ಸೋಮವಾರ, ಆಗಸ್ಟ್ 31, 2015

ಕನವರಿಕೆ

ಕಳೆದ ಬಾರಿ ಎಂದು? ಯಾವಾಗ? ಎಲ್ಲಿ? ಒಟ್ಟಾಗಿ ಕುಳಿತು
ಪಾರಿಜಾತದ ಘಮವ ಹೀರಿದೆವು ಹೇಳು?!
ಎದೆಯೊಳಿಹ ಮಧು ಬಟ್ಟಲ ಅದೆಂದು ಹಂಚಿಕೊಂಡೆವು ಹೇಳು?!
ಹಾಲಾಹಲವ ಕುಡಿದ ನೀಲಕಂಠನೇ ಕುಡಿವಾಗೆಲ್ಲೋ,
ಸಿಡಿದ ಹನಿಗಳು ಕಡಲ ಸೇರಿ, ಕಡುನೀಲವಾದ
ಸಾಗರನು, ಜಲಚಕ್ರದ ಪ್ರಭಾವದೊಳು ಸಿಲುಕಿ,
ಅದರೊಳು ಒದ್ದಾಡುತಿಹ ಮೀನಿನಂತಾಗಿಹೆವು ಯಾಕಿಂದು ಹೇಳು?!

ಅತ್ತ ದರಿ, ಇತ್ತ ಪುಲಿ ಎನ್ನುವಂತಿಹ ಪುಟ್ಟ ದಾರಿಯ,
ಇಣುಕಿದರೆ ಸಾಕು ಪ್ರಪಾತದ ಭಯ!
ಸವೆಸುವುದು ಬಲು ಕಷ್ಟ, ಹಿಂತಿರುಗಲಾಗದು ಅದು ‘ಆತನ’ ಆದೇಶ
ಮೇಲೇರ ಹೊರಟರೋ, ಕಾಡುವ ಉಬ್ಬಸ...
ಹೂಕಣಿವೆಯ ಕಲ್ಪನೆಯಲೇ ಮುಗಿಸಿ ಬಿಡೋಣ ಪಯಣ.

ಗಿಜುಗುಡುವ ಸಂತೆಯಲಿ ಮೌನ ತಾಣವ ಅರುಸುವುದು,
ಕಡಲಲೆಯ ತೆರೆಗಳಲಿ ಬೆಳ್ನೊರೆಯ ಆಯುವುದು,
ಮರಳ ಮುಷ್ಟಿಯೊಳಿಟ್ಟು ಕಾಲವ ಬಂಧಿಸುವುದು.
‘ಕನ್ನಡಿಯೊಳಗಿನ ಗಂಟು ಕಂಡು ಕಳ್ಳ ಕನ್ನವಿಕ್ಕಂತೇ’ ಸರಿ ಬಿಡು!
ಪಲ್ಕಿರಿತು ತಾಳಿಕೊಳುವುದಷ್ಟೇ ಉಳಿದಿರುವುದು ನನಗೂ, ನಿನಗೂ....

~ತೇಜಸ್ವಿನಿ.

1 ಕಾಮೆಂಟ್‌:

sunaath ಹೇಳಿದರು...

ತುಂಬಾ, ತುಂಬಾ ಸುಂದರವಾದ ಕವನ, ತೇಜಸ್ವಿನಿ! ಬಾಳಪಯಣದ ಮೊದಲ ಕನಸುಗಳ ಅಂತ್ಯ, ಪಯಣದಲ್ಲಿ ಹಿಂದಿರುಗಲಾಗದ ಅಸಹಾಯಕತೆ ಹಾಗು ಕೊನೆಯಲ್ಲಿ ಅನಿವಾರ್ಯತೆ ಇವುಗಳನ್ನು ಭಾವಪೂರ್ಣವಾಗಿ ಹಿಡಿದಿದ್ದೀರಿ. ಅಭಿನಂದನೆಗಳು.