ನಾನು ಇತ್ತೀಚಿಗೆ ಓದಿದ ಕಥಾಸಂಕಲನಗಳಲ್ಲೇ ವಿಭಿನ್ನವಾದ ಕಥಾಸಂಕಲನವೆಂದರೆ ವಸುಧೇಂದ್ರರ ‘ಮೋಹನಸ್ವಾಮಿ’. ಬಾಲ ಗೋಪಾಲನ ಭಕ್ತನಾದ ಮೋಹನಸ್ವಾಮಿಯ ಅರ್ಧದಷ್ಟು ಕಥೆಗಳು ಆರ್ದ್ರತೆಯನ್ನು ತುಂಬುವಂತಿದ್ದು, ತೀವ್ರ ಭಾವುಕತೆಯಿಂದ ಕೂಡಿವೆ. ಒಟ್ಟೂ ಹನ್ನೊಂದು ಕಥೆಗಳನ್ನೊಳಗೊಂಡಿರುವ ಸಂಕಲನವನ್ನು ನಡುವೆ ಬರುವ ವಿಶಿಷ್ಟ ಕಥೆಯಾದ ‘ಕಿಲಿಮಂಜಾರೋ’ ಕಥೆಯ ಮೊದಲಿನ ೪ ಕಥೆಗಳು ಮತ್ತು ಅದರಾನಂತರದ ೬ ಕಥೆಗಳು -ಹೀಗೆ ಎರಡು ಭಾಗವನ್ನಾಗಿಸಬಹುದು. ‘ಕಿಲಿಮಂಜಾರೋ’ ಕಥೆಯವರೆಗೂ ಮೋಹನಸ್ವಾಮಿಯನ್ನು ಬಿಟ್ಟು ಇನ್ನೇನೂ ನಿಮ್ಮನ್ನು ಆವರಿಸದು. ಕಿಲಿಮಂಜಾರೋ ಕಥೆಯೇ ಭಾವೋದ್ವೇಗದ, ಉತ್ಕಟತೆಯ ತುತ್ತತುದೆಯೆಂದೆನಿಸಿಬಿಡುತ್ತದೆ. ಆ ತುತ್ತ ತುದಿಯ ಎಡ ಬಲಗಳಲ್ಲಿ ಉಳಿದ ಕಥೆಗಳು ಹರವಿಕೊಂಡಿದ್ದರೆ ಕಿಲಿಮಂಜಾರೋ ಕಥೆ ಮಾತ್ರ ಉಳಿದೆಲ್ಲಾ ಕಥೆಗಳಿಗಿಂತ ವಿಶಿಷ್ಟವೆನಿಸಿಬಿಡುತ್ತದೆ. ಈ ಕಥೆ ಇಡೀ ಕಥಾಸಂಕಲನದಲ್ಲೇ ನನಗೆ ಮೆಚ್ಚುಗೆಯಾದ ಕಥೆಯೂ ಹೌದು.
ಕಥಾಸಂಕಲನದ ಮೊದಲ ನಾಲ್ಕು ಕಥೆಗಳನ್ನೋದುತ್ತಿದ್ದಂತೇ, ಕೆಲವು ಗೊತ್ತಿದ್ದ, ಗೊತ್ತಿಲ್ಲದ, ಗೊತ್ತಿದೆ ಎಂದು ಭಾವಿಸಿದ್ದ, ಗೊತ್ತಿಲ್ಲ ಎಂದು ನಂಬಿದ್ದ ಹಲವು ವಿಷಯಗಳು ತೆರೆದುಕೊಳ್ಳುತ್ತಾ ಹೋದವು! ಮೋಹನಸ್ವಾಮಿ ಕೇವಲ ಒಂದು ಕಥಾ ಪಾತ್ರ, ಲೇಖಕನ ಕಲ್ಪನೆ ಎಂದು ಎಲ್ಲಿಯೂ ಓದುಗಳಾದ ನನಗೆ ಅನಿಸಲೇ ಇಲ್ಲ! ಅಷ್ಟೊಂದು ವಾಸ್ತವಿಕತೆ, ನೈಜತೆ ಅವನಲ್ಲಿ ತುಂಬಿತ್ತು. ಇಂತಹ ಒಂದು ಪಾತ್ರ ಚಿತ್ರಣವನ್ನು ಇಷ್ಟು ಸಮರ್ಥವಾಗಿ, ಸತ್ಯಕ್ಕೆ ಪಕ್ಕದಲ್ಲೇ ಇರುವಂತೆ ಕಟ್ಟಿಕೊಡಲು ಅಪಾರ ಮಾನಸಿಕ ಶಕ್ತಿಯ ಅವಶ್ಯಕತೆ ಇದ್ದೇ ಇರಬೇಕಾಗುತ್ತದೆ. ಅದು ಈ ಲೇಖಕರಲ್ಲಿ ಇದೆಯೇನೋ ಎಂದೆನಿಸಿತು. ಇದೇ ಲೇಖಕರ ‘ಹರಿಚಿತ್ತ ಸತ್ಯ’ದಂತಹ ಸಾಂಸಾರಿಕ, ಸಾಂಪ್ರದಾಯಿಕ, ವಿಡಂಬನಾತ್ಮಕ ಕಾದಂಬರಿಯನ್ನು ಓದಿದಾಗ ಆ ಕಾದಂಬರಿ ತೀರಾ ಹರಿದು ಆವಿಯಾಗುವ ಪುಟ್ಟ ತೊರೆಯಂತೇ ಭಾಸವಾಗಿತ್ತದು. ಆದರೆ ‘ಮಿಥುನ’ ಅನುವಾದಿತ ಕಥಾಸಂಕಲನದಲ್ಲಿ ದಾಂಪತ್ಯದ ಸಾಮರಸ್ಯವನ್ನು, ಸುಮಧುರತೆಯನ್ನು, ಬಲು ಚೆಲುವಾಗಿ ಹಿಡಿದುಕೊಟ್ಟ ಶೈಲಿಯನ್ನು ತುಂಬಾ ಮೆಂಚಿಕೊಂಡಿದ್ದೆ. ‘ಚೇಳು’ ಅದರ ಕುಟುಕುವಿಕೆಯಷ್ಟೇ ಪರಿಣಾಮಕಾರಿ ಎಂದೆನಿಸಿತ್ತು. ಆದರೆ ‘ಮೋಹನಸ್ವಾಮಿ’ ಮಾತ್ರ ‘ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆ’ಯಂತೆಯೇ ಎಂದೆನಿಸಿಬಿಟ್ಟಿತು. ‘ಕಾಣದ ಕಡಲಿಗೆ ಹಂಬಲಿಸುವ’ ಮೋಹನಸ್ವಾಮಿಯ ರೋಧನ, ನೋವು, ಹತಾಶೆ ಎಲ್ಲವೂ ಕಥೆಯನ್ನೂ ದಾಟಿ ಓದುಗನ ಎದೆಯ ತಟ್ಟಿ ದ್ರವಿಸುವಂತೆ ಮಾಡುತ್ತದೆ. ಅದಕ್ಕೆ ಕಾರಣ ಆ ಪಾತ್ರದಲ್ಲಿರುವ ವಾಸ್ತವಿಕತೆ.. ಯಾತನೆಯಲ್ಲಿರುವ ಸತ್ಯತೆ, ಚಿತ್ರಣದಲ್ಲಿರುವ ನೈಜತೆ!
ಸಲಿಂಗಕಾಮಿಗಳು ನಮ್ಮಂತೆಯೇ.. ಅಂದರೆ ಓರ್ವ ಹೆಣ್ಣು-ಗಂಡಿನ ನಡುವಿನ ಆಕರ್ಷಣೆ ಎಷ್ಟು ಸಹಜವೋ ಅಂತೆಯೇ ಇಬ್ಬರು ಪುರುಷರು ಅಥವಾ ಸ್ತ್ರೀಯರ ನಡುವಿನ ಕಾಮನೆಗಳು/ಆಕಷಣೆಗಳು. ಇದೊಂದು ‘ವ್ಯಾಧಿ’(ಡಿಸೀಸ್) ಅಲ್ಲ... ಮಾನಸಿಕ ಅಸ್ವಸ್ಥತೆಯೂ ಅಲ್ಲ.. ಎಂದು ಎಲ್ಲೋ ಓದಿದ ನೆನಪು ಮತ್ತು ಮನಃಶಾಸ್ತ್ರವೂ ಹೀಗೇ ಹೇಳುತ್ತದೆ ಎನ್ನುವುದನ್ನೂ ಕೇಳಿದ್ದೇನೆ/ಓದಿದ್ದೇನೆ. ಅವರನ್ನು ಸಹಜವಾಗಿ ಸ್ವೀಕರಿಸಬೇಕು. ಹುಟ್ಟಿನಿಂದಲೇ ಅವರೊಳಗೆ ಬೆಳೆಯುತ್ತಾ ಬಂದ ಈ ಭಿನ್ನತೆಯನ್ನು ಗೌರವಿಸಿ ಸಮಾಜ ಸ್ವೀಕರಿಸಿದಾಗ ಅವರ ಸಮಸ್ಯೆಗೆ ಪರಿಹಾರ ಎನ್ನುವುದನ್ನೂ ಓದಿ/ಕೇಳಿ ಬಲ್ಲೆ. ‘ಹೌದಲ್ಲಾ.. ಅವರೊಳಗಿನ ಇಚ್ಛೆಗೆ, ಮೂಲ ಸ್ವಭಾವಕ್ಕೆ ನಾವೇಕೆ ನಮ್ಮದೇ ಅಭಿಪ್ರಾಯಗಳನ್ನು ಹೇರಬೇಕು? ಯಾರದೋ ಸ್ವಾತಂತ್ರ್ಯಕ್ಕೆ, ಅವರೇ ಬಯಸಿ ಪಡೆಯದ ಅವರ ಹುಟ್ಟಿಗೆ ನಾವೇಕೆ ತಿರಸ್ಕಾರ ತೋರಿ ಅಮಾನುಷರೆನಿಸಿಕೊಳ್ಳಬೇಕು?’ ಎಂದೆಲ್ಲಾ ನಾನೂ ಅಂದುಕೊಂಡಿದ್ದೆ (ಈಗಲೂ ಅದೇ ತುಡಿತ ಹಾಗೇ ಮಿಡಿಯುತ್ತಲೂ ಇದೆ). ಅಂತೆಯೇ ಸುಪ್ರೀಂ ಕೋರ್ಟ್ ಸಲಿಂಗಕಾಮಿಗಳ ಲೈಂಗಿಕತೆಗೆ ಮಾನ್ಯತೆ ನೀಡದೇ, ಅದನ್ನು ಅನೈತಿಕವೆಂದು ಘೋಷಿಸಿ, ಕಾನೂನು ಅಪರಾಧವೆಂದು ತೀರ್ಪಿತ್ತಾಗ ನನಗೂ ಅಸಮಾಧಾನವಾಗಿತ್ತು. ಹೀಗೇಕಪ್ಪಾ? ನಮ್ಮ ಕೋರ್ಟಿಗೇನಾಯಿತು?! ಎಂದೆಲ್ಲಾ ಪೇಚಾಡಿದ್ದೆ. ಅವರ ಪ್ರತಿ ಸಹಾನುಭೂತಿಯೂ ಮೂಡಿತ್ತು. ಆದರೆ ಪ್ರಸ್ತುತ ಕಥಾಸಂಕಲನವನ್ನೋದುತ್ತಿರುವಂತೇ ಕೋರ್ಟ್ ಯಾವ್ಯಾವ ಕಾರಣಗಳಿಗಾಗಿ ಆ ರೀತಿ ತೀರ್ಪನ್ನು ಕೊಟ್ಟಿರಬಹುದೆನ್ನುವುದಕ್ಕೆ ಸ್ಥೂಲ ಉತ್ತರವನ್ನು ಕೊಟ್ಟಿದ್ದಾನೆ ಮೋಹನಸ್ವಾಮಿ ಎಂದೆನಿಸಿಬಿಟ್ಟಿತು!!
ಕಥಾಸಂಕಲನದ ಮೊದಲ ಕೆಲವು ಕಥೆಗಳೊಳಗಿನ ಹಸಿ ಹಸಿ ಚಿತ್ರಣಗಳು, ಮೋಹನಸ್ವಾಮಿಯ ಅನಿಯಂತ್ರಿತ ಬಯಕೆಗಳು, ಬೀದಿಯಲ್ಲೂ ಯಾವುದೇ ಬಲಾಢ್ಯ ಗಂಡನ್ನು ಕಂಡೊಡನೆ ಅವನೊಳಗಾಗುವ ಉದ್ರೇಕ, ಎಲ್ಲವೂ ಈ ರೀತಿಯ ಮನಃಸ್ಥಿತಿ ನಾನಂದುಕೊಂಡಿರುವಷ್ಟು ಸಹಜವಾಗಿಲ್ಲ... ಅಂದರೆ ಓರ್ವ ಹೆಣ್ಣು-ಗಂಡು ನಡುವಿನ ಆಕರ್ಷೆಣೆಗೂ, ಸಂಬಂಧಕ್ಕೂ, ಗಂಡು-ಗಂಡಿನ ನಡುವಿನ ಆಕರ್ಷಣೆಗೂ ಎಲ್ಲೋ ಒಂದು ಕಡೆ ದೊಡ್ಡ ಅಂತರವೇ ಇದೆ ಎಂದೆನಿಸಿಬಿಟ್ಟಿತು. ಅದು ಪ್ರಕೃತಿ ಸಹಜವಾಗಿದ್ದಿರಬಹುದು.. ಆದರೆ ಅದರೊಳಗೊಂದು ಅಸಹಜತೆ ಇದ್ದೇ ಇದೆ ಎಂಬ ಭಾಸ ಆ ಕಥೆಗಳು ನೀಡಿದವು. ಅಂತಹ ಸಂಬಂಧವನ್ನು ‘ಕಾನೂನು’ ಮಾನ್ಯಮಾಡುವುದರಿಂದ ಏನೇನು ತೊಡಕುಗಳು/ಪರಿಣಾಮಗಳು, ಸಮಾಜದಲ್ಲಿ, ಯುವಕರಲ್ಲಿ, ಮಕ್ಕಳಲ್ಲಿ ಉಂಟಾಗಬಹುದೆಂಬುದರ ಪುಟ್ಟ ಚಿತ್ರಣವನ್ನು ನನ್ನೊಳಗೆ ಕಟ್ಟಿಕೊಟ್ಟವು. ಮಾನಸಿಕವಾಗಿ ನಾವು ಅವರನ್ನು ಸ್ವೀಕರಿಸುವುದೇ ಬೇರೆ, ಕಾನೂನು ಮಾನ್ಯಮಾಡಿ ಸಂಪೂರ್ಣವಾಗಿ ಅಂತಹ ಸಂಬಂಧವನ್ನು ಬೆಂಬಲಿಸುವುದೇ ಬೇರೆ ಎಂಬುದು ಸ್ಥೂಲವಾಗಿ ಅರಿವಾಗುತ್ತಾ ಹೋಯಿತು. ‘ತಗಣಿ’ ಕಥೆ ಅಂತಹ ಪರಿಣಾಮದ ಮುನ್ಸೂಚನೆಯನ್ನು ಕೊಡುವ ಕಥೆಯೆನ್ನಬಹುದು. ಮೋಹನಸ್ವಾಮಿಯ ನೋವು, ಯಾತನೆ, ಅಪಮಾನಗಳು ತುಂಬಾ ತಟ್ಟಿದ್ದು ಹೌದು. ಆದರೆ ನಾನು ಆ ಭಾವುಕತೆಯಿಂದ ದೂರ ನಿಂತು ವಿಮರ್ಶಿಸಿದಾಗ ಕೆಲವು ಸತ್ಯಗಳೂ ಗೋಚರಿಸತೊಡಗಿದವು. ಅವುಗಳೇ ಪರಮಸತ್ಯ, ಅವೇ ವಾಸ್ತವ ಎಂದು ಹೇಳುತ್ತಿಲ್ಲ. ಯಾರೂ ಯಾರ ಯಾತನೆಯನ್ನೂ ಅವರಷ್ಟೇ ತೀವ್ರವಾಗಿ ಅನುಭವಿಸಲು ಸಾಧ್ಯವಿಲ್ಲ ನಿಜ. ಆದರೂ, ಓದುಗ ತನ್ನ ಮನಸನ್ನು ತಟ್ಟಿದ ಭಾವನೆಗಳ ಧಾಳಿಯನ್ನು ದಾಟಿ, ಕ್ರಮೇಣ ಭಾವುಕತೆಯನ್ನು ಬದಿಗೊತ್ತಿ, ಮೆಲುಕಗಳಲ್ಲಿತುಸು ವಾಸ್ತವಕತೆಯಿಂದ ಆತ ವಸ್ತುಸ್ಥಿತಿಯನ್ನು ಕಾಣಲು ಹೋದಾಗ ಬೇರೆಯೇ ಮಜಲುಗಳನ್ನು ಕಾಣಲು ಸಾಧ್ಯವಾಗುತ್ತದೆ. ಅಂತೆಯೇ ಕೆಲವು ವಿಚಾರ, ಚಿಂತನೆಗಳು ನನ್ನರಿವಿಗೆ ಬಂದು ಕಾಡಿ, ಗಟ್ಟಿಯಾಗಿ ನೆಲೆನಿಂತದ್ದಂತೂ ಸತ್ಯ!
ಅನಿಯಂತ್ರಿತ ಸಂಯಮರಹಿತ ದೈಹಿಕ ಕಾಮನೆಗಳು, ಅವುಗಳನ್ನು ಸಾಫಲ್ಯಗೊಳಿಸಿಕೊಳ್ಳುವುದು, ಅದಕ್ಕಾಗಿ ಎಲ್ಲಾ ರೀತಿಯಲ್ಲೂ ಪ್ರಯತ್ನಿಸುವುದು, ಹೇಗೋ ಎಂತೋ ಅದರಲ್ಲಿ ಯಶಸ್ಸನ್ನು ಹೊಂದುವುದು, ಜೊತೆಗಾರನನ್ನು ಹೊಂದುವುದನ್ನೇ ಗುರಿಯಾಗಿಸಿಕೊಳ್ಳುವುದು - ಇದೇ ಪರಮೋಚ್ಚ ಸಾಧನೆಯೇ? ಇವುಗಳನ್ನೆಲ್ಲಾ ಕೇವಲ ಸಲಿಂಗ ಕಾಮಿಗಳ ದೃಷ್ಟಿಕೋನದಿಂದ ಮಾತ್ರ ಹೇಳುತ್ತಿಲ್ಲ. ಹೆಣ್ಣು-ಗಂಡೇ ಇದ್ದಿರಲಿ, ಕಾಮವೇ ಅಂತಿಮವೇ?! ದೈಹಿಕ ಸುಖದ ಮುಂದೆ ಬೇರೆಲ್ಲವೂ ನಗಣ್ಯವೇ?!
ಮೋಹನಸ್ವಾಮಿ ಕೊನೆಯವರೆಗೂ ಬಯಸುವುದು ತನ್ನ ಬಯಕೆಗಳಿಗೊಂದು ಸೂಕ್ತ ಸಾಥಿಯನ್ನೇ. ಆ ಒಂದು ಹಪಹಪಿಕೆಯೇ ಮೊದಲ ಕೆಲವು ಕಥೆಗಳುದ್ದಕ್ಕೂ ಪ್ರವಹಿಸುತ್ತಿರುತ್ತದೆ. ಮೂಲ ಕೇಂದ್ರ ಅದೇ ಆಗಿದ್ದು, ಉಳಿದೆಲ್ಲಾ ಯಾತನೆ, ಅವಮಾನಗಳು ಅವನ ಕಾಮನೆಗಳಿಂದಲೇ ಅವನನ್ನು ಸುತ್ತುವರಿಯುತ್ತಿರುತ್ತದೆ. ಮೋಹನಸ್ವಾಮಿ ಓರ್ವ ಸಲಿಂಗಕಾಮಿ ಎನ್ನುವುದನ್ನು ಪಕ್ಕದಲ್ಲಿಟ್ಟರೆ, ಅವನ ದುಃಖಕ್ಕೆ ಕಾರಣ ಪ್ರತಿ ಮನುಷ್ಯನ ಯಾತನೆಗೂ ಕಾರಣವಾಗಿದ್ದರಬಹುದೇ ಆಗಿದೆ! ಇಲ್ಲದಿದ್ದುರ ಕಡೆಗೇ ಮನಸಿನ ತುಡಿಯುವಿಕೆ, ಹಳಹಳಿಯುವಿಕೆ, ಬಯಕೆಗಳ ತೊಳಲಾಟ ಎಲ್ಲವೂ ಎಲ್ಲರಲ್ಲೂ ಕಾಣಸಿಗುವಂಥವೇ. ಇಲ್ಲಿನ ಹೆಚ್ಚಿನ ಕಥೆಗಳಲ್ಲಿ ಸಲಿಂಗಕಾಮ ಕೇವಲ ಸಾಂಕೇತಿಕವಾಗಿದೆಯೇನೋ ಎಂದೆನಿಸಿಬಿಡುತ್ತದೆ. ಕೊನೆಯಲ್ಲಿ ದುಃಖಕ್ಕೆ ಮೂಲ ಆಸೆಯೇ! ಇದೊಂದೇ ಪರಮ ಸತ್ಯ ಎಂದೆನಿಸಿಬಿಡುತ್ತದೆ. ಆ ಆಸೆ ಯಾವುದೇ ರೂಪದಲ್ಲಿದ್ದರಬಹುದು. ಹಾಗಾಗಿ ‘ಕಾಶೀವೀರರು’ ಕಥೆಯಲ್ಲಿ ಬರುವ ಮೋಹನಸ್ವಾಮಿಯ ಮೇಲೆ ಅಸಹನೆಯೇ ಮೂಡುತ್ತಾ ಹೋಗುತ್ತದೆ. ಅವನ ಅಸಹನೀಯ ವರ್ತನೆ, ಕಡಿವಾಣವಿಲ್ಲದ, ಸಂಯಮ ಹೊಂದಲೂ ಬಯಸದ ಬಯಕೆಯಿಂದಾಗಿ ಅವನೇ ಕೆರೆ ತಂದುಕೊಳ್ಳುವ ಸಮಸ್ಯೆಯ ಸುಳಿಗೆ ಸಿಲುಕುವ ಪಾತ್ರ. ಕಿಲಿಮಂಜಾರೋ ಕಥೆಯ ನಂತರ ಸ್ವಲ್ಪ ಅದೇ ಛಾಯೆಯ ಕಥೆಯೊಂದು ಬರುತ್ತದೆ ಅದೇ ‘ತಗಣಿ’ ಕಥೆ. ಈ ಕಥೆಯ ಶಂಕರಗೌಡನ ಪಾತ್ರವೂ ಸಂಪೂರ್ಣ ಸಹಾನುಭೂತಿ ಪಡೆಯಲು ಸೋತಿತು. ದಾರಿಗಳು ಹಲವಿದ್ದರೂ, ತನಗಲ್ಲದ ದಾರಿಯೆಡೆಗೇ ಮನುಷ್ಯ ಹೆಚ್ಚು ಆಕರ್ಷಿತನಾಗಿ ಪ್ರಪಾತಕ್ಕೆ ಹೇಗೆ ಬೀಳುತ್ತಾನೆ ಎನ್ನುವುದಕ್ಕೆ ‘ತಗಣಿ’ಕಥೆಯ ಶಂಕರ ಗೌಡನೇ ಸಾಕ್ಷಿ!
ಕಿಲಿಮಂಜಾರೋ ಕಥೆ ಮಾತ್ರ ಕಥಾಸಂಕಲನಕ್ಕೇ ಕಲಶವಿಟ್ಟಂತಹ ಕಥೆಯಾಗಿದೆ. ಇಲ್ಲಿ ಪರ್ವತಾರೋಹಿಯಾಗಿ ಕಾಣಿಸಿಕೊಳ್ಳುವ ಮೋಹನಸ್ವಾಮಿಯೊಳಗಿನ ಮಾನಸಿಕ ಘರ್ಷಣೆ, ಆವೇಗ, ಆವೇಶ, ಹಠ, ಸಂಕಟ, ಸ್ಥೈರ್ಯ, ಕೊನೆಯಲ್ಲಿ ಪಡೆವ ಶಾಂತತೆ- ಇವೆಲ್ಲವೂ ಧುಮ್ಮಿಕ್ಕಿ ಹರಿವ ನದಿಯೊಂದು ಬಯಲು ಪ್ರದೇಶದಲ್ಲಿ ಸಮತೋಲನ ಪಡೆಯುವಂತಹ ಚಿತ್ರಣವನ್ನು ಕಲ್ಪಿಸುತ್ತದೆ. ಈ ಕಥೆಯ ಮೋಹನಸ್ವಾಮಿಯ ಯಾತನೆಗೆ ಕಾರಣ ಏನೂ ಆಗಿದ್ದಿರಬಹುದು. ಆದರೆ ಅದಕ್ಕಿಂತಲೂ ಮೊದಲು ಬರುವ ಪಾತ್ರಗಳೆಲ್ಲೆಲ್ಲಾ ಅವನ ತೊಳಲಾಟಕ್ಕೆ ಅವನ ಸಲಿಂಗಕಾಮದ ಬಯಕೆಯೇ ಪ್ರಮುಖ ಕಾರಣವಾಗಿ ಕಂಡಿದ್ದರಿಂದಲೋ ಎಂತೂ, ಇಲ್ಲಿಯೂ ಕಾರಣ ಸ್ಪಷ್ಟವಾಗಿರದಿದ್ದರೂ, ಅವನು ಸಂಕಟ ಪಡುವುದು ಅದಕ್ಕಾಗಿಯೇ ಏನೋ ಎಂದೆನಿಸಿಬಿಡುತ್ತದೆ. ಆದರೆ ಅದನ್ನು ಬಿಟ್ಟು ನೋಡಿದಾಗ ಜಗತ್ತಿನ ಮನುಷ್ಯರೆಲ್ಲರ ಯಾತನೆಗೆ ಕಾರಣ, ಪರಿಹಾರ, ಕ್ಷಣಿಕ ನೆಮ್ಮದಿ ಎಲ್ಲವನ್ನೂ ಅತ್ಯುತ್ತಮವಾಗಿ ತೋರಿಸಿಕೊಡುತ್ತದೆ ಈ ಕಥೆ! ಬದುಕು, ಅದು ನೀಡುವ ಸವಾಲುಗಳನ್ನು ಎದಿರುಸುವ ರೀತಿ, ಸ್ಥೈರ್ಯವನ್ನು ಲೇಖಕರು ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಅದರಲ್ಲೂ ಕೊನೆಯಲ್ಲಿ ಬರುವ ಹುಲ್ಲುಗಾವಲಿನ ರೂಪಕ ಚಿತ್ರಣ ಮಾತ್ರ ಅನಿರ್ವಚನೀಯ ಅನುಭವ ಕೊಡುತ್ತದೆ... ನಾವೂ ಅವನೊಡನೆ ಅಲ್ಲೇ ಇರುವಂತಹ ಅನುಭೂತಿ ನಮ್ಮೊಳಗೆ ಹೊಕ್ಕುವಂತಿದೆ ಆ ಚಿತ್ರಣ! ಕಥೆಯ ಕೊನೆಯಲ್ಲಿ ಆಸ್ತಿಕತೆಗೂ ಸಮಸ್ಯೆಯ ಕ್ಷಣಿಕ ಪರಿಹಾರಕ್ಕೂ ಇರಬಹುದಾದ ಸಣ್ಣ ಎಳೆಯ ಪರಿಚಯವಾಗಿ, ನಾಸ್ತಿಕತೆಯೆಂದರೇನೆಂಬುದರ ಬೃಹತ್ ಸ್ವರೂಪದ ದರ್ಶನವಾಗಿಬಿಡುತ್ತದೆ. ಹಲವಾರು ಕಾರಣಗಳಿಂದಾಗಿ ಈ ಕಥೆ ನನ್ನ ಅಚ್ಚುಮೆಚ್ಚಿನ ಕಥೆಗಳ ಪಟ್ಟಿಗೆ ಸೇರಿಹೋಗಿದೆ.
ಸಂಕಲನದ ಮೊದಲಾರು ಕಥೆಗಳಷ್ಟು, ನಂತರ ಬರುವ ಐದು ಕಥೆಗಳು ನನ್ನ ಹಿಡಿದಿಡಲಿಲ್ಲ. ಈಗಿನ ಸಮಾಜದ ಹುಳಿಕಿಗೆ ತಳುಕು ಹಾಕಿದ ಪೌರಾಣಿಕ ಕಥೆ ‘ದ್ರೌಪದಮ್ಮನ ಕಥಿ’ಯಾಗಲೀ, ಪಿಂಕ್ ಸ್ಲಿಪ್ ಪಡೆದವರ ಪರಿಪಾಟಲನ್ನು ಈಗಾಗಲೇ ಹಲವಾರು ಕಥೆಗಳಲ್ಲಿ ಕಂಡಿದ್ದನ್ನೇ ಕಟ್ಟಿಕೊಡುವ ‘ದುರ್ಭಿಕ್ಷ ಕಾಲ’ವಾಗಲೀ, ಸಾಮಾಜಿಕ ಜಾಲದ ವಿಕೃತಿಯನ್ನು ಕಾಣಿಸುವ ‘ಪೂರ್ಣಾಹುತಿ’ಯಾಗಲೀ, ಡಾಂಭಿಕತೆಯನ್ನು ತೋರುವ ‘ಭಗವಂತ, ಭಕ್ತ ಮತ್ತು ರಕ್ತ’ ಕಥೆಯಾಗಲೀ ಯಾಕೋ ಅಷ್ಟು ಕಾಡಲೇ ಇಲ್ಲ. ಅದಕ್ಕೆ ಕಾರಣ ಬಹುಶಃ ಮೊದಲಿನ ಕಥೆಗಳ ಮೋಹನಸ್ವಾಮಿಯ ಪಾತ್ರ ಚಿತ್ರಣದೊಳಗಿನ ಗಟ್ಟಿತನವೇ ಆಗಿದ್ದಿರಬಹುದು. ಪೂರ್ಣಾಹುತಿ ಕಥೆಯಂಥದ್ದೇ ವಸ್ತುವನ್ನೊಳೊಗೊಂಡ ಅನೇಕ ಫೇಸ್ಬುಕ್ ಕಥೆಗಳನ್ನು ಮೊದಲೇ ಓದಿದ್ದಕ್ಕೆ, ಹಾಗೇ ಭಗವಂತ, ಭಕ್ತ ಮತ್ತು ರಕ್ತ ಕಥೆಯನ್ನೋದುತ್ತಿರುವಂತೇ, ಅದರ ಕೊನೆಯೂ ಅರ್ಥವಾಗಿಬಿಡುವುದರ ಅದರ ಮಿತಿಯಿಂದಾಗಿ ಯಾಕೋ ಸಪ್ಪೆಯೆನಿಸಿಬಿಟ್ಟಿತು.
ಆದರೆ ನಾನು ಭ್ರಮೆಯೆಂದು ಭಾವಿಸಿದ್ದನ್ನು ಅಲ್ಲಗಳೆದ ಕೆಲವು ಸತ್ಯತೆಗಳಿಂದಾಗಿ ಹಾಗೂ ಸತ್ಯವೆಂದೆನಿಸಿಕೊಂಡಿದ್ದರ ಹಿಂದಿನ ಭ್ರಮೆಯನ್ನು ತೆರೆದಿಟ್ಟ ಕಟು ವಾಸ್ತವಿಕತೆಗಳಿಂದಾಗಿ ‘ಮೋಹನಸ್ವಾಮಿ’ ಕಥಾಸಂಕಲನ ಇಷ್ಟವಾಯಿತು. ಪಾತ್ರ ಚಿತ್ರಣದೊಳಗಿನ ನಿರ್ಭೀಡತೆ, ಶೋಕರಸದೊಳಗಿನ ಕ್ರೌರ್ಯ, ಸಹನೆಯೊಳಗಿನ ಅಸಹನೀಯತೆ ಎಲ್ಲವೂ ಮನಸ್ಸನ್ನು ತಟ್ಟುತ್ತವೆ, ಚಿಂತನೆಗೆ ನಮ್ಮನ್ನು ಎಳೆಯುತ್ತವೆ. ಅದರಲ್ಲೂ ತನ್ನಿಷ್ಟ ದೈವವಾದ ಕೃಷ್ಣನ ಮುಂದೆ ಕುಳಿತು ‘ನಿನ್ನ ಹನ್ನೊಂದನೆಯ ಅವತಾರದಲ್ಲಿ ನನ್ನಂತೆ ಹುಟ್ಟು. ಹದಿನಾರು ಸಾವಿರ ಹೆಣ್ಣುಗಳನ್ನು ಅನುಭೋಗಿಸಿದ ನಿನಗೆ ಒಂದೂ ಹೆಣ್ಣನ್ನು ಮುಟ್ಟಲಾಗದ ದುಃಖ, ಅಸಹಾಯಕತೆಯ ಅರಿವಾಗಲಿ. ಇನ್ನೊಬ್ಬರಿಗೆ ತಟ್ಟದ ನೋವನ್ನು ಏಕಾಂಗಿಯಾಗಿ ಅನುಭವಿಸು. ಜನರ ಕಣ್ಣುಗಳಲ್ಲಿ ಕ್ಷುಲ್ಲಕನಾಗು..’ ಎಂಬ ಆರ್ತನಾದ, ಹೃದಯ ಬಗೆವಂತಹ ಮೊರೆ ಅರೆಕ್ಷಣವಾದರೂ ಸರಿಯೇ, ಓದುಗರಲ್ಲಿ ಯಾತನೆಯ ಪಸೆಯನ್ನುದ್ಭವಿಸಿಬಿಡುತ್ತದೆ. ಆದರೆ ಹೀಗೇ ಚಿಂತಿಸುತ್ತಾ ಹೋದಾಗ, ‘ತತ್ತ್ವಮಸಿ’ಯನ್ನಿಷ್ಟಪಡುವ ನನ್ನ ಮನಸು- ಗೀತೆಯ ಕೃಷ್ಣನೇ ಎಂದಿರುವಂತೇ "ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ"ನಾಗಿರುವ ‘ಆತ’ ಎಲ್ಲರೊಳಗೂ (ಮೋಹನಸ್ವಾಮಿಯಂಥವರೊಳಗೂ) ಇದ್ದೇ ಇರುತ್ತಾನೆ. ಅರಿಯಲು ಅಂತಹ ಚಕ್ಷುವಿನ ಅವಶ್ಯಕತೆ ಇದ್ದಿರುತ್ತದೆ. ಅದೂ ನಮ್ಮೊಳಗೆಲ್ಲೋ ಇದ್ದಿರಲೇ ಬೇಕು ಅಲ್ಲವೆ?! ಇಂತಿರುವಾಗ ಅವತಾರಿಗೆಲ್ಲಿಯ ಹೊಸ ಅವತಾರದ ಹಂಗು!? ಎಂದೆನಿಸಿಬಿಟ್ಟಿತು.
-ತೇಜಸ್ವಿನಿ.
6 ಕಾಮೆಂಟ್ಗಳು:
ತೇಜಸ್ವಿನಿ,
ನಿಮ್ಮ ಲೇಖನವನ್ನು ಓದುತ್ತಿದ್ದಂತೆ, ಸಾಹಿತ್ಯವನ್ನು ವಿವಿಧ, ವಿಭಿನ್ನ ಕೋನಗಳಿಂದ ಅರಿಯುವ ಹಾಗು ವಿಮರ್ಶಿಸುವ ತಿಳಿವು ಉಂಟಾಯಿತು. ಈ ಭಾವಶೀಲತೆ ಹಾಗು ಅಧ್ಯಯನಶೀಲತೆಯನ್ನು ಮೆಚ್ಚಿಕೊಳ್ಳುತ್ತೇನೆ. ಮೋಹನಸ್ವಾಮಿಯ ಬಗೆಗೆ ನಾನು ಬರೆದ ಲೇಖನದಲ್ಲಿಯ ಕೊರತೆಗಳೂ ಸಹ ನನಗೀಗ ಕಂಡು ಬಂದವು. ಧನ್ಯವಾದಗಳು.
ತೇಜಸ್ವಿನಿ,
ನಿಜ! ಇಡೀ ಸ೦ಕಲನದಲ್ಲಿ ಆವರಿಸುವುದು ಮೋಹಸ್ವಾಮಿ ಮಾತ್ರ. ಮೋಹನಸ್ವಾಮಿಯ ಕಥೆಗಳು ಕಾಡಿದಷ್ಟು ಇನ್ಯಾವುದು ಕಾಡುವುದ್ದಿಲ್ಲ.
"ಮೋಹನಸ್ವಾಮಿಯ ರೋಧನ, ನೋವು, ಹತಾಶೆ ಎಲ್ಲವೂ ಕಥೆಯನ್ನೂ ದಾಟಿ ಓದುಗನ ಎದೆಯ ತಟ್ಟಿ ದ್ರವಿಸುವಂತೆ ಮಾಡುತ್ತದೆ." ಖ೦ಡಿತ.
ನಿಮಗೆ ಗೋಚರಿಸಿದ ಸತ್ಯ ಅಥವ ನೀವು ಎತ್ತಿರುವ ಪ್ರಶ್ನೆ ಬಗ್ಗೆ ನನ್ನ ಅನಿಸಿಕೆ.
ಕಾಮವೇ ಅಂತಿಮವೇ?! ದೈಹಿಕ ಸುಖದ ಮುಂದೆ ಬೇರೆಲ್ಲವೂ ನಗಣ್ಯವೇ?!
ನಿಜ! ಕಾಮವೇ ಅ೦ತಿಮವಲ್ಲ! ಆದರೆ ಸಲಿ೦ಗ ಕಾಮಿಗಳ ವಿಷಯಕ್ಕೆ ಬ೦ದರೆ, ಕಾಮವೇ ಸಧ್ಯಕ್ಕೆ ಅತ್ಯ೦ತ ಪ್ರಮುಖ ಅ೦ಶ. ಏಕೆ೦ದರೆ, ಸಮಾಜ ಅವರನ್ನು ನೋಡುತ್ತಿರುವ ರೀತಿ, ಆಕ್ಷೇಪ ಎಲ್ಲವೂ ಅವರ ಕಾಮದ ರೀತಿಗೆ (ಸೆಕ್ಶುಯಲ್ ಒರಿಯೆ೦ಟೇಷನ್) ಸ೦ಬ೦ಧಪಟ್ಟಿದ್ದು. ಸಲಿ೦ಗಿಗಳು ಎದುರಿಸುತ್ತಿರುವ ಹಿ೦ಸೆ, ಅವಮಾನ, ಯಾತನೆ ಎಲ್ಲವೂ ಇದರಿ೦ದಾಗಿಯೆ! ಅವ್ರಿಗೂ ಕಾಮದ ಜೊತೆಗೆ ಸ೦ಗಾತಿಯ ಸಾ೦ಗತ್ಯ, ಸಹಬಾಳ್ವೆಯ ಅಗತ್ಯ ಖ೦ಡಿತಾ ಇದೆ. ಆದರೆ ಸಮಸ್ಯೆಯೆ೦ದರೆ ಇದೆಲ್ಲಾ ಸ್ವಲಿ೦ಗಿಗಳ ಮಧ್ಯದಲ್ಲಿಯೆ ಪಡೆಯಬೇಕು.
ನಾವು ಬಹುಸ೦ಖ್ಯಾತರು, ಗ೦ಡು-ಹೆಣ್ಣು ನಡುವಿನ ಕಾಮವನ್ನು ಸಹಜ ಎ೦ದು ಸಾವಿರಾರು ವರ್ಷಗಳ ಹಿ೦ದೆಯೇ ಪರಿಗಣಿಸಿದ್ದೇವೆ. ಹಸಿವು, ನೀರಡಿಕೆಗಳ ಜೊತೆಗೆ ಕಾಮವೂ ದೇಹದ ಪ್ರಮುಖ ಅವಶ್ಯಕತೆ ಎ೦ದು ತಿಳಿದ್ದಿದ್ದೇವೆ. ಅದನ್ನು ಪೂರೈಸಲು ಹಾಗು ನಿಯ೦ತ್ರಿಸಲು ಮದುವೆ ಎ೦ಬ ಸಾ೦ಸ್ಥಿಕ ಭದ್ರ ಕೋಟೆಯನ್ನು ನಿರ್ಮಿಸಿದ್ದೇವೆ. ಹಾಗಾಗಿ ಕಾಮವನ್ನು ಮೀರಿದ ಬೇರೆ ಧ್ಯೇಯಗಳನ್ನು ಕ೦ಡುಕೊಳ್ಳುವುದ್ದಕ್ಕೆ ಸಾಧ್ಯವಾಗಿದೆ. ಸಲಿ೦ಗಿಗಳಿಗೆ, ಅವರ ಕಾಮದಿ೦ದಲೇ ಇಷ್ಟೆಲ್ಲಾ ಸಮಸ್ಯೆಗಳಿರುವಾಗ, ಇನ್ನು ಕಾಮನೆಗಳನ್ನು ಮೀರಿದ ಧ್ಯೇಯಗಳ ಕಡೆಗೆ ನೋಡುವುದಾದರು ಹೇಗೆ?
ಇನ್ನು ಸಹಜ-ಅಸಹಜದ ಚರ್ಚೆಗೆ ಬ೦ದ್ರೆ, ನಾವು ದೊಡ್ಡ ಮನಸ್ಸಿನಿ೦ದ, ಉದಾರವಾಗಿ "ಅವರು ನಮ್ಮ ಹಾಗೆಯೇ" ಎ೦ದು ಮೆಲ್ನೋಟಕ್ಕೆ ಒಪ್ಪಿಕೊಳ್ಳುವುದರಿ೦ದ ಯಾವ ಪ್ರಯೋಜನವೂ ಇಲ್ಲ. ಅವರನ್ನು ಅವರ ಮೂಲ ಸ್ವರೂಪದಲ್ಲಿ ಒಪ್ಪಿಕೊಳ್ಳಬೇಕು. ಸಹಜ ಎ೦ದು ಒಪ್ಪಿಕೊಳ್ಳುವುದೆ೦ದರೆ ಅದು. ಒಬ್ಬ ಹುಡುಗಿ ಋತುಮತಿಯಾದಾಗ, ಅವಳ ತಾಯಿ ಹೇಗೆ, ಇದು ಸಹಜವಾದ, ನೈರ್ಸಗಿಕ ದೈಹಿಕ ಬದಾಲಾವಣೆ ಎ೦ದು ವಿವರಿಸಿ ಹೇಳುತ್ತಾಳೊ, ಅದೇ ರೀತಿ, ಒಬ್ಬ ಹುಡುಗ/ಹುಡುಗಿ ಸಲಿ೦ಗಿಯೆ೦ದು ಗೊತ್ತಾದಾಗ, ತ೦ದೆ-ತಾಯಿ, "ಮಗು ಇದು ಸಹಜವಾದ, ನೈರ್ಸಗಿಕ ದೈಹಿಕ ಬದಾಲಾವಣೆ" ಎ೦ದು ವಿವರಿಸಿದಾಗ, ಇದು ಸಹಜವಾಗುತ್ತದೆ. ತಗಣಿ ಕಥೆಯ ಶ೦ಕರ ಗೌಡನನ್ನು ಬಹುಶ: ಈ ನೆಲೆಯಲ್ಲಿ ನೋಡಬೇಕು.
ನಮ್ಮ ಹುಡುಗಿಗೆ ಹೆಣ್ಣು ಹುಡುಕ್ತಾದ್ದೀವಿ ಅಥವಾ ನಮ್ಮ ಹುಡುಗನಿಗೆ ಗ೦ಡು ಹುಡುಕ್ತಾದ್ದೀವಿ ಎ೦ದಾಗ, ಸಲಿ೦ಗ ಕಾಮವನ್ನು ನಿಜವಾಗಲೂ ನಾವು ಅದರ ಮೂಲ ಸ್ವರೂಪದಲ್ಲಿ ಸಹಜವೆ೦ದು ಒಪ್ಪಿಕೊ೦ಡಿದ್ದೇವೆ ಎ೦ದರ್ಥ. ವಸುಧೇ೦ದ್ರ ಅವರಿಗೆ ಈ ಮೂಲ ಸ್ವರೂಪದ ಸಹಜತೆಯ ಅರಿವಿರುವುದಿ೦ದಲೆ, ಕಥೆಯಲ್ಲಿ ಮೋಹನ ಸ್ವಾಮಿಯ "ಅನಿಯಂತ್ರಿತ ಬಯಕೆಗಳು" ಸಹ ಅತ್ಯ೦ತ ಸಹಜವಾಗಿ ಮೂಡಿ ಬ೦ದಿದೆ. ಹಾಗಾಗಿ ""ಬೀದಿಯಲ್ಲೂ ಯಾವುದೇ ಬಲಾಢ್ಯ ಗಂಡನ್ನು ಕಂಡೊಡನೆ ಅವನೊಳಗಾಗುವ ಉದ್ರೇಕ," ಅತ್ಯ೦ತ ಸಹಜವಾದದ್ದು
ಕಿಲಿಮಂಜಾರೋ ಕಥೆ ಮಾತ್ರ ಕಥಾಸಂಕಲನಕ್ಕೇ ಕಲಶವಿಟ್ಟಂತಹ ಕಥೆಯಾಗಿದೆ. ನಿಜಕ್ಕೂ ನಿಜ!!
ಒಟ್ಟಾರೆ ಒಳ್ಳೆ ಲೇಖನವೊ೦ದನ್ನು ಓದಲು ಕೊಟ್ಟದ್ದಕ್ಕೆ ಧನ್ಯವಾದಗಳು
- ದೀಪಕ್ ಚ೦ದ್ರಶೇಖರ್

ದೀಪಕ್ ಅವರೆ,
ಮೊದಲಿಗೆ ನಿಮ್ಮ ಸುದೀರ್ಘ ಚಿಂತನಶೀಲ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ನಿಮ್ಮ ಹಲವು ಅನಿಸಿಕೆಗಳಿಗೆ ನನ್ನ ಒಮ್ಮತವಿದೆ. ಆದರೆ ಹೆಣ್ಣು-ಗಂಡಿನಷ್ಟೇ, ಹೆಣ್ಣಿನ ಋತುಸಾವ್ರದಷ್ಟೇ ಸಹಜವಾಗಿ ಸಲಿಂಗಿಗಳನ್ನೂ ಸ್ವೀಕರಿಸುವುದು.. ಕಾಲ ತುಂಬಾ ದೂರವಿದೆ ಎಂದೆನಿಸುತ್ತಿದೆ. ಕಾರಣ ಸಲಿಂಗದ ಜೊತೆಗೇ ‘ಕಾಮ’ವೂ ಅಂಟಿಕೊಂಡಿದೆ!
ಇನ್ನು ನೀವು ಹೇಳಿದ ಸಲಿ೦ಗಿಗಳಿಗೆ, ಅವರ ಕಾಮದಿ೦ದಲೇ ಇಷ್ಟೆಲ್ಲಾ ಸಮಸ್ಯೆಗಳಿರುವಾಗ, ಇನ್ನು ಕಾಮನೆಗಳನ್ನು ಮೀರಿದ ಧ್ಯೇಯಗಳ ಕಡೆಗೆ ನೋಡುವುದಾದರು ಹೇಗೆ? >> ಈ ನಿಟ್ಟಿನಲ್ಲಿ ಚಿಂತಿಸಿರಲೇ ಇಲ್ಲ! ಆಲೋಚಿಸುವೆ.. ಆಲೋಚಿಸಬೇಕಾಗಿದೆ. ಧನ್ಯವಾದಗಳು.
"ಬೀದಿಯಲ್ಲೂ ಯಾವುದೇ ಬಲಾಢ್ಯ ಗಂಡನ್ನು ಕಂಡೊಡನೆ ಅವನೊಳಗಾಗುವ ಉದ್ರೇಕ," ಅತ್ಯ೦ತ ಸಹಜವಾದದ್ದು >>> ಊಹೂಂ.. ಯಾಕೋ ನೀವು ಈ ವಿಷಯಕ್ಕೆ ಕೊಟ್ಟ ಸಮರ್ಥನೆ, ವಿವರಣೆ ಮನಸೊಪ್ಪಲಿಲ್ಲ... ಎಲ್ಲೋ ಎನೋ ಸಹಜವಿಲ್ಲ ಎಂದೇ ಈಗಲೂ ಅನಿಸುತ್ತಿದೆ! ಹೆಣ್ಣು-ಗಂಡಿನಷ್ಟೇ ಸಹಜವಾಗಿದ್ದೇ ಆದಲ್ಲಿ, ಈ ಒಂದು ಸಾಲಿನ ಮೇಲೆ ನನ್ನ ಮೊದಲಿನ ಅನಿಸಿಕೆಯೆಡೆಗೇ ಹೆಚ್ಚು ಮನಸು ವಾಲುತ್ತದೆ! (ಲೇಖನದಲ್ಲಿ ನಾನು ಹೇಳಿರುವಂತೇ..)
ಒಟ್ಟಿನಲ್ಲಿ ನಿಮ್ಮ ಪ್ರತಿಕ್ರಿಯೆ ಹೊಸ ಆಯಾಮವನ್ನು, ಚಿಂತನೆಗಳನ್ನು ಒರೆಹಚ್ಚುವಂತಿವೆ.. ಮಂಥನದಲ್ಲಿ ಹೊಸತು ಉದ್ಭವವಾದರೆ ಖಂಡಿತ ಇಲ್ಲೇ ಹಂಚಿಕೊಳ್ಳುವೆ.
ಮಗದೊಮ್ಮೆ ಸಸ್ನೇಹ ವಂದನೆಗಳು.
-ತೇಜಸ್ವಿನಿ.
ತೇಜಸ್ವಿನಿ, ನಿಮ್ಮ ಬರಹ ಇಷ್ಟವಾಯಿತು. ತುಂಬಾ ನೇರವಾಗಿ ಸ್ಪಷ್ಟವಾಗಿ ಅಭಿಪ್ರಾಯ ದಾಖಲಿಸಿದ್ದೀರಿ. ಇದನ್ನು ಓದಿದ ಮೇಲೆ ಈ ಸಂಕಲನ ಒಮ್ಮೆ ಓದಲೇಬೇಕು ಅನ್ನಿಸಿತು. ಒಳ್ಳೆಯ ಬರಹಕಾಗಿ ಧನ್ಯವಾದ.
ನಿಮ್ಮ ವಿಮರ್ಶೆ ಚೆನ್ನಾಗಿದೆ..
ಕಾದಂಬರಿ ಅದರ ಸಹಜ ಶೈಲಿನಿಂದಾಗಿ ನನ್ನನ್ನು ಓದಿಸಿಕೊಂಡು ಹೋಯ್ತು..ಅಕಾಡ್ಮಿಕ್ ಭಾಷೆಯೇ ವಿಜೃಂಭಿಸುವ ಕೃತಿಗಳನ್ನು ನಾನು ಇತ್ತೀಚೆಗೆ ಓದುವುದನ್ನು ಬಿಟ್ಟಿದ್ದೇನೆ.
ಕಾಮೆಂಟ್ ಪೋಸ್ಟ್ ಮಾಡಿ