ಗುರುವಾರ, ಜುಲೈ 15, 2010

ಏನೆಂದು ಕರೆಯಲೇ ನಾ ನಿನ್ನ?

ಕರಿಮೋರೆಯ ತುಂಬ ಬಿಳಿ ನಗುವಿನಾ ತೆರೆಗಳು
ಮುಟ್ಟಹೋದರೆ ಸಾಕು ಹಿಂದೋಟ,
ಮರುಗಳಿಗೆ ಮುನ್ನುಗ್ಗಿ ಸೆರೆಹಿಡಿವ ಮರುಳಾಟ
ತೆಕ್ಕೆಯೊಳಗಗೆಳೆದು ಒಡಲೊಡಳಗಡಗಿಸದೇ
ಎಲ್ಲವನೆಸೆದು ನಿರುಮ್ಮಳಳಾಗುವ
ಕಡುನೀಲ ಸುಂದರಿ, ಸುವಿಶಾಲ ಸಾಗರಿ...
-
ಸ್ವಲ್ಪ ಒಗರು, ಅತಿಯಾದ ಚೊಗರು, ರುಚಿಗೆ
ಬೇಕಾಗಿರುವ ಉಪ್ಪುತುಂಬಿದಾ ನಿನ್ನೊಡಲು....
ಕೊರಳನಲಂಕರಿಸಿದ ಕೆಂಪಿನಲ್ಲೂ,
ಕಿವಿಯೊಳಗೆ ಝಗಮಗಿಸುವ ಓಲೆಯಲ್ಲೂ,
ಮೂಗುತಿಯ ಮಿನುಗಿನಲ್ಲೂ, ನಿನ್ನ ಚೆಲುವು
ಆ ಚೆಲುವಿನೊಳಗೆಲ್ಲಾ ನಿನ್ನದೇ ಹೆಸರು

ಕಾವೇರಿ, ತುಂಗೆ, ನೇತ್ರಾವತಿ, ಗಂಗೆ...
ಎಣಿಸಲಸದಳ ಸಖಿಯರು ನಿನಗಾಗಿ ಕಾಯುವರು
ನೀ ಮಾತ್ರ ಇಂದು ಮುಖಿ, ವಿರಹಿಣಿ ಆ ಶಶಿಯ
ಆಗೊಮೆ ಈಗೊಮ್ಮೆ ಏರಿಳಿವ ನಿನ್ನ ಎದೆಬಡಿತವ
ಸೆರೆ ಹಿಡಿ ಹಿಡಿದು ಆಗುವನಾತನೂ,
ಅರ್ಧ ಹಿಡಿ, ಒಮ್ಮೊಮ್ಮೆ ಪೂರ್ಣ ಹುಡಿ....

ಮುಗಿಯದ ಅಚ್ಚರಿ, ಅರಿಯದ ಸೆಳೆತ,
ಸೋರುವ ಮರಳ ತುಂಬೆಲ್ಲಾ ನಿನ್ನಡಿಯ ಪುಟಿತ
ನೆನಪಿನ ಕಂಪು ಬಂದಾಗಲೆಲ್ಲಾ
ಹರಿದು ಹೋಗುವ ಹುಚ್ಚು ಹಂಬಲ ನಿನ್ನೆಡೆಗೆ...
ಸದಾ ವಿಸ್ಮಯಿ ನೀ, ಮಾನಸ ಸಮ್ಮೋಹಿನಿ,
ಹುಟ್ಟಿದ-ಹುಟ್ಟದ ನನ್ನೊಳಗಿನ ಕವಿತೆಯೂ ನೀ...

- ತೇಜಸ್ವಿನಿ ಹೆಗಡೆ

22 ಕಾಮೆಂಟ್‌ಗಳು:

Prasad Shetty ಹೇಳಿದರು...

ಇದು ತುಂಬಾನೆ ಚೆನ್ನಾಗಿದೆ. ನಾನಂತೂ ಓದಿ ತುಂಬ ಖುಶಿ ಪಟ್ಟೆ. ಒಬ್ಬ ಪ್ರೌಢ ಕವಿಯ ಬರಹ ಎದ್ದು ಕಾಣುತ್ತದೆ, ಇದಕ್ಕಿಂತ ಜಾಸ್ತಿ ಹೇಳಲು ನಾನು ತುಂಬಾ ಚಿಕ್ಕವನು.

ಸೀತಾರಾಮ. ಕೆ. / SITARAM.K ಹೇಳಿದರು...

ಕಡಲಿನ ವರ್ಣನೆಯಲ್ಲಿ ಹರಿದ ಕಾವ್ಯ ಅದ್ಭುತವಾಗಿ ಮೂಡಿದೆ ಸಾಂಕೇತಿಕದ ಒಯ್ಯಾರದಲ್ಲಿ! ಕಡಲು ಸದಾ ವಿಸ್ಮಯದ ಕೌತಕದ ಒಡಲು ಬಾಚಿ ಖಾಲಿ ಮಾಡಲಿಕ್ಕಾಗದು, ಅರಿದು ಸುರಿಯಲ್ಲಿಕ್ಕಾಗದು! ಮನದಣಿಯೇ ಅನುಭವಿಸಬಹುದು! ಪ್ರತಿಸಲವೂ ಒಂದೊಂದು ಸೋಜಿಗ!
ಚೆಂದದ ಕವಿತೆಗೆ ಧನ್ಯವಾದಗಳು.

ಅನಂತರಾಜ್ ಹೇಳಿದರು...

ಸಾಗರಿಯ ವರ್ಣನೆ ಮನೋಹರಿ(ರ)ವಾಗಿದೆ. ಸಖಿಯರ ಗು೦ಪಿನಲ್ಲಿ, ತು೦ಗೆಯ ನ೦ತರ ಭದ್ರೆ ಬರಬಹುದೇನೋ ಅನ್ಕೊ೦ಡಿದ್ದೆ..(ನಮ್ಮೂರಿನವಳು!!)
ಉತ್ತಮ ಕವನ.

ಶುಭಾಶಯಗಳು
ಅನ೦ತ್

Dr.D.T.K.Murthy. ಹೇಳಿದರು...

ಸಾಗರದ ಬಗ್ಗೆ ಸುಂದರ ಕವನ.ಧನ್ಯವಾದಗಳು.

Dileep Hegde ಹೇಳಿದರು...

ಚೆನ್ನಾಗಿದೆ..

ಜಲನಯನ ಹೇಳಿದರು...

ಸಾಗರ ಎಂದೊಡನೇ ವೈಶಾಲ್ಯಕ್ಕೆ ಪ್ರತೀಕವಾಗಿ ಕಣ್ಣನ್ನು ತುಂಬುವುದು ಅಗಾಧ ಜಲರಾಶಿ...ಅದರ ವಿವಿಧ ಗುಣವಿಶೇಷಗಳನ್ನು ಪದಗಳ ಮೋಡಿಯ ಬಳಕೆಯಲ್ಲಿ ಬಂಧಿಸಿ ಅಷ್ಟೇ ಗಂಭೀರ ಕವನ ನಮ್ಮ ಮುಂದೆ ಇಟ್ಟಿದ್ದೀರಿ... ಅಭಿನಂದನೆಗಳು

shivu.k ಹೇಳಿದರು...

ಸಾಗರವನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಆದ್ರೆ ಕವನದಲ್ಲಿ ತುಂಬಿಕೊಳ್ಳಬಹುದು. ನಿಮ್ಮ ಕವನ ಓದಿದ ಮೇಲೆ ನನಗನ್ನಿಸಿದ್ದು ಹೀಗೆ..
ಚೆನ್ನಾಗಿದೆ ಕವನ.

ಮನಸು ಹೇಳಿದರು...

very nice ....!!!!

ಸಾಗರಿ.. ಹೇಳಿದರು...

ಸಾಗರದ ಕವನ ಬಹಳಾನೇ ಚೆನ್ನಾಗಿದೆ, ನನಗಂತೂ ತುಂಬಾ ಹಿಡಿಸಿತು. ಅದೆಷ್ಟು ಸುಮಧುರವಾಗಿ ವರ್ಣಿಸಿದ್ದೀರಿ..

Narayan Bhat ಹೇಳಿದರು...

ತುಂಬಾ ಚೆನ್ನಾಗಿದೆ.

sunaath ಹೇಳಿದರು...

ತುಂಬ ತುಂಬ ಸುಂದರವಾದ ಕವನ. ತುಂಬ ಇಷ್ಟವಾಯಿತು.

Subrahmanya ಹೇಳಿದರು...

ತುಂಬ ಚೆನ್ನಾಗಿದೆ

Raghu ಹೇಳಿದರು...

nice one madam..!
Raaghu.

AntharangadaMaathugalu ಹೇಳಿದರು...

ತೇಜಸ್ವಿನಿ.....
ತುಂಬಾ ಚೆನ್ನಾಗಿದೆ. ಕೊನೆಯ ಪ್ಯಾರಾ ಅಂತೂ ಅದೆಷ್ಟು ಸಲ ಓದಿಕೊಂಡೆನೋ... ಸಾಗರಳನ್ನು ಇನ್ನು ಕಂಡಾಗೆಲ್ಲಾ ನಾ ಅವಳಿಗೆ ನಿಮ್ಮ ನೆನಪು ಮಾಡಿಸುವೆನೇನೋ.... !!

ಶ್ಯಾಮಲ

ವಸಂತ್ ಹೇಳಿದರು...

ತುಂಬಾ ಚೆನ್ನಾಗಿದೆ ನಿಮ್ಮ ಕವನ ತೇಜಸ್ವಿನಿ ಹೆಗಡೆ ಮೇಡಂ ಧನ್ಯವಾದಗಳು.

ಚಿತ್ರಾ ಹೇಳಿದರು...

ತೇಜೂ .
ರಾಶಿ ಚಂದ ಇದ್ದು. ಎಲ್ಲರೂ 'ಸಾಗರ' ಎಂದು ವರ್ಣಿಸುವಾಗ , " ಸಾಗರಿ' ಎಂಬ ಕಲ್ಪನೆಯೇ ಪುಳಕ ತಂದಿತು.
ಬಹಳ ಇಷ್ಟವಾಯ್ತು.

ಚುಕ್ಕಿಚಿತ್ತಾರ ಹೇಳಿದರು...

saagarakkondu hentanada kalpane tumbaa chennaagide....!!

ಕ್ಷಣ... ಚಿಂತನೆ... bhchandru ಹೇಳಿದರು...

ನಿಮ್ಮ ಕವನ ತುಂಬಾ ಚೆನ್ನಾಗಿದೆ.ಇಷ್ಟವಾಯ್ತು.

ತೇಜಸ್ವಿನಿ ಹೆಗಡೆ ಹೇಳಿದರು...

@ಪ್ರಸಾದ್ ಅವರೆ,

ನಿಮ್ಮ ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು. "ಅರಿವಿಗೆ" ದೊಡ್ಡವರು, ಚಿಕ್ಕವರೆಂಬ ತಾರತಮ್ಯವಿಲ್ಲ... ಎಲ್ಲರೂ ಸಮಾನರು :)

@ಸೀತಾರಾಮ್ ಸರ್,

ನನಗೆ ಬಾಲ್ಯದಿಂದಲೂ ಕಡಲೆಂದರೆ ಅರಿಯದ ಅಚ್ಚರಿ, ಮುಗಿಯದ ಪ್ರಶ್ನೆ! ಒಮ್ಮೆ ಕಡಲು ನನ್ನ ಪ್ರಿಯ ಸ್ನೇಹಿತ ಸಾಗರನಾದರೆ ಮಗದೊಮ್ಮೆ ಪ್ರಿಯ ಸಖಿ ಸಾಗರಿ :) ತುಂಬಾ ಧನ್ಯವಾದಗಳು.

@ಅನಂತರಾಜ್ ಅವರೆ,

ತುಂಗೆ ನಂತರ ಭದ್ರೆ ಬರೋಳಿದ್ದಳು ಮಧ್ಯೆ ಸಾಗರಿ ಬಂದು ಕರೆದುಕೊಂಡು ಹೋದಳು :) ಸ್ಪಂದನೆಗೆ ತುಂಬಾ ಧನ್ಯವಾದಗಳು.

@ಡಾ.ಕೃಷ್ಣಮೂರ್ತಿ, ದಿಲೀಪ್ ಹೆಗಡೆ, ಜಲನಯನ,

ಮೆಚ್ಚುಗೆಭರಿತ ಸ್ಪಂದನೆಗೆ ತುಂಬಾ ಧನ್ಯವಾದಗಳು.

@ಶಿವು ಅವರೆ,

ನನ್ನ ಈ ಪುಟ್ಟ ಕವನ ವಿಶಾಲ ಸಾಗರಿಯನ್ನೇನು ತುಂಬಿಕೊಂಡೀತು?! ಈ ಕವನದೊಳಗೆ ಸಾಗರವನ್ನು ತುಂಬಿಕೊಂಡ ನಿಮ್ಮ ವಿಶ್ವಾಸಕ್ಕೆ ತುಂಬಾ ಧನ್ಯವಾದಗಳು.

@ಮನಸು,

ಥಾಂಕ್ಯೂ ವೆರಿ ಮಚ್ :)

@ಸಾಗರಿ,

ಅದೇನೋ ಎಂತೋ ಈ ಹೆಸರೊಳಗೇ ಒಂದು ಸೆಳೆತ ನೋಡಿ... :) ಇದೇ ಸೆಳತವೇ ಮೊದಲ ಬಾರಿ ನಿಮ್ಮ ಬ್ಲಾಗಿನೆಡೆ ನನ್ನ ಎಳೆದದ್ದು.... ತುಂಬಾ ಸುಂದರ ಹೆಸರು ನಿಮ್ಮ ಬ್ಲಾಗಿನದು. :) ತುಂಬಾ ಧನ್ಯವಾದಗಳು.

@ರಾಘು, ನಾರಾಯಣ್ ಭಟ್, ಕಾಕಾ, ಸುಬ್ರಹ್ಮಣ್ಯ - ಅವರೆ,

ತುಂಬಾ ಧನ್ಯವಾದಗಳು.

@ಶ್ಯಾಮಲಕ್ಕ,

ಖಂಡಿತ ನೆನಪು ಮಾಡಿಸಿ. ಇಲ್ಲಿಯೋ ಸಾಗರಿಯ ಗಂಧವೇ ಇಲ್ಲ :( ನೀವು ಅವಳ ಬಳಿ ಹೋದರೆ ಒಮ್ಮೆ ಮಾನಸಕ್ಕೆ ಭೇಟಿಕೊಡಲು ತಪ್ಪದೇ ಹೇಳಿ ಮತ್ತೆ....:) ತುಂಬಾ ಧನ್ಯವಾದಗಳು.

@ವಸಂತ್, ಚಿತ್ರಕ್ಕ, ವಿಜಯಶ್ರೀ, ಕ್ಷಣ...ಚಿಂತನೆ..,

ತುಂಬಾ ಧನ್ಯವಾದಗಳು. "ಸಾಗರ" ಪದಕ್ಕಿಂತಲೂ "ಸಾಗರಿ"ಯೇ ಹೆಚ್ಚು ಆಪ್ತವೆನಿಸುತ್ತದೆ :) (ಇನ್ನು ನನ್ನ ಸ್ತ್ರೀವಾದಿ ಎಂದುಕೊಂಡರೆ ಅದಕ್ಕೆ ನಾ ಹೊಣೆಯಲ್ಲ :))

M@ђ€$ђ..!! ಹೇಳಿದರು...

ನೆನಪಿನ ಕಂಪು ಬಂದಾಗಲೆಲ್ಲಾ
ಹರಿದು ಹೋಗುವ ಹುಚ್ಚು ಹಂಬಲ ನಿನ್ನೆಡೆಗೆ...

its true ,,

********************************
http://bhuminavilu.blogspot.com/
********************************

chinmay bhat ಹೇಳಿದರು...

ಅಲೆಲೆ ..ಅದೇನು ಕಾವ್ಯದ ಅಲೆ !!!
ಕಣ್ಣೆದುರೇ ಸಾಗರವ ಹುಟ್ಟಿಸಿದೆ ಒಮ್ಮೆಲೇ
ಪೋಣಿಸಿದೆ ಜಗದ ಮಾತ ಅದಕೆ ಆಮೇಲೆ

ಖುಷಿಯಾಯ್ತು ಬಹಳ...
ಬರುತ್ತಿರಲಿ ಕನ್ನಡದಿ ಈ ರೀತಿಯ ಕವನ... ಮೇಲಿಂದ ಮೇಲೆ

ಸಾಗರದಾಚೆಯ ಇಂಚರ ಹೇಳಿದರು...

excellent one