ಮಂಗಳವಾರ, ಮೇ 18, 2010

ಕೆಟ್ಟ ಕಾಲವನ್ನು ಕ್ಷಣವಾದರೂ ಹಿಂತಿರುಗಿಸುವಂತಿದ್ದ‘ರೆ’.....

ಬಾಣಲೆಯೊಳಗಿನ ಒಗ್ಗರಣೆ ಚಟ ಚಟ ಎಂದು ಸಿಡಿಯುವಾಗಲೇ ಪುಟ್ಟಿ "ಅಮ್ಮಾ ಮಿಕಿ ಬಾರು ಬೇಕು..." ಎಂದಾಗ, ನನ್ನ ತಲೆಯೂ ಸಣ್ಣಗೆಲ್ಲೋ ಸಿಡಿದಂತಾಯಿತು. ಬೆಳಗಿನಿಂದ ಈ ಹಾಡು ಕೇಳುತ್ತಿರುವುದು ಎಷ್ಟನೇಬಾರಿಯೋ... ಸಹನೆಯಿಂದ ಕೋರಿಕೆಯ ಮುಂದೂಡಿ ಸಾಕಾಗಿಹೋಗಿತ್ತು. ಈ ಮಿಲ್ಕಿ ಬಾರನ್ನು ಕಂಡು ಹಿಡಿದ ಮಹಾನ್ ವಿಜ್ಞಾನಿಯನ್ನೂ ಮನದಲ್ಲೇ ಬೈದುಕೊಂಡಾಗಿತ್ತು. "ನಿನ್ನೆಯಷ್ಟೇ ನಿಂಗೆ ಕೊಟ್ಟಿದ್ನಲೆ.... ರಾಶಿ ತಿನ್ನಲಾಗ ಚೊಕಲೇಟ್... ಈಗ ಊಟಕ್ಕಾತು.... ಊಟ ಆಗಿ ದದ್ದಿ ಆದ್ಮೇಲೆ ಕೊಡ್ತೆ... ಮತ್ತೆ ಹಟಾ ಮಾಡಿದ್ರೆ ಒಂದು ಪೆಟ್ಟು ಬೀಳ್ತು ನೋಡು...." ಎಂದು ಗದರಿ ಆಚೆ ಸಾಗ ಹಾಕಿ, ಪಲ್ಯ ಬೇಯಿಸಲಿಟ್ಟಿದ್ದೆನೋ ಇಲ್ಲವೋ... ಮತ್ತೆ ಅದೇ ರಾಗ ಅದೇ ತಾಳಹೊಂದಿದ ಹಡೇ ಹಾಳು ಟ್ಯೂನ್ ಆಗಿತ್ತು...."ಅಮ್ಮಾ ಮಿಕಿ ಬಾರು....." ಥತ್... ಒಂದು ಕೆಲ್ಸವನ್ನೂ ಸರಿಯಾಗಿ ಮಾಡಲಾಗುತ್ತಿಲ್ಲ ಇವತ್ತು... ಮೇಲಿಂದ ಮಗಳ ಕಿರಿಕಿರಿ ಬೇರೆ...ಇವಳ ಊಟದ ಸಮಯ ಮೀರುತ್ತಿದೆಯೇ ಎಂದು ಹಾಲಿನಲ್ಲಿದ್ದ ಗಡಿಯಾರದೆಡೆ ನೋಡಿದರೆ ಸಮಯ ಆರುಗಂಟೆಗೇ ನಿಂತಿತ್ತು! ಅಲ್ಲೇ ಇದ್ದ ನನ್ನ ಮೊಬೈಲ್‌ನಲ್ಲಾದರೂ ಸಮಯ ನೋಡೋಣವೆಂದು ಹೊರಟರೆ ಅಲ್ಲಿಯೂ ಸಮಯ ಅದಲಾಬದಲಿ! ದೇವ್ರೆ ಇವತ್ತೇಕೋ ನನ್ನ ಟೈಮೇ ಸರಿ ಇಲ್ಲೆ... ಎಂದು ಮನದಲ್ಲೆಲ್ಲೋ ಅಶಂಕೆಯಾಗಿ ಸುಸ್ತಾದಂತೆನಿಸಿತು. ಈ ಎಲ್ಲಾ ಗಡಿಬಿಡಿಯಲ್ಲಿ ಬೇಯಲು ಸಾಕಷ್ಟು ನೀರು ಹಾಕದೇ, ದೊಡ್ಡ ಉರಿಯಲ್ಲಿ ಬೇಯಿಸಲಿಟ್ಟಿದ್ದರಿಂದ ಪಲ್ಯ ಸೀದ ವಾಸನೆ ಬಡಿದು, ನೋಡಲೂ ಹೋಗದೇ ಹಾಗೇ ಗ್ಯಾಸ್ ನಂದಿಸಿಬಂದು ಬಿಟ್ಟೆ. ಆದರೆ ಬಿಂಬಡದ ರಾಗ ಮಾತ್ರ ನಿಲ್ಲದೇ ನನ್ನ ಹಿಂಬಾಲಿಸಿ ಬರುತಿತ್ತು. ಉಕ್ಕಿ ಬರುತ್ತಿದ್ದ ಸಿಟ್ಟನ್ನು ತಡೆಹಿಡಿಯಲು ಕ್ಷಿಪ್ರ ಪ್ರಾಣಾಯಾಮ ಮಾಡಿಕೊಂಡು ಸುಮ್ಮನೇ ಕಣ್ಮುಚ್ಚಿದವಳೇ "ಡಾಕ್ಟ್ರೆ ನಂಗ್ಯಾಕೋ ತಲೆನೋವು... ಚೂರು ಔಷಧಿ ಕೊಡ್ತೀರಾ.."ಎಂದು ಕೇಳಿದ್ದೇ ತಡ ಮಿಲ್ಕಿ ಬಾರ್ ಮಾಯ... ಡಾ.ಅದಿತಿ ಹೆಗಡೆ ಪ್ರತ್ಯಕ್ಷ! "ಹೌದಾ... ತರ್ತೀನಿ.... ಎಷ್ಟು ಬೇಕು ಗುಳ್ಗೆ?" ಎಂದು ಸಿದ್ಧಳಾದ ಅವಳ ಗಂಭೀರತೆ ನೋಡಿ ನಗು ಬಂದರೂ, ನಕ್ಕರೆ ಬರುವ ಮಿಲ್ಕಿ ಬಾರ್ ಭೂತ ಎಣಿಸಿ ಸುಮ್ಮನಾದೆ. "ಒಂದು ಸಾಕು ಡಾಕ್ಟ್ರೆ... ಹಾಗೇ ಸ್ವಲ್ಪ ಕಾಫೀನೂ ಮಾಡ್ಕೊಂಡು ಬನ್ನಿ..."ಎಂದು ಅವಳನ್ನು ಆಟಿಕೆಯ ಸಾಮಾನುಗಳೆಡೆ ಸಾಗ ಹಾಕಿದವಳೇ ಮೊಬೈಲ್ ಸಮಯದ ರಿಪೇರಿಗೆ ಕುಳಿತೆ.

ಹೊಸ ಮೊಬೈಲ್ ಸೆಟ್ ಆಗಿದ್ದರಿಂದ ಸ್ವಲ್ಪ ಕಿರಿ ಕಿರಿ ಅಗತೊಡಗಿತು. ಡೇಟ್ ಆಂಡ್ ಟೈಮ್ ಸೆಟ್ಟೆಂಗ್ಸ್ ಎಲ್ಲೂ ಸಿಗದೇ ತುಸು ಸಿಟ್ಟು ಬಂತು. ಅಷ್ಟರಲ್ಲಿ ನನ್ನವರ ಫೋನ್ ಅದೇ ಮೊಬೈಲ್‌ಗೆ ಬರಲು ಅದರ ಸಿಟ್ಟೆಲ್ಲಾ ಅಲ್ಲಿಗೆ ಟ್ರಾನ್ಸ್‌ಫರ್ ಆಯಿತು. ಅಂತೂ ಆ ಕಡೆಯಿಂದ ಸರಿಯಾದ ಡಾಟಾ ಟ್ರಾನ್ಸ್‌ಫರ್ ಮಾಡಿಕೊಂಡು ಮೊಬೈಲ್ ಟೈಮಿಂಗ್ಸ್ ಸರಿಪಡಿಸಿದಾಗ ಏನೋ ಅವ್ಯಕ್ತ ಸಮಾಧಾನ. ಇಲ್ಲಿ ಕೆಟ್ಟು ನಿಂತಿರುವ ಸಮಯವನ್ನು ನಾವೇ ಸರಿಪಡಿಸುವಂತೇ ನಮ್ಮ ಕೆಟ್ಟ ಕಾಲವನ್ನೂ ನಾವೇ ಸರಿಪಡಿಸುವಂತಿದ್ದರೆ, ಹಾಳಾದ ಪಲ್ಯದ ಸಮಯವನ್ನು ಹಿಂತಿರುಗಿಸಿ ಘಮಘಮಿಸುವಂತಾಗಿದ್ದರೆ, ಮಸಾಲೆಯನ್ನು ರುಬ್ಬುವಾಗ ಅರ್ಧದಲ್ಲೇ ಕೈಕೊಟ್ಟ ಕರೆಂಟಿನ ಸಮಯವನ್ನು ಅಲ್ಲೇ ನಿಲ್ಲಿಸುವಂತಾಗಿದ್ದರೆ....ಆರು ತಿಂಗಳ ಕಡಿಮೆ ಊರಿಗೆ ಹೋಗೆನು ಎಂದು ಹೇಳಿಬಂದ ಕಲಸದ ಹುಡುಗಿ ವಾರದೊಳಗೇ ಓಡಿಹೋಗುವಂತಾದ ಕಾಲವನಲ್ಲೇ ತಡೆಹಿಡಿವಂತಾಗಿದ್ದರೆ,....‘ರೆ’ ಸಾಮ್ರಾಜ್ಯದೊಳಗಿನ ಮಜಾವೇ ಬೇ‘ರೆ’. ಛೇ ಇದೆಲ್ಲಾ ಸಣ್ಣ ಸಣ್ಣ ಯೋಚನೆಯಾಯಿತು, ಕಲ್ಪಿಸುವುದಾದರೆ ದೊಡ್ಡದೇಕಾಗಬಾರದು.?ಎಂದು ಮನದಲ್ಲೇ ಸಮಯದ ಅದಲಿ ಬದಲಿ ಮಾಡಿ ಬೇಕಾದ ರೀತಿಯಲ್ಲಿ ಫಿಕ್ಸ್ ಮಾಡಿ, ಮಂಡಿಗೆತಿನ್ನುವಾಗಲೇ ಕಲ್ಪನೆಯ ಕಹಿ ಗುಳಿಗೆಯನ್ನು ಹಿಡಿದು ಡಾ.ಅದಿತಿ ನಿಂತಿದ್ದಳು. "ಹೂಂ... ತಗ ಬೇಗ... ನಂಗೆ ಬೇರೆ ಕೆಲ್ಸ ಇದ್ದು ಗೊತ್ತಾತಾ? ಬೇಗ ಔಚದಿ ತಗಳವು... ಥೂ ಮಾಡಡಾ... ಇಲ್ದೇ ಹೋದ್ರೆ ಚುಚ್ಚಿ ಚುಚ್ಚಿ ಮಾಡಕಾಗ್ತು...." ಎಂದು ಹೇಳಿದವಳೇ ಸುಮ್ಮನೇ ಏನನ್ನೋ ಕೈಯೊಳಗಿಟ್ಟು ಆಟಿಗೆಯ ಲೋಟವನ್ನೂ ಕೊಟ್ಟು ಮತ್ತೆ ಸುಳ್ಳೆ ಪುಳ್ಳೆ ಕಾಫಿ ಮಾಡಿ ತರಲು ಹೋದಳು. ಹೋಗಿದ್ದ ಕರೆಂಟ್ ಮತ್ತೆ ಬರಲು ಅರ್ಧ ರುಬ್ಬಿದ್ದ ಮಸಾಲೆಯ ನೆನಪಾಗಿ ಘಮಘಮಿಸುವ ಸಾಂಬಾರಿನ ಸಮಯವನ್ನಾದರೂ ಫಿಕ್ಸ್ ಮಾಡಲು ಮುಂದಾದರೆ ಅದೇ ಹಳೆ ರಾಗವೂ ನನ್ನ ಹಿಂಬಾಲಿಸತೊಡಗಿತು.

ಚಿತ್ರಕೃಪೆ : [http://blogs.discovermagazine.com/cosmicvariance/files/2008/11/time-flies-clock-10-11-2006.gif]

-ತೇಜಸ್ವಿನಿ ಹೆಗಡೆ

20 ಕಾಮೆಂಟ್‌ಗಳು:

ವನಿತಾ / Vanitha ಹೇಳಿದರು...

Choo Chweet Aditi :)
ಹೌದಲ್ವ..ಟೈಮ್ ನ್ನು ಹಿಂದೆ ಮಾಡುವಂತಾದರೆ ಎಷ್ಟು ಒಳ್ಳೇದು ಅಲ್ವ!!

ಮನದಾಳದಿಂದ............ ಹೇಳಿದರು...

ತೇಜಸ್ವಿನಿ ಮೇಡಂ,
ಸರಳವಾದ ವಿಷಯವೊಂದರ ಬಗ್ಗೆ ತೆಳು ಹಾಸ್ಯದ ಲೇಪನ ಮಾಡಿ ಸಮಯದ ಬಗ್ಗೆ ಸುಂದರವಾಗಿ ವರ್ಣಿಸಿದ್ದೀರಾ! ಕಲ್ಪ್ಸಿಕೊಳ್ಳಲು, ಕನಸು ಕಾಣಲು ನಮ್ಮ ಗಂಟೇನೂ ಹೋಗಲ್ಲ ಬಿಡಿ, ಹೇಗಾದರೂ ಸಂತೋಷವಾಗಿರುವ ದಾರಿ ಕಂಡುಕೊಳ್ಳೋಣ ಅಲ್ವಾ?
ಸುಂದರ ಬರಹ.

Dr.D.T.Krishna Murthy. ಹೇಳಿದರು...

ಮಗಳಿಗೆ ಡಾಕ್ಟರ್ ರೋಲ್ ಮಾಡೋಕೆ ಕೊಟ್ಟು ಮಿಲ್ಕ್ ಬಾರ್
ಮರೆಸಿದ್ದು ಚೆನ್ನಾಗಿತ್ತು.ಕಾಲದ ಬಗೆಗಿನ ಚಿಂತನೆ ಚೆನ್ನಾಗಿದೆ.

Unknown ಹೇಳಿದರು...

ತೇಜಕ್ಕಾ,

ಟೆನ್ಶನ್ ಮಾಡ್ಕ್ಯಳಡಾ, ಈ ಸಲ ಸರಿಯಾದ್ದವರನ್ನೇ ಹುಡುಕನ. ಹೇಳದು ಸುಲಭ ಹೇಳಿ ಗೊತ್ತಿದ್ದು ನಂಗೆ, ಆದರೂವಾ, ಒಳ್ಳೆ ಕಾಲ ಬರ್ತು, ಹೆದರಡಾ.

ವಿ.ರಾ.ಹೆ. ಹೇಳಿದರು...

ಅದೆಲ್ಲಾ ಗೊತ್ತಿಲ್ಲ. ನಂಗೂ ಮಿಲ್ಕಿಬಾರ್ ಬೇಕು..... ;)

ಮನಸು ಹೇಳಿದರು...

chennagide... milky bar nanna fav kooda adre kelolla bidi hahaha

ಮುತ್ತುಮಣಿ ಹೇಳಿದರು...

:), ಮನಸಿಗೆ ಮುದನೀಡಿತು ನಿಮ್ಮ ಲೇಖನ.

sunaath ಹೇಳಿದರು...

Oh! What an idea!

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ,
ಮಕ್ಕಳಾಟದಲ್ಲಿನ ತನ್ಮಯತೆಯೊಂದಿಗೆ ಕಾಲವೂ ಹಾಗೆಯೇ! ಸುಮ್ಮನೆ ಹೇಳದೇ ಕೇಳದೇ ಹೋರಟೇ ಹೋಗುತ್ತದೆ.
ಬರಹ ಚೆನ್ನಾಗಿದೆ.

ಸಮಯದ ಬಗ್ಗೆ ಒಂದು ಆಂಗ್ಲ ಲೇಖನವನ್ನು ಕನ್ನಡೀಕರಿಸಿದ್ದೆ. ಅದರ ಲಿಂಕು ಇಲ್ಲಿದೆ.

http://kshanachintane.blogspot.com/2009/07/blog-post_28.html

ಧನ್ಯವಾದಗಳು.

ಚಿತ್ರಾ ಹೇಳಿದರು...

ತೇಜೂ,,
ಚಂದ ಇದ್ದು. ನೀ ಹೇಳಿದ ಹಾಗೆ ಕಾಲವನ್ನು ಹಿಂದೆ ತಿರುಗಿಸಲು ಬರುವಂತಿದ್ದರೆ.....
ಮಗಳನ್ನು ಮತ್ತೆ ಶಿಶುವಾಗಿಸಿ ಅವಳ ಬೆಳವಣಿಗೆಯ ಪ್ರತಿಹಂತದಲ್ಲೂ ಜೊತೆಗಿದ್ದು ಖುಷಿ ಪಡುವಂತಾಗಿದ್ದರೆ .....
ಆಫೀಸಿನಲ್ಲಿ ಮಾಡಿದ ತಪ್ಪುಗಳನ್ನು ಅಳಿಸಿ , ಬಾಸ್ ಇಂದ ಬೈಸಿಕೊಳ್ಳದೆ ಇರುವಂತಾಗಿದ್ದರೆ ...
ತೂಕ ಮತ್ತು ವಯಸ್ಸು ಎರಡನ್ನೂ ೧೦ ವರ್ಷ ಹಿಂದೆ ತಿರುಗಿಸಿ ಅಲ್ಲಿಯೇ ನಿಲ್ಲಿಸಲು ಬರುವಂತಿದ್ದರೆ....
ಸಾಕು ... ಸ್ವಲ್ಪ ಹೆಚ್ಚಾಗ್ತಾ ಇದ್ದು .... ಹಾ ಹಾ ಹಾ ..

ಕಥೆ / ನಿನ್ನ ಚಿಂತನೆ .. ಚಂದ ಇದ್ದು . ಇಷ್ಟ ಆತು

Subrahmanya ಹೇಳಿದರು...

’ನಮ್ಮ’ ಪ್ರಯತ್ನಗಳು ಫಲ ಕೊಡಲೂ ಟೈಮ್ ಬರ್ಬೇಕು ಅನ್ಸುತ್ತೆ :). ಮರಳಿ ಯತ್ನವ ಮಾಡು....

ದಿನಕರ ಮೊಗೇರ ಹೇಳಿದರು...

ಅದಿತಿಯ ಮಾತು, ವರ್ತನೆ ತುಂಬಾ ಹಿಡಿಸಿತು.... ಮಕ್ಕಳ ಜೊತೆ ಮಕ್ಕಳಾಗೆ ನಡೆದುಕೊಂಡರೆ ಅವರೂ ಖುಷ್ ನಾವೂ ಖುಷ್...... ನಗು ನಗಿಸುತ್ತಲೇ ಗಂಬೀರ ವಿಷದ ಬಗ್ಗೆಯೂ ಬರೆದಿರಿ....... ಸುಂದರ ಬರಹ........

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಇಂಥ ಚಿಕ್ಕ ಚಿಕ್ಕ ವಿಚಾರಗಳಲ್ಲಿ ಸಿಗುವ ಆನಂದ ಬೇರೆಲ್ಲಿ ಸಿಗುತ್ತದೆ ಹೇಳಿ. ನಿತ್ಯ ಘಟನೆಯಲ್ಲಿ ಸಮಯವನ್ನೇ ವಸ್ತುವನ್ನಾಗಿ ಮಾಡಿ ಬರೆದ ನವಿರು ಹಾಸ್ಯ ಶೈಲಿ ಇಷ್ಟವಾಯಿತು.

ಸೀತಾರಾಮ. ಕೆ. / SITARAM.K ಹೇಳಿದರು...

ಸಮಯವ ನಿಲ್ಲಿಸುವ೦ತಿದ್ದರೇ...! ಕಲ್ಪನೆಯಲ್ಲಿ ದೈನ೦ದಿನ ಜ೦ಜಡದ ಸುತ್ತಲಿನ ತೆಳು ಹಾಸ್ಯದ ನವಿರು ನಿರೂಪಣೆಯಿ೦ದ ತಮ್ಮ ಬರಹ ಸೊಗಸಾಗಿ ಮೂಡಿದೆ. ಡಾ.ಅದಿತಿಯವರ ಪಾತ್ರ ಇಷ್ಟವಾಯಿತು :-)

ಸುಧೇಶ್ ಶೆಟ್ಟಿ ಹೇಳಿದರು...

Dr. Adhiti is so sweet :)

ishta aayithu thejakka... bEganE nimage mattobba kelsadhaake sigali....

ಜಲನಯನ ಹೇಳಿದರು...

ತೇಜಕ್ಕಾ ಎಷ್ಟು ಚನ್ನಾಗಿರುತ್ತಲ್ಲ ಗಡಿಯಾರದ ಮುಳ್ಲನ್ನು ಹಿಂದಕ್ಕೆ ತಿರುಗಿಸುವ ಹಾಗೆ ಜೀವನದ ಗಡಿಯಾರದ ಮುಳ್ಳನ್ನೇ ಹಿಂದಕ್ಕೆ ಕೊಡೊಯ್ದರೆ ?....ಅದಕ್ಕೆ ಅಲ್ಲವೇ ನೀನು ಅಕ್ಕ ನಾನು ತಮ್ಮ ಆಗಿದ್ದು....ಯಾಕಂದ್ರೆ ಹಾಗೆ ನನಗೆ ಮಾತ್ರ ಆಯಿತು ನಿನ್ಗಲ್ಲ...ಹಹಹ

Manasa ಹೇಳಿದರು...

ತೇಜಸ್ವಿನಿ ಮೇಡಂ,
ತುಂಬಾ ಚೆನಾಗಿ ಬರದಿರೀ ... ಎಷ್ಟು ಚೆನ್ನಾಗಿರೋದು ಕಳೆದು ಹೋದ ಸಮಯ ಮತ್ತೆ ಕ್ಷಣಗಳನ್ನೂ ವಾಪಸ ತರಬಹುದಿದ್ದರೆ

ಮನಸಿನ ಮಾತುಗಳು ಹೇಳಿದರು...

howdu tejakka..
nija... :(

ಮನಸಿನಮನೆಯವನು ಹೇಳಿದರು...

ತೇಜಸ್ವಿನಿ ಹೆಗಡೆ-.,

ಆದರೆ,ಹೋದರೆ,ಬಂದರೆ,... ಈ ರೀತಿಯ 'ರೆ' ಪ್ರಶ್ನೆಗಳಿವೆಯಲ್ಲ...??!/

ತೇಜಸ್ವಿನಿ ಹೆಗಡೆ ಹೇಳಿದರು...

@ವನಿತಾ,
ಥ್ಯಾಂಕ್ಸ್ ಅದಿತಿ ತುಂಬಾ ತುಂಟಿಯಾಗಿದ್ದಾಳೆ :) ಈ ಸಮಯವೇನೋ ಚೆನ್ನಾಗಿದೆ... ಆದರೆ ಈ ಸಮಯವನ್ನು ಸರಿಯಾಗಿ ಅನುಭವಿಸಲಾಗದಂತೆ ಒದಗಿರುವ ಕೆಟ್ಟ ಸಮಯವನ್ನು ಮಾತ್ರ ಹಿಂತಿರುಗಿಸುವಂತಾಗಿದ್ದ‘ರೆ’... !

@ಮನದಾಳದಿಂದ,
ನಿಜ.. ಕನಸು ಕಾಣಲು, ಕಲ್ಪನೆ ಹೆಣೆಯಲು ಯಾರ ಗಂಟೂ ಬೇಕಿಲ್ಲ.. ಆದರೆ ನಿರಾಸೆಯ ಹಿಡಿತದಿಂದ ಪಾರಾಗುವ ಧೈರ್ಯದಗಂಟು ಜೊತೆಗಿದ್ದರೆ ಮತ್ತೂ ಚೆನ್ನ ಅಲ್ಲವೇ? ಧನ್ಯವಾದಗಳು.

@ಕೃಷ್ಣಮೂರ್ತಿ ಅವರೆ,
ಹೌದು.. ಒಮ್ಮೊಮ್ಮೆ ಆಕೆ ನನ್ನಮ್ಮ, ಡಾಕ್ಟರ್, ಟೀಚರ್, ಅಜ್ಜಿ, ಅಕ್ಕ ಎಲ್ಲಾ ಆಗ್ತಾಳೆ. ನಾನೂ ಪಾತ್ರ ಬದಲಾವಣೆ ಮಾಡ್ತಿರ್ತೀನಿ :) ಇದು ಅನಿವಾರ್ಯ ಅಲ್ಲವೇ? ಧನ್ಯವಾದಗಳು.

@ಮಧು,
ಬಂದೇ ಬರತಾವ ಕಾಲ... ನಿಜ. ಆದರೆ ಆ ಕಾಲ ನಮ್ಮದಾಗಿದ್ದರೆ ಅಷ್ಟೇ ಸಾಕು. ಹುಡುಕುವುದು ಕಷ್ಟವಲ್ಲ.... ಆದರೆ ಸಿಗುವುದು ದುರ್ಲಭ :( ನಿನ್ನ ಪ್ರೋತ್ಸಾಹಕ್ಕೆ, ಬೆಂಬಲಕ್ಕೆ ತುಂಬಾ ಧನ್ಯವಾದ.

@ವಿಕಾಸ್,
ಅದಿತಿಗೆ ಹೇಳಿದ ಉತ್ತರವೇ ನಿನಗೂ ಲಾಗು ಆಗುವುದು ನೋಡು.... ಜಾಸ್ತಿ ಹಠ ಮಾಡಿದರೊಂದು ಪೆಟ್ಟು ಗ್ಯಾರಂಟಿ :)

@ಮನಸು,
ನನ್ನ ಮೆಚ್ಚಿನ ಚಾಕಲೇಟ್ ಕೂಡ ಇದು. ನೀವು ಕೇಳಿದರೂ ಕೊಡೊಲ್ಲ ಅದಿತಿ ಬಿಡಿ :) ಧನ್ಯವಾದಗಳು.

@ಮುತ್ತುಮಣಿ,
ಕ್ಷಮಿಸಿ.. ಕಾಲನ ಅಭಾವದಿಂದ ನಿಮ್ಮ ಬರೆಯೋ ಆಸೆಯನ್ನು ಓದಲಾಗುತ್ತಿಲ್ಲ. ಬಿಡುವಾದಾಗ ಖಂಡಿತ ಬರುವೆ ಆಸೆಯಿಂದ ಓದಲು :) ತುಂಬಾ ಧನ್ಯವಾದಗಳು.

@ಕಾಕಾ,
ಐಡಿಯಾ ಏನೋ ಚೆನ್ನಾಗಿದೆ ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು? :)

@ಚಂದ್ರು ಅವರೆ,
ತುಂಬಾ ಧನ್ಯವಾದ ಮೆಚ್ಚುಗೆಗೆ. ಆಂಗ್ಲ ಲೇಖನವನ್ನು ಓದಿರುವೆ ಚೆನ್ನಾಗಿದೆ.

@ಚಿತ್ರಕ್ಕ,
ನಿಜ.. ರೆ ಎಂದೂ ವಾಸ್ತವವಾಗದು. ಆದರೂ ಈ ರೆ ನಲ್ಲಿರುವ ಮಜ ಬೇ‘ರೆ’ಯಾವುದರಲ್ಲೂ ಕಾಣಸಿಗದು ಅಲ್ಲವೇ? :) ಧನ್ಯವಾದಗಳು.

@ಸುಬ್ರಹ್ಮಣ್ಯ ಅವರೆ,
ಪ್ರಯತ್ನಕ್ಕೆ ಫಲ ಇದೆಯಂತೆ. ಕಾದು ನೊಡುವುದಷ್ಟೇ ಈಗ ‘ನಾವು’ ಈ ಕಾಲದಲ್ಲಿ ಮಾಡಬಹುದಾದ ಕೆಲಸ. ಸಹನೆ ಬೇಕಾಗಿದೆ ಅಷ್ಟೇ. ಧನ್ಯವಾದಗಳು.

@ದಿನಕರ ಅವರೆ, ಸೀತಾರಾಮ್ ಅವರೆ ಹಾಗೂ ಶಿವು ಅವರೆ,
ಮೆಚ್ಚುಗೆಭರಿತ ಸ್ಪಂದನೆಗೆ ಧನ್ಯವಾದಗಳು.

ಸುಧೇಶ್,
ಹಾರೈಕೆಗಳಿಗೆ ತುಂಬಾ ಧನ್ಯವಾದಗಳು.

@ಜಲನಯನ,
ಎಲ್ಲರೂ ತೇಜಕ್ಕಾ ಎಂದು ಕರೆದೂ ಕರೆದೂ ನನಗೇ ಬೋರಾಗುತಿತ್ತು. ವಯಸ್ಸಿನಲ್ಲಿ ದೊಡ್ಡವರಾಗಿರುವ ನಿಮ್ಮನ್ನು ಅಣ್ಣ ಎಂದು ಕರೆಯುವ ಉತ್ತಮ ಕಾಲವನ್ನೇ ಹಿಂತಿರುಗಿಸಿದ್ದೀರಲ್ಲಾ :) ಕೆಟ್ಟ ಕಾಲವನ್ನು ಮಾತ್ರ ಹಿಂತಿರುಗಿಸಬೇಕು... ಒಳ್ಳೆಯದನ್ನಲ್ಲ.. ಅಲ್ಲವೇ? :) ತಮಾಷೆಯಾಗಿದೆ ನಿಮ್ಮ ತಮಾಷೆ....:)

@ಮಾನಸ ಹಾಗೂ ದಿವ್ಯ,
ನಿಜ... ಕೆಟ್ಟ ಕಾಲವನ್ನು ಬಯಸುವ ಮನುಜನೇ ಇಲ್ಲ. ಆ ಕಾಲದ ಹಂಗಿನಿಂದ ಹೊರಬರಲು ಬಲು ಕಷ್ಟವೇ ಸರಿ. ಕಳೆದು ಹೋದ ಉತ್ತಮ ಸಮಯದ ಕೊರಗೆಷ್ಟು ಹಿತವೋ... ಈಗಿರುವ ಕೆಟ್ಟ ಸಮಯದ ಅರಿವೂ ಅಷ್ಟೇ ಯಾತನಾಮಯ ಅಲ್ಲವೇ? ತುಂಬಾ ಧನ್ಯವಾದಗಳು.

@ಜ್ಞಾನಾರ್ಪಣಮಸ್ತು,
ಅದನ್ನೇ ನಾನೂ ಹೇಳುತ್ತಿರುವುದು.. ‘ರೆ’ ಸಾಮ್ರಾಜ್ಯದಲ್ಲಿ ಎಲ್ಲರೂ ಸಾಮ್ರಾಟರೇ :)