ಬುಧವಾರ, ಜನವರಿ 10, 2018

ತೆರೆ ಸರಿದಾಗ...

ಮುಂಜಾನೆಯೋ, ಮುಸ್ಸಂಜೆಯೋ,
ಅದೊಂದು ಅಯೋಮಯ ಘಳಿಗೆ!
ಅರೆತೆರೆದ ಕಣ್ಣಿಂದ ಹೊಕ್ಕಿದ ಸ್ವಪ್ನದಲ್ಲಿ
ಅಜ್ಜಮ್ಮನ ಸೀರೆಯ ಸೆರಗಿನಂಚು ಸೋಕಿ,
ಅವಳ ಕಣ್ಗಳಿಂದ ಸುರಿದ ಪ್ರೀತಿ
ಹರಿದು ಧಾರೆಯಾಗಿ,
ನನ್ನೆದೆಯುರಿಯ ತಣಿಸಿದ ಹೊತ್ತು!
ಅವಳ ಹೆಗಲೇರಿ ಹೊರೆಟೆನೋ,
ಸೊಂಟವನ್ನೇರಿ ಕುಳಿತೆನೋ...
ಸಾಗಿದ ದಾರಿ ಮಾತ್ರ ಅದೇ ತೋಟ, ಗದ್ದೆ, ಗುಡ್ಡ, ಕಾಡು...
ಆಗಾಗ ಹೊಳೆದು ಕಣ್ಸೆಳೆಯುತ್ತಿತ್ತು ಅವಳ ಮೂಗುತಿಯ ನತ್ತು
ತೋರಿದ್ದಳಜ್ಜಿ ಪುಟಾಣಿ ಗಿಡದ ತುಂಬೆಲ್ಲಾ ತುಂಬಿದ್ದ
ಅಚ್ಚಬಿಳಿ ಹೂವುಗಳ, ಎಲೆಮರೆಯ ಕಾಯಿಗಳ
ಬುಡದಲ್ಲುದುರಿ ಒಣಗಿದ್ದ ತರಗೆಲೆಗಳ
ಅಂಟಂಟು ಅಂಟಿದಷ್ಟೂ ಕೂಸೆ, ಅಂಟದಿರು
ಯಾರಿಗೂ ಯಾವುದಕ್ಕೂ...
ಅಂಟಿಬಿಟ್ಟೆಯೋ ಕೆಟ್ಟೆ! ಕೆಟ್ಟರೂ ಸರಿಯೇ,
ಕೊಡವಿ ಮುನ್ನಡೆವುದನ್ನು ಸರಿಯಾಗಿ ಕಲಿಯೇ...
ನೋಡಲ್ಲಿ ಹೂವ ತೊಟ್ಟನು,
ಇನ್ನೇನು ಕಳಚಲು ಸನ್ನದ್ಧವಾಗಿದೆ...
ಅದಕಿಲ್ಲ ಯಾವ ಶೋಕ, ಗಿಡಕೂ ಇಲ್ಲ ಹನಿ ಪಶ್ಚಾತ್ತಾಪ
ಚಕ್ರ ತಿರುಗಲು ಉರುಳಲೇ ಬೇಕದು ಅನವರತ...
ಕೇಳಿಲ್ಲಿ ತಂಗಿ, ನಿನಗೆ ದಕ್ಕಿದ್ದಷ್ಟೇ ಪ್ರಾಪ್ತಿ
ಮಿಕ್ಕಿದ್ದು ಕೃಷ್ಣಾರ್ಪಣಮಸ್ತು!
ನಮ್ಗೆ ನಾವು ಗೋಡೆಗೆ ಮಣ್ಣು
ಉಳ್ದಿದ್ದೆಲ್ಲಾ ಶಿವನ ಮೂರನೆಯ ಕಣ್ಣು
ಹತ್ತಿರವಿದ್ದೂ ದೂರನಿಲ್ಲುವ ಪಾಠವ ಕಲಿಸಿ,
ಅಂಗೈ ಬಿಡಿಸಿ, ಕಿರು ಬೆರಳ ತುದಿಯನ್ನಷ್ಟೇ
ಸೋಕಿಸಿ ಸಾಗುವ ಪರಿ ತೋರಿ,
ನಿಂತ ನೀರಾಗಿದ್ದ ನೋಟವ ತಿರುಗಿಸಿ,
ಮಡಿಲೇರಿದವಳಿಗೆ ಅಮಲೇರಿಸಿದ್ದಳಾ ಅಜ್ಜಮ್ಮ
ಕಣ್ಬಿಟ್ಟಾಗ ಮುಂಜಾವೋ, ಮುಸ್ಸಂಜೆಯೋ!
ದಿಂಬಿನ ಹಸಿ ಒದ್ದೆಯಲ್ಲಿ
ಅವಳುಟ್ಟಿದ್ದ ಪತ್ತಲದ ಘಮಲು ಮಾತ್ರ
ಹಾಗೇ ಅಂಟಿಕೊಂಡಿತ್ತು.
~ತೇಜಸ್ವಿನಿ

1 ಕಾಮೆಂಟ್‌:

sunaath ಹೇಳಿದರು...

ತೇಜಸ್ವಿನಿ,
ಜಾಗೃತ-ಸುಪ್ತಾವಸ್ಥೆಯ ಸಂಧಿಕಾಲದಲ್ಲಿ, ನಿಮ್ಮಲ್ಲಿ ಮೂಡಿದ ಬದುಕಿನರಿವನ್ನು ಓದುಗರಿಗೆ ಮನದಟ್ಟಾಗುವಂತೆ ಹೇಳಿದ್ದೀರಿ. ಮಿಂಚಿನಂತೆ ನನ್ನ ಮನದಲ್ಲಿ ಮಿಂಚಿ, ಒಂದು ಹೊಸ ಬೆಳಕಿನ ಅನುಭವವನ್ನು ನೀಡಿದ ಕವನಕ್ಕಾಗಿ ಧನ್ಯವಾದಗಳು.