ಮಂಗಳವಾರ, ನವೆಂಬರ್ 12, 2013

ಅಡಿಗರ ಅಡಿಗೆ ನಮಿಸುತ್ತಾ...

ಕೆಲವು ಹಾಡುಗಳೇ ಹಾಗೇ.... ಕಾಲ, ದೇಶ, ಸ್ಥಿತಿ ಎಲ್ಲವನ್ನೂ ಮೀರಿ ಜನಮಾನಸದ ಮೇಲೆ ಬೆಳೆಯುತ್ತಲೇ ಹೋಗುತ್ತವೆ. ಕೇಳುತ್ತಿದ್ದಂತೇ ಪ್ರಸ್ತುತ ಮನಃಸ್ಥಿತಿಗೆ ಕನ್ನಡಿ ಹಿಡವಂತಿವೆಯೇನೋ ಎಂಬ ಭಾಸ ಕೇಳುಗರಲ್ಲಿ/ಓದುಗರಲ್ಲಿ ಉಂಟುಮಾಡುತ್ತವೆ. ಬಹು ಹಿಂದೆ ರಚಿತವಾದ ಹಾಡುಗಳದೆಷ್ಟೋ ಇಂದಿಗೂ ಬಹು ಪ್ರಸ್ತುತ ಎಂದೆನಿಸಿಕೊಳ್ಳುತ್ತವೆ. ಕವಿ ರಚಿಸುವಾಗ ಇದ್ದ ಚಿತ್ರಣ, ಅವನ ಕಲ್ಪನೆಗೆ ಆ ಕ್ಷಣಕ್ಕೆ ಹೊಳೆದ ಯಾವುದೋ ದೃಶ್ಯಾನುಭೂತಿ, ತನ್ನೊಳಗೆ ಆವಿರ್ಭವಿಸಿದ್ದ ಹಳೆಯ ಅನುಭವಗಳ ಹೂರಣ - ಇದ್ಯಾವುವೂ ಇದ್ದಹಾಗೇ ಓದುಗರನ್ನು ತಟ್ಟದಿದ್ದರೂ... ಸಾಮಾನ್ಯರಿಂದ ಹಿಡಿದು ಸಾಹಿತ್ಯಪ್ರಿಯ ಓದುಗರನ್ನೆಲ್ಲಾ ಸೆಳೆದು ಹಿಡಿದಿಟ್ಟುಕೊಳ್ಳುವ ಹಾಡುಗಳೇ ಜನಪ್ರಿಯ ಎಂದೆನಿಸಿಕೊಳ್ಳುತ್ತವೆ. 

ಕವಿತೆ ಕಾವ್ಯವಾಗುವುದು ಅದಕ್ಕೊದಗುವ ಇಂಪಾದ ಸಂಗೀತದಿಂದ. ಕಾವ್ಯದೊಳಗಿನ ಗಾಢಾರ್ಥವನ್ನು, ಗೂಢಾರ್ಥವನ್ನು ಕಿವಿಯಮೂಲಕ ಸಮರ್ಥವಾಗಿ ಹೃದಯಕ್ಕೊಯ್ಯಲು ಸಾಹಿತ್ಯದಷ್ಟೇ ಸುಂದರ, ಮೋಹಕ ಸಂಗೀತದ ಆವಶ್ಯಕತೆ ಇರುತ್ತದೆ. ಗೇಯತೆಯಿಂದಕೂಡಿದ ಕವನ ಬಹು ಬೇಗ ಜನರ ಮನಸನ್ನು ತಟ್ಟುತ್ತದೆ, ದೀರ್ಘಕಾಲ ಬಾಳುತ್ತದೆ. ಹಾಗೆ ನೋಡಿದರೆ ಎಲ್ಲಾ ಕವಿತೆಗಳೂ ಸಂಗೀತದ ಚೌಕಟ್ಟಿಗೇ ನಿಲುಕಬೇಕೆಂಬ ನಿಯಮವೇನೂ ಇಲ್ಲ. ಸುಂದರ, ಸರಳ, ಹೃದ್ಯ ಅದೆಷ್ಟೋ ಕವಿತೆಗಳು ನಮ್ಮ ಮುಂದಿವೆ. ಆದರೆ ಹಾಡಾಗುವ ಕವನಗಳೇ ಹೆಚ್ಚು ಹೆಚ್ಚು ನಮ್ಮನ್ನು ಕಾಡುವವು ಎಂಬುದೂ ಅಷ್ಟೇ ಸತ್ಯ.

ಅಂತಹ ಜನಪ್ರಿಯ ಕವಿತೆಯೊಂದರ ಕಿರು ಪರಿಚಯ ಇಲ್ಲಿದೆ. ಶ್ರೀಯುತ ಗೋಪಾಲಕೃಷ್ಣ ಅಡಿಗರ "ಕಟ್ಟುವೆವು ನಾವು" ಕವನ ಸಂಕಲನದಲ್ಲಿರುವ "ಮೋಹನ ಮುರಲಿ" ಎಂಬ ಪ್ರಸಿದ್ಧ ಹಾಡು ಇಂದಿಗೂ ಎಲ್ಲರ ಮನದೊಳಗೆ ಶಾಶ್ವತವಾಗಿ ಮನೆಮಾಡಿದೆ. ಈ ಹಾಡನ್ನು ಗುನುಗಿಕೊಳ್ಳದಿರುವವರೇ ತೀರಾ ಕಡಿಮೆ ಎನ್ನಬಹುದು. ಇದಕ್ಕೆ ಕಾರಣ ಕವಿತೆಯೊಳಗಿರುವ ಕಾವ್ಯಲಯ ಮತ್ತು ಗೇಯತೆ. ಏನೂ ಅರ್ಥ ಆಗದಿರುವವರಿಗೂ ಎನೋ ಒಂದು ಅರ್ಥವನ್ನು ಹೊಳಹಿಸುತ್ತದೆ ಈ ಹಾಡಿನಲ್ಲಿ ಭಾವನೆಯೇ ತುದಿಯಿಂದ ಬುಡದವರೆಗೂ ನಾದವಾಗಿ ಹರಿಯುತ್ತದೆ. 

ಹಾಡಿನ ಶೈಲಿ :-

ಮೊದ ಮೊದಲು ಅಡಿಗರು ನವೋದಯ ಶೈಲಿಯಲ್ಲಿ ಕಾವ್ಯ ರಚಿಸಿದರೂ ಆಮೇಲೆ ನವ್ಯ ಶೈಲಿಯಲ್ಲೇ ಹೆಚ್ಚು ಕವಿತೆಗಳನ್ನು ರಚಿಸಿದರು. ಆದರೆ ಅವರ ಹೆಚ್ಚಿನ ಕವಿತೆಗಳೆಲ್ಲಾ ಪಾರಮಾತ್ಮಿಕ, ಆಧ್ಯಾತ್ಮಿಕ ಚಿಂತನೆಯನ್ನು ಹೊಳಹಿಸುತ್ತವೆ. ಅವರ "ಮೋಹನ ಮುರಲಿ" ಕವನ ನವ್ಯಕಾವ್ಯದ ಛಾಪನ್ನು ಹೊಂದಿರುವ ನವೋದಯ ಕವಿತೆಯಾಗಿದೆ. ನವ್ಯ ಶೈಲಿಯಲ್ಲಿ ಅನೇಕರು ಉತ್ತಮ ಕವಿತೆಗಳು ಬರೆದಿದ್ದಾರೆ. ಆದರೆ ಅಡಿಗರಷ್ಟು ಎತ್ತರಕ್ಕೇರಲು ಯಾರಿಗೂ ಸಾಧ್ಯವಾಗಲಿಲ್ಲ ಎಂದರೆ ಅತಿಶಯೋಕ್ತಿಯಿಲ್ಲ. 

ಕವಿತೆಯ ಪೂರ್ಣ ಸಾಹಿತ್ಯ :

ಮೋಹನ ಮುರಲಿ 

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ; 

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿದ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಎನೊ ತೀಡಲು ಏನೊ ತಾಡಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ? 

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ? 

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?


ಈ ಹಾಡಿಗೆ ಪ್ರಥಮಬಾರಿ ಸಂಗೀತ ಸಂಯೋಜಿಸಿದ್ದು ಶ್ರೀಯುತ ಮೈಸುರು ಅನಂತಸ್ವಾಮಿಯವರು. ಸುಶ್ರಾವ್ಯವಾಗಿ ಹಾಡಿದವರು ಶ್ರೀಮತಿ ರತ್ನಮಾಲಾ ಪ್ರಕಾಶ್. ಕಲ್ಪನಾಲೋಕದಲ್ಲಿ ವಿಹರಿಸುವ ಪ್ರಣಯಿಗಳ, ರಾಧಾಕೃಷ್ಣರನ್ನು ಆರಾಧಿಸುವ ಭಕ್ತರ, ಪ್ರೀತಿಯನ್ನಗಲಿದ ವಿರಹಿಗಳ, ಕಾವ್ಯರಸಿಕರ - ಇವರೆಲ್ಲರ ಬಾಯಲ್ಲಿ ಮೋಹನ ಮುರಳಿ ಈಗಲೂ ನಲಿಯುತ್ತಿದ್ದಾನೆ. ಅಡಿಗರ ಕವನದೊಳಗಿನ ವಿರಹ, ಪ್ರಣಯ, ಆರ್ತನಾದ, ಭಕ್ತನ ಮೊರೆ, ತುಡಿತ, ಬಯಕೆ - ಇವೆಲ್ಲವೂ ಅನಂತಸ್ವಾಮಿಯವರ ಸಂಗೀತ ಹಾಗೂ ರತ್ನಮಾಲಾರ ಕಂಠದಲ್ಲಿ ಹದವಾಗಿ ಮಿಳಿತಗೊಂಡು ಕೇಳುಗರ ಎದೆಯಲ್ಲಿ ಶಾಶ್ವತ ಛಾಪನ್ನು ಮೂಡಿಸಿದೆ.

ಚಲನಚಿತ್ರದಲ್ಲಿ "ಮೋಹನ ಮುರಲಿ" :-

೧೯೯೭ ರಲ್ಲಿ ಬಿಡುಗಡೆಗೊಂಡ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ "ಅಮೇರಿಕಾ ಅಮೇರಿಕಾ" ಚಲನಚಿತ್ರದಲ್ಲಿ ಅಡಿಗರ ಇದೇ ಕವಿತೆಯನ್ನು ಬಹು ಸಮರ್ಥವಾಗಿ ಬಳಸಿಕೊಳ್ಳಲಾಯಿತು. ಸಾಂಪ್ರದಾಯಿಕ ಸಂಗೀತ ಶೈಲಿಗಿಂತ ಭಿನ್ನವಾದ ಸಂಗೀತವನ್ನು ಕೊಟ್ಟವರು ಶ್ರೀ ಮನೋಮೂರ್ತಿಯವರು. ಹಾಡಿದವರು ರಾಜು ಅನಂತಸ್ವಾಮಿ ಹಾಗೂ ಸಂಗೀತ ಅವರು. ಆ ಸಮಯದಲ್ಲಿ ಯಾವುದೋ ಒಂದು ಪತ್ರಿಕೆಯಲ್ಲಿ ಓದಿದ್ದ ನೆನಪು..‘ಈಗಾಗಲೇ ರತ್ನಮಾಲಾರ ಹಾಡಿನಲ್ಲಿ ಜನಪ್ರಿಯಗೊಂಡಿರುವ ಈ ಕವಿತೆಗೆ ಭಿನ್ನವಾದ ಸಂಗೀತವನ್ನಿತ್ತರೆ ಸಫಲರಾಗುವರೇ?? ಚಿತ್ರಕತೆಯಲ್ಲಿ ಈ ಹಾಡಿನ ಬಳಕೆ ಸಮರ್ಪಕವಾಗಿದೆಯೇ??" ಎಂಬಿತ್ಯಾದಿ ಸಂಶಯಗಳು, ಪ್ರಶ್ನೆಗಳು ಹಲವರಲ್ಲಿ ಮೂಡಿತ್ತು. ಆದರೆ ಚಿತ್ರ ಬಿಡುಗಡೆಗೊಂಡಾಗ ಈ ಹಾಡಿಗೆ ಒದಗಿಸಲಾದ ಹೊಸ ಸಂಗೀತ ಅದೆಷ್ಟು ಹೆಸರುಗಳಿಸಿತೆಂದರೆ ಹಳೆಯ ಸಂಗೀತದ ನೆನಪನ್ನೂ ತುಸು ಮಬ್ಬಾಗಿಸಿತೆನ್ನಬಹುದು. ಈ ಕ್ರಾಂತಿಯಾಗಿದ್ದು ಕೇವಲ ಸಂಗೀತಮಾತ್ರದಿಂದ ಎನ್ನಲಾಗದು. ಹಾಡನ್ನು ಚಿತ್ರದಲ್ಲಿ ಬಳಸಿಕೊಂಡ ಸಂದರ್ಭವೂ ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸಿದೆ ಎಂಬುದು ನನ್ನ ಅಭಿಮತ.

ಹಾಡಿನ ಹಿನ್ನೆಲೆ :-

ಅಡಿಗರು ಈ ಕವಿತೆಯನ್ನು ರಚಿಸಿದ್ದು ಸಿದ್ಧಾರ್ಥ ಗೌತಮಬುದ್ಧನಾಗಲು ಹೊರಟ ಸಂದರ್ಭವನ್ನು ನೆನೆದು ಎನ್ನುವ ಊಹೆ ಕೆಲವು ಕಾವ್ಯ ಪಂಡಿತರದ್ದು. ಇದಕ್ಕೆ ಸಾಕಷ್ಟು ಪುಷ್ಟಿಕೊಡುವಂತಿದೆ ಕವಿತೆಯ ಸಾಹಿತ್ಯ. ಇನ್ನು ಕೆಲವರ ಪ್ರಕಾರ, ಕವನ ಆತ್ಮ-ಪರಮಾತ್ಮನ ನಡುವಿನ ಸೂಕ್ಷ್ಮ ಎಳೆಯನ್ನು, ಜೀವಾತ್ಮ ದೇಹವನ್ನು ತೊರೆದು ಭಗವಂತನಲ್ಲಿ ಲೀನವಾಗಲು ಮೊರೆಯಿಡುತ್ತಿರುವುದನ್ನು, ಬಿಟ್ಟೂ ಬಿಡದ ಮಾಯೆಯೊಳಗೆ ಸಿಲುಕಿ ಮಿಸುಕಾಡುವ ತುಡಿತವನ್ನು ಪ್ರತಿಬಿಂಬಿಸುತ್ತಿದೆ. ಒಟ್ಟಿನಲ್ಲಿ ಹೀಗೇ ಎಂದು ಖಚಿತವಾಗಿ ಅರ್ಥೈಸಿಕೊಳ್ಳಲಾಗದಷ್ಟು ಎತ್ತರಕ್ಕೇರಿರುವ ಈ ಹಾಡು ಕೇಳುಗರಲ್ಲಿ, ಓದುಗರಲ್ಲಿ, ವಿಮರ್ಶಕರಲ್ಲಿ ಬೇರೆ ಬೇರೆ ಅರ್ಥಗಳನ್ನೇ ಹುಟ್ಟುಹಾಕಿದೆ. ಆದ್ಯಾತ್ಮ ಚಿಂತಕರಲ್ಲಿ ಲೌಕಿಕತೆಯಿಂದ ಅಲೌಕಿಕತೆಯೆಡೆಗೆ ಎಳೆಯುವ ಹಾಡು ಎಂದೆನಿಸಿಕೊಂಡರೆ, ಯುವಕರಿಗಿದು ಪ್ರೇಮಗೀತೆ.... ವಿರಹಗೀತೆ! 

"ಅಮೇರಿಕಾ ಅಮೇರಿಕಾ" ಚಿತ್ರದಲ್ಲಿ ಈ ಹಾಡನ್ನು ನಾಯಕ ಹುಟ್ಟಿದ ಊರು, ಮನೆ, ದೇಶವನ್ನು ತೊರೆದು ಪರದೇಶಕ್ಕೆ ಹೊರಟಾಗ ಅವನು ಬಿಟ್ಟು ಹೋಗುವ ಸ್ನೇಹಿತರು, ಆಪ್ತೇಷ್ಟರು, ಹೆತ್ತವರ ಮನಃಸ್ಥಿತಿಯನ್ನು ಬಿಂಬಿಸುವಾಗ ಬಳಸಿಕೊಳ್ಳಲಾಗಿದೆ. ಚಿತ್ರಕಥೆಯ ಕೊನೆಯಲ್ಲಿ ಹುಟ್ಟಿದೂರಿನ ಮಹತ್ವವನ್ನರಿತ ನಾಯಕ ಮರಳಲು ಯತ್ನಿಸಿದರೂ, ಹಿಂತಿರುಗಲಾಗದೇ ಹೊರದೇಶದಲ್ಲೇ ಅಸುನೀಗುವಾಗಿನ ಕ್ಷಣದಲ್ಲಿ.... "ವಿವಶವಾಯಿತು ಪ್ರಾಣ ಹಾ.." ಎಂದು ಹಾಡು ಬರುತ್ತದೆ. ಆಗ ಎಂತಹವರ ಮನಸೂ ದ್ರವಿಸದಿರದು. ಆ ಸಂದರ್ಭದಲ್ಲಿ ಬಳಸಿಕೊಂಡ ಹಾಡಿನ ಸಾಹಿತ್ಯ ಬೇರೇ ಅರ್ಥವನ್ನೇ ಕಲ್ಪಿಸಿಕೊಡುತ್ತದೆ. ದೇಶಾಭಿಮಾನ, ತನ್ನವರ ತೊರೆದು ಬದುಕಲು ಪರದಾಡುವ ಮನವನ್ನು ನೋಡುಗರ ಮನದೊಳಗೆ ಗಾಢವಾಗಿ ಛಾಪಿಸುತ್ತದೆ.

ನಾ ಕಂಡಂತೆ "ಮೋಹನ ಮುರಲಿ" :-

"ಕೃಷ್ಣ" ಸದಾ ನನ್ನ ಕಾಡಿದವ. ಗೀತೆಯಕೃಷ್ಣನ ಮೇರುವ್ಯಕ್ತಿತ್ವ, ವಿಶ್ವರೂಪ ಭಕ್ತಿ, ಗೌರವ ತುಂಬಿದರೆ, ಮೋಹನ್ಮುರಲಿಯನ್ನು ಕಲ್ಪಿಸಿಕೊಂಡರೆ ಸಾಕು- ಅಷ್ಟೇ ಸೂಕ್ಷ್ಮವಾಗಿ, ಸರಳ ಸುಲಭವಾಗಿ ನನ್ನ ಮುಂದೆ ನಿಂತಂತಾಗುತ್ತಾನೆ. ಕೊಳಲಗಾನ ಎಂದರೇ ಏನೋ ತಲ್ಲೀನತೆ, ತನ್ಮಯತೆ. ಓರ್ವ ಅತ್ಯಂತ ಆಪ್ತ ಗೆಳೆಯನಂತೆ, ಹಿತೈಷಿಯಂತೆ, ಸಹೋದರನಂತೆ, ಪ್ರಿಯಕರನಂತೆ - ಎಲ್ಲಾ ರೀತಿಯಲ್ಲೂ, ಎಲ್ಲಾ ರೂಪದಲ್ಲಿ ಸುಳಿದಾಡಿ ಸನಿಹಗೊಳ್ಳುವ ಮೋಹನನ ಕುರಿತಾದ ಪ್ರಸ್ತುತ ಈ ಹಾಡು ಅವನ ಪ್ರತಿಯೊಂದು ಲೀಲೆಯನ್ನೂ, ಅವನ ಕೊಳಲೊಳಗಿಂದ ಹೊರಹೊಮ್ಮುವ ಮಂತ್ರಮುಗ್ಧ ನಾದವನ್ನೂ ಪದಪದದಲ್ಲೂ, ಪ್ರತಿ ಪ್ರಾಸದಲ್ಲೂ ಕಾಣಿಸುತ್ತದೆ ಎಂದೆನಿಸುತ್ತದೆ ನನಗೆ. "ಮೋಹನ ಮುರಲಿ" ಹಾಡನ್ನು ರತ್ನಮಾಲಾಪ್ರಕಾಶ್ ಅವರ ಸಂಗೀತದಲ್ಲಿ ಕೇಳುವಾಗ ಒಂದು ರೀತಿಯ ಅನುಭೂತಿಯಾದರೆ, "ಅಮೇರಿಕಾ ಅಮೇರಿಕಾ" ಚಲನಚಿತ್ರದಲ್ಲಿ ಬಳಸಿಕೊಂಡ ಸಂಗೀತ ಕೇಳಿದಾಗ ಬೇರೆಯದೇ ರೀತಿಯ ಅನುಭೂತಿಯಾಗುವುದು. ಮೂಲ ಸಂಗೀತ ಕೇಳುತ್ತಿದ್ದಂತೆ ಕಣ್ಣು ಅಪ್ರಯತ್ನವಾಗಿ ಅರೆನಿಮೀಲಿತಗೊಂಡು ಬೃಂದಾವನದೆಡೆಗೇ ಹೋದಂತೆ... ಶಾಂತ ರಸ, ಕರುಣ ರಸ ನನ್ನೊಳಗೆ ಪ್ರವಹಿಸಿದಂತೆ ಭಾಸವಾದರೆ, ಮನೋಮೂರ್ತಿಯವರ ಸಂಗೀತದ ತುಂಬೆಲ್ಲಾ ಶೋಕರಸದ ಆವಿರ್ಭಾವವೊಂದೇ ಉಂಟಾಗುತ್ತದೆ.

ಎರಡೂ ಸಂಗೀತಗಳು ನಮ್ಮನ್ನು ತಟ್ಟುತ್ತವೆ, ಕಾಡುತ್ತವೆ, ಬೇರೆಯೆ ಲೋಕಕ್ಕೇ ನಮ್ಮನೆಳೆಸುತ್ತವೆ. ನನಗೆ ಉಂಟಾದಂತಹ ಅನುಭೂತಿಯೇ ಇತರರಿಗೂ ಆಗಬೇಕೆಂದಿಲ್ಲ. ಆದರೆ ಯಾವುದೋ ಒಂದು ಅನುಭವವನ್ನು ಕೇಳುಗರಲ್ಲಿ ಖಚಿತವಾಗಿ ಉಂಟುಮಾಡುವಲ್ಲಿ ಮಾತ್ರ ಸಫಲವಾಗಿದೆ ಅಡಿಗರ ಈ ಪ್ರಸಿದ್ಧ ಹಾಡು. ಅಷ್ಟೊಂದು ಶಕ್ತಿಯಿದೆ ಅವರ ಹಾಡಿನೊಳಗಿನ ಸಾಹಿತ್ಯದಲ್ಲಿ, ಕವಿತೆಯೊಳಡಗಿರುವ ಅರ್ಥಗಳಲ್ಲಿ.

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ? 

ಈ ಸಾಲೊಂದೇ ಸಾಕು ಈ ಕವಿತೆಯೊಳಡಗಿರುವ ಕಾವ್ಯಶಕ್ತಿಯನ್ನು ಕಾಣಲು. ಹಲವರ ಪ್ರಕಾರ ಅಡಿಗರು ಈ ರೀತಿ ಹೇಳಿದ್ದು ಒಂದು ಹೇಳಿಕೆಯ ಹಾಗೆ.... ಅನುಭವದ ನುಡಿಯಂತೇ! ಬದುಕೆಂದರೆ, ವಯೋಮಿತಿಯ ಹಂಗಿಲ್ಲದೇ ಆಬಾಲವೃದ್ಧರಾಗಿ... ನಮ್ಮೊಳಗಿರದ್ದನ್ನು, ನಮಗೆ ಹೊರತಾದದ್ದನ್ನು ಬಯಸುವುದು- ಎಂದೇ ಈ ಸಾಲನ್ನು ಅರ್ಥೈಸಿಕೊಂಡವರು ಹೆಚ್ಚು. ಆದರೆ ನನ್ನ ಪ್ರಕಾರ ಮೂಲ ಕವಿತೆಯನ್ನು ಸರಿಯಾಗಿ ಗಮನಿಸಿದರೆ ಈ ಸಾಲಿನ ಕೊನೆಯಲ್ಲಿರುವ ಪ್ರಶ್ನಾರ್ಥಕ ಚಿಹ್ನೆ ಕವಿಮನಸಿನ ನಿಜ ಭಾವದ ಸುಳಿವೊಂದನ್ನು ನಮಗೆ ತಿಳಿಸುತ್ತದೆ. ನಮ್ಮೊಳಗಿನ ದಾಹಕ್ಕೆ, ಆಶಯಕ್ಕೆ, ಆಕಾಂಕ್ಷೆಗಳಿಗೆ ಎಂದಾದರೂ ಕೊನೆಯಿದೆಯೇ?? ನಿರಂತರ ಹುಡುಕಾಟ, ಕಾಣದ ಗುರಿಯೆಡೆ ಪಯಣವೇ ಬದುಕೇ?? ದೇಹದಿಂದ ಮುಕ್ತಗೊಂಡು ಪರಮಾತ್ಮನನ್ನು ಸೇರುವ ಆತ್ಮದ ತುಡಿತದ ಫಲ ಜೀವನವೇ??? - ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳು ಇದರಲ್ಲಡಗಿದೆಯೇನೋ ಎಂಬ ಭಾಸ ನಮಗಾಗುತ್ತದೆ. ಈ ಸಾಲಿನ ಮುಂದೆ "ಪೂರ್ಣವಿರಾಮ" ಅಥವಾ "ಅಲ್ಪವಿರಾಮ"ವಿದ್ದಿದ್ದರೆ ಅರ್ಥವೇ ಬೇರೆಯಾಗುತ್ತಿತ್ತೇನೋ! ಅಡಿಗರ ಆಶಯ ಏನಾಗಿತ್ತೆಂದು ಯಾರೂ ಹೀಗೇ ಎಂದು ಹೇಳಲಾಗದು. ಸೂಕ್ಷ್ಮಗ್ರಹಿಕೆಯನ್ನಷ್ಟೇ ನೀಡಬಹುದು. ಆದರೆ ಬದುಕನ್ನು ಕೇವಲ ಒಂದು ಸಾಲಿನಲ್ಲಿ ವಿವರಿಸುವ ಶಕ್ತಿ ಅಡಿಗರ ಈ ಕವನಕ್ಕಿದೆ ಎಂದು ಮಾತ್ರ ನಿಖರವಾಗಿ ಹೇಳಬಹುದು.

ಕೊನೆಯಲ್ಲಿ :-

ಕವಿತೆಯೆಂದರೆ "ಅವರವರ ಭಾವಕ್ಕೆ... ಅವರವರ ಭಕುತಿಗೆ" ಬಿಟ್ಟದ್ದೇ. ಒಮ್ಮೆ ಅದು ಕವಿಯಿಂದ ಹೊರಬಂದಮೇಲೆ ಸಾರ್ವತ್ರಿಕವೇ. ಕವಿಯ ಮನದೊಳಗಿನ ಭಾವವನ್ನೇ ಓದುಗನೂ ಹೊಂದಬೇಕೆಂದಿಲ್ಲ. ಹಾಗಾಗಿ ಒಂದು ಕವಿತೆಗೆ ಹಲವು ಅರ್ಥಗಳು. ಆರೋಗ್ಯಕರ ಮನಸು ಮಾತ್ರ ಸುಂದರ ಕವಿತೆಗಳನ್ನು ಓದುವ, ಅಸ್ವಾದಿಸುವ, ಅದು ನೀಡುವ ಅನುಭೂತಿಯನ್ನು ಅನುಭವಿಸುವ ಅವಕಾಶಗಳನ್ನು ಕೊಡುತ್ತದೆ. ಹಾಡನ್ನು ಜೀವಂತವಾಗಿರಿಸುವುದೇ ಅದು ಸ್ಫುರಿಸುವ ಭಾವಗಳು. ಸದಾ ಒಂದು ಸೂತ್ರಕ್ಕೇ ಅಂಟಿಕೊಂಡಿರದ ಸಂಚಾರಿಭಾವಗಳೇ ಒಂದು ಹಾಡಿಗೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಿಕೊಡುತ್ತವೆ. ಬಹುಶಃ ಅದಕ್ಕೇ ಇರಬೇಕು ಡಾ.ಜಿ.ಎಸ್.ಶಿವರುದ್ರಪ್ಪನವರು ಹೀಗೆ ಹೇಳಿದ್ದು- "ಹಾಡು ಹಳೆಯದಾದರೇನು ಭಾವ ನವನವೀನ..".

-ತೇಜಸ್ವಿನಿ ಹೆಗಡೆ

(ಕೆಲವು ತಿಂಗಳ ಹಿಂದೆ "ಅವಧಿ"ಯಲ್ಲಿ ಪ್ರಕಟಗೊಂಡಿತ್ತು...)


-----

ಸೂಚನೆ : ಮೂಲ ಹಾಡಿನಲ್ಲಿರುವ ಮೂರನೆಯ, ನಾಲ್ಕನೆಯ ಹಾಗೂ ಐದನೆಯ ಚರಣಗಳು ಚಲನಚಿತ್ರದಲ್ಲಾಗಲೀ, ರತ್ನಮಾಲಾ ಪ್ರಕಾಶ್ ಅವರ ಹಾಡಿನಲ್ಲಾಗಲೀ ಕಾಣಸಿಗವು!

ಶಬ್ದಾರ್ಥ:-

ಬಿಸಿದುಸೋಂಕಿನ = ಜೀವಂತ ಸ್ಪರ್ಶದ ಸೋಂಕು=ಸ್ಪರ್ಶ

ಮಿದುವೆದೆ= ಆರ್ದ್ರ ಎದೆ, ಪ್ರೀತಿ, ಸ್ನೇಹ ತುಂಬಿದ ಹ್ರ್‍ಋದಯ.


ಆಧಾರ :- "ಆಧುನಿಕ ಕನ್ನಡ ಕಾವ್ಯ" - ಡಾ.ಎಚ್. ತಿಪ್ಪೇರುದ್ರಸ್ವಾಮಿ.
             ಅಂತರ್ಜಾಲ



5 ಕಾಮೆಂಟ್‌ಗಳು:

ಮನಸು ಹೇಳಿದರು...

ಕವಿತೆ ಎನ್ನುವುದು ಬರಿ ಅರ್ಥ ಅಲ್ಲ, ಕವಿತೆ ಒಂದು ಅನುಭವ, ಅದು ಭಾವ ಅದಕ್ಕೂ ಒಂದು ಶೃತಿ, ರಾಗ, ಆಲಾಪ, ಅನುನರಣ ಶಕ್ತಿ. ಅರ್ಥ ಹುಡುಕುವುದು ಬೇಡ. ಕವಿತೆ ಅಂದರೆ ಮನಸಿನ ಗಂಟುಗಳನ್ನು ಬಿಡಿಸುವ ಹಾಗೆ ಫೈಲ್ಗಳನ್ನು ತೆರೆದಿಡುವುದು. - ಯಶವಂತ ಚಿತ್ತಾಲರು

ಹೀಗೆ ಒಂದೆಡೆ ಜಯಂತ್ ಕಾಯ್ಕಿಣಿ ಅವರಿಗೆ ಯಶವಂತ ಚಿತ್ತಾಲರು ಹೇಳ್ತಾರೆ. ಅದು ನಿಜ ಕೂಡಾ ಕವಿತೆ ಅವರವರ ಭಾವಕ್ಕೆ....

ಅದ್ಭುತವಾಗಿದೆ ಲೇಖನ ತೇಜು, ನನ್ನಲ್ಲಿ ಸದಾ ಗುನುಗುವ ಹಾಡು ಇದು.

ತೇಜಸ್ವಿನಿ ಹೆಗಡೆ ಹೇಳಿದರು...

ಆಹಾ ಸುಗುಣಕ್ಕ ನಿಮ್ಮ ಪ್ರತಿಕ್ರಿಯೆಯೇ ಕಾವ್ಯಮಯವಾಗಿದೆ :)

ಈಶ್ವರ ಹೇಳಿದರು...

ಒಳ್ಳೆಯ ಲೇಖನ ತೇಜಕ್ಕ.. ಅಡಿಗರ ಮತ್ತು ಬೇಂದ್ರೆಯವರ ಕಾವ್ಯಶಕ್ತಿಯೇ ಅಂತಹದ್ದು. ಕಾಲ ದೇಶಗಳನ್ನು ಮೀರುವ ಅರ್ಥವಿನ್ಯಾಸ ಅರ್ಥಗಾಂಭೀರ್ಯ ಹೊಂದಿರುವಂತಹದ್ದು. ಒಳ್ಳೆ ಬರಹ..ಧನ್ಯವಾದ.

sunaath ಹೇಳಿದರು...

ತೇಜಸ್ವಿನಿ,
ನನ್ನ ನೆಚ್ಚಿನ ಕವಿ ಅಡಿಗರ ಖ್ಯಾತ ಕಾವ್ಯಕ್ಕೆ ಸಮುಚಿತ ವ್ಯಾಖ್ಯಾನ ಬರೆದು ನನ್ನ ಮನಸ್ಸನ್ನು ತಣಿಸಿದ್ದೀರಿ. ಧನ್ಯವಾದಗಳು.

ವಿ.ರಾ.ಹೆ. ಹೇಳಿದರು...

Good one. Thanks..