ಸರಾಯಿ, ಶರಾಬು, ಹೆಂಡ ಕುಡಿಯುವುದರ ಪರ ಮತ್ತು ವಿರೋಧದ ಬಗ್ಗೆ ಹಲವು ಚರ್ಚೆಗಳು ಬಹಳ ಸಲ ಎದ್ದಿವೆ.. ಏಳುತ್ತಿರುತ್ತವೆ. ಉದಾಹರಣೆಗೆ ಇತ್ತೀಚಿನ ಒಂದು ಘಟನೆಯನ್ನೇ ತೆಗೆದುಕೊಂಡರೆ.... ವಿದ್ಯಾರ್ಥಿನಿಯರಿಬ್ಬರು ಮೋಜಿಗಾಗಿ ವಿಹಾರಕ್ಕೆ ಹೋಗಿ ಕುಡಿದ ಫೋಟೋದಿಂದ ಡಿಬಾರ್ ಆಗಿರುವ ಸುದ್ದಿ ಹಲವೆಡೆ ಸಾಮಾಜಿಕ ತಾಣಗಳಲ್ಲಿ ಕಂಡು ಬಂದಿದೆ. ಈ ಘಟನೆಯ ಸತ್ಯಾಪಸತ್ಯತೆಯ ಬಗ್ಗೆ ತಿಳಿದಿಲ್ಲ. ತಿಳಿದುಕೊಳ್ಳುವ ವಿನಾಕಾರಣ ಕುತೂಹಲ ನನಗಿಲ್ಲ. ಆದರೆ ಅವರು ಹೆಣ್ಣುಮಕ್ಕಳು, ಹೆಣ್ಣುಮಕ್ಕಳು ಕುಡಿಯಬಾರದು, ಗಂಡು ಮಕ್ಕಳು ಕುಡಿಯಬಹುದು ಎಂಬ ತಾರತಮ್ಯ ಭಾವದಿಂದ ನಿರ್ವಹಿಸಿದ್ದರೆ ಅದನ್ನು ಖಂಡಿಸುವೆ. ಇಷ್ಟಕ್ಕೂ ಇದು ಅವರನ್ನು ಡಿಬಾರ್ ಮಾಡಲು ಕಾರಣವಾಗಬಾರದಿತ್ತು.. ತಿಳಿ ಹೇಳಿಯೋ ಇಲ್ಲಾ ಅವರಲ್ಲಿ ವಿಶ್ವಾಸವಿಟ್ಟೋ ತಿದ್ದಬೇಕಿತ್ತು. ಆದರೆ ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಯೂ ತನ್ನದೇ ಆದ ಕೋಡ್ ಆಫ್ ಕಾಂಡೆಕ್ಟ್ ಅನ್ನು ರೂಪಿಸಿರುತ್ತದೆ. ಅವರ ನಿಯಮಾವಳಿಯ ಪ್ರಕಾರ, ಅಸಭ್ಯ ವರ್ತನೆ, ಪೋಲೀಸ್ ಕೇಸು, ಸಾರ್ವಜನಿಕ ದೂರನ್ನು ಪರಿಗಣಿಸಬೇಕಾಗುತ್ತದೆ. ಆದರೆ ಸಂದರ್ಭಾನುಸಾರ ನಿರ್ಧಾರ ತೆಗೆದುಕೊಂಡರೆ ಚೆನ್ನ. ಅದೇನೇ ಇದ್ದರೂ, ಈಗ ನಾನು ಚರ್ಚಿಸುತ್ತಿರುವುದು ಆ ಘಟನೆಯ ನಂತರ ಹೊರ ಹೊಮ್ಮಿದ ವಿವಿಧ ಅಭಿಪ್ರಾಯ, ಕುಡಿತದ ಸಮರ್ಥನೆಗಳನ್ನು ಓದಿದ ಮೇಲೆ ಮತ್ತು ಎಲ್ಲಕ್ಕಿಂತ ಬಹು ಮುಖ್ಯವಾಗಿ ಆ ಸಮರ್ಥನೆಗೋಸ್ಕರ ಲಲಿತಾಸಹಸ್ರನಮಾದ ಕೆಲವೇ ಕೆಲವು ಪದಗಳನ್ನು ಬಳಸಿಕೊಂಡದ್ದು ಅದೆಷ್ಟು ಅಸಂಬದ್ಧ ಎನ್ನುವುದನ್ನು ವಿವರಿಸಲು.
ಕುಡಿತದಂಥ ವ್ಯಸನ ನನ್ನ ಮಟ್ಟಿಗೆ ಸಹನೀಯವಲ್ಲ. ನಾನು ಈ ಕುಡಿತ, ಡ್ರಗ್ಸ್, ಧೂಮ್ರಪಾನ, ಇನ್ನಿತರ ಅನಾರೋಗ್ಯಕರ ಚಟುವಟಿಗಳನ್ನು ಯಾವುದೇ ‘ಲಿಂಗ ಬೇಧ’ವಿಲ್ಲದೇ ಖಂಡಿಸುತ್ತೇನೆ. ಮೊದ ಮೊದಲು ಹವ್ಯಾಸವಾಗಿರುವ ಇವುಗಳೆಲ್ಲಾ ಅದೆಂತು? ಹೇಗೆ? ಚಟವಾಗಿ, ವ್ಯಸನವಾಗಿ ನಮ್ಮನ್ನು ಬಲಿ ತೆಗೆದುಕೊಳ್ಳಬಲ್ಲವು ಎಂಬುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ, ಓದಿರುತ್ತೇವೆ. ಅದರಲ್ಲೂ ಎಳವೆಯಲ್ಲಿ, ವಿದ್ಯಾರ್ಥಿ ಜೀವನದಲ್ಲಿ ಈ ಕ್ಷಣಿಕ ಸುಖಕ್ಕಾಗಿ ಬಲಿಯಾದವರು ಅಸಂಖ್ಯ. ಅದಕ್ಕೆ ಹುಟ್ಟಿರುವ, ಹುಟ್ಟುತ್ತಿರುವ ಮನಃಪರಿವರ್ತನೀಯ ಶಾಖೆಗಳೇ ಸಾಕ್ಷಿ! ಇದನ್ನು ಒಂದು ‘ಮೋಜು’ ‘ತಪ್ಪಿಲ್ಲ’ ಎನ್ನುವ ಸಮರ್ಥನೆಗೆ ಪುರಾಣ, ದೇವ, ದೇವಿ, ಸ್ತುತಿಗಳ ಉದಾಹರಣೆ ತೆಗೆದುಕೊಳ್ಳುತ್ತಾರೆ. ಆದರೆ ನನಗೆ ಅನಿಸಿದ್ದು.. ಅದೆಂತು ಇದು ಲೌಕಿಕವಾಗಿ ಮತ್ತು ಅಲೌಕಿಕವಾಗಿ ಭಿನ್ನವಾಗಿದೆ ಎಂಬುದನ್ನು ತಿಳಿಯದೇ ಪ್ರತಿಪಾದಿಸುತ್ತಾರಪ್ಪಾ ಎಂದು! ಈ ಕಾಲದ ವ್ಯಸನಕ್ಕೆ, ಮೋಜಿಗೆ ಆ ಅಲೌಕಿಕ, ಆಧ್ಯಾತ್ಮಿಕ ಉದಾಹರಣೆಗಳನ್ನು ತೆಗೆದುಕೊಳ್ಳುವುದು ವಿತಂಡವಾದವಾಗುವುದು, ಅಸಮ್ಮತವೆನಿಸುವುದು ಎಂಬುದನ್ನು ತುಸು ವಿಶ್ಲೇಷಿಸಿ ಬರೆಯುತ್ತಿದ್ದೇನೆ. ಇದು ನನ್ನ ಓದಿನ ಪರಿಧಿ, ತಿಳಿದವರ, ಅರಿತವರ ಜೊತೆಗಿನ ಚರ್ಚೆ, ಮನದೊಳಗಿನ ಮಂಥನ ಇವುಗಳಿಂದ ಹುಟ್ಟಿದ್ದು. ಇಷ್ಟವಾಗುವುದು ಬಿಡುವುದು ಅವರವರಿಗೆ ಬಿಟ್ಟದ್ದು. ಯಾವುದೇ ಹೇರಿಕೆ, ಒತ್ತಾಯ, ವೈಯಕ್ತಿಕೆ ನಿಂದನೆಗಳಿಗಲ್ಲ.
ದೇವಿ, ದೇವ, ದೇವತೆಯರು, ಪುರಾಣಗಳು ಇವನ್ನೆಲ್ಲಾ ನಂಬದವರು ಅದೆಂತು ಅಲ್ಲಿಯ ಉದಾಹರಣೆಗಳನ್ನು ತಮ್ಮ ದೌರ್ಬಲ್ಯಗಳ ಸಮರ್ಥನೆಗೆ ತೆಗೆದುಕೊಳ್ಳುವರು? ಎಂಬುದು ನನ್ನ ಪ್ರಥಮ ಪ್ರಶ್ನೆ.
ಎರಡನೆಯ ಬಹು ಮುಖ್ಯವಾಗಿ ಲಲಿತಾಸಹಸ್ರನಾಮದಲ್ಲಿ ಬರುವ ‘ಮದ’ ಅನ್ನೋ ಪದದ ಬಗ್ಗೆ
ಲಲಿತಾ ಸಹಸ್ರನಮಾಮ ಹಾಗೂ ಇನ್ನಿತರ ಪುರಾಣ ಸ್ತುತಿಗಳಲ್ಲಿ ಬರುವ ಈ ಮಧುಪಾನದ ಸಂದರ್ಭ. ಅಲ್ಲಿ ಬರುವ ಸುರಪಾನ, ಸೋಮರಸ, ಅಮೃತಪಾನ ಇವೆಲ್ಲಾ ಇಂದಿನ ಗಡಂಗು, ಶರಾಬು, ಸೇಂದಿ, ಹಲವು ರಾಸಯನಿಕ ಕ್ರಿಯೆಗಳಿಗೊಳಪಟ್ಟ ವಿವಿಧ ರೀತಿಯ ಮತ್ತಿನ ಪಾನೀಯಗಳೊಂದಿಗೆ ಸಮೀಕರಿಸುವುದು, ಸಾಮ್ಯ ಕಲ್ಪಿಸುವುದು ಸಲ್ಲ ಮತ್ತು ಅದು ಹಾಗಿಲ್ಲವೂ ಇಲ್ಲ. ಲಲಿತಾ ಸಹಸ್ರನಾಮದಲ್ಲಿ ಕಾದಂಬಿನಿ ಪ್ರಿಯ ಅಂದರೆ ಕಾದಂಬನಿ ವೃಕ್ಷದ ರಸದಿಂದ ಉನ್ಮತ್ತಳಾದ ಅನ್ನೋ ಅರ್ಥದಲ್ಲಿ, ಮದಶಾಲಿನಿ, ವಾರುಣಿ ಮದ ವಿಹ್ವಲ ಇತ್ಯಾದಿ ಪದಗಳಿವೆ. ಅಲ್ಲಿಯ ದೇವಿಯ ಅಲೌಕಿಕ ಉನ್ಮತ್ತ ಸ್ಥಿತಿಗೂ, ಇಂದು ಕುಡಿದು ನಶೆಯೇರಿಸಿಕೊಂಡು ಹದ ತಪ್ಪುವ ಸ್ಥಿತಿಗೂ ಎತ್ತಣ ಸಾಮ್ಯ?! ಇನ್ನು ಆ ದೇವಿ ಸ್ವರೂಪವೇ ನಮಗಿಂತ ವಿಭಿನ್ನ. ಅವಳದು ಅಲೌಕಿಕ ಶರೀರ. ಕಾದಂಬಿನಿ ರಸ ಪ್ರಿಯೆ ಅಂದರೆ ಇಲ್ಲಿಯ ಮನುಷ್ಯರು ತಮ್ಮ ಗ್ಲಾಸಿಗೆ ಶರಾಬು ಸುರಿದು ಕುಡಿದಂತೆಯೂ ಅಲ್ಲ. ನಮ್ಮಂಥ ಸಾಮಾನ್ಯರ ಊಹೆಗೂ ನಿಲುಕದ ವಿರಾಟ್ ಸ್ವರೂಪವನ್ನು ಲಲಿತಾ ಸಹಸ್ರನಾಮದಲ್ಲಿ ಕಟ್ಟಿಕೊಡಲಾಗಿದೆ.
ಶ್ರೀಯುತ ತೋಳ್ಪಾಡಿಯವರೊಡನೆ ಲಲಿತಾ ಸಹಸ್ರನಾಮದಲ್ಲಿ ಬರುವ ಈ ಪದಗಳ ಹಿಂದಿನ ಒಳಾರ್ಥಗಳ ಕುರಿತು ಚರ್ಚೆ ನಡೆಸಿದಾಗ ನನ್ನ ಅರಿವಿಗೆ ನಿಲುಕಿದ್ದು ಇಷ್ಟು. :- ಲಲಿತಾ ಸಹಸ್ರನಾಮ ಒಂದು ಆಧ್ಯಾತ್ಮಿಕ ಸಾಧನೆ, ಉಪಾಸನೆ. ನಾವು ಲೌಕಿಕ ಭೋಗ ವಸ್ತುವೇ ವಾಸ್ತವ, ಇದುವೇ ಜೀವನ, ಇದೇ ಸತ್ಯ ಎಂದಾದಲ್ಲಿ ಈ ಉಪಾಸನೆಯ ಅಗತ್ಯತೆಯಾದರೂ ಯಾಕೆ? ಆಂತರಿಕವಾಗಿ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಪ್ರಜ್ಞೆಗೆ ಬೇರೆಯಾದ ಸ್ತರವಿದೆ ಎಂದು. ನಮ್ಮ ಒಳಗೆ ಒಂದು ತುಡಿತವಿದೆ. ನಾವು ಪ್ರಪಂಚಕ್ಕೆ ತೋರಿಸುವುದು ಒಂದು, ವಾಸ್ತವಿಕವಾಗಿ ಇರುವುದು ಒಂದು. ಇವುಗಳೆರಡರ ನಡುವೆ ನಿರಂತರ ತಾಕಲಾಟವಿರುತ್ತದೆ. ನಮ್ಮ ಒಳಗಿನ ತುಡಿತವ ತಿಳಿಯಲು, ಅರಿಯಲು ಬಹಿರ್ಮುಖ ಸಾಧನಗಳಿಂದ ಅಸಾಧ್ಯ. ಇದು ಹೊರಗಿನ ವ್ಯವಹಾರಕ್ಕೆ ಸಿಗದ್ದು. ಅಂತರ್ಮುಖ ವ್ಯವಹಾರ ತಿಳಿಯಲು ಈ ಆಧ್ಯಾತ್ಮಿಕ ಸಾಧನೆ, ಉಪಾಸನೆ ಎಲ್ಲವೂ ಅತ್ಯಗತ್ಯ. ಲೋಕಕ್ಕೆ ನಾವು ಏನನ್ನು ತೋರಬಯಸುವೆವು? ಲೋಕ ನಮ್ಮನ್ನು ಹೇಗೆ ಕಾಣಬಯಸುತ್ತದೆ? ಎಂಬುದನ್ನು ದಾಟದೇ ಆಧ್ಯಾತ್ಮಿಕ ಸಾಧನೆ ಅಸಾಧ್ಯವಾದ್ದು. ಅಂತಹದ್ದು ಬೇಕಾಗೂ ಇಲ್ಲ. ಇನ್ನು ಲಲಿತಾಸಹಸ್ರನಾಮದಲ್ಲಿ ಬರುವ ಮದೋನ್ಮತ್ತ ಸ್ಥಿತಿ :- ಇದು ಆಧ್ಯಾತ್ಮಿಕ, ಅಲೌಕಿಕ ಉನ್ಮತ್ತ ಸ್ಥಿತಿ. ಈ ಉನ್ಮತ್ತತೆಗೆ ಒಳಗಾಗುವವರು ಬಾಹ್ಯದ ನಶೆಯಿಂದ ಬೇರ್ಪಟ್ಟು ಮೇಲ್‍ಸ್ತರಕ್ಕೆ ಒಯ್ಯಲ್ಪಡುತ್ತಾರೆ. ಅಂದರೆ ಅಲೌಕಿಕ ಉನ್ಮತ್ತ ಸ್ಥಿತಿಗೆ ಯಾವುದೇ ಬಾಹ್ಯ ವಸ್ತುವಿನ ಪ್ರಲೋಬನೆ ಇರುವುದಿಲ್ಲ.. ಬೇಕಾಗೂ ಇಲ್ಲ. ಅಂಥದ್ದು ನಮ್ಮನ್ನು ಮೇಲೇರಿಸುತ್ತದೆ. ಅದೇ ಬಾಹ್ಯ ವಸ್ತುಗಳಾದ, ನಶೆಯನ್ನೇರಿಸುವ ಕುಡಿತ, ಮಾದಕ ವಸ್ತುಗಳೆಲ್ಲಾ ನಮ್ಮನ್ನು ಉನ್ಮತ್ತಗೊಳಿಸಿದರೂ ಮತ್ತಷ್ಟು ದುರ್ಬಲಗೊಳಿಸುವಂಥವು, ಅಧಃಪತನಕ್ಕೆ ಎಳೆಸುವಂಥವು. ಹೀಗಿರುವಾಗ ದೇವ, ದೇವಿ, ಶಕ್ತಿಯನ್ನು ಅವರ ಆ ವಿರಾಟ್ ಸ್ವರೂಪವನ್ನು, ಉನ್ಮತ್ತತೆಯನ್ನು ಲೌಕಿಕತೆಗೆ ಎಳೆದು ತಂದು ಸಮರ್ಥಿಸಿಕೊಳ್ಳುವುದು, ಸಮರ್ಥಿಸುವುದು ನಮ್ಮ ದೌರ್ಬಲ್ಯಗಳನ್ನು ಅಡಗಿಸಿಕೊಳ್ಳಲು ಮಾಡುವ ಕ್ರಿಯೆ.. ತಿರುಚುವ ಪ್ರಕ್ರಿಯೆಯಾಗುತ್ತದೆ.
ಲಲಿತೆ ನಿಶ್ಚಲ, ನಿರಂಹಾಕಾರಿ, ‘ಮದನಾಶಿನಿ’, ‘ಮಧುಪ್ರೀತಾ’ ಭೀಭತ್ಸ, ಭಯಂಕರಿ, ಅಭಯಂಕರಿ, ಮನಸ್ವಿನಿ, ಮಾನವತಿ, ವಿಶ್ವಮಾನ್ಯ, ಇಚ್ಛಾಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಸ್ವರೂಪಿ, ನಿರ್ಮಲ (ಅವಳನ್ನು ಹಾಗೆ ಕಾಣುವವರಿಗೆ) ಇತ್ಯಾದಿ ಗುಣ ವಿಶೇಷಣಗಳಿಂದ, ಅಲಂಕಾರಗಳಿಂದ ಸಹಸ್ರನಾಮದಲ್ಲಿ ಸ್ತುತಿಸಲ್ಪಟ್ಟವಳು. ಸರ್ವವನ್ನೂ ಒಳಗೊಂಡವಳು.. ಅಬೇಧ್ಯಳು, ಚಿದೇಕರಸರೂಪಿಣಿ ಲಲಿತೆ. ಅಲ್ಲದೇ, ಆಕೆ ಹೊರಜಗತ್ತಿಗೆ ಕಾಣಿಸಲಾರದಂಥವಳು, ಒಳಗಣ್ಣಿಗೆ ಪ್ರಕಟಗೊಳ್ಳುವವಳು. ಆಕೆ ಎಲ್ಲಾ ಗುಣವಿಶೇಷಣಗಳಿಂದ ಪ್ರಕಟಗೊಳ್ಳುವಾಗ ಅವಳ ವಿರಾಟ್ ಸ್ವರೂಪ ತೆರೆದುಕೊಳ್ಳುವುದು. (ಅಂತರ್ಮುಖ ಸಮಾರಾಧ್ಯ, ಬಹುರ್ಮುಖ ಸುದುರ್ಲಭ) ಯುದ್ಧ ಸಮಯದಲ್ಲಿ, ಶತ್ರು ಸಂಹಾರಕ್ಕಾಗಿ, ದುಷ್ಟರಿಗೆ ಭೀಭತ್ಸ ಭಯಂಕರಿಯಾಗಿ ಹೂಂಕರಿಸುತ್ತಾ, ‘ಮದವೇರಿಸಿಕೊಂಡು’ ಹೊರಡುತ್ತಾಳೆ. ಹಾಗಾಗಿ ಯಾವುದೇ ಒಂದು ಪದವಾದ - ಮಧು, ಮದ ಇತ್ಯಾದಿಗಳಿಂದ ‘ಮಾತ್ರ’ ವಿಶ್ಲೇಷಿಸುವುದು ಅಸಮಂಜಸ, ಅಸಮ್ಮತ. ಇಷ್ಟಕ್ಕೂ ಲಲಿತೆ ಯಾವುದೇ ಇದ ಮಿತ್ಥಂ ಅನ್ನೋ ಅರ್ಥಕ್ಕೆ ಸಿಗದಂಥವಳನ್ನು, ಎಲ್ಲವನ್ನೂ ದಾಟಿ ಬೆಳೆವ ವಿರಾಟ್ ಶಕ್ತಿ.
ಕೊನೆಯದಾಗಿ :- ವೇದ, ಪುರಾಣಗಳು, ಸ್ತುತಿಗಳಿಗೂ, ಲೌಕಿಕತೆಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಅಲೌಕಿಕ/ಆಧ್ಯಾತ್ಮಿಕ. ಮತ್ತೊಂದು ಲೌಕಿಕ/ಬಾಹ್ಯ. ಅಲ್ಲಿಯ ಸುರಪಾನವನ್ನು, ಸೋಮರಸ ಪದಗಳನ್ನು ಬಳಸಿಕೊಂಡು, ಇಲ್ಲಿನ ಕಳ್ಳಿಗೆ, ಶರಾಬಿಗೆ ಇಳಿಸುವುದು, ತಿರುಚುವುದು ಖೇದಕರ. ಇದಕ್ಕೆ ಯಾವುದೇ ಲಿಂಗ ತಾರತಮ್ಯವನ್ನು ತಳುಕು ಹಾಕುವುದೂ ಅಮಾನ್ಯ. ಮೋಜಿಗಾಗಿ ಸ್ವೇಚ್ಛೆಗಾಗಿ ಯಾವುದನ್ನೇ ನೆಚ್ಚಿಕೊಂಡರೆ ಅದೇ ವ್ಯಸನ, ಚಟವಾಗುವುದರಲ್ಲಿ ದೂರವಿಲ್ಲ. ಸ್ವಾತಂತ್ರ್ಯಕ್ಕೂ, ಸ್ವೇಚ್ಛೆಗೂ ಇರುವ ವ್ಯತ್ಯಾಸ ತಿಳಿಯದ ಹಗಲುಗುರುಡು ವೇದ, ಪುರಾಣಗಳೆಲ್ಲಾ, ಉಪಾಸನೆಗಳಲ್ಲಿ ಇರುವುದನ್ನು ತಿರುಚಲು ಯತ್ನಿಸುತ್ತದೆ. ನಮ್ಮ ದೌರ್ಬಲ್ಯಗಳಿಗೆ ಹೇಗೆ ಅವು ಸಮರ್ಥನೀಯವಾಗಬಲ್ಲವು, ಉತ್ತರವಾಗಬಲ್ಲವು ಎಂಬ ಹುಡುಕಾಟಕ್ಕೆ ಕಾರಣವಾಗುವ ಅಪಾಯಗಳು ಬಹಳ ಇವೆ. ವ್ಯಸನ ಮುಕ್ತ ಭಾರತದತ್ತ ಎಲ್ಲರೂ ಅದರಲ್ಲೂ ಯುವ ಜನತೆ ಮುಂದಾಗುವುದು ಇಂದಿನ ತುರ್ತು. ತಮಗೆ ತೋಚಿದಂತೇ ತಾವು ಸೀಮಿತಾರ್ಥದಲ್ಲಿ ಅರ್ಥೈಸಿಕೊಂಡಂತೇ ಅಲ್ಲೆಲ್ಲೋ ಕುಡಿದ್ದಾರೆ, ನೀವೂ ಕುಡಿಯಿರಿ ಅದು ನಿಮ್ಮ ಸ್ವಾತಂತ್ರ್ಯ ಅನ್ನೋದು ನೋವಿನ ಸಂಗತಿ.
Disclaimer :- ನೈತಿಕ ಬದುಕನ್ನು ಅನುಸರಿಸುವ, ಆ ದೃಷ್ಟಿಕೋನವನ್ನು ಬೆಂಬಲಿಸುವ ಬಯಕೆಯಿದ್ದಲ್ಲಿ ಕಾಣುವುದೆಲ್ಲಾ ನೈತಿಕವಾಗೇ ಇರುತ್ತದೆ. ಹಾಗಾಗಿ ನಾನು ಈ ಲೇಖನ ಬರೆದದ್ದು ಆ ದೃಷ್ಟಿಕೋನವನ್ನಿಟ್ಟುಕೊಂಡು. ಇದು ಸಮರ್ಥನೀಯವಲ್ಲ, ಸರಿಯಿಲ್ಲ ಎಂದು ತಾವು ತಿರುಚಿ ಅರ್ಥೈಸಿಕೊಂಡ ವ್ಯಾಖ್ಯಾನಗಳ ಮೂಲಕ ವಿತಂಡ ವಾದಕ್ಕೆ ಬರುವವರಿಗೆ ಉತ್ತರಿಸಿ ಫಲವಿಲ್ಲ. :)
~ತೇಜಸ್ವಿನಿ.
2 ಕಾಮೆಂಟ್‌ಗಳು:
ನಿಮ್ಮ ವ್ಯಾಖ್ಯಾನ ಅರ್ಥಪೂರ್ಣವಾಗಿಯೂ, ವಸ್ತು ನಿಷ್ಟವಾಗಿಯೂ ಇದೆ...ನಿಮ್ಮ Disclaimer is a clincher..ಸಂತೋಷವಾಯಿತು! ~ನಾಗೇಶ್ ಕುಮಾರ್ ಸಿ ಎಸ್, ಚೆನ್ನೈ
ಜಗದಂಬೆಯ ಉನ್ಮನೀ ಸ್ಥಿತಿಯನ್ನು ಸಾಧ್ಯವಾದಷ್ಟು ವರ್ಣಿಸಲೆಂದೇ, ‘ಮದಶಾಲಿನೀ’ ಮೊದಲಾದ ವಿಶೇಷಣಗಳನ್ನು ಸಾಧಕರು ಬಳಸಿದ್ದಾರೆ. ಶಂಕರಾಚಾರ್ಯರೂ ಸಹ ‘ಮುನಿಕದಂಬ ಕಾದಂಬಿನೀಮ್’ ಎಂದು ಹೇಳಿಲ್ಲವೆ? ಲೌಕಿಕ ಮದದಲ್ಲಿ ಮುಳುಗಿದವರಿಗೆ, ಈ ‘ಅಲೌಕಿಕ ಮದವು’ ಅರ್ಥವಾಗಲು ಸಾಧ್ಯವೆ? ನಿಮ್ಮ ಲೇಖನವು ಸಂಶಯಾತ್ಮರ ಕಣ್ಣು ತೆರೆಯಿಸುವುದು ಎಂದು ಆಶಿಸುತ್ತೇನೆ.
ಕಾಮೆಂಟ್ ಪೋಸ್ಟ್ ಮಾಡಿ