***ನನ್ನ ಮನದೊಳಗೆ ಸದಾ ಹಸಿರಾಗಿರುವ ಈ ಘಟನೆಗೆ ಸಂಬಂಧ ಪಡುವವರ ಹೆಸರುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣಗಳೆರಡು. ಮೊದಲನೆಯದಾಗಿ ನಾನು ಅವರುಗಳ ಒಪ್ಪಿಗೆಯನ್ನು ಪಡೆದುಕೊಂಡಿಲ್ಲವಾದ್ದರಿಂದ. ಎರಡನೆಯದಾಗಿ ಇಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ವ್ಯಕ್ತಿಯೋರ್ವರು ಬ್ಲಾಗ್ ಮಂಡಲದಲ್ಲಿ ಸುಪರಿಚಿತರು. ಹೆಸರುವಾಸಿ. ತಮಗೆಲ್ಲಾ ಗೊತ್ತಿರುವವರೇ! ಹಾಗಾಗಿ ನಾನು ಅವರುಗಳ ಹೆಸರನ್ನಾಗಲೀ, ಆ ಪ್ರದೇಶನ ಪರಿಚಯವನ್ನಾಗಲೀ ನೀಡುತ್ತಿಲ್ಲ. ಒಂದೊಮ್ಮೆ ಈ ಬರಹವನ್ನೋದಿದ ಅವರು ಒಪ್ಪಿಗೆಯನ್ನಿತ್ತರೆ ಹೆಸರು ಹಾಗೂ ಊರನ್ನು ಪರಿಚಯಿಸುವೆ.***
-----------------------------------------------------------------------
ಈ ಘಟನೆ ನಡೆದದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನಮ್ಮ ಮದುವೆಯಾದ ಹೊಸತರಲ್ಲಿ. ಆಗಷ್ಟೇ ಯಜಮಾನರ ಇಷ್ಟಮಿತ್ರ, ಬಂಧು-ಬಳಗದವರ ಪರಿಚಯವಾಗತೊಡಗಿತ್ತು. ಅವರ ಸ್ನೇಹಿತರಲ್ಲನೇಕರನ್ನು, ಕೆಲ ಆಪ್ತರನ್ನು ಮದುವೆಯ ದಿನವೇ ನೋಡಿದ್ದೆ. ಹಾಗೆ ಬಂದವರಲ್ಲಿ ಅವರ ಆತ್ಮೀಯ ಗುರುಗಳೊಬ್ಬರೂ ಆಗಿದ್ದರು. ಅವರು ಯಜಮಾನರಿಗೆ ಪಿ.ಯು.ಸಿಯಲ್ಲಿ ಕನ್ನಡ ಕಲಿಸಿದ್ದರು. ಗುರು-ಶಿಷ್ಯರ ಸಂಬಂಧ ಕೇವಲ ಕ್ಲಾಸ್ರೂಂಗಷ್ಟೇ ಸೀಮಿತವಾಗದೆ, ಇಬ್ಬರೊಳಗೂ ಒಂದು ಗಾಢವಾದ ಆಪ್ತತೆಯನ್ನು ಬೆಳೆಸಿತ್ತು. ಕ್ರಮೇಣ ನನ್ನವರು ಅವರ ಮನೆಯಲ್ಲೋರ್ವ ಸದಸ್ಯರಂತಾಗಿಬಿಟ್ಟಿದ್ದರು. ಇದನ್ನೆಲ್ಲಾ ಯಜಮಾನರು ಮೊದಲೇ ನನಗೆ ಸಾಕಷ್ಟು ಸಲ ಹೇಳಿದ್ದರಿಂದ ಅವರ ಗುರುಗಳನ್ನು ನೋಡಿದಾಗ ಅಷ್ಟೊಂದು ಅಪರಿಚಿತರೆಂದೆನಿಸಿರಲೇ ಇಲ್ಲ. ಹಾಗಾಗಿಯೋ ಏನೋ ಒಂದು ದಿನ ನನ್ನವರು ತಮ್ಮ ಗುರುಗಳ ಮನೆಗೆ ಹೋಗಿ ಬರೋಣ ಎಂದಾಕ್ಷಣ ಕೂಡಲೇ ತಯಾರಾದೆ. ಅದೂ ಅಲ್ಲದೇ ನಂದೂ ಒಂದು ಸಣ್ಣ ಸ್ವಾರ್ಥವಿತ್ತೆನ್ನಿ. ಇವರ ಗುರುಗಳಿಗೆ ಕನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವಿದೆಯೆಂದು ಸಾಕಷ್ಟು ಸಲ ಕೇಳಿದ್ದೆ. ಹಾಗಾಗಿ ಮತ್ತೂ ಉತ್ಸುಕಳಾಗಿ ಹೊರಟೆ.
ಈ ಘಟನೆ ನಡೆದದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನಮ್ಮ ಮದುವೆಯಾದ ಹೊಸತರಲ್ಲಿ. ಆಗಷ್ಟೇ ಯಜಮಾನರ ಇಷ್ಟಮಿತ್ರ, ಬಂಧು-ಬಳಗದವರ ಪರಿಚಯವಾಗತೊಡಗಿತ್ತು. ಅವರ ಸ್ನೇಹಿತರಲ್ಲನೇಕರನ್ನು, ಕೆಲ ಆಪ್ತರನ್ನು ಮದುವೆಯ ದಿನವೇ ನೋಡಿದ್ದೆ. ಹಾಗೆ ಬಂದವರಲ್ಲಿ ಅವರ ಆತ್ಮೀಯ ಗುರುಗಳೊಬ್ಬರೂ ಆಗಿದ್ದರು. ಅವರು ಯಜಮಾನರಿಗೆ ಪಿ.ಯು.ಸಿಯಲ್ಲಿ ಕನ್ನಡ ಕಲಿಸಿದ್ದರು. ಗುರು-ಶಿಷ್ಯರ ಸಂಬಂಧ ಕೇವಲ ಕ್ಲಾಸ್ರೂಂಗಷ್ಟೇ ಸೀಮಿತವಾಗದೆ, ಇಬ್ಬರೊಳಗೂ ಒಂದು ಗಾಢವಾದ ಆಪ್ತತೆಯನ್ನು ಬೆಳೆಸಿತ್ತು. ಕ್ರಮೇಣ ನನ್ನವರು ಅವರ ಮನೆಯಲ್ಲೋರ್ವ ಸದಸ್ಯರಂತಾಗಿಬಿಟ್ಟಿದ್ದರು. ಇದನ್ನೆಲ್ಲಾ ಯಜಮಾನರು ಮೊದಲೇ ನನಗೆ ಸಾಕಷ್ಟು ಸಲ ಹೇಳಿದ್ದರಿಂದ ಅವರ ಗುರುಗಳನ್ನು ನೋಡಿದಾಗ ಅಷ್ಟೊಂದು ಅಪರಿಚಿತರೆಂದೆನಿಸಿರಲೇ ಇಲ್ಲ. ಹಾಗಾಗಿಯೋ ಏನೋ ಒಂದು ದಿನ ನನ್ನವರು ತಮ್ಮ ಗುರುಗಳ ಮನೆಗೆ ಹೋಗಿ ಬರೋಣ ಎಂದಾಕ್ಷಣ ಕೂಡಲೇ ತಯಾರಾದೆ. ಅದೂ ಅಲ್ಲದೇ ನಂದೂ ಒಂದು ಸಣ್ಣ ಸ್ವಾರ್ಥವಿತ್ತೆನ್ನಿ. ಇವರ ಗುರುಗಳಿಗೆ ಕನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವಿದೆಯೆಂದು ಸಾಕಷ್ಟು ಸಲ ಕೇಳಿದ್ದೆ. ಹಾಗಾಗಿ ಮತ್ತೂ ಉತ್ಸುಕಳಾಗಿ ಹೊರಟೆ.
ಮಂಗಳೂರಿನಿಂದ ಅವರ ಮನೆ ಸುಮಾರು ೨೫-೩೦ ಕಿ.ಮೀ. ದೂರವಿತ್ತು. ಹಾಗಾಗಿ ಆದಷ್ಟು ಬೇಗ ಮನೆಯಿಂದ ಹೊರಡಬೇಕೆಂದು ಗಡಬಡಿಸಿದರೂ, ಹೊರಡುವಾಗಲೇ ಗಂಟೆ ೨ ದಾಟಿತ್ತು! "ನಿಂಗವು ರಾಶಿ ಲೇಟ್ ಮಾಡ್ಕಳಡಿ.. ಮಳೆಗಾಲ ಬೇರೆ. ದಾರಿ ಬೇರೆ ತಿರುವು ಮುರುವಿದ್ದು. ನಂಗೆ ಟೆನ್ಷನ್ ಆಗ್ತು" - ಎಂಬ ಅಮ್ಮನ ಈ ಎಚ್ಚರಿಕೆಯ ಮತುಗಳೊಂದಿಗೆಯೇ ನಾವು ಕಾರನ್ನೇರಿದೆವು. ಹೊರಟ ಮೇಲೆ ನಮ್ಮ ಪ್ರಯಾಣದಲ್ಲಿ ತುಸು ಬದಲಾವಣೆಯಾಗಿ ದಾರಿಯಲ್ಲೇ ಸಿಗುವ ಇವರ ಇನ್ನೋರ್ವ ಆತ್ಮೀಯರ ಮೆನೆಯನ್ನೂ ಹೊಕ್ಕು ಗುರುಗಳ ಮನೆ ಸೇರುವಾಗ ಸುಮಾರು ಐದುಗಂಟೇಯೇ ಆಗಿತ್ತು.
ಮದುವೆಗೆ ಗುರುಗಳು ಮಾತ್ರ ಬಂದಿದ್ದರು. ಕಾರಣಾಂತರಗಳಿಂದ ಅವರ ಪತ್ನಿಯಾಗಲೀ, ಮಗನಾಗಲೀ ಹಾಗೂ ಮಗಳಾಗಲೀ ಬಂದಿರಲಿಲ್ಲವಾದ್ದರಿಂದ ಇವರುಗಳೆಲ್ಲರನ್ನು ನಾನು ಮೊದಸಲ ಭೇಟಿಯಾಗಿದ್ದೆ....ಮನೆಯವರೆಲ್ಲರೊಡನೆ ಬೆರೆತು ಮಾತಾನಾಡುತ್ತಾ, ರಾಜೋಪಚಾರಗಳನ್ನು ಪಡೆಯುತ್ತಾ ಇದ್ದ ನಮಗೆ ಸಮಯದ ಅರಿವೇ ಆಗಲಿಲ್ಲ. ಅಲ್ಪ ಸಮಯದಲ್ಲೇ ನನಗಲ್ಲಿ ತುಂಬಾ ಆತ್ಮೀಯತೆ ದೊರಕಿತ್ತು. ಗುರುಗಳ ಪತ್ನಿ ನಮ್ಮೂರಿನವರೇ ಆಗಿದ್ದರಿಂದಲೋ ಏನೋ ನನಗರಿವಿಲ್ಲದಂತೇಯೇ ನಾನವರನ್ನು "ಅತ್ತೇ" ಎಂದು ಸಂಭೋಧಿಸತೊಡಗಿದ್ದೆ.
"ರಾಮು ಇಲ್ಲೇ ಹತ್ರದಲ್ಲಿ ಎಳ್ಳತ್ತೂರು ದೇವಸ್ಥಾನವಿದ್ದು. ಈಗಲ್ಲಿ ಬ್ರಹ್ಮಕಲಶದ ತಯಾರಿ ನಡೀತಾ ಇದ್ದು. ರಾಶಿ ಪ್ರಸಿದ್ಧ ದೇವಸ್ಥಾನ. ಸುಮಾರು ಜನ ನಡ್ಕ್ಯತ್ತ ಅದ್ಕೆ. ನಿಂಗವು ಅಲ್ಲಿಗೆ ಹೋಗಿ ನಿಮ್ಮ ಹತ್ರಾದಷ್ಟು ಸೇವೆ ಕೊಟ್ಟು ಮನೆಗೆ ಹೋಗಿ.. ಹೋಗ್ದೆ ಇರಡಿ. ಜಾಗ ಗೊತ್ತಗ್ದೇ ಹೋಕು ನಾನು ಮಗ್ಳ ಕಳಸ್ತೆ ಜೊತೆಗೆ..." ಎಂದು ಅತ್ತೆ ಹೇಳಿದಾಗಲೇ ನಾನು ಸಮಯ ನೋಡಿದ್ದು.. ಗಂಟೆ ಏಳಾಗಿ ಹೋಗಿತ್ತು. ಹೊರಗೆ ಕತ್ತಲು ತುಂಬಿತ್ತು.. ದೂರದಲ್ಲೇನೋ ಗುಡುಗಿದ ಸದ್ದು ಮಳೆಯಾರ್ಭಟಕ್ಕೆ ಮುನ್ನಚ್ಚರಿಕೆ ನೀಡುವಂತಿತ್ತು. ನನಗೋ ಮೊದಲೇ ಗುಡುಗು ಮಿಂಚು ಎಂದರೆ ಅವ್ಯಕ್ತ ಭಯ. ಜೊತೆಗೆ ಅಷ್ಟು ದೂರ ಹೋಗಬೇಕು. ರಸ್ತೆ ತುಂಬಾ ತಿರುವುಗಳಿಂದ ಬೇರೆ ಕೊಂಡಿತ್ತು. ಅಮ್ಮನನ ಎಚ್ಚರಿಕೆಯ ಮಾತುಗಳೂ ತಲೆಕೊರೆಯುತ್ತಿದ್ದವು.. ಆದರೂ ಅವರು ಹೇಳಿದ ಮೇಲೆ ದೇವಸ್ಥಾನಕ್ಕೆ ಹೋಗದಿರುವುದೂ ಸಲ್ಲ, ಹೋಗಿ ಒಂದು ಹಣ್ಣು-ಕಾಯಿಯನ್ನಾದರೂ ಮಾಡಿಸಿಕೊಂಡು ಬರುವ ಎಂದೆನಿಸಿದರೂ ಕಾಲದ ಪರಿಮಿತಿ ಕಟ್ಟಿಹಾಕಿತು. ತೀರಾ ಆಗದೆನ್ನಲಾಗದೇ ದಾಕ್ಷಿಣ್ಯದಿಂದ ಸುಮ್ಮನಾದೆ. ನನ್ನ ಮೌನವನ್ನೇ ಒಪ್ಪಿಗೆಯೆಂದರಿತೋ ಏನೋ ನನ್ನವರೂ ಸುಮ್ಮನಿದ್ದರು. ತಾಯಿಯ ಆಜ್ಞೆಯಂತೆ ಅವರ ಮಗಳು ನಮ್ಮೊಂದಿಗೆ ಬರಲು ಹೊರಟಳು. ಈಗ ನಾವು ದೇವಸ್ಥಾನಕ್ಕೆ ಹೋಗದೇ ಹಾಗೇ ಮರಳಲು ಸಾಧ್ಯವೇ ಇಲ್ಲದಂತಾಯಿತು. ಆಗ ಮುಂದೆ ಬಂದ ಅವರ ಮಗ "ನಾ ನಿಂಗ್ಳ ಜೊತೆ ಬತ್ತೆ.. ರಾಶೀ ಕತ್ಲಾಜು. ನನ್ನಾದ್ರೆ ಮನೆ ಹತ್ರನೇ ಬಿಡವು ಹೇಳಿಲ್ಲೆ..." ಎಂದು ಹೇಳುತ್ತಾ ತಂಗಿಯನ್ನು ತಡೆದು ತಾನೇ ಕಾರನ್ನೇರಿ ಬಿಟ್ಟ.......ಕಳೆಯುತ್ತಿದ್ದ ಸಮಯ ಹಾಗೂ ಹೆಚ್ಚುತ್ತಿದ್ದ ಗುಡುಗಿನ ಸದ್ದು ನನ್ನೊಳಗೆ ಕಳವಳವನ್ನುಂಟುಮಾಡಿದವು. ಎಲ್ಲವನ್ನೂ ಎಳ್ಳತ್ತೂರು ದೇವರಿಗೆ ಬಿಡುತ್ತೇನೆಂದುಕೊಂಡು, ನಾವು ಬರುವುದು ಹೊತ್ತಾಗುವುದೆಂದು ಅಮ್ಮನಿಗೆ ತಿಳಿಸೋಣವೆಂದು ಮೊಬೈಲ್ ತೆಗೆದರೆ NO SIGNAL!! ಇವರ ಗುರುಗಳ ಮನೆ ತುಸು ಹಳ್ಳಿಯಾದ್ದರಿಂದ ಸುಮಾರು ದೂರದವರೆಗೂ ಸಿಗ್ನಲ್ ಸಿಗುವಂತೆಯೂ ಇರಲಿಲ್ಲ!!
ಸುಮಾರು ಅರ್ಧ ಕಿಲೋಮೀಟರ್ ಬಂದೊಡನೆ ಎರಡು ರಸ್ತೆಗಳ ಕೂಡು ಸಿಕ್ಕಿತು. ಒಂದು ದೇವಸ್ಥಾನಕ್ಕೆ ಹೋಗುವುದು, ಇನ್ನೊಂದು ಮಂಗಳೂರಿನ ಕಡೆಗೆ ಹೋಗುವುದು. ತತ್ಕ್ಷಣ ಹಿಂದಿನ ಸೀಟಿನಲ್ಲಿದ್ದ ಗುರುಗಳ ಮಗ "ರಾಮಣ್ಣ ಇಲ್ಲೇ ನಿಲ್ಸು.." ಎಂದು ಹೇಳುತ್ತಾ ನಿಲ್ಲಿಸಿದ ಕೂಡಲೇ ಕಾರಿನಿಂದಿಳಿದು ಬಿಟ್ಟ. "ಅತ್ಗೆ ನಿಂಗವು ಮಂಗ್ಳೂರಿಗೆ ಹೊರಡಿ.. ರಾಶಿ ಲೇಟಾಜು. ಅವ್ಳು ಬಂದ್ರೆ ತಪ್ಪಿಸ್ಕಂಬ್ಲೆ ಆಗ್ತಿಲ್ಲೆ ಹೇಳೆ ನಾ ಬಂದೆ.. ನಾ ಇಲ್ಲೇ ಒಂದರ್ಧ ಗಂಟೆ ತಿರ್ಗಾಡಿ ಮನೆಗೆ ಹೋಗ್ತೆ ಗೊತ್ತಾಗಲ್ಲೆ.. ಸರಿ.. ರೈಟೋ....."ಎಂದು ಬಡಬಡನೆ ಮಾತಾಡಿ ದಡದಡನೆ ಕತ್ತಲೆಲ್ಲೋ ಮರೆಯಾಗಿಯೇ ಬಿಟ್ಟ. ಬಿಟ್ಟ ಕಣ್ಣುಗಳಿಂದ ಆಶ್ಚರ್ಯಚಕಿತಳಾಗಿ ಇವರನ್ನು ನೋಡಿದರೆ ಇವನ ಈ ಸ್ವಭಾವ ನನಗೆ ಮೊದಲೇ ಗೊತ್ತಿದೆ ಎನ್ನುವಂತೆ ಮುಗಳ್ನಗುತ್ತಿದ್ದರು! ನಮ್ಮ ಸಂದಿಗ್ಧತೆಯನ್ನರಿತೋ ಇಲ್ಲಾ ಕತ್ತಲಾವರಿಸಿದ್ದನ್ನು ನೋಡಿಯೋ ನಮ್ಮನ್ನು ದೇವಸ್ಥಾನಕ್ಕೆ ಕರೆದೊಯ್ಯದೇ ಮಂಗಳೂರಿಗೆ ಕಳುಹಿಸಿಬಿಟ್ಟ.
ಆದರೆ ಆ ಕ್ಷಣಕ್ಕೆ ನನಗೆ ಅವನು ಮಾಡಿದ್ದು ದೊಡ್ಡ ಉಪಕಾರವೆಂದೆನಿಸಿತಾದರೂ ಕ್ರಮೇಣ ಪಾಪಪ್ರಜ್ಞೆ ಮನಸ್ಸನ್ನಾವರಿಸಿಕೊಳ್ಳತೊಡಗಿತು. "ಛೆ! ನಾವು ತುಸು ಮೊದಲೇ ಮನೆಯಿಂದ ಹೊರಡಬೇಕಿತ್ತು.. ಇಲ್ಲಾ ನೇರ ಇಲ್ಲಿಗೇ ಬರಬೇಕಾಗಿತ್ತು.. ಮೊದಲೇ ಹೇಳಿದ್ದರೆ ಬೇಗ ಹೊರಟು ದೇವಸ್ಥಾನವನ್ನು ಹೊಕ್ಕಿಯೇ ಹೊಗಬಹುದಾಗಿತ್ತು.. ಛೇ.. ನಮ್ಮ ಒಳಿತಿಗಾಗಿ ಸಲಹೆಯನ್ನಿತ್ತ ಅತ್ತೆಗೆ ನಾವು ವಂಚನೆ ಮಾಡಿದೆವೇನೋ.."ಎಂದೆಲ್ಲಾ ಕೊರಗುತ್ತಲೇ....ನನ್ನವರ ತಲೆಯನ್ನು ಕೊರೆಯುತ್ತಲೇ ಮನೆಗೆ ಬಂದೆ.
ಇದಾದ ಅದೆಷ್ಟೋ ದಿನಗಳವರೆಗೂ ದೇವಸ್ಥಾನವನ್ನು ಭೇಟಿನೀಡದೇ ಬಂದೆವಲ್ಲಾ....ಹಿರಿಯರ ಉಪದೇಶವನ್ನು ಕಡೆಗಣಿಸಿದೆವಲ್ಲಾ.. ತಿಳಿಯದಂತೆ ಮೋಸಮಾಡಿದೆವಲ್ಲಾ.. ಎಂಬ ಭಯ, ಆತಂಕಗಳು ನನ್ನನ್ನು ಕಾಡುತ್ತಲೇ ಇತ್ತು. ಆಗೆಲ್ಲಾ ಮನಸ್ಸು.. ಹಾಗೆ ಮಾಡುವುದು ಅನಿವಾರ್ಯವಾಗಿತ್ತು.. ಸಂದಿಗ್ಧತೆ ಇತ್ತು. ಹಾಗಾಗಿ ಆ ರೀತಿ ಮಾಡಬೇಕಾಯಿತು.. ತಪ್ಪೇನಿಲ್ಲ ಎಂದೆಲ್ಲಾ ಸಮಜಾಯಿಷಿ, ಸಮಾಧಾನಗಳನ್ನು ನೀಡುತ್ತಿತ್ತು. ಆದರೂ ಪಾಪಪ್ರಜ್ಞೆ ಮಾತ್ರ ಮರೆಯಾಗಲೇ ಇಲ್ಲ. "ಆಗ ಆ ರೀತಿ ನಮ್ಮನ್ನು ಹೋಗಲು ಅವರ ಮಗ ಬಿಡದೇ ಹೋಗಿದ್ದರೆ ದೇವಸ್ಥಾನಕ್ಕೆ ಹೋಗಿಯೇ ಮರುಳುತ್ತಿದ್ದೆವು.. ಈ ರೀತಿಯ ಭಯ.. ಪಶ್ಚಾತ್ತಾಪಗಳಿಗೆ ಆಸ್ಪದವೇ ಇರುತ್ತಿರಲಿಲ್ಲ.. ಯಾಕಾದರೂ ನಮ್ಮನ್ನು ಹೋಗಗೊಟ್ಟನೋ ಎಂದು.. ನಮಗೆ ಸಹಾಯ ಮಾಡಿದ ಇವರ ಗುರುಗಳ ಮಗನನ್ನೂ ಬೈದುಕೊಂಡದ್ದಿದೆ. ಆದರೆ ಆ ರೀತಿ ಮಾಡಿದ್ದು ನಮ್ಮ ಮನಸ್ಥಿತಿಯನ್ನರಿತೇ ಎನ್ನುವುದೂ ತಿಳಿದಿತ್ತು. ಆ ನಂತರ ಎಷ್ಟೋ ಸಲ ಅತ್ತೆಗೇ ಕಾಲ್ ಮಾಡಿ ಸುಳ್ಳನ್ನು ಹೇಳಬೇಕೆಂದುಕೊಂಡೆ. ಆದರೆ ಹಾಗೆ ಮಾಡಲು ಏನೋ ಅಳುಕು.. ಅದೂ ಅಲ್ಲದೆ ಅವರ ಮಗನನ್ನೂ ಸಿಕ್ಕಿಸಿಹಾಕಿದಂತಾಗುವುದೆಂದು ಸುಮ್ಮನಿದ್ದುಬಿಟ್ಟೆ.(ಆದರೆ ನಮ್ಮೀ ತಪ್ಪಿನಲ್ಲಿ ಸಹಭಾಗಿಯಾಗಿರುವ ಅವರ ಮಗನಿಗೆ ಈ ಘಟನೆ ನೆನಪಿದೆಯೋ ಇಲ್ಲವೋ ತಿಳಿಯದು :) )
ಕಾಲನ ಮಹಿಮೆಯಿಂದ ಈ ಘಟನೆ ಮನದ ಮೂಲೆಯಲ್ಲೆಲ್ಲೋ ಅಡಗಿಕೊಂಡರೂ ಆಗಾಗ ಹಸಿರಾಗಿ ಉಸಿರಾಡುತ್ತಲೇ ಇರುತ್ತದೆ. ಆಗೆಲ್ಲಾ ಪಾಪಪ್ರಜ್ಞೆಯೂ ಕಾಡುತ್ತದೆ. ಅದಕ್ಕಾಗಿಯೇ ಈಗ ಈ ಬರಹದ ಮೂಲಕ ಪ್ರಾಮಾಣಿಕವಾಗಿ ನಮ್ಮೆಲ್ಲಾ ತಪ್ಪನ್ನು ಮುಂದಿಟ್ಟು ಹಗುರಾಗುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ. ಪ್ರಾಮಾಣಿಕತೆಯಿಂದ ಪಶ್ಚಾತ್ತಾಪ ಪಟ್ಟರೆ ಕ್ಷಮಾದಾನ ಸಿಕ್ಕಿದಂತೇ ಎಂದು ಕೇಳಿರುವೆ. ಆದರೂ ನೇರವಾಗಿಯಲ್ಲದಿದ್ದರೂ ಈ ರೀತಿ ಬಹಿರಂಗವಾಗಿ ಅಂದು ನಮ್ಮಿಂದಾದ ತಪ್ಪಿಗೆ ಅತ್ತೆಯಲ್ಲಿ ಮನಃಪೂರ್ವಕವಾಗಿ ಕ್ಷಮೆಕೋರುತ್ತಿದ್ದೇವೆ. ಸಾಧ್ಯವಾದರೆ ಆದಷ್ಟು ಬೇಗ ಪುಟ್ಟಿಯ ಸಮೇತ ಎಳ್ಳತ್ತೂರಿಗೆ ಹೋಗಿ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂಬ ಆಲೋಚನೆಯೂ ಇದೆ...(ತಪ್ಪು)ಕಾಣಿಕೆ ಹಾಕಿಬರಲು.
-ತೇಜಸ್ವಿನಿ ರಾಮಕೃಷ್ಣ ಹೆಗಡೆ.
18 ಕಾಮೆಂಟ್ಗಳು:
ಹೂಂ... ಇದು ಕತೆ
ಪಾಪಪ್ರಜ್ಞೆಯ ಅಗತ್ಯವೇ ಇಲ್ಲ !ಯಾಕೆ ಗೊತ್ತಾ ಯಾವುದೇ ದೇವಸ್ಥಾನದ ಭೇಟಿ ಅಷ್ಟು ಸುಲಭ ಅಲ್ಲ.ದೈವೇಚ್ಚೆ ಇಲ್ಲದೆ ಇದ್ರೆ ಶತಪ್ರಯತ್ನ ಮಾಡಿದ್ರೂ ದೇವರ ದರ್ಶನ ಸಾಧ್ಯ ಇಲ್ಲ.
ದೇವರೇ ಕರೆಸ್ಕೋತಾನೆ ಅವನ ಸನ್ನಿಧಿಗೆ ಕಾಲ ಕೂಡಿ ಬರಬೇಕಷ್ಟೆ!
ಸಂದೀಪ ಹೇಳುವದು ಸರಿ. ನನಗೆ ಅಂತಹದೇ ಅನುಭವ ಆಗಿದೆ.
ಪಾಪಪ್ರಜ್ಞೆ ಎಲ್ಲರ ಜೀವನದಲ್ಲೂ ಇರುತ್ತದೆ. ಈ ಬಾರಿ ಊರಿಗೆ ಹೋದಾಗ ಎಳ್ಳತ್ತೂರಿಗೂ ಭೇಟಿ ನೀಡಿ ಬನ್ನಿ :)
ತೇಜೂ ,
ಸಂದೀಪರು ಹೇಳಿದಂತೆ , ದೇವರ ದರ್ಶನ ಪಡೆಯಲೂ ದೇವರಿಚ್ಚೆ ಇರಬೇಕು ಎನ್ನುವುದು ನಿಜವೇ. ಹೀಗಂದುಕೊಂಡು ಸ್ವಲ್ಪ ಸಮಾಧಾನ ಪಟ್ಟುಕೊಳ್ಳಬಹುದಾದರೂ , ನನಗನಿಸುವಂತೆ ನಮ್ಮ ಆತ್ಮೀಯರಿಗೆ , ಹಿರಿಯರಿಗೆ ಸುಳ್ಳು ಹೇಳಿದ ಬಗ್ಗೆ ಪಾಪಪ್ರಜ್ಞೆ ಕಾಡುವುದು ಹೆಚ್ಚು ಅಲ್ಲವೆ? ಆದರೆ ಅವರಿಗೆ ತಿಳಿದಾಗ ಖಂಡಿತಾ ಅರ್ಥ ಮಾಡಿಕೊಳ್ಳುವರೆಂಬ ವಿಶ್ವಾಸ ನನಗಿದೆ.ಯೋಚನೆ ಬೇಡ.
ಚೆನ್ನಾಗಿ ಬರೆದಿದ್ದೀರಿ.
ಆ ದಿನ ನೀವು ದೇವಸ್ಥಾನಕ್ಕೆ ಹೋಗಿದ್ದರೆ ಆ ದೇವರನ್ನು ಇಷ್ಟೊಂದು ನೆನಪಿಸಿಕೊಳ್ಲುತ್ತಿರಲಿಲ್ಲವೇನೋ ! ಅಷ್ಟೊಂದು ಪಶ್ಚಾತ್ತಾಪ ಪಟ್ಟು ದೇವರಿಗೆ ಬಹಳ ಹತ್ತಿರದವರಾದಿರಿ ಬಿಡಿ.
ಅಂತೂ ಇವತ್ತು ಪುರುಸೊತ್ತು ಸಿಕ್ಚು ನೋಡು ನಿನ್ ಬ್ಲಾಗ್ ಓದಕ್ಕೆ!
ಹಾಗೆ ಕಾರಿಂದ ಇಳಿದುಹೋದ ಹುಡ್ಗ ಯಾರು ಅಂತ್ಲೂ ಗೊತ್ತಿದು ಮತ್ತೆ ಅಂವ ಎಂಥಕ್ ಇಳ್ದುಹೋದ ಅಂತ್ಲೂ ಗೊತ್ತಿದು ನಂಗೆ! ಹೇಳಿರೆ ಕೊಲೆ ಮಾಡ್ತ ಅಂವ, ಸೋ ಹೇಳದಿಲ್ಲೆ!! :P
ತೇಜಕ್ಕಾ, ಪಶ್ಚಾತ್ತಾಪವೇ ಪರಮಶಿಕ್ಷೆ ಅಂತ ಹೇಳ್ತ.. ಸೋ ಯು ಆರ್ ಎಕ್ಸ್ಕ್ಯೂಸ್ಡ್!!
ಸುಶ್ರುತ, ಕಳ್ಳನ ಮನಸ್ಸು ಹುಳ್ಳಗೆ ಹೇಳ್ತ.. ಯಂಗೆಂತಕ್ಕೂ ನಿನ್ ಮೇಲೇ ಡೌಟು ;-)
ತೇಜಸ್ವಿ ಮೇಡಮ್,
ನಾವೆಲ್ಲ ಓದಿದ್ದೇವೆ. ನಿಮಗೆ ಮನಸು ಇನ್ನಷ್ಟು ಹಗುರಾಗಲಿಕ್ಕೆ ಉಂಟು. ಸಾಧ್ಯವಾದಲ್ಲಿ ಬೇಗ ದೇವಸ್ಥಾನಕ್ಕೆ ಹೋಗಿ ಬನ್ನಿ.
ಶಿವು.ಕೆ
ತೇಜಸ್ವಿನಿಯವರೇ,
ಚೆನ್ನಾಗಿ ಬರೆದಿದ್ದೀರಿ , ಪಶ್ಚಾತ್ತಾಪ ಪಟ್ಟಿದ್ದಲ್ಲದೇ ದೇವಸ್ಥಾನಕ್ಕೆ ಹೋಗಿಬರುವ ಯೋಚನೆಯಲ್ಲಿದ್ದೀರಲ್ಲ. ಹೋಗಿಬನ್ನಿ. ಒಮ್ಮೆ ದೇವರನ್ನೂ ದೇವರ ಗುಡಿಯನ್ನೂ ನೋಡಿದ ಹಾಗೂ ಆಗುತ್ತೆ. ಮನಸ್ಸಿಗೂ ಸಮಾಧಾನ ಆಗುತ್ತೆ.
very nice write up.. keep it up
ನನ್ನೊಳಗಿನ ಮರೆಯಲಾಗದ ನೆನಪನ್ನು ನಿಮ್ಮೊಂದಿಗೆ ಹಂಚಿಕೊಂಡು ಹಗುರಾಗುವ ನನ್ನ ಪ್ರಯತ್ನಕ್ಕೆ ನಿಮ್ಮೆಲ್ಲರ ಸಾಥ್ ಸಿಕ್ಕಿದ್ದು ನೋಡಿ ತುಂಬಾ ಸಂತೋಷವಾಯಿತು. ಪ್ರತಿಕ್ರಿಯೆಯ ಮೂಲಕ ಸಮಾಧಾನಿಸಿದ, ಸಲಹೆಗಳನ್ನಿತ್ತ ತಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು.
@ಸುಶ್ರುತ,
ನೀ ಹಾಂಗೆಲ್ಲಾ ಹೇಳಿ ಒಂದು ಕಡ್ಡಿ ಇಡಡಾ ನೋಡು. ಆ ಕಡ್ಡಿ ನಿನ್ನ ಮೇಲೇನೇ ಬತ್ತು ಕೊನೆಗೆ. ಸುಮ್ಮ್ಸುಮ್ನೆ ನಿನ್ನಮೇಲೇ ಆಪಾದನೆ ಬತ್ತು :) ಈಗಾಗಲೇ ಹರೀಶ್ನ ಒಂದು ಕಣ್ಣು ನಿನ್ನ ಮೇಲೆ ಬಿಜ್ಜು.. :)
ಇ೦ತಹ ಸ೦ದಿಗ್ಧತೆ ಪ್ರತಿಯೊಬ್ಬರಿಗೂ ಯಾವಾಗಲಾದರೂ ಆಗಿಯೇ ಇರುತ್ತದೆ. ನನಗೂ ಆಗಿದೆ ಇದೇ ತರಹ. ಈಗ ನಿಮ್ಮ ಮನಸ್ಸಿಗೆ ಸಮಧಾನ ದೊರಕಿರಬಹುದಲ್ಲವೇ ನಮ್ಮೊ೦ದಿಗೆ ಹ೦ಚಿಕೊ೦ಡಮೇಲೆ.
ಪಾಪ ದೇವರು!!
hi,
I always read your blog, this is one excellent writing and a true blog. Honesty and sincerity both have strengthened this writing. You are not trying to enforce any feelings or opinion. Let us have more of these writings.
ಸುಧೇಶ್ ಅವರೆ,
ನಿಜ.. ನಮ್ಮ ಮನಸ್ಸಿನ ಭಾರವಿಳಿಯುವುದು ಈ ರೀತಿ ಹಂಚಿಕೊಳ್ಳುವುದರಿಂದಲೇ. ಧನ್ಯವಾದಗಳು ಪ್ರತಿಸ್ಪಂದಿಸಿದ್ದಕ್ಕೆ :)
ಪ್ರಮೋದ್ ಅವರೆ,
ಅರ್ಥವಾಗಲಿಲ್ಲ :( !
ಶಶಿಯವರೆ,
ನಿಮ್ಮ ಮೆಚ್ಚುಗೆಗಳಿಗೆ ಹಾಗೂ ಪ್ರೋತ್ಸಾಹಕ್ಕೆ ತುಂಬಾ ಆಭಾರಿ. ಮಾನಸಕ್ಕೆ ಹೀಗೇ ಭೇಟಿಕೊಡುತ್ತಿರಿ.
ದೇವರಿಗೆ ಎಲ್ಲಾ ಅರ್ಥಾಗಿರ್ತು. ಏನ್ ತಲೆ ಕೆಡ್ಸ್ಕಳದು ಬ್ಯಾಡ . :)
ಕಾಮೆಂಟ್ ಪೋಸ್ಟ್ ಮಾಡಿ