ಮಂಗಳವಾರ, ಜೂನ್ 12, 2012

ನ್ಯಾಯಯುತವಾಗಿ, ಸತ್ಯತೆಯಲ್ಲಿ ನಮಗೆ ಸಿಗಬೇಕಾಗಿರುವ ನಮ್ಮ ಹಕ್ಕಿಗಾಗಿ...


Courtesy : http://disabledpeopleprotest.wordpress.com/   

ರಿಯಾಲಿಟಿ ಶೋ‌ಗಳೆಂದರೆ ಬರಿಯ ಬೂಟಾಟಿಕೆಯ... ನಮ್ಮ ಮನದ ಭಾವನೆಗಳೊಂದಿಗೆ ಆಟವಾಡುವ.. ಸ್ಪರ್ಧಾರ್ಥಿಗಳನ್ನು ಮಾನಸಿಕವಾಗಿ ಹಿಂಸಿಸುವ.. ಸಮಯಕೊಲ್ಲುವ ಕಾರ್ಯಕ್ರಮಗಳೆಂಬುದು ನನ್ನ ಬಲವಾದ ನಂಬಿಕೆ. ಇದು ಬಹುತೇಕ ಸತ್ಯವೆಂದೂ ಸಾಬೀತಾಗಿದೆ. ಆದರೆ ಇತ್ತೀಚಿಗೆ ಬರುತ್ತಿರುವ ಆಮೀರ್ ಖಾನ್‌ರ "ಸತ್ಯಮೇವ ಜಯತೇ" ಕಾರ್ಯಕ್ರಮ ಮಾತ್ರ ವಿಭಿನ್ನವಾಗಿ ನಿಲ್ಲುತ್ತಿರುವುದು (ಸಧ್ಯ ಹೀಗಿದೆ ಮುಂದೆ ಹೇಗೋ....!) ಸ್ವಲ್ಪ ಸಂತಸವಾಗಿತಿದೆ. ನೋಡುಗರು ಕಾತುರದ ನಿರೀಕ್ಷೆಯನ್ನು ವಾರಾಂತ್ಯದವರೆಗೂ ಹಿಡಿದಿಟ್ಟಿಕೊಳ್ಳುವಂತೆ ಮಾಡುತ್ತಿದೆ "ಸತ್ಯಮೇವ ಜಯತೇ". 


ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು, ವೈದ್ಯಕೀಯ ಕ್ಷೇತ್ರದೊಳಗಿನ ಅವ್ಯವಾಹಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ವಿಶೇಷ ಚೇತನರೊಳಡಗಿರುವ ಅಗಾಧ ಚೈತನ್ಯದ ಪರಿಚಯ - ಇವು ಈವರೆಗೆ ಈ ಕಾರ್ಯಕ್ರಮದಲ್ಲಿ ಪರಿಚಯವಾದ, ಚರ್ಚೆಗೊಳಗಾದ, ವಿಷದವಾಗಿ ವಿವೇಚಿಸಿ ಚಿಂತಿಸಲಾದ ವಿಷಯಗಳು. ಉದ್ರೇಕ ವರ್ತನೆಗಲಿಲ್ಲದ, ಅವಾಚ್ಯ ಬೈಗಳುಗಳಿಲ್ಲದ, ಏರು ಧ್ವನಿಗಳಲ್ಲಿ ಕಿರುಚಾಟ, ಅಳು, ಗೋಳಾಟಗಳಿಲ್ಲದ ಕೇವಲ ವಿಷಯದ ಮಂಡನೆ, ಅದರ ಹಿನ್ನಲೆ, ಅಂಕಿ-ಅಂಶಗಳಮೂಲಕ ನೀಡುವ ಪುರಾವೆ, ಇವೆಲ್ಲವುಗಳ ಜೊತೆಗೇ.. ಸಮಸ್ಯೆಗಳ ನಿವಾರಣೆಗೆ ಸಾಧ್ಯವಿರುವ ಪರಿಹಾರ- ಇವುಗಳನ್ನೊಳಗೊಂಡ ಸಂಯಮದಿಂದ ಕೂಡಿದ ನಿರೂಪಣೆ ಮೆಚ್ಚುವಂಥದ್ದು. ಕೆಲದೊಂದು ಘಟನಾವಳಿಗಳು ನಮ್ಮೆಲ್ಲರ ಊಹೆಗೂ ನಿಲುಕದ್ದಾಗಿರುತ್ತವೆ. ತುಂಬಾ ಸರಳವಾಗಿ, ನೇರವಾಗಿ ನಮ್ಮ ಮುಂದೆ ಅವುಗಳನ್ನು ಇಟ್ಟರೂ... ಒಮ್ಮೊಮ್ಮೆ ಪರಯತ್ನವಾಗಿ ನೋಡುಗರ ಕಣ್ಣಂಚು ಒದ್ದೆಯಾಗದಿರದು. ಯಾವುದೇ ಸಮಸ್ಯೆಯಾಗಲಿ.. ಅದರೊಳಗಿನ ಸತ್ಯತೆ ಮೇಲ್ನೋಟಕ್ಕೆ ಕಾಣಸಿಗದಿದ್ದರೂ, ಅದನ್ನು ಸೂಕ್ಷ್ಮವಾಗಿ ಗ್ರಹಿಸಿದರೆ, ಸಂವೇದಿಸಿದರೆ ವಸ್ತುಸ್ಥಿತಿಯೊಳಗಿನ ನಿಜತ್ವ ಸಭ್ಯ ಹೃದಯವನ್ನು ತಟ್ಟದಿರದು. ಇದರಿಂದಾಗಿಯೇ "ಸತ್ಯಮೇವ ಜತಯೇ"ಯಲ್ಲಿ ಪ್ರಸಾರವಾದ ಈ ವರೆಗಿನ ಬಾಗಗಳೆಲ್ಲಾ ನನಗೆ ಬಲು ಇಷ್ಟವಾದವು.

ಅದರಲ್ಲೂ ವಿಶೇಷವಾಗಿ ಕಳೆದ ಆದಿತ್ಯವಾರದ "ಸತ್ಯಮೇವ ಜಯತೆ" ನನಗೆ ತುಂಬಾ ಮೆಚ್ಚುಗೆಯಾಯಿತು. (http://www.youtube.com/watch?v=xv80kfLURlc&feature=youtu.be
ಸ್ವತಃ ನಾನೂ ಅವರಲ್ಲೋರ್ವಳಾಗಿರುವುದರಿಂದಲೋ ಇಲ್ಲಾ.. ಅವರೆಲ್ಲಾ ಅನುಭವಿಸಿದ/ಅನುಭವಿಸುತ್ತಿರುವ ಸಾಧಕ-ಬಾಧಕಗಳು, ಮಾನಸಿಕ ತೊಳಲಾಟ, ಹಿಂಸೆ, ಸಮಾಜದೊಳಗಿನ ಅಸಮಾನತೆಗಳು ನನ್ನನ್ನೂ ಅಷ್ಟೇ ಪ್ರಮಾಣದಲ್ಲಿ ತಾಗಿದ್ದರಿಂದಲೋ ಏನೋ.... ನಾನೂ ಆ ಕಾರ್ಯಕ್ರಮದೊಳಗಿನವರಲ್ಲೋರ್ವಳಾಗಿ  ಅದರೊಳಗೇ ಬಂಧಿಯಾದೆ. ಅಲ್ಲಿಯ ವಿಶೇಷ ಚೇತನರ ಮನದ ಮಾತುಗಳು ಪ್ರತಿಯೊಬ್ಬ ವಿಶೇಷ ಚೇತನ ವ್ಯಕ್ತಿಯ ಮನದಾಳದ ಮಾತಿನಂತಿತ್ತು. ಸಮಾಜದೊಳಗಿತ ಅಸಮಾನತೆ, ಕ್ರೌರ್ಯ, ಮೌಢ್ಯ,... ಅಂತೆಯೇ ಇದೇ ಸಮಾಜದೊಳಗಿನ ಕೆಲವರ(ಕಲವೇ ಕೆಲವರ) ಸ್ನೇಹಪರತೆ, ಸಹಜತೆ, ವಿಶ್ವಾಸ, ಸಹಕಾರ- ಇವೆಲ್ಲವುಗಳ ಪರಿಚಯ ಅಲ್ಲಿತ್ತು. ವಿಶೇಷ ಚೇತನರು ಹಲವು ಬಾಧಕಗಳನ್ನು ದಾಟಿ ಸಾಧಿಸಿದ ಅಸಾಮಾನ್ಯ ಸಾಧನೆಗಳ ಪರಿಚಯ ಬಹು ಸ್ಪೂರ್ತಿದಾಯಕವಾಗಿತ್ತು. "ವಿಕಲತೆ ಇರುವುದು ನೋಡುಗರ ನೋಟದಲ್ಲಿ, ಯೋಚಿಸುವ ಯೋಚನೆಯಲ್ಲಿ... ದೇಹದಲ್ಲಿ ಅಲ್ಲಾ.." ಎನ್ನುವ ಸಂದೇಶವನ್ನು ಬಹು ಸುಂದರವಾಗಿ, ಸಮರ್ಥವಾಗಿ "ಸತ್ಯಮೇವ ಜಯತೇ" ತೋರಿಸಿದೆ.

ಆದರೆ ಈ ಕಾರ್ಯಕ್ರಮ ನೋಡುತ್ತಿದ್ದಂತೇ ನನಗೆ ತುಂಬಾ ನೆನಪಾದವರು ಸ್ನೇಹಮಯಿ ಮಾಲತಿ ಹೊಳ್ಳರವರು. ಅವರನ್ನು ಭೇಟಿಯಾಗಿದ್ದು ಒಂದೆರಡು ಬಾರಿಯಾಗಿದ್ದರೂ.. ಮಾತಾಡಿದ್ದು ಹಲವು ಬಾರಿ. ಅವರ ಜೀವನೋತ್ಸಾಹ, ಆತ್ಮವಿಶ್ವಾಸ, ಛಲ ನನಗೆ...ನನ್ನಂತಹವರಿಗೆ... ಸರ್ವರಿಗೂ ಮಾದರಿಯಾಗಿದೆ. ಅವರು ನಡೆಸುತ್ತಿರುವ "ಮಾತೃ ಛಾಯಾ" ಯಾರ ಯಾವ ಸಾಧನೆಗೂ ಕಡಿಮೆಯದ್ದಲ್ಲ. ಅವರನ್ನೂ ಅಲ್ಲಿ ಪರಿಚಯಿಸಬಹುದಿತ್ತೆಂಬ ಪುಟ್ಟ ಕೊರಗು ಮಾತ್ರ ಹಾಗೇ ಉಳಿಯಿತು.


ಬಹು ಹಿಂದೆ ನನ್ನದೇ ಬ್ಲಾಗ್‌ನಲ್ಲಿ ವಿಶೇಷ ಚೇತನರ ಸಮಸ್ಯೆಗಳು ಹಾಗೂ ಇದಕ್ಕಿರುವ ಸುಲಭ ಸರಳ ಪರಿಹಾರಮಾರ್ಗದ ಬಗ್ಗೆ ನಾನೊಂದು ಲೇಖನ ಬರೆದಿದ್ದೆ. ಹಾಗೆಯೇ ಮಾಲತಿಹೊಳ್ಳರ ಸಾಧನೆಗಳ ಕುರಿತೂ ಸವಿವರವಾಗಿ ಪೋಸ್ಟ್ ಮಾಡಿದ್ದೆ... ಆ ಎರಡು ಲೇಖನಗಳ ಲಿಂಕ್ಸ್ ಮಗದೊಮ್ಮೆ ಈಗ ಇಲ್ಲಿ...


&


-ತೇಜಸ್ವಿನಿ ಹೆಗಡೆ.

3 ಕಾಮೆಂಟ್‌ಗಳು:

ಮನಸು ಹೇಳಿದರು...

"ವಿಕಲತೆ ಇರುವುದು ನೋಡುಗರ ನೋಟದಲ್ಲಿ, ಯೋಚಿಸುವ ಯೋಚನೆಯಲ್ಲಿ... ದೇಹದಲ್ಲಿ ಅಲ್ಲಾ.." ಹೌದು ತೇಜು ಇದಂತೂ ನೂರಕ್ಕೆ ನೂರು ಸತ್ಯ.ಹಾಗೆ ರಿಯಾಲಿಟಿ ಶೋ ಗಳು ಚಾನೆಲ್ ಗಳು ಒಂದು ರೀತಿ ಮಾರುಕಟ್ಟೆಯಾಗಿ ಬಿಟ್ಟಿದೆ. ಸತ್ಯಮೇವ ಜಯತೆ ಒಂದೊಳ್ಳೆ ಕಾರ್ಯಕ್ರಮ ಎಲ್ಲರೂ ನೋಡಲೇ ಬೇಕಾದಂತಹುದು.

minchulli ಹೇಳಿದರು...

ಮಾಲತಿ ಹೊಳ್ಳರವರು ನಡೆಸುತ್ತಿರುವ "ಮಾತೃ ಛಾಯಾ" ಯಾರ ಯಾವ ಸಾಧನೆಗೂ ಕಡಿಮೆಯದ್ದಲ್ಲ ಎಂಬುದನ್ನು ನೀವು ಅಮೀರ್ ಖಾನ್ ಅಥವಾ ಸಂಬಂಧ ಪಟ್ಟವರಿಗೆ ಬರೀರಿ ಪ್ಲೀಸ್.. ಅವರ ಪ್ರತಿಕ್ರಿಯೆ ಹೇಗಾದ್ರೂ ಇರಲಿ; ನಮ್ಮ ಹೆಣ್ಣು ಮಗಳೊಬ್ಬಳ ಸಾಧನೆ ಅವರ ಗಮನಕ್ಕೆ ಬರಲಿ. ಇಂದಲ್ಲದಿದ್ರೆ ಮುಂದೊಂದು ದಿನ ಻ದು ಪ್ರಕಟವಾಗಬಹುದು - ಶಮ, ನಂದಿಬೆಟ್ಟ

Swarna ಹೇಳಿದರು...

ಹಿಂದಿನ ಮತ್ತು ಇಂದಿನ ಬರಹಗಳು ಮನ ಮುಟ್ಟುವಂತಿದೆ ಮೇಡಂ.
ಖಂಡಿತ, ಸೌಂದರ್ಯ ನೋಡುಗನ ಕಣ್ಣಲ್ಲಿದೆ
ಸ್ವರ್ಣಾ