"ಇದೆಂಥದ್ದೇ.. ನೀ ಬರ್ದ ಕಥೆ, ಕವನ ಎಲ್ಲಾ ಎಲ್ಲೆಲ್ಲೋ ಇಟ್ಟಿರ್ತೆ. ಹಾಳೆ ಎಲ್ಲಾ ಬಿದ್ಕ ಇರ್ತು. ನಿಂಗೆ ಈ ಕಾಗ್ದ ಬೇಕೋ ಬೇಡ್ದೋ?!!..." ಇಂಥ ದೂರುಗಳನ್ನು ನಾನು ನನ್ನ ಹೆತ್ತವರಿಂದ, ನನ್ನವರಿಂದ ಕೇಳುತ್ತಲೇ ಇದ್ದೆ. ನಾನು ಬರೆದ ಲೇಖನ, ಕಥೆ, ಕವನಗಳ ಪ್ರತಿ ಅದು ನಾನು ತೋರಿಸುತ್ತಿದ್ದ ಅಸಡ್ಡೆಯಾಗಿತ್ತೆಂದು ಎಣಿಸದಿರಿ ದಯಮಾಡಿ! ನಾನು ಸರಿಯಾಗಿ ಫೈಲ್ನಲ್ಲೇ ಇಟ್ಟಿರುತ್ತಿದ್ದೆ. ಆದರೆ ಶೆಲ್ಫ್ ಸರಿಮಾಡುವಾಗಲೋ, ಇಲ್ಲ ಧೂಳು ತೆಗೆಯುವಾಗಲೋ ಎಲ್ಲಾ ಚೆಲ್ಲಪಿಲ್ಲಿಯಾಗಿ ಒಂದೆರಡು ಹಾಳೆಗಳು ಕಳೆದು ಹೋಗುತ್ತಿದ್ದವು. ಇದರಿಂದಾಗಿ ಅದೆಷ್ಟು ಬರಹಗಳನ್ನು ಕಳೆದುಕೊಂಡೆನೋ ತಿಳಿಯದು!!
ಮದುವೆಯ ಮೊದಲು ಹಾಗೂ ಆನಂತರ ಬರೆದ ಕಥೆ, ಕವನಗಳಲ್ಲಿ ಕೆಲವಾದರೂ ಎಲ್ಲೋ ಮಾಯವಾಗಿವೆ. ಆನಂತರ ನನ್ನವರ ಒತ್ತಾಯದ ಮೇರೆಗೆ ಎಲ್ಲವನ್ನೂ ಕಂಪ್ಯೂಟರ್ನಲ್ಲಿ ಫೀಡ್ ಮಾಡಿಡತೊಡಗಿದೆ. ಆದರೆ ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ.. ಎಂಬಂತೆ.. ದಿಢೀರೆಂದು ಒಂದೊಳ್ಳೆಯ ಬೆಳಗ್ಗೆ ಸ್ವಿಚ್ ಹಾಕುತ್ತಲೇ ವಿಂಡೋಸ್ ಕ್ರ್ಯಾಶ್ ಆಗುವುದೋ, ಇಲ್ಲಾ ಹಾರ್ಡ್ ಡಿಸ್ಕ್ ಯಕ್ಕುಟ್ಟೊಗುವುದೋ, ಇಲ್ಲಾ ವೈರಸ್ಜ್ವರ ಬಂದು ನನ್ನ ಡೇಟಾ ಮಾತ್ರ ಮಾಯವಾಗುವುದೋ ಆಗಿತ್ತಿತ್ತು. ಆಗೆಲ್ಲ ನನ್ನ ಶ್ರಮ ವ್ಯರ್ಥವಾಗುತ್ತಿರುವುದನ್ನು ನೋಡಿ ತುಂಬಾ ಕೋಪ ಬಂದು ಕಂಪ್ಯೂಟರ್ಗೆ ಒಂದು ಗುದ್ದಿದ್ದೂ ಇದೆ. ಅಷ್ಟಕ್ಕೂ ಸುಮ್ಮನಾಗದೇ ನನ್ನವರ ಮೇಲೂ ಕೋಪ ಪ್ರದರ್ಶನವಾಗುತ್ತಿತ್ತು... "ನಂಗೊತ್ತಿಲ್ಲೆ ಎಂತ ಮಾಡ್ತ್ರಿ ಹೇಳಿ.. ಇನ್ನೊಂದು ತಾಸಿನಲ್ಲಿ ನಂಗೆ ಕಂಪ್ಯೂಟರ್ ಸರಿ ಆಗವು.. ನೀವು ಹೇಳೆ ನಾ ಎಲ್ಲ ಬರ್ದಿಟ್ಟಿದ್ದು. ನಂಗೆ ಎಲ್ಲಾ ಬೇಕು. ನಿಮ್ಮ ಡೇಟಾಕ್ಕೇ ಎಂತಕ್ಕೆ ವೈರಸ್ ತಾಗ್ತಿಲ್ಲೆ? ನಂದೇ ಎಂತಕ್ಕೇ ಹೋಗ್ತು? ನೀವೀಗ ಸರಿ ಮಾಡ್ದೆ ಹೋದ್ರೆ ನೀವು ಸಾಫ್ಟ್ವೇರ್ ಎಂಜಿನೀಯರೇ ಅಲ್ಲಾ ಹೇಳಾಗ್ತು.." ಎಂದಾಲ್ಲಾ ಬೆದರಿಕೆ ಹಾಕಿ, ಹಾರಾಡಿ ನನ್ನ ಗಾಬರಿ, ಕೋಪ, ಅಸಹನೆಗಳನ್ನೆಲ್ಲ ಕಕ್ಕುತ್ತಿದೆ.
"ಅಯ್ಯೋ ದೇವ್ರೇ.. ನೀ ಎಂತ ಎಂಟು ತಿಂಗ್ಳಿಗೆ ಹುಟ್ಟಿದ್ಯನೇ? ನಿಂತ ಕಾಲಲ್ಲೇ ಆಗುವು ಅಂಬೆ...ಈವಾಗ ನಾನು ಕಂಪ್ಯೂಟರ್ ಡಾಕ್ಟರ್ ಇದ್ದಾಂಗೆ ತಿಳ್ಕೋ.... ಡಾಕ್ಟರ್ಗೆ ರೋಗ ಗುಣಪಡ್ಸಲೆ ಟೈಮ್ ಬೇಕಾಗ್ತು. ಯಾವ ಮೆಡೀಸಿನ್ ಹಾಕವು, ಬಿಡವು, ಯಾವ ಟ್ರೀಟ್ಮೆಂಟ್ ಸರಿ ಎಲ್ಲಾ ನೋಡಿ ಮಾಡಕಾಗ್ತು. ತಾಳ್ಮೆ ಇರ್ಲಿ ಸ್ವಲ್ಪ.. ಸರಿ ಆಗ್ತು...." ಎಂದು ತಾಳ್ಮೆಯಿಂದ ಹೇಳಿದರೂ ನಾನೆಲ್ಲಿ ಸುಮ್ಮನಾಗುತ್ತಿದ್ದೇ..? "ಹೌದು ಅಮ್ಮ ಹೇಳ್ತಾ ಇರ್ತು.. ನಾನು ಎಂಟು ತಿಂಗ್ಳಿಗೇ ಹುಟ್ಟಿದ್ದಡ....ಅದೆಲ್ಲ ನಂಗೊತ್ತಿಲ್ಲೆ...ಆದಷ್ಟು ಬೇಗ ಸರಿ ಆಗವು ಇಲ್ದೇ ಹೋದ್ರೆ ನನ್ನ ಮೂಡೇ ಪರ್ಮನೆಂಟಾಗಿ ಕೆಟ್ಟೋಗ್ತು ನೊಡಿ..!!"ಎಂದು ಕೊನೆಯ ಬಾಂಬ್ ಹಾಕ್ತಿದ್ದೆ. ನನ್ನ ಧಮ್ಕಿಗೋ ಇಲ್ಲಾ ನಾನು ಕೊಟ್ಟ ಗುದ್ದಿನಿಂದಲೋ(ಕಂಪ್ಯೂಟರ್ಗೆ :) ) ಒಂದು ದಿನದೊಳಗೆ ಸರಿಯಾಗುತ್ತಿತ್ತು.
"ಅಯ್ಯೋ ದೇವ್ರೇ.. ನೀ ಎಂತ ಎಂಟು ತಿಂಗ್ಳಿಗೆ ಹುಟ್ಟಿದ್ಯನೇ? ನಿಂತ ಕಾಲಲ್ಲೇ ಆಗುವು ಅಂಬೆ...ಈವಾಗ ನಾನು ಕಂಪ್ಯೂಟರ್ ಡಾಕ್ಟರ್ ಇದ್ದಾಂಗೆ ತಿಳ್ಕೋ.... ಡಾಕ್ಟರ್ಗೆ ರೋಗ ಗುಣಪಡ್ಸಲೆ ಟೈಮ್ ಬೇಕಾಗ್ತು. ಯಾವ ಮೆಡೀಸಿನ್ ಹಾಕವು, ಬಿಡವು, ಯಾವ ಟ್ರೀಟ್ಮೆಂಟ್ ಸರಿ ಎಲ್ಲಾ ನೋಡಿ ಮಾಡಕಾಗ್ತು. ತಾಳ್ಮೆ ಇರ್ಲಿ ಸ್ವಲ್ಪ.. ಸರಿ ಆಗ್ತು...." ಎಂದು ತಾಳ್ಮೆಯಿಂದ ಹೇಳಿದರೂ ನಾನೆಲ್ಲಿ ಸುಮ್ಮನಾಗುತ್ತಿದ್ದೇ..? "ಹೌದು ಅಮ್ಮ ಹೇಳ್ತಾ ಇರ್ತು.. ನಾನು ಎಂಟು ತಿಂಗ್ಳಿಗೇ ಹುಟ್ಟಿದ್ದಡ....ಅದೆಲ್ಲ ನಂಗೊತ್ತಿಲ್ಲೆ...ಆದಷ್ಟು ಬೇಗ ಸರಿ ಆಗವು ಇಲ್ದೇ ಹೋದ್ರೆ ನನ್ನ ಮೂಡೇ ಪರ್ಮನೆಂಟಾಗಿ ಕೆಟ್ಟೋಗ್ತು ನೊಡಿ..!!"ಎಂದು ಕೊನೆಯ ಬಾಂಬ್ ಹಾಕ್ತಿದ್ದೆ. ನನ್ನ ಧಮ್ಕಿಗೋ ಇಲ್ಲಾ ನಾನು ಕೊಟ್ಟ ಗುದ್ದಿನಿಂದಲೋ(ಕಂಪ್ಯೂಟರ್ಗೆ :) ) ಒಂದು ದಿನದೊಳಗೆ ಸರಿಯಾಗುತ್ತಿತ್ತು.
ನನ್ನ ಭಯಕ್ಕೋ ಇಲ್ಲಾ ವೈರಸ್ಗೆ ಹೆದರಿಯೋ ಎಲ್ಲಾ ಎಂಟೀ-ವೈರಸ್ಗಳೂ ಕಂಪ್ಯೂಟರ್ಅನ್ನು ಅಲಂಕರಿಸಿದವು. ನನ್ನ ಡೇಟಾ ಎಲ್ಲಾ ಸಿಡಿ, ಡಿವಿಡಿಗಳಲ್ಲಿ ತುಂಬಲ್ಪಟ್ಟವು. ಆದರೂ ತೃಪ್ತಿಯಾಗಲಿಲ್ಲ. ಎಲ್ಲೋ ಎನೋ ಕಳೆದು ಹೋಗಿದೆ. ನಾನು ಬರೆದಿದ್ದೆಲ್ಲ ನಿರ್ಜೀವ ಸಿಡಿ, ಡಿವಿಡಿಗಳಲ್ಲೇ ಕೊಳೆಯುತ್ತಿವೆ ಎಂದೆನಿಸುತ್ತಿತ್ತು. ಆಗ ನನ್ನವರು ಬ್ಲಾಗ್ ತೆರೆಯುವ ಸಲಹೆಯನ್ನಿತ್ತರು. ಆದರೆ ನನಗೇಕೋ ಉತ್ಸಾಹವೇ ಬರಲಿಲ್ಲ. ಅದೂ ಅಲ್ಲದೇ ಮನೆಯ ಕೆಲಸ, ಅಡಿಗೆ, ಬಿಡುವಿನ ವೇಳೆಯಲ್ಲಿ ನನ್ನಿಷ್ಟದ ಪುಸ್ತಕಗಳನ್ನು ಓದುವುದು ಇತ್ಯಾದಿಗಳಿಂದಾಗಿ ಸಮಯವೂ ಆಗುತ್ತಿರಲಿಲ್ಲ.
ನಾನು ಪುಟ್ಟಿಯ ಆಗಮನವನ್ನು ನಿರೀಕ್ಷಿಸುತ್ತಿದ್ದಾಗ "ತಾಯಿ ಮತ್ತು ಮಗು" ಎಂಬ ಪುಸ್ತಕವನ್ನು ಓದಿ.. ಓದಿ ನನ್ನೊಳಗೆ ಮಗುವಿನ ಕುರಿತು ಒಂದು ಕಲ್ಪನೆ ಮೂಡಿಸಿಕೊಂಡಿದ್ದೆ. ಅದರಲ್ಲಿ "ಮಗು ಹುಟ್ಟಿದ ಮೊದಲ ಎರಡು ತಿಂಗಳು ಬರೀ ಹಾಲು ಕುಡಿಯುವುದು ಮಲಗುವುದು ಮಾಡುತ್ತದೆ.. ಏನಾದರೂ ತೊಂದರೆ ಆದರೆ ಮಾತ್ರ ಅಳುತ್ತದೆ. ದಿನದ ಹೆಚ್ಚಿನ ಪಾಲು ಮಲಿಗಿಯೇ ಇರುತ್ತದೆ..."ಇತ್ಯಾದಿ..ಇತ್ಯಾದಿ ಬರೆದಿದ್ದರು. ಆಗ ಅದನ್ನು ಓದುವಾಗಲೆಲ್ಲಾ ಮಗುವನ್ನು ಮುದ್ದಿಸುತ್ತಾ ಹಾಯಾಗಿ ಮಲಗಿ ವಿಶ್ರಮಿಸುತ್ತಾ ಬಾಣಂತನವನ್ನು ಆರಾಮವಾಗಿ ಕಳೆಯಬಹುದೆಂದು ಎಣಿಸಿದ್ದೆ. ಆದರೆ ಒಂದು ಪ್ರಮುಖ ವಿಷಯವೇ ಮರೆತು ಬಿಟ್ಟಿದ್ದೆ ನೋಡಿ... ಆ ಪುಸ್ತಕ 1967ರಲ್ಲಿ ಮುದ್ರಿತವಾಗಿದ್ದು, ಅದರಲ್ಲಿ ಆ ಕಾಲದಲ್ಲಿನ, ಮಕ್ಕಳ ವರ್ತನೆ, ಬೌದ್ಧಿಕ ಬೆಳವಣಿಗೆಗಳ ಕುರಿತಾಗಿತ್ತೆಂದು!!!! ಈಗಿನ ಮಕ್ಕಳು ಹುಟ್ಟುವಾಗಲೇ ಕಂಪ್ಯೂಟರ್ನಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡು, ಹುಟ್ಟಿದ ಮೂರುತಿಂಗಳಿಗೇ ಮೌಸ್ಅನ್ನು ಹಿಡಿದು ಆಡುತ್ತಾ ಬೆಳೆಯುವವರೆಂದು ತಿಳಿದೇ ಇರಲಲ್ಲ. ಈ-ಯುಗದ ಮಗುವಿಗೆ ನಿದ್ದೆಯೆಂಬುದೇ ಕಡಿಮೆ ಎಂದು ಅರಿವಾಗಿತ್ತು ಅದಿತಿಯ ಜನನದಿಂದ.
೨೦೦೭ಅಗಸ್ಟ್ ೩ರರಂದು ಪುಟ್ಟಿಯ ಜನನವಾಯಿತು...ಅದಿತಿ ಹುಟ್ಟಿದ ಮೇಲೇ ತಿಳಿದದ್ದು ನಿದ್ದೆ ಇಲ್ಲದ ಮನುಷ್ಯ ಏನಾಗುತ್ತಾನೆಂದು. ಹಗಲೂ ರಾತ್ರಿ ನಿದ್ರಿಸದೇ, ನನಗೂ ನಿದ್ದೆ ಕೊಡದೇ ಆಕೆ ಸತಾಯಿಸಿದಾಗ ನಾನು ಅರೆ ಹುಚ್ಚಿಯಂತಾಗಿದ್ದೆ. ಇದೇ ದಿನಚರಿ ಕನಿಷ್ಠವೆಂದರೂ 5-6 ತಿಂಗಳವರೆಗೂ ನಡೆದಿತ್ತು. ನೋಡಿಕೊಳ್ಳಲು ಅಪ್ಪ, ಅಮ್ಮ ಎಲ್ಲಾ ಇದ್ದರೂ ಅವಳಿಗೋ ಸದಾ ನಾನೇ ಬೇಕು. ನನ್ನ ಮಡಿಲೇ ಬೇಕು. ನನಗೋ ಆ ಕಡೆ ಮಗುವಿನ ಸೆಳೆತ ಈ ಕಡೆ ದೈಹಿಕ ಮಾನಸಿಕ ವಿಶ್ರಾಂತಿ ಇಲ್ಲದೇ ಬಳಲಿ ಹೋಗಿದ್ದೆ. ಇಂತಹ ಸಮಯದಲ್ಲಿ ನವಚೇತೋಹಾರಿಯಾಗಿ, ನನ್ನೊಳಗೆ ಹೊಸ ಜೀವ ತುಂಬಲು, ಹೊಸ ಜಗತ್ತನ್ನು ತೋರಲು ಹುಟ್ಟಿದವಳೇ "ಮಾನಸ".
ಒಂದು ದಿನ ಮನಸಿಗೆ ಹೊಸ ಚೈತನ್ಯ ತುಂಬಿಕೊಳ್ಳಲು ಆರ್ಕುಟ್ ನೋಡುತ್ತಿದ್ದೆ (ಹಾಗೂ ಹೀಗೂ ಬಿಡುವು ಮಾಡಿಕೊಂಡು). ಅಲ್ಲೊಂದು ಪ್ರೊಫೈಲ್ ಹೆಸರು ತುಂಬಾ ಆಕರ್ಷಣೀಯವೆನಿಸಿತು "ಮಿಂಚುತಿರೆ ಮಂಜಿನಲಿ ಕಡಲು ಕಡೆದಿಹ ಕವನ.." ಎಂದಿತ್ತು ಶೀರ್ಷಿಕೆ. ಕುತೂಹಲಗೊಂಡು ವೀಕ್ಷಿಸಿದರೆ ಅವರ ಹೆಸರು ಶಾಂತಲಾ ಭಂಡಿ ಎಂದು ತಿಳಿಯಿತು. ಪರಸ್ಪರ ಪರಿಚಯದ ನಂತರ, ಸ್ನೇಹವೇರ್ಪಟ್ಟಿತು. ನಾವಿಬ್ಬರೂ ಸಮಾನ ಆಸಕ್ತಿಹೊಂದಿದವರೆಂದು ತಿಳಿಯಲು, ಅವರಲ್ಲಿ ನಾನು ಅವರ ಬರಹಗಳನ್ನು ಓದಲು ನೀಡಬೇಕೆಂಡು ಕೋರಿದೆ. ಆಗ ಅವರು ಕೊಟ್ಟಿದ್ದು ಒಂದು ಸಣ್ಣ ಲಿಂಕ್ "ನೆನಪು ಕನಸುಗಳ ನಡುವೆ". ಅದರೊಳಗೆ ಬೆಚ್ಚನೆ ರಂಗುರಂಗಾಗಿ ಕುಳಿತು ನಳನಳಿಸುತ್ತಿದ್ದ ಸುಂದರ ಬರಹಗಳು ನನ್ನನ್ನು ಬೆರಗುಗೊಳಿಸಿದವು.
ಹೌದಲ್ಲಾ.. ಇವರು ಹೇಳಿದ್ದಾಗ ನಾನೂ ಬ್ಲಾಗ್ ತೆರೆದಿದ್ದರೆ ನನ್ನ ಬರಹಗಳಿಗೂ ಒಂದು ಸ್ಥಾನ, ಮಾನ ಸಿಕ್ಕುತ್ತಿತ್ತು. ಛೇ.. ನಾನು ಆಗ ಕೇಳದೇ ತಪ್ಪುಮಾಡಿದೆ ಎಂದೆನಿಸಿತು. ತಡಮಾಡದೇ ಯಜಮಾನರ ಸಹಾಯದಿಂದ ಬ್ಲಾಗೊಂದನ್ನು ತೆಗೆದೇ ಬಿಟ್ಟೆ. ನನ್ನ ಪುಟ್ಟಿಗೆ ಇಟ್ಟಿದ್ದ 5 ಹೆಸರುಗಳಲ್ಲೊಂದಾದ "ಮಾನಸ" ಹೆಸರನ್ನೇ ಗುರು ಹಿರಿಯರ ಸಹಮತಿಯೊಂದಿಗೆ(ಅಂದರೆ ನನ್ನವರ ಹಾಗೂ ನನ್ನ ಹೆತ್ತವರ) ಯಾವ ಮುಹೂರ್ತ, ಗಳಿಗೆ ನೋಡದೇ ನಾಮಕರಣ ಮಾಡಿ ಬಿಟ್ಟೆ. (ಹದಿಮೂರಂಕಿಯೆಂದೂ ಪರಿಗಣಿಸದೇ) ಜನವರಿ 13 2008ರಂದು ಒಟ್ಟೂ 20ಪೋಸ್ಟ್ಗಳನ್ನು ಒಂದೇ ಸಲಕ್ಕೇ ಪೋಸ್ಟ್ ಮಾಡಿದೆ.
ಹೌದು.. ಮಾನಸದ ತುಂಬೆಲ್ಲಾ ಒಂದು ವರುಷ ತುಂಬಿದ ಹರುಷ. ಮಾನಸ ನನಗೆ ಬಹಳಷ್ಟು ಕೊಟ್ಟಿದ್ದೆ. ಮೊಟ್ಟ ಮೊದಲಿಗೆ ಬಳಲಿದ್ದ ನನ್ನ ಮನಸಿಗೆ ಹೊಸ ಉತ್ಸಾಹ, ಚೈತನ್ಯವನ್ನು ತುಂಬಿ ನನ್ನವರೊಂದಿಗೆ, ನನ್ನ ಪುಟ್ಟಿಯ ಜೊತೆಗೆ ಮತ್ತಷ್ಟು ಉಲ್ಲಾಸದಿಂದ ಜೀವನೋತ್ಸಾಹದಿಂದ ಬಾಳುವಂತೆ ಮಾಡಿದೆ. ದೈಹಿಕವಾಗಿ ಎಷ್ಟೇ ಬಳಲಿದ್ದರೂ ಮಾನಸಿಕವಾಗಿ ಮಾನಸ ನನ್ನನ್ನು ಪ್ರತಿಕ್ಷಣ ನಿತ್ಯನೂತನವಾಗಿಸಿದೆ. ಇದರಿಂದಾಗಿ ನನ್ನೆಲ್ಲಾ ಕಥೆ, ಕವನಗಳಿಗೆ ಹೊಸ ಜೀವನ ಬಂತು. ಸಿಡಿ, ಡಿವಿಡಿಗಳಿಂದ ಮುಕ್ತಿ ಸಿಕ್ಕಿ ಸ್ವಚ್ಛಂದವಾಗಿ ಹಾರಾಡತೊಡಗಿದವು. ಸಹ ಮಾನಸಿಗರ ಜೊತೆಯಾಯಿತು. ಬಹಳಷ್ಟು ಆತ್ಮೀಯರನ್ನು, ಸ್ನೇಹಿತರನ್ನು, ಸಹೋದರ/ಸಹೋದರಿಯರನ್ನು, ಹಿತೈಷಿಗಳನ್ನು, ಹಿರಿಯರನ್ನು ಹತ್ತಿರಕ್ಕೆ ತಂದಿದೆ. ಸಹೃದಯ ಅಪರಿಚಿತರನ್ನು ಪರಿಚಿತರನ್ನಾಗಿಸಿ, ಸ್ನೇಹ ಚಿಗುರಿಸಿ ಆತ್ಮೀಯತೆಯ ಬಂಧವನ್ನು ಬೆಸೆದಿದೆ. ಉತ್ತಮ ಲೇಖಕ/ಲೇಖಕಿಯರನ್ನು, ಕವಿಗಳನ್ನು, ಕವಯಿತ್ರಿಯರನ್ನು, ಕಥೆಗಾರರನ್ನು ಪರಿಚಯಿಸಿದೆ.
ಮುಖ್ಯವಾಗಿ "ಮಾನಸ" ನನ್ನೊಳಗೆ ನನ್ನನ್ನು ತೆರೆದಿಟ್ಟಿದೆ. ನನ್ನ ಹೋರಾಟದ ದನಿಗೆ ವೇದಿಕೆಯಾಗಿದೆ. ನನ್ನಳುವಿಗೆ, ನಗುವಿಗೆ ಪ್ರತಿಸ್ಪಂದಿಯಾಗಿದೆ. ನಾ ತೊಡಿಸುವ ಹೊಸಬಟ್ಟೆಗಳನ್ನು ಬಲು ಪ್ರೀತಿಯಿಂದ ತೊಟ್ಟು ಮೆರೆದು ನನ್ನ ಕಣ್ಮನಗಳನ್ನು ತಣಿಸುತ್ತಿದೆ. ನನಗೀಗ ಎರಡು ಪುಟ್ಟ ಮಕ್ಕಳು :) ನನ್ನ ಮುದ್ದಿನ ಮಾನಸ ಮರಿಗೆ ಮೊದಲ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ವಂದನಾರ್ಪಣೆ :
ನನ್ನೊಳಗೆ ಸಾಹಿತ್ಯಾಸಕ್ತಿ ಬೆಳೆಸಿ, ಅದರ ಪ್ರತಿ ಒಲವನ್ನು ತುಂಬಿ, ಎಲ್ಲೋ ಅಡಗಿದ್ದ ಪ್ರತಿಭೆಗೆ ನೀರೆರೆದು ಪೋಷಿಸಿ, ನನ್ನ ಬೆಳವಣಿಗೆಗೆ ಮೂಲ ಕಾರಣಕರ್ತರಾದ ನನ್ನ ಹೆತ್ತವರಿಗೆ ಅನಂತಾನಂತ ನಮನಗಳು. ಮಾನಸದ ಹುಟ್ಟಿಗೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಕಾರಣಕರ್ತರಾದ ನನ್ನ ಮಗಳು ಹಾಗೂ ನನ್ನವರಿಗೆ ತುಂಬು ಹೃದಯದ ಕೃತಜ್ಞತೆಗಳು. ಅವರ ಹಾಗೂ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಪ್ರೋತ್ಸಾಹ, ಮೆಚ್ಚಿಗೆ ಭರಿತ ಪ್ರತಿಕ್ರಿಯೆಗಳಿಂದಲೇ ಸ್ಫೂರ್ತಿ ಪಡೆದು "ಪ್ರತಿಬಿಂಬ" ಹಾಗೂ "ಕಾಣ್ಕೆ"ಯ ಪ್ರಕಟನೆ ಮಾಡಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರಿಗೆ ಚಿರಋಣಿ. ಹಾಗೇ ಬ್ಲಾಗ್ ಲೋಕದ ಪ್ರತಿ ನನ್ನ ಕಣ್ತೆರೆದ, ನನ್ನ ಬರಹಗಳಿಗೆ ಸರಿಯಾದ ಸ್ಥಾನ ಕಲ್ಪಿಸಲು ಪರೋಕ್ಷವಾಗಿ ಕಾರಣವಾದ "ನೆನಪು ಕನಸುಗಳ ನಡುವೆ" ಬ್ಲಾಗಿಗೂ, ಅದರೊಡತಿ ಶಾಂತಲಾ ಅವರಿಗೂ ಎದೆಯಾಳದ ಧನ್ಯವಾದಗಳು.
ಅಕ್ಕಾ ಎಂದು ಗೌರವಾದರಗಳ ಜೊತೆಗೆ ಬೆಚ್ಚನೆಯ ಪ್ರೀತಿ ನೀಡಿದ ಎಲ್ಲಾ ಸಹೋದರ/ಸಹೋದರಿಯರಿಗೆ, ಪ್ರಿಯ ತೇಜು ಎಂದು ಜೊತೆಯಾಗಿ ಹಿತವಾದ ಎಲ್ಲಾ ಸ್ನೇಹಿತೆ/ಸ್ನೇಹಿತರಿಗೆ, ನಿನ್ನೊಂದಿಗೆ ನಾವಿದ್ದೇವೆ ಹೀಗೇ ಬರೆಯುತ್ತಿರು, ಒಳಿತಾಗಲಿ ಎಂದು ಬೆನ್ನು ತಟ್ಟಿ, ಆಶೀರ್ವಾದಿಸಿದ ಹಿರಿಯರಿಗೆ, ಮಾನಸವನ್ನೋದಿದ ಎಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.
ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹ ಹೀಗೇ ಸದಾ ನನ್ನೊಂದಿಗಿರಲಿ. ಮೆಚ್ಚುಗೆ ಕೊಡದಿದ್ದರೂ ಸರಿ.. ಆದರೆ ತಪ್ಪಿದ್ದಲ್ಲಿ ದಯವಿಟ್ಟು ತಿದ್ದಿ, ನನ್ನ ಬರಹಗಳ ಬೆಳವಣಿಗೆಗೆ ಅವಕಾಶವನ್ನು ನೀಡುತ್ತಿರಿ ಎಂದೇ ವಿನಂತಿಸುವೆ.
ಬೆಲೆಯೇರಿಕೆಯ ಸಮಯದಲ್ಲೇ ಸಂಕ್ರಾತಿ ಹಬ್ಬವೂ ಬಂದಿದೆ. ಆದರೆ ಮನಸಿನಲ್ಲಿ ಆತ್ಮೀಯರ ಒಲವು, ಸ್ನೇಹ ತುಂಬಿಕೊಂಡು ಪರಸ್ಪರ ಎಳ್ಳು, ಬೆಲ್ಲವನ್ನಾದರೂ ಹಂಚಿ ಶುಭಾಶಯಗಳನ್ನು ಹೇಳಲು, ಸಂತೋಷವನ್ನು ತುಂಬಿಕೊಳ್ಳಲು ಬೆಲೆಯೇರಿಕೆಯ ಹಂಗಿಲ್ಲ ಅಲ್ಲವೇ?
ಮಾನಸಕ್ಕೆ ತುಂಬಿದ ವರುಷದ ಹರುಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ...ಎಲ್ಲರಿಗೂ...
"ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು"
ಪ್ರೀತ್ಯಾದರಗಳೊಂದಿಗೆ,-ತೇಜಸ್ವಿನಿ ಮಾನಸ ಹೆಗಡೆ.
34 ಕಾಮೆಂಟ್ಗಳು:
ತೇಜಕ್ಕಾ,
ಹಾರ್ದಿಕ ಶುಭಾಶಯಗಳು, ನಿಮಗೆ ಮತ್ತು ನಿಮ್ಮ "ಮಾನಸ"ಕ್ಕೆ.
ಹೀಗೇ ಬರೀತಾ ಇರಿ.
ಹಾಗೇ ನೀವು ಬರೆಯಲು ಪರೋಕ್ಷವಾಗಿ ಕಾರಣವಾದು ಅದಿತಿಗೂ, ಸ್ಪೂರ್ತಿ ನೀಡಿದ ಶಾಂತಲಕ್ಕನಿಗೂ ಧನ್ಯವಾದ ಹೇಳ್ಲೇಬೇಕು, ಎಷ್ಟೆಲ್ಲಾ ಒಳ್ಳೆ ಕವನಗಳು, ಕಥೆಗಳು ತಪ್ಪಿ ಹೋಗುತ್ತಿದ್ದವು ಇಲ್ಲಾಂದ್ರೆ.
ಹಾಗೇ ಬ್ಲಾಗ್ ಲೋಕದಲ್ಲಿ ನೀವು ಬೆಳೆದಿದ್ದಲ್ಲದೇ, ನಮಗೆಲ್ಲಾ ಸ್ಪೂರ್ತಿ, ಪ್ರೋತ್ಸಾಹಗಳನ್ನು ಸದಾ ನೀಡುತ್ತಲೇ ಬಂದಿದ್ದೀರಿ, ಅದಕ್ಕಾಗಿ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು.
ಮತ್ತೊಮ್ಮೆ ಶುಭಹಾರೈಕೆಗಳು.
your lively blog seems to be a representation of the festive happiness :)
Thank you and
Wish you too a very happy Makara sankranti....
ನಿಮ್ಮ ಬ್ಲಾಗ್ನಲ್ಲೇ ಹಬ್ಬದ ಸಂಭ್ರಮ ತುಂಬಿ ತುಳುಕುತ್ತಿದೆ.... :)
ನಿಮಗೂ ಸಹ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ಹಾಯ್ ತುಂಬಾ ಚೆನ್ನಾಗಿದೆ,
ನಿಮ್ಮ ಬರವಣಿಗೆಯಲ್ಲಿ ಹಬ್ಬದ ಸಿಹಿ ಇದೆ,
ನಿಮಗೂ ಕೂಡ ಸಂಕ್ರಾತಿ ಹಬ್ಬದ ಶುಭಾಶಯಗಳು
ಪ್ರೀತಿಯ ತೇಜೂ ,
ಮೊದಲಿಗೆ , " ಮಾನಸ " ಗೆ ಹುಟ್ಟು ಹಬ್ಬದ ಶುಭಾಶಯಗಳು ! ಹಾಗೂ ಸಂಕ್ರಾಂತಿಯ ಶುಭಾಶಯಗಳು .
ನಿನ್ನ ಮುದ್ದಿನ ಮಾನಸ ,ಈಗ ನಮ್ಮೆಲ್ಲರ ಪ್ರೀತಿಯ ಮಗುವಾಗಿದ್ದಾಳೆ !ಚೆಂದದ ಬರೆಹ , ಸುಂದರ ಕವಿತೆಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಾ ಬೆಳೆಯುತ್ತಿದ್ದಾಳೆ.
ನಿನ್ನ ಬರವಣಿಗೆ -ಅವಳ ಬೆಳವಣಿಗೆ ಹೀಗೇ ಯಾವ ಅಡೆತಡೆಯಿಲ್ಲದೆ ಮುಂದುವರಿಯಲೆಂದು ಹೃದಯದಾಳದಿಂದ ಹಾರೈಸುತ್ತೇನೆ.
( ಅಂದ ಹಾಗೆ , ಶಾಂತಲಾಗೆ ನನ್ನದೂ ಧನ್ಯವಾದಗಳು. ಮತ್ತೊಂದು ವಿಷಯವೆಂದರೆ, ನನ್ನ ಬ್ಲಾಗಿನಾರಂಭಕ್ಕೂ ಶಾಂತಲಾಳದ್ದೇ ಪ್ರೋತ್ಸಾಹ ಕಾರಣ ! )
ತೇಜಕ್ಕಯ್ಯ,
ಓದಿಸಿದ ಅನುಭವಗಳಿಗೆ, ಕಾಡಿಸಿದ ಕವನಗಳಿಗೆ, ಖುಶಿ ಕೊಟ್ಟ ಕತೆಗಳಿಗೆ, ಮಾಡಿಕೊಂಡ ಚಾಟುಗಳಿಗೆ, ಸುಳ್ಳೇ ಕಿತ್ತಾಟಗಳಿಗೆ, ಸ್ಟೇಟಸ್ ಮೆಸೇಜ್ ವಾರುಗಳಿಗೆ, ಇನ್ನೂ ಒಮ್ಮೆ ಸಹ ಮನೆಗೆ ಬಾರದ್ದಕ್ಕೆ ಮಾಡಿಕೊಂಡಿರುವ ಕ್ಷಮೆ ತುಂಬಿದ ಮುನಿಸಿಗೆ... ಎಲ್ಲಕ್ಕೂ ಪ್ರೀತಿ ಮತ್ತು ಧನ್ಯವಾದ.
ವರುಷ ತುಂಬಿದ ಈ ಖುಶಿಗೆ, ಒಂದು ಪುಟ್ಟ ಸಂಕ್ರಾಂತಿ ಕಾಳಿನ ತುಂಬ ಸಿಕ್ಕಾಪಟ್ಟೆ ಶುಭಾಶಯ. :-)
ಪ್ರೀತಿಯಿಂದ,
-ಸು
ಪ್ರೀತಿಯ ತೇಜಸ್ವಿನಿ
ಅಂತೂ ನಿಮಗೆ ಜನವರಿ ಎಲ್ಲ ರೀತಿಯಲ್ಲಿಯೂ ಹೊಸ ಚೈತನ್ಯ ನೀಡಿರುವಂತಹುದು. ಮೊನ್ನೆ ಮೊನ್ನೆ ತಾನೆ ನಿಮ್ಮ ವಿವಾಹ ವಾರ್ಷಿಕ ದಿನಾಚರಣೆಯ ಸಂಭ್ರಮ ಹಂಚಿಕೊಂಡಿರಿ ಹಾಗೂ ಅರ್ಧ ಶತಕ ಬಾರಿಸಿದ ಬ್ಲಾಗ್ ಬರಹಗಳ ಸಂತಸವನ್ನೂ ಹಂಚಿಕೊಂಡಿರಿ ಇದೀಗ ಮಾನಸಳ ಮೊದಲ ಹುಟ್ಟುಹಬ್ಬಕ್ಕೆ ಜನುಮ ದಿನದ ಶುಭಾಶಯಗಳು.
ಸಂಕ್ರಾಂತಿ ನಿಮಗೂ ಶುಭ ತರಲಿ.
ನನ್ನ ಬರಹಗಳನ್ನು ಓದಿ ಮೆಚ್ಚಿಕೊಂಡು ನಾನು ಮತ್ತೆ ಮತ್ತೆ ಬರೆಯಬೇಕೆಂಬ ಅದಮ್ಯ ಆಸೆ ಹುಟ್ಟಿಸಿದ ನಿಮಗೆ ಧನ್ಯವಾದಗಳು.
Congratulations !!!!!!!!!!!!!!!!
ಮಾನಸ ತುಂಬೆಲ್ಲಾ ಸಂತೋಷವೇ ಇರಲಿ ಸದಾ...ಹೀಗೆ ಲೇಖನಗಳು ಬರುತ್ತಿರಲಿ.
ಸಂಕ್ರಾಂತಿಯ ಶುಭಾಶಯಗಳು
ತೇಜಸ್ವಿನಿ,
'ಮಾನಸ'ಕ್ಕೆ ಹುಟ್ಟಿದ ಹಬ್ಬದ ಶುಭಾಶಯ.
ನಿನ್ನ blog ನಮಗೂ ಸಹ ಎಣೆಯಿಲ್ಲದಷ್ಟು ಖುಶಿ ಕೊಟ್ಟಿದೆ.
ನಿನಗೆ, ನಿನ್ನ ಪುಟ್ಟ ಮಕ್ಕಳಿಗೆ ಹಾಗೂ ನಿನಗೆ ಒತ್ತಾಸೆಯಾಗಿ ನಿಂತ ನಿನ್ನ ರಾಯರಿಗೆ
ಸಂಕ್ರಮಣದ ಹಾರ್ದಿಕ ಶುಭಾಶಯಗಳು.
ತೇಜಸ್ವಿನಿಯವರೆ,
ಮನಸ್ಸಿನ ಮಾತಾದ ’ಮಾನಸ’ ಒಂದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು. ಮನಸ್ಸಿನ ಮಾತುಗಳು ಹೀಗೆ ಮುಂದುವರೆಯುತ್ತಿರಲಿ.ಸಂಕ್ರಾಂತಿಯ ಶುಭಾಯಶಯಗಳು.
ಉದಯ ಇಟಗಿ
'ಮಾನಸ'ಕ್ಕೆ ಹುಟ್ಟು ಹಬ್ಬದ ಶುಭಾಶಯಗಳು.
ಸಂಕ್ರಾಂತಿಯ ಶುಭಾಶಯಗಳು ಕೂಡ
ಮಾನಸ ಜಗತ್ತನ್ನು ಪಸರಿಸಲಿ. ಶುಭ ಹಾರೈಕೆಗಳು.
ಬರೆಯುವುದರಿಂದ ಸಿಗುವ ಹೊಸ ಚೈತನ್ಯ, ಕಳೆಯುವ ಒತ್ತಡದ ಜೊತೆಗೆ ಬ್ಲಾಗ್ ಹುಟ್ಟಿದ ಹಿನ್ನೆಲೆಯನ್ನು ತುಂಬ ಸಂಭ್ರಮದಿಂದ ಹಂಚಿಕೊಂಡಿದ್ದೀರಿ. ಶುಭಹಾರೈಕರಗಳು.
ತೇಜಸ್ವಿನಿಯವರೆ,
ನಿಮ್ಮ 'ಮಾನಸ'ಕ್ಕೆ ಹುಟ್ಟು ಹಬ್ಬದ ಶುಭಾಶಯಗಳು ಹಾಗು ಸಂಕ್ರಾಂತಿಯ ಶುಭಾಶಯಗಳು.
ತೇಜಸ್ವಿನಿಯವರೇ,
ವರ್ಷ ತುಂಬಿದ ಹರ್ಷದ ಮಾನಸಳಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ & ನಿಮ್ಮ ಮನೆಯವರಿಗೆಲ್ಲಾ ಸಂಕ್ರಾಂತಿ ಶುಭಾಶಯಗಳು. ಬ್ಲಾಗ್ ತೆರೆಯಲು ನಿಮಗೆ ಪ್ರೋತ್ಸಾಹ ಕೊಟ್ಟ ನಿಮ್ಮವರಿಗೂ & ಶಾಂತಲಾರಿಗೂ ಹಾಗೂ ಮನಸ್ಸು ಮಾಡಿದ ನಿಮಗೂ ಧನ್ಯವಾದಗಳು.
ತೇಜಸ್ವಿನಿ ಮೇಡಮ್,
ನಿಮ್ಮ ಬ್ಲಾಗಿಗೆ ಇವತ್ತಿಗೆ ಒಂದು ವರ್ಷವಾದದ್ದು ತುಂಬಾ ಸಂತೋಷ...ನಿಜಕ್ಕೂ ಬ್ಲಾಗ್ ಎನ್ನುವುದು ನನಗಂತೂ ತುಂಬಾ ಪ್ರೀತಿಪಾತ್ರವಾದದ್ದು.. ನಮಗೆಲ್ಲಾರಿಗೂ.....ನಿಮ್ಮ ಕಂಪ್ಯೂಟರ್ ಪುರಾಣ, ಮಗಳ ಜನನ....ಮಮತೆ.....ಎಲ್ಲಾವನ್ನು ಆಪ್ತವಾಗಿ ಹಂಚಿಕೊಂಡಿದ್ದೀರಿ.....ಹೀಗೆ ಬರುತ್ತಿರಲಿ....
'ಮಾನಸ'ಕ್ಕೆ ಹುಟ್ಟು ಹಬ್ಬದ ಶುಭಾಶಯಗಳು ಹಾಗು ಸಂಕ್ರಾಂತಿಯ ಶುಭಾಶಯಗಳು.
ಪ್ರಿಯ ತೇಜು...
ಧನ್ಯವಾದಗಳು.
ಮಾನಸ ಮೊನ್ನೆ ಮೊನ್ನೆ ಹುಟ್ಟಿದ ನೆನಪು. ಕಡಲಾಚೆಯಿಂದ ಬಂದ ಆ ಚಂದದ ಪತ್ರವ ಕಳೆದವಾರವಷ್ಟೇ ಓದಿದ ಹಾಗಿದೆ. ಆಗಲೇ ವರ್ಷ ಕಳೆಯಿತಲ್ಲವೆ?
ನಿನ್ನ ಪ್ರತಿಭೆ ನಿನ್ನದು. ಪ್ರತ್ಯಕ್ಷ ಪರೋಕ್ಷ ಸ್ಪೂರ್ತಿಗಳೆಲ್ಲವೂ ಬರೆಯಬೇಕೆಂಬ ನಿನ್ನೊಳಗಿನ ಉತ್ಕಟ ಹಂಬಲ ಹೊರತಾಗಿ ಬೇರೇನಲ್ಲ.
ನಿಜ ಹೇಳಬೇಕೆಂದರೆ ಯಾರದರೂ ನನ್ನನ್ನು ‘ನೀವೇನಾದರೂ ಬರೀತೀರ?’ ಅಂತ ಕೇಳಿದ್ರೂ ‘ಹೌದು’ ಅಂತ ಹೇಳಿಕೊಳ್ಳಲು ನನಗೆ ಅತೀ ಮುಜುಗರ.
ನೀನಾವತ್ತು ‘ನೀವೇನಾದರೂ ಬರೆಯುತ್ತೀರ?’ ಅಂತ ಕೇಳಿದಾಗಲೂ ‘ಹೌದು’ ಅಂತ ಹೇಳಿಕೊಳ್ಳಲೂ ಸಂಕೋಚವಾಗಿತ್ತು. ‘ನಿಮ್ಮ ಬರಹ ಕಳಿಸಿ ಓದುವ ಸಲುವಾಗಿ’ ಅಂತ ನೀನು ಹೇಳಿದಾಗ ಸಂಕೋಚವಾದರೂ ಬ್ಲಾಗ್ ಮರಿಯ ಲಿಂಕ್ ಕೊಟ್ಟಿದ್ದೆ. ಈಗಿಲ್ಲಿ ನನ್ನ ಹೆಸರು ಹೇಳಿ ಇನ್ನಷ್ಟು ಮುಜುಗರಕ್ಕೆ ಸಿಲುಕಿಸಿದ್ದೀಯ ನನ್ನನ್ನ :-)
ಯಾರಾದ್ರೂ ನನ್ನ ಬೈದರೂ ನಂಗೆ ಬೇಸರವಾಗೋಲ್ಲ, ನನ್ನ ಬಗ್ಗೆ ಒಳ್ಳೆಮಾತಾಡಿದ್ರೆ ನಂಗೆ ಅಳು ಬಂದ ಹಾಗೆ ಆಗತ್ತೆ :-)
ಸಿಗು ಇನ್ನೊಮ್ಮೆ, ಇನ್ನೂ ಚೆನ್ನಾಗಿ ಜಗಳಾಡಬೇಕಿದೆ ನಿನ್ನತ್ರ ಈ ಬಗ್ಗೆ. ಸಿಕ್ಕಾಗ ನೋಡಿಕೊಳ್ಳುತ್ತೇನೆ, ಯುದ್ಧಕ್ಕೆ ಸನ್ನದ್ಧಳಾಗಿರು.
(ಮಧು ಹಾಗೂ ಚಿತ್ರಾರಿಗೂ ಹೇಳುತ್ತಿದ್ದೇನೆ, ನೀವೂ ಸಹ ಯುದ್ಧಸಾಮಗ್ರಿಗಳೊಂದಿಗೆ ರೆಡಿಯಾಗಿರಿ)
ಮಾನಸಕ್ಕೆ ಹುಟ್ಟುಹಬ್ಬದ ಶುಭಾಶಯಗಳು ನನ್ನ ಬ್ಲಾಗ್ ಮರಿಯ ವತಿಯಿಂದ.
ಹಾಗೂ ನಿನಗೆ, ಬಾವಂಗೆ, ಅದಿತಿಗೆ ಸಂಕ್ರಾಂತಿಯ ಶುಭಾಶಯಗಳು ತೇಜು.
ಪ್ರೀತಿಯಿಂದ,
-ಶಾಂತಲಾ.
ತೇಜಕ್ಕ,
"ಮಾನಸ" ಕ್ಕೆ ಹುಟ್ಟು ಹಬ್ಬದ ಶುಭಾಶಯಗಳು ಹಾಗು ಸಂಕ್ರಾಂತಿಯ ಶುಭಾಶಯಗಳು. ಹಿಂಗೆ ಬರಿತ ಇರು. ನನ್ನ ಬರಹಗಳನ್ನ ಸ್ವಂತ ಅಕ್ಕನ ತರ ಓದಿ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಿಸಿದ್ದಕ್ಕೆ ಅನಂತ ಧನ್ಯವಾದಗಳು.
ಅಭಿನಂದನೆಗಳು ತೇಜಕ್ಕ. ಹೀಗೆ ಬರೀತಾ ಇರಿ.
ಅಂತೂ ವಂದನಾರ್ಪಣೆ ಮುಗೀತು ಹೇಳಾಯ್ತು. ಈಗ ಮುಂದಿನ ಕಾರ್ಯಕ್ರಮ ಎಂತದು? ಓದುಗ್ರಿಗೆ ಮಸಾಲೆ ದೋಸೆ ಅಂತೇನಾದ್ರೂ ಇದ್ಯಾ? :-)
ಈ ಹಬ್ಬದ ಸ೦ತಸ ಹೀಗೆ ಸದಾ ಕಾಲ ಇರಲಿ. "ಮಾನಸ" ಕ್ಕೆ ಹುಟ್ಟು ಹಬ್ಬದ ಶುಭಾಶಯಗಳು.
ಇದೇ ರೀತಿ ಬರೆಯುತ್ತಾ ಇರಿ ತೇಜಕ್ಕ.
- ಸುಧೇಶ್
ಮಾನಸಳಿಗೆ ಹುಟ್ಟಿದ ಹಬ್ಬದ ಶುಭಾಷಯಗಳು ಮತ್ತು ಸಂಕ್ರಾಂತಿಯ ಶುಭಾಷಯಗಳು, ಮನಸಿನಲ್ಲಿ ಇದಿದ್ದಲ್ಲಾ ಮಾನಸಳ ಮೂಲಕ ಹೊರಹೊಮ್ಮಿದ್ದು... ಕಾರಣರಾದವರ ಬಗ್ಗೆ ಬರೆದದ್ದು ಖುಷಿ ನೀಡಿತು... ಓಹ್ ನಿಮ್ಮ ಕಂಪ್ಯೂಟರ್ ಲಿ ಬರ್ತಿ ವೈರಸ್ ಓಡಾಡ್ತು ಅಂತ ಆತು... ನನ್ನ ಗೆಳೆಯನೊಬ್ಬ ನನಗೆ ಒಂದು ಉಚಿತ ಸಲಹೆ ನೀಡಿದ್ದ.. ಅದನ್ನು ನಿಮಗೂ ಕೊಡುತ್ತೇನೆ!.. ಅದೇನಪಾ ಅಂದ್ರೆ.. ವೈರಸ್ ಗೆ ಆಂಟೀ.. ವೈರಸ್ ಕಂಡ್ರೆ ಭಯ ಇರ್ತು.. ಅದು ಯಾವುದು(ಯಾವ ಕಂಪನಿದು) ಅಂತ ವೈರಸ್ ಗೆ ಗೊತಾದ್ರೆ ಇದಾ ನಂಗೆಂತು ಮಾಡದಲ್ಲ ಅಂತ ಸೊಕ್ಕು ಮಾಡ್ತಡ(ಗುಡ್ ನೈಟ್ ಮ್ಯಾಟ್ ಹಾಕಿರೆ ಸೊಳ್ಳೆ.. ಓಹ್ ಗುಡ್ ನೈಟಾ.. ಎಲ್ಲರು ಮಲ್ಗಿದಾರೆ ಅಟ್ಯಾಕ್ ಹೇಳ್ತಡ!) ಅದಕ್ಕೆ ಕಂಪ್ಯೂಟರಿಗೆ ಯಾವುದು Anti-virus ಇನ್ಸ್ಟಾಲ್ ಮಾಡ್ದೆ ಹೋಗ್ಬಿಟ್ರೆ.. ವೈರಸ್ಸಿಗೆ ಸ್ವಲ್ಪ ಜಾಸ್ತಿ ಹೆದ್ರಿಕೆ ಆಗ್ತೇನ.. ಅರೆ ಯಾವ Anti-virus ಇದ್ದೇನಾ ಅಂತ ಓಳಗೆ ಬತ್ವಲ್ಯೇನಾ!! ಈ ಸಲಹೆಯನ್ನು ಅನುಸರಿಸುವ ಮೊದಲು ತೆಗೆದುಕೊಳ್ಳಬೇಕಾದ ಕ್ರಮ ಏನು ಅಂದ್ರೆ ನಿಮ್ಮ ಎಲ್ಲಾ ಡಾಟಾಗಳನ್ನು ಡಿವಿಡಿಯಲ್ಲಿ ಬ್ಯಾಕಪ್ ಮಾಡಿಟ್ಟು ಪ್ರಯತ್ನಿಸಿ... ಹೆಚ್ಚು ಕಡಿಮೆ ಆದ್ರೆ ಭಾವ ಇದ್ನಲ ಹೆಂಗು ಸರಿ ಮಾಡಕ್ಕೆ. :D
@ಮಧು,
ಈ ಬರಹ ಲೋಕವೇ ಹಾಗೇ. ಇಲ್ಲಿ ಒಂದು ಉತ್ತಮ ಬರಹ ಇನ್ನೊಬ್ಬರಿಗೆ ಸ್ಪೂರ್ತಿ. ಹಾಗೇ ಒಬ್ಬರ ಉತ್ತಮ ಯೋಚನೆ ಇನ್ನೋರ್ವನ ಬರಹಕ್ಕೆ ಸ್ಫೂರ್ತಿ. ನನ್ನ ಬ್ಲಾಗ್ ನಿನಗೆ ಸ್ಫೂರ್ತಿ ತಂದಿದ್ದಕ್ಕೆ ತುಂಬಾ ಧನ್ಯವಾದಗಳು. ನಿನ್ನ ಬರಹಗಳೊಳಗಿನ ಸರಳತೆ, ನೈಜತೆ ಅದೆಷ್ಟೋ ನನ್ನ ಬರಹಗಳಿಗೂ ಪ್ರೇರಣೆಯಾಗಿದ್ದಿದೆ. :) ನಿನ್ನ ಮನಃಪೂರ್ವಕವಾದ ಅಭಿನಂದನೆಗೆ ಹಾಗೂ ಶುಭಾಶಯಗಳಿಗೆ ವಂದನೆಗಳು. ಮಾನಸದೊಡನಿರಲಿ ಸದಾ ಮಧುವನ.
@Samz,
Thanks a lot. Wish u the Same.
@ಕನಸು,
ಬ್ಲಾಗಿನಲ್ಲೊಂದೇ ಅಲ್ಲಾ ಮನಸಿನಲ್ಲೂ ಕೂಡಾ ನೋಡಿ..:) ನಿಮಗೂ ಶುಭಾಶಯಗಳು. ತುಂಬಾ ಧನ್ಯವಾದಗಳು.
@ರಾಜ್,
ಹಾಯ್..ಮಾನಸಕ್ಕೆ ಸ್ವಾಗತ. ಹಬ್ಬದ ಸಿಹಿ ನಿಮಗೆ ಮಾನಸದಿಂದ ಸಿಕ್ಕಿತೆಂದು ತಿಳಿದು ತುಂಬಾ ಸಂತೋಷವಾಯಿತು. ಧನ್ಯವಾದಗಳು.
@ಪ್ರಿಯ ಚಿತ್ರಾ,
ನಿನ್ನ ತುಂಬು ಹೃದಯದ ಹಾರೈಕೆಗೆ ಮನದುಂಬಿ ಬಂತು. ನನ್ನ ಮಾನಸವನ್ನು ಹಚ್ಚಿಕೊಂಡು ಇಷ್ಟೊಂದು ಪ್ರೋತ್ಸಾಹಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದ. ಮನಸೆಂಬ ಹುಚ್ಚು ಹೊಳೆಯಲ್ಲಿ ಮಾನಸ ಹೀಗೇ ತೇಲುತಿರಲೆಂದು ಹಾರೈಸುವೆ :)
@ಸುಶ್ರುತ,
ಎಲ್ಲದ್ದಕ್ಕೂ ಇಲ್ಲೇ ಧನ್ಯವಾದ ಹೇಳಿದ್ರೆ ಸಾಲ ನೋಡು.. ಮನೆಗೆ ಬಂದು ಅಭಿನಂದಿಸವು...(ಈ ನೆಪದಲ್ಲಾದ್ರೂ ದರ್ಶನ ಆಗ್ತ ನೋಡ್ತಿ:) )
ಪುಟ್ಟ ಸಂಕ್ರಾತಿಕಾಳಿನ ತುಂಬಾ ಸಿಹಿ ಸಂತೋಷ ಮೌನಗಾಳ ಹಾಕುತ್ತಿರುವುದು ಕಂಡಿತು. ತುಂಬಾ ಧನ್ಯವಾದಗಳು.
@ಚಂದ್ರಕಾಂತ ಅವರೆ,
ನೀವು ಹೇಳಿದ ಮಾತು ನೂರುಶೇಕಡಾ ಸತ್ಯ ನೋಡಿ. ಜನವರಿ ತಿಂಗಳು ನನ್ನ ಅಚ್ಚುಮೆಚ್ಚಿನ ತಿಂಗಳು. ಇದೇ ತಿಂಗಳಲ್ಲಿ ನಾನು ಎರಡು ಅತೀ ದೊಡ್ಡ ಸಂತೋಷವನ್ನು ಪಡೆದಿರುವೆ. ನಿಮ್ಮಂತಹ ಹಿರಿಯರ ಮಾರ್ಗದರ್ಶನ ಹಾಗೂ ಹಾರೈಕೆಗಳು ಸದಾ ನನ್ನೊಂದಿಗಿರಲೆಂದು ಮನಃಪೂರ್ವಕವಾಗಿ ಹಾರೈಸುವೆ. ಧನ್ಯವಾದಗಳು.
@ಲಕ್ಷ್ಮೀ,
Thank You Very Much..:)
ನಿಮಗೂ ಹಾಗೂ ನಿಮ್ಮ ಮನೆಯವರಿಗೆಲ್ಲರಿಗೂ ಹಾರ್ದಿಕ ಶುಭಾಶಯಗಳು... ನಾವೇಕೆ ಹೀಗೇ? ಎಂದು ಕೇಳುತ್ತಲೇ.. ನಾವು ಹೀಗೇ ಎನ್ನುವುದನ್ನು ಮನಗಾಣಿಸಿತ್ತಿರುವ ನಿಮ್ಮ ಜೊತೆ ಮಾನಸದ ಜೊತೆಯಾಗಿ ಸದಾ ಇರಲೆಂದು ಹಾರೈಸುವೆ. ಧನ್ಯವಾದಗಳು.
@ಕಾಕಾ,
ನಾನಿನ್ನೂ ಬರಹದ ಲೋಕದಲ್ಲಿ ಸಣ್ಣವಳು. ನಿಮ್ಮ ಸಲ್ಲಾಪದ ಅಪಾರ ಪಾಂಡಿತ್ಯದ ಮುಂದೆ ನನ್ನ ಮಾನಸ ಇನ್ನೂ ಪುಟ್ಟ ಮಗು. ನಿಮ್ಮಿಂದ ಅದೆಷ್ಟೋ ವಿಷಯಗಳನ್ನು ಇನ್ನೂ ಕಲಿಯಬೇಕಾಗಿದೆ. ನಿಮ್ಮ ಆಶೀರ್ವಾದ ಹೀಗೇ ಸದಾ ನಮ್ಮೊಂದಿಗಿರಲಿ. ಧನ್ಯವಾದಗಳು.
@ಉದಯ್ ಅವರೆ,
ಖಂಡಿತ ಮನಸಿನ ಮಾತು ಹೀಗೇ ಮುಂದುವರಿಯುತ್ತಿರುತ್ತದೆ. ಬಿಸಿಲ ಹನಿಯ ತಂಪು ಶಾಖ ಮನಸಿಗೆ ಬಹಳ ಮುದ ಕೊಟ್ಟಿದೆ. ತುಂಬಾ ಧನ್ಯವಾದಗಳು.
@ಶ್ಯಾಮಾ,
ಧನ್ಯವಾದಗಳು. ನಿಮಗೂ ಹಾರ್ದಿಕ ಶುಭಾಶಯಗಳು. ನೆನಪಿನಂಗಳದಿಂದ ಮಾನಸ ಎಂದೂ ಮರೆಯಾಗಲೆಂದು ಆಶಿಸುವೆ :)
@ಯಜ್ಞೇಶ್ ಅವರೆ,
ಜಗತ್ತನ್ನೇ ಪಸರಿಸುವಷ್ಟೂ ನನ್ನೀ ಪುಟ್ಟ ಮಾನಸ ದೊಡ್ಡದಿಲ್ಲ :) ಜನಮಾನಸದಲ್ಲಿ ಮರೆಯಾಗದೇ ಪಸರಿಸಿರಲೆಂದು ಹಾರೈಸುವೆ ಅಷ್ಟೇ! ನಿಮ್ಮ ಈ ನಲ್ಮೆಯ ಹಾರೈಕೆಗೆ ತುಂಬಾ ವಂದನೆಗಳು. ಮಾನಸವನ್ನು ಹುಡುಕಿ ನಿಮ್ಮ ಸಂಗ್ರಹದಲ್ಲಿಟ್ಟುಕೊಂಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. :)
@ಗ್ರೀಷ್ಮ ಅವರೆ,
ನಿಜ. ಓದು ಬರಹ ನಮ್ಮ ಮನಸಿನ ಒತ್ತಡಗಳನ್ನು ತುಂಬಾ ಕಡಿಮೆಗೊಳಿಸುತ್ತವೆ. ಹಾಗೆಯೇ ಮಾನದಾಳದಲ್ಲಿ ಹುದಿಗಿರುವ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವನ್ನೂ ಕಲವೊಮ್ಮೆ ಕೊಡುತ್ತವೆ. ಅಲ್ಲವೇ? ಶುಭಾಶಯಗಳಿಗೆ ತುಂಬಾ ಧನ್ಯವಾದಗಳು.
@ಬಾಲವನ,
ಧನ್ಯವಾದಗಳು. ನಿಮಗೂ ಹಾರ್ದಿಕ ಶುಭಾಶಯಗಳು.
@ಶಿವು ಅವರೆ,
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಹಾಗೂ ಶುಭಾಶಯಗಳಿಗೆ ವಂದನೆಗಳು. ಆಪ್ತರೊಡನೆ ಆಪ್ತತೆಯನ್ನು ಹಂಚಿಕೊಂಡಾಗ ತುಂಬಾ ಸಂತೋಷವಾಗುತ್ತದೆ. "ಸ್ನೇಹಕೂಟ" ತುಂಬಾ ಆಪ್ತವೆನಿಸುತ್ತದೆ ಅಲ್ಲವೇ? ಧನ್ಯವಾದಗಳು.
@ಪ್ರಿಯ ಶಾಂತಲಾ,
ನನ್ನ ಪ್ರಕಾರ ಹಂಬಲ ಎಂಬುದು ಒಂದು ಗುಪ್ತವಾಗಿ ಹರಿಯುತ್ತಿರುವ ನದಿಯಂತೆ. ಗುಪ್ತಗಾಮಿನಿಯಾಗಿರುವ ನದಿ ಪ್ರಕಟಗೊಳ್ಳಲು ಭೂಗರ್ಭದಲ್ಲಿ ಸ್ಥಾನಪಲ್ಲಟವಾಗಬೇಕು. ಹಾಗೆಯೇ ನಮ್ಮೊಳಗಿನ ಹಂಬಲ ಹೊರಬರಲು ಏನಾದರೂ ಪ್ರಮುಖ ಸ್ಫೂರ್ತಿ ಇರಲೇ ಬೇಕಾಗುತ್ತದೆ. ನನ್ನೊಳಗಿನ ಪ್ರತಿಭೆ ಬರಹ ರೂಪದಲ್ಲಿ ಹೊರಹೊಮ್ಮಿದಾಗ ಅವುಗಳಿಗೆಲ್ಲಾ ಸಹೃದಯ ಓದುಗರನ್ನು, ಸ್ಥಾನವನ್ನು ಕಲ್ಪಿಸಬೇಕೆಂಬ ಹಂಬಲವೇನೋ ಇತ್ತು. ಆದರೆ ಅದು ಹೀಗೇ ಇರಬೇಕೆಂಬ ಕಲ್ಪನೆಯಾಗಲೀ, ಯೋಚನೆಯಾಗಲೀ ಇರಲಿಲ್ಲ. ನೆನಪು ಕನಸುಗಳ ನಡುವೆ ನೋಡಿದಾಗ ಹೀಗೇ ಮಾಡಬಹುದಲ್ಲಾ ಎಂದೆಣಿಸಿ ಮಾನಸವನ್ನು ಹೊರತಂದೆ ಅಷ್ಟೇ. ಅದಕ್ಕಾಗಿ ನಿನಗೂ ನಿನ್ನ ಬ್ಲಾಗ್ ಮರಿಗೂ ತುಂಬಾ ಧನ್ಯವಾದಗಳು. ನಿನ್ನ ಪ್ರೀತಿ ಹೀಗೇ ಜೊತೆಗಿರಲೆಂದು ಹಾರೈಸುವೆ.
@ಶರಶ್ಚಂದ್ರ,
ಪ್ರೀತಿಯಿಂದ ಅಕ್ಕಾ ಹೇಳಿ ಕರ್ದು, ಪ್ರೋತ್ಸಾಹಭರಿತ ಪ್ರತಿಕ್ರಿಯೆಗಳ ಮೂಲಕ ನನ್ನ ಹಾಗೂ ಮಾನಸವನ್ನು ಹುರಿದುಂಬಿಸಿದುದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು.
@ಭಾಗವತರೆ,
ಮೊದಲಿಗೆ ಮಾನಸಕ್ಕೆ ಸ್ವಾಗತ :)
ಮಸಾಲೆದೋಸೆಗೂ ಬಾಗವತರಿಗೂ ನಿಕಟ ಸಂಬಂಧ ಎಂದು ಓದಿ, ಕೇಳಿ ತಿಳಿದಿದ್ದೆ. ಇಂದು ಅದು ಖಾತರಿಯಾಯ್ತು ನೋಡಿ :) ಮಸಾಲೆ ದೋಸೆಯ ಜೊತೆ ಐಸ್ಕ್ರೀಮ್ ಬೇಕಿದ್ರೂ ಕೊಡಿಸೋಣ. ಯಾವುದಕ್ಕೂ ನೀವು ಮೊದಲು ಭೇಟಿಯಾಗಬೇಕು ನೋಡಿ.. ಜಗಲಿಯಿಂದಿಳು ಮಾನಸದೊಳಗೆ ಬಂದು ತುಂಬು ಹಾರೈಕೆಗಳನ್ನಿತ್ತಿದ್ದಕ್ಕಾಗಿ ತುಂಬಾ ಧನ್ಯವಾದಗಳು :)
@ಸುಧೇಶ್ ಅವರೆ,
ತುಂಬಾ ಧನ್ಯವಾದಗಳು. ಪ್ರೋತ್ಸಾಹ ಹೀಗೇ ಇರಲಿ.
@ಮನಸ್ವಿ ಅವರೆ,
ಮಾಯವಾಗಿದೆ ಮನಸು ಹಾಗೇ ಸುಮ್ಮನೆ.. ಎಂಬ ಹಾಡನ್ನು ಕೇಳಿದಾಗಲೆಲ್ಲಾ ನಿಮ್ಮ ಬ್ಲಾಗ್ ನೆನಪಾಗುತ್ತದೆ ನೋಡಿ :) ನೀವು ಹೇಳಿದ್ದೂ ಒಂದು ವಿಧದಲ್ಲಿ ನಿಜವೇ... ಯೋಚಿಸುವಂತಿದೆ. ಮಾಡಿ ನೋಡುವೆ. :) ಹೀಂಗೆಲ್ಲಾ ಮಾಡ್ತಿ ಹೇಳಿ ಗೊತ್ತಾದ್ರೆ ಭಾವ ಎಲ್ಲಾ ಡಿವಿಡಿ ಅಡಗ್ಸಿ ಇಟ್ಟ್ರೂ ಇಟ್ಟ್ರೂ ಹೇಳಲೆ ಬತ್ತಿಲ್ಲೆ.. :) ಈಗ ವೈರಸ್ ಬತ್ತಾ ಇಲ್ಲೆ.. ಅದಕ್ಕೆ ಫೈರ್ವಾಲ್ ಎಲ್ಲಾ ಹಾಕಿದ್ರು ಅವ್ರು. ಬೆಂಕಿಗೆ ವೈರಸ್ ಕರಗ್ತಡ ...:) ಶುಭಾಶಯಗಳಿಗೆ ತುಂಬಾ ಧನ್ಯವಾದಗಳು.
Teju ..
I have been reading your blog from one ya one and a half month,but never write a comment
I like the way you represent..its very touching
Naanu kuda gokarnadavalu..so nimma baashe tumba hattira anisutte
Keep up the good work
Happy Sankranthi
Love and Regards
Preeti Nayak
ತೇಜಸ್ವಿನಿಯವರೆ...
ಕಳೆದ ಎರ್ಅಡು ದಿನಗಳಿಂದ ನಿಮಗೆ ಪ್ರತಿಕ್ರಿಯೆ ಬರೆಯುತ್ತಿದ್ದೇನೆ...
ಅದೇನೋ ಗೊತ್ತಿಲ್ಲ ಹಾಕಲಾಗುತ್ತಿಲ್ಲ..
ಕ್ಷಮಿಸಿ...
ನಿಮ್ಮ ಸಂತೋಷದಲ್ಲಿ ನಾನೂ ಭಾಗಿಯಾಗುವ..
ಶುಭಾಶಯ ಕೋರೋಣ ಅಂದರೆ ಆಗುತ್ತಿಲ್ಲ...
ಅಭಿನಂದನೆಗಳು...
ಅದು ನನ್ನ ಪ್ರತಿಕ್ರಿಯೆ ಸ್ವೀಕರಿಸುತ್ತಿಲ್ಲ...
ನಿಮಗೆ ಸಂಕ್ರಮಣದ ಶುಭಾಶಯಗಳು...
ಮಾನಸ ಹುಟ್ಟು ಹಬ್ಬದ ಶುಭಾಶಯಗಳು...
ಸಕಾಲದಲ್ಲಿ ಭಾಗಿಯಗಲು ಆಗದಿದ್ದುದಕ್ಕೆ ಕ್ಷಮೆ ಇರಲಿ...
ತೇಜು ಅಕ್ಕ,
ಮಾನಸಾಳ ಹುಟ್ಟು ಹಬ್ಬಕ್ಕೆ ಶುಭಾಶಯಗಳು :-)
ಸಂಕ್ರಾಂತಿಯ ಹಬ್ಬದ ಶುಭಾಶಯಗಳು.
ನಿಮ್ಮ ದೊಡ್ಡ ಮಗಳು, ನಿಮಗೆ ಸ್ವಲ್ಪ ಸಮಯ ಕೊಡಲಿ ನಿಮ್ಮ ಎರಡನೆ ಮಗಳ ಜೊತೆಗಿಲು.. ಆಗ ತಾನೆ ಮಾನಸ ಬೆಳೆಯೋದು... :)
ಮತ್ತಷ್ಟು ಪುಸ್ತಕಗಳನ್ನು ಹೊರತರುವಂತಾಗಲಿ.
ತೇಜಕ್ಕ..
ತಡವಾಗಿ ಸಂಕ್ರಾತಿ ಶುಭಾಶಯ ಹೇಳ್ತೀನಿ..ಎಷ್ಟು ಚೆನ್ನಾಗಿದೆ ಬರಹ..ನಾನಂತೂ ಓದಿದ ಮೇಲೆ ಸಂಕ್ರಾತಿ ಆಚರಿದಷ್ಟೇ ಖುಷಿಯಾಗಿದ್ದೀನಿ...ನಾ ಮೊನ್ನೆ ಹಬ್ಬ ಆಚರಿಸಿಲ್ಲ..ಮನೆಯಲ್ಲಿ ನಾನೊಬ್ಳೆ ಇದ್ದೆ . ಈಗ ಹಬ್ಬ ಹಬ್ಬ..ಖುಷಿ ಖುಷಿ.
-ಚಿತ್ರ
ಮಾನಸದ ಹಾಗೂ ಮಾನಸದೊಡತಿಯ ಸಂಭ್ರಮ ಮುಂದುವರೆಯಲಿ...
ಮಾನಸದಿಂದ ಚೆಂದದ ಬರಹಗಳು ಬರುತ್ತಿರಲಿ ಹೀಗೇ...
ಶುಭಾಶಯಗಳೊಂದಿಗೆ,
ತೇಜಕ್ಕ,
ನಾನು late and latest :)
ಪ್ರೀತಿಯ ಮಾನಸಳಿಗೆ ವರುಷ ತುಂಬಿದ್ದಕ್ಕೆ ನನ್ನ ಶುಭಾಶಯಗಳು. ನಾನು ಇಷ್ಟ ಪಟ್ಟು ಓದುವಂತಹ ಬ್ಲಾಗ್ ಗಳಲ್ಲಿ ಮಾನಸ ಕೂಡ ಒಂದು. ಒಳ್ಳೊಳ್ಳೆಯ ಬರಹಗಳನ್ನು ಕೊಡುತ್ತಿರುವುದಕ್ಕೆ ಥ್ಯಾಂಕ್ಸ್..
keep writingu, happy bloggingu. :)
-ವಿಕಾಸ್
@ಪ್ರೀತಿ,
ನಿಮ್ಮ ಪ್ರೀತಿ ಹಾಗೂ ವಿಶ್ವಾಸಕ್ಕೆ ತುಂಬಾ ಧನ್ಯವಾದಗಳು. ಓದಿದವರೆಲ್ಲಾ ಕಮೆಂಟ್ ಹಾಕಲೇಬೇಕೆಂದಿಲ್ಲ.. ಮನದಲ್ಲೇ ಮೆಚ್ಚಿಕೊಂಡರೂ ಸಾಕು. ಏನಾದರೂ ತಪ್ಪಿದ್ದರೆ..ಇಲ್ಲಾ ಯೋಚನಾ ಲಹರಿಯಲ್ಲಿ ಎಡವಿದ್ದರೆ ಮಾತ್ರ ದಯವಿಟ್ಟು ಪ್ರತಿಕ್ರಿಯಿಸಬೇಕಾಗಿ ವಿನಂತಿ. :)
@ಪ್ರಕಾಶ್ ಅವರೆ,
ಇದಕ್ಕೆಲ್ಲಾ ಕ್ಷಮೆ ಯಾತಕ್ಕೆ? ನೀವು ಓದಿ ಮನದಲ್ಲೇ ಅಭಿನಂದನೆಗಳನ್ನು (ಕೂಡಲೇ) ತಿಳಿಸಿದ್ದೀರಲ್ಲಾ..:) ಮನೋವೇಗಕ್ಕಿಂತ ಬೇಗ ತಲುಪಲು ಯಾರಿಗೂ ಸಾಧ್ಯವಿಲ್ಲ ತಾನೆ? ತುಂಬಾ ಧನ್ಯವಾದಗಳು.
@ಶಂಕರ್,
ತುಂಬಾ ಧನ್ಯವಾದಗಳು. ಹೂಂ.. ನಾನೂ ಅದೇ ಹಾರೈಸುತ್ತಿದ್ದೇನೆ. ಅದಿತಿಯಿಂದ ಮಾನಸಳಿಗೂ ತುಸು ಸಮಯ ಸಿಗಲೆಂದು..:)
@ಚಿತ್ರಾ,
ನನಗೂ ಆಪ್ತರ ಪ್ರತಿಕ್ರಿಯೆಗಳ ಮೂಲಕ ನನ್ನ ಸಂತೋಷವನ್ನು ಇಮ್ಮಡಿಗೊಳಿಸ್ಕೊಂಡ ಖುಶಿ ಮಾನಸದ ತುಂಬೆಲ್ಲಾ..:) ಧನ್ಯವಾದಗಳು.
@ಮಹೇಶ್,
ನಿಮ್ಮ ಶುಭಾಶಯಗಳಿಗೆ ನಾನು ಆಭಾರಿ. ವಂದನೆಗಳು.
@ವಿಕಾಸ್,
ಅಂತೂ ಇಂತೂ ವಿ-ವಾದನೂ ಮಾನಸಕ್ಕೆ ಬಂತು..:) ನೀ ಇಷ್ಟ ಪಟ್ಟು ಓದೋ ಬ್ಲಾಗ್ಗಳಲ್ಲಿ ಈ ಬಡ ಬ್ಲಾಗ್ ಕೂಡಾ ಇದ್ದು ಹೇಳ್ದ್ಯಲಿ.. ಭಾಳ ಖುಶಿ ಆತು. ಇಷ್ಟ ಪಟ್ರೆ ಮಾತ್ರ ಸಾಲ್ದು. ಕಷ್ಟ ಪಟ್ಟಾದ್ರೂ ಓದವು..(ಆಫೀಸ್ನಲ್ಲಿ ಎಲ್ಲಾ ಬ್ಲಾಕ್ ಮಾಡಿದ್ದೋ ಹೇಳಿ ತಪ್ಸಕಂಬದು ಬೇಡ..:) )
ತುಂಬಾ ತುಂಬಾ Thanksuu.......
ಮಾನಸಕ್ಕೆ ಮೊದಲ ವರ್ಷ ತುಂಬಿರುವುದನ್ನು ತಿಳಿದು ಸಂತೋಷ ಆತು.ಒರ್ಕುಟ್ ನಲ್ಲಿ ನಮ್ಮ ಸ್ನೇಹದ ನಂತರ ನಿರಂತರ ಬ್ಲಾಗ್ ಒದತಾ ಇದ್ದಿ.. ಪ್ರೀತ್ಯಾದಾರಗಳಿಂದ ತುಂಬಿರುವ ನಿಮ್ಮ ಬರಹವಣಿಗೆ ಹೀಗೆ ಮೂಡಿಬರಲಿ.ಅಂದೂ ನಿಮ್ಮ ಮನೆಯವರನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ನೀವು ಇಂದು ಕಂಪ್ಯೂಟರ್ ಎಕ್ಸಪರ್ಟ್ ಆಗಿದ್ದಿರಿ ಎಂಬ ಭಾವದೊಂದಿಗೆ.....!!! :)
tejakka..
tumbaa late aagi comment madthidde... but late aadru paravaagilla, madade idre manasu optille heli. Nanu nin blog ge visit madaddu tumbaa recent aagi.. but ninna manasada jotege nandu love at first sight...;) avattinindale naanu ninna beesanike( fan) aagbitte.. tumbaa chennaagi barite ninu... Good luck..with love n wishes..
ಜ್ಯೋತಿ ಅಕ್ಕ ಹೇಳಿದ್ದು ಹೀಗೆ..(ಸುಪ್ತದೀಪ್ತಿ, ಹರವ ಲಹರಿ ಬ್ಲಾಗ್ ಒಡತಿ)
ಪ್ರೀತಿಯ ತೇಜು,
ನಿನಗೂ ಮಾನಸಳಿಗೂ ಹಾರ್ದಿಕ ಶುಭಾಶಯಗಳು.
ನಿಮ್ಮೆಲ್ಲರಿಗೂ ಸಂಕ್ರಾಂತಿಯ ಹಾರೈಕೆಗಳು.
ಹೀಗೇ ನಿನ್ನ ಬರಹಗಳಿಂದ, ಮನಮುಟ್ಟುವ ಮಾತುಗಳಿಂದ ನಮಗೆಲ್ಲ ಹರುಷ ಹರಡುತ್ತಿರು. ನಿನಗೆ ಶುಭವಾಗಲಿ ತಂಗ್ಯಮ್ಮ.
(ತಾಂತ್ರಿಕ ದೋಷದಿಂದಾಗಿ ಅವರ ಕಮೆಂಟ್ ಅಳಿಸಿಹೋಗಿತ್ತು.. ಅದಕ್ಕೇ ನಾನು ಪೇಸ್ಟ್ ಮಾಡುತ್ತಿದ್ದೇನೆ. ಕ್ಷಮೆ ಇರಲಿ ಅಕ್ಕ..)
@ನಿತಿನ್ ಅವರೆ,
ನಿಮ್ಮ ತುಂಬು ಹಾರೈಕೆಗೆ ನನ್ನ ತುಂಬು ಹೃದಯದ ವಂದನೆಗಳು..:) ಪ್ರೋತ್ಸಾಹ ಹೀಗೇ ಇರಲೆಂದು ಹಾರೈಸುವೆ.
@ಜ್ಯೋತಿ ಅಕ್ಕ,
ನಿಮ್ಮ ಆಶೀರ್ವಾದ ಮಾನಸ ಹಾಗೂ ನನ್ನೊಡನೆ ಸದಾ ಹೀಗೇ ಇರಲಿ..:)
@ರೇಶ್ಮಾ,
ಲೇಟ್ ಆದ್ರೆ ಏನಾಯ್ತು? ನೀವು ಇಷ್ಟು ವಿಶ್ವಾಸ ಹಾಗೂ ಆತ್ಮೀಯತೆಯಿಂದ ಬಿಡುವು ಮಾಡಿಕೊಂಡು ಓದಿದ್ದಲ್ಲದೇ ಪ್ರೀತಿಯಿಂದ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದು ತುಂಬಾ ಸಂತೋಷ. ಇದೇ ನನ್ನ ಬರವಣಿಗೆಗೆ ಪ್ರೇರಣೆ ಕೂಡಾ. ತುಂಬಾ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ