ಶನಿವಾರ, ಅಕ್ಟೋಬರ್ 4, 2008

ಕಥೆ

ಈ ಕಥೆಯನ್ನು ಇಲ್ಲಿಯೂ ನೋಡಬಹುದು. ಪ್ರಕಟಿಸಿದ ದಟ್ಸ್‌ಕನ್ನಡಕ್ಕೆ ಧನ್ಯವಾದಗಳು.
ಇರುವುದೆಲ್ಲವ ಬಿಟ್ಟು..
ಒಂದರ ಬೆನ್ನಹಿಂದೆ ಇನ್ನೊಂದು....ಶಿಸ್ತಿನ ಸಿಪಾಯಿಯಂತೆ ಅತ್ತಿತ್ತ ನೋಡದೆ, ಯಾವುದೇ ಸದ್ದಿಗೂ ವಿಚಲಿತವಾಗದೆ ಮರದ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದಾತುದಿಗೆ ಸಾಲುಗಟ್ಟಿ ಹೋಗುತ್ತಿದ್ದ ಇರುವೆಗಳನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಂತೆ ಪೂರ್ಣಳ ತಲೆಯೊಳಗೊಂದು ಯೋಚನೆ ಬಂತು. ತಕ್ಷಣ ಇರುವೆಯ ಒಂದು ಸಾಲಿನ ನಡುವೆ ತನ್ನ ತೋರುಬೆರಳನ್ನಿಟ್ಟು ಅವುಗಳ ಪಯಣಕ್ಕೆ ತಡೆಹಾಕಿ ಕುತೂಹಲದಿಂದ ನೋಡತೊಡಗಿದಳು. ತಮ್ಮ ಕೆಲಸಕಾರ್ಯದಲ್ಲಿ ಇದೆಂತಹ ಅಡ್ಡಿ ಬಂತಪ್ಪ ಎಂದು ತುಸು ತಡಬಡಸಿ ಚೆಲ್ಲಾಪಿಲ್ಲಿಯಾದ ಇರುವೆಗಳು ಕ್ಷಣದಲ್ಲೇ ಸಾವರಿಸಿಕೊಂಡು, ಹೆದರದೆ ಮತ್ತೆ ಅದೇ ರೀತಿ ಸಾಲುಗಟ್ಟಿ, ಒಗ್ಗಟ್ಟಿನಲ್ಲಿ ಶಿಸ್ತಿನಿಂದ ಆಕೆಯ ಬೆರಳನ್ನೇರಿ ದಾಟಿ ಹೋಗತೊಡಗಿದವು.
‘ನಮ್ಮ ಮನಸ್ಸೂ ಈ ಇರುವೆಗಳಂತಾಗಿದ್ದರೆ ಎಷ್ಟು ಚೆನ್ನಾಗಿತ್ತು!! ಬಂದ ಕಷ್ಟಗಳನ್ನೆಲ್ಲಾ ಎಡರು-ತೊಡರುಗಳನ್ನೆಲ್ಲಾ ಹೀಗೇ ಇಷ್ಟೇ ಕ್ಷಿಪ್ರವಾಗಿ ದಾಟಿ, ನಿರಾಳವಾಗಿ ಮುಂದುವರಿಯುವಂತಾಗಿದ್ದರೆ... ಇಷ್ಟು ಸಣ್ಣ ಜೀವಿಯಲ್ಲಿರುವ ಧೃಢತೆ ನಮ್ಮಲ್ಲೇಕೆ ಕಾಣದೋ..?’ "ಪೂರ್ಣತ್ತೆ.. ನಾ ಒಂದು ಒಗ್ಟು ಕೇಳ್ತಿ ನೀ ಹೇಳು ನೋಡನಾ.. ಹೇಳ್ದ್ರೆ ನೀ ಗೆದ್ದೆ.. ಇಲ್ದೆ ಹೋದ್ರೆ ನೀ ಸೋತೆ ಅಕಾ?" ಅಲ್ಲೇ ಪೇರಳೆ ಹಣ್ಣಿನ ಮರವನ್ನೇರಿ ಕಾಯಿ ಕೀಳುತ್ತಿದ್ದ ಸುಜಾತಳ ಮಾತುಗಳು ಇರುವೆಯ ಸಾಲನ್ನೇನೂ ತುಂಡರಿಸದಿದ್ದರೂ ಪೂರ್ಣಳ ವಿಚಾರ ಸರಣಿಗೆ ತಡೆ ಹಾಕಿದವು."ಪುಟ್ಟಿ ಮೊದ್ಲು ನೀ ಮರದಿಂದ ಕೆಳ್ಗೆ ಇಳಿ.. ಅಣ್ಣಯ್ಯ ಏನಾರೂ ನೋಡಿರೆ ನಂಗೆ ಬೈತ. ನೀ ಕೆಳ್ಗೆ ಬಂದು ಒಗ್ಟ ಹೇಳು.. ನೋಡನ ಯಾರು ಗೆಲ್ತ ಹೇಳಿ" ಅತ್ತೆಯ ಮಾತಿನಿಂದ ಉತ್ತೇಜಿತಳಾದ ಪೋರಿ ಛಂಗನೆ ಒಂದೇ ನೆಗೆತದಲ್ಲಿ ಹಾರಿ ಅವಳ ಬಳಿ ಬಂದಳು."ಅಯ್ಯೋ ಪೂರ್ಣತ್ತೆ ಅಪ್ಪಯ್ಯ ಪೇಟಿಗೆ ಹೋಜ್ನಲೆ..ಅದೇ ನಿನ್ನ ಗೆಳತಿ ಧೃತಿಯಕ್ಕನ ಕರ್ಕ ಬಪ್ಪಲೆ.. ಅದ್ಕೇಯಾ ನಾ ಹತ್ತಿದ್ದು ಗೊತ್ತಾತಾ? ಸರಿ ಬಿಡು ಈಗ ಒಗ್ಟ ಕೇಳು..
ಮರದೊಳಗೆ ಮರ ಹುಟ್ಟಿ
ಮರ ಚಕ್ರ ಕಾಯಾಗಿ
ತಿನ್ನಲಾಗದ ಹಣ್ಣು ಬಲು ರುಚಿ- ಇದ್ರ ಬಿಡ್ಸು ನೋಡನಾ." ಎಂದು ಉತ್ತರಕ್ಕಾಗಿ ಪೂರ್ಣಳನ್ನೇ ನೋಡತೊಡಗಿದಳು ಸುಜಾತ. ಊಹೂಂ..ಎಷ್ಟೇ ತೆಲೆ ಓಡಿಸಿದರೂ ಪೂರ್ಣಳಿಗೆ ಹೊಳೆಯಲಿಲ್ಲ.. ಹೆಚ್ಚು ಯೋಚಿಸಲು ಮನಸ್ಸು ನಿರುಮ್ಮಳವೂ ಆಗಿರಲಿಲ್ಲ. ಹೆಚ್ಚು ಪ್ರಯತ್ನಿಸದೇ ಸೋಲೊಪ್ಪಿಕೊಂಡು ಅವಳಲ್ಲೇ ಉತ್ತರ ಕೇಳಿದಳು. ಆದರೆ ಬಡಪಟ್ಟಿಗೆ ಉತ್ತರ ಹೇಳಲೊಪ್ಪದ ಸುಜಾತ "ಅತ್ತೆ ಸೋತೆ ಕುಂಯ್ಯ ಹೇಳು.. ಹೇಳ್ತಿ" ಎನ್ನಲು ಮುಕ್ತವಾಗಿ ನಕ್ಕು ಬಿಟ್ಟಳು ಪೂರ್ಣ. "ಆತು ಮಹಾತಾಯಿ ನಾ ಸೋತೆ ಕುಂಯ್ಯಿ.. ಸಮಾಧಾನಾನ ಈಗ? ಸರಿ ಉತ್ತರ ಹೇಳು" ಎನ್ನಲು ಸುಜಾತ ತನ್ನ ಗೆಲುವಿನ ಪರಮಾನಂದದಲಿ ತಪ್ಪಾಳೆ ತಟ್ಟಿ ಕುಣಿಯುತ್ತಾ" ಅಯ್ಯೋ ಪದ್ದತ್ತೆ ಅಷ್ಟೂ ಗೊತ್ತಾಜಿಲ್ಯ ನಿಂಗೆ.. ಈ ಒಗ್ಟಿನರ್ಥ ‘ಮಗು’...ಹ್ಹೇ ಹ್ಹೇ..ಕೀಹಲಾಲೋ.. ನೀ ಸೋತೆ.. ಹೇ ಪಾರು ಪೂರ್ಣತ್ತೆ ಸೋತೋತು. ಪೂರ್ಣತ್ತೆ ಸೋತೋತು" ಎಂದು ಕೂಗುತ್ತಾ ಪಕ್ಕದ ಭಟ್ಟರ ಮನೆಯ ಪಾರ್ವತಿಯ ಜೊತೆ ಆಡಲು ಓಡಿದಳು. ದಣಪೆ ಹಾರಿ ಜಿಗಿಯುತ್ತಾ ಓಡಿತ್ತಿದ್ದ ಅವಳನ್ನೇ ಸ್ತಬ್ಧಳಾಗಿ ನೋಡಿದಳು ಪೂರ್ಣ. ಎದೆಯೊಳಗೆಲ್ಲೋ ಚೂರಿಯಿಂದ ತಿವಿದಂತಹ ಅನುಭವ...ಕಿವಿಯೊಳಗೆಲ್ಲಾ "ಪೂರ್ಣತ್ತೆ ಸೋತೋತು.. ಪೂರ್ಣತ್ತೆ ಸೋತೋತು" ಎಂಬ ಕೂಗಿನದೇ ಅನುರಣನ.
- 2 -
ದಣಪೆಯ ಮುಂದೆ ಬಂದು ನಿಂತ ಕಾರಿನಿಂದಿಳಿದ ಆತ್ಮೀಯ ಗೆಳತಿ ಧೃತಿಯನ್ನು ಕಂಡು ಪೂರ್ಣಳ ಮುಖ ಪೂರ್ಣ ಚಂದಿರನಂತಾಯಿತು. ಅರೆಕ್ಷಣ ಇಬ್ಬರೂ ಒಬ್ಬರನ್ನೊಬ್ಬರನ್ನು ನೋಡುತ್ತಾ ನಿಂತು ಬಿಟ್ಟರು. ಸುಮಾರು ೪ ವರ್ಷಗಳೇ ಕಳೆದುಹೋದವು ಒಬ್ಬರನ್ನೊಬ್ಬರು ನೋಡದೆ.. ಆಗಾಗ ಈ-ಮೈಲ್, ಫೋನ್ ಗಳ ಮೂಲಕ ಮಾತ್ರ ಕುಶಲೋಪರಿ ನಡೆಯುತ್ತಿತ್ತಷ್ಟೇ!
ಧೃತಿ ಹಾಗೂ ಪೂರ್ಣ ಮೈಕ್ರೋ ಬಯಾಲಜಿ ಮಾಡಿದ್ದು ಒಟ್ಟಿಗೇಯೇ. ಮೊದಲ ವರ್ಷದಲ್ಲೇ ಅಂಕುರಿಸಿದ ಇವರ ಸ್ನೇಹ ಓದು ಮುಗಿಯುವುದರೊಳಗೆ ತುಂಬಾ ನಿಕಟವಾಗಿಸಿತ್ತು. ಸ್ವಭಾವತಃ ಮೃದು, ಭಾವಜೀವಿ, ಸೂಕ್ಷ್ಮ ಸ್ವಭಾವದವಳಾಗಿದ್ದ ಪೂರ್ಣ ಅವಳಿಗೆ ವಿರುದ್ಧ ಸ್ವಭಾವದ, ತೀರಾ ವಾಸ್ತವವಾದಿಯಾಗಿದ್ದ ಧೃತಿಯೆಡೆಗೆ ಆಕರ್ಷಿತಳಾಗಿದ್ದು ಆಶ್ಚರ್ಯವೇ. ಪೊಸಿಟಿವ್ ಆಂಡ್ ನೆಗೆಟಿವ್ ಅಟ್ರೇಕ್ಟ್ಸ್ ಅನ್ನುವುದು ಇದಕ್ಕೇನೋ. ಕೋರ್ಸ್ ಮುಗಿದ ನಂತರ ಒಂದು ವರ್ಷ ಇಬ್ಬರೂ ಒಂದೇ ಫರ್ಮ್‌ನಲ್ಲಿ ಕೆಲಸವನ್ನೂ ಮಾಡಿದ್ದರು. ತದನಂತರ ಇನ್ನೂ ಹೆಚ್ಚಿನ ಕಲಿಕೆಗೋಸ್ಕರ ಧೃತಿ ಮುಂಬಯಿಗೆ ಹೋದರೆ ಪೂರ್ಣ ತನ್ನ ಸಹೋದ್ಯೋಗಿ ಸಂದೀಪನನ್ನು ಮೆಚ್ಚಿ ಮದವೆಯಾಗಿ ಬೆಂಗಳೂರಿನಲ್ಲೇ ನೆಲೆಸಿದಳು. ಸುಮಾರು ೪ ವರ್ಷಗಳ ಹಿಂದೆ ಪೂರ್ಣಳ ಮದುವೆಯಲ್ಲಿ ಆಕೆಯನ್ನು ನೋಡಿದ್ದ ಧೃತಿ ಈಗಲೇ ಮತ್ತೆ ಅವಳನ್ನು ಕಾಣುತ್ತಿರುವುದು. ಅದೂ ಪೂರ್ಣಳೇ ಆಕೆಯನ್ನು ಒತ್ತಾಯಮಾಡಿ ಕರೆಸಿಕೊಂಡಿದ್ದರಿಂದ!
"ಪ್ಲೀಸ್ ಧೃತಿ ನೀ ಬರ್ದೆ ಹೋದ್ರೆ ನಾ ನನ್ನನ್ನೇ ಕಳ್ಕೊಂಡು ಬಿಡ್ತೀನಿ ಕಣೆ. ಇನ್ಯಾವತ್ತೂ ನಿನ್ನಲ್ಲಿ ಏನನ್ನೂ ಕೇಳೊಲ್ಲ... ಇದೊಂದ್ಸಲ ನಂಗೋಸ್ಕರ ಬಾ ಪ್ಲೀಸ್. ನಿನ್ನ ಬರುವಿಕೆನೇ ಪ್ರತಿಕ್ಷಣ ಕಾಯ್ತಾ ಇರ್ತೀತಿ. ಈಗ್ಲೇ ನನ್ನ ಏನೂ ಕೇಳ್ಬೇಡ. ಫೋನ್‌ನಲ್ಲಿ ಎಲ್ಲಾ ಹೇಳೊಕಾಗೊಲ್ಲ.. ಹೇಳೋ ಸ್ಥಿತಿಲೂ ನಾನಿಲ್ಲ. ನೀ ಆದಷ್ಟು ಬೇಗ ಬಾ ಅಷ್ಟೇ. ಬೇಡ ಬೆಂಗಳೂರಿಗೆ ಬೇಡವೇ ಬೇಡ. ಶಿರಸಿಗೇ ಬಾ. ನಾ ನಾಳೆನೇ ಭೈರುಂಬೆಗೆ ಹೊರ್ಟಿದ್ದೀನಿ. ನೀನೂ ಸೀದಾ ಅಲ್ಲೇ ಬಾ..ಮತ್ತೆ ದಯಮಾಡಿ ಸಂದೀಪ್‌ಗೆ ಫೋನ್‌ ಮಾಡಿ ಏನನ್ನೂ ಕೇಳ್ಬೇಡ. ಬರ್ತೀಯಾ ತಾನೆ??" ಎಂದು ತುಂಬಾ ಗೋಗರೆದು ಫೋನ್ ಇಟ್ಟುಬಿಟ್ಟಿದ್ದಳು ಪೂರ್ಣ. ಅವಳ ಮಾತೊಳಗಿದ್ದ ಆತಂಕ, ನೋವು, ಅಸಹಾಯಕತೆಯ ಕಂಡು ತುಂಬಾ ಆಶ್ಚರ್ಯ, ಆತಂಕಗಳಾಗಿದ್ದು ಸುಳ್ಳಲ್ಲ. ಒಂದು ಕ್ಷಣ ಸಂದೀಪನನ್ನೇ ಕೇಳೋಣ ಎಂದೂ ಯೋಚಿಸಿದ್ದಳು. ಆದರೆ ಆಕೆಯ ಎಚ್ಚರಿಗೆ ಅವಳನ್ನು ತಡೆಯಿತು. ಹೆಚ್ಚು ಯೋಚಿಸದೇ ಶಿರಸಿಗೆ ಟಿಕೆಟ್ ಬುಕ್ ಮಾಡಿದ್ದಳು.
"ಎಂತ ಕೂಸೆ ಇದು?.. ಆವಾಗಿಂದ ಅದ್ರನ್ನ ಇಲ್ಲೇ ನಿಲ್ಸಕಂಡು ಸುಮ್ನೆ ನೋಡ್ತಾ ಇದ್ದೆ.. ಒಳ್ಗಾರೂ ಕರ್ಕ ಹೋಗು ಅಮೇಲೆ ನೋಡ್ಕ್ಯತ್ತಾನೇ ಇರ್ಲಕ್ಕಿ ಒಬ್ರನ್ನೊಬ್ರು" ಎಂದು ಛೇಡಿಸಿದ ದಿವಾಕರಣ್ಣನ ಮಾತಿಗೆ ನಾಚಿದ ಪೂರ್ಣ ಧೃತಿಯನ್ನಪ್ಪಿ ಅವಳಿಗಾತುಕೊಂಡೇ ಒಳನಡೆದಳು.
"ಏನೇ ಧೃತಿ, ಮುಂಬಯಿ ಗಾಳಿ ತುಂಬಾ ಚೆನ್ನಾಗಿ ತಾಗಿದ ಹಾಂಗಿದೆ. ಒಳ್ಳೆ ಮೈಕೈ ತುಂಬಿಕೊಂಡಿದೀಯ ನೋಡು.. ನಾವೆಲ್ಲಾ ಮರ್ತೇ ಹೋದೆವು ನಿಂಗೆ.." ಶಾರದತ್ತಿಗೆಯ ತಮಾಷೆಗೆ ನಕ್ಕು ಬಿಟ್ಟಳು ಧೃತಿ. "ಅತ್ಗೆ.. ಅದ್ಕೇ ನೋಡಿ ಇನ್ನೂ ಸ್ವಲ್ಪ ದಪ್ಪ ಅಗೋಣಾ ಅಂತ ನೆನಪು ಮಾಡಿಕೊಂಡು ಬಂದೆ.. ಎಲ್ಲಿ ನನ್ನ ಇಷ್ಟದ ತೆಳ್ಳೇವು ಕಾಯಿ ಚಟ್ನಿ?" ಎಂದು ಒಲೆಯ ಮುಂದೇಯೇ ಕೂರಲು ಪೂರ್ಣಳೂ ಜೊತೆ ಸೇರಿದಳು. ನಗು, ಹರಟೆ, ಕುಶಲೋಪರಿಯಲ್ಲಿ ತಿಂಡಿ ಮುಗಿಸಿದ್ದಾಯಿತು. ತಿನ್ನುತ್ತ, ಮಾತಾಡುತ್ತಲೇ ಧೃತಿ ಗೆಳತಿಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಎಲ್ಲೂ ಎನೂ ಎದ್ದು ಕಾಣುವ ಸಮಸ್ಯೆ ಕಾಣುತ್ತಿಲ್ಲ! ಆದರೆ ಎಂದಿನ ಕಳೆಯಾಗಲೀ, ನಿರಾಳತೆಯಾಗಲೀ ಪೂರ್ಣಳ ಮುಖದಲ್ಲಿ ಕಾಣಲು ಸಿಗಲಿಲ್ಲ. ಕಣ್ಣೊಳಗೇನೋ ನೋವು.
ಜಗುಲಿಯಲ್ಲಿ ಫೋನ್ ಸದ್ದಾಗಲು ಧೃತಿಯನ್ನಾತು ಕುಳಿತಿದ್ದ ಪೂರ್ಣ ನೇರವಾದಳು. ಅವಳ ಮುಖದಲ್ಲುಂಟಾದ ಹಠಾತ್ ಬದಲಾವಣೆ ಕಂಡು ಧೃತಿಗೆ ಆಶ್ಚರ್ಯವಾಯಿತು. ಶಾರದತ್ತಿಗೆಯಲ್ಲೂ ಎನೋ ಕಳವಳ...ಕೆಲ ನಿಮಿಷಗಳಲ್ಲೇ ಒಳ ಬಂದ ದಿವಾಕರಣ್ಣನ ಮುಖವೂ ಇಳಿದಂತೆ ಕಂಡಿತು ಧೃತಿಗೆ. "ಪೂರ್ಣ ಸಂದೀಪ್ ಫೋನ್ ಮಾಡಿದ್ದ. ಲೈನ್‌ನಲ್ಲೇ ಇದ್ದ.. ಮಾತಾಡ್ತ್ಯ?" ಅಣ್ಣನ ಮಾತಿಗೆ ತಲೆ ತಗ್ಗಿಸಿದ ಪೂರ್ಣ "ನಾ ಕಡಿಗೆ ಮಾಡ್ತಿ ಹೇಳು" ಎಂದಷ್ಟೇ ಉತ್ತರಿಸಿ ಬಟ್ಟಲು, ಲೋಟ ತೊಳೆಯುವ ನೆಪಮಾಡಿ ಬಚ್ಚಲಿಗೆ ನಡೆದಳು. ಅಷ್ಟೊತ್ತೂ ನಗುವಿನಿಂದ ನಿರಾಳತೆಯಿಂದ ಕೂಡಿದ್ದ ವಾತಾವರಣದಲ್ಲೀಗ ಬರಿಯ ಮೌನ ತುಂಬಿತ್ತು.
ಪೂರ್ಣಳ ಕೆಂಪಡರಿದ್ದ ಕಣ್ಣುಗಳು, ಕಳಾಹೀನ ಮುಖ ನಿಜ ಕತೆ ಸಾರುತ್ತಿದ್ದರೂ "ಒಂದು ಪ್ಲೇಟು, ಲೋಟ ತೊಳೆಯಲು ನಿಂಗೆ ಅರ್ಧಗಂಟೆ ಬೇಕೇನೇ ಹುಡ್ಗಿ? ಅದ್ಯಾವಾಗಿಂದ ಇಷ್ಟು ಸ್ಲೋ ಆದೆ ನೀನು" ಎಂದು ತುಸು ನಗಿಸಲೆತ್ನಿಸಿದಳು ಧೃತಿ. "ನೀ ಬೇಗ ಫ್ರೆಶ್ ಆಗಿ ರೆಡಿ ಆಗು ಧೃತಿ.. ನಾವು ತೋಟದ ತೋಡಿನ ಹತ್ರ ಸ್ವಲ್ಪ ಹೊತ್ತು ಹೋಗಿಬರೋಣ" ಎಂದು ಮೌನವಾಗಿ ಒಳಕೋಣೆಗೆ ಹೋದ ಪೂರ್ಣಳನ್ನು ಕಂಡು ಅವಳ ಕುತೂಹಲ ಮತ್ತೂ ಹೆಚ್ಚಿತು."ಅತ್ಗೆ ಊಟಕ್ಕೆ ಯಂಗಳ ಕಾಯಾಡಿ ಹೊತ್ತಾಗ್ಲಕ್ಕು. ಅಣ್ಣಂಗೂ ಹೇಳ್ಬುಡು..." ಎಂದು ಆಕೆಯ ಪ್ರತ್ಯುತ್ತರಕ್ಕೂ ಕಾಯದೇ ಒಂದು ರೀತಿ ಧೃತಿಯನ್ನು ದಬ್ಬಿಕೊಂಡೇ ಮೆಟ್ಟಿಲು ಇಳಿಯುತ್ತಿದ್ದ ನಾದಿನಿಯನ್ನೇ ದಿಟ್ಟಿಸಿದಳು ಶಾರದೆ. ಆಕೆಯ ಕೈಯೊಳಗಿದ್ದ ಗುಲಾಬಿ ಫೈಲ್ ನೋಡಿ ಎಲ್ಲವೂ ಅರ್ಥವಾಗಿ ನಿಟ್ಟುಸಿರು ಹೊರಬಂತು. ಹಿಂತಿರುಗಿದರೆ ಪತಿಯ ಕಣ್ಗಳೂ ಅವರನ್ನೇ ದಿಟ್ಟಿಸುತ್ತಿದ್ದವು. ಅದರೊಳಗೆ ತುಂಬಿದ ನೀರು ಕ್ರಮೇಣ ಶಾರದೆಯ ಕಣ್ಗಳನ್ನೂ ತುಂಬ ತೊಡಗಿದವು.
-3-
ಪೂರ್ಣಳ ತುಂಬಾ ಒತ್ತಾಯದ ಮೇರೆಗೆ ಮೈಕ್ರೋ ಬಯಾಲಜಿಯ ಕೊನೆಯ ವರ್ಷದ ರಜೆಯಲ್ಲಿ ಇಲ್ಲಿಗೆ ಬಂದಿದ್ದಳು ಧೃತಿ. ಅಡಿಕೆ ತೋಟ, ಎಲೆ ಬಳ್ಳಿ, ಏಲಕ್ಕಿ ಗಿಡಗಳ ಪರಿಮಳ, ಕರಿಮೆಣಸಿನ ಬಳ್ಳಿ, ತೋಟದ ತುದಿಯಲ್ಲಿದ್ದ ತೋಡು, ಮಾಳ, ತೋಡಿನಾಚೆಯ ಭಟ್ಟರ ಮನೆಯ ತೊಡೆದೇವ... ಅವರ ಟ್ರಾನ್ಸಿಸ್ಟರ್ ಹುಚ್ಚಿನ ಪ್ರಸಂಗ ಎಲ್ಲವೂ ಒಂದು ಸಿಹಿ ಕನಸಿನಂತೆ, ಸದಾ ನೆನಪಿಡಲು ಬಯಸುವ ಒಂದು ಅಪೂರ್ವ ಘಳಿಗೆಯಂತೆ ಅವಳ ಸ್ಮೃತಿಪಟಲದಲ್ಲಿ ಅಚ್ಚೊತ್ತಿದ್ದವು. ಎಂತಹ ಸುದಿನಗಳಾಗಿದ್ದವು! ಹಗಲು ಬೇಣ, ಗುಡ್ಡ ತೋಟಗಳನ್ನು ಸುತ್ತುವುದು.. ರಾತ್ರಿ ಅಟ್ಟದಮೇಲೆ ಮುಚ್ಚಿ ಮಲಗಿ ಪಿಸು, ಪಿಸು ಮಾತುಗಳನ್ನಾಡುತ್ತಾ ಯಾವುದೋ ಜಾವದಲ್ಲಿ ನಿದ್ರೆಗೆ ಜಾರುವುದು. ನಾಳಿನ ಹಂಗೇ ನಮಗಿಲ್ಲ ಎನ್ನುವಂತೆ ಕುಣಿದಾಡಿದ್ದರು. ತಿಂಗಳ ರಜೆ ದಿನದಲ್ಲೇ ಕರಗಿದಂತಹ ಅನುಭವವಾಗಿತ್ತು. ಹಿಂದಿನ ಮಧುರ ನೆನಪುಗಳನ್ನೆಲ್ಲಾ ನೆನೆದು ತುಸು ಗೆಲುವೆನಿಸಿ ಪೂರ್ಣಳ ಕಡೆ ತಿರುಗಿ ನೋಡಿದರೆ.. ಅವಳು ಮಾತ್ರ ಅವಳದೇ ಗುಂಗಿನಲ್ಲಿದ್ದಂತೆ ಕಂಡಳು. ನೋಟ ಕೆಳಗೆ ನೆಟ್ಟಿದ್ದರೂ ಮನಸ್ಸು ಏನೋ ಗಂಭೀರ ಯೋಚನೆಯಲ್ಲಿದ್ದಂತಿತ್ತು. ಹೊರಡುವಾಗ ಎದೆಗವಚಿಕೊಂಡಿದ್ದ ಗುಲಾಬಿ ಫೈಲ್ ಕಂಡು ತುಂಬಾ ಕುತೂಹಲವಾಗಿದ್ದರೂ ಏನನ್ನೂ ಕೇಳದೇ ಅವಳ ಜೊತೆ ಬಂದಿದ್ದಳು.
ದಣಪೆ ದಾಟಿ ತೋಟವನ್ನಿಳಿದು ಹತ್ತು ನಿಮಿಷ ನಡೆದರೆ ಆ ತುದಿಯಲ್ಲಿಯೇ ಕಾಣುವುದು ಹಳ್ಳ. ದಾರಿಯುದ್ದಕ್ಕೂ ಅವರಿಬ್ಬರನ್ನು ಮೌನ ಮಾತಾಡಿಸುತ್ತಾ ಬಂದಿತು. ಇವಳ ಜೊತೆ ಹಳೆಯ ಮಧುರ ನೆನಪುಗಳಿದ್ದರೆ, ಅವಳ ಜೊತೆ ಮುಂದಿನ ದಿನಗಳ ನೆನೆದರೇ ಉಂಟಾಗುವ ಅಧೀರತೆ.ಹಳ್ಳದ ಪಕ್ಕದಲ್ಲೇ ಇದ್ದ ಕಲ್ಲು ಹಾಸಿನ ಮೇಲೆ ಕುಳಿತರು. ಮೌನ ಮತ್ತೂ ಅಸಹನೀಯ ವೆನಿಸಿತು ಧೃತಿಗೆ. ಆಗ ತೋಡಿನಾಚೆಯ ಭಟ್ಟರ ಮೆನೆಯಿಂದ ತೇಲಿ ಬಂದ ಹಾಡಿನ ತುಣುಕನ್ನು ಕೇಳಿ ಬರಲು ಚುರುಕಾದಳು
ಬಾನಿನಲ್ಲಿ ಒಂಟಿ ತಾರೆ
ಸೋನೆಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತೂ ಮುಳುಗಿ
ಬಿಕ್ಕುತಿಹಳು ಯಾರೋ ನೀರೆ..

"ಹೇ ಪೂರ್ಣ ಕೇಳಿದ್ಯಾ ಇದು ನಿನ್ನ ಫೇವರೇಟ್ ಎನ್.ಎಸ್. ಅವರ "ಎಲ್ಲಿ ಜಾರಿತೋ ಮನವು.." ಹಾಡಲ್ಲವೇನೇ? ಮರ್ತು ಬಿಟ್ಯಾ? ನಾವು ಮೊದ್ಲು ಕೆಲ್ಸ ಮಾಡ್ತಿದ್ದ ಫರ್ಮನ ಫಂಕ್ಷನ್‌ನಲ್ಲಿ ನೀ ಇದೇ ಹಾಡನ್ನಲ್ವಾ ಹಾಡಿದ್ದು? ಎಷ್ಟು ಚೆನ್ನಾಗಿ ಹಾಡಿದ್ದೆ. ಇದೇ ಹಾಡಿಗೆ ಅಲ್ವಾ ನಮ್ಮ ಸಂದೀಪ ನಿಂಗೆ ಕ್ಲೀನ್ ಬೌಲ್ಡ್ ಆಗಿದ್ದು... ಹಂ ನಿಜ್ವಾಗ್ಲೂ ತುಂಬಾ ಸುಂದರ ಹಾಡು.. ಈಗ್ಲೂ ಒಮ್ಮೆ ಹಾಡು ನೋಡೋಣ.. ಅವ್ನಿಲ್ದೇ ಇದ್ರೆ ಏನಂತೆ ನಾನಿದ್ದೀನಲ್ಲಾ..ಆವಾಗಿನಿಂದ ಮುಖ ಕೆಳಗೆ ಹಾಕಿಕೊಂಡು ಅದೇನು ನೋಡ್ತಿದ್ದೀಯೋ ಏನೋ.." ಎಂದು ಛೇಡಿಸುತ್ತಾ ಅವಳ ಮುಖವನ್ನೆತ್ತಿ ನೋಡಿದರೆ ಕಣ್ಣು ಕೋಡಿ ಹರಿಸಿತ್ತು. ಥಟ್ಟನೆ ಅವಳ ಮಡಿಲಲಿ ಹುದುಗಿ ಬಿಕ್ಕಿ ಬಿಕ್ಕಿ ಅಳಹತ್ತಿದಳು ಪೂರ್ಣ.
ಒಂದೇ ಸಮನೆ ಅಳುತ್ತಿದ್ದ ಅವಳನ್ನು ಹೇಗೆ ಸಂತೈಸಬೇಕೆಂದೇ ತಿಳಿಯದಾಯಿತು ಧೃತಿಗೆ. ವಿಷಯ ಬೇರೆ ಗೊತ್ತಿರಲಿಲ್ಲ. ಕೊನೆಗೆ ಅವಳು ಅತ್ತು ಸಮಾಧಾನಿಸಿಕೊಂಡು ಮಾತಾಡಲಿ ಎಂದು ಅವಳನ್ನು ಸುಮ್ಮನೆ ಅಳಲು ಬಿಟ್ಟುಬಿಟ್ಟಳು. ಕೈ ಪೂರ್ಣಳ ತಲೆ ನೇವರಿಸುತ್ತಿತ್ತು. ಬೆಳಗ್ಗಿನಿಂದ ಕಟ್ಟಿದ ಮೋಡ ಮಧ್ಯರಾತ್ರಿ ಸುರಿದು ಬರಿದಾಗುವಂತೆ ಮನದೊಳಗಿನ ಭಾರವನ್ನೆಲ್ಲಾ ಹೊರಹಾಕಿ ತುಸು ಸುಧಾರಿಸಿಕೊಂಡ ಪೂರ್ಣ ತೋಡಿನ ನೀರಿನಲ್ಲಿ ಮುಖ ತೊಳೆದುಕೊಂಡು ಕುಳಿತಳು. ಪಕ್ಕದಲ್ಲೇ ಇಟ್ಟಿದ್ದ ಫೈಲ್ ಅನ್ನು ಧೃತಿಗೆ ಕೊಡಲು, ಮರು ಪ್ರಶ್ನಿಸದೇ ಅದನ್ನೆತ್ತಿ ಕೊಂಡು ಓದತೊಡಗಿದಳು ಧೃತಿ. ಹೆಚ್ಚು ಸಮಯವೇನೂ ಬೇಕಾಗಲಿಲ್ಲ ಅವಳಿಗೆ ಪೂರ್ಣಳ ಸಮಸ್ಯೆ ಅರಿಯಲು. ಇಷ್ಟೊತ್ತೂ ಅವಳ ತೆಲೆಯೊಳಗಿದ್ದ ಕುತೂಹಲಕ್ಕೆ, ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದರೂ ಅದರ ಜಾಗದಲ್ಲೀಗ ಹೊಸ ಸಂಶಯ, ಪ್ರಶ್ನೆಗಳು ಆಕ್ರಮಿಸಿಕೊಂಡವು.
"ಏನೇ ಪೂರ್ಣ ಇದು.. ಈ ವಿಷಯಕ್ಕೇನಾ ನೀ ಇಷ್ಟೊಂದು ಅಪ್‌ಸೆಟ್ ಆಗಿದ್ದು?! ನಂಗೆ ಅರ್ಥ ಆಗೊತ್ತೆ.. ನೀನೀಗ ಯಾವ ಸ್ಥಿತಿಯಲ್ಲಿದ್ದೀಯಾ ಅಂತ. ಅದ್ರೆ ಸಮಸ್ಯೆ ಹಾಗೂ ಪರಿಹಾರ ಎರಡೂ ನಿನ್ನ ಕೈಲೇ ಇದ್ಯಲ್ಲೇ? ಯೂ ಹ್ಯಾವ್ ಪ್ರಾಬ್ಲೆಮ್ಸ್ ವಿದ್ ಸೊಲ್ಯೂಷನ್ಸ್ ಡಿಯರ್.. ನೀನೇ ಹೇಳು ನಿನ್ನ ಮನಸಿನೊಳ್ಗೆ ಏನಿದೆ ಅಂತ... ಮುಕ್ತವಾಗಿ ಎಲ್ಲವನ್ನೂ ಹೊರ ಹಾಕು ಒಮ್ಮೆ.. ಆಗ ಎಷ್ಟೋ ಸಮಸ್ಯೆಗಳು ಗೊತ್ತಿಲ್ಲದೇ ಇಲ್ಲವಾಗುತ್ತ್ವೆ.." ಎನ್ನುತ್ತಾ ಮೆಲ್ಲನೆ ಪೂರ್ಣಳ ಕೈ ಅದುಮಿದಳು.
"ಧೃತಿ ಸಮಸ್ಯೆ ಈ ಫೈಲ್‌ನೊಳಗಿದ್ದಷ್ಟೇ ಆಗಿದಿದ್ದರೆ ನಾನೂ ಅಷ್ಟೊಂದು ಅಪ್‌ಸೆಟ್ ಆಗ್ತಿರ್ಲಿಲ್ವೇನೋ!! ನಾನು ತಾಯಾಗೋದು ಕಷ್ಟ ಅನ್ನೋ ಕಟು ವಾಸ್ತವದ ಜೊತೆ ಇನ್ನೊಂದು ಕಟು ಸತ್ಯನ ಎದುರಿಸಬೇಕಾಗಿದೆ.. ಈ ಸಮಸ್ಯೆಯ ಹೆಸರು "ಸಂದೀಪ". ಧೃತಿ ನಿಂಗೇ ಗೊತ್ತಲ್ಲ ಮೊದ್ಲಿಂದ್ಲೂ ನಂಗೆ, ಸಂದೀಪಂಗೆ ಮಕ್ಳು ಅಂದ್ರೆ ಪ್ರಾಣ. ನಮ್ಮದೇ ಅಂಶ ಪಡ್ದು ನಮ್ಮ ಪ್ರೀತಿಗೆ ಪ್ರತೀಕವಾಗಿರೋ ಮಗುವನ್ನು ಪಡೀಬೇಕು ಅಂತ ನಾವಿಬ್ರೂ ತುಂಬಾ ಕನಸು ಕಟ್ಟಿದ್ವಿ. ನನ್ನ ಮಗು ಹಾಗೂ ಸಂದೀಪನ ಜೊತೆ ಇರುವಾಗ ಎಷ್ಟೇ ಕಷ್ಟ ಬಂದ್ರೂ ಯಾವ ನೋವು ಬಂದ್ರೂ ಎದುರಿಸ್ತೀನಿ ಅನ್ನೋ ಆಶಾವಾದ, ಭರವಸೆಲಿ ನಾನಿದ್ದೆ. ಆದ್ರೆ ಈ ವಿಶ್ವಾಸಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು ಸುಮಾರು ಆರು ತಿಂಗಳ ಹಿಂದೆ.
ಮದ್ವೆಯಾದ ಮೊದ್ಲೆರ್ಡು ವರ್ಷ ಕೆಲ್ಸ, ಪ್ರೊಜೆಕ್ಟ ಅಂತೆಲ್ಲಾ ಜವಾಬ್ದಾರೀಲಿ ಅನಿವಾರ್ಯವಾಗಿ ಮಗುವಿನ ಯೋಚನೆ ಕೈ ಬಿಡ್ಬೇಕಾಯ್ತು. ಆಮೇಲೆ ಒಂದ್ವರ್ಷ ಕಾದ್ರೂ ನಾನು ತಾಯಾಗುವ ಲಕ್ಷಣಾನೇ ಕಾಣ್ಲಿಲ್ಲ ಕಣೆ. ಪ್ರತಿ ತಿಂಗಳೂ ಹೊಸ ಆಸೆ, ಕುತೂಹಲ, ನಿರೀಕ್ಷೆ.. ಅದ್ರ ಬೆನ್ನಿಗೇ ನಿರಾಸೆ, ಆತಂಕ, ಭಯ. ಕೊನೆಗೆ ಪರಿಚಯದ ಗೈನೋಕಾಲಜಿಸ್ಟ್ ಹತ್ರ ಹೋದ್ವಿ. ಸುಮಾರು ಟೆಸ್ಟ್‌ಗಳಾದ್ವು. ಆಗ ತಿಳ್ದಿದ್ದು ಮಗು ಪಡೆಯೋ ಸಾಮರ್ಥ್ಯ ನನ್ನೊಳಗೇ ಇಲ್ಲ ಅಂತ. ಆ ಆಘಾತಾನ ಅರಗಿಸಿಕೊಳ್ಳೋಕೇ ನಂಗೆ ನಾಲ್ಕು ತಿಂಗ್ಳು ಬೇಕಾಯ್ತು... ಸಂದೀಪ ಅಂತೂ ಫುಲ್ ಡಲ್ ಆಗೋಗಿದ್ದ. ಆದ್ರೂ ಅವ್ನಲ್ಲಿ ಅದೇನೋ ಆಶಾವಾದ. ಸೈನ್ಸ್ ಇಷ್ಟೊಂದು ಡೆವಲಪ್ ಆಗಿದೆ. ನಾವು ವಿಚಾರಿಸೋಣ. ಧೈರ್ಯವಾಗಿರು ಅಂತೆಲ್ಲಾ ಹೇಳಿ ಸಮಾಧಾನಿಸೋನು. ಈಗ್ಗೆ ಆರು ತಿಂಗಳಿನ ಹಿಂದೆ ಮತ್ತೆ ನಾವು ಡಾಕ್ಟರ್ ಭೇಟಿ ಆದ್ವಿ. ಆಗ ಅವ್ರು ಹೇಳಿದ ಪರಿಹಾರ ನನ್ನ ಪೂರ್ತಿ ಮುಗ್ಸಿ ಬಿಟ್ಟಿತು. ನನ್ನ ತಾಯ್ತನದ ಕನಸನ್ನೊಂದೇ ಚೂರು ಮಾಡ್ಲಿಲ್ಲ..ಸಂದೀಪನ ಮೇಲೆ ನಾ ಇಟ್ಟಿದ್ದ ಪ್ರೀತಿ, ವಿಶ್ವಾಸ, ಭರವಸೆ ಎಲ್ಲವನ್ನೂ ಕೊಂದು ಬಿಟ್ಟಿತ್ತು ಧೃತಿ.. ನನ್ನ ಸಂದೀಪನ್ನೇ ನಾನು ಕಳ್ದು ಕೊಂಡು ಬಿಟ್ಟೆ. ಈಗ ನನ್ನ ಹತ್ರ ಏನೂ ಇಲ್ಲ. ಯಾರೂ ಇಲ್ಲ...ನಾನೇ ಕಳ್ದು ಹೋಗಿದ್ದೀನಿ.. " ಮತ್ತೆ ಕಣ್ಣೀರು ಧಾರಾಕಾರವಾಗಿ ಸುರಿಯತೊಡಗಿತು. ಹಾಗೇ ಅವಳನ್ನಪ್ಪಿ ಸಂತೈಸತೊಡಗಿದಳು ಧೃತಿ.
"ಏನೇ ಇದು ಪೂರ್ಣ.. ಪೂರ್ತಿ ವಿಷ್ಯನಾದ್ರೂ ಹೇಳು.. ಅಲ್ಲಾ ಎಲ್ಲಾ ವಿಷ್ಯಕ್ಕೂ ಈ ರೀತಿ ಅಳೋದೇ ಪರಿಹಾರನಾ.. ಇಷ್ಟೊಂದು ಸೆನ್ಸಿಟಿವಿಟಿ ಒಳ್ಳೆದಲ್ಲಾ.. ಸಮಾಧಾನ ಮಾಡ್ಕೋ.. ಡಾಕ್ಟ್ರು ಏನಂದ್ರು? ಏನಂತೆ ಪರಿಹಾರ? ಸಂದೀಪ ಏನಾದ್ರೂ ಬೇಜಾರು ಮಾಡಿದ್ನ ನಿನ್ನ?.. ನೀ ಹೀಗೇ ಒಗ್ಟಾಗಿ ಮಾತಾಡಿದ್ರೆ ನಂಗೇನು ಅರ್ಥಾ ಆಗ್ಬೇಕು ಹೇಳು? ಪ್ಲೀಸ್ ಬಿ ಬ್ರೇವ್." ಎಂದು ಸಮಾಧಾನಿಸಿದ ಧೃತಿಯ ಸಾಂತ್ವನದಲ್ಲಿ ತುಸು ಚೇತರಿಸಿಕೊಂಡಳು ಪೂರ್ಣ.
"ಧೃತಿ ಡಾಕ್ಟ್ರು ನಿಮ್ಮ ಸಮಸ್ಯೆಗೆ ಪರಿಹಾರ ಇದೆ ಅಂದಾಗ ನಾನು ಪಟ್ಟ ಸಂತೋಷ ಅಷ್ಟಿಷ್ಟಲ್ಲ. ಅದೇ ಅವ್ರು ಹೇಳಿದ ಟ್ರೀಟಮೆಂಟ್ ಕೇಳಿದ ಮೇಲೆ ಮಾತ್ರ ನಂಗೆ ಎಲ್ಲಾ ಶೂನ್ಯ ಅನ್ನಿಸಿ ಬಿಡ್ತು. ನನ್ನ ಯುಟಿರಸ್ ಚೆನ್ನಾಗೇ ಇದೆ. ನಾನು ಮಗುವನ್ನು ಹೊರಲು, ಹೆರಲು ಏನೂ ಪ್ರಾಬ್ಲೆಮ್ ಇಲ್ಲಾ. ಆದ್ರೆ ಭ್ರೂಣ ಹುಟ್ಟಲು ಬೇಕಾದ ಎಗ್ ಪ್ರೊಡಕ್ಷನ್ ನನ್ನಲ್ಲಿ ಆಗುತ್ತಿಲ್ಲ...ಹಾಗೆ ಆಗುವ ಸಂಭವವೂ ಇಲ್ಲ..ಬಿಕೋಸ್ ಮೈ ಬೋತ್ ಓವರೀಸ್ ಆರ್ ನೋಟ್ ವೆಲ್ ಡೆವಲಪ್ಡ್... ಯಾವ್ದೇ ಮೆಡಿಸಿನ್‌ನಿಂದಾನೂ ಎಗ್ ಪ್ರೊಡಕ್ಷನ್ ಮಾಡ್ಸೋಕೆ ಆಗೊಲ್ಲಾ ಅಂದ್ಬಿಟ್ರು. ಆದ್ರೆ "ಎಗ್ ಡೊನೇಷನ್" ಅಥವಾ "ಓವಮ್ ಡೊನೇಷನ್" ಥೆರಪಿ ಮಾಡಿ "ಐ.ವಿ.ಎಫ್" ಮೂಲಕ ಎಂಬ್ರಿಯೋನ ನನ್ನ ಯುಟಿರಸ್ ಒಳ್ಗೆ ಇನ್ಸರ್ಟ್ ಮಾಡೋದ್ರಿಂದ ನಾನು ತಾಯಾಗ್ಬಹುದು... ಅಂದ್ರೆ ಇಲ್ಲಿ ಸೀಮನ್ ಸಂದೀಪಂದಾಗಿದ್ರೆ ಎಗ್ ಮಾತ್ರ ಬೇರೆ ಹೆಣ್ಣಿಂದಾಗಿರೊತ್ತೆ. "ಇನ್ವಿಟ್ರೋ ಫರ್ಟಿಲೈಸೇಷನ್" ಮೂಲಕ ಜೈಗೋಟ್ ನನ್ನೊಳ್ಗೆ ಹಾಕ್ತಾರೆ.. ಆಮೇಲೆ ಎಲ್ಲಾ ನೋರ್ಮಲ್ ಭ್ರೂಣದ ರೀತೇನೆ ಮಗು ಬೆಳೆದು ನಾರ್ಮಲ್ ಡೆಲಿವೆರಿ ಆಗೊತ್ತೆ ಅಂದ್ರು. ಇದ್ನ ಕೇಳಿ ನಾನು ಪೂರ್ತಿ ಶಾಕ್ ಆಗ್ಬಿಟ್ಟೆ.. ಆದ್ರೆ ಸಂದೀಪನ ಮುಖ ಮಾತ್ರ ಖುಶಿಯಿಂದ ಅರಳಿಬಿಟ್ಟಿತ್ತು.
"ಪೂರ್ಣ ಎಷ್ಟೇ ಖರ್ಚಾದ್ರೂ ಸರಿ.. ನೀ ಹೆದರ್ಬೇಡ. ನಾನಿದ್ದೀನಿ...ಈಗಾಗ್ಲೇ ಎಲ್ಲಾ ವಿಚಾರ್ಸಿದ್ದೀನಿ... ಈ ಎಗ್ ಡೊನೇಷನ್ ಟ್ರೀಟ್ಮೆಂಟ್ ೭೦-೮೦% ಸಕ್ಸೆಸ್ ಆಗೊತ್ತೆ ಅಂತ ಹೇಳಿದ್ದಾರೆ ಡಾಕ್ಟರ್... ಅದೂ ಅಲ್ದೆ ಎಗ್ ಡೊನೇಟ್ ಮಾಡೋರ ಹೆಸ್ರು, ವಿಳಾಸ ಎಲ್ಲಾ ಗುಪ್ತವಾಗಿ ಇಡ್ತಾರೆಂತೆ.. ಸೋ ಡೋಂಟ್ ವರಿ.. ಮುಂದಿನ ತಿಂಗ್ಳೇ ನಾವು ಈ ಟ್ರೀಟ್ಮೆಂಟ್ ತೊಗೋಳೋಣ... ನಾ ನಾಳೇನೇ ಡಾಕ್ಟರ್ ಹತ್ರ ಮಾತಾಡಿ ಫಿಕ್ಸ್‌ಮಾಡಿ ಬರ್ತೀನಿ..." ಹೀಗೇ ಒಂದೇ ಸಮ್ನೆ ಬಡ ಬಡಿಸ್ತಾ ಎಗ್ಸೈಟ್ ಆಗ್ತಾ ಇದ್ದ ಸಂದೀಪನಲ್ಲಿ ನಾ ನನ್ನ ಸಂದೀಪನ ಹುಡ್ಕಿ ಸೋತೋದೇ ಕಣೆ. ಆಗ ನಂಗೆ ನಾನು ತಾಯಾಗಲಾರೆ ಎಂಬ ಸತ್ಯಕ್ಕಿಂತಲೂ ದೊಡ್ಡ ಆಘಾತವಾಗಿತ್ತು.. ‘ಪೂರ್ಣ ನಿಂಗೂ ಒಪ್ಗೇನಾ.. ನೀನೇನು ಹೇಳ್ತೀಯಾ?’ ಎಂದು ಒಮ್ಮೆಯೂ ಕೇಳುವ ಸೌಜನ್ಯವೂ ಇಲ್ಲವೇ ಎಂದೆನಿಸಿ ತುಂಬಾ ಸಂಕ್ಟ ಆಯ್ತು.
ನೀನೇ ಹೇಳು ಧೃತಿ ಒಂದ್ವೇಳೆ ಪ್ರಾಬ್ಲಮ್ ನನ್ನಲ್ಲೇನೂ ಇಲ್ದೇ ಹೋಗಿ, ಅವನಲ್ಲೇ ಇದ್ದಿದ್ರೆ..?! ಅವ್ನಲ್ಲಿ ಸೀಮನ್ ಕೌಂಟ್ ಇಲ್ಲಾ ಅಂತ ಹೇಳಿದಿದ್ರೆ, ಅವ್ನು "ಆರ್ಟಿಫಿಶಿಯಲ್ ಇನ್ಸೆಮಿನೇಷನ್"ಗೆ ಥಟ್ಟಂತ ಒಪ್ತಿದ್ನ? ಬೇರೊಬ್ಬನ ಸೀಮನ್ ನನ್ನೊಳ್ಗೆ ಇಂಜೆಕ್ಟ್ ಮಾಡೊಕೇ ನಿರಾಳವಾಗಿ ಒಪ್ಪಿಗೆ ಕೊಡ್ತಿದ್ನ? ದೇವರಾಣೆ ಹೇಳ್ತಿನಿ ಕಣೆ ಒಂದ್ವೇಳೆ ಅಂವ ಒಪ್ಪಿದಿದ್ರೂ ನಾ ಖಂಡಿತ ಒಪ್ತಿರ್ಲಿಲ್ಲ. ನನ್ನ ಪ್ರಕಾರ ಮಗು ಅಂದ್ರೆ ಇಬ್ಬರ ಪ್ರೇಮದ ಸಂಕೇತ. ಅದು ಇಬ್ರ ಜೀನ್ಸ್ ಅನ್ನೂ ಹೊತ್ತೇ ಹುಟ್ಬೇಕು. ಇಲ್ಲಾ ನಾವು ದತ್ತು ತಗೋ ಬಹುದು. ಇಲ್ಲಿ ಅವ್ನ ಜೀನ್ಸ್ ಎನೋ ಇರುತ್ತೆ ಆದ್ರೆ ನನ್ನ ಅಂಶನೇ ಇರೊಲ್ಲ. ಬೇರೊಂದು ಹೆಂಗಸಿನ ಎಗ್ ಜೊತೆ ಅವ್ನ ಅಂಶ ಹೊತ್ತಿರೋ ಭ್ರೂಣಾನ ನಾನು ಹೇಗೆ ಸರಾಗವಾಗಿ ನನ್ನೊಳ್ಗೆ ಇಟ್ಕೊಳ್ಲಿ? ಇಟ್ಸ್ ಜಸ್ಟ್ ಲೈಕ್ ಸರೋಗೇಟ್ ಮದರ್ ಟೈಪ್. ಇಲ್ಲಿ ನಾನು ನನ್ದೇ ಮಗುವಿಗೆ ಸರೋಗೇಟ್ ತಾಯಿ. ಅವ್ನ ಅಂಶ ಮಾತ್ರ ಇರೋ ಮಗುವಿಗೆ ನನ್ನ ಗರ್ಭಕೋಶ ಒಂಥರ ಬಾಡಿಗೆ ಕೊಟ್ಟಾಂಗೆ ಅಲ್ವಾ? ನಾನು ಈ ರೀತಿ ಟ್ರೀಟ್ಮೆಂಟ್ ವಿರೋಧಿ ಅಲ್ಲ. ಅಥವಾ ಈ ಟ್ರೀಟ್ಮೆಂಟ್ ಪಡೆಯೋರು, ಪಡಿದಿರೋರು ಎಲ್ಲಾ ಮೂರ್ಖರು ಅನ್ತಾ ಇಲ್ಲಾ. ಅದು ಅವರವರ ಭಾವಕ್ಕೆ, ಪರಿಸ್ಥಿತಿಗೆ, ಸಂತೋಷಕ್ಕೆ ಬಿಟ್ಟ ವಿಷ್ಯ. ಇಲ್ಲಿ ನಾ ಹೇಳ್ತಿರೋದು ನನ್ನ ವೈಯಕ್ತಿಕ ನಿಲುವು ಮಾತ್ರ. ಇದ್ರಲ್ಲಿ ನನ್ನ ಒಪ್ಗೆ, ಸಂತೋಷ ಮುಖ್ಯ ಅನ್ಸೊಲ್ವಾ? ಧೃತಿ ಯಾಕೋ ಏನೋ ಇದಕ್ಕೆ ನನ್ನ ದೇಹ ಮನಸ್ಸು ಎರ್ಡೂ ಒಪ್ತಾನೇ ಇಲ್ಲ. ಹಾಗಿರೋವಾಗ ಹೇಗೆ ನಾ ಆ ಮಗುನ ನನ್ನೊಳ್ಗೆ ಒಂಭತ್ತು ತಿಂಗ್ಳು ಇಟ್ಕೊಳ್ಳಲಿ? ಹೇಗೆ ಪ್ರೀತಿಸಲಿ? ಏನ್ ಮಾಡ್ಲಿ ನೀನೇ ಹೇಳು.." ಒಂದು ನಿಡಿದಾದ ಉಸಿರಿನೊಂದಿಗೆ ಅಲ್ಲೇ ಇದ್ದ ಅಡಿಕೆ ಮರಕ್ಕೊರೆಗಿ ಕಣ್ಮುಚ್ಚಿದಳು. ಮಾತಿನ ಭಾರಕ್ಕೋ ಇಲ್ಲ ಮನದೊಳಗಿನ ಭಾರಕ್ಕೋ ಆಯಾಸ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಪೂರ್ಣಳ ಮಾತುಗಳನ್ನರಗಿಸಿಕೊಳ್ಳಲು ತುಸು ಹೊತ್ತೇ ಬೇಕಾಯಿತು ಧೃತಿಗೆ. ಕ್ರಮೇಣ ವಸ್ತುಸ್ಥಿತಿ, ಅವಳ ಮನಸ್ಥಿತಿಯ ಅರಿವಾಗತೊಡಗಿತು."ಪೂರ್ಣ ನೀನು ಈ ಎಲ್ಲಾ ನಿನ್ನ ಭಾವನೆಗಳನ್ನು ವಿವರವಾಗಿ, ಶಾಂತಳಾಗಿ ಬಿಡಿಸಿ ಸಂದೀಪನ ಜೊತೆ ಮಾತಾಡಿದ್ದೀಯಾ? ಅವನಿಗೂ ನಿನ್ನ ಈ ಅಭಿಪ್ರಾಯದ ಕುರಿತು ಯೋಚಿಸಲು, ಚಿಂತಿಸಲು ಸಮಯ ಕೊಟ್ಟಿದ್ದೀಯಾ? ನೀವಿಬ್ಬರೂ ಇದರ ಪರಿಣಾಮಗಳನ್ನು ಚರ್ಚಿಸಿದ್ದೀರಾ?" ಎಂದು ಮೆಲ್ಲನೆ ಕೇಳಲು, ಪಕ ಪಕನೆ ಹುಚ್ಚಿಯ ಹಾಗೆ ನಕ್ಕು ಬಿಟ್ಟಳು ಪೂರ್ಣ.
"ಅಯ್ಯೋ ಹುಚ್ಚಿ.. ಇದನ್ನೆಲ್ಲಾ ನಿನ್ನ ಹತ್ರ ಹೇಳೊ ಮೊದ್ಲು ಅವನ್ಹತ್ರ ಹೇಳಿಕೊಂಡಿರೊಲ್ಲಾ ಅಂತಾನಾ? ನನ್ನ ನಾ ಹೇಗೋ ಸಾವರಿಸಿಕೊಡು ಎಲ್ಲವನ್ನೂ ಸಾವಕಾಶವಾಗಿ ಹೇಳಿದೆ..ದತ್ತು ಬೇಕಾದ್ರೆ ತಗೋಳೋನಾ ಅಂತನೂ ಹೇಳ್ದೆ. ಕೆಲದಿನ ಸುಮ್ಮನಾದ. ಪೂರ್ತಿ ಮೌನಿಯಾಗಿ ನನ್ನ ಕಾಡಿದ. ಆದ್ರೂ ಸಮಯ ಸರಿದಂತೆ ಎಲ್ಲಾ ಸರಿ ಆಗಬಹುದೆಂದು ನನ್ನ ನಾನೇ ಸಮಾಧಾನಿಸಿಕೊಂಡೆ ಕೂಡಾ. ಆದ್ರೆ ಒಂದು ತಿಂಗ್ಳ ಹಿಂದೆ ಒಂದಿನ ನನ್ನ ಬಳಿ ಬಂದು ಹೇಳಿಯೇ ಬಿಟ್ಟ.. "ಪೂರ್ಣ ಐ ವಾಂಟ್ ಮೈ ಬೇಬಿ. ನಂಗೆ ನನ್ನ ಮಗೂನೇ ಬೇಕು. ದತ್ತು ಬೇಡ್ವೇ ಬೇಡ. ಹಾಗಂತ ನಿನ್ನ ಬಿಟ್ಟು ಬೇರೆ ಮದ್ವೆ ಆಗ್ಲಾರೆ. ನಾಳೆ ಜನ ನಿಂಗೆ ಮಕ್ಳು ಆಗೋದಿಲ್ಲ ಅಂತ ನಾ ಬೇರೆ ಆದೆ ಅಂತೆಲ್ಲ ಹೇಳಿಕೊಂಡು ನನ್ನೇ ಆಡ್ಕೊಳ್ತಾರೆ. ನೀ ಸ್ವಲ್ಪ ಸಮಯ ತಗೋ.. ಯೋಚ್ಸು. ಸುಮ್ನೆ ಕೆಲಸಕ್ಕೆ ಬಾರದ ಯೋಚ್ನೆ ತಲೆಗೆ ಹಾಕ್ಕೊಬೇಡ..ನಿನ್ನ ದೃಷ್ಟಿ ಸ್ವಲ್ಪ ವಿಶಾಲ ಮಾಡ್ಕೋ ಎಲ್ಲಾ ಸರಿ ಆಗೊತ್ತೆ.." ಅಂದ್ಬಿಟ್ಟ. ಆ ದಿನ ಮಾತ್ರ ನಾ ನನ್ನ ಬಗ್ಗೇ ತುಂಬಾ ಅಸಹ್ಯ ಪಟ್ಟೆ ಕಣೆ. ಇವನನ್ನೇ ನಾ ಮೆಚ್ಚಿ ಮದ್ವೆ ಆಗಿದ್ದು..?!! ನನ್ನ ತನು-ಮನವನ್ನು ಅರ್ಪಿಸಿ ಕೃತಾರ್ಥಳಾಗಿದ್ದು? ಅಂತ ತುಂಬಾ ಹಿಂಸೆ ಪಟ್ಟೆ. ಮರು ದಿನವೇ ಅಲ್ಲಿಂದ ಹೊರ್ಟು ಇಲ್ಲಿಗೆ ಬಂದ್ಬಿಟ್ಟೆ ಕಣೆ. ಹಾಗೇ ಬರೋ ಮುಂಚೆನೇ ನಿಂಗೆ ಫೋನ್ ಮಾಡಿದ್ದು. ಇದನ್ನು ಆದಷ್ಟು ಬೇಗ ನಿನ್ಜೊತೆ ಹಂಚಿಕೊಂಡ್ರೆ ಮಾತ್ರ ನಾ ಬದ್ಕಿ ಉಳೀಬಹುದೇನೋ ಅಂತ..ಆದ್ರೆ ಇಲ್ಲಿ ಬಂದ ಮೇಲೂ ಸುಖ ಇಲ್ಲ.. ಆಗಾಗ ಫೋನ್ ಮಾಡಿ "ಎನು ಯೋಚ್ನೆ ಮಾಡ್ದೆ.." ಎಂತ ಕೇಳ್ತಾನೆ ಇದ್ದಾನೆ... ಅದ್ಕೇ ಈಗ ಪೋನ್ ರಿಸೀವ್ ಮಾಡ್ತಾನೇ ಇಲ್ಲ.. ಸುಮ್ನೆ ಹಿಂಸೆ ನೋಡು.. ಏನೋ ಭಯ ಕೂಡ.."ಎಂದು ಮಾತುಗಳ ಭಾರದಿಂಡ ಬಾಯೊಣಗಿದಂತಾಗಿ ಉಗುಳು ನುಂಗಿ ತುಸು ಹೊತ್ತು ಮೌನವಾದಳು.
"ಧೃತಿ ಅಂವ ಹೇಳಿದ್ದು ನಂಗೆ ‘ನನ್ನ ಮಗು’ ಬೇಕು ಅಂತ.. ‘ನಮ್ಮ ಮಗು’ ಅಂತಲ್ಲಾ. ಅಂದ್ರೆ ಈಗಾಗ್ಲೇ ಆತ ಹುಟ್ದೇ ಇರೋ ಮಗುವಿನಿಂದ ನನ್ನ ಬೇರ್ಪಡಿಸಿದ್ದ.. ಹಾಗಿರುವಾಗ ನಾಳೆ ನನ್ನ ಗತಿ ಎನಾಗಬಹುದು ಹೇಳು? ನನ್ನ ಬಿಟ್ಟು ಬೇರೆ ಮದ್ವೆ ಬೇಕಿದ್ರೆ ಆಗು ಅಂದ್ರೆ ಅವನಿಗೆ ಸಮಾಜದ ಭಯ....ಹ್ಹ.. ನನ್ನ ಮದ್ವೆ ಆಗ್ಬೇಕಾದ್ರೆ, ಹಿಂದೆ ಬಿದ್ದು ಪ್ರೀತಿಸ್ಬೇಕಾದ್ರೆ ಬೇಡ್ವಾಗಿದ್ದ ಸಮಾಜ ಈಗ ಬೇಕಾಗಿದೆ ನೋಡು. ಮೊದ್ಲೆಲ್ಲಾ"ಚಿನ್ನು.. ನಿನ್ನ ಹೆಸ್ರನ್ನ ನನ್ನ ಮೊದಲ ಹೆಸ್ರಿನ ನಂತ್ರ ಹಾಕ್ಕೊಂಡ್ರೆ ನಾನೂ ನನ್ನ ಬದಕು ಎರಡೂ ಸಂಪೂರ್ಣ..ಅಲ್ಲಾ.. "ಸಂಪೂರ್ಣದೀಪ" ಅಂತೆಲ್ಲಾ ಮುದ್ದಾಡೋನು. ಆದ್ರೆ ನಮ್ಮ ಮಗುವಿನ ವಿಷ್ಯ ಬಂದಾಗ ನನ್ನ ನೋವಿನ ಜೊತೆ ಬಿಟ್ಟು.. ಸಂಪೂರ್ಣ ಮರೆತೇ ಬಿಟ್ಟ. ಈ ಪೂರ್ಣಳನ್ನು ನೀ ಅಪೂರ್ಣ ಅಂತ ತೋರಿಸ್ಬಿಟ್ಟ.
ನಿಂಗೆ ನೆನ್ಪಿದ್ಯಾ..ಮದ್ವೆ ಮೊದ್ಲು ನಂಗೆ ಎನ್.ಎಸ್ ರ ಕವನಗಳೆಂದರೆ ತುಂಬಾ ಇಷ್ಟ ಅಂತ ಗೊತ್ತಾದಾಗ ಅವರ ಒಂದು ಕವಿತೆಯನ್ನ ನಂಗೆ ಮೈಲ್ ಮಾಡಿದ್ದ.. ನಿಂಗೂ ತೋರ್ಸಿದ್ನಲ್ಲ....

ನೀ ಸಿಗದೆ ನಾನೆಂತು ಅರಿವೆನೇ ನನ್ನ.
ನೀ ಸಿಗದೆ ನಾನೆಂತು ಅರಿವೆನೇ ನನ್ನ
ಸಾಣೆ ಗೆರೆ ಮಿಂಚದೆ ತಿಳಿವರೇ ಹೊನ್ನ ?

ಇದೇ ಕವಿತೆ ಅಲ್ವಾ ನನ್ನ ಅವನ ಕಡೆ ಮತ್ತಷ್ಟೂ ಸೆಳೆದಿದ್ದು?! ಈ ಕವಿತೆಯನ್ನ ನಾ ನನ್ನ ಬೆಡ್ರೂಂನಲ್ಲೂ ಹಾಕಿಟ್ಟಿದ್ದೆ. ಆದ್ರೆ ಈಗ...! ಹ್ಹ... ಅವನ್ನ ಪೂರ್ತಿ ಪಡೆದ ಮೇಲೆನೇ ನಾ ಅವ್ನ ನಿಜ್ವಾಗ್ಲೂ ಅರಿತಿದ್ದು. ಆದ್ರೆ ಅವನು ನನ್ನ ಮಾತ್ರ ಅರಿಯಲೇ ಇಲ್ಲ ಕಣೆ ಎಂಥ ವಿಪರ್ಯಾಸ ಅಲ್ವಾ?
ಸೋತೋದೆ ಕಣೆ...ಸಂಪೂರ್ಣ ಸೋತೋದೆ.. ಇನ್ನು ಸಾಧ್ಯವೇ ಇಲ್ಲಾ ಅನ್ಸಿಬಿಟ್ಟಿದೆ. ತಾಯಿ ಆಗ್ಲಾರೆ. ಗಂಡನ ಮೇಲೆ ಪ್ರೀತಿ, ವಿಶ್ವಾಸ, ಭರವಸೆ ಉಳಿದಿಲ್ಲ. ಒಂದೇ ಸಲ ಎಲ್ಲಾನೂ ಕಳ್ದು ಕೊಂಡು ನಿಂತಿದ್ದೀನಿ. ಪುಣ್ಯಕ್ಕೆ ಅಮ್ಮಾ, ಅಪ್ಪ ಮೊದ್ಲೇ ಹೋಗಿ ಬಿಟ್ರು. ಇಲ್ದೇ ಹೋಗಿದ್ರೆ ನನ್ನ ದುಃಖ ನೋಡಿ ಖಂಡಿತ ಸಹಿಸಿಕೊಳ್ಳುತ್ತಿರಲಿಲ್ಲ. ಇನ್ನು ಅಣ್ಣ, ಅತ್ಗೆ... ಅವ್ರಿಗೆ ಪಾಪ ಇದೆಲ್ಲಾ ಸೂಕ್ಷ್ಮತೆ ಅರ್ಥನೇ ಆಗೊಲ್ಲಾ.. ವಿವರಿಸಿ ಪ್ರಯೋಜನ ಇಲ್ಲ. ನಿನ್ನಿಷ್ಟ ಅಂದ್ಬಿಟ್ಟಿದ್ದಾರೆ. ಆದ್ರೆ ಅವ್ರಿಗೂ ತುಂಬಾ ದುಃಖ ಆಗಿರೋದು ಮಾತ್ರ ಸತ್ಯ. ಈಗ ನೀನೇ ಹೇಳು ನನ್ನ ನಾ ಹೇಗೆ ಉಳಿಸಿಕೊಳ್ಲಿ? ಯಾವ ದಾರಿ ಇದೆ ನಂಗೆ? ನಿನ್ನಷ್ಟು ಪ್ರಾಕ್ಟಿಕಲ್ ಅಲ್ಲ ನಾ. ಸಂದೀಪನ ವರ್ತನೆ, ಮಾತುಗಳ ಹಿಂಸೆ ಒಂದೆಡೆ, ನನ್ನೊಳಗಿನ ಕೊರತೆಯ ಕೊರಗು ಇನ್ನೊಂದೆಡೆ. ತಾಯಾಗಲಾರೆ ಎಂಬ ಕುಂದು ನನ್ನ ಗಂಡನನ್ನೂ ನನ್ನಿಂದ ಕಸಿಯಿತು ಧೃತಿ.. ಎನೂ ಇಲ್ಲಾ ಈಗ ನನ್ನಲ್ಲಿ.. ಎನೂ ಇಲ್ಲ.."ಎನ್ನುತ್ತಾ ತನ್ನ ಮಂಡಿಯೊಳಗೆ ಮುಖ ಹುದುಗಿಸಿ ಕುಳಿತು ಬಿಟ್ಟಳು.ಸೂರ್ಯ ಯಾವಾಗಲೋ ತನ್ನ ಪ್ರಖರತೆಯನ್ನು ಕಳೆದುಕೊಂಡು ಪಡುವಣದ ದಾರಿಯನ್ನು ಹಿಡಿಯುವಂತಿದ್ದ. ಇಬ್ಬರೊಳಗೂ ಹಸಿವಿನ ಅರಿವಿಲ್ಲ. ಹೊತ್ತಿನ ಪರಿವೆಯಿಲ್ಲ. ತುಸು ಹೊತ್ತಿನ ನಂತರ ಧೃತಿ ಪೂರ್ಣಳನ್ನೆಬ್ಬಿಸಿ ಕೊಂಡು ತೋಡಿನ ಬಳಿ ಬಂದಳು.
-4-
"ಪೂರ್ಣ..ಈ ಹಳ್ಳವನ್ನು ನೋಡಿದ್ಯಾ? ಎಷ್ಟು ನಿರಾಳವಾಗಿ ಶಾಂತವಾಗಿ ಹರೀತಿದೆ. ಹಾಂಗಂತ ಇದ್ರೊಳ್ಗೂ ಕಸ, ಕಡ್ಡಿ, ಮಣ್ಣು ಎಲ್ಲಾ ಇರುತ್ವೆ. ಆದ್ರೆ ಹೊಸ ನೀರು ಬಂದ ಹಾಗೇ ಅವು ನೀರೊಳ್ಗೆ ತೇಲಿ ಹೋಗಿ ಬಿಡುತ್ವೆ. .. ಇಲ್ಲಾ ಬದಿಗೆ ಅಂಟಿಕೊಡು ಗುಂಪಿನಲ್ಲಿ ಗೋವಿಂದ ಆಗಿಬಿಡುತ್ವೆ. ನಮ್ಮ ಮನಸ್ಸೂ ಹೀಗೇ ಇದ್ರೆ ನಮಗೇ ಒಳ್ಳೇದು ಪೂರ್ಣ. ಎನೇ ಕಷ್ಟ, ದುಃಖ, ನೋವು ಮನಸ್ಸೊಳ್ಗೆ ಹೊಕ್ಕಿದ್ರೂ ಹೊಸ ಹೊಸ ಯೋಚನೆಗಳನ್ನು ಆಗಾಗ ಹರಿಯ ಬಿಡುವುದರಿಂದ ಇವುಗಳನ್ನೆಲ್ಲಾ ತೊಳೆದುಬಿಡಬಹುದು. ಹಾಗೆ ಮರೆಯಲೇ ಸಾಧ್ಯವಾಗದಂತಹವುಗಳನ್ನು ಮನದ ಯಾವುದೋ ಮೂಲೆಯಲ್ಲಿರಿಸಿ ಮುಚ್ಚು ಬಿಟ್ಟು ಆ ಕಡೆ ತಿರುಗಿಯೂ ನೋಡದಂತಿರಬೇಕು. ತುಂಬಾ ಕಷ್ಟ ಇದು.. ಒಪ್ಪುವೆ. ಆದ್ರೆ ಅಸಾಧ್ಯವೇನಲ್ಲಾ. ನಂಗೊತ್ತು ನೀ ಅಂದ್ಕೋಬಹುದು..ಇವಳಿಗೇನು ಗೊತ್ತು ನನ್ನ ಕಷ್ಟ.. ಹೇಳೋದು ಸುಲಭ ಅಂತ... ಯಾಕಂದ್ರೆ ನಿನ್ನ ನೋವಿನ ತೀವ್ರತೆಯನ್ನು ನಾನು ಅನುಭವಿಸಿಲ್ಲ.. ಅನುಭವಿಸಲು ಸಾಧ್ಯವೂ ಇಲ್ಲ. ಸಮಸ್ಯೆಗಳನ್ನು ಸ್ವತಃ ಅನುಭವಿಸದೇ ಅದಕ್ಕೆ ಪರಿಹಾರ ಕೊಡೋದು ತುಂಬಾ ಕಷ್ಟ. ಆದ್ರೆ ನನ್ನ ಪ್ರಕಾರ ಯಾವುದೇ ಸಮಸ್ಯೆಗೆ ಪರಿಹಾರ ಇಲ್ಲ ಅಂದುಕೊಳ್ಳೋದೇ ಒಂದು ದೊಡ್ಡ ಸಮಸ್ಯೆ.
ಮೊದ್ಲು ನಿನ್ನ ನೀನು ಈ ರೀತಿ ಕುಗ್ಗಿಸ್ಕೊಳ್ಳೋದ್ನ ನಿಲ್ಲಿಸ್ಬಿಡು ಪೂರ್ಣ .. ಹೆಣ್ಣು ಪೂರ್ಣಳಾಗೋದು ತಾಯಾಗೊದ್ರಿಂದ ಅಲ್ಲ, ತಾಯ್ತನವ ಅನುಭವಿಸೋದ್ರಿಂದ. ನೀನ್ಯಾಕೆ ನಿನ್ನ ಸ್ವಂತ ಮಗು ಆದ್ರೆ ಮಾತ್ರ ನೀನು ಪೂರ್ಣಳು ಅಂದ್ಕೋತೀಯಾ?!! ನಿಂಗಿಷ್ಟ ಇದ್ದ್ರೆ.. ಮನಸ್ಸೊಪ್ಪಿದ್ರೆ ಈ ಟ್ರೀಟ್ ಮೆಂಟ್ ತಗೋಬಹುದು.. ಇಲ್ಲಾ ದತ್ತು ಪಡೆಯಬಹುದು. ದತ್ತು ಪಡೆಯಲು ಸಂದೀಪನ ಒಪ್ಗೆ ಇಲ್ಲಾ ಅಂದ್ರೂ ಅವ್ನಿಂದ ಬೇರೆಯಾಗಿ ನೀನೊಬ್ಬಳೇ ಸಾಕಲೂ ಬಹುದು.. ಇನ್ನು ಇದ್ಯಾವ್ದೂ ಬೇಡ ಅಂದ್ರೆ ಯಾವ್ದಾದ್ರೂ ಸಂಸ್ಥೆಗೆ ನಿನ್ನ ಸೇವೆಕೊಡೋದ್ರ ಮೂಲಕನೂ ನೆಮ್ಮದಿ ಪಡೀಬಹುದು. ತಾಯ್ತನ ಅಂದ್ರೆ ಕೇವಲ ಸ್ವಂತ ಮಗುವಿಗೆ ನಿನ್ನ ಮಮತೆ ಕೊಡೋದು ಮಾತ್ರ ಅಲ್ಲ ತಾನೆ? ಪೂರ್ಣ ನೀನು ಏನು ಕಳ್ಕೊಂಡೀ ಅಂತ ಎಣಿಸ್ಬೇಡ್ವೇ.. ಏನನ್ನ ಪಡ್ಕೊಂಡಿದ್ದೀ ಅಂತ ಯೋಚ್ಸು.. ಆಗಾ ನಿಂಗೇ ಎಲ್ಲಾ ಅರ್ಥ ಆಗೊತ್ತೆ. ಹಾಗೆ ನೋಡಿದ್ರೆ ಎಷ್ಟೋ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರವೇ ಕಾಣ್ದೇ ಒದ್ದಾಡ್ತಾರೆ.. ಅದ್ರೆ ಇಲ್ಲಿ ನೀನು ಲಕ್ಕಿ.. ಸಮಸ್ಯೆಗಳ ಜೊತೆ ಪರಿಹಾರಗಳೂ ನಿನ್ನ ಮುಂದಿವೆ. ಯಾವ್ದ ಬೇಕಿದ್ರೂ ಆರಿಸ್ಕೋಬಹುದು ನೀನು.
ಒಂದ್ಸಲ ಯೋಚ್ಸು ನಿನ್ನ ಹತ್ರ ಏನಿಲ್ಲ?!.. ವೆಲ್ ಎಡ್ಜ್ಯುಕೇಟಿವ್, ಒಳ್ಳೆ ಜೋಬ್ ಇದೆ, ಪ್ರೀತಿಸೋ ಅಣ್ಣ ಅತ್ಗೆ, ಸ್ನೇಹಿತರು ಎಲ್ಲಾ ಇದ್ದಾರೆ. ಸ್ವಂತ, ಪರಕೀಯ ಅನ್ನೋದು ಹೊರಗೆಲ್ಲೋ ಇಲ್ವೆ.. ನಮ್ಮೊಳ್ಗೇ ಇರೋದು. ನಿಂಗೆ ಸಂದೀಪನ ಮೇಲೆ ಪ್ರೀತಿ ವಿಶ್ವಾಸ ಇನ್ನೂ ಉಳ್ದಿದ್ರೆ ಅವನ ಇನ್ನೊಮ್ಮೆ ಮಾತಾಡ್ಸು.. ಕನ್ವಿನ್ಸ್ ಮಾಡ್ಸು. ಅವನಿಗೆ ಪಶ್ಚಾತ್ತಾಪ ಆಗ್ಲೂ ಬಹುದು.. ಇಲ್ಲಾ ಅಂದ್ರೆ ಅವನ ಪಾಡಿಗೆ ಅವನ ಬಿಟ್ಟು ನಿನ್ನ ಜೀವನ ನೀನೇ ರೂಪಿಸ್ಕೋ. ಬದುಕು ನಮ್ಮಷ್ಟು ಸೆನ್ಸಿಟಿವ್ ಅಲ್ಲ ಪೂರ್ಣ. ಅದು ನಾವು ಹೇಳಿದಂತಿರೊಲ್ಲ.. ನಾವು ಬದುಕಿನ ಜೊತೆ ಹೊಂದಿಕೊಂಡು ಬಾಳ್ಬೇಕಷ್ಟೇ! ನಾನು ಹೇಳ್ತಿರೋದು ಈಗ ನಿಂಗೆ ಪಥ್ಯ ಆಗ್ದೇ ಇರ್ಬಹುದು.. ಆದ್ರೆ ಶಾಂತಳಾಗಿ ಯೋಚಿಸಿದ್ರೆ ನಿಂಗೇ ಅರ್ಥ ಆಗೊತ್ತೆ.
ಪೂರ್ಣ ನೀನು ಯಾವಾಗ್ಲೂ ನನ್ನ ತುಂಬಾ ಪ್ರಾಕ್ಟಿಕಲ್ ಅಂತೀಯ.. ನಿಜ.... ಅಪ್ಪ, ಅಮ್ಮ, ಸಂಬಂಧಿಕರು ಯಾರೂ ಇಲ್ಲ್ದೇ ಅನಾಥಾಶ್ರಮದಲ್ಲಿ ಬೆಳ್ದ ನಂಗೆ ಬದುಕು ಕಲಿಸಿದ ಪಾಠ ಇದು. ಅದ್ಕೇ ನಾನು ನಿಂಗೆ ಹೀಗೆ ಹೇಳಬಲ್ಲೆ..ಇನ್ನು ನಾ ಹೆಚ್ಚೇನು ಹೇಳೊಲ್ಲ. ಈಗ ನಾ ಹೆಚ್ಚು ಹೇಳಿದ್ರೂ ನಿಂಗರ್ಥ ಆಗೊಲ್ಲ. ಆದ್ರೆ ಪ್ಲೀಸ್...ನೀನು ನಿನ್ನ ಸಮಸ್ಯೆಯಿಂದಾಗ್ಲೀ ಸಂದೀಪನ ಫೋನ್ ಕಾಲ್ ನಿಂದಾಗ್ಲೀ ಎಸ್ಕೇಪ್ ಆಗ್ಬೇಡ. ಅದು ಮತ್ತಷ್ಟೂ ನಿನ್ನ ಹಿಂಸೆ ಮಾಡುತ್ತೆ. ಭಯ ಕೊಡುತ್ತೆ. ಜಸ್ಟ್ ಟಾಕ್ ಟು ಹಿಮ್. ಆದಷ್ಟು ನಾರ್ಮಲ್ ಆಗಿ ಮಾತಾಡು. ಬಟ್ ಸ್ಪಷ್ಟತೆ ಇರ್ಲಿ. ಆಗ ನೋಡು ನೀನು ಅದೆಷ್ಟೋ ನಿರಾಳವಾಗ್ತಿಯ. ಎಲ್ಲಕ್ಕಿಂತ ಮೊದ್ಲು ನೀನು ಈ ರೀತಿ ಒಂಟಿಯಾಗಿ ಕೂತ್ಕೊಂಡು ಚಿಂತಿಸೋದ್ನ ನಿಲ್ಸು. ನಾಳೆಯ ಬಗ್ಗೆ ಚಿಂತನೆ ಮಾತ್ರ ಇರ್ಲಿ ಓಕೆ?. ಹ್ಹಾಂ ನಾಡಿದ್ದೇ ಮುಂಬಯಿಗೆ ಟಿಕೆಟ್ ಬುಕ್ ಮಾಡ್ತೀನಿ. ನೀನೂ ನನ್ನ ಜೊತೆ ಬರ್ತಾ ಇದ್ದೀಯಾ.. ಹೊಸ ವಾತಾವರಣ, ಜನರ ಸಂಪರ್ಕ ನಿಂಗೇ ಒಂದು ಹೊಸತನ ತರಬಹುದು. ಅವನಿಗೂ ಹೇಳೇ ಹೋಗೋಣ. ಸರಿ ಸರಿ..ಇನ್ನು ಏಳು ಮೇಲೆ ತುಂಬಾ ಹೊತ್ತಾಯ್ತು.. ಗಂಟೆ ನಾಲ್ಕು ಗೊತ್ತಾ? ಅಣ್ಣ ಅತ್ಗೆ ಗಾಬ್ರಿ ಆಗಿರ್ಬಹುದು.." ಎಂದು ಧೃತಿ ಅವಸರಿಸಲು ಮೌನವಾಗಿ ಅವಳನ್ನು ಹಿಂಬಾಲಿಸಿದಳು.
ತನ್ನ ಭರವಸೆಯ ಮಾತಿಗೋ ಇಲ್ಲಾ ಭಾರವನ್ನು ಹಂಚಿಕೊಂಡು ತುಸು ಹಗುರಾದ ಭಾವಕ್ಕೋ ಪೂರ್ಣ ತುಂಬಾ ಸಮಾಧಾನಗೊಂಡಿರುವಂತೆ ಕಂಡಳು ಧೃತಿಗೆ. ಮೊಗದಲ್ಲಿ ಮಂಕುತನವಿನ್ನೂ ಕವಿದಿದ್ದರೂ ನೋವಿನ ತೀವ್ರತೆ ಮೊದಲಿನಷ್ಟು ಕಂಡುಬರಲಿಲ್ಲ.
ಇತ್ತ ಅವರು ಹೊರಡುವುದಕ್ಕೂ.. ತೋಟದ ಕಡೆಯಿಂದ ಸುಜಾತ ಬರುವುದಕ್ಕೂ ಸಮನಾಯಿತು. "ಏನೇ ಪುಟ್ಟಿ ಈ ಕಡೆ ಬಂದೆ? ಊಟ ಆಯ್ತಾ ನಿಂದು?" ಎಂದು ಕೆನ್ನೆ ಹಿಂಡಿದ ದೃತಿಯ ಕಡೆ ತುಸು ವಿಚಿತ್ರ ನೋಟ ಬೀರಿದಳು ಸುಜಾತ. "ಅಯ್ಯೋ ಅಕ್ಕ.. ಗಂಟೆ ನಾಲ್ಕಾಯ್ತು ಗೊತ್ತಾ? ಎಷ್ಟು ಮಾತಾಡ್ತೀರಾ ನೀವು.. ನಿಮ್ಗೆ ಹಶ್ವಾಗೊಲ್ವಾ? ಅಪ್ಪ ನಿಮ್ಮ ನೋಡ್ಕೊಂಡು ಬಾ ಹೇಳಿದ್ರು.. ಅದ್ಕೇ ಬಂದೆ. ಪೂರ್ಣತ್ತೆ ನೀ ಎಂತಕ್ಕೆ ಬೇಜಾರಲ್ಲಿದ್ದೆ? ಧೃತಿಯಕ್ಕ ನಾಡಿದ್ದು ಹೋಪದಲ್ದ?" ಎಂದು ಆಕಯ ಕೈ ಹಿಡಿಯಲು ಪೂರ್ಣ ಮುಗುಳ್ನಕ್ಕಳು."ಹೇ ಪೂರ್ಣತ್ತೆ ನಾ ಮತ್ತೆ ಒಂದು ಒಗ್ಟು ಕೇಳ್ತಿ.. ಉತ್ರ ಹೇಳು ನೋಡಾನ. ಇವಾಗಷ್ಟೇ ಓದ್ಕ ಬಂದಿ..ಪ್ಲೀಸ್ ಪ್ಲೀಸ್ ನೀ ಈಗ ಬೇಡ ಹೇಳಡಾ ಮತ್ತೆ.. ಕೇಳ್ಲಾ?"ಎಂದು ಗೋಗರೆದಾಗ ಬೇಡವೆನ್ನಲಾಗಲಿಲ್ಲ ಪೂರ್ಣಳಿಗೆ.
"ಸರಿ ಮಾರಾಯ್ತಿ.. ಒಳ್ಳೆ ಒಗ್ಟಿನ ಮಳ್ಳಾಗೋಜೆ ಈಗ ನೀನು.. ಕೇಳು ಗೊತ್ತಿದ್ದ್ರೆ ಹೇಳ್ತಿ.." ಎಂದು ಹೇಳಿದ್ದೇ ತಡ ಅತ್ಯುತ್ಸಾಹದಲ್ಲಿ ಸುಜಾತ ತಯಾರದಳು.
"ಒಗಟಿನೊಳಗೊಂದು ಒಗಟು
ಮುಟ್ಟಹೋದಷ್ಟೂ ಜಿಗುಟು
ಬಿಚ್ಚಹೋದಷ್ಟೂ ಗಂಟು
ಬಿಡಿಸಬಲ್ಲನು ಅವನು
ಇದಕುತ್ತರವೇನು? " - ಗೆಲುವು ತನ್ನದೇ ಎಂಬ ವಿಶ್ವಾಸದಲ್ಲಿ "ಎಂತು ಹೇಳು ನೊಡಾನ" ಎಂದು ಅವಳನ್ನೇ ನೋಡಿದಳು ಸುಜಾತ.
"ಕೂಸೆ ಇದು ಅಣ್ಣಯ್ಯ ನಿನ್ನೆ ತಂದ ಪೇಪರಿನಲ್ಲಿತ್ತು ಅಲ್ದಾ? ನಾ ಮೊದ್ಲೇ ಓದಿದ್ದಿ.. ಉತ್ತರ "ಬದುಕು" ಅಲ್ದ? ಆದ್ರೆ ದಯಮಾಡಿ ಇನ್ನು ಈ ಉತ್ತ್ರ ಹೇಂಗಾಗ್ತು ಹೇಳಿ ಮಾತ್ರ ಕೇಳಡ.. ಆದ್ರೆ ಸರಿ ಉತ್ರ ಅಂತೂ ನಾ ಕೊಟ್ಟಿದ್ದಿ ಹಾಂಗಾಗಿ ಯಾನೇ ಗೆದ್ದಿ ನೋಡು." ಎಂದು ಅವಳ ಗಲ್ಲಕ್ಕೊಂದು ಮುತ್ತು ಕೊಡಲು.. ತಾನು ಸೋತ ಬಗ್ಗೆ ಇನಿತೂ ಬೇಸರಸಿದೆ.."ಹೋಹೋ.. ಪೂರ್ಣತ್ತೆ ಗೆತ್ತು.. ಪೂರ್ಣತ್ತೆ ಗೆತ್ತು.." ಎಂದು ಕೂಗುತ್ತಾ ಮುಂದೆ ಓಡಿದಳು ಸುಜಾತ.
---***---




22 ಕಾಮೆಂಟ್‌ಗಳು:

ಅಂತರ್ವಾಣಿ ಹೇಳಿದರು...

ತೇಜಸ್ವಿನಿಯವರೆ,

ಉತ್ತಮವಾದ ಕಥೆ. ಪೂರ್ಣಾಳ ಸೋಲಿಂದ ಪ್ರಾರಂಭವಾಗಿ ಆಕೆಯ ಗೆಲುವಿನ ದಾರಿಗೆ ಚೆನ್ನಾಗಿ ಹೇಳಿದ್ದೀರಿ.

(ಈಗ ನೀವು ನನಗೆ congrats ಹೇಳಿ... :) )

ಚಿತ್ರಾ ಹೇಳಿದರು...

ತೇಜೂ,

" ಎನೇ ಕಷ್ಟ, ದುಃಖ, ನೋವು ಮನಸ್ಸೊಳ್ಗೆ ಹೊಕ್ಕಿದ್ರೂ ಹೊಸ ಹೊಸ ಯೋಚನೆಗಳನ್ನು ಆಗಾಗ ಹರಿಯ ಬಿಡುವುದರಿಂದ ಇವುಗಳನ್ನೆಲ್ಲಾ ತೊಳೆದುಬಿಡಬಹುದು. ಹಾಗೆ ಮರೆಯಲೇ ಸಾಧ್ಯವಾಗದಂತಹವುಗಳನ್ನು ಮನದ ಯಾವುದೋ ಮೂಲೆಯಲ್ಲಿರಿಸಿ ಮುಚ್ಚು ಬಿಟ್ಟು ಆ ಕಡೆ ತಿರುಗಿಯೂ ನೋಡದಂತಿರಬೇಕು. "
ಎಷ್ಟು ಅರ್ಥಬದ್ಧವಾಗಿ ಬರದ್ಯೇ. ಹಾಂಗೆ ಮಾಡಿದಾಗ ಮಾತ್ರ ಬದುಕಲ್ಲಿ ಗೆಲ್ಲಲಾಗ್ತು ಅಲ್ದ ? ಹಳೇ ಯೋಚನೆ , ದುಃಖದಲ್ಲೇ ಮುಳುಗಿ ಹೋದರೆ, ಎದುರಿಗಿರೋ ಹೊಸ ಖುಶೀನ ನೋಡದು ಯಾವಾಗ?

ಈ ಬದುಕು ನಿಜಕ್ಕೂ
"ಒಗಟಿನೊಳಗೊಂದು ಒಗಟು
ಮುಟ್ಟಹೋದಷ್ಟೂ ಜಿಗುಟು
ಬಿಚ್ಚಹೋದಷ್ಟೂ ಗಂಟು....."

sunaath ಹೇಳಿದರು...

ಒಂದು ದೀರ್ಘವಾದ ಲೇಖನದಲ್ಲಿ ಬರೆಯಬಹುದಾದ ವಿಚಾರಗಳನ್ನು , ಕತೆಯ ರೂಪದಲ್ಲಿ ಅಳವಡಿಸಿ ಕೊಟ್ಟಿದ್ದೀರಿ.
ಕತೆಗಾಗಿ ನೀವು ಆರಿಸಿದ form ತುಂಬಾ ಚೆನ್ನಾಗಿದೆ.
ಸುಜಾತಾಳ ಒಗಟುಗಳೇ ಪೂರ್ಣಾಳ ಬಾಳಿನ ಒಗಟುಗಳಾಗಿವೆ. ಇದೊಂದು ಒಳ್ಳೆಯ ಕಥಾತಂತ್ರ. ನಿರೂಪಣೆ ಆಸಕ್ತಿಯನ್ನು ಉಳಿಸಿಕೊಂಡು ಹೋಗುತ್ತದೆ.
ಅಭಿನಂದನೆಗಳು.

sunaath ಹೇಳಿದರು...

ತೇಜಸ್ವಿನಿ,
ನಿಮ್ಮ ಈ ಕತೆ ಅನೇಕ ಕಾರಣಗಳಿಗಾಗಿ ಆಕರ್ಷಕವಾಗಿದೆ.
ದಾಂಪತ್ಯಜೀವನದ ಸಮಸ್ಯೆಯನ್ನು ಚರ್ಚಿಸುತ್ತ, ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುವದು ಈ ಕತೆಯ content ಆಗಿದೆ. ಈ contentಗೆ ತಕ್ಕಂತಹ formನ ಬಳಕೆ ಹಾಗೂ narrationದಲ್ಲಿಯ ತಾಳ್ಮೆ ಇವು ನಿಮ್ಮ ಪ್ರತಿಭೆಯನ್ನು ತೋರಿಸುತ್ತವೆ.

ಕತೆಯ ನಾಯಕಿ ಪೂರ್ಣಾಳಲ್ಲಿ ಅಂಡಾಣುಗಳು ಹುಟ್ಟಲಾರವು ಎನ್ನುವದು ಇಲ್ಲಿಯ ಸಮಸ್ಯೆ ಅಲ್ಲ.
ಈ ಸಮಸ್ಯೆಗೆ ಗಂಡ ಸಂದೀಪ ಹಾಗೂ ಹೆಂಡತಿ ಪೂರ್ಣಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವದೇ ಸಮಸ್ಯೆ. ಇಲ್ಲಿ ಯಾರ ವಿಚಾರ prevail ಆಗಬೇಕು ಎನ್ನುವದೇ ಸಮಸ್ಯೆ ; ದಾಂಪತ್ಯದಲ್ಲಿ ಯಾರು sub-ordinate ಆಗಬೇಕು, ಯಾರು super-ordinate ಆಗಬೇಕು ಎನ್ನುವ ಸಮೀಕರಣದ ಸಮಸ್ಯೆ ಇಲ್ಲಿದೆ.

ಅಲ್ಲದೆ, ಹೆಂಡತಿಯೆ ಬೇರೊಬ್ಬ ಗಂಡಸಿನ ವೀರ್ಯ ಪಡೆಯುವದಾದರೆ, ಅದಕ್ಕೆ ಅವಳ ಗಂಡನ ಪ್ರತಿಕ್ರಿಯೆ ಏನು ಎನ್ನುವ ಪ್ರಶ್ನೆಯೂ ಇಲ್ಲಿದೆ.

ದಾಂಪತ್ಯದಲ್ಲಿ ಇವಿಷ್ಟೆ ಪ್ರಶ್ನೆಗಳಿರುವದಿಲ್ಲ. ಇಲ್ಲಿರುವ ಪ್ರಶ್ನೆಗಳು ಗಂಡು ಹಾಗು ಹೆಣ್ಣಿನ ನಡುವೆ ಏಳುವ ಅನೇಕ ಸಮಸ್ಯೆಗಳ ಸಂಕೇತ ಅಷ್ಟೇ.

ಈ ಸಮಸ್ಯೆಗಳ ಉತ್ತರವು ಒಗಟಾಗಿಯೇ ಉಳಿಯುವದು ಎನ್ನುವದನ್ನು ಒಗಟುಗಳ ಮೂಲಕವೇ ಲೇಖಕಿ ನಿರೂಪಿಸಿದ್ದಾರೆ.

ಈ ಸಮಸ್ಯೆಗೆ ಉತ್ತರ ಬೇಕಾದರೆ, ಗಂಡ ಸಂದೀಪ ಹಾಗೂ ಹೆಂಡತಿ ಪೂರ್ಣಾ ಒಂದಾಗಿ ‘ಸಂಪೂರ್ಣದೀಪ’ ಆಗಬೇಕು ಎನ್ನುವ ಆಶಯವನ್ನು ಕತೆ ವ್ಯಕ್ತಪಡಿಸುತ್ತದೆ.

ತುಂಬಾ ಸುಂದರವಾದ ಕತೆ. ಲೇಖಕಿಗೆ ಅಭಿನಂದನೆಗಳು. ಇನ್ನೂ ಇಂತಹ ಕತೆಗಳು ಅವರಿಂದ ಬರಲಿ ಎಂದು ಹಾರೈಸುತ್ತೇನೆ.

ಅನಾಮಧೇಯ ಹೇಳಿದರು...

ಯಸ್ ತೇಜು ಅವರೇ

ಈ ಬದುಕು ನಿಜಕ್ಕೂ
"ಒಗಟಿನೊಳಗೊಂದು ಒಗಟು
ಮುಟ್ಟಹೋದಷ್ಟೂ ಜಿಗುಟು
ಬಿಚ್ಚಹೋದಷ್ಟೂ ಗಂಟು....."

ದಾಂಪಥ್ಯದ ವಿವಿಧ ಮುಖಗಳನ್ನು ತೆರೆದಿಟ್ಟಿದ್ದೀರಿ

Chevar ಹೇಳಿದರು...

very good post. Thanks for the beautiful piece.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜು...
ಕಥೆ ತುಂಬ ಅರ್ಥಪೂರ್ಣವಾಗಿದೆ. ಕೆಲವುಮಾಹಿತಿಗಳನ್ನ ಸೂಕ್ಷವಾಗಿ ತನ್ನೊಳಗಿರಿಸಿಕೊಂಡು ಕಥೆ ತನ್ನ ಸಂಪತ್ತನ್ನು ಹೆಚ್ಚಿಸಿಕೊಂಡು ಓದುಗರೊಡನೆ ಬಿಚ್ಚಿಕೊಳ್ಳುತ್ತಾ ಹೋಗುವ ಪರಿ ಇಷ್ಟವಾಗುತ್ತದೆ.
ಅಲ್ಲಲ್ಲೋ, ಇಲ್ಲೆಲ್ಲೋ ಕಾಣುವ ವಾಸ್ತವವನ್ನು ಕಥಾವಸ್ತುವಾಗಿಸಿಕೊಂಡಿದ್ದು ಕಥೆಗಿನ್ನಷ್ಟು ವಜನ್ ನೀಡಿದೆ.
ಚಂದದ ಕಥೆಗೆ ಧನ್ಯವಾದ.

Unknown ಹೇಳಿದರು...

ತೇಜಸ್ವಿನಿ ಅಕ್ಕಾ,
ಒಂದು ಒಳ್ಳೆಯ ಕಥೆ ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು. ನಿರೂಪಿಸಲು ತುಂಬಾ ಸೂಕ್ಷ್ಮವಾದ ವಿಷಯವನ್ನು ಬಹಳ ಸುಂದರವಾಗಿ ಅಕ್ಷರಕ್ಕಿಳಿಸಿದ್ದೀರಿ. ಕಥೆಯ ವಸ್ತು, ನಿರೂಪಣೆ ಮತ್ತು ನೀವು "ಟೆಕ್ನಿಕಲ್" ವಿಷಯಗಳ ಜೊತೆ ಬಳಸಿದ ಭಾವ ಚಿತ್ತಾರಗಳು ಬಹಳ ಮುದಕೊಟ್ಟಿತು. ನೀವು ಬಳಸಿದ ಸುಂದರವಾದ ಒಗಟುಗಳು ಮತ್ತು ಭಾವಗೀತೆಗಳು ಕಥೆಗೆ ಒಳ್ಳೆಯ ಮೆರಗನ್ನು ತಂದು ಕೊಟ್ಟಿವೆ. ಇನ್ನೇನೂ ಹೇಳಲು ಗೊತ್ತಾಗ್ತಿಲ್ಲ!

kanasu ಹೇಳಿದರು...

ತೇಜಸ್ವಿನಿಯವರೇ
ಕಥೆ ಅತ್ಯುತ್ತಮವಾಗಿದೆ. ಅದರಲ್ಲೂ ಪ್ರಾರಂಭದ ಒಗಟು ಅದರ ಭಾವ, ನಿರೂಪಣೆ ತುಂಬಾ ಚೆನ್ನಾಗಿದೆ.
ಬದುಕಿನ ಭಾವನೆಗಳು ಗಂಡಿಗಿಂತ ಹೆಣ್ಣನ್ನು ತೀವ್ರವಾಗಿ ಕಾಡುತ್ತದೆ ಎಂಬುದನ್ನು ಸರಳವಾಗಿ ಹೇಳಿದ್ದೀರಿ.
ಸುಂದರ ಕಥೆಗೆ ನನ್ನ ಅಭಿನಂದನೆಗಳು.

ಆಲಾಪಿನಿ ಹೇಳಿದರು...

ಅಬ್ಬಾ..... ತುಂಬಾ ದಿನದಿಂದ ಓದಬೇಕು ಅನ್ಕೋಳ್ತಿದ್ದೆ ಆದ್ರೆ ಅಗಿರಲಿಲ್ಲ. ಈವತ್ತು ಒದಿದೆ. ಕತೆ ಚೆನ್ನಾಗಿದೆ. ಎಷ್ಟೊಂದು ವಿಷಯಗಳು ಅಲ್ಲಿ ಚರ್ಚೆಗೆ ಒಳಪಡುತ್ತವೆ. ಮತ್ತೆ ಬರಿತಾ ಇರ್‍ರಿ.

Harisha - ಹರೀಶ ಹೇಳಿದರು...

ಚೆಂದದ ಕಥೆ :-)

ಸುಧೇಶ್ ಶೆಟ್ಟಿ ಹೇಳಿದರು...

ಕಥೆಗೆ ಅ೦ತ್ಯವನ್ನು ಹೇಗೆ ಕೊಡುತ್ತೀರೋ ಎ೦ದು ತು೦ಬಾ ಕುತೂಹಲದಿ೦ದ ಓದಿದೆ. ಅ೦ತ್ಯ ಸಮರ್ಪಕವಾಗಿದೆ.
ಮಗುವಿನ ಸಮಸ್ಯೆಯ ಜೊತೆಗೆ ಇರುವು ಮತ್ತೊ೦ದು ಸಮಸ್ಯಯನ್ನು ವಿಶ್ಲೇಸಿದ ರೀತಿ ಚೆನ್ನಾಗಿತ್ತು. ಕೇವಲ ಮಗುವಿನ ಸಮಸ್ಯೆಯ ಬಗ್ಗೆ ಮಾತ್ರ ಡಿಸ್ಕಶನ್ ಮಾಡಿದ್ದಿದ್ದ್ರೆ, ಕಥೆ ಇಷ್ಟು ಚೆನ್ನಾಗಿ ಮೂಡಿ ಬರುತ್ತಿರಲಿಲ್ಲವೇನೋ.
ನಿರೂಪಣೆ, ಕಥೆ ಬೆಳೆಸಿದ ರೀತಿ ಮತ್ತು ಪೂರಕವಾದ ಭಾವಗೀತೆಗಳು ವಾಹ್....

Shree ಹೇಳಿದರು...

ellaru samasye bandaaga adara baggene yachane madta,pariharada bagge yachisadille. samasye ellarigu baratte, adre heg parihara mdkalakku anta tumba chanaagi saralavaagi, nevu nirupisiddi.tumba chanaagi mudiddu kate,nange tumba ista aatu.

ತೇಜಸ್ವಿನಿ ಹೆಗಡೆ ಹೇಳಿದರು...

@ಶಂಕರ್,

ಸೋಲೇ ಗೆಲುವಿನ ಮೆಟ್ಟಲು ಅಲ್ವೇ?.. ತುಂಬಾ ಧನ್ಯವಾದಗಳು ನನ್ನ ಇಷ್ಟುದ್ದದ ಕಥೆಯನ್ನು ಕಷ್ಟಪಟ್ಟು ಓದಿದ್ದಕ್ಕೆ :) ಹಾಂ... ಕಂಗ್ರಾಟ್ಸ್ ಕೂಡಾ :)

@ಚಿತ್ರಾ,

ಹೌದು.. ನಮ್ಮ ಮುಂದೆ ಅದೇಷ್ಟೋ ದುಃಖಗಳಿದ್ದಿಕ್ಕು.. ಅದೆಷ್ಟೋ ನೋವುಗಳನ್ನು ಹಿಂದೆ ನಾವು ಸಹಿಸಿರ್ಲಿಕ್ಕು.. ಆದರೆ ಬದುಕು ಎಂಬುದು ನಿಂತ ನೀರಲ್ಲ ಅಲ್ದಾ? ಹಾಂಗಿರ್ಬೇಕಿರೆ ನಾವ್ಯಾಕೆ ನಿಂತ ನೀರಾಗವು? ಮೆಚ್ಚುಗೆಗೆ ತುಂಬಾ ಧನ್ಯವಾದ.

@ಸುನಾಥ ಕಾಕಾ,

ನಿಮ್ಮ ಪ್ರತಿಕ್ರಿಯೆಗಳೇ ನನ್ನ ಕಥೆಗಿಂತ ತುಂಬಾ ಆಕರ್ಷಕವಾಗಿವೆ ಹಾಗೂ ಅರ್ಥವತ್ತಾಗಿವೆ ಎನ್ನಬಹುದು. ನಿಮ್ಮ ಈ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ತುಂಬಾ ಆಭಾರಿ. ಇಂತಹ ಪ್ರೋತ್ಸಾಹಭರಿತ ನುಡಿಗಳೇ ನಮ್ಮಂತಹ ಬರಹಗಾರರಿಗೆ ಸ್ಫೂರ್ತಿ. ನಿಮ್ಮ ಆಶೀರ್ವಾದ ಹಾಗೂ ಹಾರೈಕೆಗಳು ನನ್ನೊಂದಿಗೆ ಸದಾ ಹೀಗೇ ಇರಲಿ ಎಂದು ಆಶಿಸುವೆ. ತುಂಬಾ ಧನ್ಯವಾದಗಳು.

@ಶಶಿಧರ್ ಅವರೆ,

ಮೆಚ್ಚುಗೆಗೆ ತುಂಬಾ ಧನ್ಯವಾದಗಳು. ಮಾನಸವನ್ನು ಮರೆಯದಿರಿ :)

@ಚೇವಾರ್ ಅವರೆ,

ತುಂಬಾ ಧನ್ಯವಾದಗಳು. ಭೇಟಿ ಕೊಡುತ್ತಿರಿ.

@ಶಾಂತಲ,

ಎಷ್ಟೋ ದಿನಗಳನ್ನು ಕಾಡುತ್ತಿದ್ದ ವಸ್ತುವನ್ನು ಕಥೆಯನ್ನಾಗಿಸಿ ನನ್ನ ಮನಸಿನ ಭಾರವನ್ನಿಳಿಕೊಂಡಿರುವೆ.. ನೀವೆಲ್ಲಾ ಇಷ್ಟಪಟ್ಟು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ತುಂಬಾ ಧನ್ಯವಾದಗಳು.

@ಮಧು,

ನನಗೇನು ಹೇಳಬೇಕೆಂದೆ ಗೊತ್ತಾಗುತ್ತಿಲ್ಲ ನೋಡು. ನನ್ನ ಕಥೆಯನ್ನು ಓದಿ ಪ್ರೋತ್ಸಾಹಿಸಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ಅದಕ್ಕಿಂತ ಹೆಚ್ಚಾಗಿ ಬದುಕಿನ "ಒಗಟ"ನ್ನು ಬಿಡಿಸಲು.. ರಚಿಸಲು ಸಹಾಯಮಾಡಿದ ನಿನಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

@ಕನಸು,

ನೀವು ಹೇಳಿದ್ದು ಅಕ್ಷರಶಃ ನಿಜ. ಬದುಕಿನ ಕುರಿತು, ಭಾವನೆಗಳ ಕುರಿತು ಹೆಣ್ಣಿಗಿರುವಷ್ಟು ತಾಳ್ಮೆ, ಸೂಕ್ಷ್ಮತೆ, ಗಂಡಿಗಿರದು. ಆದರೆ ಇದು ಪ್ರಕೃತಿ ಸಹಜ....inbuilt ಎನ್ನಬಹುದೇನೋ?!! ಪ್ರತಿಕ್ರಿಯೆಗೆ ಧನ್ಯವಾದಗಳು.

@ಶ್ರೀದೇವಿ,

ಅಬ್ಬಾ! ಅಂತೂ ನನ್ನ ಕಥೆಯನ್ನು ಓದೇಬಿಟ್ಟಿರಲ್ಲಾ :) ನಿಮ್ಮನ್ನು ನೀನಾಸಂ ಬಿಡೋದೇ ಇಲ್ವೇನೋ ಅಂದ್ಕೊಂಡಿದ್ದೆ ನೋಡಿ :) ತುಂಬಾ ಥ್ಯಾಂಕ್ಸ್.

@ಹರೀಶ್ ಅವರೆ,

ಧನ್ಯವಾದಗಳು.

@ಸುಧೇಶ್ ಅವರೆ,

ಮಗುವಿನ ಸಮಸ್ಯೆ ಬರುವುದೇ ಅದರ ಬೆನ್ನಿಗಂಟಿಕೊಂಡೇ ಇರುವ ದಾಂಪತ್ಯದ ಸಮಸ್ಯೆಯೊಡನೆಯೇ. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.

@ಶ್ರೀ,

ಮಾನಸಕ್ಕೆ ಸ್ವಾಗತ.

ಸಮಸ್ಯೆಗಳ ಜೊತೆಯೇ ಪರಿಹಾರವೇ ಇರುತ್ತದೆ. ನಾವು ಕಾಣುವ ದೃಷ್ಟಿಯಲ್ಲಿ ಅದು ಅಡಕವಾಗಿರುತ್ತದೆ. ಪರಿಹಾರ ಇದೆ ಅಂದರೆ ಇದೆ.. ಇಲ್ಲ ಅಂದರೆ ಇಲ್ಲ. ತುಂಬಾ ಧನ್ಯವಾದಗಳು.

-----------------------------------

ಕಥೆಯನ್ನು ಓದಿ ಮೆಚ್ಚಿ ಪ್ರತಿಕ್ರಿಯಿಸಿದ.. ತಪ್ಪು ಕಂಡಲ್ಲಿ ತಿದ್ದಿ ಸಲಹೆಗಳನ್ನಿತ್ತ, ದಟ್ಸ್‌ಕನ್ನಡ ಓದುಗರಿಗೂ ಹಾಗೂ ನನ್ನ ಬ್ಲಾಗ್ ಮಿತ್ರರಿಗೂ ಮತ್ತೊಮ್ಮೆ ನನ್ನ ಅನಂತಾನಂತ ಧನ್ಯವಾದಗಳು.

ಈ ಕಥೆಯ ಕೊನೆಯಲ್ಲಿ ಬರುವ ಬದುಕಿನ ಕುರಿತಾದ ಒಗಟನ್ನು ಬಹು ಜನರು ಮೆಚ್ಚಿಕೊಂಡು ಪ್ರತಿಕ್ರಿಯಿಸಿರುವರು. ಆದರೆ ಈ ಮೆಚ್ಚುಗೆಗೆ ನಾನೊಬ್ಬಳೇ ಭಾಗೀದಾರಳಲ್ಲ. ಈ ಒಗಟನ್ನು ರಚಿಸುವಾಗ ಅಲ್ಲಲ್ಲಿ ತಿದ್ದಿ, ಸಲಹೆಗಳನ್ನು ನೀಡಿ "ಬದುಕು" ಒಗಟನ್ನು ಮತ್ತೂ ಅರ್ಥವತ್ತಾಗಿ ಮೂಡಿಸುವಲ್ಲಿ ಸಹಾಯಮಾಡಿದ ನನ್ನ ಆತ್ಮೀಯ ಸಹೋದರ "ಮಧು"(ಮಧುವನ) ಅವರ ಪಾತ್ರವೂ ತುಂಬಾ ದೊಡ್ಡದಿದೆ.

ಮಧು ತುಂಬಾ ತುಂಬಾ ಥ್ಯಾಂಕ್ಸ್ :) ಮುಂದೆನೂ ನಿಂಗೆ ಕಾಟ ಕೊಡ್ತಾನೇ ಇರ್ತಿ ನೋಡು.

ವಿ.ರಾ.ಹೆ. ಹೇಳಿದರು...

ನನಗೂ ಇದರ ಅಂತ್ಯದ ಬಗ್ಗೆ ಭಾರೀ ಕುತೂಹಲವಾಗಿತ್ತು.

ಚಂದದ ಕಥೆ.

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ,
ಕಥೆ ತುಂಬಾ ಚೆನ್ನಾಗಿ ಬರೆದಿದ್ದೀರಿ,ದಟ್ಸ್ ಕನ್ನಡದಲ್ಲಿ ಓದಿದ್ದೆ, ಮತ್ತೆ ಓದಬೇಕೆನ್ನಿಸಿತು, ಪಾತ್ರಕ್ಕೆ ತಕ್ಕ ಹೆಸರುಗಳು ಇಷ್ಟವಾದವು. ಆರಿಸಿಕೊಂಡ ವಿಷಯ ಅದನ್ನು ಬರೆದ ಶೈಲಿ ಸುಂದರವಾಗಿದೆ.

ಚಂದ್ರಕಾಂತ ಎಸ್ ಹೇಳಿದರು...

ತೇಜಸ್ವಿನಿ

ಪ್ರತಿಕ್ರಿಯೆ ಬರೆಯಲು ಪದಗಳೇ ಹೊಳೆಯುತ್ತಿಲ್ಲ. ಈಗಾಗಲೇ ಅನೇಕ ಜನ ಪ್ರತಿಕ್ರಿಯಿಸಿರುವುದರಿಂದ ನನ್ನ ಭಾವನೆಗಳು second hand ಎನಿಸುತ್ತದೆ.

ಕತೆಯ ವಸ್ತು ಅತ್ಯುತ್ತಮವಾಗಿದೆ. ಇದು ನಿಮಗೆ ಹೊಳೆದದ್ದಾದರೂ ಹೇಗೆ ಎಮ್ಬ ಆಶ್ಚರ್ಯ ನನಗೆ. ನಿಮ್ಮೂರಿನ ಪರಿಸರವನ್ನು ಲೀಲಾಜಾಲವಾಗಿ ಚಿತ್ರಿಸಿದ್ದೀರಿ. ಧೃತಿಯ ಪಾತ್ರವೇ ಒಂದು ಕತೆಗಾಗುವಷ್ಟು ಸರಕು ತುಂಬಿಕೊಂಡಂತೆ ಕಾಣುತ್ತದೆ.ಇನ್ನು ’ ಬದುಕು’ ಒಗಟು - ಇದ್ಯಾವುದಿದು ? ಎಂದು ಕತೆ ಓದುವಾಗ ಅಂದುಕೊಂಡೆ. ಅದು ನಿಮ್ಮಗಳ ಸೃಷ್ಟಿ ಎಂದು ಕೇಳಿ ಮೆಚ್ಚುಗೆಯಾಯಿತು.

ಒಟ್ಟಿನಲ್ಲಿ ಎಲ್ಲರೂ ನೋಡುವುದನ್ನೇ ನೀವು ನೋಡಿದರೂ ಎಲ್ಲರಿಗೂ ಕಾಣದ ಮುಖದ ಮೇಲೆ ಬೆಳಕು ಚೆಲ್ಲುತ್ತೀರಿ. ( ವನಸುಮ ಓದಿದಾಗಲೇ ಹಾಗನ್ನಿಸಿತು) Hatsoff.
ನಿಮ್ಮ ಮಿಕ್ಕ ಬರಹಗಳನ್ನು ಓದಲೇ ಬೇಕಿದೆ.

ಉತ್ತಮ ಕತೆಗೆ ಧಮ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

Tejaswini,
wonderful story, narration is too good. Heege bareyuttiri

ತೇಜಸ್ವಿನಿ ಹೆಗಡೆ ಹೇಳಿದರು...

@ವಿಕಾಸ್, ಭರ್ಗವಿ, ಚಂದ್ರಕಾಂತ ಹಾಗೂ ಗುರುಮೂರ್ತಿ ಅವರೆ,

ನಿಮ್ಮ ಪ್ರೋತ್ಸಾಹ ಭರಿತ ಮೆಚ್ಚಿಗೆಗಳಿಗೆ ತುಂಬಾ ಆಭಾರಿ. ಧನ್ಯವಾದಗಳು.

ಅಂತರ ಗಂಗೆ ಹೇಳಿದರು...

ಚೆನ್ನಗಿತ್ತು.ಒನ್ದೊಮ್ಮೆ ಅಸ್ಸತ್ತೆ ಇಷ್ಟು ಒಳ್ಳೇ ಗೆಳೇಯರು ನಿಜವಾಗಿಯು ಸಿಗುತ್ತಾರ ಅ೦ತ.May b i am not that fortunate....:)neways ಇಷ್ಟ ಅಯ್ತು.ಧನ್ಯವಾದಗಳು

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರಿಯ ಶ್ರುತಿ,

ನಿಜ.. ಉತ್ತಮ ಗೆಳೆತನ ಸಿಗಲೂ ಪುಣ್ಯ ಮಾಡಿರಬೇಕು. ಆದರೆ ನಾವು ಉತ್ತಮರಾಗಿದ್ದರ್ ಬೇರೊಬ್ಬರ ಉತ್ತಮ ಗೆಳತಿ/ಗೆಳಯ ಆಗಬಲ್ಲೆವು ಖಂಡಿತ ಅಲ್ಲವೇ? ಇದೂ ಒಂದು ಪುಣ್ಯ ನೋಡಿ.. :) ಈ ಪುಣ್ಯ ನಿಮ್ಮದಾಗುವುದು ಚಿಂತಿಸಬೇಡಿ.

ತುಂಬಾ ಧನ್ಯವಾದಗಳು ಪ್ರತಿಕ್ರಿಯೆಗೆ.

ಜಲನಯನ ಹೇಳಿದರು...

ತೇಜಸ್ವಿನಿ ಕಥೆಯ ಕೇಂದ್ರ ವಿಷಯದ ಆಧಾರದಲ್ಲಿ ಇಡೀ ಕಥೆಗೆ ರೂಪಕೊಟ್ಟು ಓದಿಸಿಕೊಪ್ಂಡು ಹೋಗುವಂತೆ ಬರೆಯುವ ಆ ನಿಮ್ಮ ಲೇಖನಿಯ ತಾಕತ್ತು ಪ್ರತಿ ತಿರುವಿನಲ್ಲೂ ಕಾಣುತ್ತೆ. ಬಹಳ ಸೂಕ್ಷ್ಮತೆಗಳ ನಡುವೆ ನಡೆಯುಬ ದಾಂಪತ್ಯ ಸಮಸ್ಯೆಯ ಎದುರಾದರೆ ದುರ್ಬಲಕೊಂಡಿಗಳು ಕಳಚಿಕೊಳ್ಳೂತ್ತವೆ...
ಸುನಾಥಣ್ಣ ನಿಮ್ಮ ಕಥೆಯ ಎಲ್ಲಾ ತಿರುವುಗಳಿಗೆ ಕೊಟ್ಟ ವಿವವರಣೆ ನನಗೆ ಇಷ್ಟವಾಯ್ತು..
ಶರೀರಕ್ರಿಯಾ ಮೂಲಗಳು ಕೆಲವೊಮ್ಮೆ ಗಂಡಸಿನ ಅಹಂ ಗೆ ಪೆಟ್ಟುಕೊಡುತ್ತವೆ ಎನ್ನುವುದು ವಿಜ್ಞಾನ ಅರಿತ ಭಾವ ಬಂಧ ಸ್ಫಂದನದ ಅರಿವಿನ ಒಳಮನಸ್ಸಿಗೆ ವೇದ್ಯವಾಗುತ್ತದೆ.
ತುಂಬಾ ಚನ್ನಾಗಿದೆ ಕಥೆ.