ಮಂಗಳವಾರ, ಅಕ್ಟೋಬರ್ 5, 2010

ಬುದ್ಧಿ-ಹೀನ ಜೀವಿಗಳು?

"ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ" - ಶಂಕರಾಚಾರ್ಯರ ದೇವ್ಯಾಪರಾಧ ಕ್ಷಮಾಪಣ ಶ್ಲೋಕದ ಈ ಸಾಲನ್ನು ಪ್ರತಿ ಬಾರಿ ಹೇಳುವಾಗಲೂ ಕಣ್ತುಂಬಿಕೊಳ್ಳುತ್ತದೆ. ಹೆತ್ತ ಮಕ್ಕಳು ಕುಖ್ಯಾತರಾಗಬಹುದು. ಆದರೆ ಆ ಕುಖ್ಯಾತ ಮಕ್ಕಳನ್ನೂ ಅವರನ್ನು ಹೆತ್ತ ತಾಯಿ ಪ್ರೀತಿಸುತ್ತಾಳೆ. ಅವರ ಬದುಕಿಗಾಗಿ ಪ್ರಾರ್ಥಿಸುತ್ತಾಳೆ(ಇದಕ್ಕೆ ಅಪವಾದವೆಂಬಂತೆ ಈ ಕಲಿಯುಗದಲ್ಲಿ ಕೆಲವು ತಾಯಂದಿರೂ ಇದ್ದಾರೆ...ಮಕ್ಕಳನ್ನು ಶೋಷಿಸುವವರು. ಆದರೆ ಕೆಟ್ಟ ಮಕ್ಕಳಷ್ಟು ಕೆಟ್ಟ ತಾಯಂದಿರು ತೀರಾ ಕಡಿಮೆಯೇ.)

ಮಕ್ಕಳು ಎಷ್ಟೇ ಮಾನಸಿಕ/ದೈಹಿಕ ಹಿಂಸೆಯನ್ನಿತ್ತರೂ ಕೂಡ ಆಕೆಯೆಂದೂ ಹೆತ್ತ ಮಗುವಿಗೆ ಕೇಡನ್ನು ಬಯಸಳು. ವೇಶ್ಯೇಯೇ ಆಗಿರಲಿ.. ಆಕೆ ತನ್ನ ಮೈ ಮಾರಿಕೊಂಡಾದರೂ ಸರಿಯೇ ತನ್ನ ಮಗುವಿಗೆ ಉನ್ನತ ಭವಿಷ್ಯ ಕೊಡಲು ಯತ್ನಿಸುವಳು. ತನಗೆ ಜೀವವನ್ನಿತ್ತ, ಬದುಕನ್ನಿತ್ತ, ಹಾಲುಣಿಸಿ ಸಲಹಿದ ತಾಯಿಗೆ ಅತೀವ ಪ್ರೀತ್ಯಾದರ ತೋರುವುದು ಬೇಡ, ಕನಿಷ್ಠ ಗೌರವವನ್ನಾದರೂ ಕೊಟ್ಟರೆ ಆತ ಹುಟ್ಟಿದ್ದಕ್ಕೂ ಒಂದು ಅರ್ಥ ಬರುವುದು. ಆದರೆ ಕೆಲವರು, ಬುದ್ಧಿಜೀವಿಗಳಲ್ಲೇ ಅತೀ ದೊಡ್ಡ ಬುದ್ಧಿಜೀವಿಗಳೆನ್ನಿಸಿಕೊಳ್ಳುವ ತೆವಲಿಗೆ ಬಿದ್ದು, ತಮ್ಮ ಅಪೂರ್ವ(???) ಬರಹಕ್ಕೆ ಆತ್ಮ ಚರಿತ್ರೆ ಎಂಬ ಸುಂದರ ಶೀರ್ಷಿಕೆಯನ್ನು ಕೊಟ್ಟು ಅದರಲ್ಲಿ ತನ್ನ ಕೆಟ್ಟ ಅವಗುಣಗಳಿಗೆಲ್ಲಾ ಮನೆಯವರ/ಪರಿಸರದ ಕಾರಣಗಳನ್ನು ಕೊಡುತ್ತಾ, ಹೆತ್ತ ತಾಯಿಯನ್ನೂ ನಿಕೃಷ್ಟವಾಗಿ ಚಿತ್ರಿಸಿ ತಾನೆಷ್ಟು ನಿಷ್ಪಕ್ಷಪಾತಿ ಎಂದು ಸಾರುತ್ತಾ ಆ ಮಾನಸಿಕ ಅಸ್ವಸ್ಥತೆಯಲ್ಲೇ ಮುಳುಗೇಳುತ್ತಿರುತ್ತಾರೆ. ಇಂತಹದೇ ಒಂದು ಕೀಳುಮಟ್ಟದ ಬರಹ (ಹೆಸರಿಗೆ ಆತ್ಮ ಚರಿತ್ರೆ) ಪ್ರಜಾವಾಣಿ ದಿನಪತ್ರಿಕೆಯ ಸಾಪ್ತಾಹಿಕ ಪುರವಾಣಿಯಲ್ಲಿ ಧಾರಾವಾಹಿಯಂತೆ ಕಳೆದ ಆದಿತ್ಯವಾರದಿಂದ(೩.೧೦.೨೦೧೦)ಬರುತ್ತಿದೆ. ಈ ಘನ(!!!?) ಲೇಖನವನ್ನು ಬರೆದವರು ಮಹಾನ್ ಬುದ್ಧಿಜೀವಿಯಾದ ಗಿರೀಶ್ ಕಾರ್ನಾಡರು. ಅದರ ಲಿಂಕ್ ಈ ಕಳಗಿದೆ. ನೀವೂ ಓದಿ. ನನ್ನ ಅಭಿಪ್ರಾಯ ತಪ್ಪೆಂದು ಎಣಿಸಿದರೆ ನೇರವಾಗಿ ಕಮೆಂಟಿಸಿ.




ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿಸುವುದು ತಪ್ಪೆಂದು ಹೇಳುತ್ತಿಲ್ಲ. ಆದರೆ ಜನ್ಮವಿತ್ತ ತಾಯಿಯ ವೈಯಕ್ತಿಕ ಬದುಕನ್ನು, ಆಕೆಯ ನೈತಿಕತೆಯನ್ನೇ ಸಾರ್ವಜನಿಕವಾಗಿ ಪ್ರಶ್ನಿಸುವ, ಕೀಳು ಮಟ್ಟದ ಭಾಷೆಯನ್ನು ಉಪಯೋಗಿಸಿ ವಿಜೃಂಭಿಸುವ ಈ ಪರಿ ನನ್ನನ್ನು ಬಹು ದಿಗ್ಭ್ರಾಂತಳನ್ನಾಗಿಸಿತು. ಜೊತೆಗೆ ಆ ಎಳೆಯ ಪ್ರಾಯದ ತಾಯಿಯ ಫೋಟೋ ನೋಡಿ ಮನದುಂಬಿಯೂ ಬಂತು. ಮಾನಸಿಕ ಅಸ್ವಸ್ಥೆಯ ಪರಾಕಷ್ಠೆಯಿದು ಎಂದರೂ ತಪ್ಪಾಗದು. ಇಂತಹ ಲೇಖಕರಿಗೆಲ್ಲಾ ಜ್ಞಾನಪೀಠ ಕೊಡುವ ನಮ್ಮ ಘನ ಸರಕಾರದ ಅಸ್ವಸ್ಥತೆಯೂ ಮುಚ್ಚಿಲ್ಲ ಅನ್ನುವುದೂ ಬೇರೆ ಮಾತು. ಈ ಕಳಪೆ ಲೇಖನಕ್ಕೆ ಗೌರವಕೊಟ್ಟು, ಕನ್ನಡದ ಹೆಮ್ಮೆಯ ಬರಹಗಾರ ಎಂದೆಲ್ಲಾ ಹೊಗಳಿ, ಮುಖಪುಟದಿಂದಲೇ ಪ್ರಕಟಿಸಿದ ಪತ್ರಿಕೆಯ ಬಗ್ಗೆಯೂ ತೀವ್ರ ಅಸಮಾಧಾನವಿದೆ.

ಬುದ್ಧಿಜೀವಿಗಳೆಲ್ಲಾ ಸೇರಿ ಭೈರಪ್ಪನವರ ಕವಲು ಕಾದಂಬರಿಯನ್ನು ಟೀಕಿಸಿದ್ದರು. ಸ್ತ್ರೀಯರನ್ನು ಗೌರವಿಸಿಲ್ಲ ಎಂದು ಕೂಗಾಡಿದ್ದರು. (ಇದರರ್ಥ ನಾನು ಕವಲನ್ನು ಸಂಪೂರ್ಣವಾಗಿ ಸಮರ್ಥಿಸುವವಳೆಂದಲ್ಲ). ಆದರೆ ಅಲ್ಲಿ ಭೈರಪ್ಪನವರ ಕವಲಿನಲ್ಲಿ ಚಿತ್ರಿತರಾಗಿರುವ ಸ್ತ್ರೀಯರು ಕಾಲ್ಪನಿಕ ಪಾತ್ರಗಳು. ವಾಸ್ತವಿಕ ಕಲ್ಪನೆಯನ್ನು ಕಟ್ಟಿಕೊಡುವಂತಹವು ಮಾತ್ರ. ಆದರೆ ಇಲ್ಲಿ ಈ ಲೇಖಕರು ತಮ್ಮ ತಾಯಿಗೆ ಕೊಟ್ಟಿರುವ ಅಗೌರವ, ಅನಾದರ, ಅನೈತಿಕತೆಯ ಪಟ್ಟ- ಎಲ್ಲವನ್ನೂ ಕಂಡಾಗ ತುಂಬಾ ನೋವು, ಅಸಹನೆ, ಕೋಪ, ತಿರಸ್ಕಾರ ಮೂಡುವುದಂತೂ ಸತ್ಯ. ಇದು ನನ್ನ ವೈಯಕ್ತಿಕ ಭಾವನೆ ಅಷ್ಟೇ. ಆದರೆ ಕೂಲಂಕುಶವಾಗಿ ಓದಿದರೆ ನಿಮಗೂ ಹಾಗನ್ನಿಸದಿರದು.

ಬುದ್ಧಿಜೀವಿಗಳೆಂದರೆ ಬುದ್ಧಿಯಿಂದಲೇ ಜೀವಿಸಲು ಹೆಣಗಾಡುವ ನಿರುಪದ್ರವಿಗಳೆಂದುಕೊಂಡಿದ್ದೆ. ಈಗ ಭಯವಾಗುತ್ತಿದೆ! ಕಾರ್ನಾಡರ ಈ ಲೇಖನಕ್ಕೆ ನನ್ನ ಧಿಕ್ಕಾರವಿದೆ! ಸಮಾಜದಲ್ಲಿ ಗಣ್ಯರೆನಿಸಿಕೊಂಡು ಪೋಸುಕೊಡುವ ಇಂತಹವರ ಮಾನಸಿಕ ಅಸ್ವಸ್ಥೆಯಿಂದ ಸಾಮಾಜಿಕ ಸ್ವಾಸ್ಥ್ಯ ಕೆಡುವುದರ ಬಗ್ಗೆ ಕಳಕಳಿಯಿದೆ. ಹ್ಮ್ಂ.... ಆರು ತಿಂಗಳಲ್ಲಿ ಮೂರು ದಿನಪತ್ರಿಕೆಯನ್ನು ಬದಲಿಸಿರುವೆ. ಈಗ ಮತ್ತೆ ಆ ಸಂದರ್ಭ ಒದಗಿಬಂದಿದೆ! ಆರು ಹಿತವರು ನಿನಗೆ ಈ ಮೂವರೊಳಗೆ ಎಂದು ಯೋಚಿಸುತ್ತಿರುವೆ.

-ತೇಜಸ್ವಿನಿ ಹೆಗಡೆ.

26 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ತನ್ನ ತಾಯಿಯ ಬಗ್ಗೆಯೇ ಈ ರೀತಿ ಬರೆಯುವ ಅವರ ಮನೋವಿಕಾರದ ಬಗ್ಗೆ ಖೇದವೆನಿಸುತ್ತದೆ. ಖ್ಯಾತನಾಮರೆ೦ದು ಹೆಸರು ಗಳಿಸಿರುವ ಇ೦ತಹ ದುರ್ಬುದ್ಧಿ ಜೀವಿಗಳ ಕೀಳು ಬರಹ ಪ್ರಕಟಿಸುವ ಪತ್ರಿಕೆಗಳಿಗೆ ಇತ್ತೀಚಿನ ದಿನಗಳಲ್ಲಿ ಮೌಲಿಕ ಬರಹ ಗಳು ಸಿಗುತ್ತಿಲ್ಲವೇನೋ ?

ಜಲನಯನ ಹೇಳಿದರು...

ತೇಜಸ್ವಿನಿ ನಿಮ್ಮ ಅನಿಸಿಕೆಯನ್ನ ಅನುಮೋದಿಸುತ್ತೇನೆ...ತಾಯ-ನಿಂದೆ ಮಹಾಪರಾಧ..ಅವಳೇನೇ ಆಗಿದ್ದರೂ ಅಥವಾ ಮಾಡಿದ್ದರೂ...ಅದು ಒಂದು ಸಮಾಜದ ಕಟ್ಟಳೆಗಳ ತಾವೇ ಮಾಡಿಕೊಂಡ ನಿಯಮಗಳ ಪರಿಧಿಗೆ ಸಂಬಂಧಿಸಿದ್ದು. ಆದರೆ ತಾಯಿ-ಮಗುವಿನ ಸಂಬಂಧ ಇವುಗಳಿಗೆ ಮೀರಿದ್ದು...
ಪರಾಂಜಪೆಯವರೊಂದಿಗೆ ನನ್ನ ಸಹಮತ- ಪತ್ರಿಕೆಗಳ ನೈತಿಕ ಅಧೋನ್ನತಿಯೇ ಇಂತಹ ಲೇಖನಗಳ ಔಚಿತ್ಯವಾದರೂ ಏನು...???

ಮನಸು ಹೇಳಿದರು...

ಬೇಸರವೆನಿಸಿತು ಆ ಲೇಖನ ಓದಿ... ಮುಂದುವರಿಯುವುದು ಎಂದು ಬೇರೆ ಬರೆದಿದ್ದಾರೆ.... ಮುಂದೆ ಇನ್ನೇನು ವಿಷಯಗಳನ್ನ ಮುಂದಿಡುತ್ತಾರೋ ಕಾರ್ನಾಡರು ಕಾಣೆ....

ಸಂದೀಪ್ ಕಾಮತ್ ಹೇಳಿದರು...

ಇನ್ನು ಯಾರ್ಯಾರ ವೈಯುಕ್ತಿಕ ವಿಚಾರ ಬರೀತಾರೋ ಮಹಾಶಯರು!ತಮ್ಮ ಬಗ್ಗೆ ಬರೀಬೇಕಾದ್ರೆ ಮಾತ್ರ ತೂಕ ಮಾಡಿ ಬರೀತಾರೇನೋ?

sunaath ಹೇಳಿದರು...

ಹೊಲಸು ಮನಸಿನ ಹೊಲಸು ಮನುಷ್ಯ.

ಸೀತಾರಾಮ. ಕೆ. / SITARAM.K ಹೇಳಿದರು...

ಮನೋವಿಕಾರಿಗಳಿಗೆ ಬುದ್ಧಿಜೀವಿಗಳೆನ್ನುತ್ತಾರೆ.
ಕಾರ್ನಾಡರು ಹೊರತಲ್ಲ. ಆದರೆ ಪ್ರಜಾವಾಣಿ ಸೇರಿದ್ದು ಆಶ್ಚರ್ಯ.
ಕಾರ್ನಾಡರ ವಿಕಾರ ಮನಸಿನ ಮೂಲವ್ಯಾವುದೆಂದು ತಿಳಿಯಿತು.
ತಾಯಿ ಅವರನ್ನು ಹೆತ್ತು ಹೊತ್ತು ಸಾಕಲಿಲ್ಲವೇ? ಇದೆಂಥಹ ಭಾಷೆ ಬಳಸುವದು.
ನನಗೂ ಹಿಡಿಸಲಿಲ್ಲ. ಅವರು ಹೇಳಿದ್ದು ಸತ್ಯವಿರಬಹುದು ಅದರ ಸಾರ್ವತ್ರಿಕವಾಗಿ ಹೇಳಬೇಕಿತ್ತೆ? ಇದನ್ನು ಬರೆಯುವಾಗ ತಾಯಿ ಅವರನ್ನು ಬೆಳೆಸಿದ್ದು ಅವರ ಕಣ್ಣ ಮುಂದೆ ಬರಲಿಲ್ಲವೇ?

ಮನಸಿನ ಮಾತುಗಳು ಹೇಳಿದರು...

ಬುದ್ದಿ ಹೆಚ್ಚಾದರೂ ಹಿಂಗೆ ಅನ್ಸುತ್ತೆ ......ಅವರಿಗೆಲ್ಲ ದೇವರೇ ಬುದ್ದಿ ಕೊಡ್ಬೇಕು.
ತಲೆ ಕೆಡಿಸಿಕೊಳ್ಳೋಕಿಂತ ನಾವು ಚೂಸಿ ಆಗೋದು ಒಳ್ಳೇದು.ನಮಗೆ ಖುಷಿ ಕೊಡೋ ಬರಹಗಳನ್ನಷ್ಟೇ ಓದೋಣ. ಇದನ್ನೆಲ್ಲಾ ಓದಿ ಮನಸನ್ನ ಯಾಕೆ ಹಾಳು ಮಾಡಿಕೊಳ್ಬೇಕು??ಅನ್ಸುತ್ತೆ .ಅಲ್ವಾ ತೇಜಕ್ಕಾ?

ಸಿಂಧು sindhu ಹೇಳಿದರು...

ಪ್ರಿಯ ತೇಜಸ್ವಿನಿ,

ನಾನು ಇದೇ ಆತ್ಮಚರಿತ್ರೆಯ ಕೆಲವು ಭಾಗಗಳನ್ನು ದೇಶಕಾಲದಲ್ಲಿ ಓದಿದ್ದೇನೆ. ನನಗೆ ನಿಮ್ಮ ಅಭಿಪ್ರಾಯ ಮೂಡಲಿಲ್ಲ. ಕಾರ್ನಾಡರು ಬುದ್ದಿಜೀವಿಗಳ ವಿಂಗಿನಲ್ಲಿ ವಿರಾಜಮಾನರಾಗಿರುವುದು ನಿಜವಾದರೂ ನಂಗೆ ಅವರು ಅವರ intellectual fancy ಗಳಿಗಿಂತ, ಅವರ ನಾಟಕಗಳ ಮೂಲಕವೇ ಪರಿಚಿತ. ಮತ್ತು ನಾನವರ ಹಲವು ನಾಟಕಗಳನ್ನು (ಬರೆದ, ಮತ್ತು ನಟಿಸಿದ) ನಾಟಕಗಳನ್ನು ತುಂಬ ಮೆಚ್ಚುತ್ತೇನೆ.ವೈಯಕ್ತಿಕವಾಗಿ ನನಗೆ ಅವರ ಬಗ್ಗೆ ಯಾವ ಹೆಚ್ಚಿನ ಆದರವೇನಿಲ್ಲ. ಈ ದಿಸೆಯಲ್ಲೆ ನಾನು ಓದಿದ ಭಾಗಗಳು ನನಗೆ ಇಷ್ಟವೇ ಆದವು. ಪ್ರಜಾವಾಣಿಯಲ್ಲಿ ಪ್ರಕಟವಾದ ತುಂಬ ಪರಿಮಿತ ಭಾಗವಷ್ಟರಿಂದಲೇ ಅವರ ಬರಹವನ್ನ, ಅದರ ಕಾಂಟೆಕ್ಸ್ಟಾನ್ನ ಅಳೆಯುವುದು ತಪ್ಪು ಅನಿಸುತ್ತದೆ. ನಿಮ್ಮ ಅಭಿಪ್ರಾಯದ ಬಗ್ಗೆ ಗೌರವದಿಂದಲೇ ನನ್ನ ಅಸಮ್ಮತಿ. ಕಾಲ ಈ ಬರಹದ ನಿಸ್ಪ್ರಹತೆಯನ್ನ ಒರೆಹಚ್ಚಬಹುದು.

ನನ್ನದು ಪರಿಮಿತ ಓದು, ಅದರ ಮೇಲಿನ ಅನಿಸಿಕೆಯನ್ನ ಸ್ನೇಹಿತೆಯಾದ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಅನಿಸಿಕೆಯನ್ನ ಅಲ್ಲಗಳೆಯುತ್ತಿರುವೆ ಎಂದು ದಯವಿಟ್ಟು ಭಾವಿಸಬಾರದು. ಪ್ರಾಮಾಣಿಕ ಮತ್ತು ಪೂರ್ವಾಗ್ರಹರಹಿತ ಭಿನ್ನತೆ ವಿಷಯದ ಸ್ಪಷ್ಟನೆಗೆ ಅನುಕೂಲವಾಗುತ್ತದೆ ಎಂದು ನಂಬಿರುವೆ.


ಪ್ರೀತಿಯಿಂದ,
ಸಿಂಧು

ಬಾಲು ಹೇಳಿದರು...

ತೇಜಸ್ವಿನಿ ಅವರೇ,

ನಿಮ್ಮ ಮಾತನ್ನು ನಾನು ಒಪ್ಪಲಾರೆ. ಕಾರ್ನಾಡ ರೆ ಹೇಳಿರುವಂತೆ ಅದು ಅವರ ಜೀವನ ಅನುಭವ ಅಥವಾ ಆತ್ಮ ಕಥೆ. ಅವರಿಗೆ ಅನ್ನಿಸಿದ್ದು, ಹಾಗೆ ಮಾತಾಡಿದ್ದನ್ನು ನೇರವಾಗಿ ಬರೆದಿದ್ದಾರೆ. ನೀವು ಹೇಳಿದಷ್ಟು ಬರಹ ಕೆಟ್ಟದಾಗು ಇಲ್ಲ, ಅಶ್ಲೀಲವಾಗು ಇಲ್ಲ. ನೀವು ಇಲ್ಲಿ ಕಾರ್ನಾಡ್ ಅವರನ್ನು ವಿರೋದಿಸುವುದಕ್ಕೆ ಮೂಲ ಕಾರಣ ಅವರು ಭೈರಪ್ಪ ನವರ ಕಾದಂಬರಿ ವಿರೋದಿಸಿದ್ದರೆ ಅಂತಾನ?

ಕೆಲವರಿಗೆ ಭೈರಪ್ಪ ಏನು ಬರೆದರೂ "ಹಿಂದೂ ವಾದ" ಆಗಿರುತ್ತೆ. ಇನ್ನೂ ಕೆಲವರಿಗೆ ಬುದ್ದಿ ಜೀವಿಗಳು ಏನು ಬರೆದರೂ/ ಹೇಳಿದರು ತೀರ ತಪ್ಪಾಗಿ ಕಾಣುತ್ತೆ. ತಲೇಲಿ ಏನೂ ಪೂರ್ವಗ್ರಹ ಇಲ್ಲದೆ ಓದೋಕೆ ಸಾದ್ಯನೇ ಆಗೋದಿಲ್ವೆ?

Dr Gnanadev ಹೇಳಿದರು...

ತನ್ನ ತಾಯಿಯ ಶೀಲವನ್ನು ಶ೦ಕಿಸುವ, ಅವಳ ಲೈ೦ಗಿಕ ಜೀವನದ ಪ್ರಸ್ತುತತೆ ಹಾಗು ಅನಿವಾರ್ಯತೆ ನಮ್ಮ ಘನ ಬುದ್ಧಿಜೀವಿ ಕಾರ್ನಾಡರಿಗೆ ಬೇಕಿತ್ತಾ? ನೋಡೋಣ ಇನ್ನು ಮು೦ದೆ ಸ್ವತಃ ಕಾರ್ನಾಡರದೆ ಪ್ರಾಮಾಣಿಕ ಅ೦ತರಾಳವನ್ನು ಅವರ ಲೀಲೆಗಳನ್ನು....

ತೇಜಸ್ವಿನಿ ಹೆಗಡೆ ಹೇಳಿದರು...

@ಪ್ರಿಯ ಸಿಂಧು,

ನಿಮ್ಮ ನೇರ ಸ್ಪಷ್ಟ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ವೈಯಕ್ತಿಕ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ. ಇದರಲ್ಲಿ ಅಸಮ್ಮತಿ/ಸಮ್ಮತಿಯ ಪ್ರಶ್ನೆಯೇ ಉದ್ಭವಿಸದು. ನಿಮ್ಮ ಅಭಿಪ್ರಾಯವನ್ನು ನೀವು ನೀಡಿದ್ದೀರಷ್ಟೇ. ಇದು ನನ್ನ ಅಭಿಪ್ರಾಯ. ಇದಕ್ಕೆ ಓದುಗರ ಅಭಿಪ್ರಾಯವನ್ನಷ್ಟೇ ಕೇಳಿದ್ದೇನೆ. ನೀವಂದಿರುವುದು ನಿಜ... "ಪ್ರಾಮಾಣಿಕ ಮತ್ತು ಪೂರ್ವಾಗ್ರಹರಹಿತ ಭಿನ್ನತೆ ವಿಷಯದ ಸ್ಪಷ್ಟನೆಗೆ ಅನುಕೂಲವಾಗುತ್ತದೆ".

ನಾನೂ ಅವರ "ಯಯಾತಿ" ನಾಟಕವನ್ನು ಮೆಚ್ಚಿಕೊಂಡವಳೇ. ಅದರೊಳಗಿನ ಚುರುಕು ತೀಕ್ಷ್ಣ ಸಂಭಾಷಣೆಗಳು ಇನ್ನೂ ಹಸಿರಾಗಿವೆ. ಹಾಗಾಗಿ ಓರ್ವ ಉತ್ತಮ ನಾಟಕಕಾರರಾಗಿ ನಾನವರನ್ನು ಮೆಚ್ಚಿದ್ದೆ. ಆದರೆ ಮೊನ್ನೆ ಪೇಪರಿನಲ್ಲಿ ಅವರ ಆತ್ಮಚರಿತ್ರೆ ಓದಿ ಬಹು ಬೇಸರವಾಯಿತು. ಈ ಒಂದು ಭಾವಕ್ಕೆ ನಾನೀಗಲೂ ಬದ್ಧಳೇ. ಇದು ನನಗಾದ ಅನುಭವ. ಇದನ್ನು ನಾನು ಯಾವುದೇ ಪೂರ್ವಾಗ್ರಹದ ಮೇಲೆ ಹೇಳುತ್ತಿಲ್ಲ. (ನನಗೆ ಅವರ ವೈಯಕ್ತಿಕ ವಿಚಾರಗಳೊಂದೂ ತಿಳಿದಿಲ್ಲ. ಅದರಲ್ಲಿ ಆಸಕ್ತಿಯೂ ಇಲ್ಲ.) ನನ್ನ ಪ್ರಕಾರ ಅವರು ತಾಯಿಯ ಕುರಿತು ಬರೆದ ರೀತಿ, ಬಳಸಿದ ಭಾಷೆ ತೀರಾ ಕಳಪೆಯಾಗಿತ್ತು. ಓದಿದ್ದನ್ನೇ ಮತ್ತೊಮ್ಮೆ ಓದಿದಾಗಲೂ ಇದೇ ಭಾವವೇ ಮತ್ತೆ ಮತ್ತೆ ಮೂಡಿತು. ಅದನ್ನೇ ನಾನು ನೇರವಾಗಿ ಸ್ಪಷ್ಟಪಡಿಸಿದ್ದು.

ತುಂಬಾ ಧನ್ಯವಾದಗಳು.

ಪ್ರೀತಿಯಿಂದ,
ತೇಜಸ್ವಿನಿ.

@ಬಾಲು ಅವರೆ,

ಮೊದಲಿಗೆ ನಾನು ಸ್ಪಷ್ಟಪಡಿಸುತ್ತೇನೆ. ನಾನು ಭೈರಪ್ಪನವರ ಅಂಧ ಅಭಿಮಾನಿಯಲ್ಲ. ಕವಲನ್ನು ಮೆಚ್ಚಿ ಹಾಡೀ ಹೊಗಳಿಯೂ ಬರೆದಿಲ್ಲ. ಅದನ್ನು ಸಂಪೂರ್ಣ ಸಮರ್ಥಿಸುವುದೂ ಇಲ್ಲ. ನೀವು ಈ ಕಮೆಂಟನ್ನು ಹಾಕಲು ಭೈರಪ್ಪನವರ ಮೇಲಿನ ಪೂರ್ವಾಗ್ರಹವೇ ಕಾರಣವೆಂದು ಹೇಳಿದರೆ ಸರಿಯಾಗುವುದೇ? ಅನವಶ್ಯಕವಾಗಿ ಹಿಂದು ವಾದ ಎಂದೆಲ್ಲಾ ತಪ್ಪರ್ಥೈಸಿಕೊಂಡು ಕಮೆಂಟಿಸದಿದ್ದರೆ ಉತ್ತಮ!

ಇನ್ನು ಬುದ್ಧಿಜೀವಿಗಳು ಏನು ಹೇಳಿದರೂ ತಪ್ಪೆಂದು ನಾನೆಲ್ಲೂ ಬರೆದಿಲ್ಲ. ನಾನು ಬರೆದ ಲೇಖನದ ತಾತ್ಪರ್ಯ ನಿಮಗೆ ಸರಿಯಾಗಿ ಅರ್ಥವಾಗದಿದ್ದರೆ ಮಗದೊಮ್ಮೆ ಓದಿ. ನನ್ನ ಅಭಿಪ್ರಾಯ ತಪ್ಪೆನ್ನುವ ಹಕ್ಕು ನಿಮಗಿದೆ. ಅದು ನಿಮ್ಮ ವೈಯಕ್ತಿಕ ಅಭಿಪ್ರಾಯವಾಗುತ್ತದೆ. ಆದರೆ ನಾನು ಯಾವುದೋ ಪೂರ್ವಾಗ್ರಹಪೀಡಿತಳಾಗಿಯೋ ಇಲ್ಲಾ ಹಿಂದೂವಾದದ ಪ್ರವಾದಿಯೆಂದೋ ಕಲ್ಪಿಸಿಕೊಂಡು ಓದಿದರೆ ಅದು ನಿಮ್ಮ ಸಂಕುಚಿತತೆಯನ್ನು ತೋರಿಸುತ್ತದೆ!

ಇಷ್ಟಕ್ಕೂ ನಾನು ಇದೇ ಸತ್ಯ. ನನ್ನ ಅನಿಸಿಕೆಯೇ ಅಂತಿಮ ಎಂದು ಹೇಳಿಲ್ಲ. ಎಲ್ಲರಿಗೂ ಅವರವರ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯವಿದೆ.

ಧನ್ಯವಾದಗಳು.

@ದಿವ್ಯಾ,

ಪತ್ರಿಕೆಯನ್ನು ಓದುವಾಗ ಮೊದಲೇ ಯಾವುದು ಉತ್ತಮ ವಿಚಾರ, ಯಾವುದು ಅಲ್ಲಾ ಎನ್ನಲು ಬರುವುದಿಲ್ಲ ಅಲ್ಲವೇ? ಅದೂ ಚಿರಪರಿಚಿತರ ಲೇಖನ/ಬರಹ ನೋಡಿದಾಗ ಕುತೂಹಲವಾಗಿ ಓದಲು ಹೋಗುವುದು ಸಹಜ ಅಲ್ಲವೇ? :)

ಧನ್ಯವಾದಗಳು.

@ ಪರಾಂಜಪೆ, ಜಲನಯನ, ಮನಸು, ಕಾಕಾ, ಸಂದೀಪ್ ಕಾಮತ್, ಸೀತಾರಾಂ ಕೆ. Dr.Gandev - ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

ಅನಾಮಯಧೇಯರೊಬ್ಬರು ತರಲೆ ಕಮೆಂಟೊಂದನ್ನು ಹಾಕಿದ್ದರು. ಅದನ್ನು ನಾನು ತಿರಸ್ಕರಿಸಿದ್ದೇನೆ. ಹೆಸರಿಲ್ಲದೇ ಬೆನ್ನ ಹಿಂದಿನಿಂದ ಆಡಿಕೊಳ್ಳುವ ಚಟವಿರುವವರಿಗೆ ಮಾನಸದಲ್ಲಿ ಸ್ಥಾನವಿಲ್ಲ. ಹೇಳಬೇಕೆಂದಿರುವುದನ್ನು ನೇರವಾಗಿ ತಮ್ಮ ನಿಜನಾಮಧೇಯದಲ್ಲಿ ಹೇಳುವ ಧೈರ್ಯವಿಲ್ಲದವರು ಕಮೆಂಟಿಸುವ ಅಗತ್ಯವೂ ಇಲ್ಲ.

ಅನಾಮಧೇಯ ಹೇಳಿದರು...

ತೇಜಕ್ಕ,
ಆ ಲೇಖನ ಮಹಾನುಭವರ ಸಂಸ್ಕಾರ ತಿಳಿಸುತ್ತದೆ. ಅವರ ಮಕ್ಕಳು ಆ ಮಹಾಶಯರ ಜೀವನ ಚರಿತ್ರೆ ಸಾರ್ವಜನಿಕ ವೇದಿಕೆಯಲ್ಲಿ ಬರೆದರೆ ಪುಕ್ಕಟ್ಟೆ ಮನೊರಂಜನೆ ಸಿಗುವುದು ಖಚಿತ! ಬೆಳೆದರವರ ಕುರಿತು ಆಡಿದರೆ ಪ್ರಯೋಜನವಿಲ್ಲ.ಅವರು ಒಬ್ಬೊಬ್ಬರಿಗೆ ಒಂದೊಂದು ಥರಹ ಭಾಸವಾಗುತ್ತಾರೆ...
-ಕೋಡ್ಸರ

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ,
ಲೇಖನ ಓದಿದೆ (ಪ್ರಜಾವಾಣಿ). ಇದು ನಿಜಕ್ಕೂ ದು:ಖಕರ ವಿಷಯ. ಮಹಾನುಭಾವರ ವಿಕೃತ ಮನೋಭಿಲಾಷೆಯು (ತಾವೇ ಹೇಳಿಕೊಂಡಂತೆ ಅವರ ಅಕ್ಕ-ತಂಗಿಯರ ಮುಂದೆ ಈ ವಿಚಾರಕ್ಕೆ 'ಥೂ ಎಂದದ್ದು') ಆತ್ಮಚರಿತ್ರೆ ಉತ್ತರ ನೀಡಿತಂತೆ. ಮಹಾನುಭಾವರ ನುಡಿಗಳು ತಮ್ಮ ಸಂಸ್ಕಾರ (?) ಎಂತಹುದು ಎಂಬುದನ್ನು ಸಾರ್ವಜನಕವಾಗಿ ತಿಳಿಸಿದ್ದಾರೆ. ಇನ್ನು ಇತರ ತಾಯಂದಿರ/ಮಹಿಳೆಯರ/ ಅಥವಾ ತಮ್ಮ ಮಕ್ಕಳ ಬಗ್ಗೆಯೇ ಏನು ಬರೆಯುತ್ತಾರೋ? ನಮ್ಮ ಧಿಕ್ಕಾರವೂ ಇಂತಹ ಬುದ್ಧಿಜೀವಿಗಳಿಗೆ ಸದಾ ಇರಲಿ.

Dr Gnanadev ಹೇಳಿದರು...

ಅಕ್ಕ ತ೦ಗಿಯ ಜೊತೆ ಚರ್ಚಿಸಿ ತಿಳಿದುಕೊಳ್ಳುವ ಬದಲು ತಾಯಿ ಬದುಕಿದ್ದಾಗಲೇ ಆಕೆಯ ಬಾಯಿ೦ದಲೇ ಆಕೆಯ ಲೈ೦ಗಿಕ ಜೀವನದ ಬಗ್ಗೆ ಕಾರ್ನಾಡರು ತಿಳಿದುಕೊಳ್ಳಬಹುದಿತ್ತು. ಅವರ ಆತ್ಮ ಈಗ ಸ್ವರ್ಗದಲ್ಲಿ ಚಡಪಡಿಸುತ್ತಿರಬೇಕು ಇ೦ಥಾ ಬುದ್ದುಜೀವಿ ಮಗನನ್ನು ಹೆತ್ತು ಹೊತ್ತು ಸಾಕಿ ಸಲಹಿ ಬುದ್ದಿವ೦ತ?ನನ್ನಾಗಿ ಮಾಡಿದ್ದಕ್ಕೆ..

Subrahmanya ಹೇಳಿದರು...

"ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ" ಇದು ಸತ್ಯವೆ. ಕಾರ್ನಾಡರ ಕೆಲವು ’ಲೀಲೆ’ಗಳನ್ನು ಕಣ್ಣಾರೆ ಕಂಡಿರುವ ನನಗೆ ತಮ್ಮ ತಾಯಿಯ ಬಗೆಗೆ ಈ ರೀತಿ ಬರೆಯುದೇನೂ ಕಷ್ಟವಾಗುವುದಿಲ್ಲ ಅನಿಸಿತು !. ಬುದ್ದಿಜೀವಿಗಳೇ ಹಾಗೆ ಬಿಡಿ !.

Ittigecement ಹೇಳಿದರು...

ತೇಜಸ್ವಿನಿ...

ಮಧ್ಯರಾತ್ರಿಯವರೆಗೂ "ಮದ್ಯದ ಅಂಗಡಿಗಳನ್ನು" ತೆರೆದಿಡ ಬೇಕು
ಜನರಿಗೆ ಮನರಂಜನೆಗೆ ಅಗತ್ಯ ಎನ್ನುವ ಇವರ ಮನಸ್ಥಿತಿ ಬಗೆಗೆ ಕನಿಕರ ಮೂಡುತ್ತದೆ...

ಛೇ... !

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಮ್,
ಓದಿದೆ.... ತುಂಬಾ ಬೇಸರದ ಸಂಗತಿ ಇದು... ಹೆತ್ತ ತಾಯಿಯನ್ನು ಈ ರೀತಿ ಚಿತ್ರಿಸಿರುವುದು ಬುದ್ದಿಜೀವಿಗಳಲ್ಲ.... ಬುದ್ದಿಹೀನರು..... ಇತ್ತೀಚಿಗೆ ಯಾಕೋ ಬುದ್ದಿಜೀವಿಗಳು, ಪ್ರಗತಿಪರರು, ಚಿಂತಕರು ಎಂದರೇ ಹೆದರಿಕೆ.....

umesh desai ಹೇಳಿದರು...

ತೇಜಸ್ವಿನಿ ಕಾರ್ನಾಡರು ತಮ್ಮ ತಾಯಿ ಬಗ್ಗೆ ಕೀಳಾಗಿ ಬರೆದಿದ್ದಾರೆ ಅದರ ಬಗ್ಗೆ ಬಂದ ಅಭಿಪ್ರಾಯ(ನನ್ನ ಬ್ಲಾಗ್ ಒಡನಾಡಿಗಳದೇ) ನೋಡಿಯೂ ನಾನು ನನ್ನ ಮಾತು ಹೇಳುತ್ತಿರುವೆ. ಕಾರ್ನಾಡರ ತಾಯಿ ಆ ವೇಳೆಯಲ್ಲಿ ಜಾರಿದ್ದಾರೆ
ಅದನ್ನು ಮಗ ಆದವ ಹೀಗೆ ಡಾಣಾ ಡಂಗುರ ಮಾಡಿದ್ದಾರೆ ಅದು ಸರ್ವಥಾತಪ್ಪು ಅದಕೆ ನೀವು ಶಂಕರರ ಶ್ಲೋಕ
ಬೇರೆ ಕೊಟ್ಟಿರುವಿರಿ.ನನ್ನ ಅಭಿಪ್ರಾಯ ಅಂದರೆ ಎಲ್ಲರ ಬಾಲ್ಯ ಅಥವಾ ಬೆಳೆದು ಬಂದ ರೀತಿ ಸಮ ಆಗಿರುವುದಿಲ್ಲ.
ಸಣ್ಣವರಿದ್ದಾಗ ನಮ್ಮ ಸುತ್ತಲಿನ ,ನಮ್ಮ ತಂದೆ ತಾಯಂದಿರ ವರ್ತನೆ ನಮಗರಿವಿಲ್ಲದೇ ನಮ್ಮ ಮೇಲೆ ಛಾಪು ಒತ್ತಿರುತ್ತದೆ .ಕೆಲವು ಜನ ಅದೇ ಗುಂಗಿನಲ್ಲಿ ಬೇರೆ ಬೇರೆ ಹಾದಿ ಹಿಡಿಯುತ್ತಾರೆ ಈಗ ಕಾರ್ನಾಡರು ಹಿಡಿದ ಹಾದಿ ಅಂದರೆ
ಅಭಿವ್ಯಕ್ತಿ ಮಾಧ್ಯಮ ಅದರಲ್ಲಿ ಅವರು ಪ್ರಸಿದ್ಧರೂ ಆಗಿದ್ದಾರೆ. ನೆನಪು ದಾಖಲಿಸುವಾಗ ತಮ್ಮ ತಾಯಿಯ ಅಂದಿನ
ನಡಾವಳಿ ಬಗ್ಗೆ ಹೇಳಿದ್ದಾರೆ.ಈಗ ಅದು ತಪ್ಪು ಅಥವಾ ಕಾರ್ನಾಡರು ಹೀಗೆ ಬರೆಯಬಾರದಿತ್ತು ಅದು ವಿಕೃತ ಇತ್ಯಾದಿಗಳ
ಬಗ್ಗೆ ನಾವು ನಿರ್ಣಯ ತಗೊಳ್ಳೋದು ಎಷ್ಟು ಸರಿ..ನಾವು ಆ ಅನುಭವಕ್ಕೆ ಒಳಗಾಗಿಲ್ಲ.ಅನುಭವಕ್ಕೆ ಒಳಗಾದವ ದಾಖಲಿಸಿದ್ದಾನೆ ಅದು ತಪ್ಪು ಅಂತ ಹೇಳಬಹುದೇ ನಾವು ಅದರ ಹಿಂದಿರುವ ಅಂಶ ನಿಜಕ್ಕೂ ಗಮನಿಸಿದ್ದೇವೆಯೇ
ಅವರ/ಅವರ ತಾಯಿಯ ನೋವಿನ ಅರಿವು ನಮಗಿದೆಯೇ ಈ ಎಲ್ಲ ಪ್ರಶ್ನೆಗಳಿವೆ . ನಾವು ಈ ಪ್ರಶ್ನೆಗಳಿಗೆ ಮುಖಾಮುಖಿಯಾಗದೇ ನಿರ್ಣಯ ಕೊಡುವುದು ತಪ್ಪಾಗುತ್ತದೆ.

ವಿ.ರಾ.ಹೆ. ಹೇಳಿದರು...

ಕಾರ್ನಾಡರ ಆ ಬರಹ ಓದಿ ಬೇಸರವಾಯಿತು. ಅದು ಅವರ ಆತ್ಮಚರಿತ್ರೆಯೇ ಆಗಿರಬಹುದು, ವೈಯಕ್ತಿಕ ಅನುಭವವೇ ಆಗಿರಬಹುದು. ಆದರೆ ಕೊನೇಪಕ್ಷ ತಾಯಿಯ ಬಗ್ಗೆ ಬರೆಯುವಾಗಲಿನ ಭಾವದಲ್ಲಿ ನಿಯಂತ್ರಣವಿದ್ದರೆ ಒಳ್ಳೆಯದು.

ತೇಜಸ್ವಿನಿ ಹೆಗಡೆ ಹೇಳಿದರು...

ಈ ಲೇಖನಕ್ಕೆ ತಮ್ಮ ಅಭಿಪ್ರಾಯಗಳನ್ನು ಪ್ರತಿಕ್ರಿಯೆಯ ಮೂಲಕ ನೇರವಾಗಿ ಹಂಚಿಕೊಂಡ ಎಲ್ಲರಿಗೂ ತುಂಬಾ ಧನ್ಯವಾದಗಳು. ಇದರಲ್ಲಿ ಹೇಳಿದ್ದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ. ಹಾಗಾಗಿ ನನ್ನ ಅನಿಸಿಕೆ ಮಾತ್ರ ಸರಿ ಎಂದು ವಾದಿಸುವುದಿಲ್ಲ... ಸಮರ್ಥಿಸಿಕೊಳ್ಳುವ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ. ಹಾಗೆಯೇ ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ನನಗೆ ಕಾರ್ನಾಡರಮೇಲಾಗಲೀ ಈ ಪತ್ರಿಕೆಯ ಮೇಲಾಗಲೀ ಯಾವುದೇ ಪೂರ್ವಾಗ್ರಹವಿಲ್ಲ. ನನ್ನ ಅರಿವಿಗೆ ಬಂದದಿದ್ದನ್ನು ನೇರವಾಗಿ ಪ್ರಕಟಿಸಿದ್ದೇನೆ ಅಷ್ಟೇ. ಹಾಗೆ ನೋಡಿದಲ್ಲಿ ತಪ್ಪು/ಒಪ್ಪುಗಳೆರಡೂ ಅವರವರ ಅನಿಸಿಕೆಗೆ, ಅನುಭವಕ್ಕೆ ಬಿಟ್ಟಿದ್ದು :)

ಧನ್ಯವಾದ.

-ತೇಜಸ್ವಿನಿ ಹೆಗಡೆ.

ಸಂದೀಪ್ ಕಾಮತ್ ಹೇಳಿದರು...

ಎಲ್ಲರಿಗೂ ತಮ್ಮ ತಮ್ಮ ಆತ್ಮಕಥೆ ಬರೆಯೋ ಹಕ್ಕು ಇದೆ.ಆದರೆ ಅದರಲ್ಲಿ ಬೇರೆಯವರ ಆತ್ಮದ ಕಥೆ ಸೇರಿಸಬೇಕಾದಲ್ಲಿ ಸ್ವಲ್ಪ ವಿವೇಚನೆಯಿಂದ ಬರೆದ್ರೆ ಒಳ್ಳೆಯದು.

ಸುಧೇಶ್ ಶೆಟ್ಟಿ ಹೇಳಿದರು...

baraha ashtondu khandaneeya anisalilla... aadru swalpa hiditha iddiddare chennagittu anthaloo anisithu....!

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಾನು ಪ್ರಜಾವಾಣಿಯಲ್ಲಿ ಓದಿ ಇಲ್ಲೂ ಓದಿದೆ. ಓದಿದ ಮೇಲೆ ಅವರ ಬಗೆಗಿನ ಗೌರವ ಕಡಿಮೆಯಾಗಿಬಿಟ್ಟಿತು. ಪ್ರಚಾರಕ್ಕಾಗಿ ಹೀಗೆ ತನ್ನ ತಾಯಿಯಬಗ್ಗೆ ಹೀಗೆಲ್ಲಾ ಬರೆಯುವುದು ಸರಿಯಲ್ಲವೆನಿಸಿತು. ನಾನು ಕಳಿಸಿದ ತೂಕದ ಲೆಕ್ಕಚಾರದ ಲೇಖನವನ್ನು ಪರಿಶೀಲಿಸಿ ರೆಜೆಕ್ಟ್ ಮಾಡಿದ ಇದೇ ಪತ್ರಿಕೆಯವರು ಬುದ್ದಿಜೀವಿಗಳು ಹೀಗೆಲ್ಲಾ ಬರೆದರೆ ಏಕೆ ರೆಜೆಕ್ಟ್ ಮಾಡಲಿಲ್ಲವೆಂದು ನನ್ನಲ್ಲಿ ಪ್ರಶ್ನೆ ಮೂಡಿದೆ. ಕೇವಲ ಪ್ರಚಾರಕ್ಕಾಗಿ ಈ ಮಟ್ಟಕ್ಕೆ ಇಳಿಯಬೇಕೆ?

Ashok.V.Shetty, Kodlady ಹೇಳಿದರು...

ತೇಜಸ್ವಿನಿ ಮೇಡಂ,

ಹೆತ್ತ ತಾಯಿಯ ಬಗ್ಗೆ ಗೌರವವಿಲ್ಲದವರನ್ನು ಮಹಾನರು, ಗಣ್ಯರು ಅಂತ ನಾನೂ ಖಂಡಿತಾ ಹೇಳೋಲ್ಲ, ಲೇಖನ ಓದಿ ನಿಜವಾಗಿಯೂ ಬೇಸರವಾಯಿತು. ಅಪ್ರೀಯವಾದ ಸತ್ಯಗಳನ್ನು ಹೇಳದೆ ಇರುವುದೇ ಉತ್ತಮ.

ಅನಾಮಧೇಯ ಹೇಳಿದರು...

I think you missed the purpose of the article. Subject is not Karnad or his mother. He was narrating a story through his life experiences.

It's a pity how, especially amongst conservative middle class of India, the act of commenting on medieval practices that raises more anger than the pathetic practices itself.

ತೇಜಸ್ವಿನಿ ಹೆಗಡೆ ಹೇಳಿದರು...

Mr.ಅನಾಮಧೇಯ,

I think u have misunderstood the porpose of my article! ನಾನು ತೀರಾ ಸಾಂಪ್ರದಾಯಿಕತೆಯಲ್ಲಿ ಯೋಚಿಸಿಯೋ ಇಲ್ಲಾ.. ಕಾರ್ನಾಡರ ಕುರಿತಾಗಿಯೋ ಬರೆದದ್ದಲ್ಲ. ನನ್ನ ಲೇಖನದ ಹಿಂದಿನ ಆಶಯ, ಕಳಕಳಿ ಎರಡೂ ನಿಮಗರ್ಥವಾಗಿಲ್ಲ. ನಾನು ಯಾರಿಗೂ ಅರ್ಥಮಾಡಿಸಲೂ ಇದನ್ನು ಬರೆದಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಿಮ್ಮ ಅನಿಸಿಕೆ, ಅಭಿಪ್ರಾಯ ನಿಮ್ಮದು. ನನ್ನದನ್ನು ಹೇರುತ್ತಿಲ್ಲ.... ಹಾಗೇ ನಿಮ್ಮ ಅಭಿಪ್ರಾಯವನ್ನೂ ಒಪ್ಪುತ್ತಿಲ್ಲ.

ಧನ್ಯವಾದ.

(ಮಾನಸದಲ್ಲಿ ಹೆಸರಿಲ್ಲದ ಪ್ರತಿಕ್ರಿಯೆಗೆ ಸ್ಥಾನವಿಲ್ಲ ಎಂದು ಮೊದಲೇ ಹೇಳಿದ್ದೆ. ಆದರೆ ಇದನ್ನು ಪ್ರಕಟಿಸಿರುವೆ. ದಯವಿಟ್ಟು ಹೆಸರಲ್ಲಿದೇ ಪ್ರತಿಕ್ರಿಯೆಗಳನ್ನು ಮಾನಸದಲ್ಲಿ ಹಾಕಬೇಡಿ.)