ಭಾನುವಾರ, ಆಗಸ್ಟ್ 10, 2008

ನೀನಾರಿಗಾದೆಯೋ ಎಲೆ ಮಾನವ..?!!!


ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಹೋಗಲು ಸುಮಾರು ೮-೯ ತಾಸುಗಳೇ ಬೇಕು. ಬೆಳಿಗ್ಗೆ ೫-೫.೩೦ ಗಂಟೆಗೆ ಹೊರಟರೂ ಮಧ್ಯಾಹ್ನ ೨-೩ ಗಂಟೆಗೆ ತಲುಪುತ್ತೇವೆ. ಇದಕ್ಕಾಗಿ ಶಿರಾಡಿ ಘಾಟಿಯ ಸುಂದರ ಕುಳಿಗಳಿಗೆ, ಎಂದೂ ಮುಗಿಯದ ಕಾಂಕ್ರೀಟ್ ಕಾಮಗಾರಿಗೆ ಧನ್ಯವಾದಗಳನ್ನು ಹೇಳಲೇ ಬೇಕು.

ನೆಲಮಂಗಲದವರೆಗಿನ ಟ್ರಾಫಿಕ್ ತಪ್ಪಿಸಿಕೊಳ್ಳಲು ಚುಮು ಚುಮು ಬೆಳೆಗ್ಗೆಯೇ ಎದ್ದು ಹೊರಡುವಾಗ ಕಣ್ಣ ನಿದ್ದೆ ಇನ್ನೂ ಆರಿರದಿರುವುದರಿಂದ ಒಂದು ತರಹದ ಜಡತ್ವ, ಆಲಿಸಿತನ ಮೈಗೂಡಿರುತ್ತದೆ. ಆದರೆ ಅದೇನೋ ಏನೋ ನೆಲಮಂಗಲವನ್ನೊಮ್ಮೆ ದಾಟಿದ ಕೂಡಲೇ ಅದೆಲ್ಲಿಂದಲೋ ಒಂದು ಚುರುಕುತನ ಮೂಡುತ್ತದೆ. ಸೂರ್ಯೋದಯದ ರಂಗು ತುಂಬಿಕೊಂಡ ತಿಳಿ ಬಾನು ಕಣ್ಣಿಗೆ ಹಬ್ಬ ಕೊಡುವಂತಿದ್ದರೆ, ತಂಗಾಳಿಯ ಹಿತ ಸ್ಪರ್ಶ ಕಚಗುಳಿ ಇಡುತ್ತದೆ. ಭೀಮಸೇನ ಜೋಶಿಯವರ "ಕರುಣಾಕರ ನೀ ಎಂಬುವದ್ಯಾತಕೋ..." ಹಾಡು ಹೊಮ್ಮುವಾಗ ಅಳಿದುಳಿದ ಜಡತ್ವ ಮರೆಯಾಗುತ್ತದೆ.

ಆದರೆ ಇವೆಲ್ಲವುಗಳ ಜೊತೆಗೆ ಮನಸ್ಸಿಗೆ ಮುದ ನೀಡುತ್ತಿದ್ದ ದೃಶ್ಯವೆಂದರೆ ಹಾಸನದವರೆಗೂ ದಾರಿಯ ಇಕ್ಕೆಲಗಳಲ್ಲೂ ಹಬ್ಬಿ ತಂಪೆಳಲ ನೀಡುತ್ತಾ, ಹಕ್ಕಿಗಳ ಚಿಲಿಪಿಲಿ ಹಾಡ ಕೇಳಿಸುತ್ತಾ, ಬಿಸಿಲು ನೆರಳಿನಾಟವ ಕಾಣಿಸುತ್ತಾ, ಅಲ್ಲಲ್ಲಿ ದಾರಿಗಳುದ್ದಕ್ಕೂ ಹೂ ಚೆಲ್ಲಿ ಸ್ವಾಗತ ಕೋರುವಂತಿದ್ದ ಬೃಹತ್ ಮರಗಳು! ಇವುಗಳನ್ನು ನೋಡುತ್ತಾ ಸಾಗುವುದೇ ಒಂದು ಕಣ್ಣಿಗೆ ಹಬ್ಬ. ಆಲದ ಮರ, ಮಾವಿನ ಮರ, ಹಲಸಿನ ಮರ, ನುಗ್ಗೆ- ಹೀಗೆ ವಿವಿಧ ಜಾತಿಯ ಮರಗಳು. ಬಿದ್ದು ಹುಟ್ಟಿದ್ದೋ ಇಲ್ಲಾ ಯಾರೋ ಪುಣ್ಯಾತ್ಮರು ನೆಟ್ಟಿದ್ದೋ.. ಈ ಮರಗಳು ನನ್ನ ಪ್ರಯಾಣದ ಆಯಾಸವನ್ನಂತೂ ಕಡಿಮಾಡುತ್ತಿದ್ದವು.

ಆದರೆ ಈಗ...!!!

ಆರೇಳು ತಿಂಗಳುಗಳ ಕಳೆದು ಮತ್ತೆ ನಾನು ಅದೇ ದಾರಿಯಲ್ಲಿ ಪ್ರಯಾಣಿಸುವಾಗ ಕಂಡ ದೃಶ್ಯಗಳು ನನ್ನಲ್ಲಿ ಅತೀವ ನೋವು ಹಾಗೂ ವೇದನೆಯನ್ನು ತುಂಬಿದವು. ಸರಕಾರದ ಮಹಾನ್ ಚತುಷ್ಪಥ ಯೋಜನೆ ಎನ್ನುವುದು ಈ ಮರಗಳನ್ನೆಲ್ಲಾ ನೆಲಸಮ ಮಾಡಿದೆ.

ಕಾರಣ...??!!

ವಾಹನಗಳ ದಟ್ಟಣೆ ಹೆಚ್ಚಾಗಿರುವುದು, ಅಪಘಾತಗಳನ್ನು ತಡೆಯಲು, ತಾಸುಗಳ ಕಾಲ ವಾಹನಗಳ ನಿಲುಗಡೆಯನ್ನು ನಿಲ್ಲಿಸಲು ಈ ಕ್ರಮ. ಚತುಷ್ಪಥ ರಸ್ತೆಯಲ್ಲಿ ವೇಗವಾಗಿ ಸಾಗಿ ಬೇಗ ಗಮ್ಯ ತಲುಪಿ ಸಮಯ ಉಳಿಸಲು ಈ ಮರಗಳನ್ನು ಅಳಿಸಿದ್ದಾರೆ!

ಬೀಜವಾಗಿ ಮಣ್ಣಸೇರಿ ಸಸಿಯಾಗಿ, ಮರವಾಗಿ, ಬೃಹತ್ತಾಗಿ ಬೆಳೆದು ಹಬ್ಬಲು ಅದೆಷ್ಟೋ ವರುಷಗಳು ಬೇಕಾದವು. ಯಾರೂ ನೀರುಣಿಸಲಿಲ್ಲ, ಕಸಿ ಮಾಡಲಿಲ್ಲ, ಗೊಬ್ಬರ ಹಾಕಲಿಲ್ಲ. ಪ್ರಕೃತಿಯೇ ಮಮತೆಯಿಂದ ಬೆಳೆಸಿದ್ದ ನೂರಾರು ಮರಗಳು ಈಗಿಲ್ಲ! ಅದೆಷ್ಟೋ ವರುಷಗಳಿಂದ ಹಲವಾರು ಪಕ್ಷಿಗಳಿಗೆ ವಾಸಸ್ಥಾನವಾಗಿದ್ದ, ಅನೇಕ ಜೀವಜಂತುಗಳಿಗೆ ಆಶ್ರಯ ನೀಡಿದ್ದ, ಉರಿ ಬಿಸಿಲಾಗಿ ಬಸವಳಿದ ಮನುಷ್ಯರಿಗೆ ತಂಪೆಳಲ ನೀಡಿದ್ದ, ತನ್ನೊಳಗಿನ ಹೂವು, ಕಾಯಿ, ಹಣ್ಣು, ಟೊಂಗೆ, ಎಲೆ-ಎಲ್ಲವನ್ನೂ ನೀಡಿ ಧಾರೆಯೆರೆದ ನಿಃಸ್ವಾರ್ಥ ಮರಗಳನ್ನು ಕೆಲವೇ ದಿನಗಳಲ್ಲಿ ನೆಲಸಮ ಮಾಡಲಾಗಿದೆ!ಅದೇಕೋ ಏನೋ ಇತ್ತೀಚಿಗೆ ವಾಹಿನಿಯೊಂದರಲ್ಲಿ ಬರುತ್ತಿರುವ ಧಾರಾವಾಹಿಯೊಂದರ ಹಾಡಿನ ಸಾಲೊಂದು ನೆನಪಾಯಿತು..

"ಮಣ್ಣ ತಿಂದು ಸಿಹಿ ಹಣ್ಣನೀವ ಮರ
ನೀಡಿ ನೀಡಿ ಮುಕ್ತ..
ಬೇವ ಅಗಿವ ಸವಿಗಾನದ ಹಕ್ಕಿ
ಹಾರಿ ಹಾರಿ ಮುಕ್ತ..."

ಒಂದು ಕಾಲದಲ್ಲಿ ನಳನಳಿಸಿ ನಗುತ್ತಿದ್ದ ಹೆಮ್ಮೆಯಿಂದ ತೆಲೆಯೆತ್ತಿ ಬಾನಂಚ ಮುಟ್ಟುವಂತಿದ್ದ ಮರಗಳ ದುರ್ಗತಿ ಕಂಡು ತುಂಬಾ ಸಂಕಟವಾಯಿತು. ಆ ದೃಶ್ಯಗಳನ್ನೇ ಈ ಸಲ ಸೆರೆ ಹಿಡಿದು ನಿಮ್ಮ ಮುಂದೆ ಇಟ್ಟಿರುವೆ.



ಎಷ್ಟು ಸಿಕ್ಕರೂ ಇನ್ನಷ್ಟು ಬೇಕೆಂದು ಬೊಬ್ಬಿರಿವ ಬಕಾಸುರನಂತಾಗಿರುವ ಮನುಷ್ಯ. ಕೇವಲ ತನ್ನ ಸವಲತ್ತಿಗೋಸ್ಕರ ಅಸಂಖ್ಯಾತ ಜೀವ ಜಂತುಗಳನ್ನು ನಿರ್ಗತಿಕರನ್ನಾಗಿಸಲು ನಮಗೆ ಯಾವ ಹಕ್ಕಿದೆ? "ನೀವೂ ಜೀವಿಸಿ ನಮ್ಮನ್ನೂ ಜೀವಿಸಲು ಬಿಡಿ" ಎಂದು ದೈನ್ಯತೆಯಿಂದ ಕೇಳಿಕೊಳ್ಳುವಂತಿದೆ ಪ್ರಕೃತಿ. ಆದರೂ ನಾವು ಪದೇ ಪದೇ ಅದರ ಸಹನೆಯನ್ನು ಮಿತಿ ಮೀರಿ ಪರೀಕ್ಷಿಸುತ್ತಿದ್ದೇವೆ. ಇನ್ನೂ ನಮ್ಮ ಕ್ರೌರ್ಯ ನಿಲ್ಲದೇ ಹೋದರೆ ಪ್ರಕೃತಿಯೇ ಸಂಪೂರ್ಣ ತಿರುಗಿ ಬಿದ್ದೀತು. ಈಗಾಗಲೇ ನಮ್ಮ ಅಪರಾಧದಿಂದ ಸುನಾಮಿ, ಕಡಲ್ಗೊರೆತ, ಅತಿವೃಷ್ಟಿ, ಅನಾವೃಷ್ಟಿ - ಮುಂದಾದ ವೈಕೋಪಗಳನ್ನು ಅನುಭವಿಸಿದ್ದೇವೆ.. ಅನುಭವಿಸುತ್ತಲೂ ಇದ್ದೇವೆ. ಆದರೂ ನಾವು ಅದನ್ನು ನಿರ್ಲಕ್ಷಿಸುತ್ತಾ ಬಂದಿದ್ದೇವೆ.

ಪ್ರತಿ ವರ್ಷವೂ ಜೂನತಿಂಗಳಿನಲ್ಲಿ ಕಾಟಾಚಾರಕ್ಕೆ ಸರಕಾರ "ವನಮಹೋತ್ಸವವನ್ನು" ಆಚರಿಸುತ್ತದೆ. ಆದರೆ ಇನ್ನೊಂದೆಡೆ ಇಂತಹ ಯೋಜನೆಗಳ ಹೆಸರಿನಡಿಯಲ್ಲಿ "ವನದಹೋತ್ಸವವನ್ನೇ" ಜಾರಿಗೆ ತರುತ್ತದೆ! ನೂರಾರು ಮರಗಳ ನಾಶವಾಗುತ್ತಿರುವಾಗಲೂ ಈ ಕಡೆ ಯಾಕೆ ಯಾವ ಸಂಘಟನೆಯೂ ದೃಷ್ಟಿ ಹರಿಸಿಲ್ಲ? ಈ ಮರಗಳನ್ನು ಉಳಿಸಲು ಯಾರೂ ಯಾಕೆ ಅಪ್ಪಿಕೋ ಚಳುವಳಿ ನಡೆಸಿಲ್ಲ? ಇವುಗಳೆಲ್ಲಾ ನಾಡ ಮರಗಳೆಂದೇ?! ಕಾಡು ಮರಗಳಲ್ಲವೆಂದೇ?!
ಇದೇ ರೀತಿ ಮುಂದುವರಿದರೆ ಈ ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವ ಬೋಳು ಕಲ್ಲುಗುಡ್ಡೆಯೇ ಭೂಮಿಯ ತುಂಬೆಲ್ಲಾ ತುಂಬಿಕೊಂಡು, ಆ ಬುಡಕಡಿದು ಗೆದ್ದಲು ಹಿಡಿದ ಮರದ ತುಂಡಿನ ಸ್ಥಿತಿ ನಮ್ಮದಾಗುವುದು.



`ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು'-ಆದರೆ ಹಳೆಬೇರನ್ನೇ ನಾಶಮಾಡಿದರೆ ಹೊಸ ಚಿಗುರಿನ ಪ್ರಶ್ನೆಯೇ ಏಳದು. ಹೊಸ ಹೊಸ ಅನ್ವೇಷಣೆಗಳನ್ನು ಹೊರತರುತ್ತಾ, ಹಳೆಯ ತತ್ವಗಳ ಸತ್ವವನ್ನೇ ತೂರಿಬಿಟ್ಟರೆ ಅಧರ್ಮವೇ ಹೆಚ್ಚಾಗಿ ಜೀವನ ರಸವೇ ಬತ್ತಿಹೋಗುವುದು. ಬರಿಯ ಕಸವಾಗುವುದು ಈ ಮನುಕುಲ. ಋಷಿ ವಾಕ್ಯದೊಡನೆ ವಿಜ್ಞಾನವು ಕೂಡಿದರೆ ಮಾತ್ರ ಈ ಜಗತ್ತು ಉಳಿದೀತು ಬೆಳೆದೀತು.
---***---

28 ಕಾಮೆಂಟ್‌ಗಳು:

ಅಂತರ್ವಾಣಿ ಹೇಳಿದರು...

ಪ್ರಕೃತಿಯ ಬಗ್ಗೆಗಿನ ಕಾಳಜಿ ಮೆಚ್ಚಿಗೆಯಾಯಿತು.

ಮಾನವನ ಅನುಕೂಲತೆಗೆ ಪ್ರಕೃತಿ ನಾಶ ಸರಿಯಲ್ಲ. ವನಮಹೋತ್ಸವ ಮಾಡಿದರೂ ಸಹ ಅದು ಹೆಮ್ಮರವಾಗಲು ಬೇಕಾದ ಸಮಯ ಅಧಿಕವಾಗಿದೆ.

Shree ಹೇಳಿದರು...

ಇಂದು ಇದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ, ಏನು ಮಾಡಲಿಕ್ಕೂ ಆಗದ ಪರಿಸ್ಥಿತಿ...

ಹಾಂ, ಮುಕ್ತದ ಹಾಡಿನ ಸಾಲು ಹೀಗಿದೆ...

(ಗಂಡುದನಿಯಲ್ಲಿ)
ನೀರ ತಿಂದು ಸಿಹಿ ಹಣ್ಣ ಕೊಡುವ ಮರ
ನೀಡಿ ನೀಡಿ ಮುಕ್ತ..
ಬೇವ ಅಗಿವ ಸವಿಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ..."

(ಹೆಣ್ಣುದನಿಯಲ್ಲಿ)
ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
ನೀಡಿ ನೀಡಿ ಮುಕ್ತ..
ಬೇವ ಅಗಿವ ಸವಿಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ..."

ನನಗಿಷ್ಟವಾದ, relevant ಆಗಿರುವ ಇದರದೇ ಇನ್ನೂ ಕೆಲ ಸಾಲುಗಳು...

ಹಸಿರ ತೋಳಿನಲಿ ಬೆಂಕಿಯ ಕೂಸ
ಪೊರೆವುದು ತಾಯಿಯ ಹೃದಯ...
ಮರೆಯುವುದುಂಟೇ ಮರೆಯಲಿ ನಿಂತೇ
ಕಾಯುವ ಕರುಣಾಮಯಿಯ...

ಆಲಾಪಿನಿ ಹೇಳಿದರು...

ತೇಜಸ್ವಿನಿಯವರೆ,
ಸುಮಾರು ಆರು ತಿಂಗಳ ಹಿಂದೆ, ಮೂಡಬಿದಿರೆಯಿಂದ ವಾಪಸ್ ಬರ್‍ತಿರೋವಾಗ ಮಗಿಲಿಗೆ ಮೊಗಮಾಡಿ ನಿಂತ ಈ ಮರಗಳಿಂದು ಹೀಗೆ ವಸುಂಧರೆಯ ಮಡಿಲಲ್ಲಿ ಬಿಕ್ಕುತ್ತಿರುವುದನ್ನ ನೋಡಿ ನಿಜವಾಗಲೂ ಬೇಜಾರಾಯಿತು. ನಿಜ ಎಚ್‌.ಎಸ್‌.ವಿಯವರ ಸಾಲುಗಳಲ್ಲಿ ಎಂಥ ಆಳಅರ್ಥವಿದೆಯಲ್ಲ.

bhadra ಹೇಳಿದರು...

ನಾವ್ಯಾರಿಗೂ ಆಗೋಲ್ವೋ
ನಮಗೆ ನಾವೂ ಆಗೋಲ್ವೋ
ಪರಿಸರ ನಮ್ಮೆದುರು ಸಡ್ಡು ಹೊಡೆದು
ನಿಂತಾಗಲೂ ತಿಳಿಯಲಾರೆವು
ಕಾರಣವಾಗುತಿಹೆವು ಪರಿಸರ ಮಾಲಿನ್ಯಕೆ
ಮಳೆ ಗಾಳಿ ಬೆಳಕು ಸಿಗದಿರೆ ಬೈಗುಳದ ಕಾಯಕಕೆ
ಅದರ ಕಾರಣ ತಿಳಿದರೂ ತಿಳಿಯದಂತಿಹೆವು
ಕಂಡರೂ ಕಾಣದಂತೆ ಮುನ್ನಡೆಯುತಿಹೆವು

೨೫ ವರುಷಗಳ ಹಿಂದೆ ನಮ್ಮ ಕಾಲೋನಿ ಪ್ರಾರಂಭವಾದಾಗ - ಈ ಕಾಂಕ್ರೀಟ್ ಕಾಡಿಗೆ ವಿರುದ್ಧವಾಗಿ ಹತ್ತು ಹಲವಾರು ಮರಗಳನ್ನು ನೆಟ್ಟು ಪೋಷಿಸುತ್ತಾ ಬಂದಿರುವೆವು. ಕಳೆದ ಭಾನುವಾರ ಮಧ್ಯಾಹ್ನ ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ದಢ್ ಎಂಬ ಶಬ್ದ ಕೇಳಿಬಂದಿತು. ಅಕ್ಕಪಕ್ಕದವರಂತೆ ನಾನೂ ಕೆಳಗಿಳಿದು ಹೋಗಿ ನೋಡಿದರೆ, ಎತ್ತರಕ್ಕೆ ಬೆಳೆದಿದ್ದ ಮರವನ್ನು ತಲೆಯಿಂದ ಸೊಂಟದವರೆವಿಗೆ ಕತ್ತರಿಸುತ್ತಿರುವುದನ್ನು ಕಾಣುವುದಾ? ನಿಸರ್ಗದ ಮಹಿಮೆಯ ಬಗ್ಗೆ ಹೇಳ ಹೊರಟರೆ, ಅವರುಗಳು ನಮ್ಮನ್ನು ಕ್ಯಾರೆ ಅಂತಲೂ ಅನ್ನಲಿಲ್ಲ. ಸ್ವಲ್ಪ ಜೋರು ಮಾಡಿದ್ದಕ್ಕೆ, ’ನಾವೇನು ಮಾಡುವುದು, ಮರಗಳು ಅವ್ಯವಸ್ಥಿತವಾಗಿ ಬೆಳೆದಿವೆ, ಕತ್ತರಿಸಬೇಕೆಂದು ಬ್ಯಾಂಕಿನ ಆಡಳಿತ ಮಂಡಳಿ ನಮಗೆ ಕತ್ತರಿಸುವ ಕೆಲಸ ಕೊಟ್ಟಿದ್ದಾರೆ - ನಾವು ಅದನ್ನು ಮಾಡುತ್ತಿದ್ದೇವೆ’ ಎನ್ನುವುದಾ? ಸರಿ ಅಷ್ಟಕ್ಕೇ ನಿಲ್ಲಿಸಿ, ನಾಳೆ ನಾವು ಆಡಳಿತ ಮಂಡಳಿಯೊಂದಿಗೆ ಮಾತನಾಡುವೆವು, ಎಂದರೂ ಕೇಳದೇ, ಹಾಗೆಯೇ ಕೆಲಸ ಮುಂದುವರಿಸಿದರು. ಅದೇನೋ, ಹಾಳು ಮಾಡುವ ಕಾಯಕದಲ್ಲಿ ಎಲ್ಲಿಲ್ಲದ ಹುಮ್ಮಸ್ಸು ಬರುವುದಂತೆ. ಅಷ್ಟು ಹೊತ್ತಿಗೆ ಸರಿಯಾಗಿ ಮರದ ಒಂದು ಬೊಡ್ಡೆ ದಢ್ ಎಂದು ನನ್ನ ಕಾರಿನ ಹಿಂಬಾಗದ ಗಾಜಿನ ಮೇಲೆಯೇ ಬೀಳಬೇಕಾ? :o ಒಂದೇ ಕ್ಷಣದಲ್ಲಿ ಕಾರಿನ ಗಾಜು ನುಚ್ಚು ನೂರಾಗಿ, ಕಾರು ಅಬ್ಬೆಪಾರಿಯಾಗಿ ನನ್ನತ್ತ ನೋಡುತ್ತಲಿತ್ತು. ಕೆಲಸದವರೆಲ್ಲರೂ ಇಲ್ಲಿಗೆ ಬಂದೇ ಇಲ್ಲವೇನೋ ಎಂಬಂತೆ ಒಂದೇ ಕ್ಷಣದಲ್ಲಿ ಮಾಯವಾಗಿದ್ದರು. ಹಿರಿಯ ಅಧಿಕಾರಿಗಳ್ಯಾದರೂ ಬಂದು ನೋಡಲಿ ಎಂದು ಹೊಸ ಗಾಜನ್ನು ತೊಡಿಸಿಲ್ಲ. ಆದರೆ ಕಾರು ನಾಯಿಮರಿಗಳಿಗೆ ಮನೆಯಾಗಿ ಹೋಗಿದೆ.

Sushrutha Dodderi ಹೇಳಿದರು...

ನಿಜ.. ಬೇಸರವಾಗತ್ತೆ.. :(

Shrikara K ಹೇಳಿದರು...

baraha manamuttuvanthide

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜು...
ಒಳ್ಳೆಯ ಲೇಖನ. ನಿಜವಾಗಿಯೂ ಶೋಚನೀಯ ಸಂಗತಿ.

ಜನಸಂದಣಿ-ಅದರನುಕೂಲಕ್ಕೆ ತಕ್ಕಂತೆ ವಸತಿ ಯೋಜನೆ, ವಾಹನದಟ್ಟಣೆ ಇವೆಲ್ಲವುಗಳ ಅನುಕೂಲಕ್ಕಾಗಿ ತಮ್ಮಷ್ಟಕ್ಕೆ ತಾವಿರುವ ಮರಗಳಿಗೆ ಕೊಡಲಿ! ಏನನ್ನೋಣ? ಅಷ್ಟೇ ಯಾಕೆ...ಇನ್ನು ಆ ಕಡೆ ಹೋದಂತೆ ಗೊತ್ತಲ್ಲ, ಶಿರಸಿ ಕಡೆಯ ರಸ್ತೆಗಳ ಅಗಲೀಕರಣ!! ಮರಗಳನ್ನಲ್ಲ, ಮನೆಗಳನ್ನೇ ಉರುಳಿಸಿದ್ದಾರೆ!! ಮನೆಯ ಮುಂದಿನ ಮೆಟ್ಟಿಲುಗಳನ್ನ ಮನೆಯೊಳಗೇ ಕಟ್ಟಿಕೊಳ್ಳುವ ಪರಿಸ್ಥಿತಿ ಬಂದಿದ್ದಾಗಿದೆ. ಮುಂದೆ ಮುಂದೆ ಹೋದಂತೆ ನಮಗೇ ಇಳೆಯಲ್ಲಿ ಇಳಿಯಲು ನೆಲೆಯಿಲ್ಲದೇ ನಮ್ಮನ್ನ ನಾವೇ ಕಡಿದುಕೊಳ್ಳೋ ಪರಿಸ್ಥಿತಿ ದೂರವಿಲ್ಲವೇನೋ ಅನಿಸುತ್ತಿದೆ ಅಲ್ಲವಾ?
ಓದುತ್ತಲೇ ಮನ ಭಾರವಾಗತ್ತೆ. ನಿಜ, ಬೇಜಾರಾಗ್ತಿದೆ ಕಣೇ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜು...
`ಹೊಸ ಚಿಗುರು ಹಳೆ ಬೇರು ಕೂಡಿದರೆ ಮರ ಸೊಗಸು' ಈ ಸಾಲು
`ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು' ಹೀಗಿದೆ ಅಂತ ನನ್ನ ಅನಿಸಿಕೆ.

Unknown ಹೇಳಿದರು...

ನಮಗೆಷ್ಟಿದ್ರೂ ಸಾಕಾಗಲ್ಲ ರೀ. ಆದ್ರೆ ಪ್ರಕೃತಿ ಖ೦ಡಿತಾ ಪಾ್ಠ ಕಲಿಸುತ್ತೆ ನಮಗೆ

~ ಹರ್ಷ

ಚಿತ್ರಾ ಹೇಳಿದರು...

ಪ್ರಿಯ ತೇಜಸ್ವಿನಿ,

" ಈ ಭೂಮಿ ನಮ್ಮದಲ್ಲ, ಇದು ನಮ್ಮ ಮುಂದಿನ ಪೀಳಿಗೆಯದು.ಅವರ ಈ ಆಸ್ತಿಯನ್ನು ಜತನವಾಗಿಡುವುದು ನಮ್ಮ ಕರ್ತವ್ಯ " ಎಂದು ಎಲ್ಲೋ ಓದಿದ ನೆನಪು .ಈ ಭೂಮಿಯನ್ನು ಹಾಳುಗೆಡವಲು ನಮಗ್ಯಾವ ಹಕ್ಕಿದೆ?

ಪ್ರತಿ ಸಲ ಗೇರುಸೊಪ್ಪಾ , ದೇವಿಮನೆ ಹಾಗೂ ಅರೆಬೈಲು ಘಟ್ಟಗಳಲ್ಲಿ ಪ್ರಯಾಣಿಸುವಾಗೆಲ್ಲ ಸಂಕಟವಾಗುತ್ತದೆ. ಬೇಕಾಬಿಟ್ಟಿಯಾಗಿ ಕಾಡು ಕಡಿಯುವ ಬಗ್ಗೆ,ಪ್ರಕೃತಿಯ ಮೇಲೆ ದಿನನಿತ್ಯ ರಾಜಾರೋಷವಾಗಿ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ದುಃಖವಾಗುತ್ತದೆ.ಇಂಥದೇ ನೋವನ್ನು ನಾನೂ ಕೂಡ ನನ್ನ ಬ್ಲಾಗೊಂದರಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.
ಹೀಗೇ ಮುಂದುವರಿದಲ್ಲಿ ಮುಂದೇನಾಗಬಹುದು ಎಂಬ ಕಲ್ಪನೆಯೇ ಭಯ ಹುಟ್ಟಿಸುತ್ತದೆ.ಈ ಮಾರಣ ಹೋಮವನ್ನು ತಡೆಯಲು , ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ನಾವೇನು ಮಾಡಬಹುದು ಎಂದು ಯೋಚಿಸುವ ಅಗತ್ಯವಿದೆ ಎನಿಸುತ್ತದೆ

ಸಂದೀಪ್ ಕಾಮತ್ ಹೇಳಿದರು...

ಬೇಜಾರಾಗುತ್ತೆ ನಿಜ ! ಆದ್ರೆ "ಕುಚ್ ಪಾನೇ ಕೇ ಲಿಯೆ ಕುಚ್ ಖೋನಾ ಪಡ್ತಾ ಹೆ " ಅನ್ನೋ ಮಾತಿದೆಯಲ್ಲ??
ರಸ್ತೆ ಮಾಡ್ಬೇಕಾದ್ರೆ ಮರ ಕಡೀಲೇ ಬೇಕಲ್ವಾ??ಪರ್ಯಾಯ ಉಪಾಯಗಳಿದ್ರೆ ನೋಡ್ ಬಹುದೇನೋ??

ಇನ್ನೊಂದು ವಿಷಯ ! ದಿನ ಬಾಂಬ್ ಬ್ಲಾಸ್ಟು ,ನೆರೆ ,ಬರ ಅಂತ ನೂರಾರು ಜನ ಸಾಯ್ತಾ ಇದ್ದಾರೆ ಅವರ ಬಗ್ಗೇನೆ ತಲೆ ಕೆಡಿಸಿಕೊಳ್ಳದವರು ಮರಗಳ ಬಗ್ಗೆ ಹೇಗೆ ತಲೆ ಕೆಡಿಸಿಕೊಳ್ಳುತ್ತಾರೆ ಅಲ್ವ??
.
.
.
ನಮಗೆ ಸಾ ಮಿಲ್ ಇತ್ತು (ಈಗ ಇಲ್ಲ) .ದಿನಾ ಮರಗಳನ್ನು ಭಾಗ ಮಾಡೋದನ್ನು ನೋಡ್ತಾ ಬೆಳೆದೋನು ನಾನು ,ಆದ್ರೆ ನನ್ನ ಅನಿಸಿಕೆಗೂ ಅದಕ್ಕೂ ಸಂಬಂದ ಇಲ್ಲ :D

ತೇಜಸ್ವಿನಿ ಹೆಗಡೆ ಹೇಳಿದರು...

@ಶಂಕರ್ ಅವರೆ,

ನಿಜ. ಹಲವಾರು ವರ್ಷಗಳ ನಂತರ ಹೆಮ್ಮೆರವಾದಾಗ, ಅಭಿವೃದ್ಢಿಯ ಯೋಜನೆಯಡಿ ವನದಹೋತ್ಸವವಾಗಿ ಕೆಲವೇ ಗಂಟೆಗಳಲ್ಲಿ ಮರಗಳ ನಾಶವಾಗುತ್ತದೆ!!!

@ಶ್ರೀ ಅವರೆ,

ನಮ್ಮಿಂದೇನೂ ಮಾಡಲಾಗದ ಸ್ಥಿತಿ.. ಅಸಹಾಯಕತೆ. ಅದಕ್ಕೇ ತಾನೇ ಮರಗಳು ಬಲಿಯಾಗುತ್ತಿರುವುದು!!

ಇದೇ ಹಾಡಿನ ಇನ್ನೊಂದು ಸೊಲ್ಲೂ ನನಗೆ ತುಂಬಾ ಅಚ್ಚುಮೆಚ್ಚು..

"ಇರುಳ ವಿರುದ್ಢ, ಬೆಳಕಿನ ಯುದ್ಢ
ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೇ ನಡೆಯಲೇ ಬೇಕು
ಸೋಲಿಲ್ಲದ ಹೋರ್‍ಆಟ"

ಈಗಿನ ಪರಿಸ್ಥಿತಿಯಲ್ಲಿ ಇದು ನಮ್ಮ ಮೂಲಮಂತ್ರವಾಗಬೇಕು.

@ಶ್ರೀದೇವಿಯವರೆ,

ನನಗೂ ತುಂಬಾ ದುಃಖವಾಗಿತ್ತು.. ಆ ದೃಶ್ಯನೋಡಿ!!! ಶ್ರೀಯವರು ಹೇಳಿರುವಂತೆ ಏನೂ ಮಾಡಲೂ ಸಾಧ್ಯವಿಲ್ಲವೇನೋ?!!!

@ಶ್ರೀನಿವಾಸರೆ,

ಇದು ವಾಸ್ತವ. ಹಾಗಾಗಿ ಇಲ್ಲೆ ಪ್ರಶ್ನಿಸಿದವನಿಗೇ ಶಿಕ್ಷೆ! ನಾಯಿಮರಿಗಳಿಗೆ ಆಶ್ರಯನೀಡುವಷ್ಟಾದರೂ ಕಾರನ್ನು ಉಳಿಸಿದ್ದೇ ಹೆಚ್ಚು!!

@ಸುಶ್ರುತ,

ಹೌದು..ಬೇಜಾರಾಗುತ್ತೆ :-(

ಶ್ರೀಕರ ಅವರೆ,

ಮೆಚ್ಚುಗೆಗೆ ಧನ್ಯವಾದಗಳು.

@ಶಾಂತಲಾ,

ಮೊದಲಿಗೆ ತುಂಬಾ ಧನ್ಯವಾದಗಳು ತಪ್ಪನ್ನು ಸರಿಪಡಿಸಿದ್ದಕ್ಕೆ. ಲೇಖನದಲ್ಲಾದ ತಪ್ಪನ್ನು ಸರಿಪಡಿಸಿದ್ದೇನೆ. ಹೀಗೇ ತಿದ್ದುತ್ತಿದ್ದರೆ ತುಂಬಾ ಸಂತೋಷ.

ತನಗಾಗಿ, ತನ್ನವರಿಗಾಗಿ ಮಾತ್ರ ಯೋಚಿಸುವ ಯೋಜಿಸುವ ಮನುಷ್ಯ ಪ್ರಕೃತಿಯನ್ನೇ ಕಡೆಗಣಿಸುತ್ತಿದ್ದಾನೆ. ಮುಂದೆ ಇದೇ ಅವನ ವಿನಾಶಕ್ಕೆ ಕಾರಣವಾಗುವುದು. ಮುಂದೊಂದಿನ ಮೆಟ್ಟಿಲಿನ ಮೇಲೆ ಮನೆಕಟ್ಟುವ ಪರಿಸ್ಥಿತಿ ಬಂದರೂ ಆಶ್ಚರ್ಯವೇನಿಲ್ಲ!!

@ಶ್ರೀಹರ್ಷ ಅವರೆ,

ಖಂಡಿತ ಪಾಠಕಲಿಸುತ್ತದೆ. ಕಲಿಸುವುದೇನು ಬಂತು.. ಪಾಠಕಲಿಸುತ್ತಲೇ ಇದೇ. ಈಗೇನೋ ಬರಿ ಸಣ್ಣ ಪುಟ್ಟ ಪ್ರಳಯವಾಗುತ್ತಿದೆ...ಮಾನವನ ದುರಾಸೆ ಹೀಗೇ ಮುಂದುವರಿದರೆ, ಮುಂದೊಂದಿನ ಸರ್ವನಾಶವಾಗುವುದು!!

ತೇಜಸ್ವಿನಿ ಹೆಗಡೆ ಹೇಳಿದರು...

@ಚಿತ್ರಾ,

ಹೌದು. ಪ್ರಕೃತಿಯ ನಾಶವನ್ನು ತಡೆಯಲು ಏನುಮಾಡಬಹುದು? ಏನುಮಾಡಬೇಕು ಎಂದು ಯೋಚಿಸಲೇ ಬೇಕು. ಇದನ್ನು ಸರಕಾರದ ಕರ್ತವ್ಯಕ್ಕೆ(?) ಬಿಡುವುದು ಮೂರ್ಖತನ. ನಮ್ಮಲ್ಲಾದ ಕೊಡುಗೆಯನ್ನು ಹೇಗೆ ಕೊಡಬಹುದು? ಯಾವರೀತಿ ತಡೆಯಬಹುದು ಈ ಮಾರಣಹೋಮವನ್ನು? ಉತ್ತರ ತಿಳಿದವರು ಹೇಳಬೇಕಾಗಿ ವಿನಂತಿ.

ಸಂದೀಪ್ ಅವರೆ,

ಒಪ್ಪುವೆ "ಕುಚ್ ಪಾನೇ ಕೇ ಲಿಯೆ ಕುಚ್ ಖೋನಾ ಪಡ್ತಾ ಹೆ"...ಆದರೆ "ಕುಚ್ ಪಾನೇಕೇಲಿಯೇ ಸಬ್ ಕುಚ್ ಖೋನಾ.." ಎಷ್ಟು ಸರಿ?!!
ಇಂದು ನಾವು ಬದುಕಿದರೆ ಸಾಕು ಮುಂದಿನವರು ಬದುಕಲಿ ಇಲ್ಲಾ ಸಾಯಲಿ ಎಂದು ಅವರನ್ನು "ಗಾಯಬ್" ಮಾಡುವುದು ಸರಿಯೇ?
ನಾವು ಕಳೆದುಕೊಂಡು ಪಡೆದುಕೊಳ್ಳುವ ವಸ್ತು ಇತರರಿಗೆ ಹಾನಿಯುಂಟುಮಾಡದಿರಬೇಕು. ಆಗಲೇ ನಾವು ಕಳೆದುಕೊಂಡದ್ದಕ್ಕೂ ಅದರಿಂದ ಪಡೆದುಕೊಂಡಿರುವುದಕ್ಕೂ ಮಹತ್ವಬರುವುದು ಎಂಬುದು ನನ್ನ ಅಭಿಪ್ರಾಯ.

VENU VINOD ಹೇಳಿದರು...

ಛೇ, ಬೇಸರದ ವಿಷಯ...
ನಾನೂ ಬೆಂಗಳೂರಿಗೆ ಹೋಗುವಾಗೆಲ್ಲ ಆ ರಸ್ತೆ ಇಕ್ಕೆಲದ ಮರಗಳನ್ನು ನೋಡುತ್ತಾ ಹೋಗುತ್ತಿದ್ದೆ. ಇನ್ನು ಅದೂ ಇಲ್ಲ..ಹ್ಮ್‌ :(

sunaath ಹೇಳಿದರು...

ತೇಜಸ್ವಿನಿ,
ಹೆಚ್ಚುತ್ತಿರುವ ಜನಸಂಖ್ಯೆಗೆ ಹೆಚ್ಚಿಗೆ ಮನೆಗಳು ಬೇಕು, ಹೆಚ್ಚಿಗೆ
ರಸ್ತೆ ಬೇಕು, ಹೆಚ್ಚಿಗೆ ಕೃಷಿಭೂಮಿ ಬೇಕು, ಹೆಚ್ಚಿಗೆ ವಿದ್ಯುತ್
ಬೇಕು. ಇವೆಲ್ಲಕ್ಕೂ ಹೆಚ್ಚಿಗೆ ನಿಸರ್ಗನಾಶ ಬೇಕು. ಚೀನಾ ಮಾಡಿದಂತೆ ನಮ್ಮ ಸರಕಾರವೂ ಸಹ ಜನಸಂಖ್ಯಾನಿಯಂತ್ರಣ ಮಾಡದಿದ್ದರೆ, ಭಾರತ ದೇಶವು ೨೦೫೦ರಲ್ಲಿ ಬೋಳಾಗಿ ನಿಲ್ಲುವದು ಖಂಡಿತ!

Chamaraj Savadi ಹೇಳಿದರು...

ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುವುದು, ನದಿಗಳನ್ನು ನಿಲ್ಲಿಸುವುದು ಕೇವಲ ತಾತ್ಕಾಲಿಕ ಪರಿಹಾರ ಕೊಡುವಂಥವು. ನಾಗರಿಕತೆ ಎಂಬುದೇ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾದ ಬೆಳವಣಿಗೆ. ಹೀಗಿರುವಾಗ, ಪ್ರಕೃತಿ ನಾಶವನ್ನು ಒಂದು ಕಾಳಜಿಯಿಂದ, ಜವಾಬ್ದಾರಿಯಿಂದ, ಇಲ್ಲಿ ಕಳೆದಿದ್ದನ್ನು ಇನ್ನೆಲ್ಲೋ ಬೆಳೆಯುವುದರತ್ತ, ಅದರ ಫಲ ಎಂದಿನಂತೆ ಎಲ್ಲರಿಗೂ ದಕ್ಕುವತ್ತ ನೋಡಿಕೊಂಡರೆ ನಷ್ಟವಾಗದು.

ಆದರೆ, ಅಂತಹ ಬೆಳವಣಿಗೆಗಳು ಕಾಣುತ್ತಿಲ್ಲ ಎಂಬ ಕಾರಣಕ್ಕೆ ಪ್ರಕೃತಿ ನಾಶ ನಮ್ಮೆಲ್ಲರ ನಾಶವಾಗುತ್ತಿದೆ. ಎಲ್ಲ ಕಡೆ ರಸ್ತೆಗಳು, ಕಟ್ಟಡಗಳು ಬೆಳೆದರೆ, ಕೊನೆಗೆ ಅವೆಲ್ಲ ನೆಲಸಮ ಮಾಡಿ ಗಿಡಗಳನ್ನು ನೆಡಬೇಕಾದೀತು.

ಮನುಷ್ಯನಲ್ಲಿ ಸರಳ ವಿವೇಚನೆ ಮೂಡುವುದೂ ಎಷ್ಟೊಂದು ಕಷ್ಟಕರ ಅಲ್ವಾ?

- ಚಾಮರಾಜ ಸವಡಿ
http://chamarajsavadi.blogspot.com
http://sampada.net/blog/chamaraj

kanasu ಹೇಳಿದರು...

ತೇಜಸ್ವಿನಿಯವರೇ..
ಲೇಖನ ಮನಮುಟ್ಟುವಂತಿದೆ...ಓದಿ ತುಂಬ ಖೇದವಾಯಿತು. ಇದು ಮನುಷ್ಯನ ಅಸಹಾಯಕತೆಯೋ ಅಥವಾ ಅಮಾನವೀಯತೆಯೋ...! ಒಟ್ಟಿನಲ್ಲಿ ನಾವು ಅನುಭವಿಸಬೇಕಾದ್ದು ಇನ್ನು ಮುಂದಿದೆ :(

ತೇಜಸ್ವಿನಿ ಹೆಗಡೆ ಹೇಳಿದರು...

@ವೇಣು ಅವರೆ,

ನನಗೂ ಮೊದಲಸಲ ಆ ದೃಶ್ಯವನ್ನು ನೋಡಿದಾಗ ತುಂಬಾ ಬೇಸರವಾಗಿತ್ತು :-(. ಪ್ರತಿಕ್ರಿಯೆಗೆ ಧನ್ಯವಾದಗಳು.

@ಸುನಾಥ ಕಾಕಾ,

ನೂರಕ್ಕೆ ನೂರು ಸತ್ಯ. ಇದಕ್ಕೆಲ್ಲಾ ಪರಿಹಾರ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವುದು. ಆದರೆ ಅದಕ್ಕಾಗಿ ಈ ಸರಕಾರವನ್ನು ಆಶ್ರಯಿಸುವುದು, ಕಾಯುವುದು ಮೂರ್ಖತನವೇ ಸರಿ! ತಮ್ಮ ಉಳಿವಿಗಾಗಿ, ನಾಳೆಯ ಭವಿಷ್ಯತ್ತಿಗಾಗಿ ಜನರೇ ಎಚ್ಚೆತ್ತುಕೊಳ್ಳಬೇಕು. ಧನ್ಯವಾದಗಳು.

@ಸವಡಿಯವರೆ,

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಕಳೆಯುವುದೊಂದೇ ಗೊತ್ತಿರುವುದು ಮನುಷ್ಯನಿಗೆ! ಮನಸ್ಸಿನ ತುಂಬಾ ಗೊಂದಲವೇ ತುಂಬಿರುವಾಗ ಇನ್ನು ಸರಳತೆಯ ಮಾತೆಲ್ಲಿ?! ಪ್ರತಿಕ್ರಿಯೆಗೆ ಧನ್ಯವಾದಗಳು.

@ಕನಸು ಅವರೆ,

ಮೆಚ್ಚುಗೆಗೆ ಧನ್ಯವಾದಗಳು.

ನಮ್ಮ ಮುಂದಿನ ಪೀಳಿಗೆಯವರು ಅನುಭವಿಸಬೇಕಾದ್ದು ತುಂಬಾ ಇದೆ! ಅವರಿಗೆ ಈ ಕೊಡುಗೆ ಕೊಡುತ್ತಿರುವವರು ನಾವೇ!!

Vishwanatha Krishnamurthy Melinmane ಹೇಳಿದರು...

Thamma parisara kalajige thumba thanks...
Ayyo adannenu heltheera...
monne monne malleswaram alli idda doda hemmragalannu kadidu haki bitru...thumba bejar aythu...
adu iduvaregoo enoo madiralilla...road agala mado karanakku alla...eko eno...government avare aa hemmaragala ayushya nirdhara vagisodakke bahala vishadha...

--
Vishwa alias Vishu

ವಿ.ರಾ.ಹೆ. ಹೇಳಿದರು...

ತೇಜಕ್ಕ,

ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ.

ಏನೇ ಯೋಜನೆಗಳು ನೆಡೆದರೂ ಏನೇ ಆದರೂ ಅದು ಮನುಷ್ಯನ ಅನುಕೂಲಕ್ಕಾಗೇ ಎಂಬುದು ವಿಪರ್ಯಾಸ.

ರಸ್ತೆ ಅಗಲವಾಗಿರಬೇಕು, ಹಾಗಿರಬೇಕು, ಹೀಗಿರಬೇಕು ಎಂದು ನಾವೇ ಗೊಣಗುತ್ತೇವೆ. ಬೇರೆ ದೇಶದಲ್ಲಿ ಚೆನ್ನಾಗಿದೆ ಎನ್ನುತ್ತೇವೆ. ಆದರೆ ಅದನ್ನೇ ಇಲ್ಲಿ ಮಾಡ ಹೊರಟಾಗ ತೊಡಕುಗಳು ಜಾಸ್ತಿ. ಯಾಕೆಂದರೆ ನಮ್ ದೇಶದಲ್ಲಿ ಯಾವುದೂ well planned ಅಲ್ಲ.

ಆ ಮರಗಳನ್ನು ಕಡಿದುದು ವ್ಯಥೆಯಾಗುವುದು ನಿಜವಾದರೂ ಅದಕ್ಕಿಂತ ಚತುಷ್ಪಥ ಯೋಜನೆಯಿಂದ ಆಗುವ ಪ್ರಯೋಜನವನ್ನೂ ಗಮನಕ್ಕಿಟ್ಟುಕೊಳ್ಳಬೇಕು ಮತ್ತು ಕಡಿದ ಮರಗಳಿಗಿಂತ ಜಾಸ್ತಿ ಮರಗಳನ್ನು ಬೆಳೆಸಬೇಕು.

ಸುಧೇಶ್ ಶೆಟ್ಟಿ ಹೇಳಿದರು...

ಓದಿ ತು೦ಬಾ ಬೇಸರವಾಯಿತು. ಆ ಮರಗಳಲ್ಲಿ ಆಸರೆ ಪಡೆದಿದ್ದ ಪಕ್ಷಿ ಸ೦ಕುಲಗಳು ಏನಾದವೋ? ಇದಕ್ಕೆ ಏನು ಪರಿಹಾರ ಎ೦ದು ಯೋಚಿಸಿದರೆ ಪ್ರಶ್ನೆಗಳು ಮಾತ್ರ ಉಳಿಯುತ್ತve.

Parisarapremi ಹೇಳಿದರು...

tumba nOvaagutte...

mara hOgutte annO nOvigintha nange jaasti nOvaagOdu, ee vyavasthe li naavu eshtu helpless annOdu... namma kayyalli ee vishyavaagi enoo maadOke aagtilvallaaa antha... :-(

ಪಯಣಿಗ ಹೇಳಿದರು...

ತೇಜಸ್ವಿನಿ,

ಪ್ರಕೃತಿಯ ಅಳಿವಿನ ಬಗೆಗಿನ ನಿಮ್ಮ ಸ೦ಕಟ ಅರ್ಥವಾಗುವ೦ತದ್ದೆ. ತನ್ನನ್ನರಳಿಸಿದ ಪರಿಸರವನ್ನ ನರಳಿಸಿ, ಕಬಳಿಸುತ್ತಿರುವ ಭಸ್ಮಾಸುರ ಮಾನವನ ಕೌ್ರರ್ಯದ ಸಣ್ಣ ಉದಾಹರಣೆಯೊ೦ದನ್ನ ಭಾವಪೂರ್ಣವಾಗಿ ನಿಮ್ಮ ಅಕ್ಷರಗಳಲ್ಲಿ ಹಿಡಿದಿದ್ದೀರ. ಹಸಿರನ್ನೆಲ್ಲ ಒಣಗಿಸಿಟ್ಟು, ಕಾ೦ಕ್ರೀಟಿನ ಚಟ್ಟ ಕಟ್ಟಿ, ಸುಡುಬಯಲಿನಲಿ ಬೆತ್ತಲಾಗಿ ಕುಣಿ ಕುಣಿಯುತ್ತಿರುವ ನಮಗೆಲ್ಲ ಇಳೆಯೇ ಹೊತ್ತಿ, ಮುಗಿಲೂ ಬೆ೦ಕಿ ಮಳೆ ಸುರಿಸಿ ಸುಟ್ಟು ಕರಕಲಾಗುವವರೆಗೂ ಬುದ್ದಿ ಬರುವಹಾಗ ಕಾಣದು.

ಪಯಣಿಗ

ತೇಜಸ್ವಿನಿ ಹೆಗಡೆ ಹೇಳಿದರು...

@ವಿಶ್ವನಾಥ ಅವರೆ,

ಮನುಷ್ಯ ಮನುಷ್ಯನ ಆಯುಷ್ಯವನ್ನೇ ನಿರ್ಧಾರ ಮಾಡುತ್ತಿರುವ ಕಾಲ ಇದು. ಇನ್ನು ಮೂಕ ಮರಗಳ ಆಯುಷ್ಯಕ್ಕೇನು ಬೆಲೆ ಹೇಳಿ?!

@ವಿಕ್ಸ್,

ಕ್ಷಮೆ ಎಲ್ಲಾ ಏತಕ್ಕೆ? ಯಾವತ್ತು ಬೇಕಿದ್ದರೂ ಓದಿ ಪ್ರತಿಕ್ರಿಯಿಸಬಹುದು. ಓದಿ ಪ್ರತಿಕ್ರಿಯಿಸದಿದ್ದರೂ ಬೇಸರವಿಲ್ಲ. ಮನಸಿನಲ್ಲೇ ಪ್ರತಿಕ್ರಿಯಿಸಿದರೂ ಸಾಕು :)

ನಿಜ. ನಮ್ಮಲ್ಲಿ .... ಒಪ್ಪುವೆ. ಆದರೆ ನೀ ಹೇಳುವಂತೆ "ಎಷ್ಟು ಮರಗಳನ್ನು ಕಡಿಯುತ್ತೇವೋ ಅದಕ್ಕಿಂತ ಜಾಸ್ತಿ ಮರಗಳನ್ನು ನೆಡುವ ಯೋಜನೆ" ಕೇಳಲು ಮಾತ್ರ ಬಲು ಚೆಂದ. ಕಾರಣ ಕ್ರಮೇಣ ಒಂದೆರಡು ಮರಗಳನ್ನು ನೆಡಲೂ ಜಾಗವಿಲ್ಲದಂತಹ ಪರಿಸ್ಥಿತಿ ಉಂಟಾಗಬಹುದು! ಕಡಿಯುವುದರಿಂದ ಉಂಟಾಗುವ ಅಲ್ಪ ಪ್ರಯೋಜನಕ್ಕಿಂತ ಅದೆಷ್ಟೋ ಪಾಲು ದುಷ್ಪರಿಣಾಮ ಮುಂದೆ ಕಾದಿರುತ್ತದೆ ಎಂಬುದನ್ನು ಮರಯಬಾರದು!

@ಸುಧೇಶ್ ಅವರೆ,

ಹೌದು ಉತ್ತರವಿಲ್ಲದ ಇಂತಹ ಅದೆಷ್ಟೋ ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ!

@ಪರಿಸರಪ್ರೇಮಿ,

ಈ ಅಸಹಾಯಕತೆಯೆಂಬುದೇ ಮನುಷ್ಯನ ಅತಿ ದೊಡ್ಡ ಮಿತ್ರ ಹಾಗೂ ಶತ್ರು ಕೂಡ. ಅಸಹಾಯಕತೆಯನ್ನು ಮುಂದಿರಿಸಿ ಸುಲಭವಾಗಿ ಪಾರಾಗಲೂ ಬಹುದು ಹಾಗೆಯೇ ಅದರೊಳಗೆ ಸಿಲುಕಿ ನರಳಲೂ ಬಹುದು!

@ಪಯಣಿಗ,

ಅಷ್ಟೆಲ್ಲಾ ಆಗುವ ಹೊತ್ತಿಗೆ ಬುದ್ಧಿಬರಲು ನಾವೇ ಇರಲಾರೆವು! ಕಾಲ ಮಿಂಚಿಹೋಗುವ ಮೊದಲು ಇದಕ್ಕೆ ಪರಿಹಾರ ಹುಡಕಬೇಕಾಗಿದೆ.

------------------------------
ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. ದಯವಿಟ್ಟು ಈ ಲೇಖನವನ್ನು ಓದಿ ಇಲ್ಲೇ ಮರೆಯದೇ ಈ ವಿಷಯದ ಕುರಿತು ಗಂಭೀರ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯತ್ನಿಸಬೇಕಾಗಿ ಕಳಕಳಿಯ ವಿನಂತಿ.

-ತೇಜಸ್ವಿನಿ ಹೆಗಡೆ.
--------------------------------

ಭಾರ್ಗವಿ ಹೇಳಿದರು...

ThEjaswini avare,
LEkhana chennagige antha Odi summanirade Gambheera chinthane naDesalEbEku.photos nODidre hoTTehinDuvanthaagutte so sad.

Shashi Dodderi ಹೇಳಿದರು...

excellent one

ತೇಜಸ್ವಿನಿ ಹೆಗಡೆ ಹೇಳಿದರು...

@saati yaaru,

ಫೋಟೋ ನೋಡಿದರೇ ಇಷ್ಟು ಸಂಕಟವಾಗುತ್ತೆ..ಕಣ್ಣಾರೆ ಕಂಡರೆ ಎಷ್ಟು ವೇದನೆ ಆಗಬಹುದೆಂದು ಯೋಚಿಸಿ!! ಪ್ರತಿಕ್ರಿಯೆಗೆ ಧನ್ಯವಾದಗಳು.

@Nostalgia,
Thanks a lot..

Lakshmi Shashidhar Chaitanya ಹೇಳಿದರು...

:( :( :( :( :(