ಬುಧವಾರ, ಅಕ್ಟೋಬರ್ 28, 2009

ಪ್ರಳಯಾಂತಕವೀ ಪ್ರಳಯದ ಆತಂಕ!

"ಅಯ್ಯೋ ಅಮ್ಮೋರೆ...ಯಾಕಾಗಿ ನಾನು ದುಡೀ ಬೇಕು? ಯಾರಿಗಾಗಿ ದುಡ್ಡು ಜೋಡಿಸಬೇಕು ಅಂತಾನೇ ಗೊತ್ತಾಗ್ತಿಲ್ಲ ನೋಡಿ...." ಎಂದು ಗೊಣಗುತ್ತಾ, ಸಪ್ಪೆ ಮುಖ ಹೊತ್ತು ಬಂದ ಸರೋಜಮ್ಮನ ಈ ಹೊಸ ವರಸೆಕಂಡು ತುಸು ಚಕಿತಳಾದೆ.
"ಯಾಕಮ್ಮಾ? ಏನಾಯ್ತು? ಗಂಡ ಏನಾದ್ರೂ ಮತ್ತೆ ಕುಡ್ದು ಬಂದು ಬೈದ್ನಾ? ಇಲ್ಲಾ ಮಗ ಮತ್ತೆ ಸ್ಕೂಲ್‌ಗೆ ಚಕ್ಕರ್ ಹಾಕಿದ್ನಾ?"ಎಂದು ಕೇಳಿದೆ.

"ಅಯ್ಯಾ.. ಬಿಡಿಯಮ್ಮ... ಇನ್ನು ಹಾಂಗೆಲ್ಲಾ ಆದ್ರೂ ಅಷ್ಟು ತಲೆಕೆಡ್ಸಿಕೊಳಾಕೆ ಹೋಗೋದಿಲ್ಲ... ಏನೇ ಆದ್ರೂ ಎಷ್ಟು ವರ್ಷ ಹೇಳಿ? ಅಬ್ಬಬ್ಬಾ ಅಂದ್ರೆ ಇನ್ನೊಂದ್ ಮೂರು ವರ್ಷ ತಾನೆ? ಆಮೇಲೆ ಎಲ್ಲಾ ಗೋಳಿಗೂ ಮುಕ್ತಿನೇಯಾ.. ಇರೋಷ್ಟು ದಿನಾ ಚೆನ್ನಾಗಿ ತಿಂದುಂಡು, ಆ ಸ್ವಾಮಿ ಪೂಜಿಸ್ತಾ ಇದ್ಬಿಡೋನಾ ಅಂತಿದ್ದೀನಿ.. ಕೂಡಿಟ್ಟಿದ್ನೆಲ್ಲಾ ನೀರು ಪಾಲು ಮಾಡೋಕೆ ನಾನ್ಯಾಕೆ ಹೀಂಗೆ ದುಡೀಲಿ ಅನ್ನೀ? ಎಲ್ಲಾರೂ ಎಲ್ಲಾನೂ ಮುಳ್ಗೇ ಹೋಗೋವಾಗ ನನ್ನ ಪುಡಿಗಾಸಿಗೇನು ಬೆಲೆ?" ಎನ್ನುತ್ತಾ ಎಲ್ಲಾ ಸಿಟ್ಟು, ಸಿಡುಕು, ಹತಾಶೆಗಳನ್ನೇ ಗುಡಿಸಿ ಗುಂಡಾಂತರ ಮಾಡುವಂತೆ ನೆಲವೇ ಕಿತ್ತು ಹೋಗುವಂತೆ... ಗುಡಿಸತೊಡಗಿದಳು. ಇನ್ನೇನು ನನ್ನೂ ಕಸದ ಜೊತೆ ಸೇರಿಸಿ ಬಿಡುತ್ತಾಳೇನೋ ಅಂತ ಹೆದರಿಕೆಯಾಗಿ ಆದಷ್ಟು ಪಕ್ಕಕ್ಕೆ ಸರಿದೆ. ಅಂಥದ್ದೇನು ಆಗಿರಬಹುದಪ್ಪಾ? ಎಲ್ಲಾರೂ ಎಲ್ಲದೂ ಮುಳುಗಿಹೋಗೋವಂಥದ್ದು? ಎನ್ನುವ ಕುತೂಹಲ ಮಾತ್ರ ಗುಡಿಸಿ ಹೋಗಲಿಲ್ಲ.

"ಅಲ್ಲಾ.. ಬೆಳಿಗ್ಗೆ ಬೆಳಿಗ್ಗೆ ಏನಾಯ್ತು ನಿಂಗೆ? ಹೀಗೆಲ್ಲಾ ಮಾತಾಡ್ತಿದ್ದೀಯಲ್ಲಾ? ಎಲ್ಲರೂ.. ಎಲ್ಲಾದೂ ಮುಳ್ಗಿ ಹೋಗೋಕೆ ಬೆಂಗ್ಳೂರಲ್ಲೇನು ಸುನಾಮಿ ಬರತ್ತೆ ಅಂದ್ರಾ? ಹಾಂಗೆ ಬರೋದಿದ್ರೂ ಅದು ಶಿರಾಡಿ ಘಟ್ಟ ಹತ್ತಿ ಬರ್ಬೇಕು ನೋಡು.." ಎಂದು ನನ್ನ ತಮಾಶೆಗೆ ನಾನೇ ನಕ್ಕರೂ ಆಕೆ ನಗಲೇ ಇಲ್ಲ!

"ಅಲ್ರಮ್ಮಾ.. ನೀವು ಟೀವಿ ನೋಡಿಲ್ವಾ ನಿನ್ನೆ? "ಹೀಗೂ ಉಂಟೆ..?" ಕಾರ್ಯಕ್ರಮದಲ್ಲಿ ಪ್ರಳಯ ಆಗತ್ತಂತೆ... ಅದೂ ಸರಿಯಾಗಿ ಮೂರುವರ್ಷದಲ್ಲಿ.. ಅಂದ್ರೆ ೨೦೧೨ ಡಿಸೆಂಬರ್ ೨೧ಕ್ಕಂತ್ರವ್ವ... ನಮ್ಮ ವಠಾರದಲ್ಲೆಲ್ಲಾ ಇದೇ ಮಾತು ನೋಡಿ.. ನೀವು ನೋಡಿದ್ರೆ ಎನೂ ಗೊತ್ತೆ ಇಲ್ಲಾ ಅಂತಿದ್ದೀರಾ..." ಎನ್ನಲು ನಿಜಕ್ಕೂ ನಾನು ಆಶ್ಚರ್ಯಚಕಿತಳಾದೆ. ನಾನು ಈ ಪ್ರೊಗ್ರಾಂ ನೋಡಿರಲಿಲ್ಲ.(ಹೀಗೂ ಉಂಟೆಗಿಂತಲೂ ಹೀಗಿರಲು ಸಾಧ್ಯವೇ ಇಲ್ಲಾ ಎನ್ನುವಂತೆ ಚಿತ್ರಿಸುವ ಆ ಚಾನಲ್ ಸ್ವಲ್ಪ ನನ್ನ ಕಣ್ಣಿಂದ ದೂರವೇ. ವೈಭವೀಕರಣಕ್ಕೆ ಇನ್ನೊಂದು ಹೆಸರು ಅದು ಎನ್ನುವುದು ನನ್ನ ಅಭಿಮತ...).

"ಅಲ್ವೇ.. ೨೧ಕ್ಕೇ ಎಲ್ಲಾ ಸರ್ವನಾಶ ಅಂತಾದ್ರೆ ಮರುದಿನದಿಂದ ಯಾವ ಜೀವಿಯೂ ಇರೋದಿಲ್ವಂತೋ? ಆಮೇಲೆ ಏನಾಗೊತ್ತಂತೆ?" ಎಂದು ಅವಳನ್ನು ಮತ್ತೆ ಪ್ರಶ್ನಿಸಿದೆ ನನ್ನ ನಗುವನ್ನು ಅದುಮಿಟ್ಟುಕೊಂಡು.

"ಹಾಂಗಲ್ಲಾ.. ಕೆಲವು ಒಳ್ಳೇವ್ರು ಮಾತ್ರ ಬುದ್ಧಿಭ್ರಮಣೆ ಆಗಿ ಬದ್ಕತಾರಂತೆ... ಅವ್ರಿಗೆ ಈ ಯುಗದ ನೆನಪ್ಯಾವ್ದೂ ಇರೋದಿಲ್ವಂತೆ.. ಎಲ್ಲಾ ಹೊಸತಾಗೇ ಶುರು ಆಗೊತ್ತಂತೆ.. ಅದ್ಯಾವ್ದೋ ಮಾಯಾಂಗನೆ ಕ್ಯಾಲೆಂಡರ್ ಪ್ರಕಾರವಂತೆ ಕಾಣಮ್ಮ..." ಎನ್ನಲು ನನ್ನ ನಗೆಬುಗ್ಗೆ ಯಾವ ತಡೆಯೂ ಇಲ್ಲದೇ ಹೊರಬಂತು. "ಅದು ಮಾಯಾಂಗನೆ ಕ್ಯಾಲೆಂಡರ್ ಅಲ್ವೇ.. ಮಾಯನ್ ಕ್ಯಾಲೆಂಡರ್... ಸರಿ ಸರಿ.. ಪ್ರಳಯ ಆಗೋಕೆ ಇನ್ನೂ ಸಮಯ ಇದೆ ಅಲ್ವಾ? ಈಗ ಸಧ್ಯಕ್ಕೆ ನನ್ನ ಕೆಲ್ಸ ಮಾಡ್ಕೊಡು ಮಾರಾಯ್ತಿ. ಪ್ರಳಯ ಅಗೊತ್ತೆ ಅಂತ ಕೆಲ್ಸ ಬಿಟ್ಟು ಹೋಗ್ಬಿಡ್ಬೇಡ.. ಹಾಗೇನಾದ್ರೂ ಆದ್ರೆ ಮುಂದೆ ಆಗೋ ಪ್ರಳಯ ಇಂದೇ ಇಲ್ಲೇ ನನ್ನ ಜೊತೆ ಆಗ್ಬಿಡೊತ್ತೆ.." ಎಂದು ಅವಳನ್ನೂ ನಗಿಸಿ ಕೆಲ್ಸದ ಕಡೆ ಗಮನ ಹರಿಸಿದೆ.

ಆದರೂ ತಲೆಯೊಳಗೆ ಇದೇ ಯೋಚನೆ. ಏನಿದು ಮಾಯನ್ ಕ್ಯಾಲೆಂಡರ್ ಮಹಿಮೆ? ಜನ ಮರುಳೋ ಜಾತ್ರೆ ಮರುಳೋ? ಇತರರೂ ಈ ಪ್ರೊಗ್ರಾಂ ನೋಡಿರಬಹುದು.. ಇಲ್ಲಾ ಇದ್ರ ಬಗ್ಗೆ ಉಳಿದವರ ಯೋಚನೆ ಏನಾಗಿರಬಹುದು? ಎಂದು ತಿಳಿಯುವ ಸಣ್ಣ ಆಶಯ ಮನದೊಳಗೆ ಮೂಡಿತು. ನನಗೆ ಪರಿಚಯ ಇದ್ದವರೊಡನೆ, ಕೆಲವು ಸ್ನೇಹಿತರೊಡನೆ, ಆತ್ಮೀಯರೊಡನೆ, ಸಹ ಬ್ಲಾಗಿಗರೊಡನೆ ಮಾತಾಡುವಾಗ.. ಚಾಟ್ ಮಾಡುವಾಗ.. ಈ ವಿಷಯ ಪ್ರಸ್ತಾಪಿಸಿದೆ. ಚಾಟಿಂಗ್ ಸ್ಟೇಟಸ್‌ಬಾರ್ ನಲ್ಲೂ ಇದನ್ನು ಹಾಕಿದಾಗ ಹಲವರು ಪ್ರತಿಕ್ರಿಯಿಸಿದರು. ಈ ವಿಚಾರ ಮಂಥನದಲ್ಲಿ ಹಲವು ಸುಂದರ, ಹಾಸ್ಯಮಯ, ಚಿಂತನಾಶೀಲ ಅಭಿಪ್ರಾಯಗಳು ಹೊರಹೊಮ್ಮಿದವು. ಅವುಗಳನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೊದಲಿಗೆ ನಾನು ಕಾಲ್ ಮಾಡಿದ್ದು ನನ್ನ ಬರಹಕ್ಕೆ ಅದರಲ್ಲೂ ವಿಶೇಷವಾಗಿ ಕಥಾರಚನೆಗೆ ಸ್ಪೂರ್ತಿಯಾಗಿರುವ ಭುವನೇಶ್ವರಿ ಹೆಗಡೆಯವರಿಗೆ. ಇದಕ್ಕೆ ಕಾರಣವೂ ಇದೆ. ಹತ್ತನೆಯ ತರಗತಿಯಲ್ಲೋ ಇಲ್ಲಾ ಒಂಭತ್ತನೆಯ ತರಗತಿಗೋ ನಮಗೆ ಅವರ ಲೇಖನವೊಂದರ ಪಾಠವಿತ್ತು. ಅದು ಪ್ರಳಯದ ಕುರಿತೇ ಆಗಿತ್ತು. ತುಂಬಾ ಹಾಸ್ಯಮಯವಾಗಿ ಬರೆದಿದ್ದರು. ಅದು ಇನ್ನೂ ನನ್ನ ಮನಃಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ಅವರು "ಮೊಸರೊಳಗೆ ಬೆಣ್ಣೆ ಮುಳುಗಿದಾಗ ಪ್ರಳಯ ಆಗುತ್ತದೆಂದು" ಹೇಳಿ ಬರೆದಿದ್ದರು. ಅದನ್ನೋದಿ ನಾವೆಲ್ಲಾ ತುಂಬಾ ನಕ್ಕಿದ್ದೆವು. ಅದು ನೆನಪಾಗಿ ಅವರಿಗೇ ಕಾಲ್ ಮಾಡಿದೆ. ವಿಷಯ ತಿಳಿದ ಅವರು ಕೊಟ್ಟ ಮೊದಲ ಪ್ರತಿಕ್ರಿಯೆ ಒಂದು ದೊಡ್ಡ ನಗು. "ಮೊಸ್ರಲ್ಲಿ ಬೆಣ್ಣೆ ಮುಳ್ಗ್‌ದಾಗ ಪ್ರಳಯ ಆಗ್ತು ಹೇಳಿದ್ನಲೇ.. ಈಗೆಂತ ಮೊಸ್ರೊಳ್ಗೆ ಬೆಣ್ಣೆ ಮುಳ್ಗಿದ್ದಡ?" ಎಂದು ಕೇಳಿದಾಗ ನಗು ಈ ಕಡೆಯೂ ಹರಿದಿತ್ತು. ಮಾತು ಮಾತಲ್ಲಿ ಅವರೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡರು.

ಕೆಲವು ವರುಷಗಳ ಹಿಂದೆ ಜನಪ್ರಿಯ ವಾರ ಪತ್ರಿಕೆಯೊಂದು ೨೦೦೦ದಲ್ಲಿ ಜಗತ್ ಪ್ರಳಯವಾಗುತ್ತದೆ ಎಂದು ಪ್ರಕಟಿಸಿತ್ತು. ಅತಿ ರಂಜಿತ, ಅದ್ಭುತ ಚಿತ್ರಗಳ ಮೂಲಕ ಓದುಗರನ್ನು ಸೆಳೆದಿತ್ತು. ನಾನಾಗ ಬಿ.ಎಸ್ಸಿ. ಓದುತ್ತಿದ್ದೆ. ಇನ್ನೂ ನನಗೆ ನೆನಪಿದೆ. ಕನ್ನಡ ಎಂದರೆ ಎನ್ನಡ ಎನ್ನುವ ಕಲವರೂ ಆಗ ಈ ಪತ್ರಿಕೆಯನ್ನು ತಂದು ಎಲ್ಲೆಂದರಲ್ಲಿ ಓದುತ್ತಿದ್ದರು. ಲ್ಯಾಬ್, ಕಾರಿಡಾರ್ ಎಲ್ಲ ಕಡೆ ಇದೇ ಸುದ್ದಿ... ಸಾವಿನ ಭೀತಿ ಅವರನ್ನು ಆ ರೀತಿ ಆಡಿಸಿತ್ತೇನೋ...! ಇದೇ ಸಮಯದಲ್ಲೇ ಭುವನೇಶ್ವರಿಯವರು ಕಾಲೇಜ್ ವಾರ್ಷಿಕೋತ್ಸವಕ್ಕೆಂದು ಗೆಸ್ಟ್ ಆಗಿ ಹೋಗಿದ್ದರಂತೆ. ಆ ಕಾಲೇಜಿನ ಪ್ರಿನ್ಸಿಪಾಲರು ಇವರಲ್ಲೊಂದು ಕೋರಿಕೆ ಮಾಡಿಕೊಂಡರಂತೆ. "ದಯವಿಟ್ಟು ನೀವು ನಿಮ್ಮ ಭಾಷಣದಲ್ಲಿ ಸ್ವಲ್ಪ ತಿಳಿ ಹೇಳಿ... ಪ್ರಳಯ ಆಗೋವಂಥದ್ದು ಏನೂ ಇಲ್ಲ ಎಂದು. ಭಯ ಬೇಡ ಎಂದು ಹೇಳಿ... ಹಲವು ವಿದ್ಯಾರ್ಥಿಗಳು ಭಯ ಪಟ್ಟು, ನಿರುತ್ಸಾಹಗೊಂಡು ಓದೂ ಬೇಡ ಎಂದು ಹೇಳುತ್ತಿದ್ದಾರೆ.." ಎಂದರಂತೆ! ಇದನ್ನು ಕೇಳಿ ಭುವನೇಶ್ವರಿ ಅವರಿಗೆ ತುಂಬಾ ಆಶ್ಚರ್ಯವಾಗಿತ್ತಂತೆ. ಅಂತೆಯೇ ಅಲ್ಲಿಯೂ ತಮ್ಮ ಹಾಸ್ಯ ಚಟಾಕಿಯ ಮೂಲಕ ನಗೆಬುಗ್ಗೆಯನ್ನು ಚಿಮ್ಮಿಸಿ, ಪ್ರಳಯದ ಭಯವನ್ನೋಡಿಸಲು ಬಹುಪಾಲು ಯತ್ನಿಸಿದ್ದರಂತೆ. ಇದನ್ನು ಕೇಳಿ ನನಗೆ ಮತ್ತೂ ಆಶ್ಚರ್ಯ ವಾಯಿತು.. "ಹೀಗೂ ಉಂಟೆ? " ಎಂದೆನಿಸಿಯೇ ಬಿಟ್ಟಿತು.

"ಪ್ರಳಯ ಅನ್ನೋದು ಕಪೋ ಕಲ್ಪಿತ. ಎಲ್ಲವೂ ಒಂದೇ ದಿವಸ ನಾಶ ಆಗೋಕೆ ಸಾಧ್ಯನೇ ಇಲ್ಲ. ಹಾಂ.. ಮನುಷ್ಯನ ದುರಾಸೆಗಳಿಂದಾಗಿ ಅಪಾರ ಜೀವ ಹಾನಿ ಆಗಬಹುದು. ಅದು ಆಗಾಗ ಆಗುತ್ತಲೇ ಇದೆ ಕೂಡ.. ಸುಮ್ಮಸುಮ್ಮನೇ ಜನರನ್ನು ಭೀತಿಗೊಳಿಸುವ ಯತ್ನವಿದೆಲ್ಲಾ.." ಎಂದು ಮೂರು ವರುಷದಲ್ಲಿ ಆಗುವ ದಿಢೀರ್ ಪ್ರಳಯದ ಯೋಚನೆಯೇ ಶುದ್ಧ ತಪ್ಪು ಎಂದರು.
ತದನಂತರ ನಾನು ಕೆಲವು ಬ್ಲಾಗಿಶ್ಚರುಗಳನ್ನು, ಸ್ನೇಹಿತರನ್ನು ಅವರ ಅಭಿಪ್ರಾಯ ತಿಳಿಯಲು ಸಂಪರ್ಕಿಸಿದೆ. ಅವರ ಉತ್ತರಗಳು, ಅನಿಸಿಕೆಗಳು ಈ ಕೆಳಗಿನಂತಿವೆ..

೧. "ವಿಕಾಸವಾದ"ದಲ್ಲಿ ತೊಡಗಿರುವ ವಿಕಾಸ್ ಹೆಗಡೆ - "ಹೌದಾ.. ಹಾಂಗೆ ಹೇಳಿದ್ವಾ? ಅಯ್ಯೋ... ಸರಿ ಹಾಂಗಿದ್ದ್ರೆ... ಮೂರುವರ್ಷದೊಳ್ಗೆ ನಾನು ಮದ್ವೆ ಮಾಡ್ಕೊಬೇಕು... ಬ್ಯಾಚುಲರ್ ಆಗಿ ಸಾಯೋಕೆ ಇಷ್ಟ ಇಲ್ಲೆ.. ಹ್ಹ ಹ್ಹ ಹ್ಹ.." (ಹ್ಮಂ.. ಆದಷ್ಟು ಬೇಗ ನಾಲ್ಕನೆ ಗೆಟಗರಿಯಿಂದ ಭಡ್ತಿ ಪಡೀತೆ ಹೇಳಾತು ಹಾಂಗಿದ್ರೆ....:) )
೨. "ನಾವೇಕೆ ಹೀಗೆ?" ಎನ್ನುವ ಲಕ್ಷ್ಮಿ - "ನಂಬೊಲ್ಲ ಒಂದ್ಸರ್ತಿ.. ನಂಬೊಲ್ಲ ಎರಡಸರ್ತಿ.. ನಂಬೊಲ್ಲ ಮೂರಸರ್ತಿ....ಮಾಯನ್ ಕ್ಯಾಲೆಂಡರ್ ತುಂಬಾ ಕ್ರೂಡ್ ರಚನೆ ಆಗಿರೋದು. ಅವರು ಚಂದ್ರನ ದೂರ ತಿಳ್ಕೊಂಡ ತಕ್ಷಣ ಅವ್ರ ಎಲ್ಲಾ ಪ್ರಿಡಿಕ್ಷನ್ನೂ ಸರಿ ಎನ್ನೋಕೆ ಆಗಲ್ಲ.. ಇದೆಲ್ಲಾ ಬರೀ ಸುಳ್ಳು.."

೩. "ಅಂತರ್ವಾಣಿ"ಯನ್ನು ಹಂಚಿಕೊಂಡ ಜಯಶಂಕರ್ - "ಹೌದಾ ತೇಜಕ್ಕ.. ಗೊತ್ತಿರ್ಲಿಲ ನೋಡಿ.. ಒಂದು ಲೆಕ್ಕದಲ್ಲಿ ಒಳ್ಳೇದು ಬಿಡಿ.. ಮನೆಕಟ್ಟಿ ಸಾಲದಲ್ಲಿದ್ದೀನಿ. ಜೀವ್ನ ಪೂರ್ತಿ ತೀರ್ಸೊದಲ್ಲೇ ಆಗೊತ್ತೆ ಅಂತಿದ್ದೆ. ಪ್ರಳಯ ಆಗಿ ಸಾಲದಿಂದನೂ ಮುಕ್ತಿ ಸಿಗೊತ್ತೆ ಬಿಡಿ... :) " (ಇದನ್ನು ಕೇಳಿ ಮನಃಪೂರ್ತಿ ನಕ್ಕು ಬಿಟ್ಟಿದ್ದೆ..:)).
೪. "ತುಂತುರು ಹನಿ" ಸಿಂಪಡಿಸುವ ಶ್ರೀನಿಧಿ - "ಅಯ್ಯೋ ನಿಂಗೆ ತೀರಾ ಮಳ್ಳಾಗೋಜೆ ಅತ್ಗೆ.. ನೀ ಇಂಥದ್ದನ್ನೆಲ್ಲಾ ಪ್ರಶ್ನೆ ಕೇಳೋದೇ ಅಲ್ಲಾ.." (ಮುಂದೆ ನಾನು ಮಾತಾಡೋ ಹಾಂಗೇ ಇಲ್ಲಾ.. ಗಪ್‌ಚುಪ್!)
೫. "ಮೌನ ಗಾಳ" ಹಾಕಿ ಕುಂತ ಸುಶ್ರುತ - "ಹೋದ್ರೆ ಹೋಗ್ಲಿ ಬಿಡೆ.. ಎಲ್ರ ಜೊತೆ ನಾವೂ ಹೋಗೋದಾದ್ರೆ ಹೋಗಾಣ ಅದ್ಕೇನಂತೆ.. ಎಲ್ಲಾ ಒಂದ್ಸಲ ಫಿನಿಶ್ ಆಗ್ಬೇಕು.. ಒಬ್ಬಿಬ್ರು ಉಳ್ಯೋದಾದ್ರೆ ಬೇಡ.. ಎಲ್ಲಾ ಹೋಗ್ಲಿ.. ನಂದಂತೂ ಸಹಮತಿ ಇದ್ದು ನೋಡು.." (ಪ್ರಳಯಕ್ಕೆ ಇವರ ಸಹಮತಿ ಇದೆ,, ನೋಟೆಡ್!!! :) ).

೬. "ಮನಸೆಂಬ ಹುಚ್ಚು ಹೊಳೆಯಲ್ಲಿ" ಈಜುತ್ತಿರುವ ಚಿತ್ರ - "ಅಯ್ಯೋ.. ನಿಂಗೇನಾಯ್ತೆ? ಇನ್ನೂ ನೀನು ಈ ಪ್ರಳಯದ ಹುಚ್ಚಿಂದ ಹೊರ್ಗೆ ಬಂದಿಲ್ವಾ? ಹ್ಮ್ಂ.. ಹಾಂಗಾಗೋದಾದ್ರೆ ಅಮೇರಿಕಾಕ್ಕೆ ಪ್ಲೇನ್ ಟಿಕೆಟ್ ಮೊದ್ಲೇ ಮಾಡ್ಸಿ ಇಟ್ಕೋಬೇಕು.. " ನಂಗೆ ಆಶ್ಚರ್ಯ "ಯಾಕೆ ಚಿತ್ರಕ್ಕ? ಎಲ್ಲಾ ಕಡೆನೂ ಪ್ರಳಯ ಆಗಿರೊತ್ತಲ್ಲಾ..?" "ಅಯ್ಯೋ ಅವ್ರ ಪ್ರಕಾರ ಡಿಸೆಂಬರ್ ೨೧ಕ್ಕೆ ಅಲ್ದಾ? ಅಮೇರಿಕಾಕ್ಕೆ ೨೧ ಡೇಟ್ ಆಗೋದು ಮರುದಿನ...ಸೋ... ಈ ದಿನ ನಾವು ಪ್ಲೇನ್ ಹತ್ತಿದ್ರೆ ಅಲ್ಲಿ ಪ್ರಳ ಆಗೋಮುಂಚೆ ಇರ್ತಿವಿ. ಭಾರತದಲ್ಲಿ ಪ್ರಳಯ ಶುರು ಆಗೋವಾಗ ನಾವು ಪ್ಲೇನ್‍ನಲ್ಲಿ ಇರ್ತಿವಲ್ಲಾ... ಹಾಗೆಯೇ ಅಲ್ಲಿ ಪ್ರಳಯ ಶುರು ಆಗೋ ಮೊದಲು ಮತ್ತೆ ಹೊರಟ್ರೆ ಇಲ್ಲಿಗೆ ನೀರ ಮೇಲೆ ಲ್ಯಾಂಡ್ ಆಗ್ಬಹುದು ನೋಡು.." (ಭಾರೀ ಯೋಚನೇನೆ.. ಆದ್ರೆ ಜೊತೆಗೆ ಹಡಗಿನ ಟಿಕೆಟ್ ಕೂಡಾ ಮಾಡ್ಸಿ ಇಟ್ಕೊಂಡಿರ್ಬೇಕು... ಲ್ಯಾಂಡ್ ಆಗೋಕೆ ಹಡಗು ಬೇಕು ತಾನೆ? :)).
೭. "ಕ್ಷಣ ಚಿಂತನೆಯ" ಚಂದ್ರಶೇಖರ್ - "ಹೌದು ಮೇಡಂ... ಹೀಗೂ ಉಂಟೆ? ಪ್ರೋಗ್ರಾಂನಲ್ಲಿ "ಬ್ರಹ್ಮ ರಹಸ್ಯ" ಅಂತ ಬಂದಿತ್ತು ಅದನ್ನ ನೋಡಿದ್ದೆ. ಈ ಬ್ರಹ್ಮ ರಹಸ್ಯ ಬರೆದಿದ್ದು ಪಿ.ಯು.ಸಿ ಓದಿದ ಹುಡುಗನಂತೆ ಮೇಡಂ... ಅದು ಭಾಗ-೧, ೨ ಹಾಗೂ ೩ ಇದೆಯಂತೆ.. ನಂಬೋಕಂತೂ ಆಗೊಲ್ಲಾ ನೋಡಿ..." (ಓಹೋ ಇದು ಬ್ರಹ್ಮ ರಹಸ್ಯದ ಕಥೆಯೋ... ಹಾಗಿದ್ದರೆ ಇದೊಂದು ಸುಳ್ಳಿನ ಬ್ರಹ್ಮ ಗಂಟೇ ಸರಿ ಎಂದೆನಿಸಿತು ನನಗೆ).
೮. "ಮಧುವನದಲ್ಲಿ" ವಿಹರಿಸುತ್ತಿರುವ ಮಧುಸೂದನ್ - "ಇದ್ರಲ್ಲಿ ನಂಬಿಕೆ ಇಲ್ಲಾ...ಸಾಕಷ್ಟು ವೈಜ್ಞಾನಿಕ ಸಾಕ್ಷಿಗಳೂ ಇಲ್ಲಾ... ಆದ್ರೆ ಒಂದೇ ಸಲ ಎಲ್ಲರೂ ಹೋಗೋದಾದ್ರೆ ಒಳ್ಳೇದೇ.. ಆಗ್ಲಿ ಬಿಡು.... ಎಲ್ಲರಿಗೂ ಒಟ್ಟಿಗೇ ಮೋಕ್ಷ ಸಿಕ್ಕಿದಂತಾಗ್ತು.."

ತಮ್ಮ ತಮ್ಮ ಕ್ಷೇತ್ರದಲ್ಲಿ ವಿಜ್ಞಾನಿಗಳಾಗಿರುವ "ಸಾಗರದಾಚೆಯ ಇಂಚರ"ಹೊರಡಿಸುವ ಡಾ.ಗುರುಮೂರ್ತಿ ಹಾಗೂ "ಜಲನಯನ"ದ ಮೂಲಕ ನೋಡುವ ಡಾ.ಆಝಾದ್ ಅವರು ವೈಜ್ಞಾನಿಕ ನೆಲೆಯಲ್ಲಿ ಈ ವಿಷಯವನ್ನು ಅಲ್ಲಗಳೆದರು.

ಗುರುಮೂರ್ತಿ - "ನೋ ಛಾನ್ಸ್... ಪ್ರಳಯ ಆಗೋಕೆ ಸಾಧ್ಯನೇ ಇಲ್ಲಾ. ಇನ್ನೇನಾದ್ರೂ ಭೂಮಿ ತನ್ನ ಅಕ್ಷಾಂಶದಿಂದ ದಿಕ್ಕು ತಪ್ಪಿದರೆ ಮಾತ್ರ ಹಾಗಾಗಬಹುದಷ್ಟೇ. ಆದರೆ ಅದೂ ಅಷ್ಟು ಸುಲಭವಲ್ಲ. ಇನ್ನು ಸಮುದ್ರ ಮಟ್ಟ ಪ್ರತಿ ವರ್ಷ ಏರುತ್ತಲೇ ಇದೆ. ಇದೆಲ್ಲಾ ಗ್ಲೋಬಲ್ ವಾರ್ಮಿಂಗ್‌ನಿಂದಾಗುತ್ತಿದ್ದು.. ಇದು ಸುಮಾರು ೨೦೦ ವರ್ಷಗಳಿಂದಲೂ ನಡೆಯುತ್ತಿದೆ. ಎಲ್ಲೋ ಒಂದಿಷ್ಟು ಭೂಭಾಗಳು ಮುಳುಗಡೆ ಆಗಬಹುದು ಕ್ರಮೇಣ... ಬಿಟ್ಟರೆ ಸಂಪೂರ್ಣ ನಾಶ ಸಾಧ್ಯವೇ ಇಲ್ಲ. ಇನ್ನು ಮನುಷ್ಯರೇ ಅಣುಬಾಂಬುಗಳ ಮೂಲಕ ಕೃತ್ರಿಮ ಪ್ರಳಯ ತಂದರೆ ತರಬಹುದಷ್ಟೇ. ಸ್ವಾಭಾವಿಕವಾಗಿ ಭೂಮಿಯ ಸಂಪೂರ್ಣ ನಾಶ ಆಗೊಲ್ಲ.. ನನ್ನ ಅಭಯ ಇದ್ದು..೨೦೦% ಹೆದ್ರಿಕೆ ಬೇಡ.. ಪ್ರಳಯ ಆಗ್ತಿಲ್ಲೆ....:)" (ಇಷ್ಟು ಅಭಯ ಸಿಕ್ಕರೆ ಸಾಕಲ್ಲಾ....:) ).

ಆಝಾದ್ - "ನಿಮ್ಗೆ ಈ ಪ್ರಳಯದ ಯೋಚ್ನೆ ಯಾಕೆ ತಲೆ ತಿನ್ತಾ ಇದೆ?... ಆ ಮಾಯನ್ ಕ್ಯಾಲೆಂಡರ್ ಅವರ ಸಂಖ್ಯಾಕ್ರಮ ವಿಚಿತ್ರವಾಗಿದೆ. ಹಾಗೊಂದು ವೇಳೆ ೨೦೧೨ಗೆ ಪ್ರಳಯ ಆಗ್ಬೇಕು ಅಂತಾಗಿದ್ರೆ ಅದ್ರ ಇಫೆಕ್ಟ್ ಸುಮಾರು ೫೦-೬೦ ವರ್ಷಗಳ ಮೊದಲೇ ಆಗಬೇಕಾಗುತ್ತಿತ್ತು. ಸಿಂಪಲ್ ರೊಟೇಷನ್, ರೆವಲ್ಯೂಷನ್, ಲೈಟ್ ಟ್ರಾವೆಲ್, ಎನರ್ಜಿ ಡಿಸಿಪೀಷನ್ ಇವುಗಳನ್ನು ಲೆಕ್ಕ ಹಾಕಿ ಎಲ್ಲ ಡೈನಾಮಿಸಮ್ ಎಕ್ಸ್ಟ್ರಾಪೊಲೇಟ್ ಮಾಡಿದ್ರೆ.. ಇದು ಇನ್ನು ಮೂರುವರ್ಷದೊಳಗಂತೂ ಅಸಾಧ್ಯ. ರಾತ್ರಿ ಆಗುವ ಮೊದಲು ಸಂಜೆ ಆಗ್ಬೇಕು ತಾನೆ? ಹಾಗೇ ಏನಾದ್ರೂ ಒಂದು ದೊಡ್ಡ ವಿಪತ್ತು ಬರುವ ಮೊದಲು ಅದರ ಮುನ್ಸೂಚನೆ ಸಿಗ್ಬೇಕು. ದೊಡ್ಡ ಉಲ್ಕೆಯೋ ಇನ್ನಾವುದೋ ಈ ಭೂಮಿಯನ್ನು ಬಡಿಯಬೇಕೆಂದರೆ ಅದು ಬಹು ದೂರವನ್ನು ಕ್ರಮಿಸಬೇಕಾಗುತ್ತದೆ. ಅದಕ್ಕೆ ಸಮಯ ಹಿಡಿಯುವುದು ಮತ್ತು ಅದು ನಮ್ಮ ಗಮನಕ್ಕೂ ಬರುವುದು. ನಿಮಗೆ ಇನ್ನೊಂದು ವಿಷಯ ಗೊತ್ತೇ?.... ಸೌದಿ ರಾಷ್ಟ್ರಗಳಲ್ಲಿ ಇತ್ತೀಚಿಗೆ ಕೆಲವಡೆ ಸ್ನೋ ಫಾಲ್ ಆಗುತ್ತಿದೆಯಂತೆ..!!! ಸುಮಾರು ೫೩ ಡಿಗ್ರಿ ತಾಪಮಾನ ಇರುವ ಪ್ರದೇಶವದು. ಜನರ ದುರಾಸೆ, ಪ್ರಕೃತಿಯೊಂದಿಗಿನ ದುರ್ವರ್ತನೆಯಿಂದ ಹವಾಮಾನ ವೈಪರೀತ್ಯವಾಗುತ್ತಿದೆ. ಇದರಿಂದ ಅನೇಕ ಜೀವ ಹಾನಿ ಮುಂದೆ ಆಗಬಹುದಷ್ಟೇ. ಅಲ್ಲಾರಿ ಅಷ್ಟಕ್ಕೂ ಪ್ರಳಯ ಆಗೇ ಆಗೊತ್ತೆ ಅಂತಾದ್ರೆ ಏನು ಮಾಡೋಕೆ ಆಗೊತ್ತೆ? ಒಂದು ಬಿಲ್ಡಿಂಗ್ ಬೀಳೊತ್ತೆ ಅಂದ್ರೆ ಜನ ಓಡಿ ಬಚಾವ್ ಆಗ್ತಾರೆ. ಆದ್ರೆ ಇಡೀ ಭೂಮಿನೇ ಇರೊಲ್ಲ ಅಂದ್ರೆ ಏನು ಮಾಡೋಕೆ ಆಗೊತ್ತೆ?...." (ಹ್ಮ್ಂ.. ನಿಜ. ಆಗದೇ ಹೋಗದೇ ಇರೋ ವಿಚಾರಕ್ಕೆ ಜನ ಯಾಕೆ ಇಂದೇ ಈಗಲೇ ತಲೆ ಕೆಡಿಸಿಕೊಂಡು ಕಾಣದ ಪ್ರಳಯದ ಆತಂಕಕ್ಕೆ ಕೆಲ ಕಾಲವಾದರೂ ತುತ್ತಾಗುತ್ತಾರೋ ನಾ ಕಾಣೆ!!!).

ಇವಿಷ್ಟು ನನ್ನ ಮಂಥನದೊಳಗೆ ಸಿಕ್ಕ ವಿಚಾರಧಾರೆಗಳು. ಅದೆಷ್ಟೋ ಸಹಮಾನಸಿಗರಲ್ಲೂ ಕೇಳಬೇಕೆಂದಿದ್ದೆ. ಆಗಲಿಲ್ಲ. ಈ ವಿಷಯದ ಕುರಿತಾಗಿ ನೀವೂ ನಿಮ್ಮ ಅಭಿಪ್ರಾಯಗಳನ್ನು... ಇತರರಿಂದ ಕೇಳಿದ, ಓದಿದ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಬೇಕಾಗಿ ವಿನಂತಿ.

ಇನ್ನು ಕೊನೆಯದಾಗಿ ನಾನು ಅಂದರೆ "ಮಾನಸ" -

ಆ ಚಾನಲ್‌ನಲ್ಲಿ ಈ ಪ್ರೋಗ್ರಾಂ ಪ್ರಸಾರವಾಗಿದ್ದು ನಾನು ನೋಡಲಿಲ್ಲ ಎಂದು ಮೊದಲೇ ಹೇಳಿದ್ದೇನೆ. ಮೊದಲಸಲ ನಾನು ಕೇಳಿದ್ದೇ ನಮ್ಮ ಮನೆಯ ಕೆಲಸಕ್ಕೆ ಬರುತ್ತಿದ್ದ ಸರೋಜಳ ಮೂಲಕ. ಆಮೇಲೆ ನೋಡಿದರೆ ನಮ್ಮ ಫ್ಲ್ಯಾಟ್ ತುಂಬಾ ಇದೇ ಸುದ್ದಿ. ಏನೋ ಆಗುವುದಿದೆ.. ಅದು ನಾಳೆಯೇ ಘಟಿಸುತ್ತದೆ ಅನ್ನೋ ರೀತಿಯಲ್ಲಿ ಎಲ್ಲರೂ ಇದನ್ನೇ ಮಾತಾಡಿಕೊಳ್ಳುತ್ತಿದ್ದರು. "ಅಲ್ಲಾರೀ.. ಹೀಗಾದ್ರೆ ಹೇಗೆ? ಎಷ್ಟು ಕಷ್ಟ ಪಟ್ಟು ಮಗ್ನ "ಆ" ಸ್ಕೂಲ್‌ಗೆ ಒಂದೂವರೆ ಲಕ್ಷ ಕೊಟ್ಟು ಸೇರ್ಸಿದೀವಿ. ಅದೆಲ್ಲಾ ವೇಸ್ಟ್ ಆಗೊಲ್ವಾ? ಛೇ ಏನೂ ಬೇಡ ಅನ್ಸೊತ್ತೆ ಇದ್ನ ಕೇಳಿದ್ರೆ.." ಎಂದು ಒಬ್ಬರು ಅಂದ್ರೆ... "ನಾನಂತೂ ನನ್ನ ಮಗ್ಳ ಇಂಜಿನೀಯರಿಂಗ್ ಸೀಟ್‌ಗೆ ಡೊನೇಷನ್ ಒಟ್ಟು ಹಾಕಲ್ಲ ಇನ್ನು.. ಸುಮ್ನೇ ಒದ್ದಾಡಿ ಸಾಯೋಕಾ...!" ಅಂತ ಇನ್ನೊಬ್ರ ವರಾತ. "ಯೇ ಸಬ್ ಪ್ರಭೂಕಿ ಪ್ರಕೋಪ್ ಹೈ... ಅಗರ್ ಆಪ್ ಕಲ್ಕಿ ಭಗವಾನ್ ಕೋ ಪೂಜತೇ ಹೈಂ ತೋ ಕುಛ್ ನಹಿ ಹೋಗಾ.. ಆಜ ಸೇ ಹೀ ಕಲ್ಕಿ ಭಗವಾನ್ ಕೋ ಮಾನಿಯೇ,,"(="ಇದೆಲ್ಲಾ ದೇವರ ಕೋಪದಿಂದಾಗುತ್ತಿರುವುದು.. ನೀವು ಕಲ್ಕಿ ಭಗವಾನ್‌ರನ್ನು ಪೂಜಿಸಿ.. ಅವರನ್ನು ಪೂಜಿಸುವವರಿಗೆ ಎನೂ ಆಗೊಲ್ಲವಂತೆ... ಇವತ್ತಿನಿಂದಲೇ ಅವರ ಅನುಯಾಯಿಯಾಗಿ...") ಅಂತ ಮತ್ತೋರ್ವರ ಪುಕ್ಕಟೆ ಸಲಹೆ. ಈ ಕಲ್ಕಿ ಭಗವಾನ್‌ನ ಮಾಯೆಯ ಪ್ರಭಾವದ ಕುರಿತು ಈ ಮೊದಲೇ ಲೇಖನವೊಂದನ್ನು ಬರೆದಿದ್ದೆ. ಓದಿದ್ದರೆ ನಿಮಗೂ ಅನಿಸಬಹುದು ಈಗ "ಜೈ ಕಲ್ಕಿ ಭಗವಾನ್" ಎಂದು :) ಸಾವಿಗಂಜಿ ಬದುಕಲು ಹೆದರುವ ಮನುಷ್ಯರಿಗೆ ಏನೆನ್ನೋಣ? ಪ್ರಳಯಾಂತಕವೀ ಪ್ರಳಯದ ಆತಂಕ ಎಂದೆನಿಸಿತು!

ಪ್ರಳಯ ಅನ್ನೋದು ಎಂದೋ ಮುಂದಾಗುವಂತದ್ದಲ್ಲ. ಅದು ಆಗದೆಯೂ ಇರಬಹುದು. ಆಗಲೂ ಬಹುದು. ಆದಿ ಇದ್ದ ಮೇಲೆ ಅಂತ್ಯ ಇದ್ದೇ ಇದೆ ಎಂದು ನಂಬುವವಳು ನಾನು. ಆದರೆ ಆ ಅಂತ್ಯ ದಿಢೀರ್ ಎಂದು... ಇಂಥದ್ದೇ ದಿನವೆಂದು ಹೇಳಿದರೆ ಖಂಡಿತ ನಂಬಲಾಗದು. ಮುಂದಾಗುವ ದುರಂತದ ಸಣ್ಣ ಚಿತ್ರಣ ಇಂದೇ ಕೆಲವು ಕಡೆ ದೊರಕಿದೆ.. ದೊರಕುತ್ತಲೂ ಇದೆ... ಮುಂದೆಯೂ ಕಾಣಸಿಗುವುದು. ಮನುಷ್ಯ ತನ್ನ ಉಳಿವಿಗೆ ಹಾಗೂ ಅಳಿವಿಗೆ ತಾನೇ ಜವಾಬ್ದಾರ ಎಂದು ಮೊದಲು ತಿಳಿಯಬೇಕು. ಪ್ರಕೃತಿಯೊಡನೆ ಚೆಲ್ಲಾಟ ಪ್ರಾಣ ಸಂಕಟ ಎನ್ನು ಸತ್ಯ ಮನದಟ್ಟಾದರೆ ಇನ್ನೂ ಸ್ವಲ್ಪ ಕಾಲ ಈ ಕಲಿಯುಗ ಬಾಳಿಕೆಗೆ ಬರಬಹುದು. ಹುಟ್ಟು ಹೇಗೆ ಅನಿಶ್ಚಿತವೋ ಸಾವೂ ಹಾಗೆಯೇ... ಯಾರ ಸಾವನ್ನೂ ಯಾರೂ ಮೊದಲೇ ನಿಶ್ಚಯ ಮಾಡಲಾರರು. ಅದನ್ನು ಊಹಿಸಬಹುದಷ್ಟೇ! ಊಹೆ ಯಾವತ್ತೂ ಸತ್ಯವಲ್ಲ. ಅದಕ್ಕೆ ಅದರದ್ದೇ ಆದ ಅಸ್ತಿತ್ವವೂ ಇಲ್ಲ! ಪ್ರಳಯವೇ ಆಗಿರಲಿ..ಇಲ್ಲಾ ಇನ್ನಾವುದೇ ವಿಷಯವಾಗಿರಲಿ.. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೇ.. ಕೇವಲ ಕಪೋ ಕಲ್ಪಿತ ಸುದ್ದಿಯನ್ನು ನಂಬುವುದರ ಮೂಲಕ ನಾವು ನಮ್ಮ ಇಂದಿನ ಬಾಳ್ವೆಯನ್ನು ಮಾತ್ರ ನಾಶ ಮಾಡಿಕೊಳ್ಳುತ್ತೇವೆ. ಇದು ಮಾತ್ರ ಸತ್ಯ.

- ತೇಜಸ್ವಿನಿ ಹೆಗಡೆ.

28 ಕಾಮೆಂಟ್‌ಗಳು:

ಸುಮ ಹೇಳಿದರು...

ಲೇಖನ ಇಷ್ಡವಾಯಿತು ತೇಜಸ್ವಿನಿ . ಸುಮಾರು ಹನ್ನೆರಡು ವರ್ಷಗಳ ಹಿಂದೆ ಪ್ರಳಯದ ಬಗ್ಗೆ ಬಂದ ಲೇಖನ ಸರಣಿಯನ್ನು ಓದಿದ್ದೆ. ಸ್ವಲ್ಪ ಹೆದರಿದ್ದೆ ಕೂಡ. ಈಗ ಅದನ್ನು ನೆನಸಿಕೊಂಡು ನಗು ಬರುತ್ತಿದೆ. ಮಾನವ ತನ್ನ ಅತಿರೇಕಗಳಿಂದ ಭೂಮಿಯನ್ನು ನಲುಗಿಸುತ್ತಿರುವುದು ನಿಜವಾದರು ಸ್ವಾಭಾವಿಕವಾಗಿ ಒಂದೇ ಬಾರಿ ಅದೂ ಇನ್ನು ಕೇವಲ ಮೂರು ವರ್ಷದಲ್ಲಿ ಎಲ್ಲವೂ ನಾಶವಾಗುವುದು ಅಸಾಧ್ಯ. ಆದರೆ ಇದರ ಹೆಸರಲ್ಲಿ ಮುಗ್ಧ ಜನರನ್ನು ಸುಲಿಯುವ ಢೋಂಗಿ ಜ್ಯೋತಿಷಿಗಳು,ಬಾಬಾಗಳು ,ಭಗವಾನರುಗಳಿಂದ ಅವರನ್ನು ರಕ್ಷಿಸುವವರಾರು? ಹೆದರುವವರ ಮೇಲೆ ಹಾವನ್ನೆಸೆಯುವವರಂತೆ ಆಡುವ ಮೀಡಿಯಾಗಳಿಗೆ ಬುಧ್ಧಿ ಹೇಳುವವರಾರು?

ಚಿತ್ರಾ ಹೇಳಿದರು...

ತೇಜೂ
ಒಳ್ಳೆ ಪ್ರಳಯಾಂತಕ ಲೇಖನಾನೆ ಹಾಕಿದ್ದೆ ಬಿಡು. ಒಂಥರಾ ಸುದ್ದಿ ಸಂಗ್ರಾಹಕಿಯ ರೋಲ್ ಮಾಡಿದ್ದೆ ಹೇಳಾತು !
ಅಲ್ಲಾ, ಯಾವುದಕ್ಕೂ ಈಗಲೇ boat ಖರೀದಿ ಮಾಡಿದ್ರೆ ಹೆಂಗೆ? ೨-೩ ಜನ ಒಂದೇ ಸಲಕ್ಕೆ ತಗಂಡ್ರೆ ಸ್ವಲ್ಪ ಡಿಸ್ಕೌಂಟ್ ಕೇಳಲಕ್ಕು ನೋಡು. ಹಾ ಹಾ ಹಾ ..
ಸೀರಿಯಸ್ ಆಗಿ ಹೇಳವು ಅಂದ್ರೆ ಮೂರು ವರ್ಷದ ಮೇಲೆ ಆಗ " ಪ್ರಳಯದ " ಬಗ್ಗೆ ತಲೆ ಕೆಡಿಸಿಕೊಂಡು ಇವತ್ತಿನ ಖುಶಿಯನ್ನ ಹಾಳು ಮಾಡಿಕೊಳ್ಳುವುದರಲ್ಲಿ ಅರ್ಥ ಇಲ್ಲೆ ಅಲ್ಲದಾ ?
ಅಷ್ಟೇ ಅಲ್ಲದೆ ನಾವು ಈ ಪ್ರಕೃತಿಯ ಮೇಲೆ , ಭೂಮಿಯ ಮೇಲೆ ಮಾಡ್ತಾ ಇರ ಅತ್ಯಾಚಾರಕ್ಕೆ ಇಷ್ಟು ದಿನ ಪ್ರಳಯ ಆಗದೆ ಇರದೇ ಹೆಚ್ಚು ! ಇನ್ನಾದರು ನಮಗೇ ಒಳ್ಳೆ ಬುದ್ಧಿ ಬರಬಹುದೇ?

ಶಿವಪ್ರಕಾಶ್ ಹೇಳಿದರು...

ಲೇಖನ ತುಂಬಾ ಚನ್ನಾಗಿ ಬರೆದಿದ್ದೀರಿ...
All i can say is 'Live Before you die'.
ಮುಂದೆ ಏನೋ ಆಗಬಹುದು ಎಂದು, ಇಂದು ಬಾಳುವುದನ್ನು ಬಿಡುವುದೇ....??

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ,
ಪ್ರಳಯ ದಿನಾಲೂ ಆಗುತ್ತಿದೆ ನನ್ನ ಪ್ರಕಾರ.... ಈ ರಾಜಕಾರಣಿಗಳು , ಅಧಿಕಾರಿಗಳು, ಜನರು (ನನ್ನನ್ನೂ ಸೇರಿ) ಮಾಡ್ತಾ ಇರೋದನ್ನ ನೋಡಿದ್ರೆ ಖಂಡಿತ ಪ್ರಳಯ ಆಗತ್ತೆ ಆದ್ರೆ ಇವರೆಲ್ಲಾ ಹೇಳಿದ ಪ್ರಕಾರ ಆಗದೆ ಇದ್ರೂ ಅಲ್ಪ ಸ್ವಲ್ಪ ಆಗೇ ಆಗತ್ತೆ.... ಯಾಕಂದ್ರೆ ನಾವು ಮಾಡ್ತಾ ಇರೋ ಪ್ರಕ್ರತಿ ನಾಶ, ಏರುತ್ತಿರುವ ಬ್ಹೊಮಿಯ ತಾಪಮಾನ ಪ್ರಳಯ ಮಾಡಿಸಬಹುದು.....

Lakshmi Shashidhar Chaitanya ಹೇಳಿದರು...

naanu nanna comment annu eradu bhaagavaagi vingaDisuttene.

serious:

http://www.popsci.com/science/article/2009-10/nasa-scientist-distraught-gullibles-cosmos-aren%E2%80%99t-really-going-destroy-us-2012

joke:

naanu "princess of the ocean" aaddarinda nanage pralayada bhaya illa :)

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ,
ದಿನಾ ಬೆಳಿಗ್ಗೆ ನಾವು ಇರ್ತಿವೋ ಇಲ್ವೋ ಅನ್ನೋದೇ ನಮಗೆ ಗೊತ್ತಿಲ್ಲ, ಇನ್ನು ಗೊತ್ತಿಲ್ದೇನೆ ಇರೋ ಪ್ರಳಯದ ಬಗ್ಗೆ ಹೇಳೋಕೆ ಆಗುತ್ಯೇ,
ಆಗೋಲ್ಲ ಅದೆಲ್ಲ ಬಿಡಿ
ಒಳ್ಳೆಯ ಲೇಖನ,

sunaath ಹೇಳಿದರು...

ತೇಜಸ್ವಿನಿ,
ನೀವಂತೂ ಹಾಸ್ಯರಸದ ಪ್ರಳಯವನ್ನೇ ಮಾಡಿಸಿದಿರಿ. ಅದಕ್ಕಾಗಿ thanks. ಇಂಥಾ ಪ್ರಳಯ ಇನ್ನಷ್ಟು ಆಗಲಿ!

ಅಂತರ್ವಾಣಿ ಹೇಳಿದರು...

ತೇಜಕ್ಕ,
ನಾನು ಈ ವಿಚಾರ ಕುರಿತು ಯಾರೊಡನೆಯೂ ಮತಾಡಿರಲಿಲ್ಲ. ನಿಮ್ಮ ಲೇಖನದೊಂದಿಗೆ ಹಲವರ ಅಭಿಪ್ರಾಯ ಸಿಕ್ಕಿತು.
ಆದರೆ ಈ ಪ್ರಳಯ ಸುಳ್ಳು ಅಂತ ಗೊತ್ತಾದ ಮೇಲೆ ಬೇಜಾರ್ ಆಗ್ತಾಯಿದೆ. ಎಲ್ಲರ ಸಾಲ ತೀರಿಸಲೇ ಬೇಕು ಅಂತ. :)

ಜಲನಯನ ಹೇಳಿದರು...

ತೇಜಸ್ವಿನಿ ನಿಮ್ಮ ಜೊತೆ ಮಾತನಾಡಿ ಕೆಲವು ಮಾಹಿತಿ ಸಂಗ್ರಹಿಸಿ ಬ್ಲಾಗ್ ಪೋಸ್ಟ್ ಗೆ ರೆಡಿ ಮಾಡ್ತಿದ್ದೆ..ನನಗಿಂತ ಮುಂಚೆ ನೀವೇ ಪೋಸ್ಟ್ ಮಾಡಿದ್ರಿ..ನಿಮ್ಮ ಪೊಸ್ಟ್ ಪೀಠಿಕೆಯಾಯ್ತು ನನ್ನ ಬ್ಲೊಗ್ ಓದೋರಿಗೆ...ಚನ್ನಾಗಿ ಸಾರವನ್ನು ಕ್ರೂಢೀಕರಿಸಿ ಹೇಳಿದ್ದೀರಾ..ನನ್ನ ಪೋಸ್ಟ್ ನೋಡಿ ಕಾಮೆಂಟಿಸಿ...

ಸುಧೇಶ್ ಶೆಟ್ಟಿ ಹೇಳಿದರು...

ನಮ್ಮ ಆಫೀಸಿನಲ್ಲಿ ಇದರ ಹೀಗೂ ಉ೦ಟೆ ಬಗ್ಗೆ ಆಡಿಕೊ೦ಡು ನಗುತ್ತಿದ್ದರು... ನೀವು ನೋಡಿದರೆ ದೊಡ್ಡ ಸ೦ಶೋದನೆಯನ್ನೇ ಮಾಡಿಬಿಟ್ಟಿದ್ದೀರಾ :)

ಆ ಪತ್ರಿಕೆ ೨೦೦೦ ಕ್ಕೆ ಪ್ರಳಯ ಆಗುತ್ತದೆ ಎ೦ದು ಹೇಳಿತ್ತಲ್ಲ... ೨೦೦೦ ಬ೦ದಾಗ ಏನೂ ಆಗಲಿಲ್ಲ.... ಆಗ ನಾವೆಲ್ಲಾ ಆ ಪತ್ರಿಕೆಯು ಪ್ರಳಯವನ್ನು ತಾತ್ಕಾಲಿಕವಾಗಿ ಮು೦ದೂಡಿದೆ ಎ೦ದು ತಮಾಷೆ ಮಾಡುತ್ತಿದ್ದೆವು...

ಲೇಖನ ಇಷ್ಟ ಆಯಿತು ತೇಜಕ್ಕ....

umesh desai ಹೇಳಿದರು...

ತೇಜಸ್ವಿನಿ ನಾ ಅಂತೂ ಹೀಗೂ ಉಂಟೇ ನೋಡೋದಿಲ್ಲ ನೋಡಿದ ನನ್ನ ಕಸಿನ್ ಹಾಗೂ ಅವನ ಹೆಂಡತಿ ತಲಿ ತಿಂದು
ಹಾಕಿದಾರೆ ಪ್ರಳಯ ನಾ ದಿನ ಅನುಭವಿಸ್ತೇನಿ ಹಿಂಗಾಗಿಅದು ಹೊಸಾದು ಏನೂ ಅಲ್ಲನೋಡ್ರಿ...

ವಿ.ರಾ.ಹೆ. ಹೇಳಿದರು...

ನನ್ನ ಹೇಳಿಕೆಯನ್ನು ತಿರುಚಿ ಬರೆಯಲಾಗಿದೆ ಅಂತ ಈ ಮೂಲಕ ಸ್ಪಷ್ಟಪಡಿಸೋಕೆ ಇಷ್ಟ ಪಡ್ತೇನೆ. ಆದ್ದರಿಂದ ಈ ಕೂಡಲೇ ತೇಜಸ್ವಿನಿಯವರು ಇದನ್ನ ಸರಿಪಡಿಸಬೇಕು ಅಥವಾ ಹಿಂಪಡೆಯಬೇಕು ಮತ್ತು ಬೇಷರತ್ತಾಗಿ ಕ್ಷಮೆ ಯಾಚಿಸಬೇಕು ಅಂತ ಆಗ್ರಹ ಪಡಿಸುತ್ತೇನೆ. ಇಲ್ಲದಿದ್ದರೆ ಉಗ್ರ ಹೋರಾಟ ಖಚಿತ.

ಶ್ರೀನಿಧಿ.ಡಿ.ಎಸ್ ಹೇಳಿದರು...

:-)

ಮನಸು ಹೇಳಿದರು...

ಅಬ್ಬಾ ಒಳ್ಳೆ ಪ್ರಳಯವನ್ನೇ ಸೃಷ್ಟಿಸಿಬಿಟ್ಟಿದ್ದೀರಿ ನಿಮ್ಮ ಲೇಖನದಲ್ಲಿ ಹಹಹ... ಬಹಳ ಚೆನ್ನಾಗಿ ಲೇಖನವನ್ನು ಬರೆದಿದ್ದೀರಿ. ಪ್ರಳಯದ ಬಗ್ಗೆ ನನ್ನ ಅಭಿಪ್ರಾಯವೇನಿಲ್ಲ ಹಾಗೆ ಆಗುವುದಾದರೆ ಆಗಲಿ ಬಿಡಿ ಪ್ರಕೃತಿ ವಿರುದ್ಧ ಯಾರು ನಿಲ್ಲಲು ಸಾಧ್ಯವಿಲ್ಲ ಬಂದದ್ದನ್ನು ಎದುರಿಸುವುದು ನಮ್ಮದು ಅಲ್ಲವೆ.. ಈಗ ಜಲಪ್ರಳಯ ಕರ್ನಾಟಕದಲ್ಲಿ ಕೋಲಾಹಲ ಮೂಡಿಸಿತು ಎಲ್ಲರೊ ಎದುರಿಸಲೇಬೇಕಾಯಿತು.
ಎಲ್ಲವನ್ನು ಕಾಲವೇ ನಿರ್ಧರಿಸುತ್ತೆ. ಹಹಹಹ ಅಲ್ಲವೆ..?

PARAANJAPE K.N. ಹೇಳಿದರು...

Superstition is to religion what astrology is to astronomy; the mad daughter of a wise mother.

Nature may be as selfishly studied as trade. Astronomy to the selfish becomes astrology; and anatomy and physiology become phrenology and palmistry - ಹೀಗ೦ತ ರಾಲ್ಪ್ ಎಮರ್ಸನ್ ಹೇಳಿದ್ದಾನೆ.
ನಾಳೆಯನ್ನು ನೆನೆದು ಇಂದಿನ ಸುಖವನ್ನು ಹದಗೆಡಿಸಿಕೊಳ್ಳುವುದು ಜಾಣತನವಲ್ಲ, ಅಂತ ನನ್ನ ಅನಿಸಿಕೆ. ಪ್ರಾಕೃತಿಕವಾದ ವಿಕೋಪಗಳು ಸ೦ಭವಿಸಬಹುದು, ಸುನಾಮಿಯಂತಹದು ಎರಗಬಹುದು, ಒ೦ದಷ್ಟು ಜನ ಸಾಯಬಹುದು. ಅದನ್ನೇ ಪ್ರಳಯದ ಒ೦ದು ಸ್ವರೂಪ ಅಂತ ಆಗ ಇದೇ ಜ್ಯೋತಿಷಿಗಳು ಹೇಳ್ತಾರೆ.

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ,

ಲೇಖನ ಓದಿದೆ. ಸರಳವಾದ ಬರವಣಿಗೆಯಿಂದಾಗಿ ಲೇಖನ ಮೆಚ್ಚಿಗೆಯಾಯಿತು. ಒಂದು ಒಳ್ಳೆಯ ಸಂಶೋಧನಾ ಬರಹದಂತೆ ಇದೆ.

ನಮ್ಮ ಕಚೇರಿಯಲ್ಲಿಯೂ ಕೆಲವರು ಇದರ ಬಗ್ಗೆ ಮಾತಾಡುತ್ತಿದ್ದರು. ಪ್ರಳಯ ಆದ್ರೆ, ಎಲ್.ಐ.ಸಿ. ದುಡ್ದು ಪಡೆಯೋದು ಹೇಗೆ? ಈಗಲೇ ಅರ್ಜಿ ಹಾಕುತ್ತೇನೆ. ಹಣ ಕೊಡಿಸು ಎಂದು ಒಬ್ಬರಾದರೆ, ನೀವೇ ಇರಲ್ಲ ಅಂದ ಮೇಲೆ ಹಣ ನಿಮಗ್ಯಾಕೆ? ನಮಗೆ ಆಸ್ತಿಪಾಸ್ತಿ ಎಲ್ಲ ಬರಕೊಡಿ ಅಂತ ಮತ್ತೊಬ್ಬರು. ಒಟ್ಟಿನಲ್ಲಿ ಪ್ರಳಯದ ಆತಂಕ, ಪ್ರಳಯಾಂತಕವಾಗಿ, ಜೊತೆಗೆ ಹಾಸ್ಯಮಯ ಸನ್ನಿವೇಶವನ್ನೂ ಸೃಷ್ಟಿಸಿತ್ತು.

ಈ ನಿಮ್ಮ ಲೇಖನ ಓದುತ್ತಿರುವಾಗ ಮೊನ್ನೆ ತಾನೇ ಓದಿದ್ದ ಒಂದು ಕಥೆ ನೆನಪಾಯಿತು. ಅದನ್ನು ಇಲ್ಲಿ ಸರಳವಾಗಿ ಬರೆದಿದ್ದೇನೆ. `ಅರಬಿ' ಎಂಬ ಒಂದು ವಿಶ್ವಕಥಾ ಕೋಶದಲ್ಲಿನ (ನವಕರ್ನಾಟಕ ಪ್ರಕಾಶನ, ಸಂಪುಟ ೧೦, ೧೯೮೨) ವೇಲ್ಸ್ ದೇಶದ ಒಂದು ಕಥೆ. ರೈಸ್ ಡೇವಿಸ್ ಬರೆದಿರುವ `ಕ್ಯಾಲೆಬನ ದೋಣಿ' ಎಂಬುದು.

ಕ್ಯಾಲೆಬ್ ಒಬ್ಬ ಅವಿವಾಹಿತ ನಡುವಯಸ್ಸಿನವನು. ಅವನದು ಗುಡಿಸಲು ವಾಸ. ಅವನ ತಂದೆ ಒಂದಷ್ಟು ಪೌಂಡುಗಳನ್ನು ಉಳಿಸಿ ಹೋಗಿದ್ದ. ಈತ ಯಾವುದೇ ಕೆಲಸ ಮಾಡುತ್ತಿದ್ದಿಲ್ಲ. ಒಂದಿಬ್ಬರು ಅವನ ಮದುವೆಯಾಗಲು ಸಿದ್ಧರಿದ್ದರೂ ಇವ ಒಲ್ಲೆಯೆನ್ನುವವನು. ಕಾರಣ: ಅವನು ಕೆಲವು ಧಾರ್ಮಿಕ ಗ್ರಂಥಗಳಲ್ಲಿನ (ಬೈಬಲ್ಲಿನ) ಭವಿಷ್ಯ ವಾಣಿಗಳ ಅರ್ಥಕ್ಕೆ ಜೋತುಬಿದ್ದವನು. ಅವನಿಗೆ ಸದಾ ಕಾಲ ಈ ಜಗತ್ತು ಸಂಪೂರ್ಣ ನಾಶವಾಗಲೆಂದೇ ಈ ಜಗತ್ತು ಹುಟ್ಟಿದೆ ಎಂಬುದು ಅವನ ಅನಿಸಿಕೆ. ಅವನ ಪ್ರಕಾರ ದೇವರು ಆಕಾಶದಲ್ಲಿ ಮದ್ದುಗುಂಡುಗಳನ್ನು ಹಿಡಿದು ಅಲೆದಾಡುವವನು.

ಅವನಿಗೆ ಈ ಜಗತ್ತು ಪ್ರಳಯದಲ್ಲಿ ಮುಳುಗೇಳುತ್ತದೆ. ಹೊಸ ಪ್ರಪಂಚ ಬರುತ್ತದೆ. ಅದಕ್ಕಾಗಿ ನಾನೇಕೆ ಇದೀಗ ದುಡಿಯಬೇಕು. ಅದು ಹೇಗೋ ನಾನೊಬ್ಬ ಬದುಕುತ್ತೇನೆ. ಉಳಿದವರೆಲ್ಲರ ಕಥೆ ಅಷ್ಟೇ. ಹೀಗೆ ಅವನು ಯೋಚಿಸುವವನು.

ಮ್ಯಾಗ್ರಿಯೆಡ್‌ ಒಬ್ಬ ಅಂಚೆ ಮಹಿಳೆ (ಪೋಸ್ಟ್ ವುಮನ್). ಅವನಿಗೆ ಅವಳು ಪ್ರೇಮ ನಿವೇದನೆ ಮಾಡಿಕೊಳ್ಳುವುದಕ್ಕಾಗಿ ಹಲವು ಬಾರಿ ಪ್ರಯತ್ನಿಸಿದ್ದಳು. ಅವನನ್ನು ಈ ಪ್ರಪಂಚಕ್ಕೆ ಸೆಳೆಯಲು ಪ್ರಯತ್ನಿಸುವಳು.

ಅವನಾದರೋ ಧರ್ಮಶಾಸ್ತ್ರ ಓದಿದವನು. ಮಾನವನ ಈ ಸಾಧನೆಗಳೆಲ್ಲವನ್ನೂ (ದುಷ್ಟ ಜನರ ಅಹಂಕಾರ ಎಂದು ಅವನ ಅನಿಸಿಕೆ), ಮಂಗಾಟಗಳನ್ನೂ ಗಮನಿಸುತ್ತಿದ್ದ. ಒಂದು ನವೆಂಬರ್‍ ರಾತ್ರಿ ಮಳೆ, ಭೀಕರ ಮಳೆ. ಅವನು ಲಾನ್ ಪೋವಿಸ್‌ ಬೆಟ್ಟಕ್ಕೆ ದೋಣಿಯಲ್ಲಿ ಹೋಗಿ ಸೇರಿದರೆ ಸಾಕು. ಉಳಿದ ಪ್ರಪಂಚವೆಲ್ಲ ಮುಳುಗುತ್ತದೆ ಎಂದು ಹಾಗೂ ಹೀಗೂ ಆ ಮಳೆಯಲ್ಲೇ ದೋಣಿಯನ್ನು ತೆಗೆದುಕೊಂಡು (ಕಾಸು ಕೊಟ್ಟು ಕೂಲಿಯವರ ಸಹಾಯದಿಂದ) ಹೋಗುತ್ತಾನೆ. ಮ್ಯಾಗ್ರಿಯಡ್‌ ಕೂಡಾ ಹಿಂಬಾಲಿಸುತ್ತಾಳೆ. ಧೋ, ಮಳೆ, ಬಿರುಗಾಳಿ, ಛಳಿ ಇವೆಲ್ಲ ಇದೆ. ಆತ ಹಟ ಬಿಡಲಾರ. ದೋಣಿಯಲ್ಲಿ (ಕೋಣೆಯಿರುವ) ಅವನ ಬಳಿಯಿದ್ದ ಕೋಳಿ, ಹಂದಿ, ಇವನ್ನೆಲ್ಲ ಸಾಗಿಸುತ್ತಾನೆ. ಬೆಟ್ಟದ ಕಣಿವೆಗೆ ಹೋಗುತ್ತಾನೆ. ಅಲ್ಲಿಂದ ಸುತ್ತಲೂ ನೋಡಿದಾಗ ಎಲ್ಲೆಲ್ಲೂ ನೀರು, ಜನರೆಲ್ಲ ಮುಳುಗುತ್ತಿದ್ದಾರೆ. ಹೀಗೆ ಕಥೆ ಸಾಗುತ್ತದೆ.

ಮ್ಯಾಗ್ರಿಯೆಡ್ ಏನೆಲ್ಲಾ ಹೇಳಿದರೂ ಅವ ಇವಳ ಮಾತನ್ನು ಕೇಳದೇ ಅವಳನ್ನು ಹೊರಹಾಕಲು ಕೂಗಾಡುತ್ತಾನೆ. ಅವಳು ಇವನ ಬೈಗುಳಕ್ಕೆ ಜಗ್ಗುವುದಿಲ್ಲ. ನಿನ್ನ ಮನೆ ಮುಳುಗಿ ಹೋಗಿದೆ. ಚಾಪೆ ತಂದಿದೀನಿ, ಈ ಚಳಿಯಲ್ಲಿ ಇರಬೇಡ ಎಂದೆಲ್ಲ ಹೇಳಿದರೂ ಅವ ಕೇಳುವುದಿಲ್ಲ. ನಿನಗೆ ಜ್ವರ ಬಂದಿದೆ, ಎಂದರೆ ನಿನಗೆ ಹೊಟ್ಟೆ ಕಿಚ್ಚು ಅದಕ್ಕೆ ತೊಂದರೆ ಕೊಡತಿದೀಯ ಎನ್ನುತ್ತಾನೆ. ಮ್ಯಾಗ್ರಿಯೆಡ್‌ ದೋಣಿಯನ್ನು ಹತ್ತಲು ಯತ್ನಿಸಿದರೆ ಇವ ಬಿಡುವುದಿಲ್ಲ. ಕೈ ತುಳಿಯುತ್ತಾನೆ. ತಳ್ಳುತ್ತಾನೆ. ಕೊನೆಗೆ ಧೊಪ್ಪನೆ ಬೀಳುತ್ತಾನೆ. ಅವನನ್ನು ಇವಳು ಪಕ್ಕಕ್ಕೆ ಎಳೆದೊಯ್ಯುತ್ತಾಳೆ. ಮಳೆ, ಗಾಳಿ ಹೊಡೆತ ಇವೆಲ್ಲ ಕ್ರಮೇಣ ನಿಲ್ಲುತ್ತದೆ. ಇವನು ಬದುಕಿ ಉಳಿಯುವುದು ಕಷ್ಟವೆಂದು ಡಾಕ್ಟರು ಹೇಳುತ್ತಾರೆ. ಅವನನ್ನು ಸಾಯಲು ಬಿಡಬಾರದೆಂದು ಇವಳೇ ಗುಡಿಸಲಿನಲ್ಲಿ ಉಳಿದು ಉಪಚರಿಸುತ್ತಾಳೆ.

ಅವನಿಗೆ ಎಚ್ಚರವಾದರೂ ಈ ಮುದಿ ಜಗತ್ತು ಮುಳುಗಲಿಲ್ಲ ಏಕೆ? ಎಂದು ಗೊಣಗುತ್ತಾನೆ. ಆಗ, ಅವಳು ಈ ದೇವಲೋಕದ ಸಾಹೇಬ ಮನಸ್ಸು ಬದಲಾಯಿಸಿದ. ಅವನ ಇಷ್ಟ ಏನೂ ಅಂತ ತಿಳಿದಾಗಿದೆ. ನೀನೂ ಸಹ ಇತರರಂತೆ ಇಲ್ಲಿ ಬಾಳಬೇಕು, ಮನೆ ಮಾಡಿಕೊಂಡಿರಬೇಕು, ಇನ್ನೂ ೧೦ ಸಾವಿರ ವರ್ಷ ಪ್ರಳಯದ ಭಯವಿಲ್ಲ, ಇದೀಗ ಬಂದಿದ್ದು ಕೇವಲ ಎಚ್ಚರಿಕೆಯ ಸೂಚನೆ, ಹೀಗೆ ಹೇಳುತ್ತಾ, ಕೊನೆಯಲ್ಲಿ ಅವನಿಗೆ ಮ್ಯಾಗ್ರಿಯೆಡ್‌ ಪ್ರಳಯಕಾಲ ಮುಗಿಯಿತು. ಹೊಸ ಪ್ರಪಂಚ ಬಂದಿದೆ ಎಂದು ಅವನನ್ನು ಹೊಸ ಮನುಷ್ಯನನ್ನಾಗಿ ಬದಲಾಯಿಸುತ್ತಾಳೆ.

ಹೀಗೆ ಪ್ರಳಯದ ಮಹಾಸನ್ನಿ (ವೇಶ/ಷ) ಈ ಕಥೆಯಲ್ಲಿ ಬರುತ್ತದೆ.

ಧನ್ಯವಾದಗಳು.

ಚಂದ್ರಶೇಖರ ಬಿಎಚ್.

PARAANJAPE K.N. ಹೇಳಿದರು...

ಬರಲಿದೆಯ೦ತೆ ಪ್ರಳಯ, ಜೀವಜಾಲ ಅಳಿವ ಸಮಯ
ಬೆ೦ಕಿಯ ಮಳೆಯೋ, ಜಲಸಮಾಧಿಯೋ, ಸುನಾಮಿಯೋ
ಅ೦ತ್ಯವೋ, ವಿನಾಶವೋ ವಿಕೃತಿಯೋ ಬಲ್ಲವರಿಲ್ಲ,
ದಿನಗಳೆಣಿಕೆಯಲ್ಲಿ ಬದುಕುವ೦ತಾಯ್ತಲ್ಲ ತ೦ದೇ

ಹಣಗಳಿಸಲು ಹೆಚ್ಚು ದಿನಗಳಿಲ್ಲೆ೦ದು ಬಗೆದ ನಮ್ಮ ಜಾಣ
ಜನನಾಯಕರು ಜಮಾಯಿಸುವಲ್ಲಿ ನಿರತರಾಗಿದ್ದರೆ
ವಿಪರಿತ ಸಾಲಸೋಲದಲ್ಲಿರುವ ಮಂದಿ ಬೇಗ ಮುಳುಗಡೆ
ಆಗಲಿ, ಸಾಲದೊ೦ದಿಗೆ ಬದುಕು ಸಮಾಪ್ತವಾಗಲೆ೦ದು ಕಾದಿದ್ದಾರೆ

ಮಾಯಾನಗರಿಯಲ್ಲಿ ಸೈಟುಕೊಳ್ಳಲು ಹವಣಿಸುತ್ತಿದ್ದ ಮಿತ್ರ
ಬದುಕುಳಿದರೆ 2013 ರಲ್ಲಿ ಕೊಳ್ಳೋಣ ಎ೦ದು ಹಾಯಾಗಿದ್ದಾನೆ
ಮಗನಿಗೆ ಲಕ್ಷ ಸುರಿದು ಮೆಡಿಕಲ್ ಸೀಟು ಕೊಡಿಸಬೇಕಾದ ತ೦ದೆ
ಹೊಸಮನೆ ಕಟ್ಟಬೇಕಾದ ಮಂದಿ ತೆಪ್ಪಗಾಗಿದ್ದಾರೆ

ನಾಳೆಯ ಆತ೦ಕವ ನೆನೆದು ಇ೦ದಿನ ಸುಖವ ಬಲಿಗೊಡುವುದೇಕೆ ?
ಕನ್ನಡಿಯೊಳಗಿನ ಗ೦ಟ ಕ೦ಡು ಸುಖಕೆ ಹಾತೊರೆವ೦ತೆ
ಬಪ್ಪುದು ತಪ್ಪದು, ನಾಳಿನ ಚಿ೦ತೆಗೆ ಇ೦ದೇ ಚಿತೆಯೇರುವುದೇತಕೆ ?
ಖೊಟ್ಟಿ ಜನರ ಮಾತ ಕೇಳಿ ಮರುಗುವುದನು ಬಿಡು ಮರುಳೇ

ತೇಜಸ್ವಿನಿ ಹೆಗಡೆ ಹೇಳಿದರು...

ಲೇಖನವನ್ನು ಮೆಚ್ಚಿ, ಪ್ರತಿಕ್ರಿಯೆಗಳ ಮೂಲಕ ಅಭಿಪ್ರಾಯಗಳನ್ನು ಹಂಚಿಕೊಂಡ ಎಲ್ಲರಿಗೂ ಧನ್ಯವಾದಗಳು.

-----------
@ ಸುಮ ಅವರೆ,

ನೀವು ಹೇಳಿದ್ದು ನಿಜ.. ಹೆದರಿದವನು ಸಾಯಲು ಪ್ರಳಯವೇ ಆಗಬೇಕೆಂದಿಲ್ಲವಲ್ಲ? ಹಗ್ಗವನ್ನು ಕಂಡು ಹಾವೆಂದು ಭ್ರಮಿಸಿ ಎದೆಹಿಡಿದು ಸತ್ತವರು ಎಷ್ಟು ಜನರಿಲ್ಲ ಹೇಳಿ? :)

@ ಚಿತ್ರಕ್ಕ,

ನೀ ಏನಾದ್ರೂ ಬೋಟ್ ಖರೀದಿಸಿದ್ದ್ರೆ ಹೇಳು.. ನಂಗೂ ೨-೩ ಬೇಕು :) ಹಾಂ... ಮತ್ತೆ ಪ್ರಳಯಾಂತಕ ಲೇಖನವೋ ಎಂತೋ ಗೊತ್ತಿಲ್ಲೆ. ಆದರೆ ಈ ಯೋಚನೆಯೇ ಪ್ರಳಯಾಂತಕ ಅಂತೂ ಹೌದು.

ಪ್ರಕೃತಿ ಒಂದು ಸಲ ಮುನಿದರೆ ಅದನ್ನು ರಮಿಸಲು ಹುಲುಮಾನವರಿಂದಾಗದು. ಮೊದಲೇ ನಾವು ಎಚ್ಚತ್ತುಕೊಂಡರ ಕಾಣದ ಪ್ರಳಯದ ಭಯವನ್ನು ಕಡೀಮೆಮಾಡಿಕೊಳ್ಳಬಹುದು.

@ ಶಿವಪ್ರಕಾಶ್ ಅವರೆ,

ಬದುಕಲೇ ಗೊತ್ತಿರದ ಮನುಷ್ಯರು ಮಾತ್ರ ಸಾವಿಗೆ ಹೆದರುವರೇನೋ ಅನ್ನಿಸುತ್ತಿದೆ. ಸಾವು ನಾವು ಹುಟ್ಟುದ ಕ್ಷಣದಿಂದಲೇ ನಮ್ಮೊಂದಿಗೇ ಬದುಕವಂಥದ್ದು. ಅದಕ್ಕಾಗಿ ಹೆದರಿ ಪ್ರತಿಕ್ಷಣ ಸಾವಿಗೆ ಹತ್ತಿರವಾಗುವುದಕ್ಕೆ ಏನು ಅನ್ನೋಣ?

@ ದಿನಕರ ಮೊಗೇರ ಅವರೆ,

ಹೌದು.. ಪ್ರಳಯ ಆಗಬಹುದು.. ಅದು ಆಗುವುದಾದರೆ ನಮ್ಮ ದುರಾಚಾರಗಳಿಂದ ಮಾತ್ರ ಸಾಧ. ಇದಕ್ಕೆ ಪರಿಹಾರವೂ ನಾವೇ!

@ ಲಕ್ಷ್ಮಿ,

ನಾನೂ ನನ್ನ ಪ್ರತಿಕ್ರಿಯೆಯನ್ನು ಎರಡುಭಾಗವಾಗಿ ವಿಂಗಡಿಸುವೆ..:)

ಸೀರಿಯಸ್,

ನೀವು ಕೊಟ್ಟ ಲಿಂಕ್ ತುಂಬಾ ಚೆನ್ನಾಗಿದೆ. ಪ್ರಳಯದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಅಲ್ಲಗಳೆಯುವಂತಿದೆ.

ಜೋಕ್,

ಹೌದು ರೀ.. ನೀವು ಸಾಗರದಿಂದ ಉದ್ಭವಿಸಿದವರು... ನಿಮಗೆ ಹೇಗೆ ತಾನೇ ಪ್ರಳಯ ತಾಗ ಬಹುದು? ನೀವು ಸಮುದ್ರದಿಂದ ಹುಟ್ಟಿ ಬರುವಾಗ ಪ್ರಳಯವೇನಾದರೂ ನಿಮಗೆ ಸಿಕ್ಕಿತ್ತಾ ಹೇಳಿ ಮತ್ತೆ :)

@ ಗುರುಮೂರ್ತಿ ಅವರೆ,

ಹೌದ್ರೀ.. ಹುಟ್ಟು ಸಾವು ಎರಡೂ ಅನಿಶ್ಚಿತವೇ. ಹಾಗಿರುವಾಗ ಎಲ್ಲರ ಸಾವೂ ಒಂದೇ ದಿನ/ಒಂದೇ ಸಮಯದಲ್ಲಿ ನಿಶ್ಚಿತ ಎಂದು ಹೇಳುವುದು ಎಷ್ಟೊಂದು ಹಾಸ್ಯಾಸ್ಪದ ಅಲ್ಲವೇ?

@ ಕಾಕಾ,

ಇಂತಹ ಪ್ರಳಯವಾಗಬೇಕಾದರೆ ಮತ್ತಷ್ಟು ಇಂತಹ ಹಾಸ್ಯಾಸ್ಪದ ಘಟನಾವಳಿಗಳ ಮುಸಲಧಾರೆಯೇ ಆಗಬೇಕು ಬಿಡಿ..:)

@ ಶಂಕರ್,

ಯೋಚನೆಮಾಡಬೇಡಿ. ಬ್ಯಾಂಕ್ ಅಧಿಕಾರಿಗೇ ಈ ಹೆದರಿಕೆಯನ್ನು ತುಂಬಿಬಿಡಿ. ಸಾಲ ಮನ್ನಾ ಮಾಡಿದರೆ ಅದರ ಪುಣ್ಯ ನಿಮ್ಮನ್ನು ಮುಂದೆ ಕಾಯುವುದು ಎನ್ನುವ ಭವಿಷ್ಯವನ್ನು ಯಾವುದಾದರೂ ಜ್ಯೋತಿಷಿಯ ಮೂಲಕ ಹೇಳಿಸಿಬಿಡಿ.(ಪ್ರಳಯದ ನಿಶ್ಚಿತವನ್ನು ಹೇಳಿದ ಜ್ಯೋತಿಷಿಯೇ ಆದರೆ ಮತ್ತೂ ಒಳಿತು :) ) :)

@ ಜಲನಯನ,

ನಿಮ್ಮ ಲೇಖನವನ್ನೂ ಓದಬೇಕಿದೆ. ಅದರಲ್ಲಿ ಮಾಯನ್ ಕ್ಯಾಲೆಂಡರಿನ ಮಹಿಮೆಯನ್ನು ಹೇಳಿದ್ದಿರೆಂದು ಮೇಲ್ನೋಟಕ್ಕೆ ತಿಳಿಯಿತು. ಸವಿವರವಾಗಿ ಓದಿ ಅಲ್ಲೇ ಪ್ರತಿಕ್ರಿಯಿಸುವೆ.


@ ಸುಧೇಶ್,

ಹಲವು ಪತ್ರಿಕೆಗಳು, ಚಾನಲ್‌ಗಳು, ಜ್ಯೋತಿಷಿಗಳು ಮುಂದಾಗುವ ಪ್ರಳಯವನ್ನೂ ಮುಂದೂಡಲೇ ಹೀಗೆಲ್ಲಾ ಹೇಳುತ್ತಿವೆಯೇನೋ..!!! :)

@ ಉಮೇಶ್,

ಹೀಗೂ ಉಂಟೇ? ಪ್ರೋಗ್ರಾಂ ಅನ್ನು ನೋಡದಿದ್ದರೆ ಏನೂ ಲಾಸ್ ಇಲ್ಲ. ಆದರೆ ನೋಡಿದರೆ ಮಾತ್ರ ನಿಮ್ಮ ತಲೆ ಕೆಡುವುದು ನಿಶ್ಚಿತ. ಈ ಪ್ರೋಗ್ರಾಂನಿಂದಾದ ಇನ್ನೊಂದು ಅವಾಂತರದ ಕಥೆಯನ್ನು ಮುಂದಿನ ಪೋಸ್ಟನಲ್ಲಿ ಹೇಳುವೆ :)

@ ವಿ.ರಾ.ಹೆ,

ನಿಮ್ಮ ಹೇಳಿಕೆಯನ್ನು ಖಂಡಿತ ತಿರುಚಿಲ್ಲ. ಬೇಕಿದ್ದರೆ ಸಾಕ್ಷಿ ಕೊಡಲಾಗುವುದು. ನೀವು ನನ್ನೊಂದಿಗೆ ಸಂವಾಸಿದಿದ ಚಾಟಿಂಗ್ ಅನ್ನು ಕಾದಿರಿಸಲಾಗಿದೆ. ಅಲ್ಲದೇ ಸಂಭಾಷಣೆಯನ್ನೂ(ಫೋನ್‌ನಲ್ಲಿ) ರೆಕಾರ್ಡ್ ಮಾಡಿದ್ದೇನೆ. ಹಾಗಾಗಿ ನಿಮ್ಮ ಪ್ರತಿಭಟನೆಯನ್ನು ರದ್ದುಗೊಳಿಸಿ, ಆಪಾದನೆಯನ್ನು ಹಿಂತೆಗೆದುಕೊಳ್ಳಿ.. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆಯನ್ನು ಹಾಕಲಾಗುವುದು. ಇಷ್ಟಕ್ಕೂ ನೀವು ಉಗ್ರಹೋರಾಟಕ್ಕೆ ಮುಂದಾದರೆ ನನ್ನ ಕಡೆಯಿಂದ ಹೋರಾಡಲು ’ಅದಿತಿ’ ರೆಡಿ ಇದ್ದಾಳೆ.. ಹುಶಾರ್‍!!

@ ಶ್ರೀನಿಧಿ,

:) :)

@ ಮನಸು,

ನಿಜ... ಎಲ್ಲವುದಕ್ಕೂ ಕಾಲವೇ ಉತ್ತರ. ಆದರೆ ಆ ಕಾಲವನ್ನು ತಡೆಯೋರು ಯಾರೂ ಇಲ್ಲ ಎನ್ನುವ ಸತ್ಯ ಗೊತ್ತಿಲ್ಲದವರು ಮಾತ್ರ ಈ ರೀತಿ ಪರದಾಡುತ್ತಾರೆ. ಜನ ಮರುಳೋ ಜಾತ್ರೆ ಮರುಳೋ ಎನ್ನಬೇಕಷ್ಟೇ! :)

@ಪರಾಂಜಪೆ ಅವರೆ,

ಘಟನೆ ಘಟಿಸಿದ ಮೇಲೆ ನಾವು ಹೇಳಿದ್ದು ಇದೇ ರೀತಿಯದ್ದಾಗಿತ್ತು. ಇದೇ ಸ್ವರೂಪದ್ದಾಗಿತ್ತು ಎಂದು ಮೇಲುಸಾಧಿಸಲು ಹೆಚ್ಚಿನವರು ಯತ್ನಿಸುತ್ತಾರೆ. ಆದರೆ ಯಾರೊಬ್ಬರು ಇದೇ ಎಂದು ಹೇಳಿ, ಆಮೇಲೆ ಅದೇ ಆಗಿದ್ದು ಮಾತ್ರ ನಾ ಕಾಣೆ! ಮನುಷ್ಯನ ಮನಸಿನೊಳಗಿನ ಪ್ರಳಯಕ್ಕಿಂತ ಈ ಬಾಹ್ಯ ಪ್ರಳಯವೇನೂ ಭಯಂಕರವಲ್ಲ ಬಿಡಿ..:)

ಕವನ ತುಂಬಾ ಚೆನ್ನಾಗಿದೆ... :)

@ಚಂದ್ರಶೇಖರ್ ಅವರೆ,

ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದ್ದೀರಿ. ಉತ್ತಮ ಸಂದೇಶವನ್ನು ನೀಡುತ್ತದೆ ಕಥೆ. ಮುಂದಾಗುವ ವಿಪತ್ತಿಗೆ ಹತಾಶರಾಗಿ ಇಂದು ನಿರ್ಜೀವಿಯಂತೆ ಬಾಳುವುದು ಎಷ್ಟೊಂದು ಕ್ಷುಲ್ಲಕ ವಿಚಾರವೆನ್ನುವುದನ್ನು ಪುಟ್ಟ ಕಥೆ ಹೇಳುತ್ತದೆ.

Guruprasad ಹೇಳಿದರು...

ತೇಜಸ್ವಿನಿ, ಒಳ್ಳೆಯ ಲೇಖನ ಬರಹ...
ನಮ್ಮ ಜನಗಳೇ ಹೀಗೆ..ಆಗದೆ ಇರುವುದಕ್ಕೆ ತಲೆಕೆದಿಸಿಕೊಳ್ತಾರೆ.... ನನಗು ಇದರ ಬಗ್ಗೆ ಕೆಲವು ಮೇಲ್ ಬಂದಿತ್ತು... ಇದು ಒಂದು ಥರ ಹೈಪ್,,,ಒಟ್ಟಿನಲ್ಲಿ ಕೊನೆ ಅಂತ ಇರುತ್ತೆ.. ಆದರೆ ಇಷ್ಟು ಬೇಗ,, ದಿಡೀರ್ ಅಂತ ಬರೋಲ್ಲ...
ನೋಡೋಣ,, ಏನಾಗುತ್ತೋ ಅಂತ,, ಆದರೆ ಅಲ್ಲಿವರೆವಿಗು,,, ಆರಾಮವಾಗಿ ಜೀವಿಸೋಣ....
Guru

ಮುತ್ತುಮಣಿ ಹೇಳಿದರು...

ಶೀರ್ಷಿಕೆ ಬಹಳ ಅರ್ಥವತ್ತಾಗಿದೆ, ಹಾಗೆಯೇ ಲೇಖನವೂ ಉತ್ತಮ ವಿಚಾರಗಳಿಂದ ಕೂಡಿದೆ... ನಿಮ್ಮ ಒಳಗೊಂದು ಕಿರುನೋಟದ ಮುಂದಿನ ಲೇಖನಕ್ಕಾಗಿ ಕಾಯುತ್ತಿದ್ದೇನೆ.

ಬಿಸಿಲ ಹನಿ ಹೇಳಿದರು...

ತೇಜಸ್ವಿನಿಯವರೆ,
ಈ ಪ್ರಳಯ ಗಿಳಯ ಎಲ್ಲಾ ಸುಳ್ಳು. ಈ ಸುದ್ಧಿಯನ್ನು ನಾನು ಚಿಕ್ಕಂದಿನಿಂದಲೂ ಕೇಳುತ್ತಿದ್ದೇನೆ. ಆದರೆ ಇನ್ನ್ನೂ ಆಗಿಲ್ಲ. ಈಗ ಆಗುತ್ತೆ ಆಗ ಆಗುತ್ತೆ ಎಂದು ಹೇಳುವ ತಲೆಹಿಡುಕುರು ಮಾತ್ರ ಪ್ರಳಯವಾಗಲೇ ಇಲ್ಲ. ಈ ಭೂಮಿ ಮೇಲೆ ಹುಟ್ಟಿದ ಎಲ್ಲ ಜೀವಿಗಳು ಸಾಯುವಂತೆ ಭೂಮಿಯು ಕೂಡ ಒಂದು ದಿನ ಸಾಯುತ್ತದೆ. ಆದರೆ ಒಂದೇ ಸಾರಿ ಅಲ್ಲ. ಹಂತ ಹಂತವಾಗಿ ಸಾಯುತ್ತದೆ. ಈ ಸತ್ಯವನ್ನು ಅರಿತರೆ ಜನ ನೆಮ್ಮದಿಯಾಗಿ ಬದುಕಬಹುದು. ನಿಮ್ಮ ತರ್ಕಬದ್ಧವಾದ ವಿಶ್ಲೇಷಣೆ ಹಿಡಿಸಿತು. ಇದನ್ನು ಓದಿಯಾದರೂ ಜನರ ಭಯ ದೂರವಾಗಲಿ.

Sushrutha Dodderi ಹೇಳಿದರು...

ಗುರ್ರ್‌ರ್‌ರ್.. :x

ಮೃತ್ಯುಂಜಯ ಹೊಸಮನೆ ಹೇಳಿದರು...

ಪ್ರಳಯ ಆಗಲ್ಲ ಅಂತ ನೀವೆಲ್ಲ ಭರವಸೆ ಕೊಟ್ಟಿದ್ದೀರಿ.ನೆಮ್ಮದಿಯಾಯಿತು. ಅಕಸ್ಮಾತ್ ಪ್ರಳಯವಾಗಿ ಎಲ್ಲ ನಾಶವಾದರೆ ನಾನು ನಿಮ್ಮನ್ನೆಲ್ಲ ಸುಮ್ಮನೆ ಬಿಡುವುದಿಲ್ಲ.ಎಚ್ಚರಿಕೆ!

ರಾಘು ತೆಳಗಡಿ ಹೇಳಿದರು...

ತೇಜಕ್ಕ, ನಿನ್ನ "ಪ್ರಳಯ" ಕುರಿತಾದ ಬರವಣಿಗೆ ಓದಿದಾ ಗಳಿಗೆಲೇ ಅನ್ಸತ್ತೆ ಇದು ಸುಳ್ಳು ಸುದ್ದಿ! ಮಣ್ಣಲ್ಲಿ ನೀರು ಇಂಗುತ್ತೆ ಅನ್ನೋ ಸತ್ಯ ಗೊತ್ತಿದ್ದೂ ಸಾಲು ಸಾಲಾಗಿ ನಿಂತು "ಗಣೇಶ" ಹಾಲು ಕುಡಿದ ಅನ್ನೋ ವಿಚಿತ್ರ ಸುದ್ದಿಗೆ ದುಂಬಾಲು ಬಿದ್ದು ನಮ್ಮ TV ಮಾಧ್ಯಮದವರು ಸುದ್ದಿ ಮಾಡಿದ್ದೆ ಮಾಡಿದ್ದು, ಹಾಗಿರುವಾಗ ಇನ್ನೇನು ಎಲ್ಲವು ನಾಶ ಅನ್ನೋ ಇನ್ನು ೨ ವರ್ಷದಲ್ಲಿ ಅಂದಾಗ! ಹೇಯ್ ತೇಜಕ್ಕ ನನ್ನ ಆಫೀಸ್ ನಲ್ಲೂ ಇ ಬಗೆಯ ವಿಷದಲ್ಲಿ ಅನೇಕರು ಅನೇಕ ಬಗೆ ಅಭಿಪ್ರಾಯ ಹೊಂದಿದ್ದಾರೆ. "ಪ್ರಳಯ" ಅನ್ನೋದು ಒಂದೇ ಬಾರಿ ಆಗೋದಲ್ಲ, ೨೦೧೨ ಡಿಸೆಂಬರ್, ಭೂಮಿ ಸಾಗರದಡಿಯಲ್ಲಿ ಮುಳುಗಿ ಎಲ್ಲದಕ್ಕೂ ಕೊನೆ ಅನ್ನೋ ಮುನ್ಸೂಚನೆ ಕಳೆದ ತಿಂಗಳು ಉತ್ತರ ಕರ್ನಾಟಕದಲ್ಲಿ ಪ್ರಕೃತಿ ತೋರಿದೆ ಅಂತಾರೆ. ಪ್ರಕೃತಿ ಮುನಿದರೆ ದೇವರು ಸಹ ಮೌನಿಯಾಗಿರ್ತನೆ ಅನ್ನೋದು ಮೊನ್ನೆ ಮಂತ್ರಾಲಯ ಜಲಾವೃತ ಅದಾಗಲೇ ಎಲ್ಲರಿಗು ತಿಲದಿದೆ ಅನ್ನೋದು ಇನ್ಕೆಲವರ ವಾದ! ಅದಕ್ಕೆ ಯಾವದು ನಿಜ, ಯಾವದು ಸುಳ್ಳು ಅನ್ನೋದು ಕಷ್ಟ. ಆದ್ರೆ "ಮಾಯನ್ ಕ್ಯಾಲೆಂಡರ್"ನಲ್ಲಿ ಬರದದ್ದೆಲ್ಲ ನಡದೇ ಇದೆ ಹಾಗೆ ನಡೆಯೋದು ಸತ್ಯ ಅನ್ನೋದು ಇನ್ನು ಹಲವರ ಅಂಬೋಣ!

ತೇಜಕ್ಕ, ನನಗೂ ಕೆಲ ಸಾರಿ ಅನ್ಸತ್ತೆ, ಬೆಳಿಗ್ಗೆ ಕಣ್ಣು ಬಿಡುವಸ್ಟರಲ್ಲಿ "ಪ್ರಳಯ" ಅನ್ನೋ ಮಾಯೆ ತನ್ನ ಅಡಿಯಲ್ಲಿ ಎಲ್ಲವನ್ನೂ ಹುದುಗಿಸಿ "ಹೊಸದು" ಅನ್ನೋದನ್ನ ಶ್ರುಷ್ಟಿಸಿ ಈಗಿರುವ "ಗಲೀಜು" ಅನ್ನೋದೆಲ್ಲ ತೊಳಿಯೋಡು ಆದ್ರೆ ಈ ಕಲಿ ಕಾಲದ ಪಾಪ ಹೋಗುತ್ತೇನೋ ಅನ್ಸತ್ತೆ. ಎಲ್ಲ ಕಡೆ ಕೆಟ್ಟ (ಆಫೀಸ್) ರಾಜಕೀಯದ ಛಾಯೆ, ಅನ್ಯಾಯ, ಥೂ ಸಾಕಪ್ಪಾ ಈ ಬದುಕು ಅನ್ಸತ್ತೆ ಎಷ್ಟೋ ಸಾರಿ.

ಈಗ ಅಪ್ಪಿ-ತಪ್ಪಿ ಪ್ರಳಯ ಅಂತ ಆದ್ರೆ ಅದು ಎಲ್ಲರಿಗೂ ಅನ್ನೋ ಸತ್ಯ ಗೊತ್ತಿದ್ದೂ ಎಷ್ಟೋ ಜನ ಜ್ಯೋತಿಷ್ಯ ಗಳ ಬೆನ್ನು ಹತ್ತಿ ಹವನದಲ್ಲಿ ತಮ್ಮ ಧನದ ಹೋಮ ಮಾಡಿಸುವ ಪ್ರಯತ್ನ ಮಾಡ್ತಾರೆ (ವಿಶ್ವ ಕಲ್ಯದ ನೆಪ ಬೇರೆ!) ಅನ್ನೋದು ಇನ್ನು ಕೆಲವರ ಅನಿಸಿಕೆ, ಯಾರದೋ ದುಡ್ಡು ........... ಜಾತ್ರೆ ಅಂತ ಅವರ ಬಿಸಿನೆಸ್ ಈಗಿರೋ recession ನಲ್ಲಿ ಒಳ್ಳೆ ಲಾಭ ತರುತ್ತೆ ಬಿಡಿ :)

ತೇಜಕ್ಕ ನಿನ್ನ ಬರವಣಿಗೆ ಶೈಲಿ ತುಂಬಾ ಚೆನ್ನಾಗಿದ್ದು, ವಿಷಯ ಸಂಗ್ರಹಣೆ ಹಾಗೂ ನಿನ್ನ ಗುರುಗಳಿಗೂ ಬೆನ್ನು ಹತ್ತಿ ಅದೆಸ್ಟೋ ವಿಷಯಗಳನ್ನು ಎಲ್ಲರಿಗೂ ತಿಳಿಸುವ ಒಂದು ಒಳ್ಳೆ ಪ್ರಯತ್ನ ಮಾಡಿದ್ದಿಯ. ಆಗದ ಪ್ರಳಯಕ್ಕೆ ನೀನು ಖಂಡಿತ ೨೦೧೨ ಡಿಸೆಂಬರ್ ೨೧ ರ ನಡು ರಾತ್ರಿಲಿ "ಮೂರ್ಖರ ಪ್ರಳಯ ಪ್ರತಾಪ್" ಅನ್ನೋ ಬರಹ ಬರಿ ಎಂದು, ನಿನ್ನೀ "ಮಾನಸ"ದ(ಳ) ಮೂಲಕ ಬ್ಲಾಗ್ ಬಳಗಕ್ಕೂ ಹಾಗೂ ನಿಜ ಕನ್ನಡಿಗರೆಲ್ಲರಿಗೂ "ಕರ್ನಾಟಕ ರಾಜ್ಯೋತ್ಸವದ" ಹಾರ್ದಿಕ ಶುಭಾಶಯಗಳನ್ನ ಹೇಳುವ ನಿಮ್ಮಿ - ರಾಘು.

Manju Bhat ಹೇಳಿದರು...

ಹಾಂ, ನೆನಪಾಯ್ತು, ಕೆಲವು ವರ್ಷಗಳ ಹಿಂದೆ ೧ ಪತ್ರಿಕೆ ಪ್ರಳಯವಗೊತ್ತೆ ಅಂತ ಪ್ರಕಟಿಸಿ ಬಾರಿ ಪ್ರಚಾರ ಗಿಟ್ಟಿಸಿತ್ತು, ಅದನ್ನ ನೋಡಿ ಮತ್ತೊಂದು ಪತ್ರಿಕೆಯವರು ಪ್ರಳಯವಾಗೋದಿಲ್ಲ ಅಂತ ಪ್ರಕಟಿಸಿ ಇಂತದ್ದೆ ಪ್ರಚಾರ ಗಿಟ್ಟಿಸಲು ಪ್ರಯತ್ನಿಸಿದ್ದರು.
ಇವೆಲ್ಲ ಮಾದ್ಯಮಗಳ ಪ್ರಚಾರ ಗಿಟ್ಟಿಸುವ ತಂತ್ರ ಅನ್ನಿಸುತ್ತದೆ. ಅದೇನೇ ಇರಲಿ ನೀವು ಲೇಖನವನ್ನ ತುಂಬಾ ಚೆನ್ನಾಗಿ ಬರೆದಿದ್ದೀರಿ...

ದರ್ಶನ ಹೇಳಿದರು...

ಪ್ರಳಯ ಆದರೂ ಒಮ್ಮೆಗೆ ಮಾತ್ರ ಆಗಬಹುದು ,ಆದರೆ ಪ್ರಳಯದ ಊಹಾಪೂಹಗಳು ಬರುತ್ತಲೇ ಇರುತ್ತವೆ

ಪ್ರಳಯ ಪ್ರಪಂಚವನ್ನು ನಾಶ ಮಾಡಬಹುದೋ ಇಲ್ಲವೋ ಗೊತ್ತಿಲ್ಲ ಆದರೆ ಊಹಾಪೂಹಗಳು ಮಾನವನ ಮನಸ್ಸನ್ನು ನಾಶ ಮಾಡುತ್ತಲೇ ಇರುತ್ತವೆ .



ನನ್ನ ಬ್ಲಾಗ್ ನಲ್ಲಿ(pratiphalana.blogspot.com)ಹೆಚ್ಚಿನ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ

ಇಂತಿ-ಪ್ರತಿಫಲನ

ವಿಜ್ಞಾನ ಲೋಕಕ್ಕೆ ಹಳೇ ಪರಿಚಯ-ಬ್ಲಾಗ್ ಲೋಕಕ್ಕೆ ಹೊಸ ಪರಿಚಯ



ಖಂಡಿತಾ ಪುಟ್ಟ-ಮಕ್ಕಳ ಮನಸ್ಸಿಗೆ ಮಾತ್ರ ಇಂತಹ ವಿಷಯಗಳ ಬಗ್ಗೆ ಪರಿಕಲ್ಪನೆಗಳನ್ನು ತುಂಬಬಾರದು

ದರ್ಶನ ಹೇಳಿದರು...

ಲೇಖನ ಸಮಯೋಚಿತವಾಗಿದೆ ,

ಸಾವಿಗಂಜಿ ತಮ್ಮ ಇಂದಿನ ಬಾಳ್ವೆಯನ್ನು ನಾಶ ಮಾಡಿಕೊಳ್ಳುವವರಿಗೆ ಬುದ್ದಿ ಹೇಳಿದ್ದಕ್ಕೆ ಧನ್ಯವಾದಗಳು



ಪ್ರಳಯ ಆದರೂ ಒಮ್ಮೆಗೆ ಮಾತ್ರ ಆಗಬಹುದು ,ಆದರೆ ಪ್ರಳಯದ ಊಹಾಪೂಹಗಳು ಬರುತ್ತಲೇ ಇರುತ್ತವೆ

ಪ್ರಳಯ ಪ್ರಪಂಚವನ್ನು ನಾಶ ಮಾಡಬಹುದೋ ಇಲ್ಲವೋ ಗೊತ್ತಿಲ್ಲ ಆದರೆ ಊಹಾಪೂಹಗಳು ಮಾನವನ ಮನಸ್ಸನ್ನು ನಾಶ ಮಾಡುತ್ತಲೇ ಇರುತ್ತವೆ .



ನನ್ನ ಬ್ಲಾಗ್ ನಲ್ಲಿ(pratiphalana.blogspot.com)ಹೆಚ್ಚಿನ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ



ಖಂಡಿತಾ ಪುಟ್ಟ-ಮಕ್ಕಳ ಮನಸ್ಸಿಗೆ ಮಾತ್ರ ಇಂತಹ ವಿಷಯಗಳ ಬಗ್ಗೆ ಪರಿಕಲ್ಪನೆಗಳನ್ನು ತುಂಬಬಾರದು



ದಿನನಿತ್ಯದ ಆಗುಹೋಗುಗಳನ್ನು ಸ್ವಂತ ವಿಚಾರಧಾರೆಗಳಲ್ಲಿ ವಿಮರ್ಶಿಸುವ ತಮ್ಮ ಆಶಯ ಅರ್ಥಪೂರ್ಣ



ಇಂತಿ-ಪ್ರತಿಫಲನ

ವಿಜ್ಞಾನ ಲೋಕಕ್ಕೆ ಹಳೇ ಪರಿಚಯ-ಬ್ಲಾಗ್ ಲೋಕಕ್ಕೆ ಹೊಸ ಪರಿಚಯ

Pramod P T ಹೇಳಿದರು...

ಟಿವಿ9 ಆಫಿಸ್ಗೆನೂ ಆಗಲ್ವಂತಾ!? :)