ಗುರುವಾರ, ಅಕ್ಟೋಬರ್ 22, 2009

"ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ"

ನಾ ಮೆಚ್ಚಿದ ಕೃತಿ(ಒಳಗೊಂದು ಕಿರುನೋಟ)-೩

"ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ" - ಹೀಗೊಂದು ಎಚ್ಚರಿಕೆಯ ಜೊತೆಗೆ ಅನ್ಯಾಯ ಎಲ್ಲೇ ಆಗಲಿ ಅದನ್ನು ಹಿಮ್ಮೆಟ್ಟಿಸಲು ಸಂಘಟಿತ ಪ್ರತಿಭಟನೆಯೇ ಸರಿಯಾದ ಮದ್ದು ಎನ್ನುವ ಸುಂದರ ಸಂದೇಶವನ್ನೂ ನೀಡುವ ಅಪರೂಪದ ಕಾದಂಬರಿ "ಯಾದ್ ವಶೇಮ್". ಇತ್ತೀಚಿಗೆ ನಾನು ಓದಿದ ಕಾದಂಬರಿಗಳಲ್ಲೇ ಬಹು ಇಷ್ಟಪಟ್ಟ, ಸತ್ಯಕ್ಕೆ ಬಲು ಹತ್ತಿರವಾದ ಈ ಕೃತಿಯನ್ನು ಬರೆದವರು ಪ್ರಸಿದ್ಧ ಲೇಖಕಿ "ನೇಮಿಚಂದ್ರ".


೧೯೪೩ರ ಸುಮಾರಿಗೆ ಯುರೋಪಿನಿಂದ "ಹಿಟ್ಲರ್"ನ ಪಾಶವೀ ಹಿಡಿತದಿಂದ ಹೇಗೋ ಪಾರಾಗಿ ಶಾಂತಿದೂತನಾಗಿದ್ದ ಬಾಪೂಜಿಯ ನಾಡಿಗೆ ಓಡಿ ಬಂದ ಹ್ಯಾನಾಳ ಬದುಕಿನ ಕಥೆಯಿದು. ಆದರೆ ಮೇಲ್ನೋಟಕ್ಕೆ ಹಾಗೆನಿಸಿದರೂ ಇದು ಪ್ರತಿಯೊಬ್ಬನ ಬದುಕನ್ನೇ ಬಗೆದು ನೋಡುವ, ಆತನ ಎದೆಯಾಳದೊಳಗೆ ಬೇರೂರಿದ ದ್ವೇಷವನ್ನೇ ಅಲುಗಾಡಿಸುವ, ಪ್ರೀತಿಯ, ಶಾಂತಿಯ ಹೊಸ ಬೀಜ ಬಿತ್ತುವ...ಒಟ್ಟಿನಲ್ಲಿ ಬದುಕನ್ನು ಪ್ರೀತಿಸುವ ಹಾಗೆ ಪ್ರೀತಿಸಲು ಕಲಿಸುವ ಸುಂದರ ಕಥೆಯಿದು. ಇದರಲ್ಲಿ ಅಸಹನೀಯ ನೋವಿದೆ, ಯಾತನೆಯಿದೆ, ಪಾಪಪ್ರಜ್ಞೆಯಿದೆ, ಆಕ್ರೋಶವಿದೆ, ತಿರಸ್ಕಾರವಿದೆ, ಕೊನೆಯಿಲ್ಲದ ಪ್ರಶ್ನೆಗಳಿವೆ, ಸಿಕ್ಕು ಸಿಕ್ಕಾದ ಉತ್ತರಗಳಿವೆ...ಆದರೆ ಜೊತೆಜೊತೆಗೇ ಎಲ್ಲವುದಕ್ಕೂ ಕಾರಣ ನಾವೇ ಅಂದರೆ ಮನುಷ್ಯರೇ ಎನ್ನುವ ಸಮರ್ಪಕ ಉತ್ತರವೂ ಇದೆ.

ಅಂದು ನಾಜಿಗಳಿಂದಾಗುತ್ತಿದ್ದ ಅತ್ಯಾಚಾರಗಳಿಂದ ಮುಕ್ತಿಗೊಳಿಸಿರೆಂದು ಜಗತ್ತನ್ನೇ ಮೊರೆಯಿಟ್ಟಿದ್ದರು ಯಹೂದಿಯರು. ಅದರಲ್ಲೂ ವಿಶೇಷವಾಗಿ ಬ್ರಿಟಿಷರ ಸಹಾಯವನ್ನು ನಿರೀಕ್ಷಿಸಿದ್ದರೆಂದು ಈ ಪುಸ್ತಕವು ಹೇಳುತ್ತದೆ. ಆದರೆ ಸಕಾಲದಲ್ಲಿ ನೆರವು ಸಿಗದೇ, ಹಿಟ್ಲರನ ನರಮೇಧ ಕ್ಯಾಂಪ್‌ಗೆ ಸುಮಾರು ಆರು ಮಿಲಿಯ ಅಮಾಯಕ ಯಹೂದಿಯರು ಬಲಿಯಾಗುತ್ತಾರೆ. ಒಂದೇ ಉಸುರಿಗೆ ಅವರೆಲ್ಲರ ಪ್ರಾಣ ಹೋಗಿರುವುದಿಲ್ಲ. ಕ್ರಮೇಣ, ಹಂತ ಹಂತವಾಗಿ, ನಿಧಾನವಾಗಿ, ಅತ್ಯಂತ ಕ್ರೂರ ರೀತಿಯಲ್ಲಿ ಬದುಕನ್ನು ಇಷ್ಟಿಷ್ಟೇ ಎಂಬಂತೆ ಕಸಿದುಕೊಂಡಿದ್ದ ಆತ!! ಅಂತಹ ಒಂದು ದುರ್ದಿನಗಳಲ್ಲಿ ತಾಯಿ, ಅಕ್ಕ ಹಾಗೂ ತಮ್ಮನನ್ನು ನಾಜಿಗಳು ತನ್ನ ಕಣ್ಮುಂದೇ ಎಳೆದೊಯ್ದ ಕರಾಳ ನೆನಪನ್ನೇ ಹೊತ್ತು ಅಸಹಾಯಕತೆ ಬೆರೆತ ಕ್ರೋಧ, ನೋವು, ಅನಾಥಪ್ರಜ್ಞೆಯೊಂದಿಗೆ ತನ್ನ ತಂದೆಯೊಡಗೂಡಿ, ಅಹಿಂಸೆಯಿಂದ ಮಾತ್ರ ವಿಮೋಚನೆ ಸಾಧ್ಯವೆಂದು ಸಾರುತ್ತಿದ್ದ ಗಾಂಧಿಯ ನಾಡಿಗೆ ಬಂದವಳು ಹ್ಯಾನಾ. ಬ್ರಿಟಿಷರ ನೆರವನ್ನು ಆಶಿಸಿ ಸಿಗದೇ ಅವರಿಂದಲೇ ತುಳಿತಕ್ಕೊಳಗಾಗಿ ಹೋರಾಡುತ್ತಿದ್ದ ಭಾರತ ಅವಳಿಗೆ ಹೊಸ ಬದುಕನ್ನೇ ನೀಡಿತು. ಇಲ್ಲಿನ ಸಂಸ್ಕೃತಿ, ನೆಲ, ಜನ ಎಲ್ಲವೂ ಅವಳ ಕತ್ತಲು ತುಂಬಿದ್ದ ಮನಸಿಗೆ, ಬಾಳಿಗೆ ಬೆಳಕಾಗಿ ಬಂದವು. ತನ್ನ ಗತಕಾಲದ ನೆನಪಿನ ಕಡೆಯ ಕೊಂಡಿಯಾಗಿದ್ದ ತಂದೆಯನ್ನೂ ಕಳೆದುಕೊಂಡ ಮೇಲೆ ಹ್ಯಾನಾ "ಅನಿತಾ" ಆದಳು. ಆಶ್ರಯವಿತ್ತು ಆದರ ತೋರಿದ ಮನೆಯವರ ಮಗನನ್ನೇ ಮದುವೆ ಆಗಿ ತಾನು ಕನಸಲ್ಲೂ ಆಶಿಸದ ಸುಂದರ ಸುಭದ್ರ ಬದುಕನ್ನು ಪಡೆದಳು. ಅನಿತಾ ಎಂದು ಅನಿಸಿಕೊಂಡ ಮೇಲೂ ಹ್ಯಾನಾಳಾಗಿಯೇ ಅವಳು ಬದುಕಲು ಸಾಧ್ಯವಾಗಿದ್ದು ಆಕೆ ಇಲ್ಲಿ ಅಂದರೆ ಈ ನಾಡಿನಲ್ಲಿದ್ದುದರಿಂದ ಮಾತ್ರ ಎಂಬುದನ್ನು ಲೇಖಕಿ ಹಲವಾರು ಉದಾಹರಣೆಗಳ ಮೂಲಕ, ಘಟನಾವಳಿಗಳ ಮೂಲಕ ಮನಗಾಣಿಸಿದ್ದಾರೆ. ಅವೆಲ್ಲಾ ಬಲು ಸುಂದರವಾಗಿವೆ. ಮಾಸದ ನೆನಪನ್ನು ನಮ್ಮೊಳಗೂ ಮೂಡಿಸುತ್ತವೆ.

ಲೇಖಕಿಯೇ ಒಂದು ಕಡೆ ಹೇಳಿದಂತೆ, "ಮನುಷ್ಯನನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಚರಿತ್ರೆಗಿಂತ ಒಂದುಗೂಡಿಸುವ ಚರಿತ್ರೆಯೇ ಮಹತ್ವದ್ದು..." - ಈ ಒಂದು ವಾಕ್ಯ ಅದೆಷ್ಟು ನಿತ್ಯ ಸತ್ಯ ಎನ್ನುವುದು ಈ ಕಾದಂಬರಿಯನ್ನೋದಿದಮೇಲೆ ಸರಿಯಾಗಿ ಮನದಟ್ಟಾಗುತ್ತದೆ. ಯಾವುದೋ ಪೂರ್ವಾಗ್ರಹಕ್ಕೀಡಾಗಿ, ಕೇವಲ ನೆಪವನ್ನು ಮಾತ್ರ ದ್ವೇಷಕ್ಕೆ ಕಾರಣವನ್ನಾಗಿಸಿಕೊಂಡು ಅಮಾಯಕ ಯಹೂದಿಗಳ ಮಾರಣಹೋಮ ಮಾಡಿದ ಹಿಟ್ಲರ್ ಹಾಗೂ ಆತನ ಸಂಗಡಿಗರಾದರೂ ನೆಮ್ಮದಿಯ ಬದುಕು ಕಂಡಿರಬಹುದೇ? ಖಂಡಿತ ಇಲ್ಲವೆನ್ನುತ್ತದೆ ಮನಸ್ಸು. "ಬದುಕಬಹುದು ಹಂಚಿಕೊಂಡು ಬದುಕಬಹುದೇ ಕಿತ್ತುಕೊಂಡು?" ಎಂದು ಹ್ಯಾನಾಳ ಮೂಲಕ ಪ್ರಶ್ನಿಸುವ ಲೇಖಕಿಯ ಈ ಒಂದು ಪ್ರಶ್ನೆಗೆ ಉತ್ತರವೂ ನಮ್ಮೊಳಗೇ ಅಡಗಿದೆ. ಹಿಟ್ಲರ್ ಅವನ ಜನಾಂಗಕ್ಕೆ ಸ್ವಾತಂತ್ರ್ಯ ಪಡೆದುಕೊಂಡದ್ದು ಇತರರ ಸ್ವಾತಂತ್ರ್ಯವನ್ನು ಹರಣಮಾಡುವುದರ ಮೂಲಕ. ಆದರೆ ನಾವು ಬಹು ಭಾಗ್ಯಶಾಲಿಗಳು. ನಮ್ಮ ಸ್ವಾತಂತ್ರ್ಯವನ್ನು ಕಸಿದಾಳುತ್ತಿದ್ದ ಬ್ರಿಟಿಷರನ್ನು ಅಹಿಂಸಾ ಮಾರ್ಗವನ್ನೇ ಪ್ರಮುಖವಾಗಿ ಅನುಸರಿಸಿ ಹೊರದಬ್ಬಿದೆವು. "ನಮ್ಮ ಸ್ವಾತಂತ್ರ್ಯ ಯಾರದೋ ಸ್ವಾತಂತ್ರ್ಯದ ಹರಣದ ಮೇಲೆ ನಿಂತಿಲ್ಲ" ಎನ್ನುವ ಸಮಾಧಾನವಾದರೂ ನಮ್ಮೊಂದಿಗಿದೆ.

ಬಿಟ್ಟು ಬಂದ ಆ ನೆಲದವಳಾಗಿಯೂ ಬಾಳದೇ, ಈಗಿರುವ, ಆಶ್ರಯಿಸಿದ ಈ ನೆಲವನ್ನೂ ಸೇರದೇ ಅನಾಥಪ್ರಜ್ಞೆಯಿಂದ ಬಳಲುವ ಅದೆಷ್ಟು ಹ್ಯಾನಾರನ್ನು ನಾವು ಅಫಘಾನಿಸ್ತಾನ, ಪಾಕಿಸ್ತಾನ, ಅಸ್ಸಾಂ, ಬಾಂಗ್ಲಾದೇಶ ಇತ್ಯಾದಿ ನಿರಾಶ್ರಿತರಲ್ಲಿ ಕಂಡಿಲ್ಲ?! ಇವರೆಲ್ಲಾ ಯಾರದೋ ಅಟ್ಟಹಾಸಕ್ಕೆ, ಅಂಹಕಾರಕ್ಕೆ, ಮೂರ್ಖತನದ ಪರಮಾವಧಿಗೆ ಬಲಿಯಾದವರು. ಏನೂ ತಪ್ಪನ್ನು ಮಾಡದೇ ತಮ್ಮವರಿಂದ, ಮನೆ, ಮಠದಿಂದ ವಂಚಿತರಾದವರು. ಅಂದು ಹಿಟ್ಲರ್‌ನ ಹುಚ್ಚುತನದ ಪರಮಾವಧಿಯನ್ನು ಇಡೀ ಜಗತ್ತೇ ನಿಂತು ನೋಡಿತ್ತು ನಿಜ.. ಆದರೆ ಇಂದು ಅದೆಷ್ಟೋ ಹಿಟ್ಲರ್‌ಗಳು ಅಸಂಖ್ಯಾತ ಅಮಾಯಕರ ನರವಧೆಯನ್ನು ಬಹು ಸುಲಭವಾಗಿ ಯಾವುದೇ ನಾಜಿ ಕ್ಯಾಂಪಿನ ಸಹಾಯವಿಲ್ಲದೆಯೇ ಮಾಡುತ್ತಿದ್ದಾರೆ.. ನಮ್ಮ ಕಣ್ಮುಂದೆಯೇ. ಇಂದೂ ನಾವು ಅಂದರೆ ಜಗತ್ತು ದೂರದಲ್ಲೆಲ್ಲೋ ನಡೆಯುವ ಈ ನರಮೇಧವನ್ನು ನಿಂತು ನೋಡುತ್ತಲೇ ಇದ್ದೇವೆ.!!! "ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ" ಎಂದು ಹ್ಯಾನಾ ಎಚ್ಚರಿಸುವ ಈ ಮಾತು ಕಾದಂಬರಿಯನ್ನೋದಿದ ಮೇಲೆಯೂ ಸದಾ ತಲೆಯೊಳಗೇ ಗುಂಯ್ಯ್ ಎನ್ನುತ್ತಿರುತ್ತದೆ. ಎಚ್ಚರಿಕೆಯ ಗಂಟೆಯನ್ನು ಅರಿತು ನಡೆದರೆ ನಮ್ಮ ಸರದಿಯನ್ನಾದರೂ ನಾವು ತಪ್ಪಿಸಿಕೊಳ್ಳಬಹುದೇನೋ ಎಂದೆನಿಸುತ್ತದೆ.

"ಟ್ರಾನ್ಸ್‌ಯುರೇನಿಕ್ಸ್" ಕಂಡು ಹಿಡಿದ ಜಗತ್ ಪ್ರಸಿದ್ಧ ಯಹೂದಿ ವಿಜ್ಞಾನಿ ಲೀ ಮೆಟ್ನರ್. ಈಕೆ ಕೂಡಾ ಹಿಟ್ಲರ್‌ನ ಹಿಡಿತದಿಂದ ಪಾರಾಗಲು ಪರದಾಡಿದವಳು. ಅಂದು ಯಹೂದಿಗಳಲ್ಲಿ ಕೆಲವರು ತಲೆಮರೆಸಿಕೊಂಡು ತಮ್ಮ ವ್ಯಕ್ತಿತ್ವವನ್ನೇ ನಶಿಸಿಕೊಂಡು ಬಾಳಿದರೆ ಅಸಂಖ್ಯಾತರು ಆತನ ಕ್ರೂರತ್ವಕ್ಕೆ, ಪಾಶವೀ ಕೃತ್ಯಕ್ಕೆ ಗುರಿಯಾಗಿ, ನಾಜಿ ಕ್ಯಾಂಪ್‌ಗಳಲ್ಲಿ ಸತತ ಅತ್ಯಾಚಾರಕ್ಕೆ ಒಳಗಾಗುತ್ತಾ ಬದುಕಿ ಬದುಕಿ ಸತ್ತವರು. ಎಷ್ಟು ಅಮಾನವೀಯವಾಗಿ ಪಶುವಂತೆ, ಮನುಷ್ಯರೆಂದೂ ಪರಿಗಣಿಸದೇ ಆತ ಯಹೂದಿಗಳನ್ನು ನಡೆಸಿಕೊಂಡನೆಂದು ಹ್ಯಾನಾಳ ಅಕ್ಕ ರೆಬೆಕ್ಕಳ ಕಥೆಯ ಮೂಲಕ ನಮಗೆ ತೋರಿಸುತ್ತಾರೆ ನೇಮಿಚಂದ್ರ. ಓದುವುದೇ ಅಷ್ಟು ಕಷ್ಟವೆನಿಸುವಾಗ ಅದು ಹೇಗೆ ಆ ಮುಗ್ಧರು ಸಹಿಸಿದರೋ!!!? ಆ ಭಗವಂತನ ಬಿಟ್ಟರೆ ಹಿಟ್ಲರ್ ಒಬ್ಬನಿಗೆ ತಿಳಿದರಬಹುದೇನೋ!!

ಹಿಂದೆ ಆಗಿದ್ದ ಅನ್ಯಾಯವನ್ನು ಮರೆತೋ ಇಲ್ಲಾ ಅಂದು ಆಗಿದ್ದ ಅನ್ಯಾಯದ ಸೇಡಿಗೋ ಎಂಬಂತೆ ಇಂದು ಯಹೂದಿಗಳ ರಾಷ್ಟ್ರ ಇಸ್ರೇಲ್ ವರ್ತಿಸುತ್ತಿರುವುದು ಈ ಕಾದಂಬರಿಯಲ್ಲಿ ನಿಚ್ಚಳವಾಗಿ ಕಾಣುತ್ತದೆ. ಒಡೆದು ಆಳುವ ನೀತಿಯನ್ನು ಅನುಸರಿಸುವ ಬ್ರಿಟಿಷರು, ೧೯೪೮ರಲ್ಲಿ ಯಹೂದಿಗಳಿಗಾಗಿಯೇ, ಅಂದು ಮುಸಲ್ಮಾನರು ಆಳುತ್ತಿದ್ದ ಪ್ಯಾಲಿಸ್ಟೈನ್ ಅನ್ನು ನೀಡುತ್ತಾರೆ. ಅಲ್ಲಿದ್ದ ಮುಸಲ್ಮಾನರನ್ನು ಹೊರಗಟ್ಟುವ ಯಹೂದಿಗಳು ಇಸ್ರೇಲ್ ಅನ್ನು ಸ್ಥಾಪಿಸುತ್ತಾರೆ. ಅಳಿದುಳಿದ ಪ್ಯಾಲಿಸ್ಟೈನ್‌ರು ತುಂಡು ನೆಲದಲ್ಲಿ ಅವರದೇ ರಾಷ್ಟ್ರದಿಂದ ಬೇರಾಗಿ ಜೀವಿಸುತ್ತಾರೆ. ಎಂತಹ ವಿಪರ್ಯಾಸ!!! ಹಿಂದೆ ಜರ್ಮನಿಯಲ್ಲಿ ನಡೆದ ಚರಿತ್ರೆಯನ್ನೇ ಮರೆತು ಇಂದು ಹೊಸ ಇತಿಹಾಸವನ್ನು ಬರೆದವರು ಇದೇ ಯಹೂದಿಗಳು. ಆದರೆ ಇದಕ್ಕೆಲ್ಲಾ ಕಾರಣವೇನು? ಯಾಕೆ ಇತಿಹಾಸ ಮತ್ತೆ ಮತ್ತೆ ಪುನರಾವರ್ತಿಸುತ್ತದೆ? "ಇತಿಹಾಸವನ್ನು ಮರೆತವರು ಮತ್ತೆ ಚರಿತ್ರೆಯ ಪುನಾರವರ್ತನೆಗೆ ಕಾರಣರಾಗುತ್ತಾರೆ.. ನೆನಪಿರಲಿ.. ನೆನಪಿರಲಿ.." ಎಂದು ಇಸ್ರೇಲಿನ "ಯಾದ್ ವಶೇಮ್" ಮ್ಯೂಸಿಯಂನ ಗರುಡಗಂಬದಲ್ಲಿ ಕೆತ್ತಿದ ಈ ಸಾಲು ಎಷ್ಟು ಪರಮಸತ್ಯವೆಂದು ಅನಿಸುತ್ತದೆ.

ತಮ್ಮ ಇತಿಹಾಸವನ್ನೇ ಮರೆತು ಇಸ್ರೇಲ್ ಈಗ ಸದಾ ಕಾಲ ಕದನದಲ್ಲೇ ತೊಡಗಿದೆ. ಶಾಂತಿಗಾಗಿ ಪರಿತಪಿಸಿದ ಅದೇ ಜನ ಇಂದು ಪ್ರತಿ ನಿಮಿಷವೂ ಯುದ್ಧದ ಭೀತಿಯಲ್ಲಿ, ಅಶಾಂತಿಯ ನಡುವೆಯೇ ಜೀವಿಸುತ್ತಿದ್ದಾರೆ. ಒಂದು ಕಡೆ ಲೇಖಕಿ ಹ್ಯಾನಾಳ ಮೂಲಕ ಹೀಗೆ ಕೇಳುತ್ತಾರೆ.... "ತುಂಡು ನೆಲ ಗಾಜಾವನ್ನು ಪ್ಯಾಲಿಸ್ಟೈನ್‌ರಿಗೇ ಬಿಟ್ಟುಕೊಟ್ಟು ಇಡಿಯ ಇಸ್ರೇಲ್ ಅನ್ನು ಶಾಂತಿಯಿಂದ ಜೀವಿಸಲು ಬಿಡಬಹುದಲ್ಲಾ" ಎಂದು. ಇದು ಹೌದು..ನಿಜ... ಎಂದೆನಿಸಿದರೂ ನನ್ನ ಮನದೊಳಗೊಂದು ಪ್ರಶ್ನೆ ಮೂಡುತ್ತದೆ. ಇಂದು ನಾವೂ ಅದೇ ಕೆಲಸವನ್ನು ಮಾಡಿಯೂ ಏಕೆ ಶಾಂತಿಯಿಂದ ಯಾವುದೇ ಭಯೋತ್ಪಾದನೆಯ ಭೀತಿಯಿಂದ ಜೀವಿಸುತ್ತಿಲ್ಲ? ಗಾಂಧಿಜಿ ಅಂದು ತೆಗೆದುಕೊಂಡ ನಿರ್ಧಾರ ಸರಿಯೆಂದೆಣಿಸಿದರೆ, ಪಾಕಿಸ್ತಾನದ ಹುಟ್ಟು ಚಿರ ಶಾಂತಿ, ಸ್ನೇಹದ ಬಾಂಧವ್ಯಕ್ಕಾಗಿಯೇ ಇತ್ತೆಂದು ಸಮರ್ಥಿಸಿಕೊಂಡರೆ, ಇಂದಿನ ಭಾರತದ/ಭಾರತೀಯರ ಸ್ಥಿತಿಯೇ ಪರಿಹಾಸಕ್ಕೆ ಒಳಗಾಗದೇ? ಕುಟಿಲ ನೀತಿಯ ಇಂಗ್ಲೀಷರೇನೋ ಇಬ್ಭಾಗ ಮಾಡಿದರು. ಸೌಹಾರ್ದತೆಯ ಸಂಕೇತವಾಗಿ ಭಾರತವೂ ಸುಮ್ಮನಾಯಿತು. ಆದರೆ ಅದೇ ತುಂಡು ನೆಲ ಪಡೆದುಕೊಂಡ ಪಾಕಿಸ್ತಾನ ಮಾಡಿದ್ದೇನು? ಮಾಡುತ್ತಿರುವುದೇನು? ಇಸ್ರೇಲ್ ಕೂಡಾ ಈ ಭೀತಿಯಿಂದಲೇ ಎಲ್ಲವನ್ನು ತನ್ನೊಳಗೇ ಎಳೆದುಕೊಳ್ಳಲು ಹೊರಟಿರಬಾರದೇಕೆ? ಭವಿಷ್ಯದ ಚಿಂತೆ ಭೂತದ ಕರಿ ನೆನಪನ್ನೇ ಅಳಿಸಿಹಾಕಿರ ಬಾರದೇಕೆ? "ಕಾಲದ ಕಡಲಲಿ ನೆನಪಿನ ದೋಣಿಯ ತೇಲಿಸಿದವರಿಲ್ಲ..." ಅಲ್ಲವೇ?

ಆದರೆ ಹ್ಯಾನಾಳ ಒಂದು ಮಾತಿಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. "ಯುದ್ಧದಲ್ಲಿ ಸೋತವರು ಗೆದ್ದವರು ಎಂಬವರಿಲ್ಲ. ಇಲ್ಲಿ ಗೆದ್ದವರೂ ಸೋಲುತ್ತಾರೆ." ನಿಜ. ಪ್ರೀತಿ, ಸ್ನೇಹವೂ ಇದೇ ತರಹವೇ. ಇಲ್ಲಿಯೂ ಸೋಲು ಗೆಲುವೆಂಬುದಿಲ್ಲ. ಆದರೆ ಇಲ್ಲಿ ಮಾತ್ರ ಸೋತವರೂ ಗೆದ್ದಿರುತ್ತಾರೆ. ಸೋತರೂ ಗೆಲ್ಲುವ ಈ ಪ್ರೀತಿಯನ್ನು ಹೊರಹಾಕಿ ಗೆದ್ದರೂ ಸೋಲುವ ಯುದ್ಧವನ್ನು, ದ್ವೇಷವನ್ನು ಮನುಷ್ಯ ಏಕೆ ಅಪ್ಪಿಕೊಳ್ಳುತ್ತಾನೋ?

ಯುದ್ಧ ಹುಟ್ಟುವುದು ಕೆಲವು ನರರೂಪಿ ರಾಕ್ಷಸರ ಹೃದಯದಲ್ಲಿ ಎನ್ನುತ್ತಾಳೆ ಹ್ಯಾನಾ.. ಒಪ್ಪುವೆ. ಆದರೆ ನನ್ನ ಪ್ರಕಾರ ಇದಕ್ಕೆ ಪ್ರಮುಖ ಕಾರಣ ಮೂರು. ಅಹಂ, ಸ್ವಾರ್ಥದ ಪರಮಾವಧಿ ಹಾಗೂ ಕೊಳಕು ರಾಜಕೀಯ. ಹಿಟ್ಲರ್‌ನ ಹುಚ್ಚಿಗೂ ಆತನ ಪಾಶವೀ ಕೃತ್ಯಕ್ಕೂ ಇದೇ ಕಾರಣವೆನ್ನುತ್ತದೆ ಚರಿತ್ರೆ ಹಾಗೂ ಈ ಕಾದಂಬರಿ. ಜಗತ್ತು, ಆ ದೇಶದ ಜನರೂ, ಅಮಾಯಕ ಯಹೂದಿಯರ ಬಲಿಗೆ ಮೂಕ ಪ್ರೇಕ್ಷಕರಾಗಿರಲೂ ಈ "ಸ್ವಯಂ ಲಾಭ"ವೇ ಕಾರಣವೆನ್ನುತ್ತಾಳೆ ಹ್ಯಾನಾ. ಅದು ನಿಜ ಕೂಡ. ಶ್ರೀಮಂತ ಯಹೂದಿಗಳ ಪರ್ಯಾವಸಾನದಿಂದ ಅವರ ಹಣ, ಆಸ್ತಿ ಎಲ್ಲಾ ಸಿಗುವುದು ಯಾರಿಗೆ ಹೇಳಿ? ಈ ಒಂದು ಲಾಭಕೋರತನವೇ ಬಹುಶಃ ಅಂದು ಅಲ್ಲಿಯ ಆರ್ಯ ಜನರು ನಿಂತು ನೋಡಲು ಸಾಧ್ಯವಾಗಿದ್ದು. ತಮ್ಮ ಬುಡಕ್ಕೆ ಬಂದಾಗ, ಜಗತ್ತನ್ನೇ ಆಳುವ ಭ್ರಮೆಗೆ ಹಿಟ್ಲರ್ ಒಳಗಾದಾಗ ಅಮೇರಿಕಾ, ಬ್ರಿಟನ್ ಮುಂತಾದ ಬಲಿಷ್ಠರು ಎದುರು ನಿಂತಿದ್ದು. ಈ ಸರದಿಗಾಗಿ ಕಾಯುವ ಅಗತ್ಯವಿತ್ತೆ? ಆರು ಮಿಲಿಯ ಯಹೂದಿಗಳ ಅಂತ್ಯಕ್ಕೆ ತಾಳ್ಮೆಯ ಲೇಪನ ಬೇಕಿತ್ತೆ? ನರರೂಪಿ ರಾಕ್ಷಸರ ಅಟ್ಟಹಾಸಕ್ಕೆ ಮನುಷ್ಯತ್ವವನ್ನೇ ಕಳೆದುಕೊಂಡು ಲಾಭಕ್ಕಾಗಿ ಸುಮ್ಮನಿದ್ದ ಅಂದಿನ ಜರ್ಮನರನ್ನು ಇತಿಹಾಸ ಕ್ಷಮಿಸಿದರೂ ಅವರ ಅಂತರಾತ್ಮ ಕ್ಷಮಿಸಿರಬಹುದೇ? ಊಹೂಂ ಇಂತಹ ಪ್ರಶ್ನೆಗಳಿಗೆ ಉತ್ತರ ನಾವೇ ಕಂಡು ಹಿಡಿದುಕೊಳ್ಳಬೇಕಿದೆ.

ಮುಂದೆ ಎಂದೂ ಹಿಟ್ಲರ್ ನಮ್ಮೊಳಗೆ, ನಮ್ಮ ನಡುವೆ, ನಮ್ಮಿಂದ ದೂರವೇ ಆಗಿರಲಿ ಹುಟ್ಟದಿರುವಂತೆ ನೋಡಬೇಕು. ಆತನ ದಮನಕ್ಕೆ ನಮ್ಮ ಎದೆಯಗೂಡನ್ನೆ ಬಗೆದು ಅದರೊಳಗೆ ಬಿತ್ತಿರುವ ನೆಪಮಾತ್ರದ ದ್ವೇಷವನ್ನೇ ಕೆಡವಿಹಾಕಬೇಕು. ಹೊಸ "ಮಾಯಾದೀಪವನ್ನು" ಬೆಳಗಿದರೆ ಮಾತ್ರ ಸ್ವಾರ್ಥದ ಕತ್ತಲೆ ನಮ್ಮ ಮನದ ಮೂಲೆಯಿಂದಲೂ ಮರೆಯಾಗಬಹುದು. "ಇತಿಹಾಸ ತಿಳಿದರಬೇಕು ಅಷ್ಟೇ. ಆದರೆ ಅದೇ ಆದರ್ಶವಾಗಿರಬಾರದು" ಎಂಬ ಸುಂದರ ಸಂದೇಶವನ್ನು ನೀಡುವ ಈ ಕಾದಂಬರಿ ಇಸ್ಲಾಂ, ಯಹೂದಿ, ಕ್ರಿಶ್ಚನ್ - ಈ ಮೂರು ಧರ್ಮಗಳೂ ಹೇಗೆ ಒಂದು ಜೆರೂಸಲೇಂ‌ನೊಳಗೇ ಬೆಸೆದಿವೆ.. ಯಾವ ರೀತಿ ಈ ಮೂರು ಧರ್ಮಗಳು ಒಂದೇ ಹಳೆಯ ಒಡಂಬಡಿಕೆಯಡಿ ನೆಲೆನಿಂತಿವೆ ಎನ್ನು ಸತ್ಯವನ್ನೂ ಕಾಣಿಸುತ್ತದೆ. ಈವರೆಗೆ ನಾವು ಓದಿದರದ, ತಿಳಿದಿರದ ಹಲವಾರು ವಿಷಯಗಳ ಕುರಿತು, ನಿಷ್ಪಕ್ಷ್ಯಪಾತವಾಗಿ ಹೊಸ ಬೆಳಕನ್ನು, ಆಯಾಮವನ್ನು ನೀಡಿದ್ದಾರೆ ಲೇಖಕಿ.

"ನಮ್ಮ ನಡುವೆ ಎಲ್ಲಿ ಕೂಡ ಹುಟ್ಟಿಬಿಡಬಲ್ಲ, ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್‌ನನ್ನು ತಡೆಹಿಡಿವ ಹೊಣೆ ನಮ್ಮದು" ಎನ್ನುವ ಸುಂದರ, ಅಪೂರ್ವ ಸಂದೇಶವನ್ನು ನೀಡುವ "ಯಾದ್ ವಶೇಮ್" ಎಲ್ಲರೂ ಓದಬೇಕಾದ, ಸಂಗ್ರಹಕ್ಕೆ ಯೋಗ್ಯವಾದ ಅತ್ಯುತ್ತಮ ಪುಸ್ತಕ ಎನ್ನಲು ಯಾವುದೇ ಸಂಶಯವಿಲ್ಲ.

- ತೇಜಸ್ವಿನಿ ಹೆಗಡೆ

13 ಕಾಮೆಂಟ್‌ಗಳು:

sunaath ಹೇಳಿದರು...

ಒಂದು ಉತ್ತಮ ಕೃತಿಯನ್ನು ಉತ್ತಮವಾಗಿ ಪರಿಚಯ ಮಾಡಿಕೊಟ್ಟಿದ್ದೀರಿ. ಓದುಗರನ್ನು ನಿಮ್ಮ ಲೇಖನವು inspire ಮಾಡುವದರಲ್ಲಿ ಸಂದೇಹವಿಲ್ಲ.

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ತೇಜಸ್ವಿನಿಯವರೆ,
ಇದೊಂದು ಉತ್ತಮ ಕೃತಿ. ಇದನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಈ ಪುಸ್ತಕವನ್ನು ಓದಿದ್ದೇನೆ. ಹಾಗಾಗಿ ನಿಮ್ಮ ವಿವರಣೆ ಇನ್ನಷ್ಟು ಇಷ್ಟವಾಯ್ತು. ಪುಸ್ತಕ ಮತ್ತೆ ಮತ್ತೆ ನೆನಪಾಯ್ತು. ಥ್ಯಾಂಕ್ಸ್.

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿ ಅವರೆ,

ಯಾದ್ ವಶೇಮ್‌ - ನೇಮಿಚಂದ್ರರ ಕಾದಂಬರಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಹ್ಯಾನಾಳ ಮುಖಾಂತರ ಕೇಳಲಾಗಿರುವ ಪ್ರಶ್ನೆಗಳು ಎಂದೆಂದಿಗೂ ಪ್ರಸ್ತುತವಾಗಿರುವಂತಹುದು. ಇಷ್ಟನ್ನು ಓದಿದಾಗಲೇ ಕಾದಂಬರಿಯನ್ನು ಪೂರ್ತಿ ಓದಬೇಕೆನ್ನಿಸಿತು.

ನಿಮ್ಮ ಈ ಲೇಖನ ಓದುತ್ತಿರುವಾಗ, ಇದು ಕಾಕತಾಳೀಯವೋ ಏನೋ ತಿಳಿಯದು. ಇದೇ ಯುದ್ಧದ ವಿಚಾರವನ್ನು, ಅಲ್ಲಿ ಒಬ್ಬ ಸಿಪಾಯಿಯ ಕಥೆಯ ಸಾರಾಂಶವನ್ನು ನಿನ್ನೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆ.

ಉತ್ತಮ ಕಾದಂಬರಿಯನ್ನು ಪರಿಚಯಿಸಿದ್ದೀರಿ. ಪುಸ್ತಕ ಪ್ರೀತಿ ಹಂಚುತ್ತಿದ್ದೀರಿ. ಧನ್ಯವಾದಗಳು.

ಸ್ನೇಹದಿಂದ,
ಚಂದ್ರು

umesh desai ಹೇಳಿದರು...

ಮೇಡಮ್ ಪುಸ್ತಕ ಪರಿಚಯ ಚೆನ್ನಾಗಿದೆ ಇಸ್ರೇಲ್ ನನ್ನ ಪ್ರಕಾರ ತಪ್ಪು ಮಾಡುತ್ತಿಲ್ಲ ಸ್ವಾತಂತ್ರ್ಯಾನಂತರ ನಾವು ಇಸ್ರೇಲಿಗಳ
ಸ್ನೇಹ ಸಂಪಾದಿಸಿದ್ದರೆ ಪಾಕಿಸ್ತಾನದ ತಲೆನೋವುಇರುತ್ತಲೆ ಇರಲಿಲ್ಲ. ನೇಮಿಚಂದ್ರರ ಪುಸ್ತಕ ಇಲ್ಲ ಓದಲು ಪ್ರಯತ್ನಿಸುವೆ
ನಿಮಗೆ ಬಿದುವಿದ್ದಾಗ usdesai.blogspot.comಗೂ ಬನ್ನಿ...

ಜಲನಯನ ಹೇಳಿದರು...

ಮತ್ತೊಂದು ಸತ್ವಭರಿತ ಕೃತಿಯ ಪರಿಚಯ ಬಹು ಸಮರ್ಥವಾಗಿ ಪ್ರಸ್ತುತಪಡಿಸಿದ್ದೀರಿ..
ಇದು ನೈಜ ಘಟನೆಯಹಿಂದಿನ ಕಥೆಯೇ ಅಥವಾ ಕೆಲವು ಘಟನೆಗಳ ಸುತ್ತ ಹೆಣೆದ ಕಥೆಯೋ? ಗೊತ್ತಾಗಲಿಲ್ಲ
"ಮನುಷ್ಯನನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಚರಿತ್ರೆಗಿಂತ ಒಂದುಗೂಡಿಸುವ ಚರಿತ್ರೆಯೇ ಮಹತ್ವದ್ದು..."
ಇದು ಯಾವ ಕಾಲಕೂ ಮನದಟ್ಟಾಗಿ - ಉಳಿಯಬೇಕಾದ ಮಾತು. ನನಗೆ ಸಿಖ್ ಹತ್ಯೆಗಳನ್ನು ಮಾಡಿದ ಮಾನವ-ರೂಪದ ನಾಜ಼ಿಗಳು ನಮ್ಮಲ್ಲಿದ್ದುದೂ ಆ ಘಟನೆಗಳನ್ನು ಓದಿದ್ದು, ಅಷ್ಟೇ ಏಕೆ ನಮ್ಮ ಸ್ನೇಹಿತನೊಬ್ಬ ತನ್ನ ಪಟಕಾ ತೆಗೆದು ಕೂದಲು ಕಟ್ ಮಾಡಿಸಿ ನಮ್ಮಂತೆ ಕ್ರಾಪ್ ಮಾಡಿದ್ದು ನೆನಪಿದೆ... ಇನ್ನು ಗುಜರಾತ್ ಹತ್ಯಾಕಾಂಡ..ಉಫ಼್...ಎಲ್ಲಿಲ್ಲ?? ಈ ಅಟ್ಟಹಾಸಬೀರುವ ಜನ??

ಬಿಸಿಲ ಹನಿ ಹೇಳಿದರು...

ತೇಜಸ್ವಿನಿಯವರೇ.
ನೇಮಿಚಂದ್ರರ ಕಥೆಗಳೇ ಹಾಗೆ. ಸತ್ಯದ ಹೊಟ್ಟೆಯನ್ನು ಬಗೆದು ಶೋಧಿಸಿ ಹೊರತೆಗೆದ ಕಥೆಗಳವು. ಅವರ ಯಾವುದೇ ಕೃತಿಯನ್ನು ನೋಡಿದರೆ ಅದರ ಹಿಂದೆ ಅವರ ಪರಿಶ್ರಮ ಎದ್ದುಕಾಣುತ್ತದೆ. ಅವರ ಎಲ್ಲ ಕೃತಿಗಳನ್ನು ಓದಿದ್ದೇನೆ ಎರಡನ್ನು ಬಿಟ್ಟು; ಒಂದು ಈ ಕೃತಿ. ಮತ್ತೊಂದು ‘ಸಾವಿರ ಸಾವಿರ ನೆನಪುಗಳು’ (ಹೆಸರು ಸರಿಯಾಗಿ ನೆನಪಿಲ್ಲ).
ಇದೀಗ ಈ ಕೃತಿಯನ್ನು ಓದಿದಷ್ಟೆ ಸಂತೋಷವಾಗಿದೆ ನಿಮ್ಮ ವಿಮರ್ಶೆ ಓದಿದ ಮೇಲೆ. “ನಡುವೆ ಎಲ್ಲಿ ಕೂಡ ಹುಟ್ಟಿಬಿಡಬಲ್ಲ, ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್‌ನನ್ನು ತಡೆಹಿಡಿವ ಹೊಣೆ ನಮ್ಮದು” ನಿಜ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಕಾದಂಬರಿಯನ್ನು ಅಚ್ಚುಕಟ್ಟಗಿ ಪರಿಚಯಸಿದ್ದಕ್ಕೆ ಅಭಿನಂದನೆಗಳು.

ವಿ.ರಾ.ಹೆ. ಹೇಳಿದರು...

what a coincidance !

nAnu kUDa idE pustakada bagge baredidde nanna blognalli. nanagU bahaLa ishtavAda pustaka idu. neevu barediruva pustaka parichaya bahaLa chennagide. thanx

ಸುಧೇಶ್ ಶೆಟ್ಟಿ ಹೇಳಿದರು...

ತೇಜಕ್ಕ....

ವಿಕಾಸ್ ಅವರ ಬ್ಲಾಗಿನಲ್ಲಿ ಈ ಪುಸ್ತಕದ ಬಗ್ಗೆ ಓದಿದಾಗಲೇ ತು೦ಬಾ ಅನಿಸಿತು ಈ ಪುಸ್ತಕ ಓದಬೇಕೆ೦ದು... ಈಗ ನಿಮ್ಮ ಬ್ಲಾಗಿನಲ್ಲಿ ಈ ಪುಸ್ತಕದ ಬಗೆಗಿನ ಮಾಹಿತಿ ಓದಿ ಇದನ್ನು ಓದಲೇಬೇಕೆ೦ದು ಅನಿಸಿದೆ... ನೇಮಿಚ೦ದ್ರ ಅವರು ತು೦ಬಾ ಚೆನ್ನಾಗಿ ಬರೆಯುತ್ತಾರೆ ಅ೦ತ ಎಲ್ಲರೂ ಹೇಳುತ್ತಾರೆ.. ಆದರೆ ನಾನು ಅವರ ಯಾವ ಪುಸ್ತಕವನ್ನೂ ಓದಿಲ್ಲ.. ಮೊನ್ನೆ "ನೇಮಿಚ೦ದ್ರರ ಸಣ್ಣ ಕಥೆಗಳು" ಎ೦ಬ ದೊಡ್ಡ ಪುಸ್ತಕವನ್ನು ತ೦ದಿದ್ದೇನೆ... ಅದನ್ನು ಓದಿ ಮುಗಿಸಿದ ಮೇಲೆ ನ೦ತರ "ಯಾದ್ ವಶೇಮ್..."

ನಿಮ್ಮ ಈ ಅ೦ಕಣ ತು೦ಬಾ ಇಷ್ಟ ಆಗುತ್ತಿದೆ...

Unknown ಹೇಳಿದರು...

"ನಿಮ್ಮ ಈ ಅ೦ಕಣ ತು೦ಬಾ ಇಷ್ಟ ಆಗುತ್ತಿದೆ"

ಪುರುಷೋತ್ತಮ ಬಿಳಿಮಲೆ ಹೇಳಿದರು...

I borned at Panja, went to school at Guttigar, hence Bettada jiva is closest novel to my body and mind

Jayalaxmi ಹೇಳಿದರು...

ಚೆನ್ನಾಗಿ ವಿಶ್ಲೇಷಿಸಿದ್ದೀರಿ ತೇಜು.

Swarna ಹೇಳಿದರು...

ಈ ಕೃತಿಯನ್ನ ಬಹುಶಃ ನಾನು ೨೦೦೮ರ ಸುಮಾರಿಗೆ ಓದಿದ್ದೆ.
ಮತ್ತೆ ಓದಬೇಕೆನಿಸುವಂತೆ ಮಾಡಿದಿರಿ.
ಧನ್ಯವಾದಗಳು
ಸ್ವರ್ಣಾ

Unknown ಹೇಳಿದರು...

ಪುಸ್ತಕ ಓದಿದ ಅನುಭವವಾಯಿತು.... ಧನ್ಯವಾದಗಳು.