ಗುರುವಾರ, ಡಿಸೆಂಬರ್ 3, 2009

ಕೊಳೆಯದಿರಲಿ..ನನ್ನೆದೆಯ ಫಸಲು...

ಗಾಢ ನೀಲ ಬಣ್ಣವನು ತುಂಬಿ
ಕರಿಮೋಡದ ಭಾರ ಹೊತ್ತ,
ಅಯೋಮಯ ಭಾವವೊಂದು
ಆವರಿಸುತಿದೆ ನನ್ನೊಳಗೆ

ಎಲ್ಲಿಂದ ಬಂತೋ ನಾ ಕಾಣೆ
ಇಲ್ಲೇ ಮನೆ ಮಾಡಿಕೊಂಡು
ಈಗಲೋ ಆಗಲೋ,
ಸುರಿಯುವಂತಿದೆ...
ನನ್ನೆದೆಯ ಫಸಲನ್ನೇ
ಕೊಳೆಸುವಂತಿದೆ...

ಬಯಸಿದ್ದೆ ತಿಳಿ ನೀಲಿ ಬಣ್ಣವ
ಹೋಗಲಿ ಬೇಡ, ಸಿಗಬಾರದೇ
ಬಿಳಿ ಬಣ್ಣವಾದರೂ?

ಬಿಳಿಯೊಳಗೆ ಬೇಕಾದ ರಂಗು ತುಂಬಿ,
ಸಪ್ತವರ್ಣವನ್ನೇ ಕಾಣಿಸುತ್ತಿದ್ದೆ
ಫಸಲಿಂದ ಹೊಸ ಬೀಜವ ಹೆಕ್ಕಿ
ಹೊಸ ಪೈರ ಬೆಳೆಯುತ್ತಿದ್ದೆ.

ಬೇಡವೆಂದರೂ ಬಂದಿದೆ
ಗಾಢ ನೀಲಿಯ ವೇಷ ಧರಿಸಿ,
ಮಳೆಮೋಡದ ಮುಸುಕು ಹಾಕಿ

ಬರಲಿ ಬಿಡಿ, ಈಗಿಲ್ಲ ಚಿಂತೆ...
ಹಾಕಿರುವೆ ಬಿಳಿಯ ಟರ್ಪಾಲು
ನನ್ನೆದೆಯ ಫಸಲ ಮೇಲೆ
ಬಿದ್ದರೆ ಹೇಳಿ ಈಗ
ಹನಿ ನೀರು!!

24 ಕಾಮೆಂಟ್‌ಗಳು:

Raghu ಹೇಳಿದರು...

ತೇಜಸ್ವಿನಿ,
ಕವನ ತುಂಬಾ ಚೆನ್ನಾಗಿದೆ... ಒಳ್ಳೆಯ ಅರ್ಥವನ್ನು ತಿಳಿಸುತ್ತಿದೆ...
ನಿಮ್ಮವ,
ರಾಘು.

Dileep Hegde ಹೇಳಿದರು...

ಟರ್ಪಾಲು ಹಾಕಿದ್ದು ಒಳ್ಳೆದಾಯ್ತು... :P
ಕವನ ಚೆನ್ನಾಗಿದೆ.. :)

ಚುಕ್ಕಿಚಿತ್ತಾರ ಹೇಳಿದರು...

ನವಿರಾಗಿದೆ ನಿಮ್ಮ ಕವನ . ಮನಸಿಗೆ ಮುದ ಕೊಡುತ್ತೆ..
ವ೦ದನೆಗಳು.

sunaath ಹೇಳಿದರು...

ಸಮತೋಲನ ಕಾಯ್ದುಕೊಳ್ಳುವ ಉಪಾಯ ಉತ್ತಮವಾಗಿದೆ. ಹೊಸ ರೂಪಕವನ್ನು ನಿರ್ಮಿಸಿದ್ದೀರಿ.
ಅಭಿನಂದನೆಗಳು.

AntharangadaMaathugalu ಹೇಳಿದರು...

ಕವನ ಮುದವಾಗಿದೆ....

ಶ್ಯಾಮಲ

ಬೆತ್ತಲೆ ಮನಸು(Naked Mind) ಹೇಳಿದರು...

ನಿಮ್ಮೊಳಗಿನ ತುಮುಲಕ್ಕೆ ನೀವೇ ಕಂಡುಕೊಂಡ ಉತ್ತರ ಬಲು ಸೊಗಸಾಗಿದೆ. ನಿಮ್ಮ ಸಾಹಿತ್ಯದ ಒಲವು, ಅಗಾದ ಬರವಣಿಗೆ ಇನ್ನಷ್ಟು ಬೆಳೆಯಲಿ. ಸಮಯ ಸಿಕ್ಕಗಲೆಲ್ಲಾ ನಿಮ್ಮ ಬ್ಲಾಗ್ ಕಡೆ ಮನಸನ್ನ ಅಡವಿಡುವೆ......ನುಲಿಯುತ್ತಿರಲಿ ನಿಮ್ಮ ಮನಸ್ಸು, ಒಲಿಯುತ್ತಿರಲಿ ಎಲ್ಲ ಯಶಸ್ಸು ಎಂಬ ಹಾರೈಕೆಗಳೊದಿಗೆ..........

ನಿಮ್ಮ
ದಿನು

ಶಿವಪ್ರಕಾಶ್ ಹೇಳಿದರು...

ಕವನ ತುಂಬಾ ಚೆನ್ನಾಗಿದೆ ಮೇಡಂ

Hemantprakruti ಹೇಳಿದರು...

ಬಿಳಿಯೊಳಗೆ ಬೇಕಾದ ರಂಗು ತುಂಬಿ,
ಸಪ್ತವರ್ಣವನ್ನೇ ಕಾಣಿಸುತ್ತಿದ್ದೆ
ಫಸಲಿಂದ ಹೊಸ ಬೀಜವ ಹೆಕ್ಕಿ
ಹೊಸ ಪೈರ ಬೆಳೆಯುತ್ತಿದ್ದೆ.....ಆಶಾಭಾವನೆಯೊತ್ತ ಈ ಸಾಲುಗಳು ಅದ್ಬುತವಾಗಿವೆ.ಮಿಂಚು,ಗುಡುಗಿನ ಬಗ್ಗೆ ಕೊಂಚ ಬರೆಯಿರಿ.

ಹೇಮಂತ್.

ಸುಮ ಹೇಳಿದರು...

ಕವನ ಭಾವಪೂರ್ಣವಾಗಿದೆ.ಎದೆಯ ಫಸಲನ್ನು ಮನದ ಮೋಡ ಮಳೆಯಿಂದ ಕಾಪಾಡಬಲ್ಲ ಟಾರ್ಪಾಲ್ ಉತ್ತಮ ಹವ್ಯಾಸಗಳು ಅಲ್ಲವೆ?

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿ
ತುಂಬಾ ಸುಂದರ ಕವಿತೆ
ಅದರ ಶೀರ್ಷಿಕೆ ತುಂಬಾ ಹಿಡಿಸಿತು

ಜಲನಯನ ಹೇಳಿದರು...

ಕೊಳೆಯದಿರಲಿ ನನ್ನೆದೆಯ ಫಸಲು...ಮನದಾಳದ ಭಾವನೆಗಳು..ಹುಟ್ಟಿಬೆಳೆದು ತನ್ನದೇ ರೀತಿಯ ಮತ್ತೂ ಭಾವನೆಗಳ ಹುಟ್ಟಿಗೆ ಕಾರಣವಗುವುದಕ್ಕೆ ಮುನ್ನ .....ಇದೇ ಅಲ್ಲವೇ ಭಾವ?
ಬಿಳಿಯೊಳಗೆ ಬೇಕಾದ ರಂಗುತುಂಬಿ...ಮನಸು ನಿರಾಳವಾಗಿದ್ದರೆ..? ತೇಜಸ್ವಿನಿ ಚನ್ನಾಗಿವೆ ಸಾಲುಗಳು...

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ,
ಕವನ ಚೆನ್ನಾಗಿದೆ. ಸ್ವಗತವಾಗಿ ಸಮಾಧಾನಿಸುವಂತಹದು.

ಆನಂದ ಹೇಳಿದರು...

ಕವಿತೆ ಚೆನ್ನಾಗಿದೆ..
ಮನಸಿನ ಮೇಲೆ ಟಾರ್ಪಾಲ್ ಹಾಕೋದು ಹೇಗೆ ಅಂತ ಹೇಳ್ಕೊಡ್ತೀರಾ, ತುಂಬಾ ಅನುಕೂಲವಾಗುತ್ತೆ ... :)

ತೇಜಸ್ವಿನಿ ಹೆಗಡೆ ಹೇಳಿದರು...

@ರಘು, ದಿಲೀಪ್, ಚುಕ್ಕಿಚಿತ್ತಾರ, ಕಾಕಾ, ಶ್ಯಾಮಲ, ದಿನು, ಶಿವಪ್ರಕಾಶ್, ಹೇಮಂತ್, ಸುಮ, ಸಾಗರಾಚೆಯ ಇಂಚರ, ಜಲನಯನ, ಚಂದ್ರಶೇಖರ್

ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ಮನಸಿಗೆ ಹೊಳೆದ ಏನೋ ಒಂದು ಭಾವನೆಗೆ ಥಟ್ಟೆಂದು ಹಾಗೇ ಕವನದ ರೂಪವನ್ನು ಕೊಟ್ಟೆ. ಇದ್ದುದನ್ನು ಇದ್ದಹಾಗೇ ಏನೂ ತಿದ್ದದೇ ಮಾನಸದಲ್ಲಿ ಕಣಿಸಿದೆ. ನಿಜ ಹೇಳ ಬೇಕೆಂದರೆ ಬರೆಯುವಾಗ ಇದ್ದ ಭಾವನೆಯೇ ಬೇರಾಗಿತ್ತು. ಬ್ಲಾಗಿನಲ್ಲಿ ಹಾಕಿದ ಮೇಲೆ ಮತ್ತೆ ಮತ್ತೆ ಓದುವಾಗ ಹಲವು ಅರ್ಥಗಳನ್ನು ಕೊಡಹತ್ತಿತು ಈ ಕವಿತೆ. ನಿಮ್ಮೆಲ್ಲರ ಸ್ಪಂದನೆಯಿಂದ ಹೊಸ ಹೊಸ ಅರ್ಥವನ್ನು ನಾ ತಿಳಿದುಕೊಂಡೆ. ಮಗದೊಮ್ಮೆ ತುಂಬಾ ಧನ್ಯವಾದಗಳು.

@ಆನಂದ್,

ಪ್ರತಿಕ್ರಿಯೆಗೆ ಧನ್ಯವಾದಗಳು. ಟರ್ಪಾಲ್ ಹಾಕುವುದು ಬಲು ಕಷ್ಟ. ಪ್ರತಿಯೊಬ್ಬರಿಗೂ ಟರ್ಪಾಲ್ ಅಗತ್ಯ. ಆದರೆ ಅದು ಅವರವರ ಭಾವನೆಗಳ ಅಗಾಧತೆ, ಮನಸಿನಾಳ, ಎತ್ತರ ಕರಿಮೋಡದ ವಿಸ್ತೀರ್ಣ ಎಲ್ಲವನ್ನೂ ಅವಲಂಬಿಸಿರುತ್ತದೆ. ಹಾಕುವುದು ಅಸಾಧ್ಯವೇನಲ್ಲ. ಧ್ಯಾನ, ಪ್ರಾರ್ಥನೆ, ಧನಾತ್ಮಕ ಅಲೋಚನೆ, ಆತ್ಮವಿಶ್ವಾಸಗಳೆಂಗ ನಾಲ್ಕು ಕಂಬಗಳ ನೆಟ್ಟಿ ಬೆಳೆಸಿದರೆ ಟರ್ಪಾಲ್ ತನ್ನಿಂದ ತಾನೇ ನಿಮ್ಮೆದೆಯ ಫಸಲನ್ನು ರಕ್ಷಿಸುವುದು. :)

ದಿನಕರ ಮೊಗೇರ ಹೇಳಿದರು...

ತೇಜಸ್ವಿನಿ ಮೇಡಂ,
ಮನದ ತುಮುಲ ತಣಿಸುವ ಮಳೆಯಿಂದ ಪಾರಾಗುವ ಹೊಸ ಉಪಾಯ ಹೇಳಿದ್ದೀರಿ.... ಆದರೆ ಮನದ ಆಶೆ ಅಭಿಲಾಷೆಗಳು ಹಾಗೆ ಉಳಿದುಬಿಟ್ಟಿವೆಯಲ್ಲಾ ....

ಸಿಂಧು sindhu ಹೇಳಿದರು...

ತೇಜಸ್ವಿನೀ,

ಒಳ್ಳೆ ಉಪಾಯ. ಆದರೆ ಕಷ್ಟ ಸಾಧ್ಯ.
ಹೊಸ ಉಪಮೆ ಚೆನ್ನಾಗಿದೆ.

ಪ್ರೀತಿಯಿಂದ
ಸಿಂಧು

ಚಿತ್ರಾ ಹೇಳಿದರು...

ತೇಜೂ ,
ಶುರುವಿನಲ್ಲಿ ಮೂಡಿದ ವಿಷಾದದ ಮೋಡಗಳು ನೆಮ್ಮದಿಯ ಫಸಲನ್ನು ಆವರಿಸಿ ಹಾಳು ಮಾಡುವ ಮೊದಲು ಬಹು ಜಾಣತನದಿಂದ ಬಿಳಿ ಟಾರ್ಪಾಲನ್ನು ಮುಚ್ಚಿ ಬೆಳೆ ಉಳಿಸಿಕೊಂಡಿದ್ದಕ್ಕೆ ಅಭಿನಂದನೆಗಳು ! ಚಂದದ ಕವನ . ಬೇಸರದ ಛಾಯೆಯಿಂದ ಆರಂಭಿಸಿದರೂ , ಕೊನೆಯ ತಿರುವು ಸಂತಸದ ತಂದಿತು !

ದೀಪಸ್ಮಿತಾ ಹೇಳಿದರು...

ಅರ್ಥವತ್ತಾದ ಕವನ

ತೇಜಸ್ವಿನಿ ಹೆಗಡೆ ಹೇಳಿದರು...

@ದಿನಕರ ಅವರೆ,

ತುಂಬಾ ಧನ್ಯವಾದಗಳು.

@ಸಿಂಧು,

ಹೌದು ತುಂಬಾ ಕಷ್ಟ. ಆನಂದ್ ಅವರಿಗೆ ನಾನು ಟರ್ಪಾಲ್ ಹೇಗೆ ಹಾಕುವುದೆಂದು ಹೇಳಿರುವೆ. ಆದರೆ ಅದು ಹೇಳಿದಷ್ಟು ಸುಲಭವಂತೂ ಅಲ್ಲ. ಆದರೆ ಹಾಗೆ ಮಾಡಬಹುದು, ಮಾಡಿದ್ದೇನೆ ಕೂಡ ಎಂದು ಎಣಿಸುವುದರ ಮೂಲಕವಾದರೂ ತುಸು ಶಾಂತಿ ಪಡೆಯುವ ಯತ್ನ ಅಷ್ಟೇ. ಧನಾತ್ಮಕ ಯೋಚನೆಯೆಡೆ ಮನಸ್ಸನ್ನೆಳೆಯಲು ಪ್ರಯತ್ನಿಸುತ್ತಿರುವೆ :)

ಪ್ರತಿಕ್ರಿಯೆಗೆ ಧನ್ಯವಾದಗಳು.

@ಚಿತ್ರಕ್ಕ,

ತುಂಬಾ ಧನ್ಯವಾದಗಳು. ಆಶಾವಾದ ಒಂದೇ ನಮ್ಮನ್ನು ಜೀವಂತವಾಗಿರುಸುವುದು ಅಲ್ಲವೇ? ದುರಾಸೆ ಒಳ್ಳೆಯದಲ್ಲ. ಆದೆ ನಿರಾಸೆಯೂ ಸಲ್ಲ. :)

@ದೀಪಸ್ಮಿತ,

ತುಂಬಾ ಧನ್ಯವಾದಗಳು.

ಮನಮುಕ್ತಾ ಹೇಳಿದರು...

ಟಾರ್ಪಾಲಿನ ಉಪಮೆ ಹಾಗೂ ಅದನ್ನು ಅರ್ಥೈಸಿದ್ದು ತು೦ಬಾ ಚೆನ್ನಾಗಿದೆ.ನಿಜವಾಗಲೂ ನಿಮ್ಮ ಕವನ, ಓದಿದ೦ತೆಲ್ಲ ಅನೇಕ ಭಾವಗಳನ್ನು ಕೊಡುತ್ತದೆ. ಕವನ ಹಿಡಿಸಿತು..ಇ೦ತಹಾ ಒಳ್ಳೆಯ ಕವನದೊಡತಿಗೆ ನನ್ನ ಧನ್ಯವಾದಗಳು....

ಸೀತಾರಾಮ. ಕೆ. / SITARAM.K ಹೇಳಿದರು...

ಮನಗಳ ಆಸೆಗಳ ತುಡಿತ ಹಸಿರು ವರ್ಣ
ಬೆಳೆಗಳು ಮನದ ಸಮೃಧ್ಧಿಯ ಸ೦ಕೇತ
ಕಪ್ಪು ಮೋಡ ಭಯದ ವಾತಾವರಣ
ತಿಳಿನೀಲಿ- ಉತ್ತು೦ಗದ ಶಾ೦ತ ಬಯಕೆ
ಬಿಳಿ ಶಾ೦ತಿಯ ಸಮವಸ್ತ್ರ
ಶಾ೦ತಿಯ ಸಮ ವಸ್ತ್ರ ಹೊದ್ದು- ಭಯಗಳಿ೦ದ
ಭಾವನೆ ಬಯಕೆಗಳನು ರಕ್ಷಿಸುವ ತಮ್ಮ ತ೦ತ್ರ ನಿಜವಾಗಿಯೂ ಸೊಗಸು.
ಒಳ್ಳೇ ತ೦ತ್ರದ ಕವನ.

ಸುಧೇಶ್ ಶೆಟ್ಟಿ ಹೇಳಿದರು...

ವಿಭಿನ್ನವಾಗಿದೆ....

"ಕೊಳೆಯದಿರಲಿ ನನ್ನೆದೆಯ ಫಸಲು" ಶೀರ್ಷಿಕೆ ತು೦ಬಾ ಇಷ್ಟ ಆಯಿತು....

Rameshchandra ಹೇಳಿದರು...

ಕೊಳೆಯದಿರಲಿ ನನ್ನೆದೆಯ ಫಸಲು.. ಕವಿತೆ ಹಲವು ಆಯಾಮಗಳನ್ನು ತಳೆದು ನಮ್ಮ ಮುಂದೆ ನಿಲ್ಲುತ್ತದೆ. ನಿಮ್ಮ ಭಾಷೆ ಮತ್ತು ಅಭಿವ್ಯಕ್ತಿ ನಾನು ಇಷ್ಟಪಟ್ಟ ವಿಚಾರ. ಇನ್ನೂ ಹೆಚ್ಚು ಕವಿತೆಗಳ ಫಸಲು ನಿಮ್ಮೆದೆಯಲ್ಲಿ ಬೆಳೆಯಲಿ ಎಂದು ಆಶಿಸುತ್ತೇನೆ.

Narayan Bhat ಹೇಳಿದರು...

ನಿಮ್ಮ ಕಲ್ಪನಾ ಶಕ್ತಿ ಮೆಚ್ಚುಗೆಯಾಗುತ್ತದೆ.