ಬುಧವಾರ, ಆಗಸ್ಟ್ 27, 2008

ನಾ ಮೆಚ್ಚಿದ ಕವಿತೆ-೧



ಕವಿ - ಜಿ.ಎಸ್.ಶಿವರುದ್ರಪ್ಪ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವೆ
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ



*** ಜಿ.ಎಸ್.ಶಿವರುದ್ರಪ್ಪನವರ ಈ ಕವನವೊಂದೇ ಸಾಕು ಅವರ ಮನದ ತಿಳಿಯನ್ನು ನಮಗೆ ತಿಳಿಸಲು. ತುಂಬಾ ಸುಂದರ ಕವನ ಅಷ್ಟೇ ಸುಶ್ರಾವ್ಯವಾಗಿ ಹಾಡಬಹುದಾಗಿದೆ. ಇದರೊಳಗಿನ ಅರ್ಥವನರಿತು ನಡೆದರೆ, ನಾಲ್ಕುದಿನದ ಈ ಬದುಕಿನಲ್ಲಿ ಹೊಂದಾಣಿಕೆ ಎಂಬುದು ಕಷ್ಟವೆನಿಸದು.***
-ತೇಜಸ್ವಿನಿ ಹೆಗಡೆ

17 ಕಾಮೆಂಟ್‌ಗಳು:

Unknown ಹೇಳಿದರು...

ಎಷ್ಟ್ ನಿಜ ಅಲ್ವಾ. ಅಹ೦ಕಾರ ಮನುಷ್ಯನ ಎಷ್ಟೋ ಒಳ್ಳೆ ಗುಣಗಳನ್ನ ಮರೆಸಿ ಬಿಡುತ್ತೆ.
ಧನ್ಯವಾದ, ಒ೦ದ್ ಒಳ್ಳೇ ಕವಿತೆ ಹೆಕ್ಕಿ ಕೊಟ್ಟಿದ್ದಿಕ್ಕೆ.

~ ಹರ್ಷ

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜು,
ಒಂದೊಳ್ಳೆಯ ಕವನವನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ಈ ಪದ್ಯ ನಮ್ಮ ಎಂಟನೆತರಗತಿಯ ಕನ್ನಡ ಸಿಲಬಸ್’ಗೆ ಇತ್ತು. ಎಷ್ಟು ಚಂದವಿದೆಯಲ್ಲ!
ಅಂದಹಾಗೆ ‘ಇಲ್ಲೆ ಇರುವ ಪ್ರೀತಿ ಪ್ರೇಮಗಳ’
ಈ ಸಾಲು ‘ಇಲ್ಲೆ ಇರುವ ಪ್ರೀತಿ ಸ್ನೇಹಗಳ’ ಅಂತಾಗಬೇಕಾ ಅಂತ ಒಮ್ಮೆ ನೋಡು ದಯವಿಟ್ಟು. ನಾನೂ ಆಗ ಓದಿದ್ದಷ್ಟೇ, ಸರಿಯಾಗಿ ನೆನಪಾಗ್ತಿಲ್ಲ.

ಸಿಂಧು sindhu ಹೇಳಿದರು...

ತೇಜಸ್ವಿನಿ,

ಇದು ನನ್ನ ಇಷ್ಟದ ಕವಿತೆ ಕೂಡಾ. ನಾಲ್ಕು ದಿನದ ಬದುಕಿನ ಕಷ್ಟ ಸಾಧ್ಯತೆಗೆಗಳನ್ನು ಚೆನ್ನಾಗಿ ಬಣ್ಣಿಸಿರುವ ಕವಿತೆ. ಅವರ ಉಡುಗಣವೇಷ್ಠಿತ ಚಂದ್ರ ಸುಶೋಭಿತ.. ಓದಿ/ಕೇಳಿದ್ದೀರಾ? ನಿಮಗಿಷ್ಟವಾಗತ್ತೆ ಅದು.

ಪ್ರೀತಿಯಿಂದ
ಸಿಂಧು

ತೇಜಸ್ವಿನಿ ಹೆಗಡೆ ಹೇಳಿದರು...

@ಶ್ರೀಹರ್ಷ ಅವರೆ,

ಹೌದು.. ಅಹಂಕಾರವೆಂಬುದು ಒಂದು ತರಹದ ಕ್ಯಾನ್ಸರ್ ಇದ್ದಹಾಗೇ. ಕ್ರಮೇಣ ಅದು ಮನುಷ್ಯತ್ವವನ್ನೇ ನಾಶಮಾಡಿ ನಮ್ಮನ್ನು ಕೊಲ್ಲುತ್ತದೆ. ಧನ್ಯವಾದಗಳು.

@ಶಾಂತಲಾ,

ಹೂಂ. ಎಂಟನೆ ತರಗತಿಯಲ್ಲಿ ಕಂಠಪಾಠಕ್ಕೆ ಇತ್ತು. ಆಗ ಅದರರ್ಥ ಅಷ್ಟಾಗಿ ತಿಳಿಯದಿದ್ದರೂ ಅದೇನೋ ಎಂತೋ ತುಂಬಾ ಇಷ್ಟವಾಗಿತ್ತು. ಆವತ್ತಿನಿಂದ ಅದು ನನ್ನ ಸೃತಿಪಟಲದಲ್ಲಿದೆ. ಅದೇ ನೆನಪಲ್ಲೇ ಬರದದ್ದು. ಬಹುಶಃ ನೀನಂದಂತೆ ‘ಸ್ನೇಹಗಳ’ ಎಂದೇ ಆಗಬೇಕೇನೋ. ಏಕೆಂದರೆ ‘ಪ್ರೀತಿ’ ಎನ್ನುವ ಪದ ಮೊದಲೇ ಬಂದಿದೆ. ನನ್ನಲ್ಲಿ ಈಗ ಮೂಲ ಪ್ರತಿ ಇಲ್ಲ. ನಿನ್ನಲ್ಲಿದ್ದರೆ ಒಮ್ಮೆ ನೋಡಿ ಹೇಳುವಿಯಾ? ತುಂಬಾ ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರಿಯ ಸಿಂಧು,

ಇಲ್ಲಾ ನಾ ಈ ಕವಿತಯನ್ನು ಕೇಳಿಲ್ಲ/ಓದಿಲ್ಲ. ಈಗ ನೀವು ಹೇಳಿದ ಮೇಲೆ ಓದಬೇಕೆನಿಸುತ್ತಿದೆ. ನಿಮ್ಮಲ್ಲಿದೆಯೇ? ಇದ್ದರೆ ಮೈಲ್ ಮಾಡುವಿರಾ?

ತುಂಬಾ ಧನ್ಯವಾದಗಳು.

sachidananda K.N ಹೇಳಿದರು...

hello thejaswini madem,

the last four lines are really meaningfull...thanks to shivarudrappa...and u also...

ಗಿರೀಶ್ ರಾವ್, ಎಚ್ (ಜೋಗಿ) ಹೇಳಿದರು...

ಕಂಗ್ರಾಟ್ಸ್, ವರ್ಷ ತುಂಬಿದ ಹರ್ಷಕ್ಕೆ. ಬ್ಲಾಗ್ ಖುಷಿ ಕೊಟ್ಟಿತು. ಹೀಗೆ ಸಾಗಲಿ ಅಕ್ಷರ ಪಯಣ.

ಆಲಾಪಿನಿ ಹೇಳಿದರು...

ತೇಜಸ್ವಿನಿ,
ಆಗಾಗ ಹಾಡಿಕೊಳ್ಳುವ ಹಾಡುಗಳಲ್ಲಿ ಇದೂ ಒಂದು.ಖುಷಿಯಾಯ್ತು ಥ್ಯಾಂಕ್ಸ್

ಕುಕೂಊ.. ಹೇಳಿದರು...

ಹೌದು ತೊಂಬಾ ಸೊಗಸಾದ ಹಾಡು. ನಮ್ಮ ಎಂಟನೆತರಗತಿಯ ಹೊತ್ತಿಗೆಯಲ್ಲಿದ್ದ ಹಾಡಿದು ಅದು ಬಾಯಿಪಾಟಕ್ಕೆ. ಇಂತಹ ಸೊಗಸಾದ ಹಾಡು ನಮ್ಮೆಲ್ಲರ ಜೊತೆ ಹಂಚಿಕೊಂಡಿದ್ದಕ್ಕೆ ನನ್ನಿ. 'ಪ್ರೀತಿ ಪ್ರೇಮಗಳ' ಜಾಗದಲ್ಲಿ 'ಪ್ರೀತಿ ಸ್ನೇಹಗಳ' ಅಂತ ಬರಬೇಕು. ಆ ನುಡಿ ಬದಲಿಸಿ. ಶಿವರುದ್ರಪ್ಪನವರ ಹಾಡಬಹುದಾದ ಹಾಡುಗಳ ಒಂದು ಚಿಕ್ಕ ಹೊತ್ತಿಗೆ ಹೊರತಂದಿದ್ದರು ಅದರ ಹೆಸರು "ಎದೆ ತುಂಬ ಹಾಡಿದೆನು" ಅದರಲ್ಲಿ ಈ ಹಾಡು ಕೂಡ ಇದೆ. ಅಶ್ವತ್ ರವರು ತುಂಬಾ ಸೊಗಸಾಗಿ ಹಾಡಿದ್ದರೆ.ನಾನು ಜಳಕ ಮಾಡುವಾಗ ಹಾಡಿಕೊಳ್ಳುವ ಹಾಡುಗಳಲ್ಲಿ ಇದು ಕೂಡ ಒಂದು. ನನಗೆ ತುಂಬಾ ಸಿಟ್ಟು ಬಂದಾಗ ಈ ಹಾಡನ್ನು ಹಾಡಿಕೊಳ್ಳುತ್ತೇನೆ.

ನನ್ನಿ
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ.

sunaath ಹೇಳಿದರು...

ತೇಜಸ್ವಿನಿ,
ಸರಳತೆಯಲ್ಲಿ ಸೌಂದರ್ಯವಿದೆ ಎನ್ನುವ ಮಾತಿಗೆ ತಕ್ಕಂತಿದೆ ಈ ಕವನ. ನೆನಪಿಸಿದ್ದಕ್ಕೆ ಧನ್ಯವಾದಗಳು.
-ಸುನಾಥ ಕಾಕಾ

ತೇಜಸ್ವಿನಿ ಹೆಗಡೆ ಹೇಳಿದರು...

@ಸಚ್ಚಿದಾನಂದ ಅವರೆ,

ಇಂತಹ ಸರಳ, ಸುಂದರ ಅರ್ಥಭರಿತ ಕವನ ಕೊಟ್ಟಿದ್ದಕ್ಕಾಗಿ ಶಿವರುದ್ರಪ್ಪನವರಿಗೆ ನಾವೆಲ್ಲರೂ ಆಭಾರಿ! ಧನ್ಯವಾದಗಳು.

@ಜೋಗಿಯವರೆ,

ತಮ್ಮ ಪ್ರೋತ್ಸಾಹಭರಿತ ಪ್ರತಿಕ್ರಿಯೆಗೆ ಹಾಗೂ ಶುಭಾಶಯಗಳಿಗೆ ತುಂಬಾ ಧನ್ಯವಾದಗಳು.

@ಶ್ರೀದೇವಿ ಅವರೆ,

ನಿಮಗೆ ಸಂತೊಷವಾಗಿದ್ದಕ್ಕೆ ನನಗೂ ತುಂಬಾ ಸಂತೋಷವಾಯಿತು. ಧನ್ಯವಾದಗಳು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಕ್ಕೆ :)

@ಕಡಾಕೊಳ್ಳ ಅವರೆ,

ನನಗೂ ‘ಪ್ರೀತಿ ಸ್ನೇಹಗಳ’ ಎಂದೇ ಆಗಬೇಕೇನೋ ಎಂದೇ ಅನಿಸುತ್ತಿತ್ತು. ಶಾಂತಲಾ ಅವರು ಕೂಡಾ ಹೇಳಿದ್ದರು. ಸರಿಪಡಿಸಿರುವೆ. ನನ್ನಿ :)

@ಕಾಕಾ,

ನಿಮ್ಮ ಮಾತು ಸತ್ಯ.. ಸರಳತೆಯೊಳಗಿನ ಸೌಂದರ್ಯವನ್ನು ಕಾಣಿಸಿದ್ದಾರೆ ಶಿವರುದ್ರಪ್ಪನವರು. ಧನ್ಯವಾದಗಳು.

ಅಂತರ್ವಾಣಿ ಹೇಳಿದರು...

meaningful haaDu :)

Parisarapremi ಹೇಳಿದರು...

ಬಹುಶಃ ಈ ಕವಿತೆ ಇಷ್ಟವಿಲ್ಲದ ಕನ್ನಡಿಗ ಇರಲು ಸಾಧ್ಯವೇ ಇಲ್ಲ.

kanasu ಹೇಳಿದರು...

ತೇಜಸ್ವಿನಿಯವರೇ

ಒಂದು ಸಂದೇಹ ಇದೆ
ಜಿ.ಎಸ್.ಎಸ್ ರವರು ಈ ಪದ್ಯದಲ್ಲಿ ನಾಸ್ತಿಕ ವಿಚಾರವಾದವನ್ನ ತಿಳಿಹೇಳಿದ್ದಾರೆಯೇ?

"ಎಲ್ಲೋ ಹುಡುಕಿದೆ ಇಲ್ಲದ ದೇವರ.."

ತೇಜಸ್ವಿನಿ ಹೆಗಡೆ ಹೇಳಿದರು...

@ಶಂಕರ್,

ಧನ್ಯವಾದಗಳು. ಅರ್ಥವತ್ತಾದ ಮತ್ರವಲ್ಲ ಅರ್ಥಗರ್ಭಿತ ಹಾಡು ಕೂಡ.

@ಪರಿಸರಪ್ರೇಮಿ,

ಹೌದೇನೋ.. ಎಲ್ಲರಿಗೂ ಇಷ್ಟವಾಗುವ.. ಎಲ್ಲರೂ ಇಷ್ಟಪಡುವ ಹಡು ಇದು.

@ಕನಸು,

ನನಗೇನೋ ಹಾಗನಿಸುತ್ತಿಲ್ಲ. ಮನುಷ್ಯರು ಮನುಷ್ಯರನ್ನು ಕೊಲ್ಲುತ್ತಿರುವ ಈ ಕಾಲಕ್ಕೆ ಮಾನವತೆಯನ್ನು, ಪರಸ್ಪರ ಪ್ರೀತಿ, ಸ್ನೇಹ, ವಿಶ್ವಾಸ ಹಾಗೂ ಹೊಂದಾಣಿಕೆಯನ್ನು ಸಾರಿ ಹೇಳುತ್ತಿದೆ ಕವನ. ಮಾಡುವ ಪಾಪವನ್ನೆಲ್ಲಾ ಮಾಡಿ ದೇವರ ಗುಡಿ ಕಟ್ಟಿಸಿ ಪುಣ್ಯ ಕಟ್ಟಿಕೊಂಡೆ ಎನ್ನುವುದರಲ್ಲಿ ಎನೂ ಪಾರಮಾರ್ಥವಿಲ್ಲ.. ಪ್ರಸ್ಪರ ಪ್ರೀತಿಸುವುದರಲ್ಲಿ, ಒಬ್ಬರನ್ನೊಬ್ಬರು ಅರಿತು ಹೊಂದಿಕೊಂಡು ಬಾಳ್ವೆಮಾಡುವುದರಲ್ಲಿಯೂ ದೇವರನ್ನು ಕಾಣಬಹುದೆಂದು ಸರಳವಾಗಿ ಸುಂದರವಾಗಿ ವರ್ಣಿಸಿದ್ದಾರೆ. ಆತ್ಮ ದೈವೀ ಸ್ವರೂಪಿ ಅಂದಿದ್ದಾರೆ.. ಮನುಷ್ಯ ಮನುಷ್ಯನೊಳಗೆ ದೇವರನ್ನು ಕಂಡರೆ ಕೊಲೆ, ಸುಲಿಗೆ, ವಂಚನೆಗಳೇ ಇಲ್ಲವಾಗುವುದು ಅಲ್ಲವೇ? ಧನ್ಯವಾದಗಳು.

kanasu ಹೇಳಿದರು...

ಧನ್ಯವಾದಗಳು...

ಶಿವಪ್ರಕಾಶ್ ಹೇಳಿದರು...

ಇ ಕವಿತೆ ನನಗೆ ಶಾಲೆಯಲ್ಲಿರುವಗಿನಿಂದಲೂ ಅಚ್ಚು ಮೆಚ್ಚು.
ನನ್ನ ಜ್ಞಾಪಕಗಳನ್ನು ಮರುಕಳಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು.