ಮಂಗಳವಾರ, ಮೇ 14, 2019

ರಕ್ತಸಿಕ್ತ ರತ್ನ

"ದೇಶ ಸುತ್ತು, ಕೋಶ ಓದು" - ಎಂಬ ಗಾದೆಮಾತು ಎಲ್ಲರಿಗೂ ಗೊತ್ತಿದ್ದದ್ದೇ. ನಾವೆಷ್ಟು ಊರೂರು ತಿರುಗುತ್ತೇವೋ ಅಷ್ಟೂ ಸ್ವಾನುಭವ ಹೆಚ್ಚಾಗುತ್ತದೆ. ಅಂತೆಯೇ ನಾವು ಹೆಚ್ಚೆಚ್ಚು ಓದಿದಷ್ಟೂ ಬೇರೆಬೇರೆ ಊರಿನ, ಅಲ್ಲಿಯ ಜನಜೀವನದ ಪರಿಚಯವಾಗುತ್ತಾ ಹೋಗುತ್ತದೆ. ಒಂದೊಮ್ಮೆ ದೇಶವಿದೇಶ ಸುತ್ತಲಾಗದಿದ್ದರೂ ಸರಿಯೇ… ಪುಸ್ತಕಗಳ ಮೂಲಕ ಜ್ಞಾನದ ಕೋಶವನ್ನು ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಹಲವು ಕಾದಂಬರಿಗಳು, ಪುಸ್ತಕಗಳು ನಮಗೆ ಬಹಳ ಸಹಕಾರಿ. ಅಂಥದ್ದೇ ಒಂದು ಅಪರೂಪದ ಕಾದಂಬರಿ ಡಾ.ಕೆ.ಎನ್.ಗಣೇಶಯ್ಯನವರ ‘ರಕ್ತಸಿಕ್ತ ರತ್ನ’. ಪ್ರಸ್ತುತ ಕಾದಂಬರಿ ಮಾತ್ರವಲ್ಲ, ಅವರ ಬಹುತೇಕ ಕಥೆಗಳು ಹಾಗೂ ಕಾದಂಬರಿಗಳೂ ಕಥೆಯ ನೇಯ್ಗೆಯೊಳಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ತೆರೆದಿಡುತ್ತವೆ. ಕರಿಸಿರಿಯಾನ, ಕನಕ ಮುಸುಕು, ಪದ್ಮಪಾಣಿ, ಶಾಲಭಂಜಿಗೆ, ಕಪಿಲಿಪಿಸಾರ – ಇವಿಷ್ಟನ್ನು ಸದ್ಯ ಓದಿದ್ದು, ಉಳಿದ ಪುಸ್ತಕಗಳನ್ನು ಒಂದೊಂದಾಗಿ ಓದಲು ತೆಗೆದಿಟ್ಟಿದ್ದೇನೆ.

‘ರಕ್ತಸಿಕ್ತ ರತ್ನ’- ಈ ಕಾದಂಬರಿಯನ್ನೋದುತ್ತಿರುವಾಗ ನನಗೆ ಥಟ್ಟನೆ ನೆನಪಿಗೆ ಬಂದಿದ್ದು ಎರಡು ವಿಷಯಗಳು! ಒಂದು `ಬ್ಲಡ್ ಡೈಮಂಡ್' ಎಂಬ ಪ್ರಸಿದ್ಧ ಇಂಗ್ಲೀಶ್ ಚಲನಚಿತ್ರ ಮತ್ತೊಂದು ನನ್ನದೇ ಒಂದು ಬಾಲ್ಯದ ಘಟನೆ.
ಬ್ಲಡ್ ಡೈಮೆಂಡ್ ಚಿತ್ರದಲ್ಲೂ ಅಷ್ಟೇ…. ವಜ್ರದ ಆಸೆಗೋಸ್ಕರ ಅದೂ ತಿಳಿ ರಕ್ತವರ್ಣದೊಂದು ಅಪರೂಪದ ಒಂದು ವಜ್ರದ ಹಿಂದೆ ಬಿದ್ದು ಮನುಷ್ಯತ್ವ ಹೇಗೆ ಪಶುಗಿಂತ ಕಡೆಯಾಗಿಬಿಡುತ್ತದೆ… ಸಣ್ಣ ಗುಲಗುಂಚಿ ಗಾತ್ರದ ವಜ್ರದ ಹಿಂದೆಯೂ ಅದೆಷ್ಟೆಲ್ಲಾ ರಕ್ತ ಹರಿಸುವಿಕೆ ಇದ್ದಿರುತ್ತದೆ ಎಂಬುದನ್ನು ಮನಮುಟ್ಟುವಂತೇ ತೋರಿಸಲಾಗಿದೆ.
ಇನ್ನು ಬಾಲ್ಯದಲ್ಲಿ ನಡೆದ ಒಂದು ಘಟನೆಯ ಕುರಿತು… - ಚಿಕ್ಕಂದಿನಿಂದಲೂ ನನಗೆ ಬಣ್ಣಬಣ್ಣದ ಹರಳುಗಳು, ವಿವಿಧ ವಿನ್ಯಾಸದ ಕಲ್ಲುಗಳನ್ನು ಒಟ್ಟು ಹಾಕುವ ಹುಚ್ಚಿತ್ತು.. (ಈಗಲೂ ಏನೂ ಕಡಿಮೆ ಆಗಿಲ್ಲ! ವಸುಧೇಂದ್ರ ಅನುವಾದಿಸಿದ ಮಿಥುನ ಕಥಾ ಸಂಕಲನದಲ್ಲಿ ಬರುವ ‘ನೀಲಿ ಸೋಡಾಗೋಲಿ’ ಕಥೆ ಓದಿ ಒಂದುಡೀ ವಾರ ಕಳೆದುಹೋಗಿದ್ದೆ. ಬಾಲ್ಯದಿಂದಲೂ ನಾನು ಹುಡುಕುತ್ತಿದ್ದುದೇ ನೀಲಿ ಸೋಡಾಗೋಲಿಯಾಗಿದ್ದು, ಅದಿನ್ನೂ ನನ್ನ ಖಜಾನೆ ಸೇರಿಲ್ಲವೆಂಬ ಬೇಜಾರು ಕಥೆ ಓದಿ ಮತ್ತೂ ಹೆಚ್ಚಾಗಿತ್ತು).
ನಾನಾಗ ಐದನೆಯ ತರಗತಿಯಲ್ಲಿದ್ದೆ. ಗೆಳತಿಯೋರ್‍ವಳು ನನಗೆ ಹೆಬ್ಬೆರಳಿನ ಗಾತ್ರದ ಕೆಂಪು ಹರಳೊಂದು ಕೊಟ್ಟಿದ್ದಳು. ಅದೆಷ್ಟು ಖುಶಿಪಟ್ಟಿದ್ದೆ ಎಂದರೆ… ಅದೆಲ್ಲಿ ಕಳೆದು ಹೋಗಿಬಿಡುವುದೋ ಎಂದು ನಾನು ಮತ್ತು ತಂಗಿ ಸೇರಿ ಮನೆಯ ಹಿತ್ತಲಿನ ಪೊಪ್ಪಾಯಿ ಗಿಡದ ಬುಡದಲ್ಲಿ ಹೂತುಬಿಟ್ಟಿದ್ದೆವು. ಅದಾದ ಒಂದು ವಾರಕ್ಕೇ ಕಾರಣಾಂತರಗಳಿಂದ ಮನೆ ಬಿಟ್ಟು ಬೇರೆ ಕಡೆ ಶಿಫ್ಟ್ ಆಗುವ ಗಡಿಬಿಡಿಯಲ್ಲಿ ಅದನ್ನಲ್ಲಿಂದ ತೆಗೆಯಲೇ ಮರೆತು ಆಮೇಲೆ ಅದೆಷ್ಟೋ ಸಮಯದವರೆಗೂ ಕೊರಗುತ್ತಲೇ ಇದ್ದೆ. ಅದೆಲ್ಲಾ ನೆನಪಾಗಿದ್ದು ಪ್ರಸ್ತುತ ಕಾದಂಬರಿಯನ್ನೋದುವಾಗ!
ಇಲ್ಲಿಯೂ ಅಷ್ಟೇ. ‘ಅಂಗಾ ಮಾಕ್’ ಎಂಬ ಅಪರೂಪದ, ಅತ್ಯಮೂಲ್ಯವಾದ ರಕ್ತವರ್ಣದ ರತ್ನದ ಹಿಂದೆ ಬಿದ್ದು ಏನೇನೆಲ್ಲಾ ಬದಲಾವಣೆ, ಕ್ರಾಂತಿಗಳು ಆಗಿಬಿಟ್ಟವು ಎಂಬುದನ್ನು ೩೭೯ ಪುಟದ ಈ ಕಾದಂಬರಿ ತೆರೆದಿಡುತ್ತಾ ಹೋಗುತ್ತದೆ. ಕಾದಂಬರಿಯಲ್ಲಿ ರೋಚಕತೆ, ಪತ್ತೇದಾರಿಕೆ ಇದ್ದರೆ ಕುತೂಹಲ ಕಟ್ಟಿಕೊಂಡು ಓದಿಸಿಕೊಳ್ಳುತ್ತದೆ ನಿಜ. ಆದರೆ ಅದರ ಜೊತೆಗೆ ಇತಿಹಾಸವನ್ನು, ಚರಿತ್ರೆಯನ್ನು, ಚಾರಿತ್ರಿಕ ಘಟನೆಗಳ ವಿವರಗಳನ್ನು ಕಣ್ಣಿಗೆ ಕಟ್ಟುವಂತೇ ಚಿತ್ರಿಸಿದರೆ ಅದು ಸಂಗ್ರಹಯೋಗ್ಯವೆನಿಸಿಕೊಳ್ಳುತ್ತದೆ. ಈ ಪಾಠವನ್ನು ಗಣೇಶಯ್ಯನವರ ಅನೇಕ ಕಾದಂಬರಿಗಳು ಕಲಿಸಿವೆ… ಅದರಲ್ಲೂ ಈ ಪ್ರಸ್ತುತ ಕಾದಂಬರಿ ಹೆಚ್ಚು ಅದನ್ನು ಸ್ಪಷ್ಟಗೊಳಿಸಿದೆ.
ಈವರೆಗೂ ನನಗೆ ಒಂದಾನೊಂದು ಕಾಲದಲ್ಲಿ ನಮ್ಮದೇ ದೇಶದ ಒಂದು ಭಾಗವಾಗಿದ್ದ ಈಗ ನಮ್ಮ ಪಕ್ಕದಲ್ಲಿರುವ ‘ಬರ್ಮ’ ದೇಶದ ಕುರಿತು ಅಂಥಾ ಆಸಕ್ತಿಯಾಗಲೀ, ಕಿಂಚಿತ್ ಮಾಹಿತಿಯಾಗಲೀ ಇರಲಿಲ್ಲ. ಅದು ನಮ್ಮ ನೆರೆಯ ದೇಶ, ಬೌದ್ಧ ಧರ್ಮದವರು ಹೆಚ್ಚಿದ್ದಾರೆ, ಈಗ ಮಯನ್ಮಾರ್ ಎಂದು ಕರೆಯಲ್ಪಡುತ್ತಿದೆ ಎಂದಷ್ಟೇ ಗೊತ್ತಿತ್ತು. ಆದರೆ ಈ ಪುಸ್ತಕವನ್ನೋದುತ್ತಾ ಬರ್ಮಾದ ಪಟ್ಟಣಗಳಾದ ಮಂಡಲೆ, ಮೋಗಾಕ್, ಭಾಗನ್ ಮುಂತಾದ ಪ್ರದೇಶಗಳನ್ನು, ಹಳ್ಳಿಗಳನ್ನು, ಗುಡ್ಡ, ಪರ್ವತವನ್ನು, ಅರಮನೆಗಳನ್ನು.. ಎಲ್ಲಕ್ಕಿಂತ ಹೆಚ್ಚಾಗಿ ಪಗಾಡಗಳನ್ನು ನೋಡುವಂತಾಯಿತು. ನಡುನಡುವೆ ನನಗೆ ಆಸಕ್ತಿ ಹೆಚ್ಚಿಸಿದ ಸ್ಥಳಗಳ ಕುರಿತು, ಪಗಾಡಗಳ ಕುರಿತು ಗೂಗಲ್ ಮಾಡಿ ಅದರ ಚಿತ್ರಗಳನ್ನು, ಇನ್ನಷ್ಟು ವಿವರಗಳನ್ನು ಓದುವಂತಾಯಿತು. ಪಗೋಡದ ಪ್ರಮುಖ ಭಾಗಗಳು ಅದರಲ್ಲೂ ತುತ್ತ ತುದಿಯ ‘ಹಿತಿ ಮತ್ತು ಅದರೊಳಗಿನ ಮಹತ್ವ, ಅಲ್ಲಿಯ ಧಾರ್ಮಿಕ ನಂಬಿಕೆಗಳು, ಬೌದ್ಧ ಗುರುಗಳಿಗಿರುವ ಪ್ರಾಮುಖ್ಯತೆ ಎಲ್ಲವೂ ತೆರೆದುಕೊಳ್ಳುತ್ತಾ ಹೋಯಿತು. ಅಲ್ಲದೇ, ಅಲ್ಲಿಯ ಕೊನೆಯ ರಾಜ ತೀಬಾ ಹಾಗೂ ಆತನ ಪತ್ನಿ ಸುಫಲಾಯತ್ ತಮ್ಮ ಕೊನೆಯ ದಿನಗಳನ್ನು ತಮ್ಮ ದೇಶ, ಜನರಿಂದ ದೂರಾಗಿ, ಭಾರತದ ರತ್ನಗಿರಿ ಅರಮನೆಯಲ್ಲಿ ಅಜ್ಞಾತರಾಗಿ ಕಳೆಯಬೇಕಾಯಿತು ಎಂಬೆಲ್ಲಾ ವಿವರಗಳು, ಹಿನ್ನಲೆಗಳು ತಿಳಿಯುತ್ತದೆ. ಅಲ್ಲದೇ, ರಾಜಮನೆತನದ ಅವಸಾನಕ್ಕೆ ಒಳಗಿನ ದೇಶದ್ರೋಹಿಗಳಲ್ಲದೇ ಸ್ವತಃ ಅರಾಜಕತೆ ಹಾಗೂ ಅದಕ್ಕೆ ಕಾರಣರಾದ ಬ್ರಿಟೀಷರ ಕೊಡುಗೆ ಎಷ್ಟಿತ್ತು ಎಂಬುದೂ ತಿಳಿಯುತ್ತದೆ. ಬ್ರಿಟೀಶರ್ ಕುತ್ಸಿತ ಬುದ್ಧಿ, ದುರುಳತೆ, ದುರಾಸೆಯ ಅನಾವರಣವೂ ಮತ್ತಷ್ಟು ಆಗುತ್ತದೆ. ನಿಧಿ ಎನ್ನುವುದು ಎಂತೆಂಥವರನ್ನು ಇಳಿಸಿ ಬಿಡೂತ್ತದೆ, ಏರಿಸಿಯೂ ಬಿಡುತ್ತದೆ ಎಂಬುದಕ್ಕೆ ಬರ್ಮಾ ದೇಶದ ಅರಸುಮನೆತನದ ಕಥೆಯೇ ಸಾಕ್ಷಿ. ನಾಟಕೀಯ ಅಂಶಗಳು ಕೆಲವೊಂದಿಷ್ಟಿದ್ದರೂ, ಕಲ್ಪನೆಗಳನ್ನು ತುಂಬಿ ಕಟ್ಟಿಕೊಟ್ಟಿದ್ದರೂ ಚಾರಿತ್ರಿಕ ಘಟನೆಗಳ ಅಪರೂಪದ ಮಾಹಿತಿಗಳು, ದಾಖಲೆಗಳು ಪ್ರಮುಖ ಪ್ರದೇಶಗಳ ಚಿತ್ರಣ, ಬಿಕ್ಕುಗಳ ಜೀವನ ಎಲ್ಲವೂ ಸುಸ್ಪಷ್ಟವಾಗಿ ಚಿತ್ರಿತವಾಗಿದೆ. ಸ್ವತಃ ಲೇಖಕರೇ ಅಲ್ಲೆಲ್ಲಾ ಓಡಾಡಿ ಮಾಹಿತಿ ಸಂಗ್ರಹಿಸಿದ್ದರಿಂದ ಕಲ್ಪನೆ ಮತ್ತು ವಾಸ್ತವಿಕತೆಯ ನಡುವಿನ ಅಂತರ ಕಡಿಮೆಯಾಗಿದೆ. ಎಲ್ಲಕ್ಕಿಂತ ಮೈನವಿರೇಳಿಸುವುದು ನಾಗಾ ಪಂಥದವರ ಚಿತ್ರಣ! ಅಂತೆಯೇ ನನಗೆ ಮೋಗಾಕ್ ರತ್ನ ಗಣಿಯ ದಾರುಣ ಚಿತ್ರಣ, ಕ್ರೌರ್ಯ, ಮಾವೋದಿಗಳ ದುಷ್ಟತನ ಇವೆಲ್ಲವೂ ಅರೆಕ್ಷಣ “Lord of the ring” ಚಲನಚಿತ್ರದ Mordor ಅನ್ನು ನಪಿಸಿಬಿಟ್ಟಿತು!
ಹೀಗೆ.. ಕುತೂಹಲದೊಂದಿಗೆ ಆಸಕ್ತಿಯನ್ನು ಹುಟ್ಟಿಸಿ ತಿಳಿವನ್ನು ಹೆಚ್ಚಿಸುವಂತಿದೆ ಕಾದಂಬರಿ. ‘ರೋಚಕ ಕಾದಂಬರಿ’ ಎಂಬ ಟ್ಯಾಗ್ಲೈನ್ ಇದ್ದರೂ ನನಗೆ ರೋಚಕತೆಯ ಬದಲು ವಿಷಯದ ಕುರಿತು ಹೆಚ್ಚೆಚ್ಚು ತಿಳಿದುಕೊಳ್ಳುವತ್ತ ಗಮನ ಜಾರುತ್ತಿತ್ತು. ಎಲ್ಲಕ್ಕಿಂತ ನನ್ನ ಸೆಳೆದದ್ದು ಅಂಗ ಮಾಕ್ ರತ್ನದ ಚಿತ್ರಣ! ಅದನ್ನೊಮ್ಮೆ ಗೂಗಲ್ ಮಾಡಿ ನೋಡುವ ಆಸೆಯಾಗಿ ಸರ್ಫ್ ಮಾಡಿದರೆ.. ಅದು ತಣ್ಣಗೆ, ಬಿಮ್ಮನೆ ಬ್ರಿಟಿಶ್ ರಾಣಿಯ ಮುಕುಟದ ಮಧ್ಯ ಕಂಡಿತಪ್ಪ! ಕೂಡಲೇ ನನಗೆ ನಮ್ಮ ಕೊಹಿನೂರ್ ವಜ್ರದ ನೆನಪಾಯಿತು.
ಈ ಪುಸ್ತಕದ ಮುಖ ಪುಟದಲ್ಲಿರುವ ಕೆಂಪು ವಜ್ರದ ಚಿತ್ರ ನೋಡಿ ಆಕರ್ಷಿತಳಾಗಿ ಇದರ ಕಥೆಗಾಗಿ ಬೆನ್ನ ಹಿಂದೆ ಬಿದ್ದಿದ್ದಾಳೆ ಮಗಳು. ಇನ್ನು ಅವಳಿಗೆ ಕಥೆ ಹೇಳಬೇಕಾಗಿದೆ.
***********************************
ಲೇ: ಡಾ.ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಅಂಕಿತ ಪುಸ್ತಕ
ಪುಟ : ೩೮೪
ಬೆಲೆ: ೩೫೦/-
~ತೇಜಸ್ವಿನಿ ಹೆಗಡೆ

ಕಾಮೆಂಟ್‌ಗಳಿಲ್ಲ: