ಶುಕ್ರವಾರ, ಫೆಬ್ರವರಿ 20, 2009

ಕಲ್ಪನಾತೀತ


ಅರಿಯಲಾರೆನೇ ನಾ ನೀ ಮಹದಾಶೆಯ
ಪಡೆಯಲೆಂತು ಸಾಧ್ಯವಿದು?! ಬಹು ಅತಿಶಯ


ಸಾವಿರಾರು ವರುಷಗಳವರೆಗೂ,
ಕಡು ಬಿಸಿಲು, ಬಿರು ಮಳೆ, ಕೊರೆವ ಚಳಿಗೆ,
ಪ್ರವಾಹ, ಬಿರುಗಾಳಿಗಳಿಗಂಜದೇ, ಅಳುಕದೇ
ತಲೆಯೆತ್ತಿ ನಿಂತು ಬೀಗುತಿರುವ ಹೆಬ್ಬಂಡೆಗಳ
ಬಿಳಿ ಹತ್ತಿಯನ್ನಾಗಿಸಿ, ಹಾರಿಸಿ, ತೇಲಿಸಿಬಿಡುವಾಸೆ.

ಸಾವಿರಾರು ವರುಷಗಳವರೆಗೂ,
ಅಪಾರ ಖನಿಜಗಳನ್ನು ಒಡಲೊಳಗಿಟ್ಟುಕೊಂಡು,
ಸುಪ್ತವಾಗಿ, ಧಗಧಗಿಸುವ ಲಾವಾಗ್ನಿಯಜೊತೆಯಾಗಿ,
ಮಂದವಾಗಿ ಹರಿಯುತಿಹ ಜ್ವಾಲಾಮುಖಿಯನ್ನು
ನೀರ್ಗಲ್ಲಾಗಿಸಿ, ನೀರಾಗಿಸಿ, ಆವಿಯಾಗಿಸುವಾಸೆ.

ಸಾವಿರಾರು ವರುಷಗಳಿಂದಲೂ,
ಎಟುಕಿಯೂ ಎಟುಕದಂತಿದ್ದು, ಊಹಾತೀತಗಳ,
ವಿಸ್ಮಯ, ಅನೂಹ್ಯಲೋಕಗಳ ಬೀಡಾದ,
ಸೂರ್ಯ, ಚಂದ್ರ, ತಾರೆಯರ ಊರಾದ, ಮುಗಿಲನ್ನು
ಗಾಳಿಪಟವನ್ನಾಗಿಸಿ, ಸೂತ್ರಹಿಡಿದು, ತೇಲಿಬಿಡುವಾಸೆ.

ಸಾವಿರಾರು ವರುಷಗಳಿಂದಲೂ,
ತನ್ನೊಳಗೆ ತುಂಬಿರುವ ಅಪಾರ ಜಲನಿಧಿಗೆ,
ತಾನೇ ಸೊಕ್ಕಿ, ಮೈಯುಕ್ಕಿ ಕ್ಷಾರಗೊಂಡು, ಮೊರೆಯುವ
ಮುತ್ತು, ಹವಳಗಳ ರಾಣಿ ಶರಧಿಯನ್ನು
ಮುಷ್ಠಿಯೊಳಗಿಟ್ಟು, ಚಿಮ್ಮಿ, ಪನ್ನೀರಾಗಿಸುವಾಸೆ.

ಅರಿಯಲಾರೆನೇ ನಾ ನೀ ಮಹದಾಶೆಯ
ಪಡೆಯಲೆಂತು ಸಾಧ್ಯವಿದು?! ಬಹು ಅತಿಶಯ

23 ಕಾಮೆಂಟ್‌ಗಳು:

Veena DhanuGowda ಹೇಳಿದರು...

thumba chennagide :)
chennagide anuvadakinta, matte matte odidali olage indou artavidiyeno anisute....

Kallare ಹೇಳಿದರು...

ಮಾನಸದ ಮನಸೊಳಗಿನ ಯೋಚನೆ.... ಎರೆಡೆರಡು ಸಲ ಓದ್ಕೊಂಡೆ. :)

Ittigecement ಹೇಳಿದರು...

ತೇಜಸ್ವಿನಿಯವರೆ...

ಸೊಗಸಾದ ಕವನ..

ಭಾವಾರ್ಥ ತುಂಬಾ ಇಷ್ಟವಾಯಿತು..

ಅಭಿನಂದನೆಗಳು..

Lakshmi Shashidhar Chaitanya ಹೇಳಿದರು...

super ! class kavite ! tumbaa ishta aaytu !

ಚಂದ್ರಕಾಂತ ಎಸ್ ಹೇಳಿದರು...

ನಿಜವಾಗಿಯೂ ನಿಮ್ಮ ಕವಿತೆ ಓದಿ ದಿಗ್ಭ್ರಮೆಯಾಯಿತು

ಇಲ್ಲಿ ಬರುವ ನಾನು ಮಾನವ ಎಂದುಕೊಳ್ಳಬಹುದೇ ?

ಈ ಕವನ ಮನುಷ್ಯನ ದುರಾಸೆಯ ಪರಮಾವಧಿಯನ್ನು ಸೂಚಿಸುತ್ತಿದೆಯೇ ?

ಅಂತು ಸಂಕೀರ್ಣ ಭಾವಗಳನ್ನು ಹೊಂದಿರುವ ವಿಶೇಷ ಕವನ

ಭಾಷೆ ಬಹಳ ಇಷ್ಟವಾಯಿತು. ಭಾವಕ್ಕನುಗುಣವಾದ ರಭಸದ ತೀಕ್ಷ್ನ ಭಾಷೆ.

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಕವನದ ಭಾವಾರ್ಥ ತುಂಬಾ ಚೆನ್ನಾಗಿದೆ...

ಮತ್ತೆ ಮತ್ತೆ ಓದಿದಾಗ ಅನೇಕ ಅರ್ಥಗಳು ತೆರೆದುಕೊಳ್ಳುತ್ತವೆ..

ರಾಘು ತೆಳಗಡಿ ಹೇಳಿದರು...

Tejakka, matte matte odididaga poorna artha aagutte, hudugida halavu satyagalanna ellaru tiliyade halugeduvuttiruvadu nenedu besaravenisutte. chendada kavana.... barita iri.

sunaath ಹೇಳಿದರು...

ತೇಜಸ್ವಿನಿ,
"ದಿಲ್ ಹೈ ಛೋಟೀಸಿ ಛೋಟೀಸಿ ಆಶಾ" ಅಲ್ಲ ಇದು.
’ಭೂಮ’ದ ಸೆಳೆತಕ್ಕೆ ಒಳಗಾಗಿ ಭೂಮವೇ ಆಗಬಯಸುವ ಮನಸ್ಸಿನ ಆಕಾಂಕ್ಷೆ ಇದು.
ಚಿತ್ರ ಸಹ ಬಹಳ ಚಂದವಾಗಿದೆ.
ಕವನ ಹಾಗೂ ಚಿತ್ರಕ್ಕೆ ಅಭಿನಂದನೆಗಳು.
-ಕಾಕಾ

NiTiN Muttige ಹೇಳಿದರು...

:) helabekeddidannu heli bittiddaare!!

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ,
ತುಂಬ ಚಂದದ ಬರಹ, ಶಬ್ದಗಳ ಮೇಲೆ ಹಿಡಿತ ಉತ್ತಮವಾಗಿದೆ. ತುಂಬ ಇಷ್ಟವಾಯಿತು, ಹೀಗೆ ಬರೆಯುತ್ತಿರಿ.

ಗುರು

ಅಂತರ್ವಾಣಿ ಹೇಳಿದರು...

ತೇಜಕ್ಕ,
ನಿಜಕ್ಕೂ ಕಲ್ಪನಾತೀತವೇ

ಕೆ.ಎಸ್.ಎನ್ ಏನಾದರೂ ಆವರಿಸಿದ್ದರಾ?
"ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ..."

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಕವನ ಚೆನ್ನಾಗಿದೆ ಮೇಡಮ್. ಚಿತ್ರ ನೀವೇ ಬರೆದಿದ್ದಾ? ಪೂರಕವಾಗಿದೆ.

ತೇಜಸ್ವಿನಿ ಹೆಗಡೆ ಹೇಳಿದರು...

@ವೀಣಾ,

ಹೌದು ಕವನವೆಂದರೇ ಹಾಗೇ.. ಒಂದೇ ಶಬ್ದ ಹಲವು ಭಾವಗಳನ್ನು ಸ್ಫುರಿಸುತ್ತದೆ. ಈ ಕವನದ ಮೇಲ್ನೋಟದ ಆಶಯವನ್ನಷ್ಟೇ ಅಲ್ಲದೇ ಒಳಾರ್ಥವನ್ನೂ ಗ್ರಹಿಸಿದ್ದಕ್ಕೆ ತುಂಬಾ ಧನ್ಯವಾದಗಳು.

@ಮಹೇಶ್,

ಎರಡೆರಡುಸಲ ಓದಿದ್ದಕ್ಕೆ ತುಂಬಾ ಧನ್ಯವಾದಗಳು..:) ಕಲ್ಪನೆಯ ಹುಟ್ಟೇ ಮಾನಸದೊಳಗೆ ತಾನೆ?!

@ಪ್ರಕಾಶ್ ಅವರೆ,

ಪ್ರೋತ್ಸಾಹಕ್ಕೆ ನಿಮಗೂ ಧನ್ಯವಾದ.

@ಲಕ್ಷ್ಮೀ,

ಕವನ ಕ್ಲಾಸ್ ಆಗಿದೆಯೋ ಇಲ್ಲವೋ ತಿಳಿಯೆ.. ಆದರೆ ಇದು ಕವಿಆಶಯವಂತೂ ಹೌದು. ಧನ್ಯವಾದಗಳು ಮೆಚ್ಚುಗೆಗಳಿಗೆ.

@ಚಂದ್ರಕಾಂತ ಅವರೆ,

ನಾನು ಈ ಕವನ ರಚಿಸುವಾಗ ನೀವು ಹೇಳಿದ ಭಾವಾರ್ಥವನ್ನು ಮನದೊಳಗಿಟ್ಟು ರಚಿಸಿರಲಿಲ್ಲ. ಆದರೆ ಈಗ ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ ಅನಿಸುತ್ತಿದೆ.. ಹೌದಲ್ಲಾ.. ಹೀಗೂ ಅರ್ಥೈಸಬಹುದೆಂದು! ಹೊಸಾರ್ಥವನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ಎಷ್ಟೇಂದರೂ ಕವಿತೆ ಅವರವರ ಭಾವಕ್ಕೆ...:)

@ಶಿವು ಅವರೆ,

ನನಗೂ ರಚಿಸಿದ ಮೇಲೆ ಓದಿದಂತೆಲ್ಲಾ ಅನೇಕಾರ್ಥಗಳನ್ನು ಕೊಟ್ಟಿತು :) ತುಂಬಾ ಧನ್ಯವಾದಗಳು.

@ರಾಘು ಅವರೆ,

ಮಾನಸಕ್ಕೆ ಸ್ವಾಗತ. ಮನವೇ ಕಲುಷಿತಗೊಂಡಮೇಲೆ ಬೇರಿನ್ನೇನು ತಾನೇ ಉಳಿದೀತು ಅಲ್ಲವೇ? ಧನ್ಯವಾದಗಳು. ಬರುತ್ತಿರಿ. ಬರೆಯುತ್ತಿರುವೆ...:)

@ಕಾಕಾ,

ಸರಿಯಾಗಿ ಅರ್ಥೈಸಿರುವಿರಿ ಕವನವನ್ನು. ಛೋಟಿ ಸಿ ಆಶಾ ಅಲ್ಲವೇ ಅಲ್ಲ ನಿಜ. ಆದರೆ ಮನಸಿಗಿಂತ ದೊಡ್ಡದು ಯಾವುದೂ ಇಲ್ಲ ಎನ್ನುತ್ತಾರೆ. ಎಲ್ಲವುದಕ್ಕೂ ಮನಸೇ ಮಾರ್ಗ, ಮೂಲ, ಗುರಿ ಎನ್ನುತ್ತಾರೆ. ಒಮ್ಮೆ ಮನಸಿನೊಳಗೆ ಹೊಕ್ಕರೆ ಎಲ್ಲವೂ ಸಣ್ಣವೇ ತಾನೆ? ಈ ಆಶಯವೂ ಕೂಡಾ..:) ತುಂಬಾ ಧನ್ಯವಾದಗಳು.

@ನಿತಿನ್,

ಹೂಂ... ಹೌದು.. ನಾನೂ ಹೇಳಬೇಕೆಂದಿದ್ದರಲ್ಲಿ ಬಹಳಷ್ಟನ್ನು ಹೇಳಿಯಾಯಿತು... :) ಧನ್ಯವಾದಗಳು.

@ಗುರು ಅವರೆ,

ಕಲ್ಪನಾತೀತ ಸಾಗರದಾಚೆಯ ಇಂಚರಕ್ಕೂ ತಲುಪಿದ್ದು ತುಂಬಾ ಸಂತೋಷ. ಬರೆಯುತ್ತಿರುವೆ. ನಿಮ್ಮ ಪ್ರೋತ್ಸಾಹ ಹೀಗೆ ಬರುತ್ತಿರಲಿ.

@ಶಂಕರ್,

ಅಯ್ಯೋ.. ಎಲ್ಲಿಯ ಕೆ.ಎಸ್.ಎನ್. ಎಲ್ಲಿಯ ನಾನು?! ನಿಜಕ್ಕೂ ಕಲ್ಪನಾತೀತವೇ. ಅವರ ಆ ಕವನದೊಳಗಿನ ಮಾಧುರ್ಯ ನನ್ನ ಕವನದೊಳಗೆ ಹುಡುಕಿದರೂ ಸಿಗದೇನೋ. ಸಾಮ್ಯತೆಯ ಮಾತೇ ಇಲ್ಲ!! ಎಲ್ಲವೂ ಕಲ್ಪನಾತೀತ. ಧನ್ಯವಾದಗಳು. ನಿಮ್ಮ ಮೆಚ್ಚುಗೆಗಳಿಗೆ ಆಭಾರಿ.

@ಮಲ್ಲಿಕಾರ್ಜುನ ಅವರೆ,

ನಿಮ್ಮ ನೈಜ ಸುಂದರ ಚಿತ್ರಗಳ ಮುಂದೆ ನನ್ನ ಫೋಟೋಶಾಪಿಂಗ್ ಚಿತ್ರ ಎಲ್ಲಿಯ ಸಾಟಿ? ೨-೩ ಚಿತ್ರಗಳನ್ನು ಸೇರಿಸಿ ಫೋಟೋಶಾಪಿಂಗ್ ಮಾಡಿದ್ದಷ್ಟೇ. ನಾನೇ ಬಿಡಿಸಿದ್ದಲ್ಲ. ಕವನ ಮಾತ್ರ ಸ್ವರಚಿತ..:) ಮೆಚ್ಚುಗೆಗೆ ಧನ್ಯವಾದಗಳು.

ಚಿತ್ರಾ ಹೇಳಿದರು...

ತೇಜೂ ,
ಅಬ್ಬಾ, ಎಷ್ಟು ದಿನಗಳ ನಂತರ ಮಾನಸದಲ್ಲಿ ಹೂ ಬಂತು !
ನಿಜಕ್ಕೂ ಇಂಥಾ ಮಹದಾಶೆಯನ್ನು ಅರಿಯುವುದು ಕಷ್ಟ !
ಒಳ್ಳೆಯ ಕವನ ! ಬರೀತಾ ಇರು ಮಾರಾಯ್ತಿ. ಇದ್ದಕ್ಕಿದ್ದಂಗೇ ಮಾಯ ಆಗ್ತಿರಡ !

ಚಿತ್ರಾ ಸಂತೋಷ್ ಹೇಳಿದರು...

ತೇಜಕ್ಕಾ..
ನಿಮ್ಮ ಕವನದ ಪ್ರತಿ ಸಾಲುಗಳನ್ನು ಓದುತ್ತಿದ್ದಂತೆ ನೆನಪಾಗಿದ್ದು ಮಮತೆಯ ಮಡಿಲು ಅಮ್ಮ, ಭೂಮಿತಾಯಿ....
ನಿಮ್ಮ ಕವನಗಳನ್ನು ಓದೋದು ಮಾತ್ರವಲ್ಲ ಅನುಭವಸಲೂ ಅಷ್ಟೇ ಖುಷಿ. ನಿತ್ಯ ಇಂಥ ಸಾವಿರಾರು 'ಖುಷಿ'ಗಳನ್ನು ನಮ್ಮ ಮುಂದಿಡಿ
-ಚಿತ್ರಾ

ಮನಸು ಹೇಳಿದರು...

nimma kavana tumba chennagide, bhaavarta kooda visheshavagide.

All the Best!!

ಕ್ಷಣ... ಚಿಂತನೆ... ಹೇಳಿದರು...

namaskaara Tejaswini avare,

nimma kalpaneya kavite kalpanAteeta mattu adakkendE nimma kalpaneya sogasaada chitravannoo bidisiruvudu - eradoo saha ondaroLagoNdu hadavaagi miLitavaagiddu chennagide.

inti
kshanachintane

VENU VINOD ಹೇಳಿದರು...

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ...ಹೀಗೊಂದು ಆಸೆಯ ಬಗ್ಗೆ ಪದ್ಯ ಕೇಳಿದ್ದೆ..ಅದೂ ಸುಮಧುರ, ಇದೂ ಸುಲಲಿತ...ನಿಮ್ಮ ಫೋಟೋಶಾಪಿಂಗೂ ಚೆನ್ನಾಗಿದೆ

ಸುಪ್ತದೀಪ್ತಿ suptadeepti ಹೇಳಿದರು...

ತೇಜೂ, ಕೆಲದಿನ ಬಂದಿರಲಿಲ್ಲ. ಈಗ ನೋಡಿದರೆ ಇಲ್ಲಿ ಸಿಹಿನೀರ ತೊರೆಯೇ ಹುಟ್ಟಿ ಹರಿಯುತ್ತಿದೆ. ನಿಜ, ನಾವ್ಯಾರೂ ಅರಿಯಲಾರದ ಅತಿಶಯವನ್ನು ಕೆಲವೇ ಸಾಲುಗಳಲ್ಲಿ ಕಡೆದಿರಿಸಿದ್ದೀಯಲ್ಲ. ಅಂಥ ನಿನ್ನ ಆಸೆಗಳಿಗೆ ಧನ್ಯವಾದಗಳು ಕಣೇ.

PARAANJAPE K.N. ಹೇಳಿದರು...

ತೇಜಸ್ವಿನಿಯವರೇ,
ಕಲ್ಪನಾತೀತ ವಿಚಾರವನ್ನು ಕಾವ್ಯಾತ್ಮಕವಾಗಿ ಹೇಳಿದ್ದಿರಿ. ಮನಸಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಅಲ್ಲವೇ ? ಕಲ್ಪನೆ, ಕವಿತೆ, ಚಿತ್ರಪಟ ಚೆನ್ನಾಗಿದೆ.

ತೇಜಸ್ವಿನಿ ಹೆಗಡೆ ಹೇಳಿದರು...

@ಚಿತ್ರಕ್ಕ, ಚಿತ್ರಾ ಕರ್ಕೇರಾ, ಮನಸು, ಕ್ಷಣ ಚಿಂತನೆ, ಜ್ಯೋತಿಯಕ್ಕ, ವೇಣುವಿನೋದ್ ಹಾಗೂ ಪರಾಂಜಪೆ ಅವರೆ,

ನಿಮ್ಮೆಲ್ಲರ ಮೆಚ್ಚುಗೆ ಹಾಗೂ ಪ್ರೋತ್ಸಾಹಭರಿತ ಪ್ರತಿಕ್ರಿಯೆಯೇ ನನ್ನ ಬರಹಗಳಿಗೆ ಸ್ಫೂರ್ತಿ. ತುಂಬಾ ಧನ್ಯವಾದಗಳು. ಹೀಗೇ ಬರುತ್ತಿರಿ.

Santhosh Rao ಹೇಳಿದರು...

ಭಾವ ತುಂಬಿ ಬರೆದ ಸಾಲು
ಹೃದಯ ತುಂಬಿ ಹರಿದ ಸಾಲು - ಸೂಪರ್ರು.

ಸುಧೇಶ್ ಶೆಟ್ಟಿ ಹೇಳಿದರು...

ತೇಜಕ್ಕ...

ಕವನದ ಭಾವಾರ್ಥ ಇಷ್ಟವಾಯಿತು.