ಭಾರತದಲ್ಲಿ ಹೆಣ್ಣು ಎರಡನೆಯ ದರ್ಜೆಯ ಪ್ರಜೆ ಹೌದು/ಅಲ್ಲಾ ಎಂಬೆಲ್ಲಾ ವಾದ ನಡೆಯುತ್ತಲೇ ಇದೆ. ಅದು ನಿಲ್ಲುವುದು ಎಂದೋ ಎನ್ನುವುದೂ ತಿಳಿಯದು. ಆದರೆ ಹೆಣ್ಣು, ಗಂಡು, ಬಡವ, ಶ್ರೀಮಂತ, ಬ್ರಾಹ್ಮಣ, ದಲಿತ, ಹಿಂದು ಮುಸ್ಲಿಮ್ ಈ ಎಲ್ಲಾ ಗೊಂದಲ, ಗಲಾಟೆ, ಚರ್ಚೆ, ಹೋರಾಟ, ಪರದಾಟಗಳ ನಡುವೆ ನಾವು ಅಂದರೆ ವಿಶೇಷವಾಗಿ ಭಾರತೀಯರು ಮರೆತಿರುವುದು ಸಾಮಾಜಿಕ, ಆರ್ಥಿಕ, ಕೌಟುಂಬಿಕ ಎಲ್ಲಾ ರೀತಿಯಲ್ಲೂ ಇನ್ನೂ ಸಾಕಷ್ಟು ಹಿಂದುಳಿದಿರುವ, ಕುಗ್ಗಿ ಮೇಲೇರಲು ಇನ್ನಿಲ್ಲದಂತೇ ಪ್ರಯತ್ನಿಸುತ್ತಾ ಸೋತು ಸೊಪ್ಪಾಗುವ, ಬದುಕುವುದಕ್ಕಾಗಿ ಪ್ರತಿ ಕ್ಷಣ ಹೋರಾಡುವ, ಯಾವ ದರ್ಜೆಗೆ ಸೇರಿದರೆಂದೇ ತಿಳಿಯಲಸಮರ್ಥರಾಗಿರುವ, ಜಾತಿ-ಮತ-ಪಂಥ ಬೇಧವಿಲ್ಲದ ಒಂದು ವರ್ಗವನ್ನು!! ಹೌದು ನಾನಿಲ್ಲಿ ಹೇಳುತ್ತಿರುವ ಅಂಗವಿಕಲರ ಬಗ್ಗೆ...! ನಮ್ಮ ಸಮಾಜದಲ್ಲಿ ಇನ್ನೂ ಅವರ ಬಗ್ಗೆ ಆಳವಾಗಿ ಬೇರು ಬಿಟ್ಟಿರುವ ಒಂದು ರೀತಿಯ ಉಡಾಫೆ, ನಿರ್ಲಕ್ಷ್ಯತನ, ಸಲ್ಲದ ಕರುಣೆ, ಅನುಕಂಪದ ಭಾವದ ಪ್ರದರ್ಶನ, ಅವರ ಸಮಸ್ಯೆ, ಹಕ್ಕುಗಳ ಪ್ರತಿ ತೋರುವ ಅಸಡ್ಡೆಯ ಬಗ್ಗೆ.
ಆಮೀರ್ ನಡೆಸಿಕೊಡುತ್ತಿರುವ ಸತ್ಯಮೇವ ಜಯತೇ ನನಗೆ ಬಹುವಾಗಿ ಮೆಚ್ಚುಗೆಯಾಗಿದ್ದು ಅವನು ನೀಡುತ್ತಿದ್ದ ನಿಖರ ಅಂಕಿ-ಅಂಶಗಳನ್ನು ನೋಡಿ, ಸಮಸ್ಯೆಗೊಳಗಾದ ಜನರ ಬಾಯಿಯಿಂದಲೇ ಹೊರಡಿಸುತ್ತಿದ್ದ ಸತ್ಯಾಪಸತ್ಯೆಗಳ ವೈಖರಿಯನ್ನು ನೋಡಿ. ಮೂರು ಕೋಟಿ ಪಡೆದಿರುವ, ಅಷ್ಟು ಹಣಗಳಿಸಿರುವ.. ಹಾಗೆ ಹೀಗೆ ಎಂದೆಲ್ಲಾ ಆರೋಪಗಳನ್ನು ಪಕ್ಕಕ್ಕಿರಿಸಿ ನನ್ನ ಸೆಳೆದದ್ದು.... ಹೌದು ಇಂಥದ್ದೊಂದು ರಿಯಾಲಿಟೀ ಶೋ ಬೇಕಿತ್ತು... ಇಂಥ ಒಂದು ಸಾಮಾಜಿಕ ಚಳುವಳಿ, ಜಾಗೃತಿಯನ್ನುಂಟು ಮಾಡುವ ಕಾರ್ಯ ಅದೆಷ್ಟು ನಟರು ಮಾಡುತ್ತಿದ್ದಾರೆ ಹೇಳಿ? ಆ ನಿಟ್ಟಿನಲ್ಲೇ ನನಗೆ ಈ ಶೋ ಹೆಚ್ಚು ಇಷ್ಟವಾದದ್ದು.. ವರದಕ್ಷಿಣೆ, ಭ್ರೂಣ ಹತ್ಯೆ, ಅತ್ಯಾಚಾರ, ಭ್ರಷ್ಟಾಚಾರ ಈ ಎಲ್ಲಾ ಪಿಡುಗಗಳ ನಡುವೆ ಆತ ಅಂಗವಿಕಲ ಸಮಸ್ಯೆಗಳು, ಅವರ ದಿನದ ಬವಣೆಗಳು, ಅದಕ್ಕಿರುವ ಪರಿಹಾರ, ಅವರ ಹಕ್ಕುಗಳ ಕುರಿತು ದನಿಯೆತ್ತಿದ್ದ. ಈ ನಡುವೆ ಸ್ಟಾರ್‌ಪ್ಲಸ್‌ನಲ್ಲಿ ಸತ್ಯಮೇವ ಜಯತೆ ಕಾರ್ಯಕ್ರಮದ ಪ್ರಭಾವದಿಂದ ಏನೆಲ್ಲಾ ಸುಧಾರಣೆ, ಜಾಗೃತಿ ಉಂಟಾಗಿದೆ ಅನ್ನುವುದನ್ನು ತೋರುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ನನ್ನ ಸೆಳೆದದ್ದು ಗ್ವಾಲಿಯರ್‌ನ ಜಿಲ್ಲಾಧಿಕಾರಿಯೋರ್‍ವ ತನ್ನ ವ್ಯಾಪ್ತಿಗೆ ಬರುವ ಕಾರ್ಯಕ್ಷೇತ್ರದಲ್ಲೆಲ್ಲಾ ಅಂಗವಿಕಲರಿಗಾಗಿ ರ್ಯಾಂಪ್(Ramp) ಹಾಕಿಸಿದ್ದು...! ಸ್ಕೂಲ್, ಕಾಲೇಜು, ಕ್ಲಿನಿಕ್ ಹೀಗೆ ಎಲ್ಲಾ ಸಾರ್ವಜನಿಕ ಜಾಗಗಳಲ್ಲಿ ಅಂಗವಿಕಲರೂ ಸುಲಭವಾಗಿ ಹೋಗಿ ಬರುವಂತೆ ರೇಂಪ್ ಹಾಕಿಸಿದ್ದನ್ನು ತೋರಿಸಿದಾಗ ಎಲ್ಲೋ ಎನೋ ಸಮಾಧಾನದ ಭಾವ. ಸಂತಸವುಂಟಾಗಲು ಇನ್ನೂ ತುಂಬಾ ಕಾಲ ಕಾಯಬೇಕಿದೆ! ಟಿ.ವಿ ತೋರಿಸಿದ್ದು ಉತ್ಪ್ರೇಕ್ಷೆ, ಅಥವಾ ತುಸು ಹೆಚ್ಚುಗಾರಿಕೆಯಲ್ಲೇ ತೋರಿಸಿದ್ದಾರೆ ಎಂದು ನೀವು, ನಾನು ಭಾವಿಸಿದರೂ... ಅವರು ಹೇಳಿದ್ದರಲ್ಲಿ ಕಾಲು ಪರ್ಸೆಂಟ್ ಆದರೂ ನಿಜವಾಗಿದ್ದರೆ.. ಅದಕ್ಕಿಂತ ದೊಡ್ಡ ಜಾಗೃತಿ ಬೇರಿಲ್ಲ. ಹೀಗಿರುವಾಗ ಈ ಜಾಗೃತಿ ದೇಶದೆಲ್ಲೆಡೆ ಯಾಕಾಗಬಾರದು?
ನಾನು ನನ್ನೊಂದಿಗಾದ ಅತಿ ಸಣ್ಣ ಕಹಿ ಘಟನೆಯನ್ನೂ, ಮತ್ತು ಅದನ್ನು ನಾನು ಎದುರಿಸಿದ್ದ ರೀತಿಯನ್ನೂ ತುಂಬಾ ಹಿಂದೆ ದಟ್ಸ್‌ಕನ್ನಡದಲ್ಲಿ ಬರೆದಿದ್ದೆ.. ಬ್ಲಾಗಲ್ಲೂ ಹಾಕಿದ್ದೆ.. ಲಿಂಕ್ ಇಲ್ಲಿದೆ...
&
ಮೇಲಿನ ಲಿಂಕ್‌ನಲ್ಲಿ ನಾನು ಹೇಳಿದ್ದು ಅತಿ ಸಣ್ಣ ಘಟನೆ.. ಆದರೆ ಇಂಥದ್ದನ್ನು ಪ್ರತಿ ಕ್ಷಣ, ಪ್ರತಿ ದಿವಸ ಎಲ್ಲೆಂದರೆಲ್ಲಿ ನಾನು, ನನ್ನಂಥವರು ಎದುರಿಸುತ್ತಿರುತ್ತೇವೆ. ಉದಾಹರಣೆಗೆ :-
ಮನೆಯ ದಿನಸಿ, ಸಾಮನುಗಳನ್ನು ತರಲು ನಾವು ಮಾಲ್‌ಗಳಿಗೇ ಹೋಗಬೇಕಾಗುತ್ತದೆ (ಬಿಗ್ ಬಝಾರ್ ಅಂಥದ್ದು..). ಕಾರಣ ಲಿಫ್ಟ್ ಇರೋದೇ ಅಂಥ ದೊಡ್ಡ ಅಂಗಡಿಗಳಲ್ಲಿ!!! :( ತಕ್ಕಮಟ್ಟಿಗೆ ಆರ್ಥಿಕವಾಗಿ ಸಬಲರಾದವರಾದರೆ ಸರಿ.. ಹೇಗೋ ಹೋಗಬಹುದು.. ಇಲ್ಲಾ ಅಂದರೆ...? ಇನ್ನು ನನ್ನಂಥವರು ಮಾಲ್‌ಗೆ ಹೋಗಿ ಸಾಮಾನು ಕೊಳ್ಳಲು ಹೋದರೆ... ಮೇಲಿಟ್ಟಿರುವ ಸರಕುಗಳಿಗೆ ಸಹಾಯ ಬೇಕಾದಾಗ, ಅಲ್ಲಿರುವವರು ಸಹಕರಿಸುತ್ತಾರೆ.. ಇಲ್ಲಾ ಎಂದಲ್ಲಾ.. ಆದರೆ ಜೊತೆಗೊಮ್ಮೊಮ್ಮೆ ಈ ರೀತಿಯ ಮಾತೂ ಬರುವುದು "ಛೇ.. ಪಾಪ ಇಷ್ಟು ದೂರ.. ಸಾಮಾನಿಗಾಗಿ ಇಂಥವರು ಬರ್ಬೇಕಾ? ಮನೆಯವ್ರು ಬಂದ್ರೆ ಸಾಕಾಗೊಲ್ವಾ?" ಇತ್ಯಾದಿ... ಇದು ಅನುಕಂಪ ಎಂದು ಸುಮ್ಮನಿದ್ದರೂ, ಮತ್ತೆ ಕೆಲವರು "ವ್ಹೀಲ್‌ಚೇರ್ ಆಚೀಚೆ ಹೋಗೋವಾಗ ಇಕ್ಕಟ್ಟಾಗೊತ್ತೆ.. ಇವ್ರಿಂದ ನಮ್ಗೆ ತೊಂದ್ರೆ ಸಾಮಾನು ಸರ್ಸೋದು, ಇಡೋದು.. ಜೊತೇಲಿರೋವ್ರು ಕೆಲ್ಸ ಮಾಡ್ಬಾರ್ದಾ...?" ಅನ್ನೋ ಅಸಹನೆಯ ಉತ್ತರವೂ ಅದೆಷ್ಟೋ ಸಲ ಕೇಳಿದ್ದೇನೆ....!! ಜನ ಇಲ್ಲಿ ಮರೆವುದು ಒಂದೇ.. ಯಾರೂ ಯಾರಿಗೂ ಅವಲಂಬಿತವಾಗಿ ಬದುಕಲಾಗದು. ಅವರವರ ಬದುಕು ಅವರದ್ದು.. ಸಹಕಾರ, ಸಲಹೆಗಳಿಗೆ ಸದಾ ಸ್ವಾಗತ.. ಬೇಕಾದ್ದು. ಅದು ಬಿಟ್ಟು ನಿನ್ನಿಂದಾಗದು, ಅಶಕ್ತ, ಸುಮ್ಮನೆ ಕೂತಿರು.. ನಾವಿದ್ದೀವಿ ಎಂದು ಹೇಳುವುದರಿಂದ ಗಟ್ಟಿ ಮುಟ್ಟಾದ ಮನುಷ್ಯನೂ ಕುಗ್ಗೇ ಹೋಗುತ್ತಾನೆ ಕ್ರಮೇಣ. ಇಂತಿರುವಾಗ ಅಂಗವಿಕಲರ ಪಾಡೇನು? ಇಲ್ಲಿ ನನ್ನ ವಿಷಯವೇ ಬೇರೆ... ನಾನೆಂದೂ ಇಂಥಾ ಮಾತುಗಳಿಗೆ, ವರ್ತನೆಗೆ ತಲೆಕೆಡಿಸಿಕೊಳ್ಳುವುದ ಬಿಟ್ಟು ದಶಕಗಳೇ ಸಂದಿವೆ... ಆದರೂ ಒಮ್ಮೊಮ್ಮೆ ರೋಸಿ ಹೋಗಿ ಕಟುವಾಗಿ ಉತ್ತರಿಸುವುದುಂಟು. ಆದರೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಗದ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಂಬಲವಿಲ್ಲದ ಅಂಗವಿಕಲರ ಗತಿಯೇನು? ಸಮಾಜ ಅವರಿಗಾಗಿ ಎಷ್ಟು ಕಾರ್ಯೋನ್ಮುಖವಾಗಿದೆ? ಇವೆಲ್ಲವನ್ನೂ ನೋಡಾಲೇಬೇಕಾಗಿದೆ. ಜಾಗೃತಿ ಮೂಡಿಸಲೇಬೇಕಾಗಿದೆ.
ಎಲ್ಲರಂತೆ ಸಹಜವಾಗಿ, ನಿರ್ಭಯವಾಗಿ, ಸ್ವಾಲಂಬನೆಯಿಂದ ಬದುಕುವ ಹಕ್ಕು ಅಂಗವಿಕಲರದ್ದೂ ಹೌದು. ಆ ಹಕ್ಕನ್ನು ನಮ್ಮ ಸರ್ಕಾರ, ಸಮಾಜ ಕೆಲಸಕ್ಕೆ ಬಾರದ, ಕಾನೂನಿನಲ್ಲಿದ್ದರೂ ಸಮರ್ಪಕವಾಗಿ ಜಾರಿಗೆ ಬರದ ಕಾಯಿದೆಗಳಿಂದ ವಂಚಿತಗೊಳಿಸಿದೆ. ಯಾವುದೇ ಅಂಗಡಿಗಳಿರಲಿ, ಎಂಥಕ್ಕೇ ಸಾರ್ವಜನಿಕ ಸ್ಥಳವಾಗಿರಲಿ.. ಅಂಗನ್ಯೂನತೆಯುಳ್ಳವರು ಸುಲಭವಾಗಿ ಹೋಗಿ ಬರುವಂತೇ ವ್ಯವಸ್ಥೆ ಕಲ್ಪಿಸಲು ಕನಿಷ್ಠ ರೇಂಪ್ ವ್ಯವಸ್ಥೆಯೂ ಇರುವುದಿಲ್ಲ ಎಷ್ಟೋ ಕಡೆ!! ಮೆಟ್ಟಿಲುಗಳಿಲ್ಲದೇ ಯಾವುದೇ ಕಟ್ಟಡ ಕಟ್ಟಲಾಗದು ಒಪ್ಪುವೆ.. ಅದರೆ ಬದಿಯಲ್ಲೊಂದು ರೇಂಪ್ ಹಾಕಿಸಲು ಲಕ್ಷಗಟ್ಟಲೆ ಬೇಕೆ? ಕಟ್ಟು ನಿಟ್ಟಾದ ಕಾನೂನು ಯಾಕಿಲ್ಲ? ಕಟ್ಟಡ ಕಟ್ಟುವಾಗಲೇ ಇಂಥಾ ಒಂದು ಸೌಲಭ್ಯವಿದೆಯೇ ಎಂದು ನೋಡಿಯೇ ಒಪ್ಪಿಗೆ ನೋಡಲು ಸರ್ಕಾರ ಮುಂದಾಗ ಬೇಕು. ನಮ್ಮಲ್ಲಿ ತಮಾಷೆ ಎಂದರೆ ಒರ್ಥೋಪೆಡಿಕ್ ಡಾಕ್ಟರ್ ಇರೋದು ಎರಡನೆಯ ಮಹಡಿಯಲ್ಲಿ ಅದೂ ಲಿಫ್ಟ್ ಇಲ್ಲದೇ!!! ಸರ್ವರಿಗೂ ಸಮಬಾಳು, ಸಮಾನತೆ ಎಲ್ಲಿದೆ ಇವರ ವಿಷಯದಲ್ಲಿ? ಈ ನಿಟ್ಟಿನಲ್ಲಿ ನಿಜಕ್ಕೂ ವಿದೇಶದಲ್ಲಿರುವ ಸುವ್ಯವಸ್ಥೆ, ಅಲ್ಲಿಯ ಜನರ ವರ್ತನೆ (ಅಂಗವಿಕಲರ ಪ್ರತಿ..) ತುಂಬಾ ಮಾದರಿ!!!
ಒಟ್ಟಿನಲ್ಲಿ ಆರ್ಥಿಕವಾಗಿ ಸಬಲರೋ ದುರ್ಬಲರೋ ಹೋರಾಟ, ಮಾನಸಿಕ ತೊಳಲಾಟ, ಹಿಂಸೆ ಇವರಿಗೆ ಕಟ್ಟಿಟ್ಟದ್ದೇ! ಇಂಥವರು ಇಂಥಾ ಕೆಲಸಕ್ಕೆ ಮಾತ್ರ ಲಾಯಕ್ಕಿಇ... ಇಲ್ಲದ ಹೋಗದ ಉಪಧ್ವಾನ ಯಾಕೆ ಅನ್ನೋ ಚೌಕಟ್ಟಿನ ದೃಷ್ಟೀಕೋನದಿಂದ ಸಮಾಜ ಮುಕ್ತವಾಗೇ ಇಲ್ಲಾ ಇನ್ನೂ! ನನ್ನ ತಂದೆ, ತಾಯಿ, ತಂಗಿಯರ ಪ್ರೋಸಾಹ, ಅರೆ ನಿಮಿಷವೂ ನಾನು ಹೀಗೆ ಎನ್ನುವ ತುಸು ಭಾವವೂ ಬರದಂತೇ ಬೆಳೆಸಿದ ಅವರ ಆತ್ಮವಿಶ್ವಾಸ ಭರಿತ ಬೆಂಬಲದಿಂದ ನಾನಿಂದು ಕೀಳಿರಮೆ.. ಅಥವಾ ಯಾವುದೇ ಹಿಂಜರಿಕೆಯಿಂದ ಕುಗ್ಗಿಲ್ಲ.. ಆ ರೀತಿ ನನ್ನ ಬಾಲ್ಯದಿಂದಲೂ ಬೆಳೆಸಲೂ ಇಲ್ಲಾ. ಆದರೆ ಎಷ್ಟು ಜನ ಮನೆಯವರು, ಹೆತ್ತವರು, ಸ್ನೇಹಿತರು ಈ ರೀತಿಯ ಬೆಂಬಲ, ಪ್ರೋತ್ಸಾಹ, ಬದುಕಿನಿದ್ದಕ್ಕೂ ತಾಳ್ಮೆಯ ಸಹಕಾರ ನೀಡುತ್ತಾರೆ? ಆ ನಿಟ್ಟಿನಲ್ಲಿ ನಾನು ಪುಣ್ಯವಂತೆಯೇ!! ಆದರೆ ನನಗೊಲಿದಿರುವ ಸವಲತ್ತುಗಳಿಂದ ನಾನು ಖುಶಿ ಪಡುವ ಬದಲು ಪ್ರತಿ ದಿವಸ ನನ್ನಂಥವರಿನ್ನೂ ಕತ್ತಲ ಕೂಪದಲ್ಲಿ ಬೇಯುತ್ತಿರುವುದನ್ನು.. ಹಣವಿದ್ದರೂ ಮನೆಯವರ ಪ್ರೋತ್ಸಾಹವಿಲ್ಲದೇ ಅನಕ್ಷರಸ್ಥರಾಗಿರುವುದನ್ನು... ಹಲವೆಡೆ ಹೆತ್ತವರ, ನೆಂಟರಿಷ್ಟರ, ಸಮಾಜದ ತಿರಸ್ಕಾರಕ್ಕೊಳಗಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದನ್ನು ಕಂಡು ತುಂಬಾ ಹಿಂಸೆ ಅನುಭವಿಸುತ್ತಿರುತ್ತೇನೆ. ಅಸ್ಪೃಶ್ಯತೆ ಜಾತಿಗೆ ಮಾತ್ರವಲ್ಲ.. ನಮ್ಮಂಥವರನ್ನೂ ಕಾಡುತ್ತಿದೆ... ಆದರೆ ನಿಜವಾಗಿ ಸಹಕಾರ, ಬೆಂಬಲ ಸಿಗಬೇಕಾದವರಿಗಾಗಿ ಸಮಾಜದ ಅರ್ಧದಷ್ಟು ಭಾಗವೂ ನಿಲ್ಲುತ್ತಿಲ್ಲ!! ಇದರರ್ಥ ಎಲ್ಲರೂ ಹೀಗೇ ಎಂದು ಖಂಡಿತ ಹೇಳುತ್ತಿಲ್ಲಾ. ನಾನು ಬೆಳೆದ ರೀತಿಗೆ, ನನ್ನೊಳಗಿನ ಆತ್ಮವಿಶ್ವಾಸಕ್ಕೆ ಸ್ನೇಹಿತರ, ಇದೇ ಸಮಾಜದ ಹಲವು ಸಹೃದಯರು ಕಾರಣ. ಆದರೆ ಅವರ/ಅಂಥವರ ಸಂಖ್ಯೆ ಹೆಚ್ಚಾಗಬೇಕು. ಕಾರಣ ಎಲ್ಲರೂ ನನ್ನಂಥ ಬಾಳ್ವೆ ಸಮನಾಗಿ ಅರ್ಹರು ಮತ್ತು ಅದು ಅವರ ಹಕ್ಕು!!
ಬಾಲ್ಯದಲ್ಲಿ ಮೊತ್ತ ಮೊದಲು ನನ್ನ ಶಾಲೆಗೆ ಸೇರಿಸುವಾಗ ಅಪ್ಪನ ಸ್ನೇಹಿತವರ್ಗ, ಸಮಾಜ ಅವರಿಗಿತ್ತ ಸಲಹೆ ಎಂದರೆ ‘ಇಂಥವರಿಗಾಗಿಯೇ ಇರುವ ವಿಶೇಷ ಸ್ಕೂಲ್‌ಗೆ ಸೇರಿಸಿಬಿಡಿ..." ಆದರೆ ನನ್ನ ಚೈತನ್ಯದ ಪ್ರತಿರೋಧ, ಅಪ್ಪ ಅಮ್ಮನ ಧೈರ್ಯ ಹಾಗೆ ಮಾಡದೇ ಎಲ್ಲರಂತೇ ನಾರ್ಮಲ್ ಸ್ಕೂಲ್‌ಗೇ ಸೇರಿಸಲು ಪ್ರೇರೇಪಿಸಿತು. ಇದರ್ಥ.. ಅಂಥ ಸ್ಕೂಲ್‌ಗೆ ಹೋಗಲೇ ಬಾರದೆಂದಲ್ಲಾ... ಸಾಧ್ಯವಾದಷ್ಟೂ ಅಂಗವಿಕಲರು ಸಮಾಜದ ಮುಖ್ಯವಾಹಿನಿಯ ಜೊತೆ ಜೊತೆಯಲ್ಲೇ.. ಎಲ್ಲರಂತೇ ನಾವು ಎನ್ನುವ ಭಾವದಲ್ಲಿ ಬೆರೆತು ಬೆಳೆದಂತೇ ಆತ್ಮವಿಶ್ವಾಸ, ಧೈರ್ಯ ತನ್ನಿಂದ ತಾನೇ ಬಲಿಯುವುದು.. ಬಲಿಷ್ಠಗೊಳ್ಳುವುದು! ಆದರೆ ಒಂದನೆಯ ತರಗತಿಯಲ್ಲಿ ಮಂಗಳೂರಿನ ಶಾಲೆಯೊಂದು ನನಗೆ ಪ್ರವೇಶ ಕೊಡಲು ಹಿಂದೇಟು ಹಾಕಿತ್ತು! ಕಾರಣ ನಾನು ನಡೆಯಲಾಗದು... ನನ್ನಂಥವರಿಗೆ ಕಲಿಸುವುದು ಹೇಗೆ? ಇವಳಿಂದ ಇತರರಿಗೂ ತೊಂದರೆ ಆಗಬಹುದು ಅನ್ನೋ ಕ್ಷುಲ್ಲಕ ಪ್ರಶ್ನೆ ಮುಂದೂಡಿ! ಹಠ ಹೊತ್ತ ಅಪ್ಪ ಹೋರಾಡಿ ಅಲ್ಲೇ ಒಂದು ವರುಷ ಓದಿಸಿ ಮರುವರುಷ ಕೆನರಾ ಸ್ಕೂಲ್‌ಗೆ ದಾಖಲಿಸಿದ್ದ. (ಆ ಸ್ಕೂಲ್‌ನಲ್ಲಿ ಏನೂ ತೊಂದರೆ ಆಗದೇ ಪ್ರವೇಶ ಸಿಕ್ಕಿತ್ತು.) ಎಲ್ಲಾ ಒಂದೇ ರೀತಿ ಇರದು.. ಆದರೆ ಇನ್ನೂ ಆ ಭಾವ ಸಾಕಷ್ಟು ಇದೆ ನಮ್ಮಲ್ಲಿ!! ಈಗಲೂ ಅಂಗವಿಕಲರನ್ನು ಪ್ರತಿಷ್ಠಿತ ಸ್ಕೂಲ್‌ಗಳಲ್ಲಿ ಸೇರಿಸಿಕೊಳ್ಳುವಾಗ ತುಸು ಅನುಮಾನ ತೋರಿದ್ದ ಘಟನೆಗಳೂ ಕೇಳಿ ಬಂದಿವೆ!! ಮುಂದೆ ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಳ್ಳ ಹೊರಟಾಗ ‘ಇವಳಿಂದ ಪ್ರಾಕ್ಟಿಕಲ್ಸ್ ಸಾಧ್ಯವೇ? ಕಷ್ಟ... ಬೇಡ’ ಎಂದವರೇ ನೂರಾರು ಜನ! ಇಲ್ಲಿ ಹಠ ನನ್ನದಾಗಿತ್ತು... ಕೆಮೆಸ್ಟ್ರಿಯಲ್ಲಿ ಹೈಯೆಸ್ಟ್ ಸ್ಕೋರ್ ಮಾಡಿ ಬಿ.ಎಸ್ಸಿ. ತೇರ್ಗಡೆ ಮಾಡಿದಾಗ ಅಭಿನಂದಿಸಿದವರೂ ಅವರೇ ಆಗಿದ್ದರು. ಪಿ.ಯು.ಸಿಯಲ್ಲಿ ಉತ್ತಮ ಅಂಕ ಇದ್ದು ಮೆರಿಟ್‌ನಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಸೀಟ್ ಸಿಕ್ಕಿದ್ದರೂ, ನಾನು ಮಾಡದಿರುವುದಕ್ಕೆ ಕಾರಣ ಕಟ್ಟಡಗಳು ನನ್ನ ಹೊತ್ತಲು ಅಸಮರ್ಥವಾಗಿದ್ದು! ಲಿಫ್ಟ್ ಇಲ್ಲದ ಮಹಡಿಗಳಿಂದಾಗಿ ಓದಲು ಆಗದಿದದ್ದು!! ಬಿ.ಎಸ್ಸಿ.ಯಲ್ಲಿ ಅತ್ಯುತ್ತಮ ಅಂಕಗಳಿದ್ದರೂ ನನ್ನಿಷ್ಟದ ಮೈಕ್ರೋ ಬಯಾಲಜಿ ಮಾಡಲಾಗದಿದ್ದುದಕ್ಕೂ ಕಾರಣ ಇದೇ...!!! ಈಗ ಹೇಳಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದ್ದೂ, ಹೆತ್ತವರ, ಸ್ನೇಹಿತರ ಬೆಂಬಲವಿದ್ದೂ ನನ್ನಿಂದಾಗದ್ದು, ಏನೂ ಇಲ್ಲದ, ಸಾಧಿಸುವ ಹುಮ್ಮಸ್ಸಿದ್ದೂ ಮಾಡಲಾಗದ.. ಒಂದಿಂಚೂ ನಡೆಯಲಾಗದೇ ಹೊರ ಪ್ರಪಂಚದಿಂದಲೇ ವಿಮುಖವಾಗಿರುವ ಅದೆಷ್ಟು ಅಂಗವಿಕಲರಿದ್ದಾರೆ ನಮ್ಮೊಂದಿಗೆ?! ಮೇಲೆ ಹೇಳಿರುವ ಘಟನೆ ಒಂದೆರಡು ಸ್ಯಾಂಪಲ್ಸ್ ಅಷ್ಟೇ. ಹುಟ್ಟಿದ ದಿನದಿಂದ, ಈವರೆಗೂ, ಈ ಕ್ಷಣವೂ ಸಾಕಷ್ಟು ಅನುಭವಗಳನ್ನು ಬದುಕು ನೀಡುತ್ತಲೇ ಬಂದಿದೆ. ಆದರೆ ಸಮಾಜ ತನ್ನ ದೃಷ್ಟೀಕೋನದಲ್ಲಿ, ವರ್ತನೆಯಲ್ಲಿ ಸಾಕಷ್ಟು ಸುಧಾರಣೆಯನ್ನೂ ತೋರುತ್ತಿರುವುದು ತುಸು ಸಮಾಧಾನವನ್ನೂ ತಂದಿದೆ.
ನಾನಿದನ್ನೆಲ್ಲಾ ಹೇಳಿದ್ದು ನಾನೇನೋ ಸಾಧನೆ ಮಾಡಿರುವೆ ಎಂದು ಹೇಳಿಕೊಳ್ಳಲು ಅಲ್ಲವೇ ಅಲ್ಲಾ... ಅಥವಾ ಯಾವುದೇ ದಯೆ, ಅನುಕಂಪಕ್ಕಂತೂ ಖಂಡಿತ ಅಲ್ಲಾ! ತಿಳಿಯದ, ಅರಿವಿಗೆ ಬಾರದ ಸಹೃದಯವುಳ್ಳ ಎಲ್ಲರಲ್ಲೂ ಜಾಗೃತಿ ಮೂಡಿಸಲು. ಇಷ್ಟೆಲ್ಲ ಕಳಕಳಿ ಇರುವ ನಾನೇನು ಮಾಡಿರುವೆ? ಎಂದೆಣಿಸದಿರಿ... ನನ್ನದೇ ಆದ ರೀತಿಯಲ್ಲಿ... ಶಕ್ತಿ ಮೀರಿ ಪ್ರಯತ್ನಿಸುತ್ತಲೇ ಇದ್ದೇನೆ. ನನ್ನಂಥವರಿಗೆ ಪ್ರೇರಣೆಯಾಗಿ ಮಾಲತಿ ಹೊಳ್ಳರಂಥ ವಿಶಿಷ್ಟ ಸಾಧಕರಿದ್ದಾರೆ. ಜಾತಿ ಮತ ಬೇಧವಿಲ್ಲದೇ ರಾಜ್ಯದ ನಾನಾ ಭಾಗದಿಂದ ಅವರು ಬಡ ಅಂಗವಿಕಲ ಮಕ್ಕಳನ್ನು ಕರೆತಂದು ಉಚಿತವಾಗಿ ಅವರಿಗೆಲ್ಲಾ ಊಟ, ವಸತಿ, ಬಟ್ಟೆಯ ಜೊತೆಗೇ ಆತ್ಮವಿಶ್ವಾಸ, ಶಿಕ್ಷಣ ಸೌಲಭ್ಯವನ್ನು ನೀಡಿ ಮಾತೃ ಪ್ರೇಮವನ್ನು ಸ್ಫುರಿಸುತ್ತಿರುವ ಅವರ ‘ಮಾತೃ ಛಾಯಾ’ವಿದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್- http://www.manasa-hegde.blogspot.in/2011/01/blog-post_17.html
ಇದು ಕೇವಲ ದೈಹಿಕ ಅಂಗವೈಕಲ್ಯವಿರುವರ ಪಾಡಾದರೆ, ತುಸು ಮಾನಸಿಕ ಅಸ್ವಸ್ಥರ ಪಾಡು ಕೇಳುವುದೇ ಬೇಡಾ!!! ಆಟಿಸ್ಟಿಕ್‌ಗೂ ಬುದ್ಧಿ ಮಾಂದ್ಯರಿಗೂ ಎಂಥಾ ದೊಡ್ಡ ವ್ಯತ್ಯಾಸವಿದೆ.. ಪ್ರತಿಯೊಂದು ಸಮಸ್ಯೆಯೂ ಹೇಗೆ ವಿಭಿನ್ನವಾಗಿದೆ... ಪ್ರತಿ ಸಮಸ್ಯೆಯನ್ನೂ ಎದುರಿಸಲೂ ಎಷ್ಟೆಲ್ಲಾ ಮಾನಸಿಕ ತಯಾರಿ ಸ್ಥೈರ್ಯ ಬೇಕಾಗುತ್ತದೆ ಎನ್ನುವುದನ್ನೆಲ್ಲಾ ಸಮಾಜಕ್ಕೆ ಎಡ್ಯುಕೇಟ್ ಮಾಡಲೇಬೇಕಾಗಿದೆ ಇಂದು! ಈ ಸಮಾಜದಲ್ಲಿ ಹಲವರು ಅದೆಷ್ಟು ಅಸೂಕ್ಷ್ಮತೆ ಹಾಗೂ ಸಂವೇದನಾರಹಿತರಾಗಿರುತ್ತಾರೆ ಎಂದರೆ, ಆಟಿಸ್ಟಿಕ್ ಎಂದರೆ ‘ಹುಚ್ಚನಾ/ಹುಚ್ಚಳಾ’ ಎಂದು ಕೇಳುವಷ್ಟು!!! :( ಸಮಾಜ ಆ ಮಗುವನ್ನು, ಮನೆಯವರನ್ನು ಇನ್ನಿಲ್ಲದಂತೇ ಘಾಸಿಗೊಳಿಸಿದ್ದನ್ನು.... ಅಂಥವರಿಗೆ ನಾನು ತಿಳಿ ಹೇಳಲು ಹೋಗಿ ನಾನೇ ಚುಚ್ಚು ಮಾತು ಕೇಳಿದ್ದನ್ನೂ ಹೇಳಿದರೆ ಕುರೂಪ ಇನ್ನೂ ವಿಕಾರಗೊಳ್ಳಬಹುದು.
ಸಮಾಜ ಬದಲಾಗುತ್ತಿದೆ.. ನಿಜ... ಮತ್ತು ಕೆಲವೊಂದು ಬದಲಾವಣೆಗಳು ನಿಧಾನವಾಗಿ ಆಗಬೇಕಾಗುತ್ತದೆ. ಆದರೆ ಪ್ರತಿ ಹೆಜ್ಜೆಯೂ ನಮ್ಮದು ಧನಾತ್ಮಕ ಬದಲಾವಣೆಯತ್ತ ಸಾಗಿದಾಗ ಮಾತ್ರ ಅದು ಯಶಸ್ಸುಗೊಳ್ಳುವುದು. ನಮ್ಮಲ್ಲಿ ಈಗಲೂ ಧಾರಾವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಅಂಗವಿಕಲರೆಂದರೆ ಅಪಾರ ಕರುಣೆ, ದಯೆಗೆ ಪಾತ್ರರು.. ಅವರಿಂದ ಏನೂ ಸಾಧ್ಯವಿಲ್ಲ.. ನಿಃಶ್ಯಕ್ತರೆಂದೇ ತೋರಿಸಲಾಗುತ್ತದೆ. ಅದರ ಬದಲು ಅವರಿಂದೇನೆನು ಸಾಧ್ಯ ಎನ್ನುವುದನ್ನು ಸಹಜವಾಗಿ ತೋರಿಸುವ ಯತ್ನ ಮತ್ತಷ್ಟು ಆದರೆ ಜನಜಾಗೃತಿ ಬಹು ಸುಲಭವೆಂದೆನಿಸುತ್ತದೆ. ಆ ನಿಟ್ಟಿನಲ್ಲೂ ಚಿಂತನೆ ಅತ್ಯಗತ್ಯ.
ಕಳಕಳಿಯ ವಿನಂತಿ:-
ದಯವಿಟ್ಟು ನೀವು ನಿಮ್ಮ ಸುತ್ತ ಮುತ್ತ ಅಂಗವಿಕಲರನ್ನು ಕಂಡರೆ, ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್‌ಗಳಲ್ಲಿ ಅವರೊಂದಿಗೆ ಯಾರಾದರೂ ಒರಟಾಗಿ ವರ್ತಿಸುವುದೋ, ಇಲ್ಲ ಅಸಹಕಾರ ನೀಡುವುದೋ ಮಾಡುವುದ ಕಂಡರೆ ಪ್ರತಿಭಟಿಸಿ. ಅವರೂ ನಿಮ್ಮಂತೇ ಎಲ್ಲಾ ರೀತಿಯಲ್ಲೂ ಶಕ್ತರು ಎನ್ನುವುದನ್ನು ಮನಗಂಡೇ ಸಹಕಾರ ನೀಡಿ. ಇಷ್ಟು ಕಷ್ಟ ಪಟ್ಟು ಇವರ್ಯಾಕೆ ಬಂದರೋ ಪಾಪ? ಯಾರೂ ಇಲ್ಲವೇ ಇವರಿಗೆ? ಎಂಬ ಸಲ್ಲದ ಕರುಣೆ ಬೇಡ. ನಿಮ್ಮ ಪರಿಸರದಲ್ಲಿ ಅನಕ್ಷರಸ್ಥರಿದ್ದರೆ ಕಲಿಕೆಗೆ ಪ್ರೇರೇಪಿಸಿ.... ಸಹಕರಿಸಿ. ವಿದ್ಯೆ ಅತ್ಯವಶ್ಯಕ... ಅದರಿಂದಲೇ ಹೊರ ಪ್ರಪಂಚಕ್ಕೆ ನಾವು ತೆರೆದುಕೊಳ್ಳಬಲ್ಲೆವು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ಅಂಗವಿಕಲರು ಸುಲಭವಾಗಿ ಹೋಗಿ ಬರುವಂತೇ ವ್ಯವಸ್ಥೆ ಕಲ್ಪಿಸಲು ಎಲ್ಲರೂ ಒಗ್ಗಟ್ಟಾಗಿ ಸರಕಾರವನ್ನು ಒತ್ತಾಯಿಸಬೇಕು. ಅಂಗವಿಕಲತೆ ಒಂದು ಶಾಪ, ಪ್ರಾರಾಬ್ಧ ಕರ್ಮ ಅನ್ನುವ ಕೂಪ ಮಂಡೂಕತ್ವವನ್ನು ತೊಡೆದು ಹಾಕಿ ಒಳಗಿನ ಚೈತನ್ಯದ ಮುಂದೆ ಎಲ್ಲವೂ ನಗಣ್ಯ ಅನ್ನುವುದನ್ನು ಉದ್ದೀಪನಗೊಳಿಸಿಗೊಳ್ಳಬೇಕು.. ಹಾಗೆ ಉದ್ದೀಪಿಸಿಕೊಳ್ಳಲು ಪ್ರೇರೇಪಿಸಬೇಕು. ಮುಖ್ಯವಾಹಿನಿಗೆ ಇವರೂ ಬಂದು.. ಸಮಬಾಳು, ಸಮ ಪಾಲು/ಹಕ್ಕು ಇವರಿಗೂ ಸಿಗಲೇಬೇಕು. ಆ ನಿಟ್ಟಿನಲ್ಲಿ ಸಮಾಜ ಕಾರ್ಯೋನ್ಮುಖವಾಗಲೇ ಬೇಕು. ಸಕಾಲದಲ್ಲಿ, ಸರಿಯಾದ ರೀತಿಯಲ್ಲಿ, ತುಸುವೇ ತುಸು ತಾಳ್ಮೆಯಿಂದ ಮನೆಯವರು, ಬಾಲ್ಯದಲ್ಲೇ ಪ್ರೋತ್ಸಾಹ, ಬೆಂಬಲ ಸಹಕಾರ ನೀಡಿದರೆ ಎಂಥಾ ನ್ಯೂನ್ಯತೆಯನ್ನೂ ಜಯಿಸಬಹುದು... ಓರ್ವ ಅಂಗವಿಕಲನೂ ಎಲ್ಲರಂತೇ ಸಾಮಾನ್ಯವಾಗಿ ಎಲ್ಲಾ ರೀತಿಯ ಅಂದರೆ ಮಗುವಿನ ಪಾಲನೆ, ಬಟ್ಟೆ, ಪಾತ್ರೆ, ಅಡಿಗೆ ಇತ್ಯಾದಿ ಮೆನವಾರ್ತೆಗಳ ಜೊತೆಗೇ ಹೊರಗಿನ ಕಾರ್ಯಗಳನ್ನೂ ನಿಭಾಯಿಸಬಲ್ಲ ಎನ್ನುವುದಕ್ಕೆ ಸಾಕ್ಷಿ ನಾನೇ :) ಹೀಗಾಗಿಯೇ ಹೆತ್ತವರು, ಆಪ್ತೇಷ್ಟರು, ಸ್ನೇಹಿತರು, ಸಹೃದಯರು ಈ ನಿಟ್ಟಿನಲ್ಲಿ ಒಮ್ಮೆ ಚಿಂತನೆ ನಡೆಸಿ... ಎಂದು ಎದೆಯಾಳದಿಂದ ವಿನಂತಿಸುತ್ತಿರುವೆ.
(ಸಹನೆಯಿಂದ ಲಿಂಕ್‌ಗಳ ಜೊತೆಗೆ ಲೇಖನವನ್ನೋದಿದವರಿಗೆಲ್ಲಾ ಧನ್ಯವಾದಗಳು. :) )
-ತೇಜಸ್ವಿನಿ.
4 ಕಾಮೆಂಟ್‌ಗಳು:
ನಿಮ್ಮ ಬಗ್ಗೆ ಹೆಮ್ಮೆ ಮತ್ತು ಗೌರವ ತೇಜಸ್ವಿನಿ. ಖಂಡಿತಾ ಮಾಡ್ತೇವೆ
ಸಾಧನೆ ಎಂದರೆ ಬರಿಯ ಹೊರ ಜಗತ್ತಿಗೆ ಕಾಣುವ ಮೇರು ಕೆಲಸಗಳನ್ನಷ್ಟೇ ಮಾಡುವುದಲ್ಲ.
ಕೊರತೆಗಳ ಹೊರತಾಗಿಯೂ ಬದುಕನ್ನು ಇತರರ ಹೊರೆಯಾಗದಂತೆ ರೂಪಿಸಿಕೊಳ್ಳುವುದು ಸಹ.
ಇಂತಹ ಆದರ್ಶಯುತರಾದ ತಾವು ನನ್ನಂತ ಕೊರಗು ಜನ್ಮರಿಗೆ ಸದಾ ಸ್ಪೂರ್ತಿ.
ಅಂಗವಿಕಲರನ್ನು ಕಂಡೊಡನೆ ಅತಿಯಾಗಿ ಕರುಣೆ ತೋರಿಸುವವರು ಅಥವಾ ತೀರಾ ಅಸಡ್ಡೆ ತೋರಿಸುವವರೇ ಹೆಚ್ಚು . ಈ ಎರಡೂ ರೀತಿಯ ಮನೋಭಾವದಿಂದ ಏನೂ ಪ್ರಯೋಜನವಿಲ್ಲ. ಅವರೊಂದಿಗೆ ಸಹಜವಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ . ಕಣ್ಣು ತೆರೆಸುವಂತಹ ಲೇಖನ ತೇಜಸ್ವಿನಿ
ತೇಜಸ್ವಿಯವರ ಲೇಖನವು ತೇಜಿಯಗೆ ಇದೆ. ಇನ್ನೇನ್ ಹೇಳಲೆಂದು ತಿಳಿಯುತ್ತಿಲ್ಲ. ಒಟ್ಟಾರೆ ಅರ್ಥಪೂರ್ಣ.
ಕಾಮೆಂಟ್ ಪೋಸ್ಟ್ ಮಾಡಿ