ಮಂಗಳವಾರ, ಮಾರ್ಚ್ 7, 2017

B-ಪಾಸಿಟಿವ್ ಎಂಬ ಮೆಸ್ಸೇಜ್ ಕೊಡುವ B-ಕ್ಯಾಪಿಟಲ್

ಜೋಗಿಯವರ B-ಕ್ಯಾಪಿಟಲ್ ಪುಸ್ತಕವನ್ನೋದಿ ಮುಗಿಸಿದೆ. ತುಂಬಾ ಇಷ್ಟವಾಯಿತು... ಆಪ್ತವೆನಿಸಿತು. ಅವರ ಕುರಿತು ಗೌರವ ಹೆಚ್ಚಾಯಿತು ಈ ಪುಸ್ತಕವನ್ನು ಓದಿ. ಬರೆದರೆ ಇಂಥಾ ಬಯೋಗ್ರಾಫಿ (ಈ ಶೈಲಿಯಲ್ಲಿ, ತಂತ್ರದಲ್ಲಿ.. ಕಥಾವಸ್ತು ರೂಪದಲ್ಲಿ) ಬರೆಯಬೇಕು ಎಂದೆನಿಸಿತು. ಬೆಂಗಳೂರನ್ನು ನಮ್ಮ ಬಳಿ ತರುತ್ತಲೇ ಅವರನ್ನೂ ಓದುಗರಿಗೆ ಪರಿಚಯಸುತ್ತಾ ಹೋಗಿದ್ದಾರೆ. “ಸಾಕಪ್ಪಾ ಈ ಬೆಂಗಳೂರು.. ಇಷ್ಟ ಇಲ್ಲದಿದ್ದರೂ ಇರಬೇಕಾಗಿದೆ.. ಊರು ಕರೆಯುತ್ತಿದೆ..” ಎಂದು ಗೋಳಾಡಿದವರ ಪಟ್ಟಿಯಲ್ಲಿ ನಾನೂ ಇದ್ದೇನೆ. ಮದುವೆಗೂ ಮುನ್ನ ಬೆಂಗಳೂರಿಗೆ ಬಂದಿದ್ದು ಅನಿವಾರ್ಯ ಕಾರಣಕ್ಕೆ ಮಾತ್ರ ಆಗಿತ್ತು. ಒಂದು ದಿನದ ಆ ಒಂದೆರಡು ಭೇಟಿಯಲ್ಲೇ ಜಪ್ಪಯ್ಯಾ ಅಂದ್ರೂ ಈ ಊರು ಬೇಡ ಅಪ್ಪಾ ಅಂದು ಬಿಟ್ಟಿದ್ದೆ. ಆದರೆ ನಿಯತಿ ಬಿಡಲಿಲ್ಲ.. ಮದುವೆಯಾದ ಮೂರು ತಿಂಗಳಿಗೇ ಉಡುಪಿಯ ಸಂತೆಕಟ್ಟೆಯಲ್ಲಿದ್ದ ನಮ್ಮ ಬೆಚ್ಚನೆಯ ಗೂಡನ್ನು ಇಲ್ಲಿಗೆ ತಂದು ಹಾಕಿತ್ತು. ಹೊಸ ಊರು, ಹೊಸ ಜನ, ಹೊಸ ಬದುಕು ಎಂಬುದೆಲ್ಲವನ್ನೂ ಮೀರಿ, ನಾನು ಎಂದೂ ಬರಲು ಇಷ್ಟಪಡದಿದ್ದ ಊರಿಗೆ ಇಷ್ಟ ಪಟ್ಟವನ ಜೊತೆ ಬಂದಿದ್ದೆ. ಒಂದು ಗುಮಾನಿ, ಅನುಮಾನ, ಅಸಹನೆ, ನಿರಾಕರಣೆಯ ಜೊತೆಗೇ ಮೊದಲ ಕೆಲವು ವರ್ಷಗಳನ್ನು ಈ ಊರಲ್ಲಿ ಕಳೆದದ್ದಾಯಿತು. ಕ್ರಮೇಣ ಸಹಾನುಭೂತಿಯಿಂದ ಈ ಊರು ನನ್ನ ಸಂಭಾಳಿಸಿತೋ ಇಲ್ಲಾ ನಾನಿದನ್ನು ಒತ್ತಾಯದಲ್ಲಿ ಒಪ್ಪಿಕೊಂಡೆನೋ ತಿಳಿಯೆ. ಆದರೆ ಇಂದು ಇಲ್ಲೊಂದು ನಮದೇ ಮನೆ ಬೇಕೆಂದು ಬಯಸಿ, ಹಾಗೇ ಕಟ್ಟಿಕೊಂಡು.. ಬೆಂಗಳೂರು ಮತ್ತಷ್ಟು ಹಾಳಾಗದಿರಲಿ, ವೃಷಭಾವತಿ ಶುದ್ಧಳಾಗಲಿ, ಬೆಳ್ಳಂದೂರು ಕೆರೆ ಸ್ವಸ್ಥವಾಗಲಿ.. ಕುಡೀವ ನೀರಿನ ಸಮಸ್ಯೆ ನೀಗಲಿ.. ಕಾವೇರಿ ಜಗಳ ಆಗದಿರಲಿ.. ಇಂಬಿತ್ಯಾದಿ ಹಾರೈಕೆ ಮನಸು ನೀಡುತ್ತಿದೆ. ಇದು ನನ್ನ ಸ್ವಾರ್ಥವೋ ಇಲ್ಲಾ ನಿಜಕ್ಕೂ ಈ ಊರಿನ ಮೇಲೆ ಕಾಳಜಿ ಬಂದಿದೆಯೋ ಎಂದು ಸ್ಪಷ್ಟವಾಗಿ ಹೇಳಲು ಆಗದು. ಎರಡೂ ಇದ್ದಿರಬಹುದು. ಇಷ್ಟೆಲ್ಲಾ ಸ್ವ ವಿಮರ್ಶೆ, ಚಿಂತನೆಗೆ ಎಳೆಸಿದ್ದು ಇದೇ B-ಕ್ಯಾಪಿಟಲ್ ಪುಸ್ತಕ!

ಇಡೀ ಪುಸ್ತಕದಲ್ಲಿ ನನಗೆ ಬಲು ಮೆಚ್ಚುಗೆಯಾದ ಭಾಗವೆಂದರೆ “ಪರರ ಮನೆಯ ಪರಸಂಗ”. ಓದುತ್ತಿರುವಂತೇ ನಾನೇ ಅಲ್ಲಿ ಬರೆದಂತೆ ಭಾಸವಾಯ್ತು. ಬೆಂಗಳೂರಿಗೆ ಬಂದು ೧೨ ವರುಷಗಳಾದ್ವು. ಈವರೆಗೂ ಏಳು ಮನೆಗಳನ್ನು ಬದಲಾಯಿಸಿದ್ದೇವೆ. ಪ್ರತಿ ಸಲ ಬದಲಾಯಿಸುವಾಗಲೂ ಥತ್.. ಇದೆಂಥಾ ಗೋಳು.. ಕಷ್ಟದ ಬಾಳು.. ಸ್ವಂತದ್ದು ಅಂತ ಒಂದಿದ್ರೆ ಈ ಎಲ್ಲಾ ಪರದಾಟಕ್ಕೆ ತಿಲಾಂಜಲಿ ಆಗ್ತಿತ್ತು ಎಂದು ಹಳಿದಿದ್ದೇವೆ. ಆದರೆ ಇಲ್ಲಿ ಬರೆದಿರುವಂತೇ ಪ್ರತಿ ಸಲ ಮನೆ ಹುಡುಕುವಾಗಲೂ ಏನೋ ಕಾತುರ, ಖುಶಿ, ಕುತೂಹಲ ಮತ್ತು ನಿರೀಕ್ಷೆ.. ಈ ಸಲದ ಮನೆ ಹೇಗಿದ್ದಿರಬಹುದು? ಯಾವ ಆಕಾರ, ಬಣ್ಣ, ನೆರೆ-ಕೆರೆ, ಗೇಟು, ಹೂದೋಟ, ಜಾಗವನು ಹೊಂದಿರಬಹುದು? ಎಂಬೆಲ್ಲಾ ಕಾತುರತೆಯಿಂದ ಮನೆ ಹುಡುಕುತ್ತಿದ್ದ ಆ ಜೀವಂತಿಕೆಗೆ ಫುಲ್ಸ್ಟಾಪ್ ಬಿದ್ದೀಗ ವರುಷ ಕಳೆದಿದೆ! ನಮ್ಮದೇ ಮನೆಯಾಗಿ ನಾವು ಸ್ಥಳಾಂತರಗೊಂಡಿದ್ದೇವೆ. ಇಲ್ಲೀಗ ಬದುಕು ಒಂದು ಗಮ್ಯವನ್ನು ಸೇರಿದಂತೆ ಆಗಿದೆ. ಅದೇ ಬಾಡಿಗೆ ಮನೆ ಹುಡುಕುವಾಗ “ಇದು ಬೇಡ.. ಸರಿ ಇಲ್ಲ.. ಅಲ್ಲಿ ಸಮಸ್ಯೆ ಇದೆ..” ಎಂದೆಲ್ಲಾ ಕಡ್ಡಿಗೂ ಗುಡ್ಡ ಮಾಡಿಯೋ.. ಥಟ್ಟನೆ ತಿರಸ್ಕರಿಸಿ, ಮುಂದೆ ಬೇರೆ ಹುಡುಕುವ ಗತ್ತು, ಗಮ್ಮತ್ತು ಇತ್ತು. ಈಗ ಇದ್ದಿರುವ ಮನೆಯೇ ಈವರೆಗೆ ನಾವು ಉಳಿದಿದ್ದ ಮನೆಯೆಲ್ಲದುಕ್ಕಿಂತಲೂ ಅದ್ಭುತ, ಚೆಂದ, ಸರಿಯಾಗಿದೆ ಎಂದುಕೊಳ್ಳಲೇಬೇಕು ಮತ್ತು ಇದು ನಿಜವೂ ಆಗಿದ್ದಿರಬಹುದು. “ಒಳ್ಳೆಯ ಮಾಲೀಕ ಸಿಗುವುದು ಬಾಡಿಗೆದಾರದ ಪುಣ್ಯ, ಒಳ್ಳೆಯ ಬಾಡಿಗೆದಾರ ಸಿಗುವುದು ಮಾಲೀಕನ ಪುಣ್ಯ” ಎಂಬ ಸಾಲು ಬಹಳ ಇಷ್ಟವಾಯಿತು. ಇದನ್ನೋದುತ್ತಿದ್ದಂತೇ ಮನಸು ಬೇರೇನನ್ನೋ ಚಿಂತಿಸಿಬಿಟ್ಟಿತು. ಆತ್ಮ ದೇಹವನ್ನು ತ್ಯಜಿಸಿದ ಮೇಲೆಯೂ ಅದಕ್ಕೆ ಹಳೆಯ ಜನ್ಮದ ಸ್ಮರಣೆಯ, ಪುಣ್ಯ, ಪಾಪ ಫಲಗಳ ವಾಸನೆ ಮೆತ್ತಿಯೇ ಇರುತ್ತದೆ. ಅದರಿಂದ ಬಿಡುಗಡೆ ಬೇಕೆಂದರೆ ಮುಕ್ತಿ ಪ್ರಾಪ್ತಿಯಾಗಬೇಕು. ಇಲ್ಲಾ ಅದು ಮತ್ತೆ ಮತ್ತೆ ಈ ಭವಕ್ಕೇ ಮರಳಿ ಹೊಸ ದೇಹ ಧರಿಸುತ್ತಿರುತ್ತದೆ ಎಂದು ಎಲ್ಲೋ ಓದಿದ್ದೆ/ಹಿರಿಯರಿಂದಲೂ ಕೇಳಿದ್ದೆ. ಅದು ನೆನಪಾಯಿತು. ಒಂದೊಮ್ಮೆ ಇದು ನಿಜವಾಗಿದ್ದರೆ.. ಒಳ್ಳೆಯ ಸ್ಮರಣೆ, ಉತ್ತಮ ವಿಚಾರಗಳಿಂದ ಮೆತ್ತಿರುವ ಆತ್ಮಕ್ಕೆ ಸದೃಢ ದೇಹ ಸಿಗುವುದು.. ಅದೇ ಒಳ್ಳೆಯ ಕಾಯಕ್ಕೆ ಅಷ್ಟೇ ಉತ್ತಮ ಆತ್ಮ ದೊರಕುವುದು ಅದೂ ಪುಣ್ಯವೇನೋ ಎಂದೆನಿಸಿತು. 

ಕೆಲಸದ ಹುಡುಗಿಯ ಪ್ರಕರಣ, ಸೈಕಲ್ ಪ್ರಕರಣ, ಮಗಳಿಗೊಂದು ಗೊಂಬೆ, ನಾಯಿ ಮತ್ತು ಪಾಪಪ್ರಜ್ಞೆ - ಈ ಭಾಗಗಳು ಮಾತ್ರ ಬಹಳ ಕಾಡುತ್ತಿವೆ.. ಕಾಡುವಂಥವು ಕೂಡ.

ಒಂದೊಳ್ಳೆಯ ಓದನ್ನು, ಪ್ರಾಮಾಣಿಕವಾಗಿ ಓದುಗರಿಗೆ ಕೊಟ್ಟಿದ್ದಕ್ಕೆ ಜೋಗಿಯವರಿಗೆ ಧನ್ಯವಾದಗಳು. ಅವರ ಬೆಂಗಳೂರು ಮಾಲಿಕೆಯ ಮುಂದಿನ ಭಾಗಕ್ಕಾಗಿ ಕಾಯುತ್ತಾ...

~ತೇಜಸ್ವಿನಿ.

ಸೋಮವಾರ, ಫೆಬ್ರವರಿ 20, 2017

ಅಂಗೈಯಲ್ಲಿ ಅಡುಗೆ ಮನೆ....

ಈ ವಾರದ (೧೯-೦೨-೨೦೧೭) ನನ್ನ ಉದಯವಾಣಿ ಅಂಕಣವನ್ನೋದಿ ಬಹಳ ಜನ ನನ್ನ ಹೊಸ ಮನೆಯ ಅಡುಗೆಮನೆಯ ವಿಶಿಷ್ಟ ಜೋಡಣೆಯನ್ನು ನೋಡ ಬಯಸಿದ್ದರಿಂದ ಅದರ ಚಿತ್ರಗಳನ್ನು ವಿವರಣೆ ಸಮೇತ ಹಾಕುತ್ತಿದ್ದೇನೆ. ಇದರ ಉದ್ದೇಶ, ನಿಂತು ಅಡುಗೆ ಮಾಡಲು ಅಸಾಧ್ಯವಾದವರು ಇಂಥದ್ದೊಂದು ಸಾಧ್ಯತೆಯ ಬಗ್ಗೆ ಅರಿತುಕೊಳ್ಳಲೆಂಬುದೇ ಆಗಿದೆ. ಅಲ್ಲದೇ, ಹಳೆಯ ಕಾಲದಲ್ಲೂ ಇಂಥದ್ದೇ ಮಾದರಿಯಿತ್ತು.. ಫಿಸಿಯೋ ಥೆರಪಿಸ್ಟ್ಸ್ ಕೂಡ ಸ್ವಸ್ಥರಾಗಿದ್ದವರೂ ಬಹು ಕಾಲ ನಿಂತು ಅಡುಗೆ ಮಾಡುವುದು ಒಳ್ಳೆಯದಲ್ಲ ಆರೋಗ್ಯಕ್ಕೆ ಎಂದೇ ಹೇಳುತ್ತಾರೆ. ಅದಕ್ಕೆಂದೇ ಬಹುಶಃ ಹಿಂದೆ ಕುಳಿತಡಿಗೆಯೇ ಮಾಡುತ್ತಿದ್ದರು!

ಚಿತ್ರ - ೧




ಇದು ನನ್ನ ಅಡಿಗೆ ಕಟ್ಟೆ..  ಸ್ಟೂಲ್ ಇದೆಯಲ್ಲಾ .. ಅದರ ಮೇಲೆ ಕುಳಿತು ಅಡುಗೆ ಮಾಡುತ್ತೇನೆ.. ಒಮ್ಮೊಮ್ಮೆ ಸೀದಾ ಕಟ್ಟೆಯ ಮೇಲೇ ಕುಳಿತು ಒಲೆಯನ್ನು ನನ್ನತ್ತ ತಿರುಗಿಸಿಕೊಂಡು ಮಾಡುವುದೂ ಇದೆ. ಒಲೆಯ ಪೈಪ್ ಬಹಳ ಉದ್ದವಿಟ್ಟುಕೊಂಡು ಸಿಕ್ಕಿಸಿಕೊಂಡಿರುವೆ. ಬೇಕಾದಾಗ ಸಡಿಲಗೊಳಿಸಿಕೊಂಡು ಎಷ್ಟು ದೂರದವರೆಗೂ ಎಳೆದುಕೊಳ್ಳಲು ಸಹಕಾರಿಯಾಗುವಂತೆ. ಅಲ್ಲಿರುವ ಎಲ್ಲಾ ಸಾಮಾನುಗಳೂ ನನಗೆ ಸಿಗುವಂತಿವೆ. ಅಲ್ಲೇ ಪಕ್ಕದಲ್ಲಿ ಕೆಳಗೆ ಸಿಂಕ್ ಇದೆ.

ಚಿತ್ರ - ೨




ಈ ಚಿತ್ರದಲ್ಲಿ ಫ್ರಿಜ್ ಇದೆ. ಅದರ ಬಾಗಿಲು ಕಿಚನ್ ಎಂತ್ರೆನ್ಸ್ ಅಭಿಮುಖವಾಗಿಟ್ಟುಕೊಂಡಿರುವೆ.. ಕಾರಣ.. ವ್ಹೀಲ್ ಚೇರಿನಲ್ಲಿ ಸೀದಾ ಬಂದೂ ಬಾಗಿಲು ತೆಗೆದು ಬೇಕಾದ್ದನ್ನು ಪಡೆಯುವಂತೆ ಇಲ್ಲಾ ಕುಳಿತಿರುವಾಗಲೂ ಸ್ಟೂಲ್ ನಿಂದಲೇ ಬಾಗಿಲು ತೆಗೆದುಕೊಳ್ಳುವಂತೇ.. ಸದ್ಯಲ್ಲೇ ಅಂಥದ್ದೇ ಮರದ ಪುಟ್ಟ ಸ್ಟೂಲ್ ಮಾಡಿಸಿ ಅದ ಕಾಲ್ಗಳಿಗೆ ಪುಟ್ಟ ವ್ಹೀಲ್ಸ್ ಹಾಕಿಕೊಂಡು ಕಿಚ ಸುತ್ತಾ ಕುಳಿತಲ್ಲೇ ತಿರುಗುವಂತೇ ಮಾಡಿಸಿಕೊಳ್ಳಬೇಕೆಂದಿರುವೆ. ಆಫೀಸ್ ಚೇರ್ನಂತೇ. ಅದು ಎತ್ತರವಾಗುತ್ತದೆ.. ಜಾಗ ಬಹಳ ತಿನ್ನುತ್ತದೆ.. ಎಕ್ಸ್‍ಪೆನ್ಸಿವ್ ಕೂಡ. ಅದೇ ಇಂಥಾ ಪುಟ್ಟ ಸ್ಟೂಲ್ ಸಕಲ ರೀತಿಯಲ್ಲೂ ಅನುಕೂಲಕರ. ಯಾರೂ ಬಳಸಬಹುದು. ಉಳಿತಾಯವೂ ಕೂಡ.. ವ್ಹೀಲ್ ಹಾಕಿಸಿಕೊಂಡರೆ ಆಯಿತು ಕೆಳಗೆ.

ಚಿತ್ರ - ೩




ಇದು ಪಕ್ಕದಲ್ಲೇ ಇರುವ ತುಸು ಎತ್ತರದ ಅಡುಗೆ ಕಟ್ಟೆ. ಆದರೆ ಅದರ ಕೆಳಗೆ ಇರುವುದೆಲ್ಲಾ ಕಪಾಟುಗಳು.. ನನಗೆ ಸಿಗುವ ರೀತಿಯಲ್ಲಿವೆ. ಮೇಲಿನ ಕಟ್ಟೆಯಲ್ಲಿ ಬಾಸ್ಕೆಟ್ ಇಡುವೆ. .ವ್ಹೀಲ್‍ಚೇರಿನಲ್ಲಿ ಬಂದಾಗ ಸಿಗುವಂತೆ. ಒಮ್ಮೊಮ್ಮೆ ಅಮ್ಮ ಅಡುಗೆ ಅಲ್ಲೂ ಒಂದು ಸಿಂಕ್ ಇದೆ.. ಕೆಳಗೆ ಬಗ್ಗಲು ತೊಂದರೆ ಆಗುವವರಿಗೆ ಮೇಲೆಯೇ ಕೈ ತೊಳೆಯಲೆಂದು ಒಂದು ಪುಟ್ಟ ಸಿಂಕ್.

ಚಿತ್ರ ೪



ಸಿಂಕ್ ತುಂಬಾ ತಳಮಟ್ಟದಲ್ಲಿದೆ.. ಅಡುಗೆ ಕಟ್ಟೆಯನ್ನು ನಾನು ತೊಳೆದರೂ ನೀರೆಲ್ಲಾ ಅದರೊಳಗೇ ಬೀಳುವಂತಿದೆ. ಅದರ ಮೇಲೆಯೇ ಸೌಟು, ಚಮಚಗಳನ್ನು ತೂಗುಹಾಕುವ ಸ್ಟ್ಯಾಂಡ್. ಸಿಂಕ್ ಪೈಪ್ ಕೂಡ ಅದಕ್ಕೆ ಪೂರಕವಾಗಿ ಬೇಕಾದಂತೆ ಹಾಕಿಕೊಂಡಿರುವೆ. ನೆನಪಿರಲಿ.. ಇದೂ ಅಷ್ಟು ಎಕ್ಸ್‌ಪೆನ್ಸಿವ್ ಅಲ್ಲಾ. :)


ಚಿತ್ರ ೫


ಇದು ಕುಡಿವ ನೀರಿನ ಫ್ಲಿಲ್ಟರ್. ಇದೂ ತಗ್ಗಿನಲ್ಲಿದೆ. ಇದರ ನೀರು ಹೊರಗೆ ಹೋಗಲು ಪೈಪ್ ಕೂಡ ಕೆಳಗಿರಿಸಲಾಗಿದೆ. ಕಟ್ಟೆಯ ಮೇಲೆ ಕುಳಿತರೆ ಸರಾಗವಾಗಿ ನೀರು ಸಿಗುವುದು.

ಚಿತ್ರ ೬




ಫ್ರಿಜ್ ಪಕ್ಕದಲ್ಲೇ ಒಂದು ಪುಟ್ಟ ಕಪಾಟು. ನನಗೇ ಸಿಗುವಷ್ಟು ಎತ್ತರದಲ್ಲಿದೆ. ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಸಿ ಮಾಡಿಕೊಂಡಿದ್ದು.


ಚಿತ್ರ ೭


ಅಡುಗೆ ಮನೆಯ ಪಕ್ಕದಲ್ಲೇ ಪುಟ್ಟ ಸ್ಟೋರೇಜ್, ಹಾಗೆಯೇ ಅತ್ತ ಕಡೆ (ಮಿಶನ್ನಿಗೆ ಅಭಿಮುಖವಾಗಿದೆ.. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ..) ಕುಳಿತೇ ಪಾತ್ರೆ, ಸಣ್ಣ ಪುಟ್ಟ ಬಟ್ಟೆ ತೊಳೆಯುವ ಜಾಗ ಮತ್ತು ವಾಶಿಂಗ್ ಮೆಶಿನ್ ಇಟ್ಟಿದ್ದೇವೆ. ನಾನೇ ಬಟ್ಟೆಗಳನ್ನು ಕೆಳಗೇ ಕುಳಿತೂ ತೊಳೆಯಬಹುದು.. ಇಲ್ಲಾ ಮಿಶಿನ್ನಿಗೆ ಹಾಕಿ ತೊಳೆಯಲೂಬಹುದು. ಇನ್ನು ಬಹು ಮುಖ್ಯವಾಗಿ ಅಲ್ಲಿ ಹಾಲಿನಲ್ಲಿ ಚೌಕಾಕಾರದ ಬಾಗಿಲು ಕಾಣಿಸುವುದೇ? ಅದೇ ಲಿಫ್ಟ್ ಬಾಗಿಲು. ಕಡಿಮೆ ವೆಚ್ಚದಲ್ಲಿ ಬೇಸಿಕ್ ಸೆಟ್ಟಿಂಗ್ಸ್ ಮೂಲಕ ಸ್ಪೆಶಲ್ ಆಗಿ ಚೆನ್ನೈನಿಂದ ಜನ ಕರೆಸಿ ಡಿಸೈನ್ ಮಾಡಿಸಿದ್ದು. ಮಾಮೂಲಿ ಲಿಪ್ಟ್ ಆದರೆ ತುಂಬಾ ಖರ್ಚಾಗುವುದು.

ಇದಿಷ್ಟು ನನ್ನ ಪುಟ್ಟ ಅಡುಗೆಮನೆ :) ನಮ್ಮದು ೩೦*೪೦ ಕಾರ್ನರ್ ಸೈಟ್. ಅದರೊಳಗೇ ಸಾಕಷ್ಟು ವಿಶಾಲವಾಗಿ.. ಸರಾಗವಾಗಿ ವ್ಹೀಲ್‍ಚೇರ್ ತಿರುಗುವಂತೇ, ಜೊತೆಗೇ ನನಗೆ ಬೇಕಾದ ರೀತಿಯಲ್ಲಿ.. ಕೈಯಳತೆಗೆ ಎಟಕುವ ರೀತಿಯಲ್ಲಿ ಆದಷ್ಟು ಡಿಸೈನ್ ಮಾಡಿಸಿಕೊಂಡಿದ್ದು. ಬದುಕಲು ಬೇಕಾಗುವ ಅನುಕೂಲಕ್ಕೆ ಪ್ರಧಾನ ಆದ್ಯತೆ ನೀಡಿದ್ದೇವೆಯೇ ಹೊರತು ಯಾವುದೇ ರೀತಿಯ ದುಬಾರಿ ಇಂಟೀರಿಯರಿಗಲ್ಲ. ಈ ಚಿತ್ರಗಳಿಂದ, ವಿವರಣೆಯಿಂದ ಯಾರೋ ಒಬ್ಬರಿಗೆ ಅನುಕೂಲವಾದರೂ ಅದೇ ಸಂತೋಷ. ಹೆಚ್ಚಿನ ಮಾಹಿತಿಗೆ ನನಗೆ ಮೈಲ್ ಮಾಡಬಹುದು. ಪ್ರಾಮಾಣಿಕ, ನೈಜ ಮೈಲ್‍ಗಳಿಗೆ ಖಂಡಿತ ಉತ್ತರಿಸುವೆ..


~ತೇಜಸ್ವಿನಿ ಹೆಗಡೆ.