ಇಂದು ಭಾರತ ೬೩ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ನಿಜ ಹೇಳಬೇಕೆಂದರೆ ವರ್ಷದಿಂದ ವರ್ಷಕ್ಕೆ ಇದರ ಮಹತ್ವವೇ ಈಗ ಕಳೆಗುಂದುತಿದೆ. ನಮ್ಮಲ್ಲಿ ಆಪ್ತರು, ಆತ್ಮೀಯರು, ಸಂಬಂಧಿಗಳು ತೀರಿಹೋದಾಗ, ಮೊದಲ ಒಂದು ವರುಷ ತಿಂಗಳಿಗೊಮ್ಮೆ ತರ್ಪಣ ಕೊಡುತ್ತೇವೆ.....ಆಮೇಲೆ ವರ್ಷಾಂತಿಕವೆಂದು ಮಾಡಿ ಎಲ್ಲರೂ ಅವರ ಆತ್ಮ ಶಾಂತಿಗೋಸ್ಕರ ಪ್ರಾರ್ಥಿಸುತ್ತೇವೆ. ಇದೇ ರೀತಿಯಾಗಿಬಿಟ್ಟಿದೆ ಸ್ವಾತಂತ್ರೋತ್ಸವ ಇಂದು!! ಮಗು ಹುಟ್ಟಿದಾಗ, ಅದರ ಮೊದಲ ಜನ್ಮದಿನಾಚರಣೆಯ ಹಬ್ಬವನ್ನಾಚರಿಸಿ, ತದನಂತರವೇನೂ ನಾವು ಆ ದಿನದ ಸವಿ ನೆನಪನ್ನು ಮರೆಯೊಲ್ಲ ತಾನೇ? ಅದು ದೊಡ್ಡದಾಗಿ ಏನೇ ಆಗಿರಲಿ... ಒಳಿತನ್ನೇ ಮಾಡಲಿ, ನೋವನ್ನೇ ನೀಡಲಿ.... ಹೆತ್ತವರು ಮಾತ್ರ ತಮ್ಮ ಮಗುವಿನ ಜನ್ಮದಿನವನ್ನೆಂದೂ ಮರೆಯರು. ಆ ದಿನದ ಮಹತ್ವ ಅವರಿಗೆಂದೂ ನಿತ್ಯನೂತನವೇ ಸರಿ. ಹೀಗಿರುವಾಗ ದಾಸ್ಯದಿಂದ ಮುಕ್ತಿಸಿಕ್ಕಿ, ನಮ್ಮ ಬದುಕಿಗೆ, ವಿಚಾರಕ್ಕೆ, ಆಚಾರಕ್ಕೆ, ವ್ಯವಹಾರಕ್ಕೆ ಸ್ವಾತಂತ್ರ್ಯ ಸಿಕ್ಕ ಈ ದಿನ.. ಮಗುವಿನ ಜನ್ಮದಿನದ ಸಂಭ್ರಮವನ್ನು ಪಡೆಯುವ ಬದಲು, ತೀರಿಹೋದವರ ನೆನಪನ್ನು ಕ್ರಮೇಣ ಮಸುಕಾಗಿಸುವಂತಹ ದಿನವಾಗಿ ಬದಲಾಗಿರುವುದು... ಬದಲಾಗುತ್ತಿರುವುದು ಅತ್ಯಂತ ಖೇದಕರ! ತಮ್ಮ ತಮ್ಮ ಸ್ವಾರ್ಥಕ್ಕಾಗಿ, ಲಾಲಸೆಗಾಗಿ, ಅಧಿಕಾರಕ್ಕಾಗಿ ಮಾತ್ರ ಈ ದಿನದ ನೆನಪನ್ನು, ಇದಕ್ಕಾಗಿ ಹೋರಾಡಿ ಹುತಾತ್ಮರಾದವರ ಹೆಸರನ್ನು ಅಲ್ಲಲ್ಲಿ, ಅಪರೂಪಕ್ಕೆ ಸ್ಮರಿಸುವ ಸಮಾಜ/ರಾಜರಾಣಿಗಳು ಅಂದಿನವರ ಬಲಿದಾನದ ಮಹತ್ವವನ್ನೇ ಮರೆಯುತ್ತಾರೆ...ಅಕ್ಷರಶಃ ಮರೆತಿದ್ದಾರೆ! :( ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶ್ರೀಸಾಮಾನ್ಯನೂ ಕಡಿಮೆಯಾಗುತ್ತಿದ್ದಾನೆ. ಆ ಮನಃಸ್ಥಿತಿಯೂ ಕಡಿಮೆಯಾಗುತ್ತಿದೆ.
ದೇಶ ನಮಗೇನು ಕೊಟ್ಟಿದೆ? ಸ್ವಾತಂತ್ರ್ಯ ಪೂರ್ವದ ಭಾರತವೇ ಚೆನ್ನಾಗಿತ್ತು... ಅಂದಿಗೂ ಇಂದಿಗೂ ಏನೊಂದೂ ವ್ಯತ್ಯಸವಾಗಿಲ್ಲ... ಎಂದೆಲ್ಲಾ ಬೊಬ್ಬಿರಿವವರು ಕೇವಲ ತಮ್ಮ ವೈಯಕ್ತಿಕ ನೆಲೆಯಲ್ಲಷ್ಟೇ ಯೋಚಿಸುತ್ತಾರೆ.... ತಮಗಾದ, ತಮ್ಮವರಿಗಾದ, ತಮ್ಮ ಸಮುದಾಯಕ್ಕಾದ, ತಮ್ಮ ಜಾತಿಗಾದ ಕೆಲವೊಂದು ಅನ್ಯಾಯವನ್ನು ಮಾತ್ರ ಮೇಲೆರಿಸಿಕೊಂಡು ತೀರಾ ಸಂಕುಚಿತ ಮನೋಭಾವವನ್ನು ಹೊಂದಿ, ಇಂದಿನ ದಿನವನ್ನೇ ಧಿಕ್ಕರಿಸುವಂತವರ ಅನಾರೋಗ್ಯಕರ ಮನಃಸ್ಥಿತಿಗೆ ನನ್ನ ಸಂಪೂರ್ಣ ಅನುಕಂಪವಿದೆ. ಅಂತಹವರಿಗೆ ದಾಸ್ಯತನದಲ್ಲೇ ದಿನಗಳೆಯಬೇಕಾಗಿದ್ದ ಅಂದಿನ ಜೀವನದ ಅರಿವನ್ನು ಆ ಭಗಂವತ ನೀಡದಿರುವುದೇ ಅವರ ಇಂದಿನ ಈ ಅನಾರೋಗ್ಯಕರ ಮನಃಸ್ಥಿತಿಗೆ ಕಾರಣ ಎಂದೆನ್ನಿಸುತ್ತದೆ ನನಗೆ! ತನ್ನ ದೇಶವನ್ನು, ಸ್ವಂತ ನೆಲವನ್ನು, ಅದರ ಮೇಲಿನ ಅಭಿಮಾನವನ್ನು ಅಲ್ಲಗಳೆಯುವ, ದೇಶಾಭಿಮಾನವನ್ನು ಧಿಕ್ಕರಿಸುವ ಸ್ವಾತಂತ್ರ್ಯ ಸಿಕ್ಕಿರುವುದು ಸ್ವತಂತ್ರ ಭಾರತದಲ್ಲೇ.... ಹುಟ್ಟಿದ ನೆಲದ ಬಗ್ಗೇ ಸದಾ ಅಸಮಾಧನ ತೋರುತ್ತಾ, ವ್ಯಂಗ್ಯವಾಡುತ್ತಾ, ಕ್ರಾಂತಿಯ ನೆಪದಲ್ಲಿ ದೇಶವನ್ನೇ ಇಬ್ಭಾಗಿಸಿ ರಕ್ತದೋಕುಳಿ ಚೆಲ್ಲುವ ಮನೋಭಾವ ಹುಟ್ಟಲು, ಬೆಳೆಯಲು ಸಾಧ್ಯವಾಗಿದ್ದೂ ಇದೇ ಸ್ವತಂತ್ರ ಭಾರತದಲ್ಲೇ! ಇಂತಹ ಸಮಾಜಘಾತುಕ ಜನರನ್ನು, ಅವರ ಅಹಿತಕರ ಚಿಂತನೆಗಳನ್ನು ಬೇರು ಸಮೇತ ಕಿತ್ತೊಗೆಯಲು ನಿಜವಾಗಿಯೂ ಇಂಗ್ಲೀಷರ ಹತ್ತಿರ ಮಾತ್ರ ಸಾಧ್ಯವಿತ್ತೇನೋ...... ಇಂದಿನ ಭಾರತದ ದುರ್ಬಲ ಮನಃಸ್ಥಿತಿಯವರಿಂದ ದೇಶದ್ರೋಹಿ ಮನಃಸ್ಥಿತಿಯುಳ್ಳವರನ್ನು ಸರಿ ಮಾಡಲು ಸಾಧ್ಯವಾಗದೇನೋ! ಹಾಗೆ ನೋಡಿದರೆ ಇಂದಿನ ಸಮಾಜದಲ್ಲಿ ಅಂತಹವರಿಗೇ ಮನ್ನಣೆ ಜಾಸ್ತಿ!
ಭಗಸತ್ಸಿಂಗ್, ಸುಖದೇವ್, ಲಾಲ್ ಬಹದ್ದೂರ್ ಶಾಸ್ತ್ರಿ, ಸಾವರ್ಕರ್, ಗಾಂಧಿಜೀ- ಮುಂತಾದವರ, ಬಿಡುಗಡೆಗಾಗಿ ಹೋರಾಡಿದ ಹಳ್ಳಿ ಹಳ್ಳಿಯ, ಮೂಲೆ ಮೂಲೆಯ ಶ್ರೀಸಾಮಾನ್ಯನ - ಇವರೆಲ್ಲರ ನಿಃಸ್ವಾರ್ಥ ದೇಶಸೇವೆ, ದೇಶಪ್ರೇಮದಿಂದಾಗಿಯೇ ಇಂದು ನಾವೆಲ್ಲಾ ಸ್ವತಂತ್ರವಾಗಿ ಯೋಚಿಸಲು, ಅಂತೆಯೇ ಬದುಕಲು ಸಾಧ್ಯವಾಗಿರುವುದು ಎನ್ನುವ ಸಾಮಾನ್ಯ ಅರಿವೂ ಮಾಯವಾಗುತ್ತಿರುವುದು ನಿಜಕ್ಕೂ ದುಃಖಕರ. ಮುಂದೊಂದು ದಿನ ಈ ದಿನವೇ ಜನಮಾನಸದಿಂದ ಮರೆಯುವಂತಾದರೂ ಆಶ್ವರ್ಯಪಡಬೇಕಿಲ್ಲ. ಪಟ್ಟ ಭದ್ರ ಹಿತಾಸಕ್ತಿಗಳು, ಸಮಾಜ ಘಾತುಕ ಕ್ರಾಂತಿಕಾರಿಗಳಿಂದ ಮತ್ತೆ ನಾವು ದಾಸ್ಯತನದೆಡೆ (ನಮ್ಮ ಸಂಕುಚಿತತೆ, ಸ್ವಾರ್ಥ ಬುದ್ಧಿಯೊಳಗೇ ನಾವು ಬಂಧಿಯಾಗಿ...) ಮುನ್ನಡೆಯುವ ಕಾಲ ದೂರವಿಲ್ಲವೇನೋ ಎಂದೆನಿಸುತ್ತದೆ!
ಭಾರತವೆಂದರೆ ಏನು? ಭಾರತೀಯ ಸಂಸ್ಕೃತಿ, ಪ್ರಂಪರೆ ಎಂದರೆ ಏನೆಂದು ಅಂದೇ ಇಡೀ ಜಗತ್ತಿಗೇ ತೋರಿಕೊಟ್ಟವರು "ಸ್ವಾಮಿ ವಿವೇಕಾನಂದರು". ಅಂತಹವರ ಸದ್ವಿಚಾರಗಳು, ಚಿಂತನೆಗಳು ಇಂದಿನವರಿಗೆ ಮಾರ್ಗದರ್ಶಿಯಾಗಲು ಸಂಪೂರ್ಣ ಸಫಲವಾಗದಿದ್ದರೂ ನಮ್ಮ ಮುಂದಿನ ಪೀಳಿಗೆಗೆ ದಾರಿದೀವಿಗೆಯಾಗಲು ನಾವು ಶ್ರಮಿಸಬೇಕಿದೆ. ಇಂದು ನಮ್ಮ ಅಭಿಪ್ರಾಯವನ್ನು, ವ್ಯಕ್ತಿತ್ವವನ್ನು ಅಭಿವ್ಯಕ್ತಿಪಡಿಸಲು, ಅನ್ಯಾಯವನ್ನು ಪ್ರತಿಭಟಿಸಲು, ಎದುರಿಸಲು ನಮಗೆ ಉದಾರವಾಗಿ ಕೊಟ್ಟಿರುವ ಈ ಸ್ವಾತಂತ್ರ್ಯಕ್ಕಾಗಿ, ಈ ದಿನಕ್ಕಾಗಿ ನಾನು ಕೃತಾರ್ಥಳಾಗಿದ್ದೇನೆ. ಅಂದಿನವರ ಅವಿರತ ಹೋರಾಟದ, ಬಲಿದಾನದ, ತ್ಯಾಗದ ಫಲವೇ ಈ ಸ್ವಾತಂತ್ರ್ಯ. ಈದಿನದ ಮಹತ್ವ ನಿಜಕ್ಕೂ ನಮ್ಮೆಲ್ಲರೊಳಗಿನ ಸಣ್ಣತನಕ್ಕಿಂತಲೂ ತೀರಾ ದೊಡ್ಡದು. ಹಾಗಾಗಿಯೇ ನಾನು ಸ್ವತಂತ್ರ ಭಾರತದ ನಾಗರೀಕಳೆಂದು ಹೇಳಿಕೊಳ್ಳಲು ನನಗೆ ಅಪಾರ ಹೆಮ್ಮೆಯಿದೆ. ಅಂದಿನ ಇಂಗ್ಲೀಷರಿಗೂ ಇಂದಿನ ನಾಗರೀಕರಿಗೂ ಏನೊಂದೂ ವ್ಯತ್ಯಾಸವಿಲ್ಲ... ಅಂದಿನ ಪರಿಸ್ಥಿತಿಗೂ ಇಂದಿನದಕ್ಕೂ ವ್ಯತ್ಯಾಸವೇ ಇಲ್ಲ ಎನ್ನುವ ಧೋರಣೆಗೆ ಧಿಕ್ಕಾರವಿದೆ. ದೇಶಕ್ಕೆ ನಾವೇನು ಕೊಟ್ಟಿದ್ದೇವೆ.. ಕೊಡುತ್ತಿದ್ದೇವೆ ಎನ್ನುವುದನ್ನು ನೋಡದೇ ಕೇವಲ ಪಡೆಯುವಿಕೆಯ ಹುನ್ನಾರದಲ್ಲೇ ತೊಡಗಿರುವವರ ಪ್ರತಿ ಅಪಾರ ಅನುಕಂಪವಿದೆ (ಅವರ ಮಾನಸಿಕ ಅಸ್ವಸ್ಥತೆಗಾಗಿ...). ಸ್ವಾತಂತ್ರ್ಯಕ್ಕೂ ಸ್ವಚ್ಛಂದತೆಗೂ ವ್ಯತ್ಯಾಸ ತಿಳಿಯದೇ ನಾವು ದಾಸ್ಯದಲ್ಲಿದ್ದೇವೆಂದು ಕೂಗುವ ಮನಃಸ್ಥಿತಿಗೂ ಧಿಕ್ಕಾರ!
ಎಲ್ಲರಿಗೂ ೬೩ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಕಾಮನೆಗಳ ಜೊತೆ,
ಎಲ್ಲರಲ್ಲೂ ದೇಶಪ್ರೇಮ ಬೆಳೆಯಲಿ, ಇಲ್ಲದವರಲ್ಲಿ ಚಿಗುರೊಡೆಯಲಿ ಎಂದು
ಮನಃಪೂರ್ವಕವಾಗಿ ಹಾರೈಸುವೆ.
ಜೈ ಹಿಂದ್!
(ಚಿತ್ರ ಕೃಪೆ - http://hindisms.org/greetings-sms/republic-day-sms-26th-january-sms.html)
*******************
ಸ್ವಾತಂತ್ರ್ಯೋತ್ಸವದ ಅಂಗವಾಗಿ ನನ್ನ ಮೂರುವರುಷದ ಮಗಳು "ಅದಿತಿ"ಯ ಶಾಲೆಯಲ್ಲಿ ಛದ್ಮವೇಷದ ಕಾರ್ಯಕ್ರಮವಿತ್ತು. ಇದರ ವಿಶೇಷವೆಂದರೆ ಇದು ಸ್ಫರ್ದೆಯಾಗಿರದೇ ಎಲ್ಲರನ್ನೂ ಪ್ರೋತ್ಸಾಹಿಸುವ, ಭಾಗವಹಿಸಲು ಹುರಿದುಂಬಿಸುವ ಕಾರ್ಯಕ್ರಮವಾಗಿತ್ತು. ಅದಿತಿ "ವಿವೇಕಾನಂದರ"ವೇಷವನ್ನು ತೊಟ್ಟಿದ್ದಳು. ಪುಟ್ಟ ಪುಟ್ಟ ಮಕ್ಕಳಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ವೇಷ ಭೂಷಣಗಳನ್ನು ಕಂಡು ಮನದುಂಬಿ ಬಂತು. ಆ ವ್ಯಕ್ತಿಗಳ ವ್ಯಕ್ತಿತ್ವವೂ ಈ ಬೆಳೆವ ಮೊಳಕೆಯಲ್ಲಿ ಚಿಗುರೊಡೆಯುವಂತಾದರೆ ಎಷ್ಟು ಚೆನ್ನಾ.. ಎಂದೂ ಮನಸು ಹಾರೈಸಿತು. ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಹಾಗಾಗಿ ಇಂದಿನ ಮಕ್ಕಳಲ್ಲಾದರೂ ಆರೋಗ್ಯಕರ ಮನಃಸ್ಥಿತಿಯನ್ನೂ, ತಮ್ಮ ದೇಶದ ಕುರಿತು ಅಭಿಮಾನ, ಪ್ರೀತಿಯನ್ನೂ ನಾವು ಬೆಳೆಸುವಂತಾದರೆ ಭವಿಷ್ಯತ್ತು ಸುಂದರವಾಗವುದು. ಎಲ್ಲಕ್ಕಿಂತ ಮೊದಲು "ನಾನು ಮನುಜ.... ನಾನು ಭಾರತೀಯ" ಎನ್ನುವ ಕಲ್ಪನೆ ಕೊಟ್ಟರೆ ಸಾಕು....ಸುವಿಚಾರಗಳು ಅವರನ್ನರಸಿ ಬರುತ್ತವೆ.
ಪುಟಾಣಿಗಳ ಕೆಲವು ಸುಂದರ ಚಿತ್ರಗಳು ನಿಮಗಾಗಿ....:)
ಅದಿತಿ - "ಸ್ವಾಮಿ ವಿವೇಕಾನಂದ" ಇಂದಿನ ಇಂದಿರಾಗಾಂಧಿ :) ಪುಟಾಣಿ ಗಾಂಧೀಜಿ :) ಆಧುನಿಕ ಮಂಗಲ ಪಾಂಡೆ :) ಹೂ ಮಾರುವ ಹುಡುಗಿ :) ಭಗತ್ ಸಿಂಗ್ :) ಆದಿತ್ಯ - ಪುರೋಹಿತ :) ಕಿತ್ತೂರು ರಾಣಿ ಚೆನ್ನಮ್ಮ :) |
ಈ ಕಾರ್ಯಕ್ರಮದ ನಂತರ ಎಲ್ಲಾ ಪುಟಾಣಿಗಳಿಗೂ ಚಿತ್ರಕ್ಕೆ ಬಣ್ಣ ಹಾಕುವ ಕಾರ್ಯವನ್ನೂ ನೀಡಲಾಗಿತ್ತು.... :)
28 ಕಾಮೆಂಟ್ಗಳು:
ಸ್ವಾತಂತ್ರ್ಯೋತ್ಸವಕ್ಕೆ ಬೆಲೆ ಇಲ್ದೆ ಹೋಗಿಪ್ಪದು ನಿಜ...
ಅಂದ ಹಾಗೆ ಇದು ೬೪ನೇ ಸ್ವಾತಂತ್ರ್ಯೋತ್ಸವ...
ನಾನು ಶಾಲೆಯಲ್ಲಿ ವಿವೇಕಾನಂದರ ವೇಷ ಹಾಕಿದಿದ್ದಿ.. ಮೊದಲ ಬಹುಮಾನ ಕೂಡ ಬಂದಿತ್ತು :-)
ಹರೀಶ್,
ಹೌದಾ? ನೀವೂ ಹಾಕಿದ್ದ್ರಾ? ತುಂಬಾ ಸಂತೋಷ :) ಅಂದಹಾಗೆ ೪೮ನೇ ಇಸವಿಯಿಂದ ವರುಷದ ಲೆಕ್ಕ ತೆಗೆದುಕೊಂಡರೆ ೬೩ನೇ ಆಚರಣೆಯೇ ಸರಿ... ಹಾಗೆ ನೋಡಿದರೆ ೬೪ನೆಯೂ ಸರಿಯೇ... ಲೆಕ್ಕಕ್ಕಿಂತ ಭಾವನೆ ಮುಖ್ಯ. ಎಷ್ಟನೇದು ಅನ್ನೋದಕ್ಕಿಂದ ಎಷ್ಟು ಸಂಭ್ರಮವಿದೆ ಎನ್ನುವುದು ಮುಖ್ಯ ಅಲ್ಲವೇ? :)
ತೇಜಕ್ಕಾ........
ನಿಮ್ಮ ಅಭಿಪ್ರಾಯ ಚಿಂತನಾಶೀಲವೇ, ನಾನು ಒಪ್ಪಿಕೊಳ್ಳುತ್ತೇನೆ. ಹಿರಿಯರು ರಕ್ತ ಬೆವರು ಸುರಿಸಿ, ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ದೊರಕಿಸಿಕೊಟ್ಟ ಸ್ವಾತಂತ್ರ್ಯ ಇಂದು ಯಾಕೋ ಅರ್ಥರಹಿತವಾಗಿದೆ. ಮಹಾಪುರುಷರ ಸಾಧನೆಯ ಅರ್ಥ ನಮಗಾಗಲೇ ಇಲ್ಲ.
ಆದರೂ.............
ನಾವು ಭಾರತೀಯರು, ಸಹನಾಶೀಲರು. ಶಾಂತಿಯಿಂದಲೇ ಹೊಂದಾಣಿಕೆ ಮಾಡಿಕೊಂಡು ಸಾಗುವವರು!
All Photos are nice.....
ನಿಮಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
ತೇಜು ನಿಮ್ಮ ಮಾತು ಸತ್ಯ ನಾವು ಸ್ವಾತಂತ್ರದ ಸಂಭ್ರಮವನ್ನೇ ಮರೆತಿದ್ದೇವೆ..... ಬಹಳ ಚೆನ್ನಾಗಿದೆ ಫೋಟೋಗಳು ಆಗಲೇ ಸ್ವಾತಂತ್ರದ ಸಮಾರಂಭ ಮುಗಿಸಿ ಫೋಟೋಗಳು ನೀಡಿಬಿಟ್ಟಿರಿ ಧನ್ಯವಾದಗಳು...
ಅದಿತಿ ತುಂಬಾ ಚೆನ್ನಾಗಿದಳೆ.... ಹಾಗೆ ಎಲ್ಲಾ ಮಕ್ಕಳು ವಿಶೇಷವಾಗಿ ಕಾಣುತ್ತಿದ್ದಾರೆ ಇದನ್ನ ನೋಡುವುದೇ ಒಂದು ಖುಷಿ ಅಲ್ಲವೇ... ಬಣ್ಣ ಹಚ್ಚುವ ಕೆಲಸ ಜೋರಾಗೆ ಸಾಗಿದೆ
ಸ್ವತಂತ್ರ ದಿನದ ಶುಭಾಶಯಗಳು...
hi madam
urs article and photos are
very nice
ಅಮ್ಮ ಸ್ವಾತಂತ್ರ ದಿನಾಚರಣೆ ನ್ಯಾಷನಲ್ ಫೆಸ್ಟಿವಲ್ ಅದರೂ ಸ್ಕೂಲಲ್ಲಿ ಮಾತ್ರ ಯಾಕೆ ಆಚರಿಸೋದು? ಎಲ್ಲರ ಮನೆಯಲ್ಲೂ ಯಾಕೆ ಆಚರಿಸೋಲ್ಲ ? ---- ಇದು ನನ್ನ ಮಗಳ ಪ್ರಶ್ನೆ. ಅವಳಿಗೆ ಉತ್ತರಿಸಲು ನನ್ನಿಂದಗಾಗಲಿಲ್ಲ. ನಿಜಕ್ಕೂ ನಮಗೆ ಸ್ವಾತಂತ್ರದ ಬೆಲೆ ಗೊತ್ತೇ ಇಲ್ಲ ಅಲ್ಲವೆ?
ಸ್ವಾತ೦ತ್ರ್ಯೋತ್ಸವಕ್ಕೆ ಉತ್ತಮ ವಿಚಾರವನ್ನು ಕೊಟ್ಟಿದ್ದೀರಿ. ಈ ಸಮಯದಲ್ಲಿ ಭಗತ್ ಸಿ೦ಗ್ ರನ್ನು ಉಗ್ರಗಾಮಿ ಎ೦ದು ಪಠ್ಯಪುಸ್ತಕಗಳಲ್ಲಿ ಚಿತ್ರಿಸಿದ ವಿಷಯ ಮನಸಿಗೆ ಅಘಾತವನ್ನು೦ಟು ಮಾಡುತ್ತದೆ. ನಿಮ್ಮ ಮಗಳು ಅದಿತಿ ತು೦ಬಾ ಮುದ್ದಾಗಿದ್ದಾಳೆ. ಚಿತ್ರಗಳು ಮನಕ್ಕೆ ಮುದಕೊಟ್ಟವು.
ಶುಭಾಶಯಗಳು
ಅನ೦ತ್
ಸ್ವಾತಂತ್ರ್ಯ ಲಭಿಸಿ ೬೩ ವರ್ಷಗಳಾದವು. ಇದು ೬೩ನೆಯ ಸ್ವಾತಂತ್ರ್ಯ ವಾರ್ಷಿಕೋತ್ಸವ!
ತೇಜಕ್ಕ,
ಅದಿತಿ ಫೋಟೋ ಚನಾಗಿ ಬೈಂದು... :-)
also ಆದಿತ್ಯ ಭಟ್ರು is choo cute ... :-)ಮೊದ್ಲು ದೃಷ್ಟಿ ತೆಗಿ ಇಬ್ರಿಗುವ .... :-)
olle baraha. yochanayogyavagide
-kodasra
ಚಿಕ್ಕ೦ದಿನಲ್ಲಿ ಸ್ವಾತ೦ತ್ರ್ಯ ದಿನಾಚಾರಣೆ ಬಗ್ಗೆ ಇದ್ದ ಸ೦ಭ್ರಮ ಈಗ೦ತೂ ಇಲ್ಲ.... ನಮ್ಮ ಕ೦ಪೆನಿಯಲ್ಲಿ ಸ್ವಾತ೦ತ್ರ್ಯ ದಿನಾಚಾರಣೆ ಅ೦ದರೆ Ethnic ದಿನ ತರಹ ಆಗಿದೆ. ಒ೦ತರಾ ಛಧ್ಮವೇಶದ ತರಹಾನೆ :)
ಭಾರತೀಯ ಅನ್ನೋ ಹೆಮ್ಮೆ ಅ೦ತೂ ಸದಾ ಇದ್ದೇ ಇರುತ್ತದೆ ಮನಸ್ಸಿನಲ್ಲಿ :)
ಬರಹ ಇಷ್ಟ ಆಯಿತು ತೇಜಕ್ಕ.. ಪುಟಾಣಿಗಳ ಚಿತ್ರ ಸಹ :)
ಫೋಟೋಗಳು ಒಂದಕ್ಕಿಂತ ಒಂದು ಸೂಪರ್. ಬರಹ ಯೋಚನೆಗೆ ಹಚ್ಚುವಂತಿದೆ. ಸರಿಯಾಗಿ ಹೇಳಿದ್ದೀರಿ.
ಸ್ವಾತಂತ್ರ್ಯ ದಿನಾಚರಣೆ ಎಂದರೆ ನಿಂಬೆ ಹುಳಿ ಪೆಪ್ಪರಮೆಂಟು, ಅರ್ಧ ದಿನ ರಜ, ಹಾಡು ಭಾಷಣ ಸಂಗೀತ ಅಂತ ಒಂದಿಷ್ಟು ಮಜ ಅಷ್ಟೇ!! ದೇಶಪ್ರೇಮಿಯಲ್ಲದಿದ್ದರೂ ದೇಶದ್ರೋಹಿ ಆಗದಿರಲಿ ಯಾರೂ ಎಂದು ಬೇಡುವ ಸ್ಥಿತಿ ಬಂದಿದೆ. ಮಕ್ಕಳೆಲ್ಲ ಅವರ ಪೋಷಾಕುಗಳಲ್ಲಿ ಬಹಳ ಚೆನ್ನಾಗಿ ಕಾಣುತ್ತಿದ್ದಾರೆ.
ಸ್ವಾತ೦ತ್ರ್ಯ ದಿನಾಚರಣೆ ಬಗ್ಗೆ ನೀವು ಹೇಳಿದ ಅಭಿಪ್ರಾಯ ಕಟು ಸತ್ಯ.
"ದಾಸ್ಯತನದಲ್ಲೇ ದಿನಗಳೆಯಬೇಕಾಗಿದ್ದ ಅಂದಿನ ಜೀವನದ ಅರಿವನ್ನು ಆ ಭಗವ೦ತ ನೀಡದಿರುವುದೇ ಅವರ ಇಂದಿನ ಈ ಅನಾರೋಗ್ಯಕರ ಮನಃಸ್ಥಿತಿಗೆ ಕಾರಣ"ತುಂಬಾ ಮಾರ್ಮಿಕ ಸತ್ಯ.
ಅತ್ಯುತ್ತಮ ಲೇಖನ ನನ್ನ ಮನಸ್ಸಿನಲ್ಲಿದ್ದುದ್ದನ್ನೆತಾವು ಬರೆದಿದ್ದಿರಾ...
ಅಂದ ಹಾಗೆ ಸ್ವಾತಂತ್ರ ಸಿಕ್ಕು ೬೩ ವರ್ಷ ಕಳೆದವು.ಆದರೆ ಇದು ೬೪ನೆ ಆಚರಣೆ. ಆಚರಣೆ ಸೊನ್ನೆಯಿಂದ ಪ್ರಾರ೦ಭವಾಗಿರುವದರಿಂದ ೬೪ ವರ್ಷ!
ಚಿತ್ರಗಳು ಚೆನ್ನಾಗಿವೆ ಮಕ್ಕಳ ಆಚರಣೆಯೇ ಮನಸ್ಸಿಗೆ ಮುದಗೊಳಿಸುವ ಸಂಗತಿ ಅಲ್ಲವೇ! ವಿವೇಕಾನಂದರ ರೂಪದಲ್ಲಿ ಆದಿತಿ ಚೆನ್ನಾಗಿ ಕಾನುತ್ತೊದ್ದಾಳೆ. ಅವರ ಆದರ್ಶ ಮೈಗೂಡಿಸಿಕೊಂಡು ಬೆಳೆಯಲಿ.
ಮಗು ಬಹಳ ಚೆನ್ನಾಗಿ ಕಾಣ್ತಾ ಇದ್ದಾಳೆ. ಎಲ್ಲಾ ಚಿತ್ರಗಳು ಚೆನ್ನಾಗಿದೆ. ವಿಚಾರವೂ ಚಿಂತನಾರ್ಹವಾಗಿದೆ.
ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಸ್ವಾತಂತ್ರ್ಯ ಎನ್ನುವುದಕ್ಕೆ ಇಂಥದ್ದೇ ಎನ್ನುವ ವ್ಯಾಖ್ಯಾನ ಕೊಡಲಾಗದು. ವ್ಯಕ್ತಿ ಸ್ವಾತಂತ್ರ್ಯ, ದೇಶದ ಸ್ವಾತಂತ್ರ್ಯ ಬೇರೆ ಬೇರೆಯದಾಗಿರುತ್ತದೆ. ದೇಶವೇ ದಾಸ್ಯದಲ್ಲಿದ್ದರೆ ವ್ಯಕ್ತಿ ಸ್ವಾತಂತ್ರ್ಯದ ಮಾತೇ ಬರದು. ಹಾಗಾಗಿಯೇ ಸ್ವಾತಂತ್ರ್ಯೋತ್ಸವದ ಮಹತ್ವ ದೊಡ್ಡದಾಗಿದೆ. ಅಪ್ಪ ಮಾಡಿಟ್ಟ ಆಸ್ತಿಯ ಬಗ್ಗೆ ಆರಾಮಾಗಿ ಬೆಳೆದ ಮಗನಿಗೆ ಗೌರವ ಕಾಳಜಿ ಇರುವುದು ಕಡಿಮೆಯೇ. ಇಂತಹದೇ ಸ್ಥಿತಿಯಾಗಿದೆ ಇಂದು. ಅಂದಿನವರ ಬಲಿದಾನ, ಶ್ರಮದ ಫಲವಾಗಿ ಇಂದಿನವರಿಗೆ ದಕ್ಕಿರುವ ಈ ಸ್ವಾತಂತ್ರ್ಯದ ಮಹತ್ವ ತಿಳಿಯುತ್ತಿಲ್ಲ. ಇದ್ದುದರಲ್ಲೆಲ್ಲಾ ಕುಂದು ಕೊರತೆ ಕಾಣುತ್ತಾ, ಅಸಮಾಧಾನ ಪ್ರಕಟಿಸುತ್ತಾ, ದೇಶಪ್ರೇಮವೆಲ್ಲಾ ಅಂತೆ ಕಂತೆಯ ಸಂತೆ ಎಂದೇ ಕೂಗುತ್ತಾ ಸಮಾಜಘಾತುಕದೆಡೆ ಮುಖಮಾಡುತ್ತಾರೆ. ಇಂತಹವರ ಮನಃಪರಿವರ್ತನೆ ಕಷ್ಟವಾದರೂ ಅಸಾಧ್ಯವಲ್ಲ. ಇದಕ್ಕೆಲ್ಲ ನಿರ್ಲಕ್ಷ್ಯತನವೇ ಮದ್ದು ಎಂದು ಉದಾಸೀನ ಮಾಡಿದರೆ ಇದೇ ಮುಂದೆ ನಮ್ಮ ಕಂಟಕಕ್ಕೆ ಕಾರಣವಾಗುತ್ತದೆ...ಮತ್ತೊಂದು ರಕ್ತಸಿಕ್ತ ಇತಿಹಾಸಕ್ಕೆ ನಾಂದಿಯಾಗುತ್ತದೆ. ನಮ್ಮ/ನಮ್ಮವರ ಸ್ವಾತಂತ್ರ್ಯದ ರಕ್ಷಣೆಗಾಗಿಯಾದರೂ ಸಮಾಜಘಾತುಕ ಶಕ್ತಿಯಗಳನ್ನು ಒಳ/ಹೊರ ದೇಶದ್ರೋಹಿಗಳನ್ನು ಹಿಮ್ಮೆಟ್ಟಿಸುವ ಸಂಕಲ್ಪ ನಮ್ಮ ಒಗ್ಗಟ್ಟಿನಿಂದಾಗಬೇಕಿದೆ.
ಎಲ್ಲರಿಗೂ ಮತ್ತೊಮ್ಮೆ ತುಂಬಾ ಧನ್ಯವಾದಗಳು.
-ತೇಜಸ್ವಿನಿ ಹೆಗಡೆ.
ತೇಜಸ್ವಿನಿಯವರೆ, ಇದು ಒಂದು ಮಾರ್ಮಿಕವಾದ ಬರಹವಾಗಿದೆ. ನಿಜಕ್ಕೂ ಜನರಿಗೆ ಇವೆಲ್ಲ ಬೇಕಿಲ್ಲ. ನಾನು ನನ್ನದು ಆದರೆ ಅಯಿತು. ಕಳೆದವಾರವಷ್ಠೇ ನಾನು ಸ್ವಾತಂತ್ರ್ಯ ವೀರ ಸಾವರ್ಕರರ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ ನ ಕನ್ನಡ ಅವತರಣಿಕೆಯನ್ನು ಓದುತ್ತಿದ್ದೆ. ಬ್ರಿಟಿಷರ ದಬ್ಬಾಳಿಕೆ, ಮಂಗಲಪಾಂಡೆಯ ಧೀರತನ, ನಾನಾ ಸಾಹೇಬ, ತಾತ್ಯಾಟೋಪೆ, ಝಾನ್ಸಿಯ ರಾಣಿ, ಕುಮಾರಸಿಂಹ, ಇತ್ಯಾದಿ ವೀರರ ಹೋರಾಟದ ದೃಶ್ಯಗಳು, ಅವರುಗಳ ಬಲಿದಾನ ಅದರಲ್ಲಿಯೂ ಝಾನ್ಸಿರಾಣಿಯ ದಿಟ್ಟತನದ ಹೋರಾಟ, ಕೊನೆಗೆ ಅವಳನ್ನು ಹಿಂದಿನಿಂದ ಹೊಡೆದು ಸಾಯಿಸಿದ ಚಿತ್ರಣ, ಕುಮಾರಸಿಂಹನು ತನ್ನ ಕೈಗೆ ಬಿದ್ದ ಗುಂಡೇಟಿಗೆ ಎದೆಗುಂದದೇ ಖಡ್ಗದಿಂದ ಕೈಯನ್ನೇ ಕತ್ತರಿಸಿಕೊಂಡು, ನದಿಯಲ್ಲಿ ಈಜಿ, ಕೊನೆಗೂ ತನ್ನ ಸಿಂಹಾಸನವನ್ನು ಗೆದ್ದಿದ್ದು. ಇವೆಲ್ಲ ಓದುತ್ತಿದ್ದರೆ ಮೈಝುಮ್ಮೆನ್ನುತ್ತದೆ. ಅದಲ್ಲದೇ ಇನ್ನೂ ಯೌವನದಲ್ಲಿಯೇ ತಮ್ಮ ಬಲಿದಾನಗೈದ, ನಗುನಗುತ್ತಾ ಗಲ್ಲಿಗೇರಿದ, ಪೋಲಿಸರ ಬಲೆಗೆ ಸಿಗದೇ ಹೋರಾಡಿದೆ ಭಗತ್ಸಿಂಗ್, ರಾಮಪ್ರಸಾದ್ ಬಿಸ್ಮಿಲ್, ಸುಖದೇವ, ರಾಜಗುರು, ಚಂದ್ರಶೇಖರ ಆಝಾದ್, ಇನ್ನೂ ಅನೇಕರು. ಹಾಗೆಯೇ ಅಹಿಂಸಾ ಪ್ರತಿಪಾದಕರಾಗಿ ಹೋರಾಡಿದ ಮಹಾತ್ಮಾಗಾಂಧೀಜಿ, ಸರ್ದಾರ್ ಪಟೇಲ್, ಜೊತೆಗೆ ಸನಾತನ ಧರ್ಮವನ್ನು ಭಾರತವೆಂದರೇನು ಎಂಬುದನ್ನು ಜಗತ್ತಿಗೇ ತೋರಿ ಸ್ವಾಮಿವಿವೇಕಾನಂದ, ಸಮರ್ಥರಾಮದಾಸರ ಶಿಷ್ಯೋತ್ತಮ ಛತ್ರಪತಿ ಶಿವಾಜಿ ಇನ್ನೂ ಅನೇಕರು. ಹೀಗೆ ಬಲಿದಾನಗೈದು ಪಡೆದದ್ದು ಮರೆಯಬಾರದಲ್ಲವೇ? ಆದರೆ, ರಜಾದಿನವೆಂದು ಪರಿಗಣಿಸಿ ... ಮಜಾ ಮಾಡುವ ಮಂದಿಯೇ ಜಾಸ್ತಿಯೆನ್ನಬಹುದು.
ಬರಹ ಸೂಕ್ಷ್ಮತಮವಾಗಿ ವಿಚಾರ ಮಾಡುವಂತಿದೆ.
ದೇಶಭಕ್ತರ ವೇಷದಲ್ಲಿರುವ ಮಕ್ಕಳ ಚಿತ್ರಗಳೂ ತುಂಬಾ ಚೆನ್ನಾಗಿವೆ.
ಧನ್ಯವಾದಗಳು.
ತೇಜಸ್ವಿನಿಯವರೇ
ತಡವಾಗಿ ಸ್ವಾತಂತ್ರೋತ್ಸವದ ಶುಭಾಶಯಗಳು
ಕೇವಲ ಆಚರಣೆಗೋಸ್ಕರ ರಾಷ್ಟ್ರೀಯ ಹಬ್ಬಗಳು ಇರಬಾರದು
ಆ ಆಚರಣೆಗಳ ಹಿಂದಿನ ಅರ್ಥ, ಅದಕ್ಕೆ ಬಲಿ ಕೊಟ್ಟ ತಲೆಯ ಲೆಕ್ಕ
ಹರಿಸಿದ ರಕ್ತದ ಲೆಕ್ಕ ಇವೆಲ್ಲ ನಮಗೆ ಒಂದು ದಿನ ನೆನಪಾದರೆ ಸಾಕೆ?
ಪ್ರತಿ ದಿನವೂ ನಮಗೋಸ್ಕರ ಸಾಯುತ್ತಿರುವ ದೇಶದ ಗಡಿ ಯಲ್ಲಿರುವ ವೀರ ಸೈನಿಕನಿಗೆ, ಅವನ ಕಾರ್ಯಕ್ಕೆ ಎಲ್ಲಿಯ ಬೆಲೆ ಸಿಗುತ್ತದೆ ಹೇಳಿ?
ಎಲ್ಲಿ ಸ್ವಾತಂತ್ರೋತ್ಸವವೂ ಒಂದು ದಿನದ ಮೋಜಿಗೆ ರಜಾ ಎಂದು ತಿಳಿಯುವ ಕಾಲ ಬರುತ್ತದೋ ಎಂಬ ಆತಂಕ
ಒಳ್ಳೆಯ ಬರಹ
ಕೆಲವೊಮ್ಮೆ ಸಮಯ ಸರಿಡದು ನಮಗೆ ತಿಳಿಯುವುದಿಲ್ಲ, ಈಗಲೂ ಹಾಗೇ, ಸ್ವಾತಂತ್ರ್ಯೋತ್ಸವದ ಅವಸರದಲ್ಲಿ ನಿಮ್ಮ ಲೇಖನದ ಪ್ರಕಟಣೆ ಆಗಿದ್ದೇ ನೋಡಲಾಗಲಿಲ್ಲ, ಇವತ್ತು ಬಜ್ ನಲ್ಲಿ ನೋಡಿದ ಮೇಲೇ ತಿಳಿದಿದ್ದು, ಲೇಖನ ಸುಂದರವಾಗಿದೆ, ಚಿತ್ರಗಳು ಮನಮೋಹಕ, ನಿಮ್ಮ ಮಗಳು ಬಹಳ ಮುದ್ದಾಗಿದ್ದಾಳೆ. ೬೩ ಸ್ವತಂತ್ರ ವರ್ಷಗಳನ್ನು ಕಳೆದು ೬೪ ನೇ ವರ್ಷದ ಆಚರಣೆ, ತಮಗೆ ಧನ್ಯವಾದಗಳು
ತಂಗೀ ತೇಜಸ್ವಿನೀ...
ನಿಮ್ಮ ಬರಹ ತುಂಬಾ ತಡವಾಗಿ ಈ ದಿನವೇ ಓದಿದ್ದು. ಒಳ್ಳೆಯ ಬರಹ. ಪುಟ್ಟ ಅದಿನಿ ತುಂಬಾ ಮುದ್ದಾಗಿದ್ದಾಳೆ. ಬೇರೆ ಮಕ್ಕಳೂ ಮುದ್ದಾಗಿದ್ದಾರೆ. ಚಿಕ್ಕ ಮಕ್ಕಳಿಗೆ ಈ ರೀತಿ ಬೇರೆ ಬೇರೆ ವೇಷ ತೊಡಿಸಿ ನೋಡುವುದೆಷ್ಟು ಚಂದ ಅಲ್ಲವೇ..?
ಶ್ಯಾಮಲ
ಅಯ್ಯೋ ಬಿಡಿ..ಸ್ವಾತಂತ್ರ್ಯೋತ್ಸವ ಅಂತ ಆಚರಿಸೋರಲ್ಲಿ ಎಷ್ಟು ಜನ ಇದನ್ನು ತಂದವರ ನಿಜ ತ್ಯಾಗಕ್ಕೆ ಬೆಲೆ ಕೊಡ್ತಾರೆ..ಇಲ್ಲ ಅಂದ್ರೆ ಸುಮ್ ಸುಮ್ನೆ ಆಸ್ತಿ ಪಾಸ್ತಿ ನಾಶ್ ಮಾಡೊರಿಗೆ ಏನ್ ಹೇಳೋದು....ನಮ್ಮ ಪುಟಾಣಿಗಳೇ ಎಷ್ಟೋ ವಾಸಿ...ಅವರ ವೇಷ ಧರಿಸಿ ನಮಗೆ ಅದನ್ನೆಲ್ಲಾ ಮನವರಿಕೆ ಮಾಡಿಸ್ತಾರೆ...(ಹಾಗೆ ನಮಗೆ ಅನ್ಸೋದಾದ್ರೆ...)
ನಿಮ್ಮ ಮಾತು ನಿಜ ತೇಜಸ್ವಿನಿ..ನಾವು ನಮಗೆ ದೇಶದಿಂದ ಏನೂ ಉಪಯೋಗ ಆಗ್ಲಿಲ್ಲ ಎನ್ನುವವ್ವರು ದೇಶಕ್ಕೆ ತಮ್ಮಿಂದ ಏನು ಉಪಯೋಗವಾಯ್ತು ಎನ್ನೋದಕ್ಕೆ ನಿರುತ್ತರಿಗಳು...
Hi,
Tumbane correct agi helidde.
ದೇಶಕ್ಕೆ ನಾವೇನು ಕೊಟ್ಟಿದ್ದೇವೆ.. ಕೊಡುತ್ತಿದ್ದೇವೆ ಎನ್ನುವುದನ್ನು ನೋಡದೇ ಕೇವಲ ಪಡೆಯುವಿಕೆಯ ಹುನ್ನಾರದಲ್ಲೇ ತೊಡಗಿರುವವರ ಪ್ರತಿ ಅಪಾರ ಅನುಕಂಪವಿದೆ (ಅವರ ಮಾನಸಿಕ ಅಸ್ವಸ್ಥತೆಗಾಗಿ...). ಸ್ವಾತಂತ್ರ್ಯಕ್ಕೂ ಸ್ವಚ್ಛಂದತೆಗೂ ವ್ಯತ್ಯಾಸ ತಿಳಿಯದೇ ನಾವು ದಾಸ್ಯದಲ್ಲಿದ್ದೇವೆಂದು ಕೂಗುವ ಮನಃಸ್ಥಿತಿಗೂ ಧಿಕ್ಕಾರ!
inta janarige nandu ondu dikkara... photos ela chennagiddu.. ellarallu olle bhavane moodali
ಒಳ್ಳೆಯ ಲೇಖನ.
Sariyaagi heLiddiri madam... :)
great getup's of kids :)
Aditi Rocks :)
ಕ್ಷಣ..ಚಿಂತನೆ.., ಸಾಗರದಾಚೆಯ ಇಂಚರ, ವಿ.ಆರ್.ಭಟ್, ಶ್ಯಾಮಲಕ್ಕ, ಜಲನಯನ, ಪ್ರವೀಣ್ ಭಟ್, ಉಮಾ ಭಟ್, ಶಿವಪ್ರಕಾಶ್,
ಸ್ಪಂದನೆಗೆ ತುಂಬಾ ಧನ್ಯವಾದಗಳು.
ಹಾಯ್ ಸ್ವಾತಂತ್ರ್ಯ ದ ಮಹತ್ವ ಅಂದು ಇಂದು ಇದರ ಬಗ್ಗೆ ತಿಳಿಸಿ please
ಕಾಮೆಂಟ್ ಪೋಸ್ಟ್ ಮಾಡಿ