ನನ್ನ ದೇಹದ ಬೂದಿ
ಕವಿ : "ಚುಟುಕುಗಳ ಬ್ರಹ್ಮ" ದಿನಕರ ದೇಸಾಯಿ
ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
ತಾವರೆಯು ದಿನದಿನವು ಅರಳುವಲ್ಲಿ ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
ನಿಜ ಸೇವೆಗೈಯಲಿಕೆ ಬರಲಿ ಮುಂದು
@@@@@@@@@@@@@@@@@@@@
@@@@@@@@@@@@@@@@@@@@
ಈ ಕವನದ ಪಾಠ ನನಮಗೆ ಎಂಟನೆಯೋ ಇಲ್ಲಾ ಒಂಭತ್ತನೇಯೋ ತರಗತಿಯಲ್ಲಿದ್ದ ನೆನಪು. ಆ ದಿನಗಳಿಂದ ನನ್ನ ಅಚ್ಚಿಮೆಚ್ಚಿನ ಕವನಗಳ ಸಾಲಿನಲ್ಲಿ ಈ ಕವನವೂ ಸೇರ್ಪಡೆಗೊಂಡಿತ್ತು. "ಚುಟುಕುಗಳ ಬ್ರಹ್ಮ" ಎಂದೇ ಖ್ಯಾತನಾಮರಾದ ದಿನಕರ ದೇಸಾಯಿಯವರಿಂದ ರಚಿಸಲ್ಪಟ್ಟ ಈ ಕವನದೊಳಗಿನ ಭಾವಾರ್ಥ, ಸರಳತೆ, ಸಾರ್ಥಕತೆ ನನ್ನ ಮನಸೂರೆಗೊಂಡಿದ್ದವು. ಏಕೋ ಏನೋ ಇತ್ತೀಚಿಗೆ ಕೆಲವು ಸಮಯಗಳಿಂದ ಈ ಕವಿತೆ ತುಂಬಾ ನೆನಪಿಗೆ ಬರುತ್ತಿತ್ತು. ಆದರೆ ಮೊದಲ ಚರಣದ ಆನಂತರದ ಸಾಲುಗಳು ನೆನೆಪಿಗೇ ಬರುತ್ತಿರಲಿಲ್ಲ. ಸ್ನೇಹಕೂಟದ ಕೆಲವು ಸ್ನೇಹಿತರನ್ನು, ಆತ್ಮೀಯರನ್ನೆಲ್ಲಾ ಕೇಳಿದ್ದೆ. ಯಾರ ಬಳಿಯೂ ಈ ಹಾಡು ಇರಲಿಲ್ಲ. ಅಂತೂ ಇಂತೂ ಕೊನೆಗೆ ತ್ರಿವೇಣಿಯಕ್ಕನ ತುಳಸೀವನದಲ್ಲಿ ಈ ಕವಿತೆ ಅರಳಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು. ತುಳಸಿಯಮ್ಮನ ಕೇಳಿ ಈ ಕವನವನ್ನು ಪಡೆದುಕೊಂಡು ಮಾನಸದಲ್ಲಿ ಕಾಣಿಸಿರುವೆ. ತ್ರಿವೇಣಿಯಕ್ಕನಿಗೆ ತುಂಬಾ ಧನ್ಯವಾದಗಳು. ಮಾನಸದ ಓದುಗರಿಗೂ ಈ ಕವನದ ಆಶಯ, ಭಾವಾರ್ಥ ತುಂಬಾ ಇಷ್ಟವಾಗುವುದೆಂದು ಭಾವಿಸುವೆ.
ನನ್ನ ತಾಯಿ ಈ ಕವನವನ್ನು ತುಂಬಾ ಸುಶ್ರಾವ್ಯವಾಗಿ ಹಾಡುತ್ತಾರೆ. ಆದರೆ ಅವರಿಗೂ ಮೊದಲ ಚರಣವಷ್ಟೇ ನೆನೆಪಿತ್ತು. ಈಗ ನಾನೂ ನನ್ನ ತಾಯಿಯೂ ಒಟ್ಟಿಗೇ ಈ ಕವಿತೆಯನ್ನು ಗುನುಗುತ್ತಿರುತ್ತೇವೆ :)
ದಿನಕರ ದೇಸಾಯಿಯವರ ಕವನದ ಸಾಲೆರಡನ್ನು ಇತ್ತೀಚಿನ ಕನ್ನಡ ದೈನಿಕವೊಂದರಲ್ಲಿ ಓದಿದೆ. ತುಂಬಾ ತುಂಬಾ ಮೆಚ್ಚುಗೆಯಾಯಿತು. ಅವು ಇಂತಿವೆ :
"ಕರಿಯ ಕಲ್ಲುಗಳು ಕೂಡ ಕೂಡಿದವು ಗುಡಿಯ ಕಳಸಕಾಗಿ!
ನರನ ಹೃದಯಗಳು ಒಂದುಗೂಡವೇ ಮಾತೃಭೂಮಿಗಾಗಿ?"
ಮೇಲಿನ ಸಾಲುಗಳ ಪೂರ್ಣಪ್ರಮಾಣದ ಕವನ ಅಥವಾ ಚುಟುಕು ಯಾರಲ್ಲಾದರೂ ಇದ್ದರೆ ದಯಮಾಡಿ ಕಳುಹಿಸಬೇಕಾಗಿ ವಿನಂತಿ.
-ತೇಜಸ್ವಿನಿ.
33 ಕಾಮೆಂಟ್ಗಳು:
ತೇಜೂ ,
ನಾನೂ ಸಹ ದಿನಕರ ದೇಸಾಯಿಯವರ ಅಭಿಮಾನಿ. ಅವರ ಚುಟುಕಗಳು ಯಾವ ಕಾಲಕ್ಕೂ ಅನ್ವಯವಾಗುತ್ತವೆ. ಸರಳ ಹಾಗೂ ಅರ್ಥಬದ್ಧ !
ಅವರ ಈ ಕವಿತೆಯನ್ನು ಹಂಚಿಕೊಂಡಿದ್ದಕ್ಕೆ ನಿಂಗೆ ತುಂಬಾ ತುಂಬಾ ಥ್ಯಾಂಕ್ಸ್ !
ತೇಜಸ್ವಿನಿ,
ದಿನಕರ ದೇಸಾಯಿಯವರ ಈ ಕವನವನ್ನು ಎಷ್ಟೋ ವರ್ಷಗಳ ಬಳಿಕ ಮತ್ತೊಮ್ಮೆ ಓದಲು ಸಿಕ್ಕಂತಾಯಿತು. ನಿನಗೆ ಅನೇಕ ಧನ್ಯವಾದಗಳು.
ತೇಜು ಅಕ್ಕ,
ತುಂಬಾ ಚೆನ್ನಾಗಿರುವ ಕವನ (ಚುಟುಕ) ಹಾಕಿದ್ದಕ್ಕೆ ವಂದನಗೆಳು.
ದಿನಕರ ದೇಸಾಯಿಯವರ ಭಾವಚಿತ್ರ ಕೂಡ ನಾನೋಡಿರಲಿಲ್ಲ.
ತೇಜು,
ಕವಿತೆ ಅರ್ಥಪೂರ್ಣವಾಗಿದೆ. ಇದರ ನಿಜವಾದ ತಾತ್ವಿಕ ನೆಲೆ (ಸೇವೆ) ಎಲ್ಲರಿಗೂ ನಿಜವಾಗಿಯೂ ಇಂಗಿತವಾದರೆ ಕವಿತೆ ಸಾರ್ಥಕ, ಅಲ್ಲವೆ?
ತೇಜಸ್ವಿನಿಯವರೆ...
ನನ್ನ ಚಿಕ್ಕಮ್ಮ ಈಹಾಡನ್ನು ಬಹಳ ಸೊಗಸಾಗಿ ಹಾಡುತ್ತಾರೆ...
ಸಿಂಗಾಪುರದಲ್ಲಿರುವ ನನ್ನ ತಮ್ಮ ಕೂಡ...
ಒಳ್ಳೆಯ ಹಾಡನ್ನೂ, ಜನರಿಗೆ ಅಷ್ಟಾಗಿ ಪರಿಚಯವಿಲ್ಲದ..
ಒಬ್ಬ ಮಹಾನ್ ಕವಿಯ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು...
ಇದ್ ಒಂದು ಹಿಂದಿ ಹಾಡಿನ ಸ್ಪೂರ್ತಿಯೆಂದು ಕೇಳಿದ್ದೆ..
ಇದು ನಿಜವೇ..?
ಯಾರಾದರೂ ಬಲ್ಲವರು ತಿಳಿಸಬೇಕು...
ಅಭಿನಂದನೆಗಳು...
ಪ್ರಣಾಮಾಃ,
ನಾನು ದಿನಕರ ದೇಸಾಯಿವರ ಊರಿನವ, ನಾನು ಹೈಸ್ಕೂಲ್ ನಲ್ಲಿ ಇಪ್ಪಾಗ ಈ ಪದ್ಯ ಓದಿದ್ದೆ ಆಗಿಂದ ಈಗಿನ ತನಕ ಚುಟುಕು ಬ್ರಹ್ಮನ ಈ ಪದ್ಯ ಬಹಳ ಇಷ್ಟ ಇತ್ತೀಚೆಗೆ ಅವರ ಚುಟುಗಳ ಬೃಹತ್ ಗ್ರಂಥವನ್ನು ಕೊಂಡು ತಂದೆ.
ಕೂಸೆ ನಿನ್ನ ಫೋಟೋ ಹಾಕು, ಮಾತಿನೊಟ್ಟಿಗೆ ಮೊಗವನ್ನೂ ಮೆಚ್ಚೋಣ.
ಚಿತ್ರಾ,
ಹೌದು. ಅವರ ಎಲ್ಲಾ ಚುಟುಕುಗಳೂ (ಈವರೆಗೆ ನಾ ಓದಿದ) ತುಂಬಾ ಸರ್ಅಳ ಹಾಗೂ ಆಳವಾದ ಅರ್ಥವನ್ನೊಳಗೊಂಡಿರುತ್ತವೆ. ನಿಂಗೂ ತುಂಬಾ ತುಂಬಾ ಧನ್ಯವಾದಗಳು.
ಕಾಕಾ,
ನನಗೂ ಮೊದಲ ಬಾರಿ ಈ ಕವನವನ್ನು ತುಳಿಸೀವನದಲ್ಲಿ ಕಂಡು ಹೀಗೇ ಸಂತೋಷವಾಗಿತ್ತು. ಧನ್ಯವಾದಗಳು.
@ಶಂಕರ್,
ನಾನೂ ನೋಡೀದ್ದು Google Page ನಲ್ಲೇ. ಅವರ ಭಾವಚಿತ್ರವನ್ನು ಹುಡುಕಿ ಹಾಕಿದ್ದೇನೆ. ಧನ್ಯವಾದಗಳು.
@ಅಕ್ಕಾ,
ಹೌದು, ಒಂದು ಕವನದ ತಾತ್ವಿಕ ನೆಲೆ, ಭಾವಾರ್ಥ, ಆಶಯ ಸರಿಯಾಗಿ ಅರ್ಥವಾದರೆ ಸಾಕು ಆ ಕವಿತೆಗೆ ಹಾಗೂ ಅದನ್ನು ರಚಿಸಿದ ಆ ಮಹಾನ್ ಕವಿಗೆ ಗೌರವ ಸಲ್ಲಿಸಿದಂತೇ ಆಗುತ್ತದೆ. ತುಂಬಾ ಧನ್ಯವಾದಗಳು.
@ಪ್ರಕಾಶಣ್ಣ,
ನಂಗೂ ಗೊತ್ತಿಲ್ಲ. ಹಿಂದಿ ಕವಿತೆಯೊಂದರ ಪ್ರೇರಣೆ ಎಂಬುದನ್ನೇ ಮೊದಲಬಾರಿ ನಿಮ್ಮಿಂದ ಕೇಳುತ್ತಿದ್ದೇನೆ! ಗೊತ್ತಿದ್ದವರು ಹಂಚಿಕೊಂಡರೆ ಬಹಳ ಚೆನ್ನ. ಧನ್ಯವಾದಗಳು.
@ಸಿರಿರಮಣ ಅವರೆ,
ನಮಸ್ಕಾರ.
ಮಾನಸಕ್ಕೆ ಸ್ವಾಗತ. "ಕೂಸೆ" ಎಂಬ ಸಂಬೋಧನೆ ಕೇಳಿ ನಗು ಬಂತು. ಕಾರಣ ನನಗೆ ಒಂದೂವರೆ ವರುಷದ ಪುಟ್ಟ ಕೂಸಿದ್ದಾಳೆ. ..:) ನಿಮ್ಮ ಕಿರು ಪರಿಚಯ ಹಾಗೂ ಪ್ರತಿಕ್ರಿಯೆಯನ್ನು ನೋಡಿ ಬಲು ಸಂತೋಷವಾಯಿತು. ಅದಕ್ಕಿಂತಲೂ ನೀವು ಸಂಸ್ಕೃತ ಪ್ರಾಚಾರ್ಯರು ಎಂದು ತಿಳಿದು ಮತ್ತೂ ಸಂತೋಷವಾಯಿತು. ತುಂಬಾ ಧನ್ಯವಾದಗಳು. ಆಗಾಗ ಬರುತ್ತಿರಿ. ತಪ್ಪಿದ್ದಲ್ಲಿ ತಿದ್ದುತ್ತಿರಿ.
ತೇಜಸ್ವಿನಿಯವರೇ,
ತುಂಬಾ ಅರ್ಥಪೂರ್ಣವಾದ ಕವನವಿದು.ಕವಿಮಹಾಶಯರು ಬಹಳ ಸರಳವಾದ,ಸುಲಲಿತವಾದ ಪದಗಳನ್ನು ಆರಿಸಿಕೊಂಡು ಬರೆದ್ದಿದ್ದಾರೆ . ಅವರಿಗೆ ನನ್ನ ಪ್ರಣಾಮಗಳು. ಈ ಕವನವನ್ನೊದಲು ಅವಕಾಶ ಮಾಡಿಕೊಟ್ಟ ತಮಗೆ ವಂದನೆಗಳು..ನಿಮ್ಮ ಸುನಿಲ್
ತೇಜಸ್ವಿಯವರೇ...
ದಿನಕರ ದೇಸಾಯಿಯವರ ಕವನಗಳು ಎಲ್ಲಾ ಸಾಮಾನ್ಯರಿಗೂ ಅರ್ಥವಾಗುವಾಗೆ ಚಿತ್ರಿಸುತ್ತಾರೆ ಇದು ನಾನಗೋ ಇಷ್ಟವಾದ ಹಾಡು ಯಾವಾಗಲು ಗುನುಗೋ ಹಾಡು... ಅದರ ಭಾವರ್ಥ ಮನ ಸೂರೆಗೊಳ್ಳುವಂತಹದು.......
ತೇಜಕ್ಕ..ನಂಗೂ ದಿನಕರ ದೇಸಾಯಿ ಅವರ ಚುಟುಕುಗಳು ತುಂಬಾನೇ ಇಷ್ಟ.
-ಚಿತ್ರಾ
ಪ್ರಾಸ,ಭಾವ,ಅರ್ಥ ಎಲ್ಲವೂ ದಿನಕರ ದೇಸಾಯಿ ಚುಟುಕಗಳಲ್ಲಿ ಮೇಳೈಸಿರುತ್ತವೆ.
ಜನಮಾನಸದಲ್ಲಿ ಮಾಸಿಹೋಗುತ್ತಿದ್ದ ದೇಸಾಯಿಯವರ ನೆನಪಿಗೆ,ಈ ಚುಟುಕಿನ ಗುಟುಕು ಅಮೃತದಂತಿದೆ.
thumba arthapoornavaagiththu thejakka...
Eega idu nanna favourite kooda:)
ತೇಜಸ್ವಿನಿಯವರೆ....
ನಿನ್ನೆ ಸಿಂಗಾಪುರದಲ್ಲಿರುವ ನನ್ನ ತಮ್ಮನಿಗೆ ಮಾತಾಡಿದಾಗ ಈ ಕವನದ ಬಗೆಗಿನ ಸ್ವಾರಸ್ಯಕರ ಸಂಗತಿ ಗೊತ್ತಾಯಿತು...
"ನೆಹರು ತಮ್ಮ ಕೊನೆಯ ಆಸೆಯನ್ನು ಒಂದುಕಡೆ ಬರೆದಿದ್ದರಂತೆ...
ದಿನಕರ ದೇಸಾಯಿಯವರು "ಅದರ " ಸ್ಪೂರ್ತಿಯಲ್ಲಿ ಈ ಕವನ ಬರೆದರಂತೆ...
ನೆಹರುರವರ ಆಸೆ ಈಡೇರಿತೊ ಇಲ್ಲವೊ ಗೊತ್ತಾಗಲಿಲ್ಲ...
ಏನೆ ಇದ್ದರೂ ದಿನಕರ ದೇಸಾಯಿಯವರ ಈ ಕವನ ಮಾತ್ರ "ಮಹಾನ್" ಆಗಿದೆ..
ಓದುಗರ, ಕೇಳುಗರ ಮನಸೂರೆಗೊಳ್ಳುತ್ತದೆ...
ತೇಜಸ್ವಿನಿ ಮೇಡಮ್,
"ಕರಿಯ ಕಲ್ಲುಗಳು ಕೂಡ ಕೂಡಿದವು ಗುಡಿಯ ಕಳಸಕಾಗಿ!
ನರನ ಹೃದಯಗಳು ಒಂದುಗೂಡವೇ ಮಾತೃಭೂಮಿಗಾಗಿ?"
ಎರಡೆ ಸಾಲು ಇದ್ದರೂ .....ತುಂಬಾ ಅರ್ಥಗರ್ಭಿತವಾಗಿವೆ....ದಿನಕರ ದೇಸಾಯಿ ಎಂದರೆ ನನಗೂ ಇಷ್ಟ......
@ಸುನಿಲ್, ಮನಸು, ಚಿತ್ರಾ, ರಂಜಿತ್, ಸುಧೇಶ್, ಶಿವು ಹಾಗೂ ಪ್ರಕಾಶಣ್ಣ,
ಪ್ರತಿಕ್ರಿಯಿಸಿ ಕವನವನ್ನು ಮೆಚ್ಚಿಕೊಂಡು, ಇನ್ನೂ ಇಂತಹ ಅಪೂರ್ವ ಕವಿತೆಗಳನ್ನು ಮಾನಸದಲ್ಲಿ ಕಣಿಸಲು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ಕವಿತೆ ಎಂದರೆ ಹೀಗಿರೆಬೇಕು. ಸರಳವಾಗಿದ್ದರೂ ಅರ್ಥಗರ್ಭಿತವಾಗಿ ತನ್ನೊಳಗಿನ ಪ್ರತಿಯೊಂದು ಪದವನ್ನೂ ಸಾರ್ಥಕಗೊಳಿಸುವಂತಿರಬೇಕು.
Tajasviniji,
Tumba arthapoorna padya haagoo adaredigina tamma nota eradoo kooda :)
Abhinandanegalu.
Sunil.
ತು೦ಬಾ ಚೆನ್ನಾಗಿದ್ದ ನಮ್ಮ ಬಾಲ್ಯದ ಪ್ರಾಥಮಿಕ ಪಠ್ಯಪುಸ್ತಕದ ಹಾಡು ನೆನಪಿಸಿದ್ದಿರಿ. ತಮಗೆ ಧನ್ಯವಾದಗಳು.
ಚೆಂದದ ಹಾಡು
ಬರಹ ಚೆನ್ನಾಗಿದೆ. ಮುಂದುವರಿಯಲಿ ಅಕ್ಷರ ಯಾತ್ರೆ.
ಚಂದದ ಸಾಲುಗಳು. ಒಳ್ಳೆಯ ಕವನವನ್ನು ಓದಲು ಅವಕಾಶ ಕಲ್ಪಿಸಿದ ನಿಮಗೂ ಮತ್ತು ತ್ರಿವೇಣಿಯವರಿಗೂ ನನ್ನ ವಂದನೆಗಳು.
ತೇಜಸ್ವಿನಿ ಮೇಡಮ್,
ನನ್ನ ಬ್ಲಾಗಿನಲ್ಲಿ ಪುಟ್ಟ ಪುಟ್ಟ ಸಂತೋಷಗಳು, ಮತ್ತು ಹೊಸ ಟೋಪಿಗಳು ಎರಡು ಲೇಖನಗಳಿಗೂ ನೀವಿನ್ನು ಬಂದಿಲ್ಲವಲ್ಲ....ಎಲ್ಲರೂ ಸಂತೋಷ ಅನುಭವಿಸಿ..ಟೋಪಿ ಹಾಕಿಕೊಳ್ಳುತ್ತಿದ್ದಾರೆ....ನೀವು ಬನ್ನಿ....
ಈ ಕವಿತೆ ಓದಿ ತುಂಬ ವರ್ಷಗಳೇ ಆಗಿದ್ದವು .. ಮತ್ತೆ ಓದಿಸಿದಕ್ಕೆ ಧನ್ಯವಾದಗಳು
Why this blog is not updating?
ಮೇಡಂ, ಚುಟುಕು ಬ್ರಹ್ಮನ ಫೋಟೋ ಮತ್ತು ಕವನ ಎರಡೂ ನೋಡಿ ತುಂಬಾ ಖುಷಿಯಾಯ್ತು.ದಿನಕರ ದೇಸಾಯಿಯವರ ಸಮಗ್ರ ಸಾಹಿತ್ಯದ ಪುಸ್ತಕ ಸಿಕ್ಕರೆ - ಹೆಸರು ವಿಳಾಸ ತಿಳಿಸಿ.
ನನ್ನ ಬ್ಲಾಗಿಗೆ ಬನ್ನಿ. ನಿಮ್ಮ ಅಭಿಪ್ರಾಯ ತಿಳಿಸಿ.
ಮೇಡಂ, ಚುಟುಕು ಬ್ರಹ್ಮನ ಫೋಟೋ ಮತ್ತು ಕವನ ಎರಡನ್ನೂ ನೋಡಿ ತುಂಬಾ ಖುಷಿಯಾಯ್ತು. ದಿನಕರ ದೇಸಾಯಿಯವರ ಸಮಗ್ರ ಸಾಹಿತ್ಯದ ಪುಸ್ತಕದ ಹೆಸರು ವಿಳಾಸ ತಿಳಿಸಿ.
ನನ್ನ ಬ್ಲಾಗಿಗೆ ಬನ್ನಿ.ನಿಮ್ಮ ಅಭಿಪ್ರಾಯ ತಿಳಿಸಿ.
its hardly one month the blog is updated madam.Bareyiri barita iri.
Desayi avaru uttara cannada dalli canara welfare trust katti halligara shikshanakkagi bahala dudididdare. Uttara kannada da janagala bagege avaru bareda ondu kavanada koneya eradu sallu galu heegive,
huli karadi hebbavu gala nadu naduve iddoo
ivaru maduvudilla yavoodoo saddu.
modala eradu saalu maretuhogide/
Naveen GH
Once Again This,
Thanks a lot :) ನಿಮ್ಮ ಹೆಸರನ್ನೂ ತಿಳಿಸಿದ್ದರೆ ತುಂಬಾ ಸಂತೋಷವಾಗುತಿತ್ತು...:) ನಾನೂ ಈ ಕವನವನ್ನು ಎಲ್ಲೋ ಒದಿದ ನೆನಪು... ಪೂರ್ಣ ಕವನ ನಿಮಗೆ ದೊರೆತಲ್ಲಿ ನನಗೂ ಕೊಡಬೇಕಾಗಿ ವಿನಂತಿ.
ಇದು ನನ್ನ ನೆಚ್ಚಿನ ಗೀತೆಗಳಲ್ಲೊಂದು...ಹಾಡಿಗಾಗಿ ಹುಡುಕುತ್ತಿದ್ದೇನೆ..
ಈ ಹಾಡಿನ ಡೌನ್ಲೋಡ್ ಲಿಂಕ್ ಇದ್ದರೆ ದಯವಿಟ್ಟು ಕಳುಹಿಸಿ
'ನನ್ನ ದೇಹದ ಬೂದಿ' ಹಾಡಿನ ಡೌನ್ಲೋಡ್ ಲಿಂಕ್ ಇದ್ದರೆ ದಯವಿಟ್ಟು ತಿಳಿಸಿ
hai dear nana hesaru chandrakala friend nanu ondu kannada da gandave illada shaleyali work madutidene nanage kannda sahityavendare tumba esta kannada vanu aradisuva managlu hecchagali
ತುಂಬಾ ಚೆನ್ನಾಗಿದೆ....ಇಷ್ಟವಾಯಿತು.
ಕಾಮೆಂಟ್ ಪೋಸ್ಟ್ ಮಾಡಿ