ಲದೇ ಬೆರೆತದ್ದು, ಕಲಿತದ್ದು, ನಲಿದದ್ದು. ನನ್ನ ಹೆತ್ತವರು ಯಾವುದನ್ನೂ, ಯಾವತ್ತೂ ತಲೆಗೆ ತುಂಬಿಸಿರಲೂ ಇಲ್ಲ. ಮೂರುವರುಷಗಳಲ್ಲಿ ನಾನು ಅಲ್ಲಿಂದ ಪಡೆದದ್ದು ಅಸಂಖ್ಯಾತ! ಪ್ರತಿ ದಿವಸ ಪ್ರಾರ್ಥನೆಗೆ ಹಾಡುತ್ತಿದ್ದ ‘ಅಗಣಿತ ತಾರಾಗಣಗಳ ನಡುವೆ..’ ಹಾಡನ್ನು ಇಂದೂ ಗುನುಗುತ್ತಿರುತ್ತೇನೆ. ಆ ದಿನಗಳು ನಿಸ್ಸಂಶಯವಾಗಿಯೂ ಮಧುರ ನೆನಪುಗಳಿಂದ ತುಂಬಿದ ನನ್ನ ಅವಿಸ್ಮರಣೀಯ ಕಾಲಘಟ್ಟವಾಗಿವೆ. ಕಿನ್ನಿಗೋಳಿಯ ಲಿಟ್ಲ್‌ಫ್ಲವರ್ ಹೈಸ್ಕೂಲ್ ನನಗೆ ನನ್ನನ್ನು ಪರಿಚಯಿಸಿದ, ನನ್ನೊಳಗೆ ಚಿಗುರುತ್ತಿದ್ದ ಪ್ರತಿಭೆಯನ್ನು ಗುರುತಿಸಿದ ತಾಣ. ಸತ್ಯಕ್ಕೆ ಯಾವ ಬಣ್ಣವೂ ಇಲ್ಲವೆಂಬುದನ್ನು ಇಂದು ನನಗೆ ಮನಗಾಣಿಸಲು ಕಾರಣವಾದ ಜಾಗವೂ ಹೌದು. ಹಾಗಾಗಿ ನನಗೆ ಕಲಿಸಿದ ಅಲ್ಲಿಯ ಎಲ್ಲಾ ಸಿಸ್ಟರ್ಸ್‌ಗಳಿಗೂ ನಾನು ಸದಾ ಚಿರ ಋಣಿ. ಗುರುಭ್ಯೋ ನಮಃ ಎಂದೇ ಅಕ್ಷರ ತಿದ್ದಿಸಿದ ನನ್ನ ಅಪ್ಪನ ಬುನಾದಿಯಡಿ ನನ್ನ ಬಾಲ್ಯ, ಹದಿವಯಸ್ಸು ಅರಳಿದ್ದೂ ಇದಕ್ಕೆ ಕಾರಣವೆನ್ನಬಹುದು. 

ಈ ರೀತಿಯ ನನ್ನ ಪೀಠಿಕೆಗೆ ಒಂದು ಬಲವಾದ ಕಾರಣವಿದೆ. ‘ನನ್ನಿ’ ಎಂದರೆ ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ ಎಂಬುದಷ್ಟೇ ನನಗೆ ಗೊತ್ತಿದ್ದುದು ಓದುವ ಮೊದಲು. ನಾನು ಹೈಸ್ಕೂಲ್ ಕಲಿತ ನನ್ನ ಶಾಲೆ, ಸಿಸ್ಟರ್ಸ್‌ಗಳೊಂದಿಗೆ ಒಡನಾಡಿದ್ದು, ಅಲ್ಲಿಯ ಆಶ್ರಮದಲ್ಲಿ ಓದುತ್ತಿದ್ದ ಕ್ರಿಶ್ಚನ್ ಗೆಳತಿಯರ ಒಳಗುದಿಯನ್ನು, ಅನಿಸಿಕೆಗಳನ್ನು ಕೇಳಿದ್ದು ಎಲ್ಲವೂ ಗಟ್ಟಿಯಾಗಿ ಇನ್ನೂ ಸ್ಮೃತಿಯಲ್ಲಿ ಉಳಿದುಕೊಂಡಿವೆ.. ಆಗಾಗ ನೆನಪಾಗಿ ನನ್ನ ಮತ್ತೆ ಗತಕಾಲಕ್ಕೆಳೆಯುತ್ತಿರುತ್ತವೆ. ಆ ದಿನಗಳ ನನ್ನ ಅನುಭವವೇ ಇಂದು ಈ ಕೃತಿಯನ್ನು ಮತ್ತಷ್ಟು ಆಪ್ತವಾಗಿ ಓದಿಸಿಕೊಳ್ಳಲು, ತೀರ ಭಿನ್ನವಲ್ಲದ ಪರಿಸರದೊಳಗೆ (ಕಾದಂಬರಿಯಲ್ಲಿ ಬರುವ) ನನ್ನನ್ನು ಸಮೀಕರಿಸಿಕೊಂಡು, ಹೆಚ್ಚು ತಾದಾತ್ಮ್ಯತೆಯಿಂದ ಒಳಗೆಳೆದುಕೊಳ್ಳಲು ಸಾಧ್ಯವಾಯಿತು ಎನ್ನಬಹುದು. ಅಂತೆಯೇ ಓದಲು ತೆಗೆದುಕೊಂಡಾಗಲೂ, ಓದುವಾಗಲೂ ಯಾವುದೇ ಪೂರ್ವಾಗ್ರಹವಿಲ್ಲದೇ ಓದಿದ್ದೇನೆ.. ವಿಶ್ಲೇಷಿಸಿದ್ದೇನೆ.. ಗಂಟೆಗಟ್ಟಲೇ ಚಿಂತಿಸಿದ್ದೇನೆ ಮತ್ತು ಸಂಶಯವಿದ್ದ ವಿಷಯಗಳ ಗುರುತು ಹಾಕಿಕೊಂಡು, ಕಾದಂಬರಿಯನ್ನೋದಿ ಮುಗಿಸಿದ ಮೇಲೆ, ಲೇಖಕರ ಪರಿಚಯ ಮಾಡಿಕೊಂಡು ಅವರೊಂದಿಗೇ ಖುದ್ದಾ ನನ್ನ ಸಂದೇಹಗಳನ್ನು ಕೇಳಿ ನಿವಾರಿಸಿಕೊಂಡಿದ್ದೇನೆ. ಇದು ಹಾಗೇ.. ಇದು ಹೀಗೇ.. ಇದು ಅದೇ... ಎಂಬೆಲ್ಲಾ ಸ್ವಯಂ ನಿರ್ಧಾರಕ್ಕೆ ಬರದೇ ಪರಾಮರ್ಶಿಸಿ ಅರಿಯಲು, ತಿಳಿಯಲು ಯತ್ನಿಸಿದ್ದು. ಹಾಗಾಗಿ ಅಷ್ಟೇ ವಸ್ತುನಿಷ್ಠವಾಗಿ ಈ ಪುಟ್ಟ ವಿಮರ್ಶೆಯನ್ನೂ ಬರೆಯಲು ಪ್ರಯತ್ನಿಸುತ್ತಿದ್ದೇನೆ. 

ಮೊದಲು ಕಥೆಯ ಸ್ಥೂಲ ಚಿತ್ರಣ : ‘ಸಿಸ್ಟರ್ ರೋಣಾ’ಳಿಂದ ಆರಂಭವಾಗುವ ಕಥೆ ‘ರೋಣಾ’ಳೊಂದಿಗೆ ಕೊನೆಯಾಗುವುದು. ರೋಣಾಳಿಂದ ಸಿಸ್ಟರ್ ರೋಣಾಳಾಗುವ ಪ್ರಕ್ರಿಯೆ... ಅದಕ್ಕಿರುವ ಹಿನ್ನಲೆ... ಆನಂತರ ಆಕೆ ಸ್ವಯಂ ವಿಮರ್ಶೆಗೆ, ವಿಶ್ಲೇಷಣೆಗೆ ಹೊರಟು, ಅಚಾನಕ್ಕಾಗಿ ಸಿಗುವ ಯುರೋಪ್ ಲೇಖಕ ಎಡಿನ್ ಬರ್ಗ್‌ನ ಪುಸ್ತಕಗಳ ಪ್ರಭಾವಕ್ಕೆ ಸಿಲುಕಿ ಸತ್ಯಾನ್ವೇಷಣೆಗೆ ಹೊರಟು.. ಆ ಪಥದಲ್ಲಿ ತನ್ನ ಸಹಜ ಗುಣ ಧರ್ಮದಿಂದ ಅದೇ ಸತ್ಯ ಅವಳನ್ನು ಸುಟ್ಟು, ಘಾಸಿಗೊಳಿಸಿ, ತಪದಲ್ಲಿ ಬೆಂದು ಬೆಳಗುವ ಚಿನ್ನದಂತೇ ಆಕೆ ಮತ್ತೆ ಎಲ್ಲಾ ಕಳಚಿ ರೋಣಳಾಗುವ ಕಥೆ. ಈ ಕಥೆ ಆರಂಭದಿದ್ದ, ಅಂತ್ಯದವರೆಗೂ ಬರುವ ಮತ್ತೊಂದು ಪಾತ್ರವಿದೆ. ಮೊದ ಮೊದಲು ಆ ಪಾತ್ರವೇ ಪ್ರಧಾನ ಪಾತ್ರವೆಂಬಂತೇ ಭಾಸವಾಗುವ.. ಕಥೆಯುದ್ದಕ್ಕೂ ಸುಳ್ಳಿಗೂ, ಸತ್ಯಕ್ಕೂ ಇರುವ ಅಂತರ ಅಂದರೆ ಬ್ಲಾಕ್ ಆಂಡ್ ವೈಟ್‌ಅನ್ನು ಸ್ಪಷ್ಟವಾಗಿ ಓದುಗರಿಗೆ ಕಾಣಿಸುವಂಥ ಪಾತ್ರ! ಅದೇ ಮದರ್ ಎಲಿಸಾರದ್ದು. ಈ ಮೂರು ಪ್ರಮುಖ ಪಾತ್ರಗಳಲ್ಲದೇ ಇನ್ನೂ ಹಲವು ಪಾತ್ರಗಳು ತಮಗೊದಗಿಸುವ ಅತ್ಯಗತ್ಯ ಕಾರ್ಯವನ್ನು ಮಾಡಿ, ತಮ್ಮ ತಮ್ಮ ಕೆಲಸದಾನಂತರ ಸತ್ಯಾನ್ವೇಷಣೆಗೆ ರೋಣಾಳನ್ನು ಇನ್ನಷ್ಟು ಉತ್ತೇಜಿಸಿ ಮಾಯವಾಗುತ್ತವೆ. (ಅತಿ ಕ್ಲುಪ್ತವಾಗಷ್ಟೇ ಕಥೆ ಹೇಳುತ್ತಿದ್ದೇನೆ. ಪೂರ್ತಿ ತಿಳಿಯಲು ‘ನನ್ನಿ’ಯ ಓದೊಂದೇ ದಾರಿ.)

ನನ್ನ ಪ್ರಕಾರ ಪ್ರತಿ ಕಾದಂಬರಿಯ ಒಂದೊಂದು ಪಾತ್ರವೂ ಆ ಕಾದಂಬರಿಯ ಜೀವಂತಿಕೆಯೇ ಆಗಿರುತ್ತದೆ. ಹೀಗಾಗಿ, ಆಯಾ ಕಾದಂಬರಿಯು ಅದರ ಓದುಗ ಓದುವಷ್ಟು ಹೊತ್ತೂ ಕಣ್ಮುಂದೆ ನಡೆವ ಒಂದು ತುಂಬು ಜೀವನವೆನಿಸಿಕೊಂಡು ಬಿಡುತ್ತದೆ. ನನ್ನಿಯ ಕೆಲವು ಓದುಗರಿಗೆ ಮದರ್ ಎಲಿಸಾರೋ, ‘ಸಿ.ರೋಣಾಳೊ’ ಅಥವಾ ಕೇವಲ ರೋಣಾಳೋ, ಮಿಲ್ಟನ್ ಫಾಬ್ರಿಗಾಸ್‌ನೋ, ತೇಗೂರಿನ ರಾಯಪ್ಪನೋ ಕಾದಂಬರಿಯ ಜೀವಾಳದಂತೇ, ಪ್ರಮುಖ ಪಾತ್ರ ಅಂದರೆ ಹೀರೋ/ಸೆಂಟರ್ ಎಂದು ಅನಿಸಿರಬಹುದು. ಆದರೆ ನನಗೆ ಮಾತ್ರ ‘ನನ್ನಿ’ ಕಾದಂಬರಿಯ ಜೀವನದೊಳಗಿನ ಸೆಂಟರ್ ಆಫ್ ಅಟ್ರಾಕ್ಷನ್, ಪ್ರಮುಖ ಪಾತ್ರಧಾರಿ ಎಂದೆನಿಸಿಕೊಂಡವ ಎರಿಕ್ ಬರ್ಗ್‌ನೇ. ಎರಿಕ್ ಯುರೋಪಿನಲ್ಲೆಲ್ಲೋ ಇರುವವನೆಂದು ಹೇಳುವ ಈ ಕಾದಂಬರಿ, ಅವನ ಮೂಲಕ ಹೇಳಿಸುವ ಕಟು ವಾಸ್ತಿವಿಕತೆಯನ್ನು ಬಿಚ್ಚಿ, ಎಳೆಯೆಳೆಯಾಗಿ ಹರವಿ, ಬೆಚ್ಚಿ ಬೀಳುವಂತಹ ಸತ್ಯ ಶೋಧನೆಯನ್ನು ಮಾಡಿಸುತ್ತದೆ. ಎರಿಕ್ ಬರೆದಿದ್ದು ಎನ್ನಲ್ಲಾಗುವ "ಸತ್ಯ ದಯೆ ಮತ್ತು ಸೇವೆ" ಹಾಗೂ "ಮಾನವ ಜಗತ್ತಿನ ಅಪಮೌಲ್ಯಗಳು" ಎಂಬೆರೆಡು ಪುಸ್ತಕಗಳೊಳಗಿನ ವಾಸ್ತವಿಕ ಅಂಶಗಳ ಮಂಥನದಿಂದ ಹೊರ ಬರುವ ಕಟು ಸತ್ಯಗಳು ಓದುಗರಿಗೆ ಜೀರ್ಣಿಸಿಕೊಳ್ಳಲು ತುಸು ತ್ರಾಸದಾಯಕವೂ ಆಗುವುದು. ಆ ನಿಟ್ಟಿನಲ್ಲಿ ಆಮೂಲಾಗ್ರವಾಗಿ ಇಂತಹ ಒಂದು ಸತ್ಯ ಶೋಧನೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟ ಕರಣಂ ಪವನ್ ಪ್ರಸಾದ್ ಅವರ ಈ ಅಪೂರ್ವ ಪುಸ್ತಕ ‘ನನ್ನಿ’ ಎಂದರೆ ಖಂಡಿತ ಉತ್ಪ್ರೇಕ್ಷೆಯೆನಿಸದು.

ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲೊಂದಾದ ಎರಿಕ್ ಬರ್ಗ್ ಎಂಬ ಯುರೋಪಿಯನ್ ಸತ್ಯಶೋಧಕನಷ್ಟೇ ನನ್ನ ಕಾಡಿದ ಪಾತ್ರವೆಂದರೆ, ತೇಗೂರಿನ ರಾಯಪ್ಪ. ಕ್ರಿಶ್ಚನ್ ವಳಿಗನಾಗಿ ಬಾಳಿದ, ಬದುಕಲು ಹೆಣಗಾಡಿದ, ತಾ ಸಾಯುತ್ತಲೇ ತನ್ನ ಪೋಲಿಯೋ ಪೀಡಿತ ಮಗಳಿಗಾಗಿ ದುಡಿದು ದಣಿದ, ಆತನ ಆ ಬೆಚ್ಚಿ ಬೀಳಿಸುವ ಕೊನೆಯ ಎಣಿಸುವಾಗೆಲ್ಲಾ ಎದೆ ಝಿಲ್ಲೆನಿಸುತ್ತದೆ. ಈ ಪಾತ್ರದ ಕುರಿತು ನಾನು ಏನೇ ಹೇಳಿದರೂ ಅದು ಓದುಗರ ಓದುವ ಸುಖವನ್ನು ಕಸಿದುಕೊಂಡಂತಾಗುವುದು. ಈ ಪಾತ್ರ ಚಿತ್ರಣವನ್ನಷ್ಟೇ ಅಲ್ಲಾ, ಈ ಕಾದಂಬರಿಯ ಬೇರಾವ ಪಾತ್ರವನ್ನೂ ಹೆಚ್ಚು ವಿಶ್ಲೇಷಿಸಹೋಗುವುದು ಈ ನಿಟ್ಟಿನಲ್ಲಿ ಸಮಂಜಸವೆನಿಸದು. ಹಾಗಾಗಿ ನಾನು ಓದಿದಾಗಿನಿಂದ ನನ್ನ ಬಿಟ್ಟೂ ಬಿಟ್ಟೂ ಕಾಡುತಿಹ ನನ್ನಿಷ್ಟದ ಪಾತ್ರ, ಕಥೆಯ ಜೀವಾಳನಾಗಿರುವ (ನನ್ನ ವೈಯಕ್ತಿಕ ಅನಿಸಿಕೆಯಂತೇ) ಎಡಿನ್ ಬರ್ಗ್‌ನ ಕೆಲವು ಸಾರ್ವಕಾಲಕ ಸತ್ಯ ದರ್ಶನವನ್ನು, ರೋಣಾಳ ಮಂಥನವನ್ನು ಕಾದಂಬರಿಯಲ್ಲಿದ್ದ ಹಾಗೇ ಇಲ್ಲಿ ಹಂಚಿಕೊಳ್ಳಬಯಸುತ್ತಿದ್ದೇನೆ.  ಈ ಕೆಳಗಿನ ಪ್ರತಿ ಸಾಲೂ ಹೊಸ ಚಿಂತನೆಗಳಿಗೆ, ಹೊಳಹುಗಳಿಗೆ, ಮಂಥನಕ್ಕೆ ನಮ್ಮನ್ನೆಳೆಸುವಂತಿದ್ದು, ಓದುಗರನ್ನೂ ಸತ್ಯಾನ್ವೇಷಣೆಗೆ, ಸ್ವ ವಿಮರ್ಶೆಗೆ ಖಚಿತವಾಗಿಯೂ ಎಳೆಸುತ್ತವೆ ಎಂಬುದು ನನ್ನ ವಿಶ್ವಾಸ.

೧) ಪ್ರಚಾರ ಹೇಗೆ ಪಡೀಬೇಕು ಅನ್ನೋದು ಮುಖ್ಯವೇ ಹೊರತು, ಪ್ರಚಾರಕ್ಕಾಗಿ ಏನು ಮಾಡಿದೆವು ಅನ್ನೋದಲ್ಲ. ನಾನು ಪ್ರಚಾರಕ್ಕೆ ಇಳಿದಿದ್ದೇನೆ ಎಂದು ಪ್ರಚಾರಕ್ಕೆ ಇಳಿದವನಿಗೂ ಗೊತ್ತಾಗಬಾರದು. ಹಾಗೆ ನೋಡಿಕೊಳ್ಳೋದು ಜಾಣತನ. (ಫಾಬ್ರಿಗಸ್ ಹೇಳುವ ಈ ಮೇಲಿನ ಮಾತೊಳಗಿನ ಮೊನಚು, ವ್ಯಂಗ್ಯ.. ಅದರೊಳಗಿನ ವರ್ತಮಾನದ (ಪ್ರಸ್ತುತ) ಕಟು ವಾಸ್ತವ ಎಷ್ಟು ದಿಟ ಎಂದೆನಿಸಿತು.)

೨) "ಹೇಳಿಕೊಳ್ಳದ ತ್ಯಾಗಗಳಿಗೆ ಬೆಲೆ ಇರೋಲ್ಲ. ಹೇಳಿಕೊಂಡ ತ್ಯಾಗಗಳನ್ನು ನಂಬೋಕೆ ಆಗಲ್ಲ." 

೩) ಯಾವುದು ತಪ್ಪು ಎನ್ನಿಸುತ್ತದೋ ಆಗ ಅದನ್ನು ಸರಿಯೊಂದಿಗಿನ ಯಾವುದೋ ಒಂದು ಅಂಶದೊಂದಿಗೆ ಕೂಡಿಸಿ ತಪ್ಪನ್ನು ಸರಿ ಎನ್ನಿಸುವ ಕುಚೋದ್ಯ ಪ್ರಯತ್ನ ಇಲ್ಲಿ ಪುನರಾವರ್ತನೆ ಆಗುತ್ತಿಲ್ಲವೇ? (ರೋಣಾಳ ಜಿಜ್ಞಾಸೆ)

೪) ಕಾರಣ ಅಶುದ್ಧವಾದ ಮೇಲೆ ಕ್ರಿಯೆಯೂ ಅಶುದ್ಧವೇ, ಕ್ರಿಯೆಗಳಿಂದ ಕಾರಣ ಹುಟ್ಟುವುದಿಲ್ಲ. ಕಾರಣಗಳಿಂದಲೇ ಕ್ರಿಯೆ ಹುಟ್ಟುತ್ತದೆ. ಅದರಲ್ಲೂ ಕಾರಣವಿರುವ ಸೇವೆ!? ಇದರ ಆಳಕ್ಕೆ ಹೋಗಲು ಆಗುತ್ತಿಲ್ಲ. ಹೌದು ಜಗತ್ತಿನಲ್ಲಿ ಯಾವುದೂ ಸೇವೆಯಲ್ಲ. ಸಹಕಾರವಷ್ಟೇ ನಿಜ.

೫) ಮಾನವನು ಪ್ರಾರಂಭಿಸುವ ಪ್ರತಿಯೊಂದು ಸತ್ಕಾರ್ಯಗಳು ಮೂಲದಲ್ಲಿ ನಿಸ್ವಾರ್ಥ ಸೇವೆಯೇ ಆಗಿದ್ದು, ಅನಂತರ ಇಷ್ಟಾರ್ಥಕಾಮವಾಗೇ ಕೊನೆಗೊಳ್ಳುತ್ತದೆ.

೬) ಪ್ರಕೃತಿ ಯಾವುದನ್ನು ಹಿಡಿತದಲ್ಲಿಟ್ಟು, ಯಾವುದನ್ನು ಬೆಳೆಸಬೇಕು ಎಂದು ಆಲೋಚಿಸಿಯೇ ಪ್ರತಿ ಜೀವಿಗೂ ಗುಣಗಳನ್ನು ನೀಡಿದೆ. ಆದರೆ ಮಾನವನು ತನ್ನ ಪಾಕೃತಿಕ ಗುಣಗಳಿಂದ ದೂರವಾಗಿ, ವಿವೇಚನೆಯ ಹೆಸರಿನಲ್ಲಿ ಸಹಜೀವಿ, ಜಗತ್ತನ್ನೇ, ಹತೋಟಿಗೆ ತೆಗೆದುಕೊಂಡು ಹಾಳುಮಾಡುತ್ತಿದ್ದಾನೆ. ಮಾನವನ ಮೂಲ ಗುಣವೇ ಸ್ವಾರ್ಥ. ತನ್ನೆಲ್ಲಾ ಅಪಾಕೃತಿಕ ಗುಣಗಳನ್ನು ಹತೋಟಿಯಲ್ಲಿಟ್ಟುಕೊಂಡು, ಪ್ರಕೃತಿಯ ಜೊತೆ ಸಹಬಾಳ್ವೆ ನಡೆಸುತ್ತಿದ್ದ ಮಾನವ ಜನಾಂಗ ಮರೆಯಾಗುತ್ತಿದೆ. ಈಗಿರುವುದು ಮಿತಿಯನ್ನು ಮೀರಿದ ಕ್ರೂರ ಜೀವ ಸಂತತಿ....

೭) ಮನುಷ್ಯ ಹುಲಿಯನ್ನು ಕೊಂದರೆ ಶೌರ್ಯ, ಆದರೆ ಹುಲಿ ಮನುಷ್ಯನನ್ನು ಕೊಂದರೆ ಕ್ರೌರ್ಯ! (ಜಾರ್ಜ್ ಬರ್ನಾಡ್ ಶಾ) ನನ್ನ ಪ್ರಕಾರ ಪ್ರಾಣ ರಕ್ಷಣೆಗೆ ಹೊರತಾದ ಎಲ್ಲಾ ತರಹದ ಪ್ರಾಣಿಹತ್ಯೆಯೂ ಕ್ರೌರ್ಯವೇ... ಆದರೆ ಮನುಷ್ಯ ಕಾಡನ್ನು ನೆಲಸಮ ಮಾಡಿ, ಪ್ರಾಣ ರಕ್ಷಣೆಯೆಂದು ಆಗಲೂ ಪ್ರಾಣಿಹತ್ಯೆ ಮಾಡುತ್ತಾನೆ. ಮನುಷ್ಯನಿಗೆ ವಿಕೃತಿ ತೋರಲು ಕಾರಣ ಬೇಕು, ಅಷ್ಟೇ.

ನಾನಿಲ್ಲಿ ಕೊಟ್ಟಿರುವುದು ‘ನನಿ’ಯಲ್ಲಿ ದಾಖಲಾಗಿರುವ ಕೆಲವೇ ಕೆಲವು ನನ್ನಿಗಳನ್ನು. ಅವುಗಳ ಪೂರ್ಣ ಪಾಠಕ್ಕೆ ಕಾದಂಬರಿಯ ಸಮಗ್ರ ಓದು, ಚಿಂತನೆ ಅತ್ಯಗತ್ಯ. ಇಲ್ಲಿ ಕಾಣ ಸಿಗುವ, ಕುಕ್ಕುವ, ಕರಗಿಸುವ, ಬೆಚ್ಚಿಸುವ, ಕಣ್ಮುಚ್ಚಿ ದಿಟ್ಟಿ ಹೊರಳಿಸಲು, ನಿರ್ಲಕ್ಷಿಸಿ ತಾತ್ಕಾಲಿಕ ನೆಮ್ಮದಿ ಪಡೆಯಲು ಪ್ರೇರೇಪಿಸುವ ಸತ್ಯವು ನಿಜವಾಗಿಯೂ ಉರಿವ ಸೂರ್ಯನಂತೇ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವೇ. ಕಾದಂಬರಿಯಲ್ಲೆಲ್ಲೋ ಬರುವಂತೇ.. ‘ಇಲ್ಲಿ ನಾವು ವಿಮರ್ಶಿಸಬೇಕಾದದ್ದು ಸತ್ಯಕ್ಕೆ ಯಾರು ಹತ್ತಿರವಿದ್ದಾರೆ ಎಂದೇ ಹೊರತು ಸತ್ಯವನ್ನು ಮುಟ್ಟಿದವರು ಯಾರು ಎಂದಲ್ಲ.’  ಅಂತಹ ಸತ್ಯವನ್ನು ಜಾಗೃತಿಯಲ್ಲೇ, ಜಾಗೃತೆಯಿಂದ ತಡವುವ, ಕೊಂಚ ವಿಶಾದದೊಂದಿಗೇ ಸ್ವೀಕರಿಸುವ ಸಣ್ಣ ಅವಕಾಶ ಓದುಗರಾದ ನಮಗೆ ಕಲ್ಪಿಸುತ್ತದೆ ‘ನನ್ನಿ’. 

ಪುಸ್ತಕವನ್ನು ಇಲ್ಲಿ ಕೊಳ್ಳಬಹುದು..  "ಕ್ಲಿಕ್ಕಿಸಿ-ನನ್ನಿ"

~ತೇಜಸ್ವಿನಿ ಹೆಗಡೆ.

3 ಕಾಮೆಂಟ್‌ಗಳು:

Swarna ಹೇಳಿದರು...

ಹೇಳದ ತ್ಯಾಗಕ್ಕೆ ಬೆಲೆ ಇಲ್ಲ ..ಹೌದು ಇದು ಮಾರ್ಕೆಟಿಂಗ್ ಯುಗ :) ಚೆನ್ನಾಗಿದೆ ಓದಬೇಕು

ಸುದರ್ಶನ ಹೇಳಿದರು...

ಪ್ರಚಾರಕ್ಕೆ ಇಳಿದವನಿಗೆ ಅದು ಗೊತ್ತಾಗಲೇಬಾರದು

sunaath ಹೇಳಿದರು...

ಕಾದಂಬರಿಯ ಪರಿಚಯವನ್ನು ಚೆನ್ನಾಗಿ ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು.