ಮಂಗಳವಾರ, ಡಿಸೆಂಬರ್ 7, 2010

ಜಗನ್ಮೋಹಿನಿ

ಜಗದ ಮಹಾತಾಯಿ ಈಕೆ
ಲಕ್ಷ, ಕೋಟಿ ಮಕ್ಕಳ
ಅನುಗಾಲವೂ ಸಲಹುತ
ತಾನು ಒಂದಿಂಚೂ ಸವೆಯದೇ
ಪಕ್ಷಕ್ಕೊಮ್ಮೆ ಚೆಲುವೆಯಾಗಿ ಮೆರೆದು
ಸಿಟ್ಟು ಬಂದಾಗ ಮಕ್ಕಳನೇ ಛೂ ಬಿಟ್ಟು
ಬೊಬ್ಬಿರಿದು, ಮೇಲೇರಿ ಬಂದು
ಸರ್ವನಾಶ ಗೈವ ಪಾಪನಾಶಿನಿ


ತಾ ಅಡಗಿಸಿಟ್ಟ ಅಪಾರ
ಸಿರಿ-ಸಂಪತ್ತುಗಳನೆಲ್ಲಾ
ಅದ್ಯಾರೋ ವಾನರ ವಿಕಸಿತ ರಾಕ್ಷಸರು
ಕದ್ದೊಯ್ಯುವುದನು ಕಂಡೂ
ಸುಮ್ಮನಿದ್ದು, ಬಿಮ್ಮನೆ ಕುಳಿತು
ಹೊಂಚು ಹಾಕಿ, ಸಂಚು ಮಾಡಿ
ಕಾಲೆಳೆದೆಳೆದು ಪ್ರಾಣ ಸೆಳೆವ ಸಮ್ಮೋಹಿನಿ

ತೆಕ್ಕೆಯೊಳಗಿಳಿಯದ ಪ್ರಿಯಕರನ
ಕಣ್ಣೆತ್ತಿ ನೋಡಿ, ಮೋಡಿ ಮಾಡಿ
ಆತನ ಒಮ್ಮೆ ಅರ್ಧವಾಗಿ,
ಮಗದೊಮ್ಮೆ ಇಡಿಯಾಗಿ ಹಿಡಿದು
ಕಬಳಿಸಿ, ನುಂಗಲು ಹಪ ಹಪಿಸಿ
ಸೋತು, ಸೊರಗಿ ಕೊರಗುವ ವಿರಾಗಿಣಿ


ಉಷೆಯ ಹಿಂಬಾಲಿಸಿ, ಹಠ ಮಾಡಿ
ತಾಸಿಗೊಮ್ಮೆ ರಂಗು ರಂಗಿನ
ಬಣ್ಣಗಳ ಧರಿಸಿ, ಮಿನುಗಿ
ನಿಶೆಯ ಮೇಲೇರಿ ಕುಳಿತು, ಬೀಗಿ
ಕಿಲ ಕಿಲನೆ ನಗುವ ಸುಹಾಸಿನಿ

ಕರೆದಷ್ಟೂ ಮುಗಿಯದ
ನಿನ್ಹೆಸರುಗಳ ಜಪವೇ
ಹೆಜ್ಜೇನು ಸವಿದಂತೆ ಮನಮೋಹಿನಿ

[ಕವನವೆನ್ನುವುದು ಅವರವರ ಭಾವಕ್ಕೇ ಬಿಟ್ಟಿದ್ದಾದರೂ, ಈ ಕವಿತೆಯನ್ನು ಯಾರ ಮೇಲೆ ಬರೆದಿದ್ದು ಎನ್ನುವುದನ್ನು ಹೇಳಬಲ್ಲಿರಾ? :)]

- ತೇಜಸ್ವಿನಿ ಹೆಗಡೆ

19 ಕಾಮೆಂಟ್‌ಗಳು:

PaLa ಹೇಳಿದರು...

ಕವನ ಓದಿ ಕಡಲು ಅನ್ನಿಸ್ತು.. ಆದರೆ ಕಡಲು ಪುಲ್ಲಿಂಗ! :)

ಅನಂತ್ ರಾಜ್ ಹೇಳಿದರು...

"ಪಕ್ಷಕ್ಕೊಮ್ಮೆ ಚೆಲುವೆಯಾಗಿ" ಎ೦ದರೆ ರಾಜಕೀಯ ಪಕ್ಷ ಎ೦ದು ಅರ್ಥೈಸಿಕೊ೦ಡಲ್ಲಿ...ಮಾಯಾವತಿಯೇ?

ಅನ೦ತ್

ಜಲನಯನ ಹೇಳಿದರು...

ನನಗನಿಸಿದಂತೆ ಇದು ಭೂತಾಯಿಯ ಸಹನಾ, ಸಲಹು, ಪ್ರಕೋಪ, ವಿಕೋಪ ಮತ್ತು ಜೀವದಾಯಿ ಗುಣಗಳನ್ನು ಬಲು ಸೊಗಸಾಗಿ ಕವನಿಸಿದ ರೀತಿ ಅನ್ನಿಸ್ತಿದೆ...ಇನ್ನು ಅವರವರ ಭಾವಕ್ಕೆ ಎಂದಾದಮೇಲೆ...ತೇಜಸ್ವಿನಿಯವರ ಭಾವ ಏನೋ ..ನೀವೆ ಹೇಳಬೇಕು...

ಸಾಗರದಾಚೆಯ ಇಂಚರ ಹೇಳಿದರು...

sundara kavana,
saalugala balake adbhuta

ಅನಾಮಧೇಯ ಹೇಳಿದರು...

ಸಮುದ್ರ?

ವಾಣಿಶ್ರೀ ಭಟ್ ಹೇಳಿದರು...

ತೇಜಕ್ಕ, ಕವನ ತುಂಬಾ ಚೆನ್ನಾಗಿದ್ದು..
ಹೋಲಿಕೆಯನ್ನು ಅವರವರ ಭಾವಕ್ಕೆ ಬಿಟ್ಟಿದ್ದರಿಂದ, ನನ್ನ ಭಾವದಲ್ಲಿ ಇದು ಒಂದೊಮ್ಮೆ ಬೋರ್ಗರೆಯುವ,ಮಗದೊಮ್ಮೆ ನಿಶ್ಚಲವಾಗಿ ಮಲಗುವ "ಸಮುದ್ರ "

ಚುಕ್ಕಿಚಿತ್ತಾರ ಹೇಳಿದರು...

ಪ್ರಕೃತಿಯ ಕುರಿತು ಬರೆದ ಕವನ.. ಅದೇಭಾವ ಸ್ಪುರಿಸುತ್ತಿದೆ. ತು೦ಬಾ ಚನ್ನಾಗಿದೆ.

ಸೀತಾರಾಮ. ಕೆ. / SITARAM.K ಹೇಳಿದರು...

????

ದಿನಕರ ಮೊಗೇರ ಹೇಳಿದರು...

tumbaa ishTa aaytu....

nanna prakaara " BHOOMI TAAYI" enisatte...

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರಶ್ನೆಗೆ ಉತ್ತರಿಸಿದ, ಕವಿತೆಯನ್ನು ಮೆಚ್ಚಿದ ಎಲ್ಲರಿಗೂ ತುಂಬಾ ಧನ್ಯವಾದಗಳು.

ಸರಿಯಾದ ಉತ್ತರ "ಸಾಗರಿ" :) ಕಡಲು, ಸಮುದ್ರ, ಸಾಗರ ಎಂದೆಲ್ಲಾ ನಾನಾ ಹೆಸರುಗಳಿದ್ದರೂ ಇಲ್ಲಿರುವ ಜಗನ್ಮೋಹಿನಿ ಸಾಗರಿಯೇ. ಹಾಗೆ ನೋಡಿದರೆ ಇವಳೇ ವಿಶ್ವರೂಪಿಣಿ. ಪುರಾಣಗಳಿಂದ ಹಿಡಿದು ವೈಜ್ಞಾನಿಕವಾಗಿ ನೋಡಿದರೂ ಸಾಗರಿಯೇ ಮೊದಲು ಜಗತ್ತನ್ನು ತುಂಬಿದ್ದವಳು.

ಕವಿತೆಯೆನ್ನುವುದು ಅವರವರ ಭಾವಕ್ಕೇ ಬಿಟ್ಟಿದ್ದು. ಹಾಗಾಗಿ ಪ್ರಕೃತಿಯೆಂದರೂ ಸರಿಯೇ :)

ಅನಂತ್ ಸರ್,

ಆದರೆ ಇಲ್ಲಿ ಮಾಯಾವತಿಯಂತೂ ಖಂಡಿತ ಅಲ್ಲ... :) ಆಕೆಯನ್ನು "ಮಾಯಾವಿನಿ" ಎಂದರೆ ಸರಿಯಾಗುವುದು...:)

ಅನಾಮಧೇಯ,

ನಿಮ್ಮ ಸುಂದರ ಹೆಸರನ್ನೂ ಜೊತೆಗೆ ಹಾಕಿದ್ದರೆ ಮತ್ತಷ್ಟು ಚೆನ್ನಾಗಿರುತ್ತಿತ್ತು...!!!

--------

ಧನ್ಯವಾದಗಳೊಂದಿಗೆ,

-ತೇಜಸ್ವಿನಿ.

Lakshmi Shashidhar Chaitanya ಹೇಳಿದರು...

saagari mele poem odi santhosha aaytu. lovely.

ಸುಧೇಶ್ ಶೆಟ್ಟಿ ಹೇಳಿದರು...

chennagidhe kavana... naanu bhoomi antha andukondidde :)

sunaath ಹೇಳಿದರು...

ಸುಂದರವಾದ ಸಮಸ್ಯಾ-ಕವನ.

AntharangadaMaathugalu ಹೇಳಿದರು...

ತೇಜಸ್ವಿನೀ..
ಪ್ರಕೃತಿ ಇರಬೇಕು ಅನ್ಕೊಂಡು ಪೂರ್ತಿ ಓದಿದೆ. ನಿಮ್ಮ ವರ್ಣನೆ ನನಗೇನೋ ಪ್ರಕೃತಿಗೇ ಹೊಂದುತ್ತೆ ಅನ್ನಿಸ್ತು.. ನೀವೆ ಹೇಳಿದಂತೆ... ಅವರವರ ಭಾವ... :-)


ಶ್ಯಾಮಲ

ಜಲನಯನ ಹೇಳಿದರು...

ಆದರೆ ತೇಜಸ್ವಿನಿ...ವಿಜ್ಞಾನದ ಪ್ರಕಾರ ಮೊದಲು ಭೂಮಿ ನಂತರ ಅನಿಲಗಳ ವಿವಿಧ ಕ್ರಿಯೆಗಳ ಮೂಲಕ ಮತ್ತು ವಾತಾವರಣ ತಣ್ಣಗಾಗುವ ಕ್ರಿಯೆಯಿಂದ ಬಂದದ್ದು ಜಲ...
ನಿಮ್ಮ ಕವನ ಕಲಕಿದೆ ಭಾವ-ಮಂಥನ ಹಹಹ ...ಸಾಗರ ಮಂಥನ ಎನ್ನಲೇ,,>/?

ಅನಾಮಧೇಯ ಹೇಳಿದರು...

ಕವನ ಹೊರಚಲ್ಲಿದ ಭಾವದ ಜೊತೆಗೆ, ಯೋಚನೆಗೆ ಹಚ್ಚಿದ ಪರಿ.
ಕವನದಕ್ಷ್ಟೇ ಚನ್ನಾಗಿದೆ .

kanasu ಹೇಳಿದರು...

wah! blog na hosa roopa chenaagide :)

ತೇಜಸ್ವಿನಿ ಹೆಗಡೆ ಹೇಳಿದರು...

ಕನಸು,

ಬ್ಲಾಗಿಗೆ ಈ ರೂಪ ಕೊಟ್ಟು ಬಹಳ ದಿನಗಳಾದವು... :)

ಮೆಚ್ಚುಗೆಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಸಾಗರಿಯನ್ನು ಮೆಚ್ಚಿದ ಎಲ್ಲರಿಗೂ ತುಂಬಾ ಧನ್ಯವಾದಗಳು :)