ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ -"
ನಿಜ.. ಈ ಮನಸ್ಸೆಂಬುದು ಆ ಶರಧಿಗೇ ಸಮ. ಇದರಾಳವ ಅಳೆಯಬಲ್ಲವರು ಯಾರೂ ಇಲ್ಲ. ಬರೆಯಲಾಗದು, ಬರೆಯಲಾರೆ, ಬರೆಯಬಾರದೆಂದು ಬಯಸಿ ಬಯಸಿ, ಮನಸ ರಮಿಸಿ ಸಾಕಾಯಿತು. ಜಟಿಲಕಾನನದ ಕುಟಿಲ ಪಥದೊಳು ಹರಿವ ತೊರೆ ನಾನಾಗಿರುವಾಗ ಮನಸೆಂಬ ಸಾಗರವನ್ನು ಹೇಗೆ ತಾನೇ ಮೀರಬಲ್ಲೆನು?! ಕಾಣದ ಕಡಲಿಗೆ ಹಂಬಲಿಸಿದ ಮನ.. ಆದರೆ ಅರಿಯದೇ ಹೋಯಿತು ನನ್ನೀ ಮನ, ಸ್ವತಃ ತಾನೇ ಆ ನಿಗೂಢ ಕಡಲಿಗೆ ಸಮವೆಂದು!! ಹಾಗಾಗಿಯೇ ಶರಣಾದೆ ಭಾವನೆಗಳ ತೆರೆಗಳಬ್ಬರದ ಧಾಳಿಗೆ... ತೆರೆತೆರೆದು ತೆರೆದಿಡುವ ಅವುಗಳ ಕಪ್ಪು-ಬಿಳಿಪಿನಾಟಕ್ಕೆ... ಹಳೆಯ ನೆನಪುಗಳ ತಾಕಲಾಟಕ್ಕೆ... ಮಾನಸವನ್ನು ತೆರೆಯಲೇಬೇಕಾಯಿತು.
ಮಂಗಳೂರಿಗೆ ಹೋಗಿದ್ದಾಗ ಹೀಗೇ ಸುಮ್ಮನೆ ನನ್ನ ಹಳೆಯ ಪುಸ್ತಕಗಳನ್ನೆಲ್ಲ ಮಗುಚಿ ಹಾಕುವ ಮನಸ್ಸಾಯಿತು. ಹಾಗೆ ಜೋಡಿಸಿಡುವಾಗ ಎಲ್ಲೋ ಮೂಲೆಯಲ್ಲಿ ಕುಳಿತಿದ್ದ ಒಂದು ಪುಟ್ಟ ನೋಟ್ಪುಸ್ತಕ ನನ್ನ ಗಮನ ಸೆಳೆಯಿತು. ಒಳ ಇಣುಕಿ ನೋಡಿದರೆ, ೨೦೦೧ನೆಯ ಇಸವಿಯಲ್ಲಿ ಅಂದರೆ ಸುಮಾರು ಎಂಟೊಂಭತ್ತು ವರುಷಗಳ ಹಿಂದೆ ಹರಿ ಬಿಟ್ಟಿದ್ದ ನನ್ನ ಪಕ್ವ-ಅಪಕ್ವ ಭಾವನೆಗಳೆಲ್ಲಾ ಒಮ್ಮೆಲೇ ನನ್ನ ಮನಮಂದಾರವನ್ನು ಹೊಕ್ಕು ಹೊಸ ಕಂಪನ್ನು ಸೂಸತೊಡಗಿದವು. ಇವುಗಳನ್ನೆಲ್ಲಾ ಆಗ ನಾನೇ ಬರೆದಿದ್ದೆನೇ? ಇವು ನನ್ನ ಮನದಾಳದ ಮಾತುಗಳಾಗಿದ್ದವೇ?! ಅಥವಾ ಇದನ್ನು ಹಿಂದಿನ ತೇಜಸ್ವಿನಿ ಬರೆದು ಮುಚ್ಚಿ ಮರೆತುಬಿಟ್ಟಿದ್ದಳೋ? ಆಗಿನ ನನ್ನ ಮನದಾಳದ ಮಾತುಗಳನ್ನು ಓದಿದಾಗ ನನ್ನೊಳಗಿನ ನಾನು ಹೊರ ಬಂದು ನನ್ನನ್ನೇ ದುರುಗುಟ್ಟಿ ನೋಡಿ ಮುಗುಳ್ನಕ್ಕು ಪರಿಚಿತವಾಗಿಯೂ ಅಪರಿಚಿತ ಅನ್ನಿಸುವಂತಹ ಭಾವನೆ ಮೂಡಿದ್ದಂತೂ ಸುಳ್ಳಲ್ಲ. ಅವುಗಳಲ್ಲಿ ಕೆಲವನ್ನಾದರೂ ನಿಮ್ಮೊಂದಿಗೆ ಹಂಚಿಕೊಂಡು ಮತ್ತೆ ನನ್ನನ್ನು ನಿಮಗೆ (ಜೊತೆಗೆ ನನಗೂ) ಪರಿಚಯಿಸಿಕೊಳ್ಳುವ ಸಣ್ಣ ಆಸೆ ಮೂಡಿತು. ಅಂತೆಯೇ ಆ ಭಾವಲಹರಿಗಳನ್ನು ಮಾನಸದಲ್ಲಿ ಮೂಡಿಸುತ್ತಿದ್ದೇನೆ.
-------------------------------------------
೨೦-೦೪-೨೦೦೧
೧. ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕೆಲವು ಬಾರಿ ಬೇರೊಬ್ಬರಿಂದಲೇ ಸಿಗುವುದು. ಆದರೆ ಆ ಪರಿಹಾರ ನೀಡುವ ಬೇರೊಬ್ಬರು ನಮ್ಮವರಾಗಿರಬೇಕು ಅಷ್ಟೇ!
೨. ಮನಸಿಗಾಗುವ ನೋವು, ಹೃದಯದ ಬೇನೆಗಿಂತಲೂ ದೊಡ್ಡದೇ. ಮನದಾಳದ ನೋವನ್ನು ತಿಳಿಸಲಾಧ್ಯವಾದರೆ, ಹೃದಯಾಳದ ನೋವನ್ನು ಮುಚ್ಚಿಡಲು ಅಸಾಧ್ಯ. ಒಂದಂತೂ ನಿಜ. ಗಾಯ ತೆರೆದಿಟ್ಟಷ್ಟೂ ಬಲುಬೇಗ ವಾಸಿಯಾಗುವುದು. ಮುಚ್ಚಿಟ್ಟರೆ ಪ್ರಾಣಕ್ಕೇ ಅಪಾಯ!
೩. ಪ್ರೀತಿಯ ಅರ್ಥವನ್ನು ತಿಳಿಯ ಹೋದಂತೆಲ್ಲಾ ನಿಗೂಢವಾಗಿಯೇ ಕಾಣುತ್ತದೆ. ಹೌದು.. ಇದರರ್ಥ ಇದಾಗಿರಬಹುದೆಂದು ಒಂದು ಕ್ಷಣ ಅನಿಸಿದರೆ, ಮರುಕ್ಷಣವೇ ಅದು ಸುಳ್ಳೆನಿಸುತ್ತದೆ. ಈ ಯುಗದಲ್ಲೂ ನಿಶ್ಕಲ್ಮಶ ಪ್ರೀತಿ ನಮ್ಮ ಸಮಾಜದಲ್ಲಿ ಜೀವಂತವಾಗಿದೆಯೇ?! ಈ ಪ್ರಶ್ನೆಗೆ ನಿಸ್ಸಂಶಯವಾದ ಉತ್ತರ ಸಿಗದಿರುವಾಗ, ಪ್ರೀತಿಯ ಅರ್ಥ ತಿಳಿಯುವುದಾದರೂ ಹೇಗೆ?!
೪. "ಕಣ್ಣ ಭಾಷೆಯನ್ನು ತಿಳಿಯಬಹುದು" - ಇದು ಹಲವರ ಅಭಿಪ್ರಾಯ. ಆದರೆ ಅರ್ಥೈಸಿಕೊಂಡ ಭಾಷೆಯೂ, ಕಣ್ಣೊಳಗಿನ ಭಾವವೂ ಒಂದೇ ಎಂದು ಅರಿಯುವ ಮಾಪನ ಯಾವುದು? ಅದಿಲ್ಲದೇ ಇದೊಂದು ಅರ್ಧ ಸತ್ಯವೇ ಸರಿ.
೫. ನಗು ನೂರು ತರಹದ್ದಾಗಿರಬಹುದು. ಅದರ ಭಾಷೆ ಹಲವಾರು ಆಗಿರಬಹುದು. ಆದರೆ ಅಳುವಿನ ಭಾಷೆ ಒಂದೇ. ಅದು ದುಃಖದ ಪರಿಕಲ್ಪನೆಯ, ನೋವಿನ ಪರಿಭಾಷೆಯ ಸಾಧನ. ನೋವ ಮರೆಮಾಚಲು ಮನಃಪೂರ್ವಕವಾಗಿ ನಗಲೂಬಹುದು. ಆದರೆ ನಲಿವ ಬಚ್ಚಿಡಲು ಮನಃಪೂರ್ವಕವಾಗಿ ಅಳುವುದು ಸಾಧ್ಯವೇ?!
೬. ತಿಳಿದುಕೊಂಡಿರುವೆ, ತಿಳಿಯುತ್ತಿರುವೆ, ತಿಳಿದುಕೊಳ್ಳಬಲ್ಲೆ..ಎನ್ನುತ್ತಲೇ ಸಾಗಿಸುವೆವು ಜೀವನವ. ಆದರೆ ಕೊನೆಯಲ್ಲಿ ಮಾತ್ರ ತಿಳಿಯುವೆವು ನಾವು.. ತಿಳಿದುಕೊಳ್ಳದೇ ಹೋದೆ, ತಿಳಿದುಕೊಳ್ಳಲಾರೆ, ತಿಳಿದುಕೊಳ್ಳುವುದು ಬಲು ಕಷ್ಟ ಎಂಬ ಕಟು ಸತ್ಯವನ್ನು ಮಾತ್ರ!
೭. ಮನುಷ್ಯನಿಗೆ ಅತೀವ ನೋವು, ದುಃಖ ಉಂಟಾಗುವುದು ಆತನ ಪ್ರೀತಿಪಾತ್ರರಿಂದಲೇ. ಪ್ರೀತಿಪಾತ್ರರ ಮಾತುಗಳು ಸದಾ ನೆನಪಿರುತ್ತವೆ. ಅಪಾತ್ರರ ಮಾತುಗಳು ಎಷ್ಟೇ ಕಟುವಾಗಿದ್ದರೂ ಮಳೆಹೊಯ್ದು ಮಾಯವಾಗುವಂತೆ ಕೆಲಸಮಯದಲ್ಲೇ ಮರೆಯಾಗಿಹೋಗುತ್ತದೆ. ಆದರೆ ಆತ್ಮೀಯರ ನುಡಿಗಳು(ಸಿಹಿ/ಕಹಿ) ಸದಾ ಸ್ಮೃತಿಯಲ್ಲಿರುತ್ತವೆ.
೮. ಮನಸ್ಸು ಬಯಸಿದ್ದೆಲ್ಲಾ ಸರಿಯಾಗಿರುತ್ತದೆ ಎಂದು ಹೇಳಲಾಗದು. ಆದರೆ ಹೃದಯ ಬಯಸಿದ್ದು ಮಾತ್ರ ತಪ್ಪಾಗಿರುವುದು ತೀರಾ ಕಡಿಮೆಯೇ. ಕಾರಣ ಮನಸ್ಸು ಚಂಚಲ, ಹೃದಯ ಸ್ಥಿರ. ಮನಸ್ಸು ಸ್ಥಿರಗೊಂಡರೆ ಜೀವನ ಸುಗಮ. ಆದರೆ ಹೃದಯ ನಿಂತರೆ ಜೀವಿಯ ಅಂತ್ಯ. ಆಗ ಮನಸಿಗೂ ಕೊನೆಯುಂಟಾಗುವುದು.
೯. ಪ್ರೀತಿಸುವುದು ಬಲು ಸುಲಭ. ಆದರೆ ದ್ವೇಷಿಸುವುದು ಬಲು ಕಷ್ಟ. ದ್ವೇಷದಲ್ಲೇ ಜೀವಿಸುವುದು ಅಸಾಧ್ಯ ಕೂಡ. ಆದರೆ ಪ್ರೀತಿಯ ನಂಟಿಗಿಂತ ದ್ವೇಷದ ನಂಟು ಬಲು ಹೆಚ್ಚಾಗಿರುತ್ತದೆ. ದ್ವೇಷಿಸುವಾಗ ಅದರ ಉರಿ ನಮ್ಮನ್ನೂ ಬಿಡದು. ಪ್ರೀತಿ ಏಕ ಮುಖವಾಗಿದ್ದರೂ ತಂಪನ್ನೀಯುವುದು. ದ್ವೇಷ ಸದಾ ಉರಿಯಲ್ಲಿ ಆರಂಭಗೊಂಡು ಬೂದಿಯಲ್ಲಿ ಅಂತ್ಯವಾಗುವುದು.
೧೦. ಮನುಜನ ಆಸೆ ಮರೀಚಿಕೆಯಂತೆ. ದೂರದಲ್ಲೆಲ್ಲೋ ಇದ್ದಂತೆ ಕಾಣುವುದು, ಕೈಗೆಟಕುವಂತೇ ಅನಿಸುವುದು, ಹತ್ತಿರ ಹೋದಾಗ ಮಾತ್ರ ಮರೆಯಾಗುವುದು. ಒಂದು ಕಡೆ ಓಯಾಸಿಸ್ ಸಿಕ್ಕರೆ ಮತ್ತೊಂದು ಕಡೆ ಸುಡು ಬಿಸಿಲು.
೧೧. ಗೆಲುವಿಗೆ ಆತ್ಮವಿಶ್ವಾಸ ಅಗತ್ಯವೋ ಇಲ್ಲಾ ಆತ್ಮವಿಶ್ವಾಸವನ್ನು ಗೆಲುವಿನಿಂದ ಮಾತ್ರ ಪಡೆಯಬಲ್ಲೆವೋ ಎಂಬ ತರ್ಕ ನನ್ನ ಮನದಲ್ಲಿ ಸದಾ ನಡೆಯುತ್ತಿರುತ್ತದೆ. ಆದರೆ ಒಂದಂತೂ ಸತ್ಯ... ಆತ್ಮವಿಶ್ವಾಸ ಹೆಚ್ಚಿಸಲು, ಸ್ಥಿರಗೊಳಿಸಲು ಒಂದಾದರೂ ಗೆಲುವಿನ ಅಗತ್ಯತೆ ಬೇಕೇ ಬೇಕು.
೧೨. ಸೋಲನ್ನು ಒಪ್ಪಿಕೊಳ್ಳುವುದು ಒಂದು ಕಲೆ. ಇದು ಒಳ್ಳೆಯತನ. ಆದರೆ ಶ್ರಮ ಪಟ್ಟು ಪಡೆದ ನಮ್ಮ ಗೆಲುವನ್ನು ಇತರರಿಗೆ(ನಮ್ಮವರಿಗೇ ಆದರೂ ಸರಿ) ಬಿಟ್ಟುಕೊಡುವುದು ಉದಾರತನವಲ್ಲ, ಮೂರ್ಖತನ. ಕಾರಣ ಗೆಲುವನ್ನು ದಾನವಾಗಿ ಪಡೆದಾಗ ಉಂಟಾಗುವುದು ಕೀಳಿರಿಮೆ. ಗಳಿಸಿಕೊಂಡಾಗ ಮಾತ್ರ ಸಿಗುವುದು ನಿಜ ಹಿರಿಮೆ.
೧೩. ಗುಂಪಿನಲ್ಲಿದ್ದೂ ಏಕಾಂಗಿತನವನ್ನು ಅನುಭವಿಸುವುದು, ಏಕಾಂಗಿಯಾಗಿದ್ದರೂ ಗುಂಪೊಳಗೆ ಸೇರಿ ಬೆರೆಯುವುದು ಸೂರ್ಯ ಮತ್ತು ಚಂದ್ರರಿಗಿರುವಷ್ಟೇ ವ್ಯತ್ಯಾಸವನ್ನು ಹೊಂದಿದೆ ಎಂದೆನ್ನಿಸುತ್ತದೆ. ಮೊದಲನೆಯ ಭಾವ ತನಗೂ ತನ್ನ ಸುತ್ತಲಿನವರಿಗೂ ಬಿಸಿಲನ್ನು, ಸುಡು ತಾಪವನ್ನು ನೀಡಿದರೆ, ಎರಡನೆಯದು ಉರಿವ ಬಿಸಿಲಿನಲ್ಲೂ ತಂಪಾದ ನೆರಳನ್ನು ನೀಡುತ್ತದೆ.
೧೪. ಚಿತ್ರಗೀತೆಯ ಸಾಲೊಂದು ಸದಾ ಕಾಡುತ್ತಿರುತ್ತದೆ...
"ಓ ಚಂದಮಾಮ ಏಕೆ ಹೀಗೇ?
ತಂಗಾಳಿಯಲ್ಲೂ ಬಿಸಿಲ ಬೇಗೆ
ಅಂಗಳದ ತುಂಬ ನಿನ್ನ ಬಿಂಬ ಇದ್ದರೂ
ಮನೆಯೊಳಗೆ ಮಾತ್ರ ಬೆಳಕಿಲ್ಲ!!" - ಮನದೊಳಗೆ ದೀಪ ಹೊತ್ತಿಸಲಾಗದವರು ಬದುಕೆಂಬ ಮನೆಯೊಳಗೆ ಕತ್ತಲನ್ನೇ ತುಂಬಿಕೊಳ್ಳುತ್ತಾರೇನೋ!! ಹೀಗಿದ್ದಾಗ ನಿಜ ಬೆಳಕು ಬಂದಾಗಲೂ ಕಣ್ಕುಕ್ಕುವ ಭಯದಿಂದಾಗೋ ಇಲ್ಲ ಭ್ರಮೆಗೊಳಗಾಗೋ ಕಣ್ಮುಚ್ಚುತ್ತಾರೆ. ಬದುಕನ್ನಿಡೀ ಕತ್ತಲೆಯಲ್ಲೇ ಕಳೆಯುತ್ತಾರೆ...ಕೊಳೆಯುತ್ತಾರೆ.
೧೫. ಹಲವಾರು ಸೋಲುಗಳು ಒಂದನ್ನೊಂದು ಅರಸಿ ಬಂದಾಗ ನಡುವೆ ಆಗಾಗ ಸಿಗುವ ಗೆಲವುಗಳೂ ಅಲ್ಪವಾಗಿಯೋ ಇಲ್ಲಾ ಸೋಲಾಗಿಯೋ ಕಾಣುತ್ತವೆ. ಅದೇರೀತಿ ಗೆಲುವೇ ತುಂಬಿರುವಾಗ ನಡುವೆ ಸಿಗುವ ಆಗೊಂದು ಈಗೊಂದು ಸೋಲೂ ಅಲ್ಪವಾಗಿಯೋ ಇಲ್ಲಾ ಮುಂದಿನ ಗೆಲುವಿಗೆ ಒಂದು ಮಜಲಾಗಿಯೋ ಭಾಸವಾಗುವುದು.
೧೬. "ಆಸೆಯೇ ದುಃಖಕ್ಕೆ ಮೂಲ" ನಿಜ. ಆದರೆ ಆಸೆಯ ಪ್ರಭಾವ, ಋಣಾತ್ಮಕ ಹಾಗೂ ಧನಾತ್ಮಕ ಪರಿಣಾಮಗಳು- ಇವುಗಳನ್ನೆಲ್ಲಾ ಆ ಆಸೆಯನ್ನು ಹೊಂದಿ ಪಡೆಯಲು ಹವಣಿಸಿದಾಗ ಮಾತ್ರ ಅರಿವಾಗಬಹುದೇನೋ!? ನಿರಾಸೆಗೂ ನಿರ್ಲಿಪ್ತತೆಗೂ ಹೆಚ್ಚಿನ ಅಂತರವೇನೂ ಕಂಡುಬರದು. ನಿರಾಸೆ ಹೊಸ ಆಸೆಯ ಅನ್ವೇಷಣೆಗೆ ಹೊರಟೆರೆ ನಿರ್ಲಿಪ್ತತೆ ಬದುಕುವ ಆಶಯವನ್ನೇ ಹೊಸಕಿಹಾಕಬಹುದು!!
ಅದೇ ಪುಸ್ತಕದ ಮೂಲೆಯಲ್ಲೊಂದು ಕಡೆ ಗಾಂಧೀಜಿಯವರ ಹಾಗೂ ರಾಮಕೃಷ್ಣ ಪರಮಹಂಸರ ನುಡಿಮುತ್ತುಗಳನ್ನೂ ದಾಖಲಿಸಿಟ್ಟಿದ್ದೆ. ಅವೂ ನನ್ನ ಕಣ್ಣ ಹೊಕ್ಕಿ ಮನದೊಳಗೆ ಮನೆಮಾಡಿಕೊಂಡವು. ಆ ಸಾಲೂಗಳೂ ಈಗ ನಿಮಗಾಗಿ ಇಲ್ಲಿ ಭಿತ್ತರಿಸುತ್ತಿದ್ದೇನೆ.
"ಹೃದಯದಲ್ಲಿ ಗೊಂದಲವಿದ್ದರೂ ಹೊರಗೆ ಮುಗುಳು ನಗು ಬೀರಲು ನನ್ನ ಪಳಗಿಸಿದ್ದೇನೆ."
"ದುಃಖ ಬರುವಾಗಲೂ ನಕ್ಕು ಬಿಡು. ಆ ದುಃಖವನ್ನು ಗೆಲ್ಲುವುದಕ್ಕೆ ನಗುವಿಗಿಂತ ಮೇಲಿನದಾದ ಬೇರೆ ಯಾವುದೇ ಶಕ್ತಿ ಇರುವುದಿಲ್ಲ"
"ಮಾನಸಿಕ ದುಗುಡ ಜೀವನದ ತಪ್ಪು ದೃಷ್ಟಿಕೋನದಿಂದ ಉಂಟಾಗುತ್ತದೆ."
--------------------------------------------------------
ಇವಿಷ್ಟು ಸುಮಾರು ಒಂಭತ್ತು ವರುಷಗಳ ಹಿಂದೆ ನಾನೇ ಬರೆದು ಮರೆತಿಟ್ಟ ಪಕ್ವ-ಅಪಕ್ವ ಸಾಲುಗಳು. ಈ ಸಾಲುಗಳ ಕುರಿತಾಗಿ ನಿಮಗಿರುವ ಅಭಿಪ್ರಾಯ-ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸಲು ನನ್ನ ಮಾನಸ ಸಿದ್ಧವಾಗಿದೆ. ನಿಮಗೆಲ್ಲರಿಗೂ ಆದರದ ಸ್ವಾಗತ :)
- ತೇಜಸ್ವಿನಿ.
27 ಕಾಮೆಂಟ್ಗಳು:
Tejakka is back!
ತು೦ಬಾ ಖುಷಿ ಆಗುತ್ತಿದೆ ನೀವು ಮತ್ತೆ ಮಾನಸದ ಬಾಗಿಲು ತೆರೆದಿದ್ದಕ್ಕೆ.... ನೀವಿಲ್ಲದ ಹೊತ್ತಿನಲ್ಲಿ ನಿಮ್ಮನ್ನು ತು೦ಬಾ ಮಿಸ್ ಮಾಡಿಕೊ೦ದಿದ್ದೆವೆ...
ಮರಳಿ ಬರುವ ಹೊತ್ತಿನಲ್ಲಿ ತು೦ಬಾ ಒಳ್ಳೆಯ ಬರಹದೊ೦ದಿಗೆ ಬ೦ದಿದ್ದೀರಾ.... ಮುತ್ತಿನ೦ತ ಮಾತುಗಳು ಅನ್ನಬಹುದೇನೊ... ಎಲ್ಲವೂ ಪಕ್ವವಾದ ಮಾತುಗಳು... ಅಪಕ್ವವಾದುವು ಯಾವುದೂ ಇರಲಿಲ್ಲ... ಮತ್ತೆ ಮತ್ತೆ ಓದಿ ಜೀವನದಲ್ಲಿ ಅಳವಡಿಸಿಕೊಳ್ಳ ತಕ್ಕ೦ತಹ ನುಡಿಮುತ್ತುಗಳು....
ಎಲ್ಲವೂ ಸಾರ್ವಕಾಲಿಕ ಸತ್ಯಗಳು, ಇನ್ನೇನು ಹೇಳಲು ಸಾಧ್ಯ?
ತೇಜಸ್ವಿನಿ ಮೇಡಂ, ಹಿನ್ನೀರಿನ ಜೊತೆಗೆ ಮುನ್ನೀರಿನತ್ತ ಪಯಣ... ಮಾನಸದೊಳಗಿನ ಈ ಲೇಖನ ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಡುತ್ತದೆ. ಮೊದಲನೆಯದಾಗಿ ಬರೆದ ಕವಿತೆಯೊಂದಿಗೆ ಬೆಸೆದ ಭಾವನೆಗಳು ಭಾವಪೂರಿತವಾಗಿವೆ. ಇನ್ನು ಎಂದೋ ಬರೆದಿಟ್ಟಿದ್ದ, ನಿಮ್ಮ ಪುಸ್ತಕದೊಳಗಿನಿಂದ ಹೆಕ್ಕಿತೆಗೆದ ಮಾತುಗಳು ನಿಜಕ್ಕೂ ಒಬ್ಬ ಅನುಭಾವಿಯ ನುಡಿಗಳಾಗಿವೆ.
ಮೊದಲನೆಯದು ನಿಜಕ್ಕೂ ಸತ್ಯವೇ ಹೌದು. ಸಮಸ್ಯೆಗಳಿಗೆ ಸ್ಪಂದಿಸುವವರೆಲ್ಲರೂ ನಮ್ಮವರಾಗಿರುವುದಿಲ್ಲ. ಆದರೆ ಎಲ್ಲೋ ಒಬ್ಬರು ಸಮಸ್ಯೆಯನ್ನು ಪರಿಹರಿಸುವುದರೊಂದಿಗೆ ನಮ್ಮವರೂ ಆಗಿರುತ್ತಾರೆ. ಆ `ಬೇರೆ'ಯವರು ನಮ್ಮವರಾಗುವುದು ಬಹಳವೇ ಕಷ್ಟವಾಗಿರುತ್ತದೆ.
ಹೃದಯದಾಳದ ನೋವನ್ನು ಮುಚ್ಚಿಡುವುದು ನಿಜಕ್ಕೂ ಸುಲಭವಲ್ಲ. ಒಬ್ಬರಲ್ಲಾ ಒಬ್ಬರು ಈ ವಿಧದ ನೋವಿನಿಂದ ಬಳಲುತ್ತಿರುವವರೇ ಇರುತ್ತಾರೆ. ಆಗೆಲ್ಲ ಸಾಂತ್ವನ ಸಿಗಬೇಕಾದರೆ, ವ್ಯಾಧಿರಟ್ಟು ಮಾಡಬೇಕಷ್ಟೆ. ಅದರಿಂದ ಮತ್ತೊಬ್ಬರ ಮನಸಿಗೆ ನೋವಾಗಬಹುದೆಂಬ ಆಂತರಿಕ ಯೋಚನೆ ಈ ನೋವನ್ನು ಹಿಡಿದಿಡುವಂತೆ ಮಾಡುತ್ತದೆ.
ಪ್ರೀತಿ, ಕಣ್ಣಭಾಷೆ ಇವೆಲ್ಲವೂ ಸಹ ಈ ಕಾಲಕ್ಕೆ ತಕ್ಕಂತೆ ಕೋಲ ಎಂಬಂತೆ ಇರುವುದು ಸಾಮಾನ್ಯವಾಗಿರುವಾಗ ಇಲ್ಲಿ ವಿಶೇಷವೇನೂ ಕಾಣಿಸುವುದಿಲ್ಲ. ಎಲ್ಲರೂ ಮಾಡುವುದು ಸ್ವಾರ್ಥಕ್ಕಾಗಿ ಎಂಬುದಂತೂ ಅಕ್ಷರಶ: ಸತ್ಯ ಎಂಬುದು ನನ್ನ ಅನಿಸಿಕೆ.
ಎನಗಿಂತ ಕಿರಿಯರಿಲ್ಲ ಎಂಬ ಭಾವನೆ ನಮ್ಮೊಡನಿದ್ದಾಗ ನಾವು ಎಷ್ಟೇ ತಿಳಿದರೂ ಸಹ ಈ ಅಗಾಧ ವಿಶ್ವದಲ್ಲಿ ತಿಳಿಯಲ್ಪಡುವುದು ಕೇವಲ ಬಿಂದು ಮಾತ್ರವೇ ಹೊರತು ಮತ್ತೇನೂ ಅಲ್ಲ.
ಹೌದು, ಪ್ರೀತಿಪಾತ್ರರ ಮಾತುಗಳು ಎಂದಿಗೂ (ಶರೀರದ ಮೇಲೆ ಹಚ್ಚೆಹಾಕಿಸಿಕೊಂಡಂತೆ) ಮನದಾಳದಲ್ಲಿ ನಿರಂತರವಾಗಿ ನಮ್ಮೊಡನೆಯೇ ಇರುತ್ತವೆ.
ಮನಸ್ಸು ಚಂಚಲ, ಹೃದಯ ಸ್ಥಿರ. ಈ ಲೇಖನ ಓದುವಾಗ ಮನಸ್ಸು ಅದೆಷ್ಟು ಚಂಚಲವಾಗಿತ್ತೆಂದರೆ, ಒಂದೊಂದು ವಾಕ್ಯಕ್ಕೂ ತನ್ನದೇ ಆದ ಭಾವಾರ್ಥಗಳನ್ನು ಹುಡುಕುತ್ತಾ ಎತ್ತೆತ್ತಲೋ ಚಲಿಸುತ್ತಿತ್ತು.
ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು ಎಂಬ ಹಾಡಿನಂತೆ, ಹತ್ತಿರ ಹೋದಾಗಲೇ ತಿಳಿಯುವುದು ಆ ಬೆಟ್ಟಗುಡ್ಡದ ವಾಸ ಅಷ್ಟು ಸುಲಭವಲ್ಲವೆಂದು. ಹಾಗೆಯೇ ಜೀವನದಲ್ಲಿ ಸಾಕಷ್ಟು ನೋವು ನಲಿವುಗಳು ಬರುವುದು. ನನಗೆ ಉದ್ಯೋಗ ದೊರೆತಾಗ ಆದ ಅನುಭವ ಇದು. ಈಗ್ಗೆ ಹತ್ತು ವರ್ಷಗಳ ಹಿಂದೆ ನನಗೆ ಕೆಲಸ ಸಿಕ್ಕಿದಾಗ ತಂದೆಯನ್ನು ಕಳೆದುಕೊಂಡಿದ್ದೆ. ಆಗಲೇ ಅನಿಸಿದ್ದು, ಮಾನವ ಬಯಸುವುದೊಂದಾದರೆ, ದೈವ ನೀಡುವುದು ಮತ್ತೊಂದು.
ಒಂದು ಗೆಲುವನ್ನು ಪಡೆಯಲು ಆತ್ಮವಿಶ್ವಾಸದ ಜೊತೆಗೆ ಅದನ್ನು ಪ್ರೋತ್ಸಾಹಿಸುವ ಬಂಧುಮಿತ್ರರೂ ಇರಬೇಕು.
ಪರಿಶ್ರಮವಿಲ್ಲದೇ ದೊರೆತ ಯಾವುದೇ ಪುರಸ್ಕಾರವೂ ಅರ್ಹವೆನಿಸುವುದಿಲ್ಲ. ಇದನ್ನೇ ಸ್ವಾಮಿ ಪುರುಷೋತ್ತಮಾನಂದರು ಒಂದು ಕಡೆಯಲ್ಲಿ (ಬಹುಶ: ಧೀರತೆಯ ದುಂದುಭಿ ಪುಸ್ತಕದಲ್ಲಿರಬೇಕು) `ಯೋಗ್ಯತಾ ಪತ್ರವನ್ನೇನೋ ಸಂಪಾದಿಸಬಹುದು, ಆದರೆ ಯೋಗ್ಯತೆಯನ್ನಲ್ಲ' ಎಂದು.
ಇವೆಲ್ಲ ಸಹಜ. ಸೂರ್ಯನ ಶಾಖದೊಂದಿಗೆ, ಚಂದ್ರನ ತಂಪಿನೊಂದಿಗೆ ಹೀಗೆ ಬದುಕು ಪ್ರಖಂಡ ಕಾಂತಿ ಮತ್ತು ಪ್ರಶಾಂತ ಶಾಂತಿಯೊಂದಿಗೆ ಸಾಗಿದರೇ ಸೊಗಸು.
ಎಣ್ಣೆ ಬಂದಾಗ ಕಣ್ಮುಚ್ಚಿಕೊಂಡರೆಂಬಂತೆ - ಇರುವುದೆಲ್ಲವ ಬಿಟ್ಟು ಇರದುದದರೆಡೆಗೆ ತುಡಿವುದೆ... ಎಂಬಂತೆ ಈ ಮಾತುಗಳು ಮನಸ್ಸಿಗೊಪ್ಪುತ್ತವೆ.
ಸೋಲು ಎಂದೂ ನಿಜವಲ್ಲ, ಹಾಗೆಯೇ ಗೆಲುವೂಸಹ. ಇವೆರಡೂ ಒಂದರೊಡನೊಂದು ಬೆಸೆದುಕೊಂಡಿರುವಂತಹುದು.
ಆಸೆಯೆಂಬ ಬಿಸಿಲಕುದುರೆಯೇರಿ ಎಲ್ಲಿ ಸಾಗುವೆ? ಹಾಗೆಂದು ನಿರಾಶೆಯಿರಬಾರದು. ಆಸೆಯಿರಬೇಕು, ಆದರೆ ದುರಾಸೆಯಿರಬಾರದು. ಆಸೆಯೊಂದಿಗೆ ಒಳ್ಳೆಯ ಆಶಯಗಳೂ ಇದ್ದಾಗ ಮಾತ್ರ ಬದುಕು ಸಾರ್ಥಕ ಎಂಬುದು ನನ್ನ ಅನಿಸಿಕೆ.
ಧನ್ಯವಾದಗಳು.
ಸಸ್ನೇಹಗಳೊಂದಿಗೆ,
ಚಂದ್ರಶೇಖರ ಬಿ.ಎಚ್.
ಪ್ರಿಯ ತೇಜೂ,
ಸ್ವಾಗತ !!! ಬಹುದಿನಗಳ ಮೇಲೆ ಮಾನಸದಲ್ಲಿ ಅಕ್ಷರಗಳನ್ನು ಕಂಡು ರಾಶಿ ರಾಶಿ ಖುಷಿಯಾತು !
ನೀನು ಎಂದೋ ಬರೆದಿಟ್ಟ ಅನಿಸಿಕೆಗಳು ಇಂದಿಗೂ ಪ್ರಸ್ತುತವೇ ಅಲ್ಲವೇ? ನನಗೂ ಎಷ್ಟೋ ಸಲ ತಲೆಯೊಳಗೆ ಇಂಥಾ ವಿಚಾರಗಳು ಇಣುಕುತ್ತವೆ ! ಆದರೆ ಎಂದಿಗೂ ಅವುಗಳನ್ನು ಬರೆದಿಡುವ ಗೋಜಿಗೆ ಹೋಗಲೇ ಇಲ್ಲ !
"ನಗು ನೂರು ತರಹದ್ದಾಗಿರಬಹುದು. ಅದರ ಭಾಷೆ ಹಲವಾರು ಆಗಿರಬಹುದು. ಆದರೆ ಅಳುವಿನ ಭಾಷೆ ಒಂದೇ. ಅದು ದುಃಖದ ಪರಿಕಲ್ಪನೆಯ, ನೋವಿನ ಪರಿಭಾಷೆಯ ಸಾಧನ. ನೋವ ಮರೆಮಾಚಲು ಮನಃಪೂರ್ವಕವಾಗಿ ನಗಲೂಬಹುದು. ಆದರೆ ನಲಿವ ಬಚ್ಚಿಡಲು ಮನಃಪೂರ್ವಕವಾಗಿ ಅಳುವುದು ಸಾಧ್ಯವೇ?!"
" ಗೆಲುವಿಗೆ ಆತ್ಮವಿಶ್ವಾಸ ಅಗತ್ಯವೋ ಇಲ್ಲಾ ಆತ್ಮವಿಶ್ವಾಸವನ್ನು ಗೆಲುವಿನಿಂದ ಮಾತ್ರ ಪಡೆಯಬಲ್ಲೆವೋ ಎಂಬ ತರ್ಕ ನನ್ನ ಮನದಲ್ಲಿ ಸದಾ ನಡೆಯುತ್ತಿರುತ್ತದೆ. ಆದರೆ ಒಂದಂತೂ ಸತ್ಯ... ಆತ್ಮವಿಶ್ವಾಸ ಹೆಚ್ಚಿಸಲು, ಸ್ಥಿರಗೊಳಿಸಲು ಒಂದಾದರೂ ಗೆಲುವಿನ ಅಗತ್ಯತೆ ಬೇಕೇ ಬೇಕು."
ಈ ವಿಚಾರಗಳು ಬಹಳ ಇಷ್ಟವಾದವು !
ಇನ್ನು ಮಾನಸದಲ್ಲಿ ಭಾವನೆಗಳು ನಿಲ್ಲದೇ ಹರಿಯುತ್ತಿರಲಿ !
ತೇಜಸ್ವಿನಿ,
ಹಳೆಯ ನೋಟ್ಸಗಳನ್ನು ತೆಗೆದು ನೋಡಿದಾಗ ಸಿಗುವ ಮಜಾನೇ ಬೇರೆ. ಅಲ್ಲಿಂದ ಇಲ್ಲಿಯವರೆಗೆ ಜೀವನಪ್ರವಾಹ ಹೇಗೆ ಹರಿದಿದೆಯಲ್ಲ ಎಂದು ಅನಿಸುವದು.
Anyway, ನಿನ್ನ ಭಾವನೆಗಳು ಯಾವಕಾಲಕ್ಕೂ ಸಮರ್ಪಕವಾಗಿಯೇ ಇವೆ.
ತೇಜಕ್ಕ ನಿಮ್ಮ ಪುನರಾಗಮ ಖುಷಿ ತಂದಿದೆ.. ಬಾಕಿ ಇರುವ ಅಷ್ಟು ಲೇಖನಗಳ್ಳನ್ನ ನಿರೀಕ್ಷಿಸುತ್ತ....
manasige muttithu nimma chandada baraha :)
jeevana prathiondu kshanadalu namage patta kalisuthale iruthe.
nimma ee salugalu aste tayiga preethi matinate, guruvina nithi patta danthiye
hige bariyuthiri
daynavaadagalu,
veena
antu blog update aayitu...!
ಅಧ್ಭುತ ಭಾವನೆಗಳನ್ನು ಹೊರದುಮ್ಬಿಸುವ ಲೇಖನ .. ಮನಮುಟ್ಟುವ ಮಾತುಗಳು . ಸರ್ವಕಾಲಿಕ ಸತ್ಯಗಳು ..
ನಿಮ್ಮ ಪುನರಾಗಮನಕ್ಕೆ ತುಂಬು ಹೃದಯದ ಸ್ವಾಗತ .. ನಿಮ್ಮ ಬರಹ ಎಂದಿಗೂ ಆಪ್ತ ..
ತೇಜಸ್ವಿನಿ ಮೇಡಮ್,
ಹಿನ್ನೀರಿನ ಜೊತೆಗೆ ಮುನ್ನೀರಿನತ್ತ ಪಯಣ...
ತುಂಬಾ ಚೆನ್ನಾಗಿದೆ. ಎಂದೋ ಬರೆದಿದ್ದು ಈಗ ಓದಿದರೆ ಎಷ್ಟು ಖುಷಿಯಾಗುತ್ತೆ ಅಲ್ವಾ....
ತುಂಬ ಇಷ್ಟವಾಯಿತು.
ತೇಜಸ್ವಿನಿ ಮೇಡಮ್,
ಹಿನ್ನೀರಿನ ಜೊತೆಗೆ ಮುನ್ನೀರಿನತ್ತ ಪಯಣ...
ಎಂದೋ ಬರೆದಿದ್ದು ಇಂದು ಇಷ್ಟವಾಗುವುದು ಯಾವ ಕಾರಣಕ್ಕಾಗಿ....
ನಿಮ್ಮ ಹಳೆಯದನೆಲ್ಲ್ಲಾ ಓದಿ ತುಂಬಾ ಖುಷಿಯಾಯ್ತು....
teju akka,
haaDu haLeyadaadarEnu bhaava navanaveena eMbaMte ee nimma haLe nuDigaLaadaroo oLLe viShayagaLannu tiLisuttive.
ತೇಜಕ್ಕ ಬ್ಲಾಗ್ ಅಪ್ಡೇಟ್ ಮಾಡಿಬಿಟ್ಟಿದಿರಿ! ಗುಡ್. ಮತ್ತೆ ಬರೀರಿ.
ಮಾನಸ ಮತ್ತೆ ಮನತುಂಬುತ್ತಿದೆ ಅಕ್ಕಾ..ಸ್ವಾಗತ. ಮತ್ತೆ ಮತ್ತೆ ಮತ್ತಷ್ಟು ಬರೆಯಿರಿ. ಕಾಯುತ್ತಿರುತ್ತೇವೆ ಓದೋಕೆ.
-ತಂಗಿ
ಧರಿತ್ರಿ
ಬಹಳ ದಿನಗಳ ನಂತರ ತುಂಬಾ ಚಂದದ ಸಾಲುಗಳೊಡನೆ ಬಂದಿದ್ದೀರಿ,ಸ್ವಾಗತ.
ವಿರಾಮ ಆಯ್ತಲ್ವಾ, ಇನ್ನು ಬೇಗ ಬೇಗ ಬರೆಯಿರಿ:-).
Welcome back!:)
Ella saalugaLu "howdalvaa" anno haage ive. matte matte baritaa iri..
ತೇಜಸ್ವಿನಿ ನಿಮ್ಮಂಥವರಿಗೆ ಈ ಪಾಟಿ ವಿರಾಮ ಸಲ್ಲ, ನಿಮ್ಮ ಪೋಸ್ಟ್ ಗಳನ್ನು ಆಗಾಗ್ಗೆ ನೋಡುವ ನಮ್ಮ ಆಳವನ್ನು ನಾವೇ ಅಳೆದು ನೋಡುವ ತವಕ...ನೀವು ಕನಿಷ್ಟ ತಿಂಗಳಿಗೊಂದದರೂ ಪೋಸ್ಟ್ ಮಾಡಲೇಬೇಕು...ಏನಂತೀರಿ?
ನನ್ನ ಬ್ಲಾಗ್ ಗೆ ಬಂದಿರಿ ಫಾಲೋಗೆ ಲಿಂಕಿಸಿದ್ದೀರಿ, ಪ್ರತಿಕ್ರಿಯೆ ನೀಡಿಲ್ಲ...ಸಮೀಕ್ಷಿಸಿ ಪ್ರತಿಕ್ರಿಯೆ ನೀಡುವಿರೆಂದು ತಿಳಿಯಲೇ? ಧನ್ಯವಾದ
ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. ಮತ್ತೊಮ್ಮೆ ನಿಮ್ಮೆಲ್ಲರ ಪ್ರೀತ್ಯಾದರಗಳನ್ನು ತುಂಬಿಕೊಂಡ ನನ್ನೀ ಪುಟ್ಟ ಮಾನಸ ಚೇತೋಹಾರಿಯಾಗಿದೆ. ನಿಮ್ಮೆಲ್ಲರ ಪ್ರೇರಣೆ ಹೀಗೇ ಸದಾ ನನ್ನೊಂದಿಗಿರಲೆಂದೇ ಹಾರೈಸುವೆ.
ವಂದನೆಗಳೊಂದಿಗೆ,
ತೇಜಸ್ವಿನಿ.
ತೇಜಸ್ವಿನಿಯವರೇ ನಿಮ್ಮ ಬರಹಗಳು ಓದುಗನ ಮನವನ ಆವರಿಸುವನ್ತವು ಒಮ್ಮೆ ನನ್ನ ಬ್ಲಾಗ್ ನೋಡಿ.......sahayaatri.blogspot.com
ಇವೆಲ್ಲ ಅಪಕ್ವವಾಗಲೂ ಸಾಧ್ಯವೇ ಇಲ್ಲ ತೇಜಸ್ವಿನಿಯವರೆ...ತುಂಬಾ ಪ್ರಾಕ್ಟಿಕಲ್ ಆಗಿರುವ ಫಿಲಾಸಫಿಯನ್ನೇ ಹರಿಯಬಿಟ್ಟಿದ್ದೀರಿ...ಸಂಗ್ರಹಯೋಗ್ಯ ಸಾಲುಗಳು
thanks for this, especially the quotes at the end of blog.. keep writing
I am happy that u r back again !! :) plz keep writing.....
ತೇಜಸ್ವಿನಿ...
ನೀವು ಸಂಗ್ರಹಿಸಿದ ಪ್ರತಿಯೊಂದೂ ಸಾಲಿನ ಅರ್ಥವೂ ತುಂಬಾ ಚೆನ್ನಾಗಿದೆ...
ಹಲವು ಬಾರಿ ಓದಿಕೊಂಡಿದ್ದೇನೆ...
ಬಹುಷಃ ನಿಮ್ಮ ವಿಧ್ಯಾರ್ಥಿ ಜೀವನವನ್ನು ಬಹಳ ಅರ್ಥಪೂರ್ಣವಾಗಿ ಕಳೆದಿದ್ದೀರಿ ಅನಿಸುತ್ತದೆ...
ಈ ಸಾರಿ ಬಹಳ ಕಾಯಿಸಿ ಬಿಟ್ಟಿದ್ದೀರಿ...
ಹಾಗೆ ಮಾಡ ಬೇಡಿ...
ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳು...
ಪ್ರಕಾಶಣ್ಣ...
late aagi comment haaktirodakke kshame irli. every line is very profound ! :)
welcome back !
ತೇಜು, ಸುಂದರ ಸೂಕ್ತಿಗಳು. ಒಂದೊಂದರಲ್ಲಿ ಅಪಾರ ಅರ್ಥ ಅಡಗಿದೆ.
ನನಗೆ ತುಂಬಾ ಹಿಡಿಸಿದ್ದೆಂದರೆ :- "ದುಃಖ ಬರುವಾಗಲೂ ನಕ್ಕು ಬಿಡು. ಆ ದುಃಖವನ್ನು ಗೆಲ್ಲುವುದಕ್ಕೆ ನಗುವಿಗಿಂತ ಮೇಲಿನದಾದ ಬೇರೆ ಯಾವುದೇ ಶಕ್ತಿ ಇರುವುದಿಲ್ಲ"
- ನಿಜ, ಆದರೆ ಕಷ್ಟ!!
ತೇಜಸ್ವಿನಿಯವರೇ,, ನಿಮ್ಮ ಬ್ಲಾಗು ತುಂಬಾ ಚೆನ್ನಾಗಿದೆ..ಎಲ್ಲಾ ಲೇಖನಗಳೂ, ಕವಿತೆಗಳೂ ಇಷ್ಟವಾದವು..
ಅದರಲ್ಲಿಯೂ
"ಹೃದಯದಲ್ಲಿ ಗೊಂದಲವಿದ್ದರೂ ಹೊರಗೆ ಮುಗುಳು ನಗು ಬೀರಲು ನನ್ನ ಪಳಗಿಸಿದ್ದೇನೆ."
ಈ ಮಾತುಗಳು ಹೃದಯವನ್ನು ತಟ್ಟಿದವು..
ಎಷ್ಟು ನಿಜ ಅಲ್ದಾ?
ಕಾಮೆಂಟ್ ಪೋಸ್ಟ್ ಮಾಡಿ