ಗುರುವಾರ, ಜುಲೈ 1, 2010

ದೃಷ್ಟಿ ಬೊಟ್ಟು

ಮಳೆಗಾಲಕ್ಕೂ ಮಾವಿನಕಾಯಿಗೂ ಅವಿನಾಭಾವ ನಂಟು. ಬೇಯಿಸದ ಮಾವು, ಬೇಯಿಸಿದ ಮಾವು, ಉಪ್ಪಿನಲ್ಲಿ ಹಾಕಿದ ಮಿಡಿ, ಗಳಿತ ಮಾವಿನ ಹಣ್ಣು, ತುಸುವೇ ಹಣ್ಣಾದ ಮಾವಿನಕಾಯಿ - ಹೀಗೇ ಮಾವಿನಕಾಯಿಯ ವಿವಿಧ ರೂಪಾಂತರಗಳನ್ನು ಉಪಯೋಗಿಸಿ ತಯಾರಿಸಿದ ಹಲವು ಬಗೆಯ ಪದಾರ್ಥಗಳ ಭರಾಟೆಯು ಮಳೆಯ ಆರ್ಭಟದೊಂದಿಗೆ ಮೇಳೈಸಿದರೆ ಸ್ವರ್ಗಕ್ಕೆ ಕಿಚ್ಚು ಹಾಕಿದಂತೆಯೇ ಸರಿ :) ಮೊದಲು ಅಮ್ಮನಿಂದ ಕಲಿತ ಮಾವಿನ ಗೊಜ್ಜು, ತಂಬುಳಿ, ಹಣ್ಣಿನ ಸಾಸಿಮೆ ಹಾಗೂ ಅಪ್ಪೇ ಹುಳಿಯ ರುಚಿಯನ್ನು ದುಪ್ಪಟ್ಟುಗೊಳಿಸುವಂತೆ ಈ ಸಲ ಅತ್ತೆಯಿಂದ ಇನ್ನೂ ಹತ್ತಾರು ವಿಧದ ಪದಾರ್ಥಗಳನ್ನು ಕಲಿಯುವ ಅವಕಾಶ ನನ್ನದಾಯಿತು. ಪ್ರತಿ ಸಲ ಅತ್ತೆ ಬರುವ ಕಾಲ ಶಿಶಿರ ಋತುವಾಗಿತ್ತು. ಆದರೆ ಈ ಸಲ ಗ್ರೀಷ್ಮ ಋತುವಿಗೆ ಬದಲಾದದ್ದೇ ನನ್ನ ಅಡುಗೆ ಮನೆ ಬೆಳ್ಳುಳ್ಳಿ, ಸೂಜಿ ಮೆಣಸು, ಈರುಳ್ಳಿ, ಇಂಗಿನ ಒಗ್ಗರಣೆಗಳಿಂದ ಘಮಘಮಿಸಿತು. "ಈ ಸರ್ತಿ ನಾನು ಮಾವಿನ್ಕಾಯಿ, ಸೂಜ್‌ಮೆಣ್ಸು ತಗ ಬತ್ತಿ......" ಎಂದಾಗಲೇ ಬಾಯಲ್ಲಿ ನೀರೂರಿತ್ತು. ಸರಿ...ಬಂದ ದಿನದ ಸಾಯಂಕಲಾದಿಂದ ಹಿಡಿದು ಮೊನ್ನೆ ಅವರೆಲ್ಲಾ ಊರಿಗೆ ಹೊರಟ ದಿನದವರೆಗೂ ಮಾವಿನಕಾಯಿ/ಹಣ್ಣಿನ ಹಲವು ಪದಾರ್ಥ/ಖಾದ್ಯಗಳ ಮೆರವಣಿಗೆ ಸರಾಗವಾಗಿ ನಡೆಯಿತು. ಮಾವಿನ್ಕಾಯಿ ಗೊಜ್ಜು (ವಿವಿಧ ರೀತಿಯ), ಭೂತ್ನ್‌ಗೊಜ್ಜು, ಮೂರು ಬಗೆಯ ಅಪ್ಪೆಹುಳಿ, ಮಾವಿನಕಾಯಿ+ಸೂಜಿ ಮೆಣಸಿನ ಕಾಯಿರಸ, ಅಪ್ಪೆಮಿಡಿ ತಂಬುಳಿ, ಮಾವಿನ ಹಣ್ಣಿನ ಪಾಯಸ, ಸಾಸಿಮೆ - ಹೀಗೇ ಇನ್ನೂ ಹತ್ತು ಹಲವು. ಅಬ್ಬಾ! ಇಷ್ಟೆಲ್ಲಾ ಬಗೆಗಳಿದ್ದೂ ನಾನು ಕಲಿತಿದ್ದು ಕೇವಲ ೨-೩ ಬಗೆಗಳನ್ನಷ್ಟೇ ಎಂದು ನನ್ನನ್ನೇ ಬೈದುಕೊಂಡೆ. ಈಗ ಅವೆಲ್ಲಾ ನನ್ನ ಮೆಮೊರಿ ಕಾರ್ಡ್‌ನಲ್ಲಿ ಸೇಫ್ ಆಗಿ ಕೂತಿವೆ... ಜೊತೆಗೆ ಅಳಿದುಳಿದ ಮಾವಿನ ಮಿಡಿಗಳು ಕೂಡ. ಮುಂದಿನ ಮಳೆಗಾಲದವರೆಗೂ ವೈರಸ್(ಬೂಸ್ಟ್) ಬರದಂತೇ ಉಪ್ಪಿನ ನೀರಿನ ಮಿಶ್ರಣವನ್ನು ಹಾಕುತ್ತಿರಬೇಕಷ್ಟೇ!

ಮಾವಿನಕಾಯಿಯ ಅಡುಗೆಯಷ್ಟೇ ಹಿತಕೊಟ್ಟಿದ್ದು ನನ್ನತ್ತೆಯ ಜಾನಪದ ಗೀತೆಗಳ, ಭಜನೆಗಳ ಸಂಗ್ರಹ. ನಾನೂ ಅಮ್ಮನಿಂದ ಕಲಿತ ಒಂದೆರಡು ಭಜನೆಗಳನ್ನು ಹೇಳಿದ್ದೇ ತಡ ಮತ್ತೂ ಹುರುಪಿನಿಂದ ಶುರು ಮಾಡಿದ ಅತ್ತೆ ನಿಲ್ಲಿಸಿದ್ದು ಅವರ ಮೊಮ್ಮಗಳು ರಾಗ ತೆಗೆದಾಗಲೇ :) ವಯಸ್ಸು ಐವತ್ತೆಂಟಾದರೂ ಆ ಧ್ವನಿಯೊಳಗಿರುವ ಇಂಪು, ಸ್ವರ ಮಾಧುರ್ಯ ನನ್ನನ್ನು ಬೆರುಗುಗೊಳಿಸಿದ್ದು ಸುಳ್ಳಲ್ಲ. ನನಗೆ ಗೊತ್ತಿದ್ದ ಹಾಡೊಂದು ಅವರಿಗೆ ಬಲು ಮೆಚ್ಚುಗೆಯಾಗಲು, "ನಂಗಿದ್ನ ಹೋಪದ್ರೊಳ್ಗೆ ಬರ್ಕೊಡವೇ.."ಎಂದಿದ್ದೇ ತಡ ಏನನ್ನೋ ಸಾಧಿಸಿದ ಹಮ್ಮು ನನ್ನೊಳಗೆ. ಸಾಗರದೊಳಗೆ ತೊರೆ ಸೇರಿದರೂ ಅದು ಸಾಗರವೆಂದೆನಿಸಿಕೊಳ್ಳುವುದು ತಾನೇ? ಸೇರಿದ ಮೇಲೆ ಸಾಗರವೇನು ತೊರೆಯೇನು? ಎಲ್ಲವೂ ಒಂದೇ. ಅದೇ ರೀತಿ ನಮ್ಮೊಳಗಿನ ಕೆಲವು ಸಂಬಂಧಗಳು ಹಾಗೂ ಭಾವಗಳು ಕೂಡ...

ಅವರು ಹಾಡಿದ ಭಜನೆ/ಜಾನಪದ ಹಾಡುಗಳಲ್ಲೇ ನನಗೆ ಈ ಕೆಳಗಿನ ಹಾಡು ಮಾತ್ರ ತುಂಬಾ ಇಷ್ಟವಾಯಿತು. ಅತ್ತೆಯ ಇಂಪಾದ ಧ್ವನಿಯಿಂದ ಈ ಹಾಡುನ್ನು ಮತ್ತೆ ಮತ್ತೆ ಕೇಳಿ ಕಲಿತು ಈಗ ನಾನೂ ತಕ್ಕಮಟ್ಟಿಗೆ ಮನದಟ್ಟು ಮಾಡಿಕೊಂಡಿರುವೆ. ಎಲ್ಲಿಂದಲೋ ಹುಟ್ಟಿ, ಹಲವರಲ್ಲಿ ಬೆಳೆದು ನನ್ನತ್ತೆಯ ಕೈಗೆ ಸಿಕ್ಕಿದ ಈ ಸುಂದರ ಹಾಡಿನ ಸಾಹಿತ್ಯ ಈಗ ನಿಮಗೆಲ್ಲರಿಗಾಗಿ. ಹಾಡಿನ ಎಡೆ ಶೃಂಗರಿಸಲು ರೂಪದರ್ಶಿಗಳಿಗಾಗಿ ಅದಿತಿ ಹೆಗಡೆ (ನನ್ನ ಪುಟ್ಟಿ)ಹಾಗೂ ಆದಿತ್ಯ ಹೆಗಡೆ (ನನ್ನ ತಂಗಿಯ ಮಗ) ತಮ್ಮ ತಮ್ಮ ಬಾಲ್ಯದ ( = ಅವರು ಆರೆಂಟು ತಿಂಗಳಿದ್ದಾಗಿನ) ಫೋಟೋಗಳನ್ನು ಕೊಡಲು ಒಪ್ಪಿದ್ದೂ ಆಯಿತು. ಈ ಇಬ್ಬರು ಮುದ್ದು ಕಂದಮ್ಮಗಳಿಗೆ ಯಾವ ಜನರ ದೃಷ್ಟಿಯೂ ತಾಗದಿರಲೆಂದು ಹಾರೈಸುತ್ತಾ...... :)

ಯಾವ ಜನರ ದೃಷ್ಟಿ ತಾಗಿತೋ..
ಗೋಪಾಲ ನಿನಗಿನ್ಯಾವ ನಾರಿ ದೃಷ್ಟಿ ತಾಗಿತೋ..
ಗೋಪಾಲ ನಿನಗನ್ಯಾವ ಪಾಪಿ ದೃಷ್ಟಿ ತಾಗಿತೋ...
ಯಾವ ಜನರ ದೃಷ್ಟಿ ತಾಗಿತೋ
ಬಾಲ ಮುದ್ದು ರಂಗಯ್ಯ ನಿನಗೆ
ಕಾವೇರಿ ರಂಗನ ಕೂಡೆ
ಯಂತ್ರವನ್ನು ಕಟ್ಟಿಸಲು
ಮಂತ್ರವನ್ನು ಮಾಡಿಸಲು
ಯಾವ ಜನರ ದೃಷ್ಟಿ ತಾಗಿತೋ.....
ಗೋಪಾಲ ನಿನಗಿನ್ಯಾವ ಪಾಪಿ ದೃಷ್ಟಿ ತಾಗಿತೋ...

 ಆದಿತ್ಯ
ಅದಿತಿ
 






















ಹಾಲ ಕೊಟ್ಟರೆ ಕುಡಿವುದಿಲ್ಲ
ಬಾಲರೊಡನೆ ಆಡುವದಿಲ್ಲ
ಬಾಲಮುದ್ದು ರಂಗಯ್ಯ ನಿನಗಿನ್ಯಾವ ಜನರ ದೃಷ್ಟಿ ತಾಗಿತೋ...
ಗೋಪಾಲ ನಿನಗಿನ್ಯಾವ ನಾರಿ ದೃಷ್ಟಿ ತಾಗಿತೋ..

ಬಿಂದಲೆ ನುಸಿ ಚಂದದಿಂದ ಸುಂದರಾಂಗರೆಂದು ಕರೆದರೆ
ಕಂದ ಸಲಹೋ ಎಂದು ಕುಶಲ
ಯಾವ ಜನರ ದೃಷ್ಟಿ ತಾಗಿತೋ..
ಗೋಪಾಲ ನಿನಗಿನ್ಯಾವ ಪಾಪಿ ದೃಷ್ಟಿ ತಾಗಿತೋ

ಕಡೆವ ಸಮಯದಲ್ಲೇ ಹೋಗಿ
ಕಡೆಗೋಲಾನೇ ಪಿಡಿದು ನಿಂದು
ಕಡೆಯಬೇಡಲೆಂದು ಅಮ್ಮನ ಸೆರಗ ಪಿಡಿದ ರಂಗಯ್ಯ ನೀನು
ಯಾವ ಜನರ ದೃಷ್ಟಿ ತಾಗಿತೋ..
ಗೋಪಾಲ ನಿನಗಿನ್ಯಾವ ನಾರಿ ದೃಷ್ಟಿ ತಾಗಿತೋ..
ಗೋಪಾಲನಿಗನಿನ್ಯಾವ ಪಾಪಿ ದೃಷ್ಟಿ ತಾಗಿತೋ...

ಫೋಟೋ ಕೃಪೆ : ಅದಿತಿ ಹೆಗಡೆ ಮತ್ತು ಆದಿತ್ಯ ಹೆಗಡೆ

[ವಿ.ಸೂ. - ಈ ಹಾಡಿನ ಮೂರನೇ ಸೊಲ್ಲಾದ "ಬಿಂದಲೆ ನುಸಿ ಚಂದದಿಂದ..." ಈ ಸಾಲುಗಳ ಅರ್ಥ ಸರಿಯಾಗಿ ನನಗೆ ತಿಳಿಯಲಿಲ್ಲ. ಅತ್ತೆಯ ಕೇಳಿದರೆ ನನಗೂ ತಿಳಿಯದು ಬೇರೊಬ್ಬರು ಹೇಳಿದ ಹಾಗೇ ಬರೆದು ಕೊಂಡಿದ್ದು ಅಂದರು. ಯಾರಿಗಾದರೂ ಈ ಹಾಡು ಮೊದಲೇ ಗೊತ್ತಿದ್ದರೆ, ಈ ಸೊಲ್ಲಿನಾರ್ಥ ಸರಿಯಾಗಿ ತಿಳಿದಿದ್ದರೆ ತಿಳಿಸಬೇಕಾಗಿ ವಿನಂತಿ]

-ತೇಜಸ್ವಿನಿ ಹೆಗಡೆ.

19 ಕಾಮೆಂಟ್‌ಗಳು:

PaLa ಹೇಳಿದರು...

ಜ್ವರ ಬಂದು ಹೊಟ್ಟೆ ಹಸಿದಾಗ ಇಂತಹ ಬರಹ ಎಲ್ಲಾ ಬರ್ದು ಬಾಯಲ್ಲಿ ನೀರೂರಿಸೋದು ನ್ಯಾಯವಾ?

ಜಾನಪದ ಹಾಡು, ಸಾಹಿತ್ಯಕ್ಕೆ ವಂದನೆ.. ಹಾಡು ಓದ್ತಾ ಓದ್ತಾ "ಬಿಂದಲೆ ನುಸಿ ಚಂದದಿಂದ ಸುಂದರಾಂಗರೆಂದು ಕರೆದರೆ
" ಸಾಲಲ್ಲಿ ನಿಂತೆ.. ಕೊನೇಯಲ್ಲಿ ಇದರ ಬಗ್ಗೆ ಹೆಚ್ಚಿನ ವಿವರ ಕೇಳೋಣ ಅಂತ. ಬರಹದ ಕೊನೇಯಲ್ಲಿ ನಿಮ್ಮ ಟಿಪ್ಪಣಿ ನೋಡಿ ನಿರಾಶನಾದೆ.. ಸಾಧ್ಯವಾದರೆ ಇದರ ಧ್ವನಿಮುದ್ರಿಕೆಯನ್ನು ಹಾಕಬಹುದೇ..

Dr.D.T.Krishna Murthy. ಹೇಳಿದರು...

'ಮಾವಿನ ಮಿಡಿ,ಮಾವಿನ ಭಕ್ಷಗಳು,ಅತ್ತೆಯವರ ಜಾನಪದ ಹಾಡು '!ನಿಮ್ಮ ಬರಹ ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ!ಅಭಿನಂದನೆಗಳು.

ಮನದಾಳದಿಂದ............ ಹೇಳಿದರು...

ತೇಜಕ್ಕ.......
ಮಾವಿನ ರುಚಿಯೇ ರುಚಿ! ಹಲವು ರೂಪದಲ್ಲಿ ಮಾವು ನಾಲಿಗೆಯ ಮೇಲೆ ನೃತ್ಯ ಮಾಡುತ್ತದೆ.
ಅದರಂತೆ ಜಾನಪದಗೀತೆಗಳು. ಹಿಂದೆ ಇಂದು ಮುಂದೇ ಎಂದೆಂದೂ ಪ್ರಸಿದ್ಧವೇ!
ಮಕ್ಕಳ ಫೋಟೋ ಅತೀ ಸುಂದರರ.....!

ಸುಧೇಶ್ ಶೆಟ್ಟಿ ಹೇಳಿದರು...

ಹಲೋ ತೇಜಕ್ಕ....

"ಮುಂದಿನ ಮಳೆಗಾಲದವರೆಗೂ ವೈರಸ್(ಬೂಸ್ಟ್) ಬರದಂತೇ ಉಪ್ಪಿನ ನೀರಿನ ಮಿಶ್ರಣವನ್ನು ಹಾಕುತ್ತಿರಬೇಕಷ್ಟೇ!....." ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ಅತ್ತೆ-ಸೊಸೆಯರ ಬಾಂದವ್ಯ ಕ೦ಡು ಕುಶಿ ಆಯಿತು ಕೂಡ :)

ಇಷ್ಟವಾಯಿತು ಬರಹ...ಸು೦ದರ ಪುಟಾಣಿ ಮಾಡೆಲ್ ಗಳೂ ಸಹ... :)

sunaath ಹೇಳಿದರು...

ಭಾವಪೂರ್ಣವಾದ ಈ ಕೀರ್ತನೆಯನ್ನು ಓದಿ ಸಂತೋಷವಾಯಿತು. ಅದಿತಿ ಹಾಗು ಆದಿತ್ಯ್ರರು ಮುದ್ದಾಗಿ
ಕಾಣುತ್ತಿದ್ದಾರೆ.

Dileep Hegde ಹೇಳಿದರು...

ತೇಜಸ್ವಿನಿ ಯವರೆ..
ಮೊನ್ನೆಯಷ್ಟೇ ಮಾವಿನಕಾಯಿ ಸೂಜಿಮೆನಸು ಬೆಳ್ಳುಳ್ಳಿ combination ನ ಅದ್ಭುತ ಸವಿದಿದ್ದೆ.. ಇಲ್ಲಿವತ್ತು ಅದರ ಬಗ್ಗೆ ಓದುತ್ತಿದ್ದೇನೆ.. ಮಳೆಗಾಲ. ಜೊತೆಗೆ ಮಾವಿನ ಕಾಯಿ, ಹಣ್ಣಿನ ಪರಿ ಪರಿ ಪದಾರ್ಥ ಗಳು.. ಆಹಾ.. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ....!!
ಚೆಂದದ ಬರಹ.. ಹಾಗೆಯೆ ಜನಪದ ಗೀತೆ ಕೂಡ.. ಆ ಸಾಲಿನ ಅರ್ಥ ನನಗೂ ಹೊಳೆಯಲಿಲ್ಲ.. ಇನ್ಯಾರಾದರೂ ಹೇಳ್ತಾರಾ ಕಾದು ನೋಡಬೇಕು.
ಧನ್ಯವಾದಗಳು...

ಮನಸಿನ ಮಾತುಗಳು ಹೇಳಿದರು...

ತೇಜಕ್ಕ,

ಸೋಲ್ಲಿನ್ ಅರ್ಥ ಎಲ್ಲ ಗೊತ್ತಿಲ್ಲೆ ನೋಡು ...
ಆದ್ರೆ ನಿಮ್ಮನೆ "ಮಾವಿನಕಾಯಿ" ಅಡ್ಗೆ ಕೇಳಿ ನಂಗಂತೂ ಬಾಯಲ್ಲಿ ನೀರು ಬಂದು ಹೋತು.. ಒಂದಿನ ನಿಮ್ಮನೆಗೆ ಬತ್ತಿ.ಅವಾಗ ಮೆಮೊರಿ ಕಾರ್ಡ್ ನಲ್ಲಿ ಇರ ಯಾವ್ದಾರು ಒಂದು ಪದಾರ್ಥ ನಂಗೆ ಮಾಡಿ ಕೊಡದೆಯ... :-)

ಸೀತಾರಾಮ. ಕೆ. / SITARAM.K ಹೇಳಿದರು...

@-- ಮಾವಿನಕಾಯಿ-ಹಣ್ಣುಗಳ ಬಗ್ಗೆ ನೆನಪ್ಸಿ ಬಾಯಲ್ಲಿ ನೀರೂರಿಸಿದಿರಿ.
@-- ಚೆ೦ದದ ಜನಪದ ಮಕ್ಕಳಗೀತೆ ನೀಡಿದಿರಿ
@-- ಸು೦ದರ ಮುದ್ದು ಮಕ್ಕಳ ಚಿತ್ರ ಹಾಕಿದಿರಿ
@-- ಅತ್ತೆ ಸೊಸೆಯರ ಅನುಭ೦ಧದ ಬಗ್ಗೆ ತಿಳಿದು ಖುಷಿಯಾಯಿತು.
ಚೆಂದದ ಲೇಖನ.

ಸಾಗರಿ.. ಹೇಳಿದರು...

ತೇಜಸ್ವಿನಿ ಅವರೆ,
ಮಾವಿನಕಾಯಿ ಜಾಸ್ತಿ ತಿಂದ್ರೆ ಪಿತ್ತಕೆಣಕುತ್ತೆ ಅಂತ ಆಯಿ ಉಪದೇಶಿಸುತ್ತಿದ್ದರೂ ಅದರ ಪಚ್ಚುಡಿ ಮಾಡಿ ತಿನ್ನುವ, ಶಾಲೆಗೂ ಕೊಂಡೊಯ್ದು ವಿರಾಮದ ವೇಳೆಯಲ್ಲಿ ಹಂಚಿ ತಿನ್ನುವ ಮಜ ಬಹುಶಃ ಪೇಟೆಯ ಮಕ್ಕಳಿಗೆ ತಿಳ್ದಿರಲ್ಲ. ಮಾವು ಹಣ್ಣುಗಳಷ್ಟೇ ಅಲ್ಲ ಕಾಯಿಗಳ ರಾಜ ಕೂಡ :-) ಮಳೆಯಲ್ಲಿ ಮಾವಿನ ಜೊತೆ ಮಜ ಮಾಡಿದ್ದೀರಿ, ನಮಗೂ ಹಂಚಿದ್ದೀರಿ, ಖುಷಿ ಆಯ್ತು. ಪದ್ಯದ ಮೊದಲೆರಡು ಸಾಲನ್ನು ನನ್ನತ್ತೆಯೂ ಗುಣಗುಣಿಸಿದ್ದನ್ನು ಕೇಳಿದ್ದೇನೆ, ಪೂರ್ಣವಲ್ಲ.

ಚುಕ್ಕಿಚಿತ್ತಾರ ಹೇಳಿದರು...

ಮಾವಿನಕಾಯಿ ಪದಾರ್ಥ ಚ೦ದ..
ಅತ್ತೆಯ ಹಾಡು ಚ೦ದ..
ಮಕ್ಕಳ ನೋಟ ಅ೦ದ..
ನಿಮ್ಮ ಲೇಖನ ಚ೦ದವೋ ಚ೦ದ..

Subrahmanya ಹೇಳಿದರು...

all super !.

shivu.k ಹೇಳಿದರು...

ಊಟಮಾಡಿ ಒಂದು ಮಲಗೋಬ ಮಾವಿನಹಣ್ಣು ತಿಂದು ನಿಮ್ಮ ಲೇಖನವನ್ನು ಇಲ್ಲೂ ಮಾವಿನಕಾಯಿ, ಮಿಡಿ, ಇತ್ಯಾದಿ. ಜೊತೆಗೆ ಜಾನಪದ ಹಾಡು ಎಲ್ಲಾ ಬಲು ಸೊಗಸು!

ಇವೆಲ್ಲಾ ಕೊಟ್ಟಿದ್ದಕ್ಕೆ ಧನ್ಯವಾದಗಳು.

Raghu ಹೇಳಿದರು...

ತುಂಬಾ ಚೆನ್ನಾಗಿದೆ ದೃಷ್ಟಿ ಬೊಟ್ಟು.. ಅಜ್ಜಿ ಸಾಲುಗಳು ಇನ್ನು ಹಾಗೆ ನೆನಪಿನ ತೆರೆಯಾ ಮೇಲೆ ಉಳಿದಿದೆ.
ಕವನ ಚೆನ್ನಾಗಿದೆ..ಜೊತೆಗೆ ಫೋಟೋಸ್...
ನಿಮ್ಮವ,
ರಾಘು.

ಅನಾಮಧೇಯ ಹೇಳಿದರು...

ಸುಖಕ್ಕಾಗಿ ಹಳ್ಳಿ ರೊಕ್ಕಕ್ಕಾಗಿ ಪಟ್ಟಣ ಎಂಬ ಮಾತು ನೆನಪಾಯ್ತು, ನಾವೆಲ್ಲಾ ಪಟ್ಟಣಕ್ಕೆ ಬಂದು ಮಾವಿನ ಕಾಯಿಯ ವಿವಿಧ ಅಡುಗೆಯನ್ನು ಮರೀತಾ ಇದ್ದೇವೆ. ಆದರೂ ನಮ್ಮ ಒಳಹರಿವು ಆ ಕಡೆಗೇ ಸ್ವಲ್ಪ ವಾಲಿರುತ್ತದೆ. ಮಾವಿನಕಾಯಿ ಅಪ್ಪೆಹುಳಿ ಅಥವಾ ನೀರ್ಗೊಜ್ಜಿನಂತೆ ಮಾವಿನ ಹಣ್ಣಿನ ರಸಾಯನ-ಸೀಕರಣೆ-ಪಾಯಸ ಬಲು ಮೋದ ಕೊಡುವ ನೈವೇದ್ಯವಷ್ಟೇ ? ಉಪ್ಪಿನಕಾಯಿಯಿಂದ ಹಿಡಿದು ಹಲವು ರೀತಿಯಲ್ಲಿ ಭಕ್ಷ್ಯಗಳಿಗೆ ಮೂಲ ಮಾವಿನಕಾಯಿ, ದೃಷ್ಟಿ ಬೊಟ್ಟಿನ ಕಥೆ ಬಿಡಿ, ಈಗೆಲ್ಲ ನಮಗೆ ಫ್ರೂಟಿ, ಮಾಜಾ ಇದೇ ಗತಿ! ಮಾವಿನ ಹಣ್ಣಿನ 'ಹಣ್ಣಪ್ಪಚ್ಚಿ' ಗೊತ್ತಾ ನಿಮಗೆ? ಹುಳಿ-ಸಿಹಿ ಎರಡೂ ಇರುವ ಗಡ್ಡದ ಮಾವಿನ ಹಣ್ಣನ್ನು ಹಿಂದಿ ಸೂರ್ಯನ ಬಿಸಿಲಲ್ಲಿ ತಾಟಿನಲ್ಲಿ ಒಣಗಿಸಿ ಮಾಡುತ್ತಾರಲ್ಲ ?ಜಾನಪದ ಹಾಡುಗಳೂ ಮುಂದೊಂದು ದಿನ ಮರೆಯಾಗಬಹುದು ಅಲ್ಲವೇ ? ಇದೆಲ್ಲ ಈಗ ನೆನಪೇ ಅಂತ ಅನಿಸುತ್ತದೆ,ಲೇಖನ ಹಿಡಿಸಿತು, ಧನ್ಯವಾದಗಳು

Lakshmi Shashidhar Chaitanya ಹೇಳಿದರು...

nimma memory card nalliruva samasta recipe gaLanna copy maaDikoLLalu naanu atisheeghradalli nimma manege baraliddene. :)

ಮನಸು ಹೇಳಿದರು...

ತೇಜುರವರೆ,
ಉಪ್ಪಿನಕಾಯಿ ವಿಷಯ ಬಾಯಲ್ಲಿ ನೀರು ಬರಿಸಿತು.. ಇನ್ನು ಅತ್ತೆ ಮತ್ತು ನಿಮ್ಮ ಒಡನಾಟ ಹಿತವೆನಿಸಿತು, ಹಾಗೆ ಅತ್ತೆಯ ಹಾಡು ನಿಜಕ್ಕೂ ಚೆನ್ನಾಗಿದೆ ಈ ಜಾನಪದ ಹಾಡುಗಳು ಎಷ್ಟೊಂದು ಇವೆ ನಮಗೆ ಗೊತ್ತೇ ಇಲ್ಲ. ಆ ಪುಟ್ಟ ಕಂದಮ್ಮಗಳು ಮುದ್ದಾಗಿವೆ.....

ದಿನಕರ ಮೊಗೇರ ಹೇಳಿದರು...

tejaswini madam,
baayalli niroorisuva lekhana,

jaanapada geete,

soopar photo. khandita drushtiyaagatte...

ತೇಜಸ್ವಿನಿ ಹೆಗಡೆ ಹೇಳಿದರು...

@ಪಾಲಾ,

ಜ್ವರಬಂದಾಗಲೇ ಇಂತಹ ಪದಾರ್ಥಗಳ ಕುರಿತು ಹೇಳಬೇಕು.. ಜಡ್ಡುಗಟ್ಟಿರುವ ನಾಲಗೆಯೂ ಚುರುಕಾಗುತ್ತದೆ ಅಲ್ಲವೇ? :) ಜ್ವರದಿಂದ ಮುಕ್ತಿ ಸಿಕ್ಕಿದೆಯೆಂದು ಭಾವಿಸುವೆ...

ನನಗೂ ಆ ಸಾಲುಗಳ ಅರ್ಥ ಆಗಿರಲಿಲ್ಲ.... ನಾನೂ ಕಾಯುತ್ತಿರುವೆ ತಿಳಿದವರು ತಿಳಿಸಿ ಹೇಳಲು.

ಹೌದು ಅತ್ತೆಯವರ ಧ್ವನಿಮುದ್ರಣವನ್ನು ರೆಕಾರ್ಡ್ ಮಾಡಿ ಹಾಕಬೇಕೆಂದಿರುವೆ. ಇನ್ನೊಂದು ಸಲ ಬಂದಾಗ ಮಾಡುವೆ ಕೂಡ.

ಮೆಚ್ಚುಗೆಗಳಿಗೆ ಧನ್ಯವಾದ.

@ಕೃಷ್ಣಮೂರ್ತಿ ಅವರೆ, ಮನದಾಳದಿಂದ.., ಸುಧೇಶ್, ಕಾಕಾ, ದಿಲೀಪ್ ಅವರೆ,

ನಿಮ್ಮೆಲ್ಲರ ಮೆಚ್ಚುಗೆ ಭರಿತ ಸ್ಪಂದನೆಗಳಿಗೆ ತುಂಬಾ ಧನ್ಯವಾದಗಳು.

@ದಿವ್ಯಾ,

ಖಂಡಿತ...Anytime :) Memory card ತುಂಬಾ ಒಳ್ಳೇ ಕಂಡಿಷನ್‌ನಲ್ಲಿದ್ದು... ಹೆದ್ರದು ಬೇಡ. ಯವಾಗ ಬಂದ್ರೂ ಎಲ್ಲಾ ಸ್ಟೋರ್ ಆಗಿದ್ದಿದ್ದನ್ನ ನಿಂಗೆ ಟ್ರಾನ್ಸ್‌ಫರ್ ಮಾಡ್ತಿ :) Thanks.

@ಸೀತಾರಾಮ್ ಅವರೆ,

ನಿಮ್ಮ ಮೆಚ್ಚುಗೆಗಳಿಗೆ ಆಭಾರಿ. ಧನ್ಯವಾದಗಳು.

@ಸಾಗರಿ,

ಹೌದು... ಪಿತ್ತ ಜಾಸ್ತಿ ತಿನ್ನಲಾಗ ಎನ್ನುತಿದ್ದ ಅಮ್ಮನ ಮಾತನ್ನು ಚೂರೂ ಕಿವಿಗೆ ಹಾಕಿಕೊಳ್ಳದೇ ಮೆಣಸು ನುರಿದು ತಿಂದು, ಕೊನೆಗೆ ಹೊಟ್ಟೆಯುರಿ ಅನುಭವಿಸುತಿದ್ದ ದಿನಗಳು ಇನ್ನೂ ಹಸಿರಾಗಿದೆ. ಇಂಗು, ತೆಂಗು, ಎಣ್ಣೆ, ಮಾವು ಇದ್ದರೆ ಸಾಕು....ಬೇರೇನು ಬೇಕೆನಿಸದು....ಅನ್ನ ಸರಾಗವಾಗಿ ಹೊಟ್ಟೆಗೆ ಹೋಗುವುದು ಅಲ್ಲವೇ? :) ಧನ್ಯವಾದಗಳು.

@ವಿಜಯಶ್ರೀ, ಸುಬ್ರಹ್ಮಣ್ಯ, ಶಿವು, ರಾಘು - ಅವರೆ,

ತುಂಬಾ ಧನ್ಯವಾದಗಳು.

@ಅನಾಮಧೇಯ,

ನಿಮ್ಮ ಸುಂದರ ಹೆಸರನ್ನೂ ಮೊದಲು ಅಥವಾ ಕೊನೆಯಲ್ಲಿ ಹಾಕಿದ್ದರೆ ತುಂಬಾ ಸಂತೋಷವಾಗುತಿತ್ತು :)

ಹೌದು.... ಮಾವಿನ ಹಣ್ಣಿನ ರಸದಿಂದ ಮಾತ್ರವಲ್ಲ, ಹಲಸಿನ ಹಣ್ಣಿನ ರಸದಿಂದಲೂ ನೀವು ಹೇಳಿದ ತಿನಿಸನ್ನು ಮಾಡುತ್ತಾರೆ. ಇದರ ಕುರಿತು ಲೇಖನದಲ್ಲಿ ಬರೆಯಲು ಮರೆತುಹೋಗಿತ್ತು. ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಮ್ಮಲ್ಲಿ ಇದಕ್ಕೆ "ಹಣ್ಣೇವು" ಅನ್ನುತ್ತೇವೆ.

ನಮ್ಮ ಒಲವು ಜಂಕ್ ಫುಡ್‌ಗಳಿಂದ ಬೇರ್ಪಟ್ಟು ಇಂತಹ ರುಚಿಕರ ಪದಾರ್ಥಗಳೆಡೆ ಹರಿದರು ತುಂಬಾ ಒಳ್ಳೆಯದು ನಮ್ಮ ಜೇಬಿಗೂ ಹಾಗೂ ಆರೋಗ್ಯಕ್ಕೂ. ಧನ್ಯವಾದಗಳು.

@ಲಕ್ಷ್ಮೀ,

ಮೇಲೆ ದಿವ್ಯಾಳಿಗೆ ಹೇಳಿದ ಮಾತುಗಳೇ ನಿನಗೂ ಅನ್ವಯಿಸುತ್ತದೆ....Anytime.. most welcome :)

@ಮನಸು, ದಿನಕರ್ ಅವರೆ,

ನಿಮ್ಮ ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು (ಪುಟ್ಟ ಕಂದಮ್ಮಗಳ ಪರವಾಗಿಯೂ...:))

Pramod P T ಹೇಳಿದರು...

ಹಾಯ್ ತೇಜು ಮೇಡಂ,

ಉಪ್ಪಿನ್ ಕಾಯಿ ರುಚಿ ನೊಡೊಕೆ ಮತ್ತೆ ನಿಮ್ಮ ಅತ್ತೆಯವರ ಹಾಡನ್ನ ಕೇಳೋಕೆ ಯಾವಗ್ ಬರೋದು ಅಂತ ಹೇಳಿ :)