{ಸಂಕ್ರಾತಿಯ ಎಳ್ಳು ಬೆಲ್ಲದ ಸವಿಯನ್ನು ಬೀರುತ್ತಾ ಮಾನಸ ಇಂದು ಮೂರನೆಯ ವರುಷಕ್ಕೆ ಕಾಲಿಡುತ್ತಿದೆ. ನಿಮ್ಮೆಲ್ಲರ ಪ್ರೀತಿ, ಆತ್ಮೀಯತೆ, ಸಹೃದಯತೆಯೇ ಈ ಮಾನಸದ ನಿಶ್ಚಲತೆಗೆ ಕಾರಣ. ನಿಮ್ಮ ಪ್ರೀತಿಗೆ ಅದರ ರೀತಿಗೆ ನನ್ನ ಬರಹವೇ ಕಾಣಿಕೆ.
ಭೈರಪ್ಪನವರ "ದಾಟು" ಕಾದಂಬರಿಯ ಪುಟ್ಟ ವಿಮರ್ಶೆಯ ಮೂಲಕ ಮಾನಸ ೨ ವರುಷಗಳು ತುಂಬಿದ ಹರುಷವನ್ನಾಚರಿಸುತ್ತಿದೆ.}
ನಾ ಮೆಚ್ಚಿದ ಕೃತಿ : ಒಳಗೊಂದು ಕಿರುನೋಟ-೪ "ದಾಟು"
ಜಾತೀಯತೆ, ಮತೀಯ ಭಾವನೆ ಇವುಗಳನ್ನೆಲ್ಲಾ ಮೀರಿ ವಿಶ್ವಮಾನವರಾಗಬೇಕೆಂದು ನೀತಿ ಸಾರುವ ಅನೇಕ ಪುಸ್ತಕಗಳು ಬಂದಿವೆ. ಆದರೆ ಭೈರಪ್ಪನವರ "ದಾಟು" ಕೇವಲ ಶಬ್ದರೂಪದಲ್ಲಿ ಮಾತ್ರ ಸುಂದರವೆನಿಸುವ ಇಂತಹ ಸಂದೇಶವನ್ನು ಸಾರಿ ಸುಮ್ಮನಾಗುವುದಿಲ್ಲ. ವಿಶ್ವಮಾನವನಾಗಲು ಹೊರಟ ಮನುಷ್ಯನ ಮನಃಸ್ಥಿತಿ, ಅದಕ್ಕೆ ಬೇಕಾಗುವ ಸಂಯಮ, ಸಹನೆ, ದೃಢತೆ- ಹಾಗೆಯೇ ಇದಕ್ಕಾಗಿ ಆತ ನೀಡಬೇಕಾಗುವ ತ್ಯಾಗ, ಬಲಿದಾನ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ ‘ದಾಟು’. ಈ ಕಾದಂಬರಿಯನ್ನು ಓದುತ್ತಾ ಹೋದಂತೇ, ಕೊನೆಗೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಸಂದರ್ಭವೂ ಬರುತ್ತದೆ. ಇದು ಸರಿಯೇ? ಇದು ತಪ್ಪೇ? ಯಾವುದು (ಅ)ಧರ್ಮ, ಯಾವುದು ಸುಳ್ಳು? ಎಲ್ಲಿದೆ ಸತ್ಯ? ಜಾತಿಗಳ ನಡುವೆ, ಪಂಗಡಗಳ ನಡುವೆ ನಾವು ಬಯಸುವ ಸಮಾನತೆ, ವಿಶ್ವಮಾನವ ಎನ್ನುವ ಕಲ್ಪನೆ - ಇವೆಲ್ಲಾ ನಾವು ತಿಳಿದುಕೊಂಡಿರುವ ಪರಿಧಿಗಿಂತ ಎಷ್ಟು ಮೇಲ್ಸ್ತರದಲ್ಲಿವೆ!! ಎಷ್ಟೊಂದು ವಿಶಾಲವಾಗಿ, ನಮ್ಮ ಅರಿವಿಗೇ ಬಾರದಂತೆ ಸಮಾಜದೊಳಗೆ, ಜನರ ಮನಸಿನಾಳದೊಳಗೆ ಬೇರನ್ನೂರಿವೆ - ಇವೆಲ್ಲವುಗಳ ಅರಿವು ತುಸುವಾದರೂ ‘ದಾಟುವನ್ನು’ ದಾಟುವುದರ ಮೂಲಕ(ಓದುವುದರಿಂದ) ಉಂಟಾಗುವುದು.
೧೯೭೩ ರಲ್ಲಿ ಮೊದಲಬಾರಿ ಮುದ್ರಣಗೊಂಡ "ದಾಟು" ಪ್ರಮುಖವಾಗಿ ಅಂದಿನ ಕಾಲದ ಸಾಮಾಜಿಕ ಜನಜೀವನ, ಮನಃಸ್ಥಿತಿ, ಸಂಕುಚಿತತೆ, ವಿವಶತೆ, ಜಾತೀಯತೆಯೊಳಗಿನ ಅಸಹಾಯಕತೆ, ರಾಜಕೀಯತೆಯನ್ನು ತೆರೆದಿಡುತ್ತದೆ. ಆದರೆ ೪೧೨ ಪುಟಗಳಲ್ಲಿ ವಿವರವಾಗಿ (ಕೆಲವೊಂದು ವಿಷಯಗಳು ತುಸು ಸೂಕ್ಷ್ಮವಾಗಿ) ಪ್ರಸ್ತಾಪಗೊಂಡಿರುವ, ಬಣ್ಣಿಸಲ್ಪಟ್ಟ ಹಲವಾರು ವಿಷಯಗಳು, ಸಾಮಾಜಿಕ ಪಿಡುಗುಗಳು ಇಂದೂ ನಮ್ಮ ದೇಶದ ಅಸಂಖ್ಯಾತ ಹಳ್ಳಿಗಳಲ್ಲಿ ಇಂದೂ ಪ್ರಸ್ತುವಾಗಿವೆ. ಉತ್ತರದಿಂದ ದಕ್ಷಿಣದವರೆಗೂ ಹಳ್ಳಿಗರ ಜನಮಾನಸದಲ್ಲಿ ಜಾತೀಯತೆ, ಸ್ತ್ರೀ ಶೋಷಣೆ, ಮೇಲ್ಜಾತಿ, ಕೀಳ್ಜಾತಿಗಳೆಂಬ ತಾರತಮ್ಯ, ಜಾತೀಯತೆಯಿಂದ ಹೊರಹೊಮ್ಮುವ ದ್ವೇಷ, ತಾತ್ಸಾರ - ಇವೆಲ್ಲಾ ಒಂದು ಪಿಡುಗಂತೇ ಇಂದಿಗೂ ಪ್ರಚಲಿತಚಾಗಿವೆ. ಮನುಷ್ಯನನ್ನು ಮೊದಲು ಮನುಷ್ಯನನ್ನಾಗಿ ನೋಡಿ ನಂತರ ಜಾತೀಯತೆಯ ಮೂಲಕ ಅಳೆದರಾದರೂ ಮನುಷ್ಯತ್ವ ಉಳಿಯಬಹುದು. ಆದರೆ ಎಷ್ಟೋ ಕಡೆ ಮನುಷ್ಯನನ್ನು ಮನುಷ್ಯನೆಂದು ಗುರುತಿಸುವುದೇ ಜಾತೀಯತೆಯ ಆಧಾರದ ಮೇಲೆ ಎಂದರೆ ವಿಪರ್ಯಾಸವಾಗಲಾರದು. ಆ ಲೆಕ್ಕದಲ್ಲಿ ನೋಡಿದರೆ ಪಟ್ಟಣಿಗರೇ ತುಸು ವಾಸಿ. ತೀರ ಸಂಕುಚಿತತೆಯನ್ನು ಬಿಟ್ಟು ಸಮಾನತೆಯೆಡೆ ಮೊಗಮಾಡುತ್ತಿದ್ದಾರೆ.(!)
"ದಾಟು"ವಿನಲ್ಲಿ ನಾಯಕನಿಲ್ಲ. ಹಲವು ಉಪನಾಯಕರುಗಳಿಂದ ತುಂಬಿದೆ ಎಂದರೆ ತಪ್ಪಾಗದು. ಆದರೆ ನಾಯಕಿ ಓರ್ವಳೇ. ಅವಳೇ ಇಡೀ ಕಾದಂಬರಿಗೆ ಸೂತ್ರಧಾರಳು, ಕಥೆಗೆ ಕಾರಣಕರ್ತಳು. ಹೆಸರು ಸತ್ಯಭಾಮ ಎಂದಾಗಿದ್ದರೂ ಬುಡದಿಂದ ತುದಿಯವರೆಗೂ "ಸತ್ಯ" ಎಂದೇ ಸಂಬೋಧಿಸಲ್ಪಡುತ್ತಾಳೆ. ಹೆಸರಿಗೆ ತಕ್ಕಂತೇ ತನ್ನ ಆದರ್ಶಗಳನ್ನು ಎಂದೂ ಬಲಿಗೊಡದೇ, ತನ್ನ ಆತ್ಮಸಾಕ್ಷಿಗೆ ಓಗುಟ್ಟ ಬದುಕಿದವಳು. ಬ್ರಾಹ್ಮಣಳಾದ ಇವಳನ್ನು ಪ್ರೇಮಿಸುವ ಶ್ರೀನಿವಾಸ ಗೌಡ ಹೆತ್ತವರ ಒತ್ತಡಕ್ಕಿಂತ ಮೇಲ್ಜಾತಿಯವಳನ್ನು ಮದುವೆಯಾಗುವುದು ಪಾಪವೇನೋ ಎಂಬ ಪಾಪಪ್ರಜ್ಞೆಯಿಂದಲೇ ಆಕೆಗೆ ಕೈಕೊಡುತ್ತಾನೆ. ಇಲ್ಲಿಂದಲೇ ಅವಳ ಹೊಸ ಬದುಕಿನ ಅಧ್ಯಾಯ ಪ್ರಾರಂಭ. ವಿನೂತನ ದೃಷ್ಟಿಕೋನದತ್ತ ಆಕೆ ದಿಟ್ಟ ನಿಲುವು ಹಲವಾರು ಅಸಂಬಧಗಳ(ಅವಳ ಸುತ್ತಮುತ್ತಲಿನ ಜನರ ದೃಷ್ಟಿಯಲ್ಲಿ) ಸೃಷ್ಟಿಗೆ ಕಾರಣವಾಗುತ್ತದೆ. ಆದರೆ ಕೊನೆಗೆ ಕರಣಾಂತರಗಳಿಂದ ಶ್ರೀನಿವಾಸ ಗೌಡ ತನಗಿಂತ ಕೆಳಜಾತಿಯವಳಾದ ಮಾದಿಗರ ಮೀರಳನ್ನು ಕಾಮಿಸಿ, ಅದನ್ನೇ ಪ್ರೇಮವೆಂದು ಮೀರಳನ್ನೂ ಸ್ವತಃ ತನ್ನನ್ನೂ ವಂಚಿಸಿಕೊಂಡು, ಅಂತಿಮವಾಗಿ ಅವಳನ್ನೂ ತೊರೆಯುತ್ತಾನೆ. ಅದಕ್ಕೂ ಕಾರಣ ತನಗಿಂತ ಅಲ್ಪ ಜಾತಿಯವಳನ್ನು ವರಿಸಿ ಪಾಪ ಕಟ್ಟಿಕೊಳ್ಳುವ ಭಯದಿಂದಾಗಿ! ಮೇಲೇರಲೂ ಬಿಡದ, ಕೆಳಗಿಳಿಯಲೂ ಆಗದ ಒಂದು ಮಾನಸಿಕ ಅಸ್ಥಿರವನ್ನು ಅಂದಿನ ಜನರು ಮಾತ್ರವಲ್ಲ ಇಂದಿನವರೂ ಅನುಭವಿಸುತ್ತಿದ್ದಾರೆ ಎಂದೆನಿಸುತ್ತದೆ. ಕಾದಂಬರಿಯಲ್ಲಿ ಬರುವ ಇನ್ನಿತರ ಪಾತ್ರಗಳಾದ ವೆಂಕಟೇಶ, ಮೇಲಗಿರಿ ಗೌಡ, ದೊಡ್ಡ ಗೌಡ್ರು, ಹಳ್ಳಿಯ ಜನರು, ಮೋಹನದಾಸ, ಬೆಟ್ಟಯ್ಯ-ಇವರೆಲ್ಲಾ ನಮ್ಮ ಅಕ್ಕ ಪಕ್ಕದ ಮನುಷ್ಯರಲ್ಲೇ ಹಲವರನ್ನು ಹೋಲುವಂತಿದ್ದಾರೆ ಎಂದರೆ ತಪ್ಪಾಗದು.
ಕಾದಂಬರಿಯ ಪೂರ್ವಾರ್ಧವನ್ನು ಓದುತ್ತಿರುವಾಗ ಒಂದು ದೊಡ್ಡ ಸಂದೇಹ ಓದುಗನ್ನು ಕಾಡತೊಡಗುತ್ತದೆ. ಕೇವಲ ಈ ಜಾತೀಯತೆಯನ್ನು ಹೋಗಲಾಡಿಸಲು ಮದುವೆಯೆಂಬ ಸಂಪ್ರದಾಯವನ್ನು ಬಳಸುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು. ಪ್ರೀತಿ, ಸ್ನೇಹ, ವಿಶ್ವಾಸ ಹಾಗೂ ಸಮಾನತೆಯ ಭಾವಗಳಿಂದ ಬೆಸೆಯಲ್ಪಟ್ಟಿರುವ ಮದುವೆಯೆಂಬ ಬಂಧನಕ್ಕೆ ಯಾವ ಜಾತೀಯತೆಯೂ ತಡೆಯಾಗದು. ಆದರೆ ಕನಿಷ್ಟ ವಿಶ್ವಾಸವೂ ಇಲ್ಲದ ಮದುವೆಯಲ್ಲಿ ಏನು ಸುಖ ತಾನೇ ಸಿಕ್ಕೀತಿ? ಯಾವ ಸಾಧನೆ ಲಭಿಸೀತು? ಕೇವಲ ಯಾವುದೋ ಒಂದು ಆವೇಶದಿಂದ ವಿರುದ್ಧ ಜಾತಿಯವರೋ ಇಲ್ಲಾ ಒಂದು ಜಾತಿಯೊಳಗಿನ ಅಸಮಾನ ಪಂಗಡದವರೋ ಮದುವೆಯಾದ ತಕ್ಷಣ ಈ ಜಾತೀಯತೆಗೆ ಮೋಕ್ಷ ಸಿಗುವುದೇ? ಮದುವೆ ಎನ್ನುವ ಬಂಧನ ಮನಸಿಗೆ ಸಂಬಧಿಸಿದ್ದು. ಯಾವುದೋ ಆವೇಶ, ಆದರ್ಶಗಳ ಮೇಲೆ ಮಾತ್ರ ಇದರ ಬುನಾದಿ ನಿಂತಿಲ್ಲ. ಇದರೊಳಗೆ ಬೆಸೆದಿರುವ ಸುಂದರ, ಸೂಕ್ಷ್ಮ ಸಂವೇದನೆಗಳು, ಮೃದು ಭಾವನೆಗಳು ಮಾತ್ರ ಈ ಬಂಧವನ್ನು ಬಿಗಿಯಾಗಿಸಬಲ್ಲವು. ಜಾತಿ ಯಾವುದೇ ಆಗಿರಲಿ ಮನಃಸ್ಥಿತಿ ಸಮಾನವಾಗಿರಬೇಕು. ಆಚಾರ ವಿಚಾರದಲ್ಲಿ, ಅಭಿರುಚಿಗಳಲ್ಲಿ ತೀರಾ ವೈರುಧ್ಯವಿದ್ದರೆ ಒಂದೇ ಜಾತಿಯಾಗಿದ್ದರೂ ಮದುವೆ ನಿಲ್ಲದು. ಹಾಗಿರುವಾಗ, ಸಂಪ್ರದಾಯ, ವಿಚಾರ, ಆಚಾರ, ಊಟೋಪಚಾರ ಎಲ್ಲವೂ ತದ್ವಿರುದ್ಧವಾಗಿರುವ ಕಡೆ, ಕೇವಲ ಒಂದು ಆದರ್ಶವನ್ನು ಮೆರೆಸಲೋಸುಗ, ಸಮಾಜದ ಒಂದು ಕಟ್ಟಳೆಯನ್ನು ಮುರಿಯಲೋಸುಗ ಮದುವೆಯಂತಹ ಸೂಕ್ಷ್ಮ ಸಂಪ್ರದಾಯವನ್ನು ಬಳಸಿದರೆ ಅದು ಎಷ್ಟಕ್ಕೂ ನಿಲ್ಲದು ಎನ್ನುವ ಸತ್ಯವನ್ನು ಕಾದಂಬರಿಯ ಉತ್ತರಾರ್ಧದಲ್ಲಿ "ಸತ್ಯಳ" ಒಂದೆರಡು ದೊಡ್ಡ ತಪ್ಪು ನಿರ್ಣಯಗಳ ಮೂಲಕ ಸ್ಪಷ್ಟವಾಗಿ ಕಾಣಿಸಿದ್ದಾರೆ ಬೈರಪ್ಪನವರು.
ಆದರೆ "ದಾಟುವಿನಲ್ಲಿ" ಕೆಲವೊಂದು ವಿಷಯಗಳ ಬಗ್ಗೆ ನನಗೆ ಇನ್ನೂ ಸಂದೇಹವಿದೆ. ಕಾದಂಬರಿಯ ಉತ್ತರಾರ್ಧದವಿಡೀ ತುಂಬಿರುವ ಹೋಮ ಹವನಗಳ ಸಂಕೇತವೇನು? ವೆಂಕಟರಮಣಯ್ಯನವರು ಸತ್ಯಳಿಗೇಕೆ ಜನಿವಾರವನ್ನು ಹಾಕಿದರು? ಜಾತೀಯತೆಯನ್ನು ಮೆಟ್ಟಿಹಾಕುವ ಭರದಲ್ಲಿ ಸ್ಥಿತಃಪ್ರಜ್ಞಳಂತಿದ್ದ ಸತ್ಯಳೇಕೆ ಅಷ್ಟೊಂದು ತಪ್ಪು ನಿರ್ಣಯಗಳನ್ನು ಕೈಗೊಂಡಳು? ಕೊನೆಯದಾಗಿ ಮಾದಿಗಳಾದ ಮೀರಳೇಕೆ ತನಗೆ ಸತ್ಯ ಹಾಕಿದ್ದ ಯಜ್ಞೋಪವೀತವನ್ನು ತೆಗೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳು? ಎಲ್ಲಕ್ಕಿಂತ ಕಾಡಿದ ಪ್ರಶ್ನೆ ಎಂದರೆ ಅಪ್ಪ ತನಗೆ ಹಾಕಿದ್ದ ಜನಿವಾರವನ್ನು ಬಹು ಅಕ್ಕರಾಸ್ಥೆಯಿಂದ ಕಾಪಾಡಿಕೊಂಡು ಬಂದ ಸತ್ಯಳೇಕೆ ಕಾದಂಬರಿಯ ಕೊನೆಯಲ್ಲಿ ತೆಗೆದು ಎಸೆದಳು?- ಈ ಪ್ರಶ್ನೆಗಳಿಗೆ, ಈ ಕಾದಂಬರಿಯನ್ನು ಮೊದಲೇ ಓದಿದ ಸಹಮಾನಸಿಗರು ಸೂಕ್ತ ಉತ್ತರಗಳನ್ನು ಕಂಡುಕೊಂಡಿದ್ದರೆ, ನನಗೂ ತಿಳಿಸಬೇಕಾಗಿ ವಿನಂತಿ.
ಕೊನೆಯದಾಗಿ : "ದಾಟುವನ್ನು" ಓದಿ ಮುಗಿಸಿದ ಮೇಲೆ ಇಂದಿಗೂ ನನ್ನ ಮನದಲ್ಲಿ ಮನೆಮಾಡಿರುವ, ನಿತ್ಯ ಸತ್ಯವಾಗಿರುವ ಸಂದೇಶವೆಂದರೆ ಸತ್ಯಳ ತಂದೆ ವೆಂಕಟರಮಣಯ್ಯನವರು ತಮ್ಮ ಅಯೋಮಯ ಮನಃಸ್ಥಿತಿಯಲ್ಲಾಡಿದ ಸ್ಪಷ್ಟ ಮಾತು-"ನೀರು ಶಾಂತವಾಗಿದ್ದರೆ ಬಿಂಬಗಳು. ಪ್ರಳಯಜಲದಲ್ಲಿ ಬಿಂಬವೂ ಇಲ್ಲ, ಬಿಂಬಿಯೂ ಇಲ್ಲ". ಈ ಒಂದು ಸುಂದರ ಹಾಗೂ ಅದ್ಭುತ ಮಾತನ್ನು ನಮ್ಮ ಮನಸಿಗೆ ಹೋಲಿಸಿದರೆ ಅಗಾಧ ಅರ್ಥವನ್ನು ಇದು ನೀಡುತ್ತದೆ. ಇಂತಹ ಜಲಪ್ರಳಯ ನಮ್ಮೆಲ್ಲರ ಮನದೊಳಗೂ ಆಗಬೇಕಿದೆ. ಆಗಲೇ ಹಲವಾರು ಕೊಳಕುಗಳು, ಪೈಶಾಚಿಕ ಆಲೋಚನೆಗಳು ತೊಳೆದುಹೋಗಿ ನಮ್ಮ ಮಾನಸ ಶುಭ್ರವಾಗಬಹುದು. ಸಮಾಜದೊಳಗಿನ ಪರಿಮಿತಿಗಳು, ಅವುಗಳ ಎಲ್ಲೆಯನ್ನು ಸರಿಯಾಗಿ ಅರಿಯದೇ ದಾಟಿದರಾಗುವ ಉತ್ತಮ/ಕೆಟ್ಟ ಪರಿಣಾಮಗಳನ್ನು ಅರಿಯಲು ಒಮ್ಮೆಯಾದರೂ ಭೈರಪ್ಪನವರ "ದಾಟುವನ್ನು" ದಾಟಿ ಬನ್ನಿ.
ಸೂಚನೆ: ಇವರ ಇನ್ನೊಂದು ಮನೋಜ್ಞ ಕಾದಂಬರಿಯಾದ "ಗ್ರಹಣ" ಕೂಡ ಓದಲೇ ಬೇಕಾದ ಪುಸ್ತಕ. ಇದು ನಮ್ಮೊಳಗಿನ ಡಾಂಭಿಕತೆ, ಅರ್ಥವಿಲ್ಲದ ಆಚರಣೆ, ಮೂಢನಂಬಿಕೆಗಳನ್ನು ಎತ್ತಿ ತೋರುವುದಲ್ಲದೇ, ಇವುಗಳನ್ನು ಕುರುಡಾಗಿ ನಂಬುವುದರಿಂದ ಉಂಟಾಗುವ ಸಾಮಾಜಿಕ ದುಷ್ಪರಿಣಾಮಗಳನ್ನು, ವಿಪ್ಲವಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ.
---***---
ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
32 ಕಾಮೆಂಟ್ಗಳು:
ಶ್ರೀಮತಿ ತೇಜಸ್ವಿನಿ ಯವರೆ ,
ಇಲ್ಲಿ ಯಙ್ಞೋಪವೀತ ಎಂಬುದು ಬಂಧನದ ಸಂಕೇತ ಎಂದು ನನ್ನ ವಿಚಾರ....ಮೀರಳಿಗೂ ಯಾವುದೇ ಕಟ್ಟುಪಾಡುಗಳ ಗೋಜಲು ಬೇಕಿರಲಿಲ್ಲ. ಉತ್ತಮ ಕುಲದವಳೆನಿಸಿಕೊಳ್ಳುವ ಬಂಧನಕ್ಕಿಂತ ಹೊಸ ಅಲೆಯಲ್ಲಿ ಕಟ್ಟುಪಾಡುಗಳಿಲ್ಲದ ಜೀವನವೇ ಲೇಸು ಎನ್ನುವ ಮನೋನಿರ್ಧಾರವದು. ವರ್ಣಾಶ್ರಮಗಳ ಮತ್ತು ಒಳಪಂಗಡಗಳ ಮೌಢ್ಯಗಳನ್ನು ತೋರಿಸುತ್ತಾ ಭೈರಪ್ಪನವರು ಕೊನೆಯಲ್ಲಿ ಪ್ರಳಯವನ್ನು ಉಂಟುಮಾಡಿ ಅವುಗಳನ್ನು ತೊಳೆದುಹಾಕಿ ಎಂದಿದ್ದಾರೆ...’ಸತ್ಯ’ ಜನಿವಾರವನ್ನು ಕಿತ್ತೆಸೆಯಲು ( ಅಪ್ಪ ಹಾಕಿದ ಆಲದಮರ ಎಂದು ನೇಣು ಹಾಕಿಕೊಳ್ಳುವುದು ಉಚಿತವೇ ?!) ಮೇಲಿನದ್ದೇ ಕಾರಣ ಎಂದು ನನ್ನ ಅನಿಸಿಕೆ......ಕಾದಂಬರಿಗೆ ಹಲವಾರು ಆಯಾಮಗಳಿರುವುದರಿಂದ ಸಂದೇಹಗಳು ಸಹಜ....ಧನ್ಯವಾದಗಳು.
ವಿಶ್ವಮಾನವನ ಕಲ್ಪನೆ ಸುಲಭದ್ದಲ್ಲ. ಅದಕ್ಕೆ ಬೇಕಾಗುವ ಮಾನಸಿಕ ದೃಢತೆ ಸಾಮಾನ್ಯರಿಗೆ ಸಾಧ್ಯವೇ? ಹೊರಪ್ರಪ೦ಚಗಳೊಡನೆಯ ಹೋರಾಟ ಒತ್ತಟ್ಟಿಗಿರಲಿ ಅ೦ತರಾತ್ಮದ ಹೋರಾಟವನ್ನೆದುರಿಸುವ ಅಸಮಾನ್ಯ ತುಮುಲ ಅಪಾರ. ಆ ತುಮುಲಗಳನ್ನು, ತನ್ನ ಅಪ್ತರೊಡನೆ ನಡುವೆ ನಡೆವ ದ್ವ೦ದ್ವಗಳನ್ನು ಹಾಗೂ ತನ್ನ ಸುತ್ತ ಮುತ್ತಲಿನ ಸಾಮಾಜಿಕ ಪರಿಸರದೊಡನೆ ನಡೆಸಬೇಕಾದ ಹೋರಾಟವನ್ನು "ದಾಟು"ವದು ಮತ್ತು ವಿಶ್ವಮಾನವನ ಪರಿಕಲ್ಪನೆಗೆ ನುಗ್ಗುವದು- ಭೈರಪ್ಪನವರ "ದಾಟು"ವಿನಲ್ಲಿ ಚರ್ವವಿತರ್ವವಾಗಿದೆ.
ಇದು ನನ್ನ ಬಾಲ್ಯದ ಮೆಚ್ಚಿನ ಕಾದ೦ಬರಿ ಹತ್ತು ಹಲವಾರು ಸಾರಿ ಓದಿ ನನ್ನ ಸ೦ಗ್ರಹಕ್ಕೇ ಖರೀದಿಯು ಆದ ಕಲಾಕೃತಿ.
ತಮ್ಮ ವಿಮರ್ಶೆ ಆಪ್ತವಾಗಿದೆ. ಭೈರಪ್ಪನವರ ಗ್ರಹಣ, ತಬ್ಬಲಿಯು ನೀನಾದೆ ಮಗನೆ, ಧರ್ಮಶ್ರೀ, ದೂರ ಸರಿದವರು, ವ೦ಶವೃಕ್ಷ ನನ್ನ ಮೆಚ್ಚಿನ ಕಾದ೦ಬರಿಗಳು. ತ೦ತು, ಹಾಗೂ ಸಾರ್ಥ ಅವರ ನಾ ಓದದ ಕಾದ೦ಬರಿಗಳು. "ಆವರಣ" ಇತ್ತೀಚಿನ ನನ್ನ ಓದು. ಆದರೇ "ಆವರಣ"ದ ಆ೦ತರ್ಯ ಒಪ್ಪಲಾಗುತ್ತಿಲ್ಲ ಹಾಗೇ೦ದು ಅದನ್ನು ತಿರಿಸ್ಕರಿಸಲು ಆಗುತ್ತಿಲ್ಲ- ಅವರ ಈ ಕೃತಿ ಓದುಗರನ್ನು ತೀವ್ರ ವಿಚಾರಕ್ಕೇಡೆ ಮಾಡಿ ಕವಲು ವಿಚಾರಗಳಲ್ಲಿ ನಿಲ್ಲಿಸಿಬಿಡುತ್ತದೆ. ಈ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯ ನಿರೀಕ್ಷಿಸುತ್ತಾ ಇರುವೆ.
ತೇಜಸ್ವಿನಿ ಹೆಗಡೆಯವರೇ ತಮಗೂ ಸ೦ಕ್ರಾತಿಯ ಶುಭಾಶಯಗಳು. ತಮ್ಮ ಬ್ಲೊಗ್-ನ ಮೂರನೇಯ ಹುಟ್ಟುಹಬ್ಬದ ಶುಭಾಶಯಗಳು.
ಮೊದಲನೆಯದಾಗಿ, ಬ್ಲಾಗಿನ ಹುಟ್ಟು ಹಬ್ಬಕ್ಕೆ ಶುಭಾಶಯ. ಬರೆಯೋ ದಾಹ ಹಿಂಗದಿರಲಿ.
ಎರಡನೆಯದಾಗಿ, ಸಂಕ್ರಾಂತಿಯ ಶುಭಾಶಯ. ಬೆಲ್ಲದಚ್ಚುಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಸಿಹಿ ತುಂಬಿರಲಿ.
ಮೂರನೆಯದಾಗಿ, 'ದಾಟು' ನನ್ನನ್ನು 'ಪ್ರಭಾವಿತ'ನನ್ನಾಗಿ ಮಾಡಿದ ಕಾದಂಬರಿಗಳಲ್ಲೊಂದು. ಅದು ನಾನು ಓದಿದ ಭೈರಪ್ಪನವರ ಮೂರನೇ ಕೃತಿಯಾಗಿತ್ತು. ಅದನ್ನು ಓದಿದ ಮೇಲೆ ಜಗತ್ತನ್ನು ನೋಡುವ ನನ್ನ ದೃಷ್ಟಿಕೋನ ಅಷ್ಟಿಷ್ಟಾದರೂ ಬದಲಾಯಿತು ಎಂಬುದು ಸತ್ಯ. ಜಾತೀಯತೆಯೆಂಬ ಪಿಡುಗಿನ ಬಗ್ಗೆ ನಾನು ಓದಿದ ಮತ್ತೊಂದು ಒಳ್ಳೆಯ ಕೃತಿ ಅನಂತಮೂರ್ತಿಯವರ 'ಭಾರತೀಪುರ'.
ನಾಲ್ಕನೆಯದಾಗಿ, ನಾನು 'ದಾಟು' ಓದಿ ಐದಾರು ವರ್ಷಗಳ ನಂತರದ ಈ ದಿನ ನಾನು ಎಲ್ಲಿದ್ದೇನೆ - ನನ್ನ ಸುತ್ತಲಿನ ಜನ ಹೇಗಿದ್ದಾರೆ - ಸಮಾಜ ಏನಾಗಿದೆ ಅಂತ ನೋಡಿಕೊಂಡಾಗ ಯಾಕೋ ನಿರಾಶೆಯಾಗುತ್ತದೆ. :(
ನಿಮಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ತೇಜಸ್ವಿನಿ ಮತ್ತು ಕುಟುಂಬದವರೆಲ್ಲರಿಗೂ `ಸಂಕ್ರಾಂತಿ ಹಬ್ಬ'ದ ಶುಭಾಶಯಗಳು.
ಮೇಡಂ, ದಾಟು ಕಾದಂಬರಿಯ ಕಿರುಪರಿಚಯ ಮಾಡಿಕೊಟ್ಟಿದ್ದೀರಿ. ನಾನು `ಆವರಣ' ಒಂದನ್ನು ಬಿಟ್ಟು ಬೇರೆ ಯಾವ ಕಾದಂಬರಿಯನ್ನೂ ಓದಿರುವುದಿಲ್ಲ. ಇದೀಗ ದಾಟುವನ್ನು ಓದಬೇಕೆನಿಸಿದೆ. ನಮ್ಮ ಗ್ರಂಥಾಲಯದಲ್ಲಿ ಈ ಕಾದಂಬರಿ ಇದೆ. ಓದುತ್ತೇನೆ.
ಇನ್ನು ಗ್ರಹಣ ಇದು ಚಲನಚಿತ್ರವಾಗಿರಬೇಕು ಎಂದು ನನ್ನ ಅನಿಸಿಕೆ. ನಾಗಾಭರಣ ಅವರು ನಿರ್ದೇಶಿಸಿದ್ದರು.
ಧನ್ಯವಾದಗಳು.
@ ಶ್ರೀಯುತ ಸುಬ್ರಹ್ಮಣ್ಯ ಅವರೆ,
ನಿಮ್ಮ ಅಭಿಪ್ರಾಯ, ಅನಿಸಿಕೆಗಳು ಒಂದು ರೀತಿಯಲ್ಲಿ ಒಪ್ಪಬಹುದಾದರೂ ಅಲ್ಲಿ ಮೀರಳ ಕೆಲವೊಂದು ವರ್ತನೆಗಳು ಮತ್ತೆ ಗೊಂದಲಕ್ಕೀಡು ಮಾಡುವಂತಿವೆ. ಮೀರಳಿಗೆ ಮದುವೆಯೆಂಬ ಸಂಪ್ರದಾಯದಲ್ಲಿ ವಿಶ್ವಾಸವಿತ್ತು. ಆ ಬಂಧನ ಬೇಕಿತ್ತು. ಶ್ರೀನಿವಾಸನಿಂದ ಮೋಸಹೋದ ಆಕೆ ನಿರಾಸೆಗೊಂಡು ಆತ್ಮಹತ್ಯೆ ಮಾಡಿಕೊಂಡಳು. ತಾನು ಕೀಳು ಜಾತಿಯವಳೆಂದು ತಿರಸ್ಕಾರ ಮಾಡಿ ಹೊರಹಾಕಿದ ಅವಮಾನ ಆಕೆಯ ಪ್ರಾಣ ತೆಗೆಯಿತು. ಹಾಗಿರುವಾಗ ಆಕೆಯೂ ನಮ್ಮಂತೇ ಮನುಷ್ಯಳೆಂದು ಗೌರವಿಸಿ ಸತ್ಯಹಾಕಿದ್ದ(ಮೊದಲೊಮ್ಮೆ ಹಾಗೆ ಹಾಕಿ ಕೊಳ್ಳಲು ಸ್ವತಃ ಮೀರಳೇ ಬಯಸಿದ್ದ) ಜನಿವಾರವನ್ನು ಅಂತಿಮದಲ್ಲಿ ತೆಗೆದಿಟ್ಟುದದರ ಸಂಕೇತ ಪೂರ್ತಿ ಸ್ಪಷ್ಟವೆನಿಸಲಿಲ್ಲ. ಇದು ನನ್ನ ವೈಯಕ್ತಿಕ ಅನಿಸಿಕೆ.
ಇನ್ನು ಸತ್ಯ. ವರ್ಣಾಶ್ರಮವನ್ನು ತಿರಸ್ಕರಿಸಲು ನಿರ್ಧರಿಸಿದ ಆಕೆಗೆ ಅಪ್ಪ ಜನಿವಾರ ಹಾಕಿದಾಗ ಅದನ್ನೊಂದು ಕ್ರಾಂತಿಯೆಂದು ಭ್ರಮಿಸಿ ಸಂಭ್ರಮ ಪಟ್ಟವಳು, ಆ ಒಂದು ಪ್ರಕ್ರಿಯೆಗೆ ತನ್ನದೇ ಭಾಷ್ಯ ಬರೆದು ಓದುಗರನ್ನೂ ಒಪ್ಪುವಂತೆ ಮಾಡಿದವಳು, ಕೊನೆಯಲ್ಲಿ ಜನಿವಾರವನ್ನೇ ಕಿತ್ತೆಸೆದು ಸಂಕೇತಿಸಿದ್ದೇನು? ಈ ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ಸರಿಪಡಿಸಲಾಗದೆಂಬ ನಿರಾಶಾವದವೇ? ಇಲ್ಲಾ ಹೊಸ ಪೀಳಿಗೆಯ ಅಭ್ಯುದಯವಾಯಿತೆಂಬ ಆಶಾವದದ ಸಂಕೇತವೇ? ಅಷ್ಟೊಂದು ಚಿಂತನಶೀಲಳಾಗಿದ್ದ ಆಕೆ ಯಾಕೆ ತನ್ನ ಮಾಜಿ ಪ್ರೇಮಿಯನ್ನು ಅಷ್ಟೊಂದು ತಪ್ಪು ದಾರಿಗೆ ಎಳೆದೊಯ್ದಳು? ಎಂಬುದು ಗೊತ್ತಾಗಲಿಲ್ಲ.
ಏನೇ ಅಂದರೂ ಕೊನೆಗೆ ನೀವೆಂದಂತೇ ಕಾದಂಬರಿಗೆ ಹಲವಾರು ಆಯಾಮಗಳಿರುವುದರಿಂದ ಅನೇಕ ಸಂದೇಹಗಳು ಸಹಜ :)
ತುಂಬಾ ಧನ್ಯವಾದಗಳು.
@ ಸೀತಾರಮ್ ಸರ್,
ನಿಜ "ಆವರಣ" ಬರದ ವ್ಯಕ್ತಿಯೇ "ಗ್ರಹಣ", "ಪರ್ವ", "ದಾಟು"ವಿನಂತಹ ಕಾದಂಬರಿಗಳನ್ನೂ ಬರೆದವರು ಎನ್ನುವುದನ್ನು ಕಲ್ಪಿಸಲೂ ಆಗದು!!! ನಾನೂ ಓದಿರುವೆ "ಆವರಣ". ಆದರೆ ಅದನ್ನು ವಿಮರ್ಶಿಸುವ ಮೊದಲು ನನ್ನ ನಾನು ವಿಮರ್ಶಿಸಿಕೊಳ್ಳಬೇಕು! ಖಂಡಿತ ಈ ಪುಸ್ತಕದ ಬಗ್ಗೆಯೂ ಮಾನಸದಲ್ಲಿ ಬರೆಯುವೆ.
ನಿಮ್ಮ ಶುಭಾಶಯಗಳಿಗೆ ತುಂಬಾ ಧನ್ಯವಾದಗಳು. ಅಂದಹಾಗೆ ಇದು ನನ್ನ ಬ್ಲಾಗ್ನ ಎರಡನೆಯ ಹುಟ್ಟು ಹಬ್ಬ. ಮೂರನೆಯ ವರುಷಕ್ಕೆ ಕಾಲಿಟ್ಟಿದೆ....:)
@ ಸುಶ್ರುತ,
ಶುಭಾಶಯಗಳಿಗೆ ಧನ್ಯವಾದಗಳು.
ನಮ್ಮಲ್ಲಿ ಕಾನೂನು ಹಾಗೂ ಸುಂದರ ವ್ಯವಸ್ಥೆಯ ಕಲ್ಪನೆ ಕೇವಲ ಪುಸ್ತಕಗಳಿಗೆ ಮಾತ್ರ ಮೀಸಲು ಅಷ್ಟೇ! ಇನ್ನು ಪ್ರಭಾವಿತನಾಗುವುದಕ್ಕೂ ಆ ಪ್ರಭಾವದಿಂದ ಬದಲಾವಣೆ ತರುವುದುಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಯಾವುದೇ ಉತ್ತಮ ಬದಲಾವಣೆ ಓರ್ವನಿಂದ ಅಸಾಧ್ಯ. ಆದರೆ ತುಸುವಾದರೂ ನಮ್ಮನ್ನು ನಾವು ಬದಲಾಯಿಸಿಕೊಂಡರೆ ಅಷ್ಟೇ ಸಾರ್ಥಕ್ಯ.
(ನಿನ್ನಿಂದ ನಾನು ಇನ್ನೂ ಹೆಚ್ಚಿನ ಪ್ರತಿಕ್ರಿಯೆ ನಿರೀಕ್ಷಿಸಿದ್ದೆ. ನನ್ನ ಸಂದೇಹಗಳಿಗೆ ಉತ್ತರಿಸುವವರಲ್ಲಿ ನೀನೂ ಓರ್ವನಾಗಬಹುದೆಂದೆಣಿಸಿದ್ದೆ...:-p )
@ ಚುಕ್ಕಿ ಚಿತ್ತಾರ,
ನಿಮಗೂ ಹಾರ್ದಿಕ ಶುಭಾಶಯಗಳು. ಸಾಧ್ಯವಾದರೆ "ದಾಟು"ವನ್ನೊಮ್ಮೆ ದಾಟಿ ಬನ್ನಿ. :) ಧನ್ಯವಾದಗಳು.
@ ಚಂದ್ರಶೇಖರ್ ಅವರೆ,
ನೀವು "ಆವರಣ"ವನ್ನೇ ಮೊದಲು ಓದಿದ್ದರೆ ಈಗ "ಪರ್ವ" "ಗ್ರಹಣ" ಹಾಗೂ "ದಾಟು"ವನ್ನೋದಿ. ಇವೆಲ್ಲವುಗಳನ್ನೂ ಬರೆದದ್ದು ಒಬ್ಬ ವ್ಯಕ್ತಿಯೇನಾ ಎಂದು ನೀವು ನಿಬ್ಬೆರಗಾಗದಿದ್ದರೆ ಹೇಳಿ!!
ತುಂಬಾ ಧನ್ಯವಾದಗಳು.
ತೇಜಸ್ವಿನಿಯವರೇ...
ನಿಮ್ಮ ಮಾನಸದ ಮೂರನೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.... ಹಾಗು ನಿಮಗೂ ಸಂಕ್ರಾಂತಿಯ ಎಳ್ಳು ಬೆಲ್ಲದ ಸಿಹಿ ಹಾರೈಕೆಗಳು.
ಭೈರಪ್ಪನವರ ಮೇರು ಕೃತಿಗಳಲ್ಲಿ ದಾಟು ಕೂಡ ಒಂದು. ಸ್ವಲ್ಪ ಮರೆತಂತಾಗಿದೆಯಾದರೂ... ನನ್ನಲ್ಲಿ ತುಂಬಾ ಗೊಂದಲವನ್ನು ಸೃಷ್ಟಿಸಿದ ಕಾದಂಬರಿ. ಹೆಣ್ಣು ಮಗಳಿಗೆ ಯಜ್ಞೋಪವೀತ ಧಾರಣೆ ಸರಿಯೇ ಎಂಬ ಜಿಜ್ಞಾಸೆಯೇ ಪರಿಹಾರವಾಗಿರುವುದಿಲ್ಲ, ಆಗಲೇ ಸತ್ಯ ಅದನ್ನು ಕಿತ್ತೆಸೆದು ಇನ್ನೊಂದು ಅಲೆ ಸೃಷ್ಟಿಸಿರುತ್ತಾಳೆ... ಒಟ್ಟಿನಲ್ಲಿ ಕೊನೆಗೂ ನನ್ನ ಅನುಮಾನಗಳು ಪರಿಹಾರವಾಗಲೇ ಇಲ್ಲ. ತುಂಬಾ ವರ್ಷಗಳಾಗಿವೆಯಾದ್ದರಿಂದ, ಈಗ ದಾಟುವಿನಲ್ಲಿ ನಿಮ್ಮ ಕಿರುನೋಟ ನೋಡಿ, ಮತ್ತೆ ಓದಬೇಕೆನ್ನಿಸಿದೆ.... ಧನ್ಯವಾದಗಳು...
ಶ್ಯಾಮಲ
ಪ್ರಿಯ ತೇಜೂ ,
ಮೊದಲಿಗೆ , ಮಾನಸಕ್ಕೆ ಹುಟ್ಟು ಹಬ್ಬದ ಶುಭಾಶಯಗಳು !!
೩ನೆಯ ವರ್ಷದ ಆರಂಭವನ್ನು ಅತ್ಯಂತ ಗಂಭೀರ ವಸ್ತುವನ್ನಾಯ್ದುಕೊಂಡು ಶುರು ಮಾಡಿರುವೆ. " ದಾಟು " ಓದಿ ಬಹಳ ವರ್ಷಗಳೇ ಕಳೆದಿವೆ. ಕೆಲ ವಿಷಯಗಳ ಬಗ್ಗೆ ಯೋಚಿಸುವಂತೆ ಮಾಡಿದ ಕಾದಂಬರಿ ಅದು.
ಇನ್ನು , ಕೇವಲ ಆದರ್ಶಕ್ಕೊಸ್ಕರ ಅಥವಾ , ಸಾಮಾಜಿಕ ಕ್ರಾಂತಿ ಮಾಡುತ್ತೇನೆ ಎಂಬ ಹುಂಬತನದಲ್ಲಿ ಬೇರೆ ಜಾತಿ- ಧರ್ಮದವರ ಜೊತೆ ಮದುವೆ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನುವ ನಿನ್ನ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ. ಅದಕ್ಕೆ ಮಾನಸಿಕ ಮಾನತೆ , ಪ್ರೀತಿ -ಪ್ರೇಮಗಳ ಅಗತ್ಯವಿದೆಯೇ ಹೊರತು ಬೇರೇನೂ ಬೇಕಿಲ್ಲ.
ಇನ್ನು ' ಸತ್ಯ' ಅದೆಷ್ಟೇ ಆತ್ಮಸಾಕ್ಷಿಗೆ ಬದ್ಧಳಾಗಿ ಬದುಕಿದರೂ ಅವಳ ಮನದಲ್ಲಿ ದ್ವಂದ್ವ ಇದ್ದಂತೆ ನನಗನಿಸುತದೆ. ಇದರಿಂದಾಗಿಯೇ , ಆಕೆ ತಪ್ಪು ನಿರ್ಣಯಗಳನ್ನು ತೆಗೆದು ಕೊಂಡಳೆ ?ಅದೇಕೋ ಕೆಲ ವಿಷಯಗಳು ಅಸ್ಪಷ್ಟವೆನಿಸಿಬಿಡುತ್ತವೆ .
ವಿಮರ್ಶೆ ಇಷ್ಟವಾಯಿತು. ನನಗೂ "ದಾಟು" ಓದುವ ಮನಸಾಗಿದೆ.
ನಿಮ್ಮ ಬ್ಲಾಗ್ ವಾರ್ಷಿಕೋತ್ಸವದ ಶುಭಾಶಯಗಳು...
ಸಂಕ್ರಾಂತಿ ಹಬ್ಬದ ಶುಭಾಶಯಗಳು...
ತೇಜಸ್ವಿನಿಯವರೇ, -ದಾಟು- ನಮ್ಮ ಕಾಲೇಜಿನ ಕಾದಂಬರಿ ಹುಚ್ಚಿನ ದಿನಗಳಲ್ಲಿ ಓದಿದ್ದು ಅಂದರೆ ೧೯೭೮-೭೯ ರಲ್ಲಿ. ಆ ಒಂದೆರಡು ವರ್ಷದಲ್ಲೇ ಅವರ ’ನಾಯಿ ನೆರಳೂ’ ಓದಿದ್ದು ನೆನಪು. ಎರಡೂ ವಿಭಿನ್ನ ಹಿನ್ನೆಲೆಯ ಪ್ರಸ್ತಾವನೆಗಳು. ದಾಟು ವಿನ ಮೇಲು-ಕೀಳಿನ ಮತ್ತು ಅತಂತ್ರ ಮನಸ್ಥಿಯನ್ನು ಬಿಂಬಿಸುವ ಪರಿಗೂ ಪ್ರಸ್ತುತ ಪರಿಸ್ಥಿತಿಗೂ ಹೆಚ್ಚೇನೂ ಅಂತರವಿರಲಾರದು, ಎಂದೇ ನನ್ನ ಭಾವನೆ. ನಿಮ್ಮ ವಿಶ್ಲೇಷಣೆಯನ್ನು ನೋಡಿ..ಮತ್ತೊಮ್ಮೆ ದಾಟಿ- ಬಂದರೆ ಉತ್ತಮ ಅನಿಸುತ್ತಿದೆ... ಆದ್ರೆ..ಮೊದಲು ಆಕರ್ಷಣೆ ಪ್ರಮುಖವಾಯ್ತು ಎನ್ನುವುದು ಶ್ರೀನಿವಾಸ ಗೌಡನ ವಿಷಯದಲ್ಲಿ ನಿಜವಾದಂತೆ ಅಲ್ಲವೇ..?ನಂತರವೇ ..ಮಾನಸಿಕ ಅತಂತ್ರತೆ..??!!
ಮಾನಸದ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಮಾನಸದೊಡತಿಗೆ...ಅಭಿನಂದನೆಗಳು..
ದಾಟು ಕಾದಂಬರಿಯನ್ನು ಓದಿ ಸುಮಾರು ವರ್ಷಗಳಾಗಿವೆ. ಆದ್ದರಿಂದ ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಆ ಕಾದಂಬರಿಯ ನೆಲೆಯಲ್ಲಿ ಉತ್ತರಿಸಲಾರೆ. ಆದರೆ ಭೈರಪ್ಪನವರ ಅನೇಕ ಕಾದಂಬರಿಗಳ ಮುಖ್ಯಪಾತ್ರಗಳು ಒಂದುರೀತಿಯ ಗೊಂದಲಗಳಿಂದ ದ್ವಂದ್ವಗಳಿಂದ ತೊಳಲುವುದನ್ನು ಕಾಣಬಹುದು.ಅದು ಲೌಕಿಕತೆ-ಆಧ್ಯಾತ್ಮ,ಸರಿ-ತಪ್ಪು , ನೈತಿಕ-ಅನೈತಿಕ ,ಮೌಡ್ಯ- ವೈಜ್ಞಾನಿಕ , ಮೇಲು-ಕೀಳು ಹೀಗೆ ವಿಷಯ ಯಾವುದೇ ಆಗಿರಬಹುದು. ಬಹುಶಃ ಇಂತಹ ಗೊಂದಲಗಳು ಎಲ್ಲರನ್ನೂ ಒಮ್ಮೆಯಾದ್ರೂ ಕಾಡಿರುತ್ತವೆ . ಅದರ ಅನಾವರಣವನ್ನೇ ಬೈರಪ್ಪನವರ ಪಾತ್ರಗಳಲ್ಲಿ ಕಾಣಬಹುದು.
ಸಂಕ್ರಾಂತಿಯ ಶುಭಾಶಯಗಳು.
ತೇಜಸ್ವಿನಿ ಯವರೇ,
ಮೊದಲಿಗೆ ಮಾನಸಕ್ಕೆ ಎರಡು ವರ್ಷ ತುಂಬಿದ್ದಕ್ಕೆ ಅಭಿನಂದನೆಗಳು
ನಿಮ್ಮಿಂದ ಹೆಚ್ಚು ಹೆಚ್ಚು ಲೇಖನಗಳು, ಕಥೆ, ಕವಿತೆಗಳೂ ಹೊರ ಹೊಮ್ಮಲಿ
ನಿಮ್ಮ ಹೊಸ ಮುಖ ಪುಟ ವಿನ್ಯಾಸ ತುಂಬಾ ಚೆನ್ನಾಗಿದೆ
ಇನ್ನು ಮೇರು ಕ್ರತಿಗಳ ಬಗೆಗೆ ತಿಳಿಸಿದ್ದಿರಿ, ನಾನು ಓದಿಲ್ಲ,
ನಿಮ್ಮ ಬರಹ ಓದಿದ ಮೇಲೆ ಖಂಡಿತ ಓದುತ್ತೇನೆ ಎಂಬ ವಿಶ್ವಾಸ ಮೂಡಿದೆ
ಸದಾ ಹೊಸ ಹೊಸ ವಿಚಾರಗಳ ಬಗೆಗೆ ತುಡಿಯುವ ನಿಮ್ಮ ಮಾನಸ ಕ್ಕೆ ಆತ್ಮೀಯ ಶುಭ ಹಾರೈಕೆ
ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
ತೇಜಸ್ವಿನಿ,
ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗು ಸಂಕ್ರಮಣದ ಶುಭಾಶಯಗಳು.
ದಾಟು ಕಾದಂಬರಿಯ ವಿಮರ್ಶೆಯನ್ನು ಚೆನ್ನಾಗಿ ಮಾಡಿರುವಿರಿ. ನೀವು
ಗಮನಿಸಿರುವಂತೆ, ಕಾದಂಬರಿಯಲ್ಲಿ ಅನೇಕ ಗೋಜಲುಗಳೂ ಇವೆ.
ಜಾತಿ ಪದ್ಧತಿ ವಿನಾಶಕ್ಕೆ ಅಂತರಜಾತೀಯ ವಿವಾಹವು ಉತ್ತರವಾಗಲಾರದು, ಕೇವಲ ಘೋಷಣೆ ಮಾತ್ರ ಆದೀತು ಎನ್ನುವ
ಕಾದಂಬರಿಯ ಧೋರಣೆ ಸರಿಯಾದದ್ದೇ.
ವರ್ಷಗಳ ಕೆಳಗೆ ದಾಟು ಓದಿದ್ದೆ. ಅವರ ಕಥೆಗಳು, ಪಾತ್ರಗಳು ಸುಲಭವಾಗಿ ಮರೆತು ಹೋಗುವುದಿಲ್ಲ. ಬಿಡದಂತೆ ಕಾಡುತ್ತವೆ.
ನೀವು ಬರೆದದ್ದನ್ನು ಓದುತ್ತಿದ್ದರೆ ನಾನು ಭೈರಪ್ಪನವರನ್ನು ಓದುತ್ತಿದ್ದ ಸಮಯದಲ್ಲಿ ಉಂಟಾದ ಗೊಂದಲ, ಸಂದೇಹಗಳೆಲ್ಲಾ ನೆನಪಾದವು. ಇದೊಂದೇ ಅಲ್ಲ, ಅವರ ಇತರೆ ಕೃತಿಗಳನ್ನು ಓದಿದರೂ ಈ ರೀತಿಯ ಪ್ರಶ್ನೆಗಳು ಮೂಡುತ್ತವೆ.
ಏನೋ ಗೊಂದಲ, ತಳಮಳ, ತರ್ಕ, ಸಿದ್ಧಾಂತ .. ಭೈರಪ್ಪನವರು ಸೃಷ್ಟಿಸುವ ಬಹುತೇಕ ಪಾತ್ರಗಳಲ್ಲಿ ಕಾಣಬಹುದು. ಕೆಲವೊಮ್ಮೆ, ಅವರು ಪಾತ್ರವೊಂದನ್ನು ಅದರ ಪಾಡಿಗೆ ಬಿಟ್ಟು, ಅದು ನಡೆದಂತೆಯೇ ನಡೆಸುತ್ತಾರೋ ಇಲ್ಲವೇ ತಾವು ಹೇಳಬಯಸಿದ್ದನ್ನು ಅವುಗಳ ಮೂಲಕ ಹೇಳಿಸುತ್ತಾರೋ ತಿಳಿಯದಂತೆ ಮಾಡಿಬಿಡುತ್ತಾರೆ. ನಿಜವಾದ ಕಾದಂಬರಿಕಾರನ ಕೌಶಲ್ಯ ಅದು.
ದಾಟು ಓದಿದ ನಂತರ ನೀವು ಕೇಳಿದಂತೆಯೇ ನಾನೂ ಕೆಲವರನ್ನು ಪ್ರಶ್ನೆ ಕೇಳಿದ್ದೆ. ಎಲ್ಲೂ ಸಮಾಧಾನವಾಗುವಂತಹ ಉತ್ತರ ಸಿಕ್ಕಿರಲಿಲ್ಲ. ನನಗೆ ತಿಳಿದ ಮಟ್ಟಿಗೆ ನಾನೇ ಅರ್ಥೈಸಿಕೊಂಡು ಸುಮ್ಮನಾಗಿದ್ದೆ. ಅದೆಲ್ಲಾ ಮತ್ತೆ ನೆನಪಾಯಿತು.
ಸಂಕ್ರಾಂತಿಯ ಶುಭಾಶಯಗಳು.
ಎರಡು ವರ್ಷ ಬ್ಲಾಗ್ ಲೋಕದಲ್ಲಿ ಪೂರೈಸಿದ್ದಕ್ಕೆ ಅಭಿನಂದನೆಗಳು.
ತೇಜಸ್ವಿನಿಮೇಡಂ ಎಳ್ಳು ಬೆಲ್ಲ ತಗೊಂಡು ಒಳ್ಳೆ ಒಳ್ಳೆ ಮಾತಾಡೋಣ
"ಮಾನಸ" ಕ್ಕೆ ಹುಟ್ಟು ಹಬ್ಬದ ಶುಭಾಷಯಗಳು...!
ಇನ್ನು ದಾಟು ಈ ಕಾದಂಬರಿ ನಾ ಓದಿದ್ದೆ ನೀವು ಎತ್ತಿದ ಪ್ರಶ್ನೆ ನನಗೂ ಕಾಡಿದ್ದವು, ಹಾಗೆ ನೋಡಿದ್ರೆ ಭೈರಪ್ಪ ಅವರ ಯಾವುದೇ ಕಾದಂಬರಿ ಅಥವಾ ಅವರ ನಿಲುವುಗಳು ಪೂರ್ತ
ಒಪ್ಪಿಕೊಳ್ಳೋಣ ಅಂತ ಅನಿಸಿಯೇ ಇಲ್ಲ ಪ್ರಶ್ನೆ ಏಳುತ್ತವೆ ಉತ್ತರ ಸಿಗಲಾರದೇ ಒದ್ದಾಡಿದ್ದು ಇದೆ.
ಅವರ ಮತದಾನ ಹಾಗೂ ಗ್ರಹಣ ಹಾಗೂ ಇತ್ತೀಚಿನ ಆವರಣ ಇದ್ದುದರಲ್ಲಿ ಪ್ರಶ್ನೆ ಕಮ್ಮಿ ಕೇಳಿವೆ....!
ತೇಜಸ್ವಿನಿ ಮೇಡಂ,
ನಾನು ಕಾದಂಬರಿಗಳನ್ನು ಓದೋದು ತುಂಬಾ ಕಡಿಮೆ... ಆದರೆ ಯಾರಾದರು ವಿಮರ್ಶೆ ಬರೆದರೆ ಖಂಡಿತ ಅದನ್ನು ಓದಿ, ನಂತರ ಕಾದಂಬರಿ ಓದಲು ಪ್ರಯತ್ನಿಸುತ್ತೇನೆ.... '' ದಾಟು'' ಬಗ್ಗೆ ತುಂಬಾ ಕೇಳಿದ್ದೆ..... ಓದಲು ಆಗಿರಲಿಲ್ಲ..... ನಿಮ್ಮ ವಿಮರ್ಶೆ ಓದಿ..... ಓದಲೇ ಬೇಕು ಎನಿಸಿದೆ..... ಧನ್ಯವಾದ.....
ನಾನು 'ದಾಟು ' ಕಾದಂಬರಿಯನ್ನ ಓದಿಲ್ಲ .ಸೊ ಆ ಬಗ್ಗೆ ನನ್ನದೇನೂ ಅಭಿಪ್ರಾಯಗಳಿಲ್ಲ.ಆದರೆ ಖಂಡಿತ ಓದುತ್ತೇನೆ.ಓದುವ ಮನಸ್ಸಾಗಿದೆ.ಮತ್ತೆ ನಿಮಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿಯ ಶುಭಾಶಯ .ಕೊನೆಯದಾಗಿ ಮತ್ತೊಂದು ಶುಭಾಶಯ ನಿಮ್ಮ್ಮ ಬ್ಲಾಗ್ ಗೆ:)
hi tejaswini i read all ur poems n blog also m fully intersted to write poems n u advised me like i have to read poem books so i started to read now a days.i need ur help to improve my writing habit.keep reading my poems n suggest me always.n tell to ur blog members to read my poems so on d comment i wil improve. felt so happy to see u that u completed 2 years really amazing. thank you for giving some knowledge to me n reply also.
ವ್ಹಾವ್! ಮೂರನೇ ವರ್ಷ ಮಾನಸಂಗೆ..
ಸಂಕ್ರಾಂತಿ ಹಬ್ಬದ ಶುಭಾಶಯಗಳು ಕೂಡ :)
ನಿಮ್ಮ ಬರಹ ಇನ್ನೊಮ್ಮೆ ದಾಟುವನ್ನು ಓದಲು ಪ್ರೇರೇಪಿಸಿದೆ. ಬ್ಲಾಗಿನ ಹುಟ್ಟು ಹಬ್ಬಕ್ಕೆ ಶುಭಾಶಯಗಳು.
ನಿಮ್ಮ ಬ್ಲಾಗು ಮೂರೂ ವರ್ಷ ಪೂರೈಸಿರುವ ಸ೦ದರ್ಭದಲ್ಲಿ ಶುಭ ಹಾರೈಕೆಗಳು, ನಿಮ್ಮ ಅಕ್ಷರಪ್ರೀತಿ ನಿಮ್ಮ ಬ್ಲಾಗಿನ ಮೂಲಕ ಹೀಗೆಯೇ ನಿರ೦ತರ ಮು೦ದುವರಿಯಲಿ. ಅ೦ತೆಯೇ ಭೈರಪ್ಪ ನವರ "ದಾಟು" ಬಗ್ಗೆ ಸ೦ಕ್ಷಿಪ್ತ ಅಭಿಪ್ರಾಯ ವ್ಯಕ್ತ ಪಡಿಸಿದ್ದೀರಿ. ಹೌದು, ನಾನು ಅವರ ಬಹುತೇಕ ಕಾದ೦ಬರಿಗಳನ್ನು ಓದಿದ್ದೇನೆ. ಅವರ ಆವರಣ ಓದಿದ ನ೦ತರ, ಉಳಿದದ್ದೆಲ್ಲ ಬರೆದದ್ದು ಇವರೇನಾ ಅನ್ನುವ ಅಭಿಪ್ರಾಯ ಬ೦ದಿದ್ದೂ ನಿಜ. ಪುಸ್ತಕಗಳ ಓದಿನತ್ತ ಎಲ್ಲರನ್ನು ಸೆಳೆಯುವ ನಿಮ್ಮ ಯತ್ನ ಶ್ಲಾಘನೀಯ, ನಿಮ್ಮ ಶಿಫಾರಸ್ಸಿನ ನ೦ತರ ನಾನು ಯಾದ್ ವಶೇಮ್ ಓದಿದೆ.ಚೆನ್ನಾಗಿದೆ.
ತೇಜಸ್ವಿನಿ,
ನಿಮ್ಮ ಮಾನಸ ವಾರ್ಷಿಕೋತ್ಸವಕ್ಕಾಗಿ ಶುಭಾಶಯಗಳು...
ಎಲ್ಲ ಎಲ್ಲೆಗಳನ್ನು ದಾಟಿ ನೋಡುವ ಹಾಗೆ ಇದೆ "ದಾಟು"
ನನಗೂ ಈಗ "ದಾಟು" ಓದುವ ಮನಸಾಗಿದೆ......
ಚೆನ್ನಾಗಿತ್ತು ನಿಮ್ಮ ಬರಹ...
@ಶ್ಯಾಮಲಾ ಅವರೆ,
"ದಾಟು" ಕಾದಂಬರಿಯಂತಹವು ಓದಿದಷ್ಟೂ ನಮ್ಮನ್ನು ಚಿಂತನೆಗೆ ಸಂದೇಹಗಳಿಗೆ ಎಡೆಮಾಡುತ್ತವೆ. ಎಷ್ಟು ಬಾರಿ ಓದಿದರೂ ಉತ್ತರ ಸಿಗುವುದೇ ಇಲ್ಲ. ಅದಕ್ಕೆಂದೇ ನಾನು ಇಲ್ಲಿ ಸಂದೇಹಗಳನ್ನು ಹೇಳಿದ್ದು. ಚರ್ಚೆಗಳ ಮೂಲಕವಾದರೂ ಪರಿಹಾರ ಸಿಗಬಹೋ ಎಂಬ ದೂರದಾಸೆಯಿಂದ :) ಖಂಡಿತ ಮತ್ತೊಮ್ಮೆ ಓದಿ. ನಿಮಗೆ ಉತ್ತರ ಸಿಕ್ಕರೆ ನಮಗೂ ತಿಳಿಸಿ.
ತುಂಬಾ ಧನ್ಯವಾದಗಳು.
@ಚಿತ್ರಕ್ಕ,
ನಿಜ ಸತ್ಯಳಲ್ಲಿ ಅನೇಕ ರೀತಿಯ ದ್ವಂದ್ವಗಳಿದ್ದವು. ಆದರೆ ಕೊನೆಕೊನೆಗೆ ಆಕೆ ಸ್ವಲ್ಪ ಸಮತೋಲನ ಹೊಂದಿದವಳಂತೆ ಭಾಸವಾಯಿತು. ಆದರೆ ಇದ್ದಕ್ಕಿದ್ದಂತೆ ಅವಳು ಶ್ರೀನಿವಾಸನನ್ನು ಮೀರಳನ್ನು ಮದುವೆಯಾಗಲು ಹೇಳಿದಾಗ ಮಾತ್ರ ಅವಳು ಮತ್ತೂ ಗೋಜಲಾದಳು. ಬಹುಶಃ ಎಲ್ಲೋ ಇರುವ ಮೇಲುಗಾರಿಕೆಯ ಅಹಂ ಅವಳಿಂದ ಆ ಮಾತು ಆಡಿಸಿರಬೇಕು.
ಪ್ರತಿಕ್ರಿಯೆಗೆ, ಶುಭಾಶಯಕ್ಕೆ ಧನ್ಯವಾದಗಳು.
@ಶಿವಪ್ರಕಾಶ್,
ಈ ಅಂಕಣದ ಮೂಲೋದ್ದೇಶವೇ ಓದಲು, ಓದಿಸಲು ಪ್ರೇರೇಪಿಸುವುದು. ತಪ್ಪದೇ ಓದಿ. ಓದಿದ್ದನ್ನು ಹಂಚಿಕೊಳ್ಳಿ.
ಧನ್ಯವಾದಗಳು.
@ಜಲನಯನ,
ಅತಂತ್ರತೆ ಮನುಷ್ಯನೊಂದಿಗೇ ಬಂದಿರುತ್ತದೆ. ಆದರೆ ಅದು ಒಂದು ಮಿತಿ ಮೀರಿದರೆ ಹುಚ್ಚು ಹಿಡಿದ ಕುದುರೆಯಂತಾಗುವುದು ಎನ್ನುವುದನ್ನು ಶ್ರೀನಿವಾಸನ ಪಾತ್ರವನ್ನು ನೋಡಿದರೆ ಬಹು ಚೆನ್ನಾಗಿ ಅರ್ಥವಾಗುವುದು. ಪ್ರೇತಿಗೂ ಆಕರ್ಷಣೆಗೂ, ಮೋಹಕ್ಕೂ ಕಾಮಕ್ಕೂ ಅಂತರ ತಿಳಿಯದವರು ಯಾವ ರೀತಿ ಎಡವುತ್ತಾರೆಂದು ಸ್ಪಷ್ಟವಾಗಿದೆ ಅಲ್ಲಿ.
ತುಂಬಾ ಧನ್ಯವಾದಗಳು.
@ಸುಮ,
ನಿಜ ಇಂತಹ ಅನೇಕ ಗೊಂದಲಗಳನ್ನು ಅವರ ಹೆಚ್ಚಿನ ಕಾದಂಬರಿಗಳಲ್ಲಿ ಕಾಣಬಹುದು. ಆದರೆ ಇದು ಹೀಗೇ.. ಹೀಗೇ ಆಗಿತ್ತು. ಇದೇ ಸತ್ಯ ಎಂದು ಅವರು ಒತ್ತಿ ಹೇಳಿದ್ದು ಮಾತ್ರ "ಆವರಣ" ಕಾದಂಬರಿಯಲ್ಲೇ ಆಗಿರಬೇಕು. ಅದು ಮಾತ್ರ ಭೈರಪ್ಪನವರ ಹೊಸ ಪರಿಚಯವನ್ನೇ ಮಾಡಿಸುತ್ತದೆ ನಮಗೆ. ಓದಿರುವಿರಾ?
ಶುಭಾಶಯಗಳಿಗೆ ಧನ್ಯವಾದಗಳು.
@ಮೂರ್ತಿಯವರೆ,
ಖಂಡಿತ ಓದಿ. ನಿಮಗೂ ಇಷ್ಟವಾಗುವುದು. ನನ್ನ ಸಂದೇಹಗಳಿಗೆ ನಿಮ್ಮಿಂದಲಾದರೂ ಉತ್ತರ ಬಂದರೆ ಬಹು ಸಂತೋಷ.
ಆತ್ಮೀಯತೆಗೆ ಬಹು ಧನ್ಯವಾದಗಳು.
@ಕಾಕಾ,
ನೂರು ಶೇಕಡ ಸತ್ಯ. ಜಾತೀಯತೆ ನಿವಾರಣೆಗೆ ಅಂತರ್ಜಾತೀಯ ವಿವಾಹವೇ ಪರಿಹಾರವಲ್ಲ. ನನ್ನ ಸಂದೇಹಗಳಿಗೆ ನಿಮ್ಮಿಂದ ಪರಿಹಾರ ನಿರೀಕ್ಷಿಸುತ್ತಿರುವೆ :)
ತುಂಬಾ ಧನ್ಯವಾದ.
@ಆನಂದ್ ಅವರೆ,
ನಾನೂ ನನಗೆ ತಿದಂತೇ ಅರ್ಥೈಸಿಕೊಂಡಿರುವೆ. ಆದರೆ ಅದು ಎಷ್ಟರಮಟ್ಟಿಗೆ ಸರಿ ಎಂದೇ ಸಂದೇಹ. ಅದಕ್ಕೆ ಚರ್ಚೆಗೆ ಎಳೆಸುತ್ತಿರುವೆ. ನೀವಂದದ್ದು ನಿಜ. ಇದು ಭೈರಪ್ಪನವ ಕೌಶಲ್ಯವೇ ಸರಿ.
ತುಂಬಾ ಧನ್ಯವಾದಗಳು.
@ಉಮೇಶ್ ಅವರೆ,
ಮತದಾನ ಓದಿಲ್ಲ. ಆದರೆ ಗ್ರಹಣ ಇದ್ದುದರಲ್ಲಿ ಸ್ಪಷ್ಟವಾಗಿದೆ. ಆದೇ ಆವರಣ ಓದಿ ದಾಟುವನ್ನೋ ಇಲ್ಲ ಪರ್ವವನ್ನೋ ಓದಿದರೆ ಎಲ್ಲಾ ಗೋಜಲು ಅಯೋಮಯ!
ಧನ್ಯವಾದಗಳು.
@ಗೌತಮ್ ಹಾಗೂ ದಿನಕರ ಅವರೆ,
ನನ್ನ ಉದ್ದೇಶವೂ ಅದೇ ಆಗಿದೆ. ಓದಿ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಹಂಚಿಕೊಳ್ಳಿ.
ಶುಭಕಾಮನೆಗಳಿಗೆ ತುಂಬಾ ಧನ್ಯವಾದಗಳು.
@ಕೀರ್ತಿ,
ಬರವಣಿಗೆಯ ಪ್ರತಿ ನಿಮಗಿರುವ ಉತ್ಸಾಹ ಹೀಗೇ ಇರಲಿ. ಹೆಚ್ಚು ಓದಿದಂತೇ ನಮ್ಮ ಶಬ್ದ ಬಂಢಾರ ಬೆಳೆವುದು. ಓದುವುದನ್ನು/ಬರೆಯುವುದನ್ನು ಬಿಡದಿರಿ. ಶುಭವಾಗಲಿ.
ಧನ್ಯವಾದಗಳು.
@ಪ್ರಮೋದ್ ಹಾಗೂ ಉಮಾ ಅವರೆ,
ನಿಮಗೂ (ತಡವಾಗಿ) ಹಾರ್ದಿಕ ಶುಭಾಶಯಗಳು. ಧನ್ಯವಾದಗಳು.
@ಪರಾಂಜಪೆಯವರೆ ಹಾಗೂ ಸವಿಗನಸು,
ನಿಮ್ಮೆಲ್ಲರ ಪ್ರೋತ್ಸಾಹವೇ ಮಾನಸದ ಬೆಳವಣಿಗೆಗೆ ಕಾರಣ. ಸಹಮಾನಸಿಗರಿಲ್ಲದೇ ಮಾನಸ ಓಡದು. :)
ತುಂಬಾ ಧನ್ಯವಾದಗಳು.
-----
ಈ ಕಾದಂಬರಿಯೊಳಗಿನ ನನ್ನ ಸಂದೇಹಗಳಿಗೆ ಸೂಕ್ತ ಉತ್ತರ ತಿಳಿದವರು ದಯವಿಟ್ಟು ಪ್ರತಿಕ್ರಿಯಿಸಬೇಕಾಗಿ ವಿನಂತಿ. ಇದರಿಂದ ಅನೇಕರ ಸಂದೇಹಗಳೂ ಪರಿಹಾರವಾಗುವುವು.
ಓದಿ, ಮೆಚ್ಚಿ, ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.
ತೇಜು ಅಕ್ಕ,
ಶುಭಾಶಯಗಳು :)
೨ ವರ್ಷಗಳು ಕಳೆದದ್ದು ಗೊತ್ತೇ ಆಗಲಿಲ್ಲ. ನಿಮ್ಮ ಬ್ಲಾಗಿಗೆ ೨ ವರ್ಷ ತುಂಬಿದ ಹಾಗೆ ನಮ್ಮ ಸ್ನೇಹಕ್ಕೂ ೨ ವರ್ಷಗಳು :)
ಮತ್ತಷ್ಟು ಉತ್ತಮವಾದ ಕವನಗಳು, ಕಥೆಗಳು ಬರಲಿ.
ಬ್ಲಾಗಿನ ಹೊಸ "ಬಟ್ಟೆ" ತುಂಬಾ ಚೆನ್ನಾಗಿದೆ.
ಮೂರನೆ ವರ್ಷಕ್ಕೆ ಕಾಲಿಟ್ಟಿದ್ದಕ್ಕೆ ಅಭಿನಂದನೆಗಳು
ಮೂರನೇ ವರ್ಷಕ್ಕೆ ಕಾಲಿಟ್ಟ ಮಾನಸಕ್ಕೆ ಅಭಿನಂದನೆಗಳು..
ಭೈರಪ್ಪನವರ ಯಾವುದೇ ಕಾದಂಬರಿ ಓದಿದ ಮೇಲೆ ಇಂತಹ ಜಿಜ್ಞಾಸೆಗಳು ಸಹಜ. ಅದೇ ಅವರ ಪುಸ್ತಕಗಳ ವಿಶೇಷತೆ.
ದಾಟು ಕಾದಂಬರಿಯ ಬಗ್ಗೆ ನೀವು ಇಲ್ಲಿ ಕೇಳಿರುವ ಪ್ರಶ್ನೆಗಳು ಯೋಚನೆಗೆ ಹಚ್ಚುವಂತಿವೆ. ದಾಟು ಓದಿದ್ದರೂ ಕೂಡ ಉತ್ತರ ಹೇಳಲು ನನಗಂತೂ ತಿಳಿಯುತ್ತಿಲ್ಲ. ಬಲ್ಲವರ ಉತ್ತರಗಳನ್ನು ಓದುತ್ತಿದ್ದೇನೆ. thanks
ಮಾನಸದ ಹುಟ್ಟುಹಬ್ಬಕ್ಕೆ ತಡವಾಗಿ ಶುಭಾಷಯ ಕೋರುತ್ತೇನೆ ತೇಜಕ್ಕ.....
ನಾನು ದಾಟು ಓದಿಲ್ಲ.... ವಿಮರ್ಶೆ ಓದಿದ ಮೇಲೆ ಓದಲೇ ಬೇಕೆ೦ಬ ಮನಸಾಗಿದೆ....
ಹೋದಸಲ ಭೈರಪ್ಪನವರ "ಅ೦ಚು" ಓದ ಹೊರಟಿದ್ದೆ.. ತು೦ಬಾ ಬೋರಿ೦ಗ್ ಅನ್ನಿಸಿ ನಿಲ್ಲಿಸಿಬಿಟ್ಟಿದ್ದೆ...
ದಾಟುವಿನ ಬಗ್ಗೆ ತಮ್ಮ ಅನಿಸಿಕೆ ಓದಿ ಖುಷಿ ಆಯಿತು ಜೊತೆಗೆ ಕೆಲವು ಅನಿಸಿಕೆಗಳನ್ನು ವ್ಯಕ್ತಪಡಿಸುವ ಮನಸ್ಸೂ ಕೂಡ .
ಭೈರಪ್ಪನ್ನವರ ಯಾವುದೇ ಕಾದಂಬರಿ ಓದಿದಾಗ ಅವರು ಮಹತ್ತರವಾದ ಒಂದು ಬದಲಾವಣೆಯ ಕಾಲವನ್ನು ಚಿತ್ರಿಸುವ ಹಾಗೂ ಅದರ ಸಂಕೀರ್ಣತೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ತನ್ಮೂಲಕ ಸತ್ಯವನ್ನು ಹುಡುಕುವ ಅನ್ವೇಷಕ ಪ್ರವೃತ್ತಿ ಕಾಣಬಹುದು. ದಾಟು,ಪರ್ವ,ತಂತು, ನೆಲೆ ಯಾವುದೇ ಕಾದಂಬರಿಯಾದರೂ ಈ ಸಮಾನ ಅಂಶ ಕಂಡುಬರುತ್ತದೆ . ಜಾತಿ ಎನ್ನುವದನ್ನೂ ಒಂದು ಮೌಲ್ಯವಾಗಿ ತೆಗೆದುಕೊಂಡು ಅದನ್ನ ವಿಚಾರ ಮಟ್ಟದಿಂದ ವ್ಯವ್ಯಸ್ಥೆಯ ಮಟ್ಟದ ವರೆಗೆ ಎಳೆ ಎಳೆ ಯಾಗಿ ಬಿಡಿಸಿ ಅದರ ಒಳ ಹೊರಹನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಆದರ್ಶಗಳ ಹೊರೆ ಇಲ್ಲದೆ ಯಥಾವತ್ ಚಿತ್ರಿಸುತ್ತ , ಹೇಗೆ ಬದಲಾವಣೆಯ ಸಣ್ಣ ಹರಿವು ಪ್ರಬಲವಾಗುತ್ತಾ ಪ್ರಳಯಸ್ವರೂಪಿಯಾಗಿ ಎಲ್ಲವನ್ನೂ ನುಂಗಿ ಹಾಕತ್ತೆ ,ಒತ್ತಿ ಹಿಡಿದಷ್ಟೂ ಹತ್ತರಷ್ಟು ಬಲವಾಗಿ ಸಿಡಿದು ಬಡಿಯುವ ಸತ್ಯದ ಶಕ್ತಿ ,ಇವೆಲ್ಲವುದರ ವಿರಾಟ್ ದರ್ಶನ ದಾಟುವಲ್ಲಿ ಕಾಣಬಹುದು.
ಇನ್ನು ನಿಮ್ಮ ಲೇಖನದ ವಿಚಾರದಲ್ಲಿ ಹೇಳುವುದಾದರೆ , ಕೆಲವೆಡೆ ಸ್ವಲ್ಪ ಅಭಿಪ್ರಾಯ ಬೇಧವುಂಟು.
೧. ಸತ್ಯ ಮತ್ತು ಶ್ರೀನಿವಾಸ ಇಬ್ಬರ ಮಧ್ಯೆ ಮೂಡುವುದು ಸತ್ವಯುತವಾದ ಪ್ರೀತಿ. ಆ ಪ್ರೀತಿಯ ಸಾರ್ಥಕ್ಯ ಅನುಭವಿಸುವ ಹಂಬಲದ ಮುಂದುವರಿದ ಭಾಗ ಮದುವೆಯ ಸಹಜವಾದ ಬಯಕೆ. ಅದಕ್ಕೆ ಅಡ್ಡಿ ಬರುವ ವಿಷಯ , ಜಾತಿ. ಅದರಿಂದ ಸಮಾಜದ ವಿರೋಧ. ಜೀವಗಳ ಸಹಜ ಸ್ವಾತಂತ್ರ್ಯಕ್ಕೆ ಜಾತಿಯ ಅಡ್ಡಿ. ಅದನ್ನ ಸಹಜವಾಗಿಯೇ ವಿರೋಧಿಸಿವ ಸತ್ಯ ಮತ್ತು ಶ್ರೀನಿವಾಸ. ಸತ್ಯಳ ವಿರೋಧ ವೈಚಾರಿಕವದ್ದು ಎಂದಷ್ಟೇ ಹೇಳಿದರೆ ಪೂರ್ಣ ಸತ್ಯವಾಗುವುದಿಲ್ಲ. ಶ್ರೀನಿವಾಸನಿಗೆ ಸತ್ಯಳಷ್ಟು ವೈಚಾರಿಕ ಖಚಿತತೆ ಇಲ್ಲವಾದರೂ ಆತನೂ ಜಾತಿಯನ್ನು ವಿರೋಧಿಸಲಿಕ್ಕೊಸ್ಕರ ಪ್ರೀತಿ ಮಾಡಿದ್ದಲ್ಲ , ಬದಲು ಪ್ರೀತಿಯನ್ನು ದಕ್ಕಿಸಿಕೊಳ್ಳುವುದಕ್ಕೊಸ್ಕರ ಜಾತಿಯನ್ನು ವಿರೊಧಿಸಿದ್ದು. ಎರಡಕ್ಕೂ ಬಹಳ ವ್ಯತ್ಯಾಸವಿದೆ. ಯಾವುದೋ ಒಂದು ಆದರ್ಶವನ್ನು ಪ್ರಚುರಗೊಳಿಸಿ ಕ್ರಾಂತಿ ಸಾಧಿಸುವ ಬಯಕೆಯಿಂದ ಸತ್ಯ ಶ್ರೀನಿವಾಸರು ಮದುವೆಗೆ ಮುಂದಾಗಲಿಲ್ಲ . ಅದರ ಬದಲು, ತಮ್ಮ ಪ್ರೀತಿಗೆ ಅಡ್ಡಿ ಬರುತ್ತಿರುವ ಜಾತಿಯನ್ನ ಮೀರಿಲಿಕ್ಕೆ ತಾವು ನಂಬಿದ ಆದರ್ಶವನ್ನು ಮೊರೆ ಹೋದರು. ಪ್ರೀತಿ ಬಂಡಾಯದ ಸ್ವಭಾವ ಮೂಡಿಸುವುದು ಸಹಜ. ಬಂಡಾಯ ನಡೆಸುವ ಸಲುವಾಗಿ ಪ್ರೀತಿ ಮಾಡುವುದು ಅಸಹಜ. ಅದರ ಪ್ರಯತ್ನ ಕಾದಂಬರಿಯ ಪೂರ್ವಾರ್ಧದಲ್ಲಿ ಕಾಣುವುದೂ ಇಲ್ಲ.
೨. ಸತ್ಯಳ ತಂದೆ ಆಕೆಗೆ ಜನಿವಾರ ಹಾಕಿದ್ದೇಕೆ ಅನ್ನುವ ಪ್ರಶ್ನೆ ಮತ್ತು ತತ್ಸಂಬಂಧಿ ಉಪ ಪ್ರಶ್ನೆಗಳು ನನ್ನನ್ನೂ ಕಾಡಿವೆ.
ಸತ್ಯಳ ತಂದೆ ವಿಪರೀತ ಪ್ರವೃತ್ತಿಯುಳ್ಳವರಗಿದ್ದಾಗ ಸತ್ಯ ಆವರ ಗುಡಿಸಲಿಗೆ ಹೋದಾಗ ನಡೆಯುವ ಸೂಚ್ಯ ಸಂಭಾಷಣೆಯನ್ನ ನಾವು ಗಮನಿಸಿದರೆ ಸ್ವಲ್ಪ ಸುಳಿವು ಸಿಗಬಹುದೆನೊ. ಕಾದಂಬರಿಯ ಕಥಾ ಸಂದರ್ಭಕ್ಕೆ ತಕ್ಕಂತೆ ಅರ್ಥೈಸಿಕೊಂಡರೆ , ವೆಂಕಟರಮಣಯ್ಯ- ಮಾತಂಗಿಯ ಸಂಬಂಧವನ್ನು ಸ್ವಲ್ಪ ವಿವರಿಸಬೆಕಗುತ್ತದೆ. ವೆಂಕಟರಮಣಯ್ಯನವರು ಆಕೆಗೆ ದೇಹಾಸಕ್ತಿಯಿಂದ ಹತ್ತಿರವಾದರೂ ಕ್ರಮೇಣ ಅದು ಪ್ರೀತಿಗೆ ತಿರುಗಿ ಬಿಟ್ಟಿರಲಾರದ ಬಾಂಧವ್ಯಕ್ಕೆದೆ ಮಾಡಿಕೊಡುತ್ತದೆ . ಆದರೆ ಅವರಿಬ್ಬರ ಕಾಲದಲ್ಲಿ ಇಬ್ಬರಿಗೂ ಸಮಾಜಕ್ಕೆ ಎದುರು ನಿಂತು ಸಂಬಂಧವನ್ನ ಒಪ್ಪಿ ನಾಲ್ಕು ಜನವನ್ನ ಎದುರಿಸಿ ಬಾಳುವ ಧೈರ್ಯ ಶಕ್ತಿ ಇರುವುದೂ ಇಲ್ಲ . ಬಯಕೆ ಇಲ್ಲವೆಂದು ಅನ್ನಿಸುವುದಿಲ್ಲ. ( ಅದೇ ಸತ್ಯ- ಶ್ರೀನಿವಾಸರ ಕಾಲದಲ್ಲಿ ಆ ಬದಲಾವಣೆಯ ಬಯಕೆ ಹಾಗೂ ಎದುರಿಸುವ ಧೈರ್ಯದ ಪ್ರವೃತ್ತಿ ಹೆಚ್ಚು!).ಅವರಿಬ್ಬರ ಪ್ರೀತಿಗೊಂದು ಕುಡಿಯೂ ಮೋಡೂತ್ತದೆ. ವೆಂಕಟರಮಣಯ್ಯನವರ ಹುಚ್ಚು ಪ್ರವೃತ್ತಿಯ ಮಾತುಗಳಲ್ಲಿ ತಾವು ಎದುರಿಸಲು ಪ್ರಯತ್ನವೂ ಪಡದೆ ಅದನ್ನು ಕೊರಗುವ ಪ್ರವೃತ್ತಿ ಕಾಣಸಿಗುತ್ತದೆ. ಅವರ ಮತ್ತು ಮಾತಂಗಿಯ ಸಂಬಂಧ ವಸಿಷ್ಠ ಅರುಂಧತಿ ಅನ್ನುವ ಹಾಗೆ ಕಲ್ಪನೆಯಲ್ಲಿ ಕನವರಿಸುತ್ತ ಇರುವುದರ ಸೂಚ್ಯಾರ್ಥ ಬಹಳ ಮುಖ್ಯ. ಆಕೆಯನ್ನ ಸಮಾಜ ಒಪ್ಪಬೇಕೆಂದರೆ ಆಕೆಯೂ ಕೂಡ ಬ್ರಾಹ್ಮಿಣಿಯಗಬೆಕು. ಅವರಿಬ್ಬರ ಮಗನೂ ಸಹ.ಮನಸ್ಸಿನಲ್ಲಗುತ್ತಿರುವ ಏರಿಳಿತ, ಅದನ್ನ ಎದುರಿಸುವ ಬಂಡಾಯ ಸ್ವಭಾವ ಇವೆಲ್ಲವುಗಳ ಸಾಂಕೇತಿಕ ನಿರೂಪಣೆ ಹೋಮ ಹವನಾದಿಗಳ ಮೂಲಕ. ಸತ್ಯಳನ್ನು ತನ್ನ ಮಗನೆಂದು (ಮಾತಂಗಿಯ ಮಗ) ತಿಳಿದು ತೊಡೆಯ ಮೇಲೆ ಕುಳ್ಳಿರಿಸಿ ಯಜ್ಞೋಪವೀತ ಧಾರಣೆ ಮಾಡಿಸಿ ಅವನನ್ನು ಬ್ರಾಹ್ಮಣನನ್ನಾಗಿ ಮಾಡಿದೆ ಈಗ ಅವನು ಸ್ವೀಕಾರಾರ್ಹ ಎನ್ನುವ ಸೂಚ್ಯಾರ್ಥವೂ ಕಣ್ದುಬರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಇದೇ ಕಾದಂಬರಿಯಲ್ಲಿ ಎಲ್ಲರೂ ತಮ್ಮ ತಮ್ಮ ವಿಚಾರಕ್ಕೆ ತಕ್ಕಂತೆ ಮೇಲೇರುವ ಬಯಕೆಯನ್ನೇ ವ್ಯಕ್ತ ಪದಿಸುತ್ತಾರೆ. ದೊಡ್ಡದರ ಜತೆಗೆ ಗುರುತಿಸಿಕೊಳ್ಳುವ ಬಯಕೆ. ಎಲ್ಲರಿಗೂ ಬ್ರಾಹ್ಮಣ್ಯದ ಬಯಕೆ (ನಿಜಾರ್ಥದಲ್ಲಿ ಅಲ್ಲದಿದ್ದರೂ). ಆದರೆ ಸತ್ಯಳಿಗೆ ಅದರ ನಿಜಾರ್ಥ ನಿಧಾನವಾಗಿ ಅರ್ಥವಾಗುತ್ತಾ ಹೊಗುತ್ತದೆ. ಸಂಕೇತಗಳು ಲಾಂಚನಗಳ ಅಗತ್ಯವಾದರೂ ಎಲ್ಲಿಯ ತನಕ. ಸತ್ಯದ ಜಲಪ್ರಳಯ ಎಲ್ಲವನ್ನೂ ಕೊಚ್ಚಿ ತನ್ನೊಟ್ಟಿಗೆ ಕರೆದುಯ್ಯುವಾಗ ಸಂಕೇತದ ಹಂಗಾದರೂ ಏಕೆ ? ಅವಳು ನೆರೆಯಲ್ಲಿ ಜನಿವಾರ ಬಿಸುಡುವ ಕ್ರಿಯೆ ಕೂಡ ಸಾಂಕೆತಿಕವೇ .
ಸಾಯಿ ಗಣೇಶ್
ಸಾಯಿ ಗಣೇಶ್ ಅವರೆ,
ನಿಮ್ಮ ಪ್ರತಿಕ್ರಿಯೆ ಓದಿ ತುಂಬಾ ಸಂತೋಷವಾಯಿತು. ತಕ್ಕ ಮಟ್ಟಿಗೆ ಸಂದೇಹಗಳು ದೂರವೂ ಆದವು. ಇನ್ನು ಮದುವೆಯ ವಿಷಯ ನಾನನಲ್ಲಿ ಸಾಮಾನ್ಯವಾಗಿ ನಡೆವ ಆದರ್ಶದ ಹೋರಾಟದ ಕುರಿತು ಬರೆದದ್ದಾಗಿತ್ತು. ಕಾದಂಬರಿಯಲ್ಲಿ ಹಾಗಿಲ್ಲದಿದ್ದರೂ, ಈಗೀಗ ಜಾತಿ ವಿರೋಧಕ್ಕೋಸ್ಕರ ಅಂತರ್ಜಾತೀಯ ಮದುವೆ ಆಗಬೇಕು ಎಂಬ ಕೂಗು ಬರುತ್ತದಲ್ಲ ಅದರ ಕುರಿತಾಗಿತ್ತು. ಮದುವೆ ಮನಸಿಗೆ, ಪ್ರೀತಿಗೆ, ವಿಶ್ವಾಸಕ್ಕೆ ಸಂಬಧಿಸಿದ್ದು. ಅದು ಸಂಭವಿಸಿದರೆ ಜಾತಿಯ ಪ್ರಶ್ನೆ ಏಳದು.. ಏಳಬಾರದು. ಅದಿಲ್ಲದೇ ಕೇವಲ ವಿರೋಧಕ್ಕೋಸ್ಕರ ಮದುವೆ ಎಂದಾದರೆ ನೀವೆಂದಂತೆ ಅಸಹಜವೇ.
ನಿಮ್ಮ ಬರಹಗಳೇನಾದರೂ ಇದ್ದರೆ ತಿಳಿಸಿ ಓದಲು ಉತ್ಸುಕಳಾಗಿರುವೆ.
ಧನ್ಯವಾದಗಳು.
ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಲೇಖನದ ಕೊಂಡಿ ಕಳಿಸಿದ್ದು ಮಿತ್ರರಾದ ಜಯಲಕ್ಷ್ಮಿ ಅವರು.
ತೇಜಸ್ವಿನಿ ಅವರೇ ,
ನಾ ಹೆಚ್ಚಾಗಿ ಬರೆದದ್ದು ಅಂತ ಇಲ್ಲ. ಹಿಂದೆ ಬರೆಯುವ ಪ್ರಯತ್ನ ಮಾಡಿ ಒಂದ್ ಬ್ಲಾಗ್ ಸುರು ಮಾಡಿದ್ದೆ ಸ್ನೇಹಿತನ ಜತೆ. ಸಂಗೀತ ಸಂಬಂಧಿ ಲೇಖನ ಒಂದಿದೆ .
http://kalashadvaye.blogspot.in/2010/06/blog-post.html
ಮಿಕ್ಕಂತೆ ಬರಹಗಳೆಲ್ಲ ಸ್ನೇಹಿತರ ಮಧ್ಯೆ ಮಿಂಚಂಚೆ ಮೂಲಕ ಹಂಚಿಕೊಂಡಿರುವುದೇ ಹೆಚ್ಚು .
ಕಾಮೆಂಟ್ ಪೋಸ್ಟ್ ಮಾಡಿ