ಗುರುವಾರ, ಜೂನ್ 12, 2014

ಚಾರುಕೇಶಿ

ಅಬ್ ಕೆ ಹಮ್ ಬಿಚಡೆ ತೊ ಶಾಯದ್ ಕಭಿ ಖ್ವಾಬೋ ಮೆ ಮಿಲೆ
ಜಿಸ್ ತರಹ ಸೂಖೆ ಹುಯೆ ಫೂಲ್ ಕಿತಾಬೊ ಮೆ ಮಿಲೆ

‘ಚಾರುಕೇಶಿ’...ಈ ಹೆಸರನ್ನು ಕೇಳಿದಾಗೆಲ್ಲಾ ಮೇಲಿನ ಗಝಲ್ ನೆನಪಿಗೆ ಬರುವುದು ಆಕಸ್ಮಿಕವೋ ಇಲ್ಲಾ ಅವಳ
ನೆನಪಿನೊಳಡಗಿರುವ ಅತೀವ ದುಃಖವೋ ಗೊತ್ತಿಲ್ಲ. ಸಂಗೀತವೆಂದರೆ ಸರಿಗಮಪ ಎಂದಷ್ಟೇ ತಿಳಿದಿದ್ದ ನನ್ನೊಳಗೆ ಸಪ್ತ ಸ್ವರಗಳ ನಿನಾದ ಹೊರಡಿಸಿ.. ಇಂದು ನನ್ನೊಳಗೆ ಹಬ್ಬಿರುವ ಸಂಗೀತ ಪ್ರೀತಿಗೆ ನಾಂದಿ ಹಾಕಿದವಳೇ ಚಾರುಕೇಶಿ.

"ನಮ್ಮ ನಗುವಿನಿಂದ ಹಿಡಿದು, ಅಳುವಿನವರೆಗೂ ರಾಗ ಮಿಳಿತವಾಗಿರೊತ್ತೆ ಗೊತ್ತಾ ಶಾಲ್ಮಲಿ? ಸುಮ್ಮನೆ ಕಣ್ಮುಚ್ಚಿ ಕುಳಿತರೆ ಸಾಕು.. ನೀ ಕೇಳೋ ಪ್ರತಿ ಶಬ್ದದಲ್ಲೂ ಒಂದು ಸಂಗೀತೆವಿದೆ... ಆಲಿಸು....." ಅವಳೆಂದಾಗ ಹಾಸ್ಯವೆನಿಸಿತ್ತು. ಆದರೆ ಇಂದು ಅವಳ ಆ ಮಾತೊಳಡಗಿದ್ದ ಸತ್ಯದ ರುಜುವಾತು ನನಗೆ ಕಾಣಿಸುತ್ತಿದೆ.
ಕೈಯೊಳಗಿರುವ ಗಝಲ್ ಪುಸ್ತಕ ಹಾಗೇ ಎದೆಗೊರಗಿದೆ. ಹೊರಗೆ ಮಳೆಯ ಅಬ್ಬರ ಜೋರಾಗಿದೆ. ಬಾನಿಗೆ ಗುನ್ನ ಹಾಕಿರುವ ಸೂರ್ಯ ಅರ್ಧ ದಿನ ರಜೆ ಹಾಕಿ ಮಲಗಿದಂತಹ ಕತ್ತಲು. ಆತ ಕೊರೆದಿರುವ ರಂಧ್ರದೊಳಗಿಂದ ವರ್ಷಧಾರೆ ಅವ್ಯಾಹತವಾಗಿ ಬಿಡದೇ ಸುರಿಯುತ್ತಿದೆ. ಜಗುಲಿ ಕಟ್ಟೆಯ ಮೇಲೆ ಕುಳಿತು ಹಾಗೇ ಕಣ್ಮುಚ್ಚಿದರೆ ಸಾಕು.... ಸುರಿವ ಮಳೆಯನ್ನೇ ತದೇಕಚಿತ್ತದಿಂದ ಆಲಿಸುತ್ತಿದ್ದರೆ ಅನಿರ್ವಚನೀಯ ಆನಂದ, ಪುಳಕ, ಅರಿವಿಗೆ ಬಾರದ ಅನುಭೂತಿ... ಜೊತೆಗೆ ಗಝಲ್ ಎಬ್ಬಿಸುತ್ತಿರುವ ಸಿಹಿ-ಕಹಿ ನೆನಪುಗಳು.

ಅಂದೂ ಮಳೆ ಹೀಗೇ ದಿಕ್ಕು ದೆಸೆಯಿಲ್ಲದೇ ಹೊಯ್ಯುತ್ತಿತ್ತು.  ಬಿ.ಎಸ್ಸಿ. ಮೊದಲ ವರ್ಷದ ಪ್ರಥಮ ತರಗತಿಗೆಂದು ಒಳ ಹೊಕ್ಕವಳನ್ನು ಕಂಡ ತಕ್ಷಣ ಸೆಳೆದವಳು ಚಾರುಕೇಶಿ. ಮೂರನೆಯ ಬೆಂಚಿನ ಎಡ ತುದಿಯಲ್ಲಿ ಕುಳಿತು, ಗಲ್ಲಕ್ಕೆ ಎಡಗೈಯನಿಟ್ಟು, ಬಲಗೈಯಲ್ಲಿ ಮೆಲ್ಲಗೆ ತಾಳ ಹಾಕುತ್ತಾ.... ತನ್ನೊಳಗೇ ಏನೋ ಗುನಗುನಿಸುತ್ತಾ, ನಸುನಗುತ್ತಿದ್ದವಳ ಕಣ್ಣೊಳಡಗಿದ್ದ ವಿಚಿತ್ರ ಕಾಂತಿ ನನ್ನ ಅವಳೆಡೆಗೇ ಸಾಗುವಂತೆ ಮಾಡಿತ್ತು. ಬಳಿ ಸಾರುತ್ತಿದ್ದ ನನ್ನ ಗಮನಿಸಿದವಳೇ ಮುಗುಳ್ನಕ್ಕು, ತಾಳ ಹಾಕುತ್ತಲೇ ಕೊಂಚ ಸರಿದು ಕುಳಿತುಕೊಳ್ಳಲು ಕಣ್ಣಲ್ಲೇ ಆಹ್ವಾನಿಸಿದ್ದ ಅವಳ ಆ ಪರಿ ಈಗಲೂ ಪಚ್ಚೆ ಹಸಿರು.

"ಹಾಯ್.. ನನ್ನ ಹೆಸರು ಚಾರುಕೇಶಿ... ನೀನು ಕನ್‌ಫ್ಯೂಸ್ ಆಗಿ ಮತ್ತೆ ನನ್ನ ಕೇಳೋ ಮೊದ್ಲೇ ಹೇಳಿಬಿಡ್ತೀನಿ... ಇದು ಒಂದು ರಾಗದ ಹೆಸರು... ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ದುಃಖದೊಳಗೆ ಭಕ್ತಿಯನ್ನು ಬೆರೆಸಿ ಹಾಡೋ ರಾಗ... ಭಕ್ತ ದೇವ್ರನ್ನ ನನ್ನ ಈ ಬವಣೆಯಿಂದ ಮುಕ್ತಿ ಕೊಡೋ ತಂದೇ ಎಂದು ಮೊರೆಯಿಡೋ ರಾಗ.... ಇವತ್ತಿಂದ ನೀನೂ ಹಾಡ್ಕೊ ನನ್ಜೊತೆ... ಈ ತರ್ಲೆ ಹುಡ್ಗಿಯಿಂದ ಮುಕ್ತಿಕೊಡಪ್ಪಾಂತ ಬೇಡ್ಕೊಂಡ್ರೆ ಮೂರುವರ್ಷದ ಮೇಲಾದ್ರೂ ಬಿಡುಗಡೆ ಸಿಗಬಹುದು.." ಎಂದು ಕಿಲಕಿಲ ನಕ್ಕವಳ ಮಾತಿಗೆ ಮನಸಾರೆ ನಕ್ಕಿದ್ದೆ. ಒಳಗೆಲ್ಲೋ ಸ್ನೇಹ ಮೊಳಕೆಯೊಡೆದಿತ್ತು.

"ಶಾಲ್ಮಲಿ... ನಂಗೆ ಸಂಗೀತ ಅಂದ್ರೆ ಹುಚ್ಚು ಕಣೆ.. ನಮ್ಮೂರಲ್ಲಿ ಅಷ್ಟು ಚೆನ್ನಾಗಿ ಹೇಳಿಕೊಡೋರು ಯಾರೂ ಇಲ್ವೆ... ಹಾಗಾಗಿ ಅಕ್ಕನ ಮನೇಲಿ ಇದ್ಕೊಂಡು ಇಷ್ಟು ವರ್ಷ ಸ್ವಲ್ಪ ಕಲಿತೆ. ಈಗ ನಮ್ಮಕ್ಕ, ಭಾವ ಡೆಲ್ಲಿಗೆ ಹೋದ್ರು.. ಸೋ ನಾನು ನಮ್ಮೂರಿಗೆ ವಾಪಸ್ಸಾಗೋದು ಅಂತಿದ್ದೆ. ಆದರೆ ನನ್ನ ಸಪ್ಪೆ ಮುಖ ನೋಡಿ ಅಪ್ಪ ಅಂತೂ ಇಂತೂ ಒಪ್ಪಿ ಇಲ್ಲಿಗೆ ಕಳ್ಸಿದ್ದಾನೆ. ‘ಮಂಗಳೂರಲ್ಲಿ ಸರಸ್ವತಿ ಶೆಣೈ ಅನ್ನೋರಿದ್ದಾರೆ... ಅವ್ರು ತುಂಬಾ ಒಳ್ಳೇ ಸಂಗೀತ ಕಲಿಸಿ ಕೊಡ್ತಾರೆ.... ನಿಮ್ಮ ಮಗ್ಳು ಅವ್ರಲ್ಲೇ ಮುಂದುವರಿಸ್ಲಿ.. ನಾನು ಹೇಳಿರ್ತೀನಿ ಅವ್ರಿಗೆ’ ಅಂತ ಪಕ್ಕದ ಮನೆ ಪದ್ಮಾ ಆಂಟಿ ಹೇಳಿದ್ದಾ ತಡ ಓದೋ ನೆಪ ಮಾಡ್ಕೊಂಡು ಇಲ್ಲಿಗೆ ಹಾಜಾರ್ ನೋಡು... ಸರಸ್ವತಿ ಮೇಡಮ್ ಅವ್ರ ಮನೆ ಪಕ್ಕನೇ ಪಿ.ಜಿ. ಸಿಕ್ಕಿದೆ. ಲಕ್ಕಿ ಅಲ್ವಾ ನಾನು? ಮುಂದಿನ ವಾರದಿಂದ ಕ್ಲಾಸ್ ಶುರು.." ಎಂದೆಲ್ಲಾ ಬಡಬಡಿಸುತ್ತಿದ್ದವಳ ಸಂಗೀತ ಪ್ರೇಮ ಕಂಡು ಮೆಚ್ಚುಗೆಯಾಗಿತ್ತು. ಪಾಠ, ಆಟ ಎಲ್ಲವೂ ನಾದಮಯವೇ. ಡಿಸೆಕ್ಟ್ ಮಾಡುವಾಗ, ಆ ಕ್ಲೋರೋಫಾರ್ಂ ವಾಸನೆ ಕುಡಿಯುತ್ತಲೂ ಒಳಗೊಳಗೇ ಹಾಡಿಕೊಳ್ಳುವ ಅವಳ ತನ್ಮಯತೆಗೆ ಬೆರಗಾಗಿ ಹೋಗಿದ್ದೆ. ಅವಳು ಹುಟ್ಟಿದ್ದೇ ಸಂಗೀತಕ್ಕಾಗೇನೋ ಎಂದೆನಿಸುತ್ತಿತ್ತು.

"ಚಾರು... ನಿಂಗೆ ನಿನ್ನ ಹೆಸರನ್ನು ಮೊದಲ ಸಲ ಕೇಳಿದಾಗ ಏನು ಅನಿಸ್ಲಿಲ್ವಾ? ಅಲ್ಲಾ.. ಸ್ವಲ್ಪ ಡಿಫೆರೆಂಟ್ ಆಗಿದ್ಯಲ್ಲಾ.. ಸೋ..." ಒಮ್ಮೆ ಹೀಗೇ ಕುತುಹೂಲ ತೋರಿದ್ದೆ. "ಅಯ್ಯೋ ಇಲ್ವೇ... ನಂಗೆ ಬುದ್ಧಿ ಬರುವಾಗ್ಲೇ ಅಪ್ಪಾ ಸಂಗೀತಾಭ್ಯಾಸ ಶುರು ಮಾಡಿದ್ರು.... ‘ನಿನ್ನ ಹೆಸ್ರೂ ಒಂದು ರಾಗ ಕಾಣಮ್ಮಾ..... ನಮ್ಮ ದುಃಖ ದುಮ್ಮಾನಗಳಿಂದ ಮುಕ್ತಿಕೊಡಲು ಭಕ್ತಿಯಿಂದ ಅವನನ್ನು ಕೇಳಿಕೊಳ್ಳೋವಾಗ ಹಾಡುಕೊಳ್ಳೋ ರಾಗ..’ ಎಂದೆಲ್ಲಾ ಅಪ್ಪಾ ಹೇಳ್ತಾ ಇರ್ತಿದ್ರು. ಅದೂ ಅಲ್ದೇ ಇನ್ನೂ ಒಂದು ಇಂಟರೆಸ್ಟಿಂಗ್ ಕಥೆ ಇದೆ ಈ ಹೆಸ್ರ ಹಿಂದೆ.. ನನ್ನಮ್ಮ ಒಳಗಡೆ ಹೆರಿಗೆನೋವಲ್ಲಿ ಒದ್ದಾಡ್ತಿರೋವಾಗ, ನನ್ನಪ್ಪನ ತಲೆಯೊಳಗೆ ಇದೇ ರಾಗದಲ್ಲಿದ್ದ ಹಾಡೊಂದು ಯಾಕೋ ಪದೇ ಪದೇ ನೆನಪಾಗ್ತಾ ಇತ್ತಂತೆ... ಹಾಗಾಗಿ ಹುಟ್ಟಿದಾಕ್ಷಣ ಚಾರುಕೇಶಿ ಅಂತಾನೇ ಇಟ್ಬಿಟ್ರು..." ಎಂದಿದ್ದಳು ಹೆಮ್ಮೆಯ ನಗು ಬೀರಿ.

"ಸಾಕು ಸುಮ್ನೀರೇ ಮಾರಾಯ್ತಿ.. ಯಾವಾಗ ನೋಡಿದ್ರು.. ಆ ಸ್ವರ, ಈ ರಾಗ... ಅಂತ ಕೊರೆಯೋದು... ಅದ್ಯಾವ ಮುಹೂರ್ತದಲ್ಲಿ ನಿಂಗೆ ಈ ಹೆಸ್ರು ಇಟ್ರೋ... ಏನಾದ್ರೂ ಹಾಡಿಕೊಳ್ತಾನೇ ಇರ್ತೀಯಾ.... ಈ ಸುಖಕ್ಕೆ ನಾನು ನಿನ್ಜೊತೆ ಯಾಕೆ ಕಾಲಹರಣ ಮಾಡ್ಲಿ?" ಎಂದೊಮ್ಮೆ ಸಿಡುಕಿದ್ದಕ್ಕೆ... "ಚಂದ್ರೋದಯದ ಮುಹೂರ್ತ ನೋಡು... ರಾತ್ರಿ ಹಾಡಿಕೊಳ್ಳೋ ರಾಗಾನೇ ನಾನು.. ಅಂದರೆ ಚಾರುಕೇಶಿ. ಅಲ್ವೇ.. ಸುಮ್ಮನೇ ಯಾಕೆ ಕೂರೋದು? ಖಾಲಿ ಮನಸ್ಸು ಸೈತಾನನ ಆಗರ ಗೊತ್ತಾ? ಹಾಗಾಗಿ ಸೈತಾನನ ಓಡಿಸ್ಲಿಕ್ಕೇ ಸಂತ ತುಕಾರಾಮನ ಈ ಹಾಡನ್ನು ಕೇಳು.. .‘ಭೆಟಿಲಾಗಿ  ಜೀವ  ಲಾಗಲೀಸೆ ಆಸ್..’" ಎಂದು ತುಕಾರಾಮರ ಮರಾಠಿ ಅಭಂಗ್‌ಅನ್ನು ಸುಶ್ರಾವ್ಯವಾಗಿ ಹಾಡತೊಡಗಿದಾಗ ನಾನೂ ಮೈಮರೆತಿದ್ದೆ.
ಎರಡು ವರುಷಗಳು ಅದು ಹೇಗೆ ಕಳೆದವೋ ತಿಳಿಯಲೇ ಇಲ್ಲಾ! ಸಂಗೀತವೆಂದರೆ ಅಷ್ಟಕಷ್ಟೇ ಅಂತಿದ್ದ ನನ್ನೊಳಗೂ ಅದರ ಮೇಲೆ ಆಸಕ್ತಿ ಕೆರಳಿಸಿದ್ದಲ್ಲದೇ, ಪ್ರೀತಿಯನ್ನೂ ಹುಟ್ಟು ಹಾಕಿದ್ದಳು ಚಾರು. ಸಹವಾಸ ದೋಷವೋ ಎಂತೋ.. ನಾನೂ ಈಗ ಹಾಡುಗಳಲ್ಲಿರುವ ರಾಗವನ್ನು ಗುರುತಿಸತೊಡಗಿದ್ದೆ. 

"ಇನ್ನೊಂದೇ ವರುಷ ಶಾಲಿ.. ಆಮೇಲೆ ನಾನು ಸಂಗೀತದಲ್ಲೇ ಹೈಯರ್ ಸ್ಟಡೀಸ್ ಮಾಡೋಕೆ ಹೋಗ್ಬೇಕು ಅಂತಿದ್ದೀನಿ.. ಈ ಡೆಸೆಕ್ಷನ್ ಕಂಡ್ರೆ ಆಗೊಲ್ಲಾ.. ಬಾಟನಿ ಇದೆ ಅಂತಾ ಈ ಕಾಂಬಿನೇಷನ್ ತಗೊಂಡೆ.. ಗೊತ್ತಲ್ಲಾ ನಮ್ಮ ಬೋಸ್ ಸಾಹೇಬ್ರು ಹೇಳಿದ್ದಾರೆ ಸಂಗೀತಕ್ಕೂ, ಸಸ್ಯಕ್ಕೂ ತುಂಬಾ ನಂಟಿದೆ ಅಂತಾ...." ಎಂದವಳ ಮಾತಿಗೆ ನಗುವುಕ್ಕಿದ್ದರೂ, ಮನಸ್ಸು ಬಾಡಿತ್ತು. ಸಂಗೀತಕ್ಕೂ ವಿಜ್ಞಾನಕ್ಕೂ ಇರುವ ಯಾವುದೋ ಒಂದು ವಿಶಿಷ್ಟ ಲಿಂಕ್ ಇವಳಲ್ಲಿ ಕಂಡುಕೊಂಡಿದ್ದೆ..... ನಾನು ಅರಿಯದಂತೇ ನನ್ನೊಳಗೆ ಆಳವಾಗಿ ಬೇರೂರಿದವಳ ಅಗಲಿಕೆಯ ಕಲ್ಪನೆಯಿಂದಲೇ ಮನಸ್ಸು ಆರ್ದ್ರವಾಗಿತ್ತು. ಆದರೆ ನಿಯತಿ ಹಾಡುವ ರಾಗಕ್ಕೆ ಶ್ರುತಿಯಿರಲೇಬೇಕೆಂದ ನಿಯಮವಿಲ್ಲ ಎನ್ನುವ ಕಹಿ ಸತ್ಯವನ್ನು ಮರೆತಿದ್ದೆ.

"ಡಿಯರ್ ಸ್ಟುಡೆಂಟ್ಸ್... ನಿಮ್ಮ ಮೆಚ್ಚಿನ ಸಹಪಾಠಿ.. ಉತ್ತಮ ಸಂಗೀತಗಾರ್ತಿ ಚಾರುಕೇಶಿ ಇಂದು ಬೆಳಗ್ಗೆ ದೊಡ್ಡ ಅಪಘಾತಕ್ಕೆ ಗುರಿಯಾಗಿ, ಕೆ.ಎಂ.ಸಿಯಲ್ಲಿ ಅಡ್ಮಿಟ್ ಆಗಿದ್ದಾಳೆ. ಚಲಿಸುತ್ತಿದ್ದ ಬಸ್‌ನಿಂದ ಆಯತಪ್ಪಿ ಬಿದ್ದು ಬಿಟ್ಟಳಂತೆ.... ಬಹುಶಃ ತುದಿಯಲ್ಲಿ ನಿಂತಿದ್ದಳೇನೋ... ತಲೆಯ ಹಿಂಭಾಗಕ್ಕೆ ತುಂಬಾ ಪೆಟ್ಟಾಗಿದೆಯಂತೆ.... ಕ್ರಿಟಿಕಲ್ ಕಂಡೀಷನ್ ಅಂದಿದ್ದಾರೆ ಡಾಕ್ಟರ್ಸ್.. ಪ್ಲೀಸ್ ಪ್ರೇ ಫಾರ್ ಹರ್.. ನಾನೀಗ ಅಲ್ಲಿಗೇ ಹೊರಟಿದ್ದೇನೆ..." ಎಂದು ಪ್ರಿನ್ಸಿಪಾಲರು ಎರಡನೇ ತರಗತಿಯ ನಡುವೆ ಬಂದು ಅನೌನ್ಸ್ ಮಾಡಿದಾಗಲೇ ನನಗೂ ವಿಷಯ ತಿಳಿದಿದ್ದು!

"ನಾಳೆ ನಾನು ಬರೋದು ಡೌಟು ಶಾಲಿ... ಸಂಗೀತ ಟೀಚರ್ ಜೊತೆ ಒಂದು ಫಂಕ್ಷನ್‌ಗೆ ಹೋಗ್ಬೇಕು.. ಅಲ್ಲಿ ಹೊಸ ಹಾಡನ್ನು ಹಾಡ್ತಿದ್ದಾರಂತೆ ಇವತ್ತು... ಹೇಗಿದ್ರೂ ಇಂಪಾರ್ಟೆಂಟ್ ಕ್ಲಾಸ್‌ಗಳಿಲ್ಲ... ಸೋ.. ಬಂಕ್ ಮಾಡ್ತೀನಿ ನಾನು.." ಎಂದು ಹಿಂದಿನ ದಿನವೇ ಹೇಳಿದ್ದರಿಂದ ಇಂದು ಗೈರುಹಾಜರಿಯಾದವಳ ಬಗ್ಗೆ ಆಷ್ಟೊಂದು ಯೋಚಿಸಿರಲೇ ಇಲ್ಲ. ಅಚಾನಕ್ಕಾಗಿ ಬಂದಪ್ಪಳಿಸಿದ ಅವಳ ಅಪಘಾತದ ಸುದ್ದಿ ನನ್ನನ್ನು ಸಂಫೂರ್ಣ ನಿಷ್ಕ್ರೀಯಗೊಳಿಸಿಬಿಟ್ಟಿತ್ತು. ತಾಸೊಳಗೇ ಸಹಪಾಠಿಗಳೆಲ್ಲಾ ಅವಳಿದ್ದ ಆಸ್ಪತ್ರೆಯೆಡೆ ಹೊರಟಿದ್ದರೆ, ನಾನು ಮನೆಯ ದಾರಿ ಹಿಡಿದಿದ್ದೆ. ಯಾಕೋ ವಾಸ್ತವಿಕತೆಯನ್ನೇ ಸುಳ್ಳೆನ್ನುತ್ತಿತ್ತು ನನ್ನ ಮನಸ್ಸು. 

~~~~
ಚಾರುಕೇಶಿ ಅನಂತದಲ್ಲಿ ಲೀನವಾಗಿ ವಾರಗಳು ಕಳೆದಿದ್ದರೂ, ಹೆಪ್ಪುಗಟ್ಟಿದ ಭಾವ ಹರಿದಿರಲೇ ಇಲ್ಲಾ. ಹುಚ್ಚು ಮೇಲೇರಿದಂತೇ ಅಭ್ಯಾಸದಲ್ಲಿ ಮುಳುಗಿ ಹೋಗಿದ್ದೆ. ಅವಳಿದ್ದಳು, ಈಗಿಲ್ಲಾ ಅನ್ನೋ ವಸ್ತುಸ್ಥಿತಿಯನ್ನೇ ಎಲ್ಲೋ ಮೂಲೆಗೆ ತಳ್ಳಿಬಿಟ್ಟಿದ್ದೆ.  ಆದರೆ ಅಂತಹ ಸ್ಥಿತಿಯಲ್ಲೂ ನನ್ನೊಳಗೆ ಅವಳಿಷ್ಟದ "ಅಲಬೇಲಾ ಸಜನ್ ಆಯೋರೆ..." ಹಾಡು ಸಂಚರಿಸುತ್ತಲೇ ಇದ್ದಿದ್ದು ಇಂದಿಗೂ ನನಗೆ ಸೋಜಿಗ! ಅವಳ ಪ್ರೇತವೇನಾದರೂ ನನ್ನೊಳಗೆ ಸೇರಿರಬಹುದೇ? "ಮಲಯ ಮಾರುತದ" ಚಲನಚಿತ್ರದಲ್ಲೂ ಹೀಗೇ...... ನಾಯಕ ತನ್ನ ಸಂಗೀತ ಗುರುಗಳ ಗೋರಿಯ ಬಳಿ ಕುಳಿತು ದುಃಖಿಸುವಾಗ ಗುರುವಿನ ಆತ್ಮ ಇವನೊಳಗೆ ಸೇರಿ ಅವನೊಬ್ಬ ದೊಡ್ಡ ಸಂಗೀತಗಾರನಾಗುತ್ತಾನೆ... ಹಾಗೇ ಇವಳು ನನ್ನ ಮೂಲಕ ತನ್ನ ಸಂಗೀತ ತೃಷೆ ತೀರಿಸಿಕೊಳ್ಳಲು ಬಂದಿರಬಾರದೇಕೆ? ಎಂಬೆಲ್ಲಾ ಕ್ಷುದ್ರ ಯೋಚನೆಗಳಿಂದ ಕೆಂಗೆಟ್ಟು ಹೋಗಿದ್ದೆ. ಮನೆಯವರೆಲ್ಲಾ ನನ್ನ ಸಮಾಧಾನಕ್ಕೆ ಸಾಕಷ್ಟು ಯತ್ನಿಸಿದರೂ ದುಃಖ ಕಣ್ಣೀರಾಗಿ ಹರಿಯಲೇ ಇಲ್ಲಾ. ಒಳಗೇ ಗಟ್ಟಿಯಾಗಿ ಕುಂತು, ಆಗೀಗ ಸಂಗೀತ ನಾದವನ್ನು ಹೊರಡಿಸುತ್ತಲೇ ಇತ್ತು! ಈ ಕಟ್ಟೆ ಒಡೆದು, ನೋವು ನೀರಾಗಿ ಹರಿಯಲು ಬರೋಬ್ಬರಿ ಒಂದು ವರುಷ ತಗುಲಿದ್ದವು. ಅದೂ ಅವಳೇ ನನ್ನ ಯಾತನೆಯ ಮುಕ್ತಿಗೆ ಕಾರಣೀಭೂತಳಾಗಿದ್ದು ಮತ್ತೊಂದು ವಿಸ್ಮಯ.

ಮಗಳ ಸಾವಿನಿಂದ ಕೆಂಗೆಟ್ಟಿದ್ದರೂ ಅವಳಪ್ಪ, ಚಾರುಕೇಶಿಯ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡಿದ್ದಲ್ಲದೇ, ಪ್ರತಿ ವರುಷ ಸಂಗೀತದ ನಂತರ ಅವಳು ಬಲು ಇಷ್ಟಪಡುತ್ತಿದ್ದ "ಬಾಟನಿ" ವಿಷಯದಲ್ಲಿ ಯಾರು ಹೆಚ್ಚು ಅಂಕ ಗಳಿಸುವರೋ ಅವರಿಗೆ ಐದು ಸಾವಿರವನ್ನು ಬಹುಮಾನವಾಗಿ ಕೊಡಬೇಕೆಂದು ವಿನಂತಿಸಿಕೊಂಡಿದ್ದರು. ಅಂತೆಯೇ ಆ ವರುಷ ಬಾಟನಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ ನನಗೇ ಪ್ರಿನ್ಸಿಪಾಲರು "ಇದು ಚಾರುಕೇಶಿಯ ಸವಿನೆನಪಲ್ಲಿ ಅವಳ ತಂದೆವರು ಕೊಡುತ್ತಿರುವ ಬಹುಮಾನ.." ಎನ್ನುತ್ತಾ ಚೆಕ್‌ಅನ್ನು ನನಗೆ ಕೊಡುವಾಗಲೇ ಹರಿಯತೊಡಗಿದ್ದು ಮಡಗಟ್ಟಿದ್ದ ಯಾತನೆ!  ಅಂದಿನಿಂದ ಇಂದಿನವರೆಗೂ ಆ ಹಣ ಹಾಗೇ ಭದ್ರವಾಗಿದೆ ಬೀರುವಿನಲ್ಲಿ.... ನನ್ನೊಳಗೆ ಬಂಧಿಯಾಗಿರುವ ಅವಳ ಮಧುರ ಸ್ನೇಹದಂತೇ.

ಇಂದೆಕೋ ಚಾರು ನನ್ನ ಬಹುವಾಗಿ ಕಾಡುತ್ತಿದ್ದಾಳೆ. ಕಣ್ಮುಂದೆ ಮಲ್ಹಾರ ರಾಗ ನುಡಿಸುತ್ತಿರುವ ಮಳೆಯರಾಯನಿಂದಾಗಿರಬೇಕು. ಇಳೆಯೊಳಗೆಬ್ಬಿಸುತ್ತಿದ್ದ ನೀರಲೆಗಳ ಜೊತೆಯಲ್ಲೇ, ಹೂತ ನೂರಾರು ನೆನಪಿನ ತರಂಗಗಳನ್ನೂ ಎಬ್ಬಿಸುತ್ತಿದ್ದಾನೆ. ಆದರೆ ಅಂದಿನ ಯಾತನೆಯ ಉರಿಯಿಲ್ಲ ಎದೆಯೊಳಗೆ.... ತನ್ನ ಹೆಸರಿಗೆ ಅನ್ವರ್ಥವಾಗಿ ನನ್ನೊಳಗಿನ ದುಃಖಕ್ಕೆ ಬಿಡುಗಡೆ ನೀಡಿದ್ದಾಳೆ ಚಾರುಕೇಶಿ.

[*ವಿಜಯ ನೆಕ್ಸ್ಟ್ ಪೇಪರಿನಲ್ಲಿ ಪ್ರಕಟಿತ.]

-ತೇಜಸ್ವಿನಿ ಹೆಗಡೆ.

2 ಕಾಮೆಂಟ್‌ಗಳು:

sunaath ಹೇಳಿದರು...

ಕಥೆಯೇ ಒಂದು ರಾಗವಾಗಿ ಮೂಡಿದಂತೆ ಭಾಸವಾಗುತ್ತಿದೆ. In fact ಇದು ಕಥೆ ಅಂತ ಅನ್ನಿಸೋದೇ ಇಲ್ಲ.

ವಾಣಿಶ್ರೀ ಭಟ್ ಹೇಳಿದರು...

endinante sooper kathe... mana muttuva haage baradde tejakka :)