ಎಲ್ಲಿಯವರೆಗೆ ಪರಿಸ್ಥಿತಿ ವಿಚಾರದ ಸಾಧ್ಯಾಸಾಧ್ಯತೆಯ ಅಂಕೆಯಲ್ಲಿ ಇರುತ್ತದೆ, ಅಲ್ಲಿಯವರೆಗೆ ವೈಚಾರಿಕತೆ ಕೆಲಸ ಮಾಡಬಲ್ಲದು. ಎಲ್ಲಿ ವಿಚಾರದ ಅಂಕೆಗೆ ಸಿಕ್ಕದ ತೊಡುಕು ಉಂಟಾಗುತ್ತದೆ, ಅಲ್ಲಿ..... ಬುದ್ಧಿವಂತ ಕೆಂಗೆಡುತ್ತಾನೆ. ಶ್ರದ್ಧಾವಂತ ದೇವರಿಗೆ ಮೊರೆ ಹೋಗುತ್ತಾನೆ. ದೇವರನ್ನು ನಂಬದವನಿಗೆ ದೇವರೇ ಗತಿ. ಒಳಗೆಯೇ ಕನಲಿ ಬೆಂಡಾಗುತ್ತಾನೆ.
****
ಯುದ್ಧದ ಬೆದರಿಕೆ ಹಾಕಬೇಕೇ ಹೊರತು ಪ್ರತ್ಯಕ್ಷ ಯುದ್ಧ ಸಾರಬಾರದು. ಬಹಿರಂಗ ವೈಮನಸ್ಯ ತೋರಿದರೆ ಬಾಳುವುದು ಕಷ್ಟ. ರಾಜ್ಯದ ಆಸ್ತಿವಾರ ಸಡಿಲಾಗುತದೆ. ರಾಜ-ಪ್ರಜೆ, ಅಧಿಕಾರಿ-ಸೇವಕ, ತಂದೆ-ಮಗ, ಬ್ರಾಹ್ಮಣ-ಕ್ಷತ್ರಿಯ, ಋಗ್ವೇದಿ-ಅಥರ್ವವೇದಿ, ಈ ಓಣಿಯವ-ಆ ಓಣಿಯವ .... ವಿಘಟನೆಗೆ ಮಿತಿಯುಂಟೇ? ನಮ್ಮ ಉದ್ದಿಶ್ಯಗಳು ಶುದ್ಧವಾಗಬೇಕು. ನಾಲ್ಕು ಜನರು ಮನಮೆಚ್ಚುವಂತಿರಬೇಕು. ಹೃದಯ ಸಾಕ್ಷಿ ಹೇಳುವಷ್ಟು ಪರಿಶುದ್ಧ ಧೋರಣೆ ಇರಬೇಕು. ವಿರೋಧವಾದಾಗ್ಯೂ ಸ್ವಂತದ ಅಂತರಾತ್ಮ ಕದಡಬಾರದು. (-`ಅವಧೇಶ್ವರಿ' ಕಾದಂಬರಿಯಿಂದಾಯ್ದ ನನ್ನ ಮೆಚ್ಚಿನ ಸಾಲುಗಳು..)
****
‘ಅವಧೇಶ್ವರಿ’ ಪುಸ್ತಕವನ್ನೋದಿಯಾಯಿತು! ಅಬ್ಬಾ ಎಂಥಾ ಅದ್ಭುತ ಪರಿಕಲ್ಪನೆ! ಹಂತ ಹಂತದಲ್ಲೂ ಪ್ರಸ್ತುತ ರಾಜಕೀಯ ಸ್ಥಿತಿ-ಗತಿಯನ್ನು, ಜನರ ಮನೋವ್ಯಾಪಾರಗಳನ್ನು, ಸಮಾಜದೊಳಗಿನ ವ್ಯವಸ್ಥೆ/ಅವ್ಯವಸ್ಥೆಯನ್ನು, ವೇದ ಕಾಲದ ರಾಜಕೀಯ ಸ್ಥಿತಿಗತಿಗಳೊಂದಿಗೆ, ಜನ ಜೀವನ, ರೀತಿ-ನೀತಿಗಳೊಂದಿಗೆ ಮನಸ್ಸು ಅಪ್ರಯತ್ನವಾಗಿ ಹೋಲಿಸಿಕೊಂಡು ನೋಡುತ್ತಿದೆ!!! ಪ್ರತಿ ಪುಟವೂ ಅದೆಷ್ಟೋ ಚಿಂತನೆಗಳಿಗೆ ಒರೆಹಚ್ಚುವಂತಿದೆ!! ಲೇಖಕರು ತಮ್ಮ ಮಾತುಗಳಲ್ಲಿ ಈ ಕಾದಂಬರಿಗೆ ಆಧಾರವಾಗಿರುವ ಸಾಕ್ಷಿಗಳನ್ನು, ತಾಳೆಗರಿ, ವಸ್ತುಸಂಗ್ರಹಗಳನ್ನು ನಮ್ಮ ಮುಂದಿರಿಸಿದ್ದರಿಂದಲೋ ಇಲ್ಲಾ ಕಾದಂಬರಿಯಲ್ಲಿ ಬರುವ ಪಾತ್ರಗಳು ಒದಗಿಸಿರುವ ಅಚ್ಚ ಪ್ರಾಮಾಣಿಕತೆಯಿಂದಲೋ ಇಲ್ಲಾ ಅಲ್ಲಿ ನಡೆವ ಎಲ್ಲಾ ರಾಜಕೀಯ, ಸಾಮಾಜಿಕ ಘಟನೆಗಳೆಲ್ಲವೂ ಇಂದೂ, ಈ ಕ್ಷಣವೂ ತೀರಾ ಪ್ರಸ್ತುತ ಎಂದೆನೆಸಿ, ಸತ್ಯತೆ ಆಪ್ತವಾಗುವುದರಿಂದಲೋ ಇದನ್ನೊಂದು ಕೇವಲ ಕಾಲ್ಪನಿಕ ಕಾದಂಬರಿ ಎಂದು ಪರಿಗಣಿಸಲು ಸಾಧ್ಯವೇ ಆಗದು! (ನನ್ನ ಮಟ್ಟಿಗಂತೂ) ಇದರೊಳಗಿನ ವಿಷಯಗಳೆಲ್ಲಾ ನಮ್ಮ ಇಂದಿನ ರಾಜಕೀಯತೆಗೆ, ರಾಜಕಾರಣಿಗಳ ಕುತ್ಸಿತತೆಗೆ, ಚದುರಂಗ ದಾಳಗಳಿಗೆ, ಮೇಲಾಟ, ಕಾಲೆಟ, ಕಾಲ್ತುಳಿತಗಳಿಗೆ ಎಲ್ಲವುದಕ್ಕೂ ಇಲ್ಲಿ ನಿದರ್ಶನಗಳು ಸಿಗುತ್ತವೆ. ಆದರೆ ಎಲ್ಲವೂ ಒಂದು ಪ್ರಾಮಾಣಿಕತೆ, ದೇಶದ ಹಿತ ದೃಷ್ಟಿ, ಜನತೆಯ ಹಿತದೃಷ್ಟಿಯಲ್ಲಿಟ್ಟುಕೊಂಡು! ಕೇವಲ ತಾನು, ತನ್ನದು ಅನ್ನುವ ಪರಮ, ನೀಚ ಸ್ವಾರ್ಥ ಅಂದಿನ ರಾಜಕೀಯತೆಯಲ್ಲಿರಲೇ ಇಲ್ಲಾ! ಅದೊಂದೇ ಕೊರತೆ, ಅದೇ ಒಂದು ದೊಡ್ಡ ಕೊರತೆ ಇಂದು ಎದ್ದು ಕಾಣುತಿರುವುದು! ನಿಜಕ್ಕೂ ಮೊಕಾಶಿಯವರ ಈ ಅಮೋಘ ಕಾದಂಬರಿ ಚಿಂತನೆಗೆಳೆಸುವಂಥದ್ದು. ಅದರಲ್ಲೂ ವಿಶೇಷವಾಗಿ ನಿಯೋಗ ಪದ್ಧತಿ ನನ್ನ ಗಮನ ಸೆಳೆದದ್ದು.
ವ್ಯಾಸರ ಮೊದಲೇ ಕಾದಂಬರಿಯ ನಾಯಕಿಯಾದ ಪುರುಕುತ್ಸಾನಿ ಈ ಒಂದು ಪ್ರಕ್ರಿಯೆಗೆ ಮನಸ್ಸು ಮಾಡುವುದು.... ಮತ್ತು ಅದೆಷ್ಟು ವ್ಯವಸ್ಥಿತವಾಗಿ, ಯಾರಿಗೂ ಎಲ್ಲೂ ಅನೈತಿಕ ಎಂಬ ಭಾಸವೂ ಬಾರದಂತೇ ನಿರೂಪಿಸಲಾಗಿದೆ ಎಂದರೆ.. ಇಂತಹ ಒಂದು ವ್ಯವಸ್ಥೆ ನಮ್ಮ ಇಂದಿನ ಸಮಾಜಕ್ಕೆ ಅಂದರೆ ಸಂತಾನ ಹೀನರಿಗೆ ಇದ್ದಲ್ಲಿ ತುಂಬಾ ಚೆನ್ನ ಎಂದೆನಿಸಿ ಬಿಟ್ಟಿತು!
ಹೌದು... ಇಂದು ಪತಿ ನಿರ್ವೀಯನಾದರೆ Artificial Insemination (AI) ಚಿಕಿತ್ಸೆಯ ಮೂಲಕ ಪತ್ನಿಗೆ ಗರ್ಭಧರಿಸುವಂತೆ ಮಾಡುವ ಆಧುನಿಕ ವೈದ್ಯಕೀಯ ಚಿಕಿತ್ಸೆಯಿದೆ. ಆದರೆ ಅದೆಷ್ಟು ಮಾನಸಿಕ ಕ್ಷೋಭೆಯನ್ನು ಹೆಣ್ಣಿಗೆ ಮನೆಯವರಿಂದ, ಸ್ವಂತ ಪತಿಯಿಂದ ತರುತ್ತದೆಯೆನ್ನುವುದನ್ನು, Infertility center ಒಂದರ ಕೌನ್ಸಲಿಂಗ್ ಡೆಪಾರ್ಟ್ಮೆಂಟ್ನಲ್ಲಿ ತುಸು ಕಾಲ ಕಾರ್ಯ ನಿರ್ವಹಿಸಿದ್ದ ನಾನು ಸ್ವತಃ ಅವರ ಅನುಭವದ ಮಾತುಗಳಿಂದ ಕೇಳಿದ್ದೇನೆ. ತನ್ನ ಪ್ರತಿಷ್ಠೆಗಾಗಿ, ತಮ್ಮ ಮನೆಯ ಪೊಳ್ಳು ಅಭಿಮಾನದ ಉಳಿವಿಗಾಗಿ ಮನಸ್ಸಿದೆಯೋ ಇಲ್ಲವೋ ಪತ್ನಿಯನ್ನು/ಸೊಸೆಯನ್ನು ಮನವೊಲಿಸಿ, ಬೆದರಿಸಿ ಒಪ್ಪಿಸಿರುತ್ತಾರೆ. ಒಂದು ವೇಳೆ ಆಕೆ ಖುಶಿಯಿಂದ ಒಪ್ಪಿದ್ದರೂ, ಆಮೇಲೆ ಕುಹಕ, ಭರ್ತ್ಸನೆ, ಇಲ್ಲಾ ನಿರ್ಲಕ್ಷ್ಯತನ ಸರ್ವೇಸಾಮಾನ್ಯ! ಇಂಥ ಒಂದು ಸಾಮಾಜಿಕ ಸಂಕುಚಿತತೆ, ಮಾನಸಿಕ ಧೋರಣೆಯಿಂದ ವಿಜ್ಞಾನ ಎಷ್ಟು ಮುಂದುವರಿದರೇನು? ಅಂದಿನ ಸಮಾಜದ ಪರಿಕಲ್ಪನೆ, ಸಹಜ ಸ್ವೀಕಾರ, ಅಲ್ಲೊಂದಿಲ್ಲೊಂದು ಅಪಸ್ವರ ಎದ್ದಾಗಲೂ ಸಮಾಜವೇ ಅದನ್ನು ತುಳಿದು ಅಡಗಿಸಿದ ಉದಾರತೆ ಎಲ್ಲವೂ ಮಾನನೀಯ, ನಿದರ್ಶನ ಎಂದೆನಿಸಿತು. ಇದೊಂದು ಚಿಕ್ಕ ಉದಾಹರಣೆಯಷ್ಟೇ... ಇನ್ನೂ ಹಲವಾರು ನಿದರ್ಶನಗಳು, ಶ್ರೇಷ್ಠ ರಾಜಕೀಯತೆ, ರಾಜನ ಕಾರ್ಯವೈಖರಿ, ಹೆಣ್ಣಿನ ಧೀಃಶಕ್ತಿಯ ಅನಾವರಣ ಎಲ್ಲವೂ ‘ಅವಧೇಶ್ವರಿ’ನಮಗೆ ಕಾಣಿಸುತ್ತಾಳೆ. ಆದರೆ ಕಾದಂಬರಿಯುದ್ದಕ್ಕೂ ಹೆಣ್ಣೇ ಪ್ರಧಾನವಾಗಿ ಹರಿದು ಬಂದರೂ, ಪ್ರಮುಖವಾಗಿ ನನ್ನ ಗಮನ ಸೆಳೆದವನೆಂದರೆ ಗುಲಾಮನಿಂದ ಸೇವಕನಾಗಿ, ಸೇನಾನಿಯಿಂದ ರಾಜನ ಆಪ್ತ ಸಲಹೆಗಾರನಾಗಿ, ರಾಜ್ಯ ಭಾರದ ಸೂತ್ರಧಾರನಾಗಿ, ರಾಣಿಯ ಆಪ್ತನಾಗಿ ಕಾದಂಬರಿಯೊಳಗೆ ಹಾಗೂ ನಮ್ಮೊಳಗೆ ಬೆಳೆಯುತ್ತಾ ಹೋಗುವ ‘ತಾರ್ಕ್ಷ್ಯ’!!
ಆದರೆ ಕೊನೆಯಲ್ಲಿ ಬರುವ ಒಂದು ಘಟನೆ ಯಾಕೋ ನನ್ನಲ್ಲಿ ಕಸಿವಿಸಿ ತುಂಬಿ ಬಿಟ್ಟಿತು..! ಆವರೆಗೂ ತುತ್ತತುದಿಯಲ್ಲಿದ್ದ ಒಂದು ಪಾತ್ರ ಅದೆಂತು ಆ ರೀತಿ ವರ್ತಿಸಿತೆಂದೇ ಅರಿಯದಾಯಿತು....! ಆ ಘಟನೆಯನ್ನು, ಪಾತ್ರ, ಸನ್ನೀವೇಶವನ್ನು ಬಿತ್ತರಿಸಿದರೆ ಓದುಗರಿಗೆ ಓದಲು ಸಹಜ ಕುತೂಹಲ, ಆ ಪಾತ್ರದ ಮೇಲೆ ಘನತೆ ಬರಲು ಸಾಧ್ಯವಾಗದು. ಹಾಗಾಗಿ ಇಲ್ಲಿ ಹೇಳುತ್ತಿಲ್ಲ. ಕಾದಂಬರಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅಥವಾ ಕಥಾ ಹಂದರವನ್ನು ಅರುಹಿ ಓದುಗರ ಕುತೂಹಲವನ್ನು ತಣಿಸುವ ಕಾರ್ಯ ಮಾಡೆನು.. ಇಷ್ಟವಾದಲ್ಲಿ ಓದಿ, ನಿಮ್ಮ ಓದನ್ನು ನನ್ನೊಂದಿಗೂ ಹಂಚಿಕೊಳ್ಳಿ.. :)
-ತೇಜಸ್ವಿನಿ ಹೆಗಡೆ.
5 ಕಾಮೆಂಟ್ಗಳು:
ಓದಲು ಕಾತರಳಾಗಿದ್ದೇನೆ -ಅನಿತಾ ನರೇಶ್ ಮಂಚಿ
ನಾನು ಹೇಳಿರ್ಲಿಲ್ವಾ ತೇಜು, ಈ ಅವಧೇಶ್ವರಿ ಮನಸನ್ನಾವರಿಸಿಕೊಳ್ಳೊ ಪರಿ! :)
ಶಂಕರ ಮೊಕಾಶಿಯವರ ತಾಕತ್ತಿಗೊಂದು ಭಾವಪೂರ್ಣ ನಮನ.
good one- I wish you had written bit more on the central character - how a women stood up and took charge of circumstances - thanks
shashi
ಅವಧೇಶ್ವರಿಯನ್ನು ಓದಿದ್ದೇನೆ. ವೇದಕಾಲದ ರಾಜಕೀಯ ಹಾಗು ಸಾಮಾಜಿಕ ಸ್ಥಿತಿಯನ್ನು ವಿವರಿಸುವ ಉತ್ತಮ ಕಾದಂಬರಿ. ಶಂಕರ ಮೊಕಾಶಿ-ಪುಣೇಕರರ ಅದ್ಭುತ ಪ್ರತಿಭೆಗೆ ನಿದರ್ಶನ.
http://bhaavanouke.blogspot.co.uk/
ಕಾಮೆಂಟ್ ಪೋಸ್ಟ್ ಮಾಡಿ