ಜೀವನ ಪ್ರೀತಿಯ ಮಳೆ ಸುರಿವ ಬೆಟ್ಟದ ಜೀವ...
"ಬಾನಿನಲ್ಲಿ ಸೂರ್ಯನು ತುಸುವಾಗಿ ಮೇಲಕ್ಕೇರುತ್ತಾನೆ- ಎಂದಂತೆ ಒಮ್ಮೆಗೇ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗಲಿನ ಹಸುರನ್ನೆಲ್ಲ ಬೆಳಕಿಂದ ತೊಯ್ಯಿಸಿಬಿಟ್ಟವು! ಆ ಅಪೂರ್ವದ ನೋಟವು ಎಂದೂ ಮರೆಯುವಂಥದಲ್ಲ. ಆ ತನಕ- ಕಠಿಣವೂ ನಿರ್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು. ನೋಡುತ್ತಾ ನಿಂತಂತೆ, ಕೆಂಪಡರಿದ ಬಾನಿನ ಕಣ್ಣು ಕ್ರೂರವಾಗುತ್ತ ಬೆಂದ ಕಬ್ಬಿಣವನ್ನು ಕರಗಿಸಲು ಬಂದಂತೆ ಕಾಣಿಸಿತು. ಆ ಬಾನಿನ ಮುಂದೆ, ಬೆಟ್ಟವು ಗಂಡುಗಲಿಯಂತೆ ಈ ತನಕ ಕಂಡುದು, ನಮ್ರತೆಯ ಮುದ್ದೆಯಾದ ಹೆಣ್ಣಾಯಿತು. ಹಸುರು ಕವಚದ ಮೇಲೆ ನೀರ ಸೀರೆ ತೊಟ್ಟು ಬೇಟಕ್ಕೆ ನಿಂತ ಅಂಗನೆಯಾಯಿತು, ಆದರೆ ದಿಗಂಗನೆಯ ಧಿಮಾಕಿನ ಮುಂದೆ ಬೆಟ್ಟದಂಗನೆ, ಅತ್ತೆಯ ಮುಂದೆ ನಾಚಿಕೊಂಡು ನಿಂತ ಸೊಸೆಯಾದಳು."
-ಶಿವರಾಮ ಕಾರಂತರ "ಬೆಟ್ಟದ ಜೀವ" ಕಾದಂಬರಿಯಲ್ಲಿ ಒಂದು ಕಡೆ ಬರುವ ಈ ಮೇಲಿನ ಪಕೃತಿ ವರ್ಣನೆಯನ್ನೋದುತ್ತಾ ಮನಸ್ಸು ಮನೋವೇಗದಲ್ಲಿ ಆ ಬೆಟ್ಟದ ತುದಿಯನ್ನೇರಿದ್ದಂತೂ ಸುಳ್ಳಲ್ಲ. ಆದರೆ ಎಷ್ಟು ಪ್ರಯತ್ನಿಸಿದರೂ ಅವರು ಕಂಡ ಆ ಅಪೂರ್ವ ಚೆಲುವನ್ನು ಕಲ್ಪಿಸಿಕೊಳ್ಳಲೂ ಆಗಲಿಲ್ಲ. ಕಾರಣ ನಿರ್ಜೀವ ಯಂತ್ರಗಳು ಕಪ್ಪು ಹೊಗೆ ಚೆಲ್ಲಿ ತಿಳಿ ನೀಲ ಬಾನ ತುಂಬೆಲ್ಲಾ ತುಂಬಿರುವ ಮಲಿನ ಮುಸುಕೊಳಗೆ ಗುದ್ದಾಡುವ ನಾವು ಅಂತಹ ಒಂದು ನಿಶ್ಕಲ್ಮಶ, ಅಲೌಕಿಕ ಅನುಭೂತಿಯನ್ನು ಕಲ್ಪಿಸುವುದಾದರೂ ಹೇಗೆ?!!
ಮೊದಲಿನಿಂದಲೂ ನನಗೆ ಕಾರಂತರ ಕಾದಂಬರಿಗಳೆಂದರೆ ಬಲು ಅಚ್ಚುಮೆಚ್ಚು. ಕಾರಣ ಇವರ ಹೆಚ್ಚಿನ ಕೃತಿಗಳಲ್ಲೆಲ್ಲೂ ಕ್ಲಿಷ್ಟಕರ ಹಾಗೂ ಸಂಕೀರ್ಣ ಭಾಷಾ ಪ್ರಯೋಗಗಳು ತೀರ್ಆ ಕಡಿಮೆಯಾಗಿರುವುದು. ಅಂತೆಯೇ ಸರಳ, ಹೃದ್ಯ ಹಾಗೂ ಬಹು ಬೇಗನೆ ಮನಮುಟ್ಟುವ, ಅರ್ಥೈಸಿಕೊಳ್ಳಲು ಸುಲಭವಾಗಿರುವಂತಹ ಚಿತ್ರಣ ಹಾಗೂ ಭಾಷಾ ನಿರೂಪಣೆಯನ್ನು ಇವರ ಕೃತಿಯುದ್ದಕ್ಕೂ ಕಾಣಬಹುದು. ಇವರ "ಮೂಕಜ್ಜಿಯ ಕನಸು" ಕಾದಂಬರಿಯಂತೂ ಎಷ್ಟು ಸಲ ಓದಿದರೂ ಸಾಲದೆನಿಸುವಂತಹ ಮೇರು ಕೃತಿ. ಅದರ ಬಗ್ಗೆ ಬರೆಯುವುದೂ ಬಹು ಕಷ್ಟವೇ ಸರಿ. ಹಾಗಾಗಿ ಆ ಪ್ರಯತ್ನಕ್ಕೆ ಮೊದಲು ಅವರ ಇನ್ನೊಂದು ಮೇರು ಕೃತಿಯಾದ ಬೆಟ್ಟದ ಜೀವದೊಳಗಿನ ಜೀವನ ಪ್ರೀತಿಯನ್ನೂ, ಅದರೊಳಗೆ ಹದವಾಗಿ ಮಿಳಿತವಾಗಿರುವ ಮಾನವ ಸಂಬಂಧದ ಪರಿಶುದ್ಧತೆಯನ್ನೂ ನಿಮ್ಮ ಮುಂದಿರಿಸುವ ಅಲ್ಪ ಯತ್ನಕ್ಕೆ ಕೈಹಾಕಿದ್ದೇನೆ. ಈ ಮೊದಲೇ ನೀವೂ ಈ ಕೃತಿಯನ್ನೋದಿದವರಾಗಿದ್ದರೆ ದಯಮಾಡಿ ನನ್ನೊಂದಿಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ. ಪುಸ್ತಕ ಪ್ರೀತಿ ಹಂಚುವುದು, ಅದರೊಡನೆ ಜೀವನ ಪ್ರೀತಿಯನ್ನು ಬೆಸೆಯುವುದು "ಒಳಗೊಂದು ಕಿರುನೋಟದ" ಮುಖ್ಯೋದ್ದೇಶವಾಗಿದೆ.
"ಬೆಟ್ಟದ ಜೀವ" ಮೊದಲು ಮುದ್ರಿತಗೊಂಡಿದ್ದು ೧೯೪೩ರಲ್ಲಿ. ಧಾರವಾಡದ ಮನೋಹರ ಗ್ರಂಥಮಾಲೆ ಪ್ರಥಮ ಬಾರಿಗೆ ಈ ಕಾದಂಬರಿಯನ್ನು ಮುದ್ರಿಸಿದ್ದು, ತದನಂತರ ಬಹುಶಃ ೩ ಬಾರಿ ಮರು ಮುದ್ರಣಗೊಂಡಿದೆ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಬಲು ಕಡಿಮೆ. ಹಾಗಾಗಿ ನೆನಪಲ್ಲಿ ಉಳಿಯುವುದೂ ಸುಲಭ. ಕಥಾ ನಾಯಕ ಗೋಪಾಲಯ್ಯ, ಅವರ ಧರ್ಮ ಪತ್ನಿಯಾದ ಶಂಕರಮ್ಮ, ಸಾಕು ಮಗ ನಾರಾಯಣ, ಆತನ ಪತ್ನಿ ಲಕ್ಷ್ಮಿ, ಇವರಿಬ್ಬರ ಮಕ್ಕಳಾದ ಸುಬ್ಬರಾಯ ಹಾಗೂ ಸಾವಿತ್ರಿ, ಬಾಲ್ಯದಲ್ಲೇ ತೀರಿಹೋದ ಗೋಪಾಲಯ್ಯ ದಂಪತಿಗಳ ಮಗಳು ವಾಗ್ದೇವಿ, ಆಳುಗಳಾದ ಬಟ್ಯ, ಮಾನ ಗೌಡ, ಕೆಂಚ ಹಾಗೂ ಕಥೆಯುದ್ದಕ್ಕೂ ಹರಿವ ಕಥಾ ನಿರೂಪಕನಾದ ಕಾರಂತರು ಹಾಗೂ ಕಥಾ ವಸ್ತುವಿಗೆ ಪ್ರಮುಖ ಕಾರಣಕರ್ತನಾದ ಓಡಿಹೋದ ಗೋಪಾಲಯ್ಯನವರ ಕುಲಪುತ್ರ ಶಂಭು. ಈ ಎಲ್ಲಾ ಪಾತ್ರಗಳನ್ನೂ ಕೇವಲ ೧೫೦ ಪುಟಗಳೊಳಗೇ ಹಿಡಿದಿಟ್ಟಿದ್ದಾರೆ ಕಾರಂತರು.
"ಬೆಟ್ಟದ ಜೀವ" ಉಸಿರಾಡುವುದು ಸುಬ್ರಹ್ಮಣ್ಯ ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ....ಅಲ್ಲಿನ ದಟ್ಟಡವಿ, ಗುಡ್ಡ, ಬೆಟ್ಟ, ಕುಮಾರ ಪರ್ವತದ ತಪ್ಪಲಿನ ಪ್ರದೇಶಗಳಲ್ಲಿ. ಗುತ್ತಿಗಾರು, ಬೆಳ್ಳಾರೆ, ಮುಂಡಾಜೆ, ಪಾಂಜ, ವಿಟ್ಲ ಮುಂತಾದ ತಾವುಗಳ ಕಿರು ಪರಿಚಯ ಕಥೆಯ ಒಳಗೇ ನಮಗಾಗುತ್ತದೆ. ಅಂದಿನ ಕಾಲದ ಅಲ್ಲಿಯ ಹಳ್ಳಿ ಜನರ ಮನೋಭಾವ, ಉದಾರತೆ, ನಿಃಸ್ವಾರ್ಥತೆ, ಮುಗ್ಧತೆ, ಮಾನವೀಯ ಸಂಬಂಧಗಳಿಗೆ ಅವರು ಕೊಡುತ್ತಿದ್ದ ಬೆಲೆ ಎಲ್ಲವುದರ ದರ್ಶನವೂ ಈ ಕೃತಿಯನ್ನೋದುವಾಗ ನಮಗಾಗುತ್ತದೆ. ಜೀವನ ಪ್ರೀತಿ ಎಂದರೇನು? ಬದುಕುವುದು ಎಂದರೆ ಹೇಗೆ? ನಾವು ನಮ್ಮ ಬದುಕನ್ನು ಹೇಗೆ ಸಾರ್ಥಕ್ಯಗೊಳಿಸಬಹುದು ಎಂಬುದನ್ನು ಕಾರಂತರು ತಮ್ಮ ಈ ಪುಟ್ಟ ಕೃತಿಯಲ್ಲಿ ಸವಿವರವಾಗಿ, ಬಲು ಸುಂದರವಾಗಿ ತಿಳಿಸಿದ್ದಾರೆ.
ಸಂಕ್ಷಿಪ್ತವಾಗಿ ಕಥಾ ಸಾರವನ್ನು ಹೇಳಬೇಕೆಂದರೆ - ತಮ್ಮ ಕಳೆದು ಹೋದ ದನವೊಂದನ್ನರಸುತ್ತಾ, ಯಾರ ಯಾರನ್ನೋ ಕೇಳುತ್ತಾ ಪುತ್ತೂರಿನಿಂದ ಹೊರಟ ಕಥಾ ನಿರೂಪಕ(ಕಾರಂತರು) ದಾರಿ ತಪ್ಪಿ ಸುಬ್ರಹ್ಮಣ್ಯಕ್ಕೆ ಬಂದು, ಅಲ್ಲಿಂದ ಪಂಜಕ್ಕೆ ಹೋಗುವ ಬದಲು ದಾರಿತಪ್ಪಿ ಗುತ್ತಿಗಾರಿನ ಕಡೆ ನಡೆಯುತ್ತಾರೆ. ಸುತ್ತಲೂ ದಟ್ಟಡವಿ, ಕಾಣದ ಊರು, ಗುರಿಯಿಲ್ಲ ದಾರಿಯಿಂದ ಭಯಗೊಂಡು ಕೆಂಗೆಡುತ್ತಾರೆ. ಆದರೆ ಆಗ ಅದೇ ದಾರಿಯಲ್ಲಿ ತನ್ನೂರಾದ ಗುತ್ತಿಗಾರಿಗೆ ಹೋಗುತ್ತಿದ್ದ ದೇರಣ್ಣ ಗೌಡನ ಸಹಾಯದಿಂದ ಆತನ ಧಣಿಯಾದ ಗೋಪಾಲಯ್ಯನ ಮನೆಗೆ ಆಶ್ರಯಕೋರಿ ಬರುತ್ತಾರೆ. ಆಗಿನ ಕಾಲದಲ್ಲಿ ಈಗಿನಂತೆ ನಿಮಿಷಕ್ಕೋಂದು ಬಸ್ಸಾಗಲೀ, ಕಾರು, ಜೀಪುಗಳ ವ್ಯವಸ್ಥೆಯಾಗಲೀ ಇರಲಿಲ್ಲ. ಹಾಗಾಗಿ ಕಲ್ನಡಿಗೆಯಲ್ಲೇ ಹುಡುಕುತ್ತಾ ಹೊರಟಿದ್ದರು. ನಡುವೆ ದಾರಿ ತಪ್ಪಿ ದಿಕ್ಕು ಗಾಣದೆ ಅಲೆದಲೆದು ಬಳಲಿ ಬೆಂಡಾಗಿ, ವಿಶ್ರಮಿಸಿ ಕೊಂಡು ಮುಂದೆ ಪಯಣಿಸಲು ಅವರಿಗೊಂದು ತಾವು ಬೇಕಿತ್ತು. ರಾತ್ರಿಯ ನೀರವತೆಗೆ ಹೆದರಿದ್ದ ಅವರನ್ನು ಬಲು ಪ್ರೀತ್ಯಾದಾರಗಳೊಂದಿಗೆ ಬರ ಮಾಡಿಕೊಂಡರು ಗೋಪಾಲಯ್ಯ ದಂಪತಿಗಳು.
ಸುತ್ತಲೂ ಹಬ್ಬಿರುವ ಕಾಡು ಹಾಗೂ ಕುಮಾರ ಪರ್ವತ, ಅಕ್ಕಿ ರಾಶಿ ಪರ್ವತಗಳ ತಪ್ಪಲಿನಲ್ಲಿ ಅಡಿಕೆ, ಕಬ್ಬು, ತೆಂಗಿನ ತೋಟಗಳನ್ನು ಮಾಡಿಕೊಂಡು, ಅನ್ಯೋನ್ಯತೆಯಿಂದ ಬಾಳ್ವೆ ಮಾಡುತ್ತಿರುವ ಆ ಶ್ರಮ ಜೀವಿಗಳನ್ನು ನೋಡಿ ನಿರೂಪಕನಿಗೆ ಆನಂದ ಆಶ್ಚರ್ಯವಾಯಿತು. ಕಾರಣಾಂತರಗಳಿಂದಾಗಿ ೪-೫ ದಿನಗಳ ಕಾಲ ನಿರೂಪಕ ಅವರ ಮನೆಯಲ್ಲೇ ಉಳಿಯಬೇಕಾಯಿತು. ಅದೂ ಆ ದಂಪತಿಗಳ ನಿಃಸ್ವಾರ್ಥ ಪ್ರೀತಿಯಿಂದ ಕೂಡಿದ ಒತ್ತಾಯದ ಮೇರೆಗೆ. ಆ ನಡುವೆ ಆತನಿಗೆ ಅವರ ಬದುಕೊಳಗೆ ಹಾಸು ಹೊಕ್ಕಾಗಿರುವ ಅಪಾರ ನೋವು, ಯಾತನೆ, ಚಿಂತೆಗಳ ಪರಿಚಯವಾಗಿ ಅಲ್ಪ ಕಾಲದಲ್ಲಿಯೇ ಆತನೂ ಅವರ ಮನೆಯಲ್ಲೋರ್ವನಂತಾಗುವನು.
ಚಿಕ್ಕ ವಯಸ್ಸಿನ ಮಗಳನ್ನು ಕಳೆದು ಕೊಂಡ ಶಂಕರಮ್ಮ ಹಾಗೂ ಗೋಪಾಲಯ್ಯನವರ ದುಃಖ ಅಲ್ಲೇ ಮುಗಿಯದು. ೧೮ರ ಹರಯದಲ್ಲೇ ಮನೆಯನ್ನು ಬಿಟ್ಟು ಓಡಿಹೋದ ಮಗ ಶಂಭು ಹತ್ತು ವರುಷಗಳ ಕಾಲವಾದರೂ ಇನ್ನೂ ಇವರನ್ನು ವಿಚಾರಿಸಿಕೊಳ್ಳಲು ಬರದಿರುವುದೇ ಅವರನ್ನು ಪ್ರತಿದಿನ ಕಾಸರ್ಕದ ಮುಳ್ಳಂತೇ ಕಾಡುತ್ತಿದೆ. ಪತಿ-ಪತ್ನಿಯರಿಬ್ಬರೂ ತಮ್ಮ ತಮ್ಮ ನೋವನ್ನು ಅಪರಿಚಿತರೊಡನೆ ವಾತ್ಸಲ್ಯ ತೊರುವುದರ ಮೂಲಕ, ಅವರನ್ನು ಆದರಿಸುವುದರ ಮೂಲಕ, ಎಲ್ಲಿಂದಲೋ ಬಂದು ಅವರ ತೋಟದಲ್ಲೇ ಗೇಣಿದಾರನಾಗಿ ನೆಲೆಸಿ ಮನೆಮಗನಂತಾದ ನಾರಾಯಣ ಹಾಗೂ ಆತನ ಮಕ್ಕಳನ್ನಾಡಿಸುವುದರ ಮೂಲಕ ಮರೆಯಲೆತ್ನಿಸುತ್ತಾರೆ. ಆದರೂ ಅದೆಲ್ಲಿಂದಲೋ ಏನೋ ಬದುಕೊಳಗಿನ ಏಕಾಂಗಿತನ ಅವರನ್ನು ಮತ್ತೆ ಹಳೆ ನೋವುಗಳತ್ತ ಎಳೆಯುತ್ತಿರುತ್ತದೆ ಆಗಾಗ. ಇದನ್ನು ಕಂಡ ನಿರೂಪಕನೂ ಮರುಗುತ್ತಾನೆ. ಮನದೊಳಗೆ ಮನೆ ಮಾಡುವ ಸಣ್ಣ ಪುಟ್ಟ ಘಟನಾವಳಿಗಳು, ನಾಟುವ ಸಂಭಾಷಣೆಗಳ ಮೂಲಕ ಪ್ರವಹಿಸುವ ಕಥೆಯ ಅಂತ್ಯ ಮಾತ್ರ ಒಂದು ಅಪೂರ್ವ, ಅನೂಹ್ಯ ಅನೂಭೂತಿಯನ್ನು ಮನಸೊಳಗೆ ಭಿತ್ತುವುದು.
ಈ ಕಾದಂಬರಿಯನ್ನೋದಿದ ಮೇಲೆ ನನ್ನ ಮನದೊಳಗೆ ಅಚ್ಚಳಿಯದೇ ಉಳಿದ ಕೆಲವು ಪ್ರಮುಖ ಅಂಶಗಳು ಇಂತಿವೆ..
(ಅ) ಕಾದಂಬರಿಯುದ್ದಕ್ಕೂ ನಾವು ಕಾಣುವುದು ಜೀವನ ದರ್ಶನ. ಇದನ್ನು ಕಾರಂತರು ಗೋಪಾಲಯ್ಯನವರ ಮೂಲಕ ನಮಗೆ ಕಾಣಿಸುತ್ತಾರೆ. ಇದನ್ನರಿಯಲು ಬೆಟ್ಟದ ಜೀವವನ್ನು ಓದಿಯೇ ತಿಳಿಯಬೇಕಷ್ಟೇ! ಇದನ್ನು ಕೇವಲ ಅಕ್ಷರಗಳ ಜೋಡಣೆಯಿಂದ ತಿಳಿಸಲಾಗದು. ಕಥಾನಿರೂಪಕನೊಂದಿಗೆ ಹೊರಟು, ಪಯಣಿಸಿ, ಪಾತ್ರಗಳೊಳಗೆ ಹೊಕ್ಕಾಗ ಮಾತ್ರ ಬೆಟ್ಟದ ಜೀವದೊಳಗಿನ ಜೀವನ ಸೆಲೆ ಕಾಣಸಿಗುವುದು.ಇದಲ್ಲದೇ ಸತಿ-ಪತಿಯರೊಳಗೆ ಯಾವ ರೀತಿ ಹೊಸತನ, ಅನ್ಯೋನ್ಯತೆ ಸದಾ ಕಾಲ ಮಿಳಿತವಾರುತ್ತದೆ, ಹಾಗಿರಲು ಏನು ಮಾಡಬೇಕು ಎಂಬ ದಾಂಪತ್ಯ ಪಾಠವನ್ನೂ ಕಾರಂತರು ಆ ವೃದ್ಧ ದಂಪತಿಗಳ ಸಂಭಾಷಣೆಗಳ ಮೂಲಕ ಬಲು ಸುಂದರವಾಗಿ ಅಷ್ಟೇ ಸರಳವಾಗಿ ವಿವರಿಸಿದ್ದಾರೆ.ದಾಂಪತ್ಯವೆಂದರೆ ನಾಲ್ಕು ದಿನ ಹೊಸತನವನ್ನು ಕಂಡು ಕ್ರಮೇಣ ಹಳತಾಗಿ ಹಳಸಲಾಗುವುದಲ್ಲ. ಹೇಗೆ ಚಿಕ್ಕ ಮಕ್ಕಳು ಪ್ರತಿಯೊಂದರಲ್ಲೂ, ಪ್ರತಿದಿನವೂ ಹೊಸತನವನ್ನು ಕಾಣುತ್ತಾರೋ, ತಮ್ಮ ತಮ್ಮಲ್ಲಿ ಜಗಳವಾಗಲು ಹೇಗೆ ನಾಳೆ ಮರೆತು ಮತ್ತೆ ಸ್ನೇಹವನ್ನು ಹೊಂದುತ್ತಾರೋ ಅದೇ ರೀತಿ ನಮ್ಮ ದಾಂಪತ್ಯವೂ ಇರಬೇಕು. ಇಬ್ಬರಲ್ಲೂ ಹೊಸತನವನ್ನು ಕಾಣುವ ಮನೋಭಾವ, ಮರೆಯುವ, ಕ್ಷಮಿಸುವ ಗುಣ ಇದ್ದರೆ ದಾಂಪತ್ಯ ನಾಲ್ಕುದಿನದ ಹಸಿರಾಗಿರದು, ನಿತ್ಯ ಹರಿದ್ವರ್ಣವಾಗಿರುವುದೆಂದು ಹಲವಾರು ಉದಾಹರಣೆಗಳ ಮೂಲಕ ಆ ದಂಪತಿಗಳು ನಮಗೆ ಮನಗಾಣಿಸುತ್ತಾರೆ.
(ಆ) ಅಂದಿನ ಕಾಲದಲ್ಲೂ ಅಂದರೆ ಪವನಿಗೆ ಹತ್ತು ರೂಪಾಯಿ ಇದ್ದ ಕಾಲದಲ್ಲೂ ಭ್ರಷ್ಟಾಚಾರ, ಲಂಚ ಹಾಗೂ ಲಂಪಟತನ ಹೇಗೆ ತನ್ನ ಕೈಚಳಕ ತೋರಿಸುತ್ತಿತ್ತೆಂದು ದೇರಣ್ಣ ಗೌಡನ ಒಂದು ಪ್ರಸಂಗದ ಮೂಲಕ ನಮಗೆ ತಿಳಿಯುತ್ತದೆ.
(ಇ) ಆಗಿನ ಕಾಲದಲ್ಲಿ ಈ ಬೆಟ್ಟದ ತಪ್ಪಲಿನ ಜನರನ್ನು ಬಹುವಾಗಿ ಕಾಡುತ್ತಿದ್ದುದು ಪ್ರಮುಖವಾಗಿ ಎರಡು ವಿಷಯ. ಒಂದು ಜ್ವರದ ಗಡ್ಡೆ! ಇದರಿಂದಾಗಿ ಕೊಯಿನು(ಕ್ವಿನೈನ್ ಟ್ಯಾಬ್ಲೆಟ್) ಅಲ್ಲಿನವರ ಮನೆಯೊಳಗೆ ಸದಾ ತುಂಬಿರುತ್ತಿತ್ತೆಂದು ತಿಳಿದುಬರುತ್ತದೆ. ಆದರೆ ಇದೇ ಇಂದು ಎಚ್೧ ಎನ್೧ ರೂಪ ತಾಳಿ ಹಳ್ಳಿ, ಪಟ್ಟಣ ಎಂಬ ಬೇಧವಿಲ್ಲದೇ ನಮ್ಮನ್ನು ಕಾಡುತ್ತಿರುವುದು ವಿಪರ್ಯಾಸವೋ ಇಲ್ಲಾ ಅದರ ರೂಪಾಂತರವೋ ತಿಳಿಯುತ್ತಿಲ್ಲ!ಇನ್ನೊಂದು ಕಾಡು ಪ್ರಾಣಿಗಳ ಕಾಟ. ಆನೆಗಳ ಹಿಂಡು, ಕಡಮೆ, ಹಂದಿ, ಕಾಡೆಮ್ಮೆ ಗಳ ಕಾಲ್ತುಳಿತಕ್ಕೆ ಸಿಲುಕಿ ನಳನಳಿಸುತ್ತಿದ್ದ ತಮ್ಮ ತೋಟಗಳು ಧರೆಗುರುಳಿ ಬಿದ್ದಾಗ ಸಂಕಟ ಪಡುವ ಗೋಪಾಲಯ್ಯ ಹಾಗೂ ನಾರಾಯಣರ ವೇದನೆಯ ಜೊತೆಗೆ ನಾವೂ ಸ್ಪಂದಿಸದೇ ಇರಲಾಗದು. ಜೊತೆಗೇ ಇಂದು ಇಂತಹ ದಟ್ಟಡವಿಯಾಗಲೀ, ಅಂತಹ ಪ್ರಾಣಿಗಳ ಹಿಂಡಾಗಲೀ ನಾವು ಕಾಣುವುದು ಕನಸೇ ಸರಿ ಎಂದೂ ಎಣಿಸಿ ವಿಷಾದವೂ ಆಗದಿರದು. ಹಾಗೆಯೇ ಕಾದಂಬರಿಯೊಳಗೆ ಒಂದು ಕಡೆ ಬರುವ "ಪಾಂಜ"ಅಂದರೆ ಪಾರಂಬೆಕ್ಕಿನ(ಹಾರಾಡುವ ಅಳಿಲು) ವಿಶ್ಲೇಷಣೆಯನ್ನೋದುವಾಗ ತೇಜಸ್ವಿಯವರ ಕರ್ವಾಲೋ ಕ್ಷಣ ನೆನಪಾಗದೇ ಇರದು.
(ಈ) ಬಯಲು ಸೀಮೆಯವರಾದ ಕಾರಂತರು ತಮ್ಮ ಊರಲ್ಲಿ ಕಟ್ಟಿಗೆಗಳು ಸಿಗುವುದು ಕಷ್ಟವೆಂದು ಹೇಳಿದಾಗ ಬೆಟ್ಟದ ಜೀವಿಯಾದ ಗೋಪಾಲಯ್ಯ ಹೀಗೆನ್ನುತ್ತಾರೆ..."ನಿಮ್ಮ ಊರಲ್ಲಿ ಹೆಣ ಸುಡುವುದಾದರೂ ಕಷ್ಟವೇ! ನಮ್ಮಲ್ಲಿ ಸಾಯುವುದಂತೂ ತೀರ ಸುಲಭ; ಹೆಣ ಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಕಷ್ಟ ನೋಡಿ" ಆದರೆ ಈ ಮಾತು ಅಂದಿನ ಕಾಲಕ್ಕೆ ಮಾತ್ರವಲ್ಲದೇ ಇಂದೂ ಅಷ್ಟೇ ಪ್ರಸ್ತುತವಾಗಿದೆ ಎನ್ನಲು ಯಾವುದೇ ಸಂಶಯವಿಲ್ಲ!! ಹಾಗೆಯೇ ಕಾರಂತರು ಗೋಪಾಲಯ್ಯನವರ ಮೂಲಕ ಹೇಳಿಸಿದ ಒಂದು ವಾಕ್ಯ ಮನದೊಳಗೆ ಮನೆಮಾಡಿದೆ. ಅದೇನೆಂದರೆ "ಮನುಷ್ಯನಿಗೆ ತಾನು ಬದುಕಿದ ಮೇಲಲ್ಲವೇ ವೇದಾಂತದ ಪಾಠ, ಬದುಕುವುದಕ್ಕೇನೆ ಮೊದಲು ವೇದಾಂತವನ್ನು ಹೇಳಿ ಫಲವಿಲ್ಲ..."
(ಉ) ಕಥೆಯ ಅಂತ್ಯದವೇಳೆ ಬರುವ ಹುಲಿಬೇಟೆಯ ಪ್ರಸಂಗವಂತೂ ಮನಸೂರೆಗೊಳ್ಳುವಂತಿದೆ. ಅದರೊಳಗೆ ಬೆರೆತಿರುವ ವಿನೋದ, ಆಹ್ಲಾದ ನಮ್ಮನೂ ಆ ಬೇಟೆಯೊಳಗೆ ಸೇರುವಂತೆ ಮಾಡುತ್ತದೆ. ಅದೇ ರೀತಿ ಕಥೆಯ ಅಂತ್ಯವೂ ಹಲವು ಭಾವನೆಗಳನ್ನು ಮನದೊಳಗೆ ಹುಟ್ಟುಹಾಕಿ ಓದುಗನ ಕಲ್ಪನೆಯ ಓಟಕ್ಕೇ ಬಿಟ್ಟುಕೊಡುವಂತಿದೆ.
(ಊ) ೧೫೦ ಪುಟಗಳ ಕಿರು ಕಾದಂಬರಿಯಾದರೂ ಜೀವನ ಪ್ರೀತಿಯನ್ನೂ, ಬದುಕನ್ನು ಜೀವಿಸುವ ಬಗೆಯನ್ನೂ ನಮಗೆ ಕಲಿಸಿಕೊಡುತ್ತದೆ. ಕಥಾ ನಾಯಕರಾದ ಗೋಪಾಲಯ್ಯನವರ ವ್ಯಕ್ತಿತ್ವ, ಕಥೆಯ ಹರಿವು ಒಳ ಹರಿದಂತೆಲ್ಲಾ ಕುಮಾರ ಪರ್ವತದಷ್ಟೇ ಎತ್ತರವನ್ನು, ವಿಶಾಲತೆಯನ್ನು, ವೈವಿಧ್ಯತೆಯನ್ನು, ಅಚಲತೆಯನ್ನೂ ಹೊಂದಿರುವುದು ಸ್ಪಷ್ಟವಾಗುತ್ತಾ ಹೋಗುತ್ತದೆ. "ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವ ಬದುಕಿಗೆ ಹೆದರಬೇಕಿಲ್ಲ, ಅಂಥವನು ಬದುಕ ಬಲ್ಲ..."-ಗೋಪಾಲಯ್ಯನವರು ಒಂದು ಕಡೆ ಹೇಳುವ ಈ ಮಾತು ಸಾರ್ವಕಾಲಿಕ ಸತ್ಯವೆಂದೆನಿಸುತ್ತದೆ.
ಕೊನೆಯಲ್ಲಿ : ಇಂತಹ ಒಂದು ಮೇರು ಕೃತಿಯನ್ನು ಹೀಗೇ ಎಂದು ವಿಮರ್ಶಿಸಲು ಖಂಡಿತ ಸಾಧ್ಯವಿಲ್ಲ. ಅದನ್ನು ಓದಿಯೇ ಅನುಭವಿಸಬೇಕು. ಬೆಟ್ಟದ ಜೀವವನ್ನು ಕಂಡುಕೊಳ್ಳಲು ಕಥೆಯೊಳಗೆ ಹೊಕ್ಕಿ, ಕಥಾಗಾರನ ನಿರೂಪಣೆಯೊಳಗೇ ಕೊಚ್ಚಿಹೋಗಿ, ಆ ಪಾತ್ರಗಳಲ್ಲೊಂದಾಗಿ ಅಲ್ಲೇ ನಾವು ಸ್ಥಿರವಾಗಬೇಕೆಂದು ಮನ ಬಯಸಿದರೆ ನಿಮಗೆ ನಿಜವಾದ ಅನುಭೂತಿಯಾಗಿದೆ ಎನ್ನಬಹುದೇನೋ!! ಅಗಾಧ ಜೀವನ ಪ್ರೀತಿಯನ್ನು ಕಾಣಿಸುವ, ಕಲಿಸುವ ಬೆಟ್ಟದ ಜೀವವನ್ನು ಓದಿ ಮುಗಿಸಿದಾಗ ತಕ್ಷಣ ನನಗೆ ನೆನಪಾದದ್ದು ಬಿ.ಆರ್. ಲಕ್ಷ್ಮಣ ರಾವ್ ಅವರ ಈ ಕವನ.
ಮಳೆ
ಸುರಿಯಲಿ ತಂಪೆರೆಯಲಿ
ಜೀವನ ಪ್ರೀತಿಯ ಮಳೆ ;
ಹರಿಯಲಿ ಭೋರ್ಗರೆಯಲಿ
ಬತ್ತಿದೆದೆಗಳಲಿ ಹೊಳೆ ;
ಕೊಚ್ಚಿ ಹೋಗಲಿ ಸ್ವಾರ್ಥ , ದುರಾಸೆ ;
ಸ್ವಚ್ಛವಾಗಲೀ ಇಳೆ.
ಚಿಮ್ಮಲಿ ಹಚ್ಚನೆ ಹಸಿರು,
ನಿರ್ಮಲವಾಗಲಿ ಉಸಿರು,
ಮತ್ತೆ ಆಗಲೀ ವಸುಂಧರೆ
ಸಕಲ ಜೀವಿಗಳಿಗಾಸರೆ.
ಧುಮ್ಮಿಕ್ಕಿ ಧುಮುಕಿ ಜಲಪಾತ
ನೀಡಿ ಜಡತೆಗಾಘಾತ
ಹೊಮ್ಮಿಸಲಿ ಹೊಸ ಚೇತನ,
ಕ್ರಿಯಾಶೀಲತೆಗೆ ಇಂಧನ.
ತೊನೆಯಲಿ ತೆನೆ ಹೊಂದೇರು,
ಅಡಗಲಿ ಹಸಿವಿನ ಚೀರು,
ಅರಳಲಿ ಎಲ್ಲೆಡೆ ಹೂನಗೆ,
ಹಾಯೆನಿಸಲಿ ಭೂತಾಯಿಗೆ.
-----***-----
21 ಕಾಮೆಂಟ್ಗಳು:
ತೇಜಸ್ವಿನಿಯವರೇ....
ನಿಮ್ಮ ಒಳಗೊಂದು ಕಿರುನೋಟ ತುಂಬಾ ಚೆನ್ನಾಗಿದೆ. ನಾನಿನ್ನೂ ಕಾರಂತರ ಸಾಹಿತ್ಯ ಓದುವ ಸಾಹಸಕ್ಕೇ ಹೋಗಿಲ್ಲ. ನಿಮ್ಮ ಕಿರುನೋಟ ಓದಿದ ಮೇಲೆ ಕಾರಂತರನ್ನು ಓದುವ ಅಪೇಕ್ಷೆ ತೀವ್ರವಾಗಿಬಿಟ್ಟಿದೆ. ನಿಧಾನವಾಗಿ ಓದಲು ಆರಂಭಿದುತ್ತೇನೆ. ಹೀಗೇ ಮುಂದುವರೆಯಲಿ ನಿಮ್ಮ ಕಿರುನೋಟಗಳು... ಮತ್ತು ಎಲ್ಲರಲ್ಲೂ ಓದುವ ತುಡಿತ ಹೆಚ್ಚುವಂತೆ ಮಾಡುತ್ತಿರಲಿ....
ಶ್ಯಾಮಲ
Tejakka....
Vow...! kaarathara kaadambarigalendare adannu odiye saviyabeku... colleginalli iruvaaga thumba odiddde avara kaadambarigalannu... marali mannige anthu all time favourite...
neevu heliruva haagi kaaranthara niroopana shaili thumba sarala maththu hrudyavaadudu.... Bettada jeeva ishtavaada kaadambarigalalli ondu.. neevu vimarshisida reethi thumba hidisithu thejakka :)
ತೇಜಸ್ವಿನಿ,
ಕೆಲವೇ ಮಾತುಗಳಲ್ಲಿ ಬ್ರಹತ್ ಮೇರುಕ್ರತಿ '' ಬೆಟ್ಟದ ಜೀವ'' ತಿಳಿಸಿದ್ದಿರಿ . ಇದನ್ನು ನಾನು ಓದಿದ್ದೆ ಚಿಕ್ಕವನಿರುವಾಗ. ಮತ್ತೊಮ್ಮೆ ಓದಬೇಕೆನಿಸುತ್ತಿದೆ ನಿಮ್ಮ ಬರಹ ನೋಡಿ,
ಆಸಕ್ತಿ ಪುನಃ ಹುತ್ತಿಸಿದ್ದಕ್ಕೆ ಧನ್ಯವಾದಗಳು
tejasviniyavare,
nimma niroopana shaili nanage bahaLa istavayitu, kaarantharavara ee kathe naa odilla nijakku odabekeniside... kelave paatragaLiddare katheyannu odalu bahaLa isTa..nanage..
dhanyavadagaLu
ತೇಜಸ್ವಿನಿ ಮೇಡಮ್,
ಕಾರಂತಜ್ಜನ ಮೇರುಕೃತಿ ಬಗ್ಗೆ ಒಂದು ಸುಂದರ ವಿಸ್ತಾರ ವಿವರಣೆ ಸಹಿತ ಅವಲೋಕನ ಬರೆದಿದ್ದೀರಿ. ನಾನು ಪುಸ್ತಕವನ್ನು ಓದಿಲ್ಲ. ಈಗ ನಿಮ್ಮ ಬರಹವನ್ನು ಓದಿದ ಮೇಲೆ ಖಂಡಿತ ಓದಬೇಕೆನಿಸುತ್ತದೆ...
ಉತ್ತಮ ಕೃತಿಯನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್...
ತೇಜಸ್ವಿನಿಯವರೆ, ನಿಮ್ಮ ’ಒಳಗೊಂದು ಕಿರುನೋಟ’ ಆಲೋಚನೆ ಬಹಳ ಚೆನ್ನಾಗಿದೆ. ಮೊದಲದ್ದನ್ನು ನಾನು ಓದಿಲ್ಲ, ಅದನೂ ಓದುತ್ತೇನೆ.
ಜೀವನ ಪ್ರೀತಿಯ ಮಳೆ ಸುರಿಸಿದ ಬೆಟ್ಟದ ಜೀವ ಮತ್ತು ಅದಕ್ಕಿಂತ ಹೆಚ್ಚಾಗಿ ಕಾದಂಬರಿ ಬಗೆಗಿನ ನಿಮ್ಮ ತಂಪಾದ ಬರವಣಿಗೆ ಮನಸ್ಸಿಗೆ ಮುದ ನಿಡುವದರ ಜೊತೆಗೆ ಬೆಟ್ಟದ ಜೀವದ ಬಗೆಗಿಗಿನ ದರ್ಶನವನ್ನೂ ನೀಡಿತು. ಚೆಂದದ ವಿಮರ್ಶೆ.
ತೇಜಸ್ವಿನಿ,
ಕಾರಂತರು ನನ್ನ ಅಚ್ಚುಮೆಚ್ಚಿನ ಲೇಖಕರೂ ಹೌದು. ಅವರ ‘ಬೆಟ್ಟದ ಜೀವ’ ಕಾದಂಬರಿಯ ತಿರುಳನ್ನು ತುಂಬಾ ಚೆನ್ನಾಗಿ ತೋರಿಸಿದ್ದೀಯಾ.
ಸುಮಾರು ವರ್ಷಗಳ ಹಿಂದೆ ನಾನು ಹಾಗೂ ನನ್ನ ಗೆಳೆಯ ಕಾರಂತರನ್ನು ಅವರ ಮನೆಯಲ್ಲಿ ಭೆಟ್ಟಿಯಾಗಿದ್ದೆವು. ಅವರ ಮೇರು ವ್ಯಕ್ತಿತ್ವವನ್ನು ಕಂಡು ಬೆರಗಾಗಿ ಹೋಗಿದ್ದೆವು!
ತೇಜಸ್ವಿನಿ ಮೇಡಂ,
`ಬೆಟ್ಟದ ಜೀವ' ಕಿರುಕಾದಂಬರಿಯನ್ನು ಸರಳ ಬರಹಗಳಿಂದ ಓದುಗರಿಗೆ ಆಸಕ್ತಿಯುಂಟಾಗುವಂತೆ, ಓದಲು ಪ್ರೇರೇಪಿಸುವಂತೆ ನೀವು ಗಮನಿಸಿದ ಅಂಶಗಳನ್ನು ತಿಳಿಸಿದ್ದೀರಿ.
ಹಳ್ಳಿಗಳಲ್ಲಿನ, ಬೆಟ್ಟದಡಿಯಲ್ಲಿನವರ ಜೀವನ ಇವೆಲ್ಲವೂ ನಮ್ಮಂತಹ ಪಟ್ಟಣಿಗರಿಗೆ ಅರಿವಾಗುವುದು ಇಂತಹ ಕಾದಂಬರಿಗಳನ್ನು ಓದಿದಾಗ ಮತ್ತು ಆ ಪಾತ್ರಗಳೊಂದಿಗೆ ಹೆಜ್ಜೆ ಹಾಕಿದಾಗ ಮಾತ್ರ. ಆ ಎರಡು ವಾಕ್ಯಗಳು ಸದಾ ನೆನಪಿನಲ್ಲಿ ಉಳಿಯುತ್ತವೆ. ಹಾಗೂ ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೆ, ಟಿ.ವಿ. ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ, ಪರೀಕ್ಷೆಯಲ್ಲಿ ಕಡಿಮೆ ಅಂಕ ಅಥವಾ ನಪಾಸಾಗಿದ್ದಕ್ಕೆ ಹೀಗೆ ಒಂದೊಂದು ನೆಪದಿಂದ ಹೆದರಿ `ಆತ್ಮಹತ್ಯೆ' ಮಾಡಿಕೊಳ್ಳವವರಿಗೆ ಬದುಕಿ ಏನಾದರೂ ಸಾಧಿಸಬೇಕೆನಿಸಿದರೆ, ಗೋಪಾಲಯ್ಯನ ಮಾತುಗಳು ಮನಕ್ಕೆ ತಟ್ಟಿದರೆ ಎಂತಹ ಆತ್ಮಶಕ್ತಿ ತುಂಬುತ್ತದೆ.
ಈ ಕಿರು ಕಾದಂಬರಿಯನ್ನು ಒಮ್ಮೆಯಾದರೂ ಓದಬೇಕೆನಿಸಿದೆ. ಧನ್ಯವಾದಗಳು.
ಚಂದ್ರಶೇಖರ ಬಿ.ಎಚ್.
ಕಾರಂತರ ಬೆಟ್ಟದ ಜೀವ ಪುಸ್ತಕವನ್ನು ಮೊದಲ ಬಾರಿಗೆ ಓದಿದಾಗ ಅರ್ಧಕ್ಕೆ ಬಿಟ್ಟು ಬಿಟ್ಟಿದ್ದೆ; ಏಕೋ ನೆನಪಾಗುತ್ತಿಲ್ಲ. ಆದರೆ ಅದನ್ನು ಇಪ್ಪತ್ತು ವರ್ಷಗಳ ಹಿಂದೆ ಮೊದಲ ಬಾರಿ ಓದಿ ನಾನು ಬೆಟ್ಟದೊಳಗೇ ಕಳೆದುಹೋದ ನೆನಪು ಮಾತ್ರ ಅಚ್ಚಹಸಿರಾಗಿದೆ. ನಂತರ ಕನಿಷ್ಠ ಹತ್ತು ಬಾರಿಯಾದರೂ ಆ ಪುಸ್ತಕವನ್ನು ಓದಿದ್ದೇನೆ. ಪ್ರತಿಬಾರಿಯೂ ಹೊಸತನದ ಹರುಷವನ್ನು ಕೊಟ್ಟಿದೆ. ಮರೆಯಬಾರದ ಪುಸ್ತಕಗಳಲ್ಲಿ ಇದೂ ಒಂದು.
@ಶ್ಯಾಮಲ ಅವರೆ,
ಮಾನಸಕ್ಕೆ ಸ್ವಾಗತ. ನನ್ನ ಒಳಗೊಂದು ಕಿರುನೋಟದ ಉದ್ದೇಶವೂ ಇದೇ ಆಗಿದೆ. ಆದಷ್ಟು ಸಹೃದಯ ಓದುಗರನ್ನು ಇಂತಹ ಉತ್ತಮ ಪುಸ್ತಕಗಳೆಡೆ ಸೆಳೆಯುವುದು. ಮೆಚ್ಚಿದ್ದಕ್ಕೆ ಧನ್ಯವಾದಗಳು.
@ಸುಧೇಶ್,
ತುಂಬಾ ಸಂತೋಷ. ನಿಮಗೂ ಅವರ ಈ ಕಾದಂಬರಿ ಬಲು ಇಷ್ಟವಾಗಿರುವುದು ಸಂತಸ ತಂದಿತು. ಧನ್ಯವಾದ.
@ಮೂರ್ತಿ ಅವರೆ,
ನನ್ನೀ ಪುಟ್ಟ ಕಿರುನೋಟದಿಂದ ನಿಮಗೆ ಮತ್ತೆ ಈ ಪುಸ್ತಕವನ್ನೋದಬೇಕೆಂದೆನಿಸಿದರೆ ನನ್ನ ಬರಹವೂ ಸಾರ್ಥಕ. ಧನ್ಯವಾದಗಳು.
@ಮನಸು,
ನಿಮ್ಮ ಈ ಸ್ಫೂರ್ತಿದಾಯಕ ನುಡಿಯೇ ನನ್ನ ಪುಸ್ತಕ ಪ್ರೀತಿಯನ್ನು ಹರಡುವ ಕಾರ್ಯಕ್ಕೆ ಪ್ರೇರಣೆಯಾಗುವುದು. ತಪ್ಪದೇ ಬೆಟ್ಟದ ಜೀವ ಓದಿ. ಧನ್ಯವಾದಗಳು.
@ಶಿವು ಮತ್ತು ಮುತ್ತುಮಣಿ ಅವರೆ,
ತುಂಬಾ ಧನ್ಯವಾದಗಳು. ವಿಮರ್ಶೆ ಓದಿ ಮೂಲ ಕೃತಿ ಓದಬೇಕೆನಿಸಿದರೆ ಧನ್ಯೋಸ್ಮಿ...:)
@ಉದಯ್ ಅವರೆ,
ಬಿಸಿಲ ಹನಿಗೆ ನನ್ನೀ ಬರಹ ತಂಪನ್ನೀಡಿತು ಅಂದರೆ ಬಲು ಸಂತೋಷ...:) ಧನ್ಯವಾದಗಳು.
@ಕಾಕಾ,
ಬೆಟ್ಟದ ಜೀವದಂತಹ ಕಾದಂಬರಿ ಬರೆಯಲು ಅಂತಹ ವ್ಯಕ್ತಿತ್ವವನ್ನು ಹೊಂದಿರುವವರಿಂದ ಮಾತ್ರ ಸಾಧ್ಯ ಏನಂತೀರಿ? ಧನ್ಯವಾದಗಳು.
@ಚಂದ್ರಶೇಖರ್ ಹಾಗೂ ಸತ್ಯನಾರಾಯಣ ಅವರೆ,
ಇದರೊಳಗಿನ ಅದಮ್ಯ ಜೀವನ ಪ್ರೀತಿ ಇಂದಿನ ಪೀಳಿಗೆಯವರಿಗೆ ಮಾರ್ಗದರ್ಶಿಯೇ ಸರಿ. ಎಷ್ಟೂ ಬಾರಿ ಓದಿದರೂ ಹೊಸತನವನ್ನು ನೀಡುವ ಕಾದಂಬರಿ ಇದು. ಧನ್ಯವಾದಗಳು.
ಬೆಟ್ಟದ ಜೀವದ ಕುರಿತಾಗಿರುವ ನಿಮ್ಮ ಕಿರುನೋಟವನ್ನು ಒಳನೋಟವೆನ್ನಬಹುದು. ಸ೦ಕ್ಷಿಪ್ತವಾಗಿ ವಿಮರ್ಶೆ ಮಾಡಿದ್ದಿರಿ. ನಿಮ್ಮ ಅ೦ತರ ದೃಷ್ಟಿ ಕಾರ೦ತರ ಕೃತಿಯ ಒಳ-ಹೊರಗನ್ನು ಸಮರ್ಥವಾಗಿ ಬಿ೦ಬಿಸಿದೆ.
ಪ್ರೀತಿಯ ತೇಜಸ್ವಿನಿ
ಅತ್ಯಂತ ಹೃದಯ ಸ್ಪರ್ಶಿಯಾಗಿದೆ ನಿಮ್ಮ ಲೇಖನ, ವಿಮರ್ಶೆ.....
ಕಾರಂತರ ಕೃತಿಗಳಲ್ಲೇ ನನ್ನ ಮಟ್ಟಿಗೆ ಮೊದಲ ಸ್ಥಾನ ಬೆಟ್ಟದ ಜೀವ. ನಂತರದ್ದು ಅಳಿದಮೇಲೆ. ಅದು ಬಿಟ್ಟರೆ ನನಗೆ ಬಹಳ ಇಷ್ಟವಾದ ಕೃತಿಗಳು ಬತ್ತದತೊರೆ, ಮೈಮನಗಳ ಸುಳಿಯಲ್ಲಿ,ಸರಸಮ್ಮನ ಸಮಾಧಿ, ಚಿಗುರಿದ ಕನಸು.... ಹೇಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ನಿಮ್ಮ ಬರವಣಿಗೆಯ ಮೂಲಕ ಮತ್ತೊಮ್ಮೆ ಅದನ್ನು ಮನಃಪಟಲದ ಮುಂದೆ ತಂದಿರಿ. ಅವರ ಕಾದಂಬರಿಗಳ ಬಗ್ಗೆ ಬರೆರೆ ಬರಿಯ ಪದಗಳಾಗುತ್ತವೆ ಅಂದಿದ್ದೀರಿ. ಅದು ಸಾಮಾನ್ಯವಾಗಿ ನಿಜ. ಆದರೆ ನಿಮ್ಮ ಬರಹ ಹಾಗಾಗಿಲ್ಲ. ಮನಸ್ಸನ್ನು ಆರ್ದ್ರಗೊಳಿಸುತ್ತದೆ. " ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವ ಬದುಕಿಗೆ ಹೆದರಬೇಕಿಲ್ಲ...." ಏಷ್ಟು ನಿಜವಾದ ಮಾತಲ್ಲವೇ.
ತೇಜು, ಕಳೆದಬಾರಿ ಊರಿಗೆ ಹೋಗಿದ್ದಾಗ ಕಾರಂತರ ಹಲವಾರು ಪುಸ್ತಕಗಳನ್ನು ಕೊಂಡು ಮಣಿಪಾಲದ ಮನೆಯಲ್ಲಿಟ್ಟು ಬಂದಿದ್ದೇನೆ (ಅವುಗಳಲ್ಲಿ ಬೆಟ್ಟದ ಜೀವ-ವೂ ಒಂದು). ಅಲ್ಲಿದ್ದಾಗ ಸುತ್ತಾಟದಲ್ಲೇ ಸಮಯ ಕಳೆಯಿತು, ಓದಲಾಗಲಿಲ್ಲ. ಈ ಬಾರಿ ಹೋದ ಮೇಲೆ ಆಯೆಲ್ಲ ಪುಸ್ತಕಗಳಿಗೆ ನನ್ನ ದಿನಚರಿಯಲ್ಲಿ ಸಮಯಾವಕಾಶ ಮಾಡಿಕೊಳ್ಳಬೇಕು. ಆ ಆಸೆಗೆ ನಿನ್ನೀ ಬರಹ ಒತ್ತಾಸೆಯಿತ್ತಿದೆ.
ತೇಜಸ್ವಿನಿ, ನಿಮ್ಮ ಬ್ಲಾಗ್ ಗೆ ಪ್ರತಿಕ್ರಿಯೆ ಬರೆದಿದ್ದೆ..ಅದನ್ನು ಹಾಕಿಯೂ ಇದ್ದೆ......ಗೊತ್ತಿಲ್ಲ...ಅದು ನಿಮ್ಮ ಬ್ಲಾಗ್ ಕಾಮೆಂಟಿನಲ್ಲಿ ಕಾನಲಿಲ್ಲ. ಮೂರ್ನಾಲ್ಕು ಬ್ಲಾಗ್ ಒಂದೇ ಉಸುರಿಗೆ ನೋಡುವ ನನ್ನ ಅಭ್ಯಾಸಾನ ಬಿಡಬೇಕು ಅನ್ನಿಸುತ್ತೆ. ಅದಕ್ಕೆ ಈಗ ಮಾನಸ ಒಂದೇ ಓಪನ್ ಮಾಡಿ ಕಾಮೆಂಟಿಸುತ್ತಿದ್ದೇನೆ. ನಿಮ್ಮ ಲೇಖನ ಬಹಲ ಚನ್ನಾಗಿ ಮೂಡಿದೆ..ಅದಕ್ಕೆ ..ಪೂರಕವೆನ್ನುವಂತೆ ಬಿ.ಆರ್. ಕವನ...ನಿಮ್ಮ ಲೇಖನವನ್ನು ಮತ್ತೊಮ್ದು ಆಯಾಮಕ್ಕೆ ಕೊಂಡೊಯ್ದಿದೆ. ಇನ್ನು ಮಹಾನ್ ಕವಿಗಳ ಕೃತಿಗಳ ಬಗ್ಗೆ ಬರೆಯುವ ಅರ್ಹತೆ ನನಗಿಲ್ಲ..ಅಂತಹ ಕೃತಿಗಳ ಎಲ್ಲ ಆಯಾಮಗಳನ್ನು ನಮಗೆ ತಿಳಿಯುವಂತೆ ನೀವು, ಸುನಾಥ್ ಸರ್ ನಿಮ್ಮ ಬ್ಲಾಗ್ ಗಳ ಮಾಡುತ್ತಿರುವುದಕ್ಕೆ ನಾವೆಲ್ಲಾ ಆಭಾರಿ.
ಕಾರ೦ತರ- ಕನ್ನಡಿಯಲ್ಲಿ ಕ೦ಡಾತ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ನನ್ನ ಮೆಚ್ಚಿನ ಕಾದ೦ಬರಿಗಳು.ಬೆಟ್ಟದ ಜೀವ ಸುಮಾರು ೧೭ ವರ್ಷಗಳ ಹಿ೦ದೆ ಓದಿದ್ದೆ. ಮಸುಕು ನೆನಪು ತಮ್ಮ ಲೇಖನ ಓದಿದ ಮೇಲೆ ಸ್ಪಷ್ಟ ಹಾಗು ಇನ್ನೊಮ್ಮೆ ಓದಬೇಕೆ೦ಬಾ ತುಡಿತ. ಧನ್ಯವಾದಗಳು.
@ಪರಾಂಜಪೆ ಅವರೆ,
ಕಾರಂತರ ಕಾದಂಬರಿಯ ಒಳ-ಹೊರಗನ್ನು ಸಮರ್ಥವಾಗಿ ವಿವರಿಸಿದ್ದೇನೋ ಇಲ್ಲವೋ ಗೊತ್ತಿಲ್ಲ.. ಅಷ್ಟು ಸಾಮರ್ಥ್ಯವಿದೆಯೆಂದೂ ತಿಳಿದಿಲ್ಲ.. ಆದರೆ ಅವರ ಮೇರು ವ್ಯಕ್ತಿತ್ವದ ಪರಿಚಯ ಬೆಟ್ಟದ ಜೀವದ ಮೂಲಕ ನಮಗಾಗುತ್ತದೆ. ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.
@ಚಂದ್ರಕಾಂತ ಅವರೆ,
ಅವರ ಕಾದಂಬರಿಯೇ ಅಷ್ಟೊಂದು ಸೊಗಸಾಗಿದೆ.. ಮನ ಮುಟ್ಟುವಂತಿದೆ. ಅಂತಹ ಕೃತಿಯನ್ನು ಆದಷ್ಟು ಸಹೃದಯ ಓದುಗರಿಗೆ ಪರಿಚಯಿಸಬೇಕೆಂದು ಅನಿಸಿತು. ನಿಮಗೆ ಇಷ್ಟವಾದುದಕ್ಕೆ ತುಂಬಾ ಧನ್ಯವಾದಗಳು.
@ಅಕ್ಕ,
ನನ್ನ ಉದ್ದೇಶವೂ ಇದೇ ಆಗಿತ್ತು.. ಈ ಲೇಖನದ ಮೂಲಕ ಆದಷ್ಟು ಓದುಗರನ್ನು ಬೆಟ್ಟದ ಜೀವದತ್ತ ಸೆಳೆಯುವುದು..:) ಯಶಸ್ವಿಯಾದೆ ಎಂದೆಣಿಸುವೆ...:)
@ಜಲನಯನ ಅವರೆ,
ಒಂದು ಲೇಖನದ ತಿರುಳನ್ನು ನಾಲ್ಕು ಸಾಲಿನ ಕವನ ಹೇಳಬಲ್ಲದು. ಹಾಗಾಗಿಯೇ ಕೊನೆಯಲ್ಲಿ ಬಿ.ಆರ್. ಅವರ ಕವನವನ್ನು ಹಾಕಿದ್ದು. ಜೀವನ ಪ್ರೀತಿಯನ್ನು ಸಾರುವ ಮಳೆ ಕವನ ಈ ಲೇಖನಕ್ಕೆ ಪ್ರಶಸ್ತವಾಗಿದೆ ಎನಿಸಿತು... ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ.
@ಸೀತಾರಾಮ್ ಅವರೆ,
ಮಾನಸಕ್ಕೆ ಸ್ವಾಗತ. ಅವರ ಈ ಕಾದಂಬರಿಯನ್ನು ಓದಿದಷ್ಟೂ ಓದಬೇಕೆಂಬ ತುಡಿತ ನನಗೂ ಆಗುತ್ತಿರುತ್ತದೆ. ಆಗಾಗ ಓದುತ್ತಲೇ ಇರುತ್ತೇನೆ ಕೂಡ. ಧನ್ಯವಾದಗಳು.
ಬೆಟ್ಟದ ಜೀವದ ಬಗ್ಗೆ ಇಷ್ಟು ಒಳ್ಳೆಯ ಲೇಖನವನ್ನು ನಾನೆಲ್ಲೂ ಓದಿದ ನೆನಪಿಲ್ಲ. ತುಂಬ ಚೆನ್ನಾಗಿದೆ.
ತೇಜಸ್ವಿನಿಯವರೆ,
ನಿಮ್ಮ ಬರಹದಿಂದ "ಬೆಟ್ಟದ ಜೀವ" ಓದಲೇ ಬೇಕೆಂದೆನಿಸಿದೆ. ಪುಸ್ತಕ ಪ್ರೀತಿ ಮತ್ತು ಆಸಕ್ತಿ ಹುಟ್ಟಿಸಿದ ನಿಮ್ಮ ಲೇಖನಕ್ಕೆ ಕಿರುನೋಟಕ್ಕೆ ಧನ್ಯವಾದಗಳು.
ತೇಜಸ್ವಿನಿ...
ಕಾರಂತಜ್ಜನ ಹೆಚ್ಚಿನ ಕೃತಿಗಳನ್ನು ಓದಿದ್ದೇನೆ...
ಅಳಿದ ಮೇಲೆ., ಬೆಟ್ಟದ ಜೀವ, ಮೈಮನಗಳ ಸುಳಿಯಲ್ಲಿ, ಮೂಕಜ್ಜಿಯ ಕನಸುಗಳು..ಇತ್ಯಾದಿಗಳನ್ನು ಎಷ್ಟು ಬಾರಿ ಓದಿದ್ದೇನೆಂದು ನನಗೇ ಗೊತ್ತಿಲ್ಲ...
ಕಾರಂತಜ್ಜನ ಕೃತಿಗಳನ್ನು ಓದುತ್ತ ದೊಡ್ಡವನಾದವನು ನಾನು..
ನಾನು ಆಡುವ ಮಾತಿನಲ್ಲೂ ಅವನ ಪ್ರಭಾವ ಇದೆ..
ನಾನು ಬೆಟ್ಟದ ಜೀವ ಓದಿದ್ದರೂ..
ನೀವು ಹೇಳಿದಂತೆ ಅನ್ನಿಸಿದ್ದರೂ ...
ಅದಕ್ಕೊಂದು ಶಬ್ಧರೂಪ ಕೊಡಲಿಕ್ಕೆ ಆಗಲಿಲ್ಲವಾಗಿತ್ತು...
ಬಹಳ ಸಮರ್ಥವಾಗಿ ವಿಶ್ಲೇಶಿಸಿದ್ದೀರಿ..
ನಿಮ್ಮ ಲೇಖನವನ್ನು ಈಗಲೇ ಎರಡು ಬಾರಿ ಓದಿ ಆನಂದಿಸಿದೆ...
ಅದಕ್ಕೆ ತಕ್ಕಂತೆ ಬಿ.ಅರ್. ರವರ ಕವನ...
ತೇಜಸ್ವಿನಿ ನಿಮ್ಮ ಅಧ್ಯಯನಕ್ಕೊಂದು ನನ್ನ ಸಲಾಮ್..
ಇನ್ನಷ್ಟು ಕೃತಿ ವಿಮರ್ಶೆ ಬರೆಯಿರಿ...
ತೇಜು, ತುಂಬಾ ಸಣ್ಣ ಇದ್ದಾಗ ಓದಿತ್ತೆ..ಈಗ ಅಷ್ಟೊಂದು ನೆನಪಿಲ್ಲೇ.ಪುನ ಓದೆಕ್ಕು, ಸಧ್ಯ ಹುಚ್ಚು ಮನಸಿನ ಹತ್ತು ಮುಖಗಳು ಓದ್ತಾ ಇದ್ದೆ.
ನಿಜಕ್ಕೂ great ಕಾರಂತಜ್ಜ, ನೈಸ್ ಕಿರುನೋಟ:)
ಕಾಮೆಂಟ್ ಪೋಸ್ಟ್ ಮಾಡಿ