ಭಾನುವಾರ, ಫೆಬ್ರವರಿ 4, 2018

ನೂಪುರ

(*"ಜನಮಿತ್ರ" ಪತ್ರಿಕೆ ಸಡೆಸಿದ್ದ ರಾಜ್ಯಮಟ್ಟದ ಕವಿತೆ ಮತ್ತು ಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಕಥೆ.)
_______________
“ಸಾನ್ವಿ ನಿನ್ನ ಪುಟ್ಟ ಕಾಲಿಗೆ ಎಷ್ಟು ಚಂದ ಕಾಣಿಸ್ತದೆ ಈ ಗೆಜ್ಜೆ ಗೊತ್ತಾ? ಪ್ಲೀಸ್, ಇವತ್ತೊಂದಿವ್ಸ ಹಾಕ್ಕೊಂಡ್ಬಾ, ಇಲ್ಲಾ ಅಂದ್ರೆ ನಿನ್ನ ಲಕ್ಷ್ಮಜ್ಜಿ ನನ್ನನ್ನೇ ಬೈತಾರಷ್ಟೇ. ‘ಇರೋದೊಬ್ಳು ಮಗ್ಳು, ಲಕ್ಷಣವಾಗಿ ಗೆಜ್ಜೆ ಹಾಕ್ದೇ ಬೋಳು ಕಾಲು ಮಾಡಿಸ್ಕೊಂಡು ಬರ್ತೀಯಾ...” ಅಂತ. ನೋಡು, ನಿಂಗೆ ಅಜ್ಜಿ ಅಮ್ಮನನ್ನು ಬೈದ್ರೆ ಖುಶಿಯಾಗತ್ತಾ?” ಎಂದು ದೀಪ್ತಿ ಅನುನಯಿಸಲು, ಮುಖ ಉಬ್ಬಿಸಿಕೊಂಡಳು ಪುಟ್ಟ ಪೋರಿ.
“ಅಮ್ಮಾ ಪ್ಲೀಸ್, ನಂಗೆ ಇಷ್ಟ ಇಲ್ಲಾ ಗೆಜ್ಜೆ, ಕಿರಿ ಕಿರಿ ಆಗತ್ತೆ... ನಂಗ್ಬೇಡಾ...” ಜೋರಾಗಿ ರಾಗವೆಳೆಯಲು ದೊಡ್ಡದಾಗಿ ಕಣ್ಬಿಟ್ಟಳು ದೀಪ್ತಿ.
“ಸಾಕೇ ಬಾಯ್ಮುಚ್ಚು ಮೊದ್ಲು! ಹೀಂಗೆ ಬೊಬ್ಬೆ ಹಾಕಿ ಗಲಾಟೆ ಎಬ್ಬಿಸ್ಬೇಡ. ಹೋಗಿ ತಯಾರಾಗು... ನಿನ್ನ ಮಂಚದ್ಮೇಲೆ ನೀಲಿ ಬಣ್ಣದ ಉದ್ದಲಂಗ ತೆಗ್ದಿಟ್ಟಿದ್ದೇನೆ... ಅದನ್ನೇ ಹಾಕ್ಕೋ. ಇವತ್ತಿನ ಮಟ್ಟಿಗೆ ಡ್ರೆಸ್ ವಿಷ್ಯದಲ್ಲಾದ್ರೂ ಹಠ ಮಾಡ್ಬೇಡ. ಆದ್ರೂ, ನೀನು ಈ ಗೆಜ್ಜೆ ಹಾಕ್ಕೊಂಡಿದ್ದಿದ್ರೆ ನಾ ನಿಂಗೆ...” ಅವಳು ಮಾತು ಮುಗಿಸುವ ಮುಂಚೆಯೇ ಸಾನ್ವಿ, “ಅಮ್ಮಾ ಸಾಕು, ನಾನು ರೆಡಿ ಆಗೋಕೆ ಹೊರ್ಟೆ...” ಎಂದು ಅಮ್ಮನ ಮಾತಿಗೆ ಕಿವಿಗೊಡದೇ ತನ್ನ ಕೋಣೆಗೆ ಓಡಿಬಿಟ್ಟಳು. ಅಲ್ಲೇ ಮಂಚದಲ್ಲಿ ಮಲಗಿದ್ದ ರಾಜೀವ, ಕಿರುಗಣ್ಣಿನಲ್ಲೇ ಎಲ್ಲವನ್ನೂ ಗಮನಿಸುತ್ತಿದ್ದ. ಮಗಳ ಹಠಕ್ಕೆ ಪೆಚ್ಚುಮುಖ ಮಾಡ್ಕೊಂಡು, ತನ್ನ ಕೈಯೊಳಗಿದ್ದ ಗೆಜ್ಜೆಯನ್ನೇ ದಿಟ್ಟಿಸುತ್ತಿದ್ದ ದೀಪ್ತಿ, ಅದನ್ನು ಅಸಡ್ಡೆಯಿಂದ ಅಲ್ಲೇ ಟೇಬಿಲ್ಲಿನ ಮೇಲೆ ಕುಕ್ಕಿ ಇಡಲು, ಎದ್ದು ಕುಳಿತ. “ಅಲ್ಲಾ, ನಿನ್ನಿಷ್ಟವನ್ಯಾಕೆ ಅವ್ಳ ಮೇಲೆ ಹೇರ್ತಿದ್ದೀಯಾ? ಸಾನ್ವಿಗೆ ಗೆಜ್ಜೆ ಇಷ್ಟ ಇಲ್ಲ ಅಷ್ಟೇ. ಅದು ಗೊತ್ತಿದ್ದೂ ಯಾಕೆ ಒತ್ತಾಯ ಮಾಡಿ ಹೀಗೆ ಬೇಜಾರು ಮಾಡ್ಕೊಳ್ಳೋದು?” ಎಂದು ಅವನು ಪ್ರಶ್ನಿಸಿದ್ದೇ, ಅವಳ ಸಿಟ್ಟು, ಬೇಸರವೆಲ್ಲಾ ಈಗ ಪತಿಯತ್ತ ತಿರುಗಿಬಿಟ್ಟಿತು.
“ಹೌದೌದು, ನಾನು ನಿಮ್ಮ ಮುದ್ದಿನ ಮಗ್ಳ ಮೇಲೆ ದೌರ್ಜನ್ಯ ಮಾಡ್ತೀನಿ ಅಲ್ವೇ? ಸದಾ ಅವ್ಳನ್ನು ವಹಿಸಿಕೊಂಡು ಬರೋರು, ಇವತ್ತೊಂದು ದಿವ್ಸವಾದ್ರೂ ಅವ್ಳಿಗೆ ಬುದ್ಧಿ ಹೇಳೋಕೆ ಆಗಲ್ವಾ? ಅಲ್ಲಾ, ಯಾವತ್ತಾದ್ರೂ ನಾನಿಷ್ಟು ಒತ್ತಾಯ ಮಾಡಿದ್ದಿದ್ಯಾ ನಿಮ್ಮ ಸಾನ್ವಿಗೆ? ಅದ್ಯಾಕೋ ಏನೋ, ಇವತ್ತು ಮಾತ್ರ ಬಹಳ ಆಸೆಯಾಗಿ ಸ್ವಲ್ಪ ಜಾಸ್ತಿ ಹೇಳ್ದೆ ಅಷ್ಟೇ. ಬಿಡಿ, ಹೇಳ್ಕೊಂಡ್ರೆ ಪ್ರಯೋಜ್ನ ಇಲ್ಲಾ... ಅದೇನೋ ಗಾದೆ ಇದ್ಯಲ್ಲಾ ‘ಹಲ್ಲಿದ್ದವಂಗೆ ಚಕ್ಲಿ ಇಲ್ಲಾ, ಚಕ್ಲಿ ಇದ್ದವಂಗೆ ಹಲ್ಲಿಲ್ಲ ಅಂತ...’ ಹಾಗೇ ಆಯ್ತಿದು. ಸರಿ, ನೀವು ಕಾರ್ ಹೊರಗೆ ತೆಗೀರಿ... ನಾಲ್ಕು ಗಂಟೆಗೆಲ್ಲಾ ನಾವಲ್ಲಿರ್ಬೇಕು... ಆಯೋಜಕರನ್ನ ಕಾಯ್ಸೋದು ಸರಿಯಲ್ಲ... ಹೋಗಿ ಮುಟ್ಟೋಕೆ ಎರಡು ತಾಸಾದ್ರೂ ಬೇಕು.. ಈಗ್ಲೇ ಗಂಟೆ ಒಂದೂವರೆಯಾಗೋಗಿದೆ... ಹಾಂ, ನನ್ನ ಹೊಸ ಕ್ಲಚಸ್ ಹಿಡಿಕೆ ಸ್ವಲ್ಪ ಲೂಸ್ ಆಗಿದೆ.. ಗ್ಯಾರೇಜಿನಿಂದ ಹಳೆಯ ಕ್ಲಚಸ್ ಅನ್ನೇ ತೆಗ್ದುಬಿಡಿ ಪ್ಲೀಸ್... ಅದ್ರಲ್ಲಿ ಹೆಚ್ಚು ಗ್ರಿಪ್ಸ್ ಸಿಗೋದ್ರಿಂದ ನಂಗೆ ಹಿಡ್ಕೊಂಡು ಹೋಗೋಕೆ ಸುಲಭವಾಗತ್ತೆ...” ಎಂದು ಬಡಬಡಾಯಿಸುತ್ತಾ ತನ್ನೊಳಗೆ ಏಳುತ್ತಿದ್ದ ಬಿರುಗಾಳಿಯನ್ನಡಗಿಸಲು ಪ್ರಯತ್ನಿಸತೊಡಗಿದಳು ದೀಪ್ತಿ.
‘ಛೇ, ನಾನು ರಾಜೀವನಿಗೆ ಅಷ್ಟು ಕಟುವಾಗಿ ಹೇಳಬಾರದಿತ್ತೇನೊ! ಇದ್ರಲ್ಲಿ ಅವನದೇನು ತಪ್ಪಿತ್ತು? ಸಾನ್ವಿಯೇ ಅಷ್ಟು ಹಠ ಮಾಡುತ್ತಿರುವಾಗ... ಹಾಗೆ ನೋಡಿದರೆ ಅವ್ಳದ್ದೂ ತಪ್ಪಿಲ್ಲ. ಹತ್ತುವರ್ಷದ ಪುಟ್ಟ ಕೂಸದು. ಅವಳಿಗೂ ಅವಳದ್ದೇ ಆದ ಇಚ್ಛೆ ಇದ್ದಿರುತ್ತದೆ. ನನಗೆ ಇಷ್ಟವಾಗಿದ್ದೆಲ್ಲಾ ಅವಳಿಗೂ ಮೆಚ್ಚುಗೆಯಾಗಬೇಕೆಂದು ನಾನು ಆಶಿಸೋದು ಎಷ್ಟು ಸರಿ? ತಪ್ಪು ನನ್ನದೇ... ಊಹೂಂ.. ನನ್ನದೂ ಅಲ್ಲಾ... ಬಾಲ್ಯದಿಂದ ಎದೆಯೊಳಗೆ ಮಡಗಟ್ಟಿರುವ ಅಸಹಾಯಕತೆ, ಕೊರಗು, ನಿರಾಸೆ, ಹುದುಗಿಸಿಟ್ಟುಕೊಂಡ ಆಸೆಗಳು ಹಾಗೂ ಈಡೇರದಂಥ ಕನಸುಗಳದ್ದು. ಇಲ್ಲಾ, ಎಷ್ಟೇ ಕಷ್ಟವಾದ್ರೂ ಸೈ, ಎಲ್ಲವನ್ನೂ ಕಿತ್ತೆಸೆದು ಬಿಡಬೇಕು. ನನಗಾಗಿ ಮಾತ್ರವಲ್ಲ, ನನ್ನವರಿಗಾಗಿ. ಅದರಲ್ಲೂ ಸಾನ್ವಿಯ ಬೆಳವಣಿಗೆಗೆ ನನ್ನ ಈ ದೌರ್ಬಲ್ಯ ಹಿಂಸೆಯಾಗಬಾರದು... ಯಾವುದೇ ರೀತಿಯಿಂದಲೂ ನನ್ನ ಕನಸುಗಳು ಅವಳ ಇಚ್ಛೆಗಳಿಗೆ ತಡೆಯಾಗದಂತಿರಬೇಕು...’ ಮನಸು ತಾನಾಗಿ ಮುಂದೆ ಬಂದು ಅವಳನ್ನು ಸಮಾಧಾನಿಸಿ ಧೈರ್ಯ ತುಂಬಿತ್ತು.
ಕಷ್ಟಪಟ್ಟು ತನ್ನ ರೆಡಿಮೇಡ್ ಸೀರೆಯ ನೆರಿಗೆಯ ಹುಕ್ಕನ್ನು ಸಿಕ್ಕಿಸಿಕೊಳ್ಳುತ್ತಿದ್ದವಳ ಕೈಗಳಿಂದ ಘಲ್ ಘಲ್ ನಾದ ಹೊರಹೊಮ್ಮಲು, ಅವಳ ಗಮನ ತನ್ನ ಬಲಗೈಯ ಮೇಲೆ ಹೋಗಿತ್ತು.
ಬೆಳ್ಳಿಯ ನಾಲ್ಕು ಬಳೆಗಳೊಳಗೆ ಗೆಜ್ಜೆಯ ಮಣಿಗಳನ್ನು ಸುರಿಯಲಾಗಿತ್ತು. ತನಗೆ ಎಂಟು ವರುಷವಾಗಿದ್ದಾಗ ಅಪ್ಪ ಮಾಡಿಸಿಕೊಟ್ಟಿದ್ದ ಬಳೆಗಳವು! ಪ್ರತಿಯೊಂದು ಬಳೆಗೂ ತಿರುಗಣೆಯಿದ್ದಿದ್ದರಿಂದ, ಅವುಗಳ ಗಾತ್ರವನ್ನು ಹೊಂದಿಸಿಕೊಳ್ಳಲು ಸುಲಭವಾಗಿತ್ತು. ಆದರೆ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವಳು ಆ ಬಳೆಗಳನ್ನು ಧರಿಸುತ್ತಿದ್ದುದು. ಇಂದು ಅವಳ ಬದುಕಿನಲ್ಲಿ ಬಹಳ ಸಂಭ್ರಮದ ದಿನ! ಅದರಲ್ಲೂ ಆ ವಿಶೇಷ ಕ್ಷಣಕ್ಕೆ ಇನ್ನೇನು ಕೆಲವೇ ತಾಸುಗಳು ಬಾಕಿಯಿರುವುದು. ಮನದೊಳಗೆ ತುಂಬಿದ್ದ ಅವ್ಯಕ್ತ ಆತಂಕ, ಸಣ್ಣ ಉದ್ವೇಗದಿಂದಾಗಿ ಎದೆ ಹೊಡೆದುಕೊಳ್ಳತೊಡಗಿತ್ತು. ತಲೆಕೊಡವಿಕೊಂಡು ತಯಾರಾಗತೊಡಗಿದಳು.
*****
 “ರಾಜು, ನಿನ್ನ ಅಮ್ಮನಿಗೆ ಇನ್ನೂ ಹದಿನೈದು ನಿಮಿಷ ಬೇಕಂತೆ. ನೀವಿಬ್ರೂ ಮುಂದೆ ಹೋಗ್ಬಿಡಿ. ನಾವು ಬೀಗರೊಂದಿಗೆ ಬರ್ತೀವಿ. ಹೇಗಿದ್ರೂ ಶ್ರೀಪಾದರು ಈ ದಾರಿಯಲ್ಲೇ ಹೋಗೋದಲ್ವಾ? ಅಮ್ಮಾ ದೀಪ್ತಿ, ನಿನ್ನ ತಂದೆಗೊಂದ್ಮಾತು ಹೇಳ್ಬಿಡು ಫೋನ್ ಮಾಡಿ... ನಾವೂ ಬರ್ತೀದ್ದೀವಿ ಅವ್ರ ಜೊತೆಗೆ ಅಂತ...” ಮಾವ ವಾಸುದೇವರು ಹೇಳಲು, ಸುಮ್ಮನೇ ತಲೆಯಾಡಿಸಿದಳು ದೀಪ್ತಿ. ಅಪ್ಪನಿಗೆ ಪೋನ ಮಾಡಿ, ಆದಷ್ಟು ಬೇಗ ಮನೆಯಿಂದ ಹೊರಟು, ಇಲ್ಲಿಂದ ಅತ್ತೆ ಮಾವನನ್ನೂ ಹೊರಡಿಸಿಕೊಂಡು ಕಾರ್ಯಕ್ರಮದ ಸ್ಥಳವನ್ನು ತಲುಪಬೇಕೆಂದು ಪಿಸುಧ್ವನಿಯಲ್ಲಿ ಸೂಕ್ಷ್ಮವಾಗಿ ತಿಳಿಸಿದಳು. 
“ಅಮ್ಮಾ... ನಾನೂ ಅಜ್ಜ, ಅಜ್ಜಿಯ ಜೊತೆಗೇ ಬರ್ತೀನಿ ಪ್ಲೀಸ್. ನನ್ನ ಇಷ್ಟದ ಕ್ಲಿಪ್ ಒಂದು ಕಾಣಿಸ್ತಿಲ್ಲಾ... ಅವ್ರು ಹೊರಡೋವರೆಗಾದ್ರೂ ಹುಡುಕ್ತಾ ಇರ್ತೀನಿ... ಸಿಕ್ಕಿಲ್ಲಾ ಅಂದ್ರೆ ಬೇರೆ ಯಾವ್ದಾದ್ರೂ ಹಾಕ್ಕೊಳ್ಳುವೆ... ಪ್ರಾಮಿಸ್ ಅಜ್ಜ, ಅಜ್ಜಿಗೆ ಕಾಟ ಕೊಡಲ್ಲ, ಕಾಯ್ಸೋದಿಲ್ಲ...” ಎಂದು ಸಾನ್ವಿ ಗೋಗರೆಯಲು, ತನ್ನ ಸುತ್ತಲೂ ನೆರೆದಿರುವವರ ಮುಖವ ಕಂಡು ಉಕ್ಕುತ್ತಿದ್ದ ಸಿಟ್ಟನ್ನು ಅಡಗಿಸಿಕೊಳ್ಳುತ್ತಾ, ಹೂಂಗುಟ್ಟಿದ್ದಳು ದೀಪ್ತಿ.
ಕ್ಲಚಸ್‌ಗಳ ಸಹಾಯದಿಂದ ಮೆಲ್ಲನೆ ಹೆಜ್ಜೆ ಹಾಕುತ್ತಾ, ಕಾರಿನ ಬಳಿ ಬಂದವಳಿಗೆ ಸಹಕರಿಸಿ, ಅವಳನ್ನು ಕೂರಿಸಿದ ಮೇಲೆ ಅಪ್ಪ, ಅಮ್ಮನಿಗೆ ಬೇಗ ತಯಾರಾಗಿರಲು ತಾನೂ ಒಮ್ಮೆ ಎಚ್ಚರಿಸಿ, ಕಾರ್ ಸ್ಟಾರ್ಟ್ ಮಾಡಿದ ರಾಜೀವ.
“ನಿನ್ನೆ ಆಫೀಸಿನಲ್ಲಿ ಫ್ರೆಂಡ್ ಒಬ್ಬ ಈ ಸಿ.ಡಿ.ಕೊಟ್ನಪ್ಪ... ಕೆಲವು ಪ್ರಸಿದ್ಧ ಕನ್ನಡ ಭಾವಗೀತೆಗಳಿವೆಯಂತೆ ಇದ್ರಲ್ಲಿ... ರಾಜ್ಯೋತ್ಸವ ಮೊನ್ನೆ ತಾನೇ ಆಯ್ತಲ್ವಾ, ಅದ್ರ ಬಿಸಿ ಇರೋದ್ರಿಂದ ಎಲ್ರೂ ತಗೊಂಡ್ರಾ, ನಿನ್ನ ನೆನ್ಪಾಗಿ ನಾನೂ ಖರೀದಿಸಿದೆ. ಈ ಹಾಡುಗಳನ್ನು ಕೇಳಿಯಾದ್ರೂ ನಿನ್ನ ಮನಸು ಸ್ವಲ್ಪ ಕೂಲ್ ಆಗ್ಬಹುದು... ಇಲ್ಲಾ ಅಂದ್ರೆ ಪಾಪ ನಿನ್ನ ಉರಿಗೆ ಆಯೋಜಕರ ಬುರುಡೆ ಕಾದು ಹೋಗತ್ತೆ ಅಷ್ಟೇ...” ಎಂದು ಕಿಚಾಯಿಸಲು, ಪತಿಯತ್ತ ಬಿರುಗಣ್ಣು ಬೀರಿದರೂ, ಒಳಗೊಳಗೇ ಜೋರಾಗಿ ನಕ್ಕಿದ್ದಳು ದೀಪ್ತಿ.
“ಎಂದೂ ಕಾಣದಂಥ ಕನಸು ಬಂದು ಮನವ ತಾಗಿತು, ಬಂದ ಘಳಿಗೆ ಎಂತೋ ಏನೋ ಅಲ್ಲೇ ಮನೆಯ ಹೂಡಿತು...” ಸಿ. ಅಶ್ವಥರ ಧ್ವನಿಯಲ್ಲಿ ಸುಶ್ರಾವ್ಯವಾಗಿ ಹೊರಹೊಮ್ಮಿದ ಗೀತೆಯನ್ನು ಕೇಳುತ್ತಿದ್ದಂತೇ ಅವಳಿಗೆ ಇಹ ಪರವೆಲ್ಲಾ ಮರೆತುಹೋಗಿ, ಮನಸು ಸೀದಾ ಮಾಣೂರಿನತ್ತ ಹಾರಿಹೋಗಿತ್ತು. ಎಂಟಂಕಣದ ಆ ಮನೆಯ ಹೊರ ಜಗುಲಿಯ ಚಿಟ್ಟೆಯಲ್ಲಿ ಕುಳಿತು ಹಠ ಮಾಡುತ್ತಿದ್ದ ಎಂಟು ವರ್ಷದ ಪುಟ್ಟ ದೀಪ್ತಿಯ ಚಿತ್ರಣವೇ ಅವಳ ಮನಸ್ಸಿನಾವರಣವನ್ನು ತುಂಬಿಕೊಂಡುಬಿಟ್ಟಿತು. 
_೨_
“ಅಮ್ಮಾsss ನಂಗೂ ಧೃತಿಯ ಜೊತೆ ಡ್ಯಾನ್ಸ್ ಮಾಡ್ಬೇಕು... ಅವ್ಳು ಮಾತ್ರ ಯಾಕೆ ಮಾಡೋದು? ನಾನು ಮಾಡ್ಬಾರ್ದಾ? ನೀ ಅವ್ಳಿಗೆ ಮಾತ್ರ ಗೆಜ್ಜೆ ಹಾಕಲು ಬಿಡ್ತಿ... ನಾನು ಹಾಕ್ಕೊಳೋಕೆ ಹೋದ್ರೆ ಬೇಡ ಹೇಳ್ತಿ... ನಂಗೂ ಗೆಜ್ಜೆ ಕೊಡು ಈಗ್ಲೇ. ನೋಡು, ಅವ್ಳು ಮಾತ್ರ ಘಲ್ ಘಲ್ ಅಂತ ಸದ್ದು ಮಾಡ್ಕೊಂಡು ಹೋಗ್ತಿದ್ದಾಳೆ...” ಅರ್ಧಗಂಟೆಯಿಂದ ಪಿರಿಪಿರಿ ಹಠಮಾಡಿ ಅಮ್ಮನನ್ನು ಪೀಡಿಸುತ್ತಿದ್ದಳು ಎಂಟು ವರ್ಷದ ದೀಪ್ತಿ. ಒಡಲೊಳಗೆ ಸಂಕಟ ಹೊತ್ತಿ ಉರಿಯುತ್ತಿದ್ದರೂ, ಅದನ್ನಡಗಿಸಿಕೊಂಡು, ಆದಷ್ಟು ಸಂಯಮದಿಂದಲೇ ಮಗಳನ್ನು ಅನುನಯಿಸುತ್ತಾ, ಮಾತು ಮರೆಸಲು ಹೆಣಗಾಡುತ್ತಿದ್ದಳು ಅನಸೂಯ. 
“ಪುಟ್ಟಿ, ನಿಂಗೆ ಕಾಲಿಗೆ ಪೆಟ್ಟಾಗಿದೆಯಲ್ಲಾ, ಹಾಗಾಗಿ ಓಡಾಡೋಕೆ ಕಷ್ಟ. ನಿನ್ನ ಹತ್ರ ನಿಲ್ಲೋಕೇ ಆಗಲ್ಲ ಅಂದ್ಮೇಲೆ ಹೇಂಗೆ ಡ್ಯಾನ್ಸ್ ಮಾಡ್ತಿ? ಅದ್ಕೇ ಟೀಚರ್ ನಿಂಗೆ ಹಾಡೋಕೆ ಹೇಳಿದ್ದಾರೆ ಅಲ್ವಾ? ನೀನು ಜಾಣೆ, ನನ್ನ ಮುದ್ದು, ಹಠ ಮಾಡ್ಬಾರ್ದು... ನಾನಿವತ್ತು ನಿಂಗಿಷ್ಟವಾದ ಈರುಳ್ಳಿ ಬಜೆ ಮಾಡ್ಲಾ?” ಅವಳ ಮನಸ್ಸಿನಲ್ಲಿ ಹೊಸ ಆಸೆ ಹುಟ್ಟಿಸಲು ನೋಡಿದ್ದಳು.
“ಊಹೂಂ... ನಂಗೆ ಬಜೆ ಬೇಡಾ. ಗೆಜ್ಜೆಯೇ ಬೇಕು. ಕೊಡ್ತೀಯೋ ಇಲ್ವೋ? ಅಪ್ಪನ ಹತ್ರ ಹೇಳ್ಕೊಡ್ತೀನಿ ನಾನು ಅಷ್ಟೇ. ಡ್ಯಾನ್ಸ್ ಮಾಡೋಕಗಲ್ಲ ಯಾಕೆ? ನಂಗೂ ಧೃತಿ ಹಾಂಗೆ ನಿಲ್ಲೋಕೆ ಆಗಲ್ಲ ಯಾಕೆ? ನನಗಿಂತ ಅವ್ಳು ನಾಲ್ಕು ವರ್ಷ ಚಿಕ್ಕೋಳು... ಆದ್ರೂ ಅವ್ಳಿಗೆ ನಿಲ್ಲೋಕೆ ಆಗತ್ತೆ.. ನಂಗೆ ಎಂಟು ವರ್ಷ ಆದ್ರೂ ಆಗ್ತಿಲ್ಲ... ಹೋಗ್ಲಿ ಗೆಜ್ಜೆನಾದ್ರೂ ಹಾಕ್ಕೊಳ್ತೀನಿ ಕೊಡು...” ಈಗ ಮತ್ತೂ ಜೋರಾಗಿ ಹಠಮಾಡತೊಡಗಿದ್ದಳು ದೀಪ್ತಿ. 
ಅನಸೂಯಾಳ ಮನಸು ಕುದಿವ ಹಂಡೆಯಾಗಿದ್ದರೂ, ಆದಷ್ಟು ಸಹನೆಯನ್ನು ತೋರುತ್ತಾ, “ದೀಪ್ತಿ, ಸುಮ್ನೇ ಹಠ ಮಾಡ್ಬೇಡಾ, ಹೇಳಿದ್ದು ಅರ್ಥ ಮಾಡ್ಕೊಳ್ಳೋ ವಯಸ್ಸಾಯ್ತು ನಿಂಗೆ. ಕಳೆದ ಸಲ ಗೆಜ್ಜೆ ಹಾಕ್ಕೊಂಡಾಗ ಏನಾಗಿತ್ತು ನೆನ್ಪಿದ್ಯಾ? ನೀನು ನಿನ್ಪಾಡಿಗೆ ಕಲ್ಲು, ಮಣ್ಣು ನೋಡ್ದೇ ಅಲೀತಿರ್ತಿಯಾ... ನಿನ್ನ ಕಾಲಿಗೆ ಬಲ ಇಲ್ದೇ ಇರೋದ್ರಿಂದ, ಅದು ಎಲ್ಲೆಂದ್ರಲ್ಲಿ ಹೊರಳಾಡ್ತಾ ಹೋಗ್ತಿರ್ತದೆ... ಗೆಜ್ಜೆ ಚರ್ಮಕ್ಕೆ ತಾಗಿ ಚುಚ್ಚಿ, ನಿನ್ನ ಪಾದದ ತುಂಬೆಲ್ಲಾ ಗಾಯ ಆಗಿದ್ದು ಮರ್ತೋಯ್ತಾ? ಎಲ್ಲಾ ಗಾಯ ವಾಸಿಯಾಗೋಕೆ ತಿಂಗ್ಳ ಮೇಲೇ ಬೇಕಾಗಿತ್ತು ಹೌದೋ ಅಲ್ವೋ? ಡಾಕ್ಟರ್ ಮಾಮ ಏನು ಹೇಳಿದ್ರು ಆಗ ಹೇಳು? ‘ನಿನ್ನ ಕಾಲು ಬಹಳ ಮೃದುವಾಗಿದೆ... ಗಾಯ ಆದ್ರೆ ಬೇಗ ವಾಸಿಯಾಗಲ್ಲಾ, ಗೆಜ್ಜೆ ಹಾಕ್ಕೊಬೇಡ ಇನ್ಮುಂದೆ’ ಅಂತ ತಾನೇ? ಆವಾಗ ತಲೆಯಾಡ್ಸಿ ಜೆಮ್ಸ್ ಪ್ಯಾಕ್ ಹಿಡ್ಕೊಂಡು ಬಂದಿದ್ದೆ... ಈಗ ಮತ್ತೆ ಹಠ ಮಾಡ್ತಿಯಲ್ಲಾ... ಎಲ್ಲಾ ಆ ಧೃತಿ ಕೆಲ್ಸ.. ಎಲ್ಲೋದ್ಯೆ ಕತ್ತೆ? ಬಾ ಇಲ್ಲಿ... ಆ ಗೆಜ್ಜೆ ತೆಗ್ದುಬಿಡ್ತೀನಿ ನಿನ್ನ ಕಾಲಿಂದಾನೂ... ನೀನು ಹಾಕ್ಕೊಂಡು ಗಿರಿಗಿರಿ ತಿರ್ಗೋದು ಬೇಡ ಈಗ್ಲೇ. ಡ್ಯಾನ್ಸ್ ಇರೋ ದಿವ್ಸ ಹಾಕ್ಬಿಡ್ತೀನಿ ಬಾ...” ಎಂದು ಗದರುತ್ತಾ ಪುಟ್ಟ ಮಗಳನ್ನು ಕರೆಯ ಹೋಗಲು, ನಾಲ್ಕು ವರ್ಷದ ಆ ಕೂಸು ಅಮ್ಮನ ಕೈಗೆ ಸಿಗದೇ ತಪ್ಪಿಸಿಕೊಂಡು ಘಲ್ ಘಲ್ ಎಂದು ಸದ್ದು ಮಾಡುತ್ತಾ ಅಂಗಳಕ್ಕೆ ಓಡಿ ಹೋಗಿಯಾಗಿತ್ತು.
“ಒಳ್ಳೇ ಮಾತಲ್ಲಿ ಬರ್ತಿಯೋ ಇಲ್ವೋ ಧೃತಿ! ಸಮಾ ಪೆಟ್ಟು ಕೊಡ್ತೇನೆ ನೋಡು ಹೀಗೆ ಆಟ ಆಡ್ಸಿದ್ರೆ. ನಂಗೆ ಕೆಲ್ಸ ಬೆಟ್ಟದಷ್ಟು ಬಿದ್ದಿದೆ... ನಿಮ್ಮಪ್ಪ ಬೇರೆ ಪಟ್ಣಕ್ಕೆ ಹೋಗಿದ್ದಾರೆ, ಇಲ್ಲಿ ನಾನೇ ಎಲ್ಲದಕ್ಕೂ ಸಾಯ್ಬೇಕಾಗಿದೆ. ಅದ್ಯಾಕಾದ್ರೂ ನಿಮ್ಗೆಲ್ಲಾ ಶಾಲೆಗೆ ರಜೆ ಕೊಡ್ತಾರೋ! ಬಾ ಇಲ್ಲಿ ಮೊದ್ಲು...” ಎಂದು ಜೋರು ಮಾಡಲು, ಧೃತಿ ಅಲ್ಲಿಂದ ಒಂದು ಹೆಜ್ಜೆ ಮಿಸುಕಾಡಲಿಲ್ಲ. ಎಲ್ಲಿ ಅಮ್ಮ ತನ್ನ ಬಳಿ ಬಂದು ಬಿಡುವಳೋ ಎಂಬ ಭಯದಲ್ಲೇ, ಅಲ್ಲಿಂದ ಮುಂದೆ ಓಡಲು ತಯಾರಾಗಿಯೇ ನಿಂತಿದ್ದಳು.
“ಊಹೂಂ, ನಾ ಬರಲ್ಲಾ... ಅಕ್ಕನಿಗೂ ಗೆಜ್ಜೆ ಬೇಕಾದ್ರೆ ನೀ ಕೊಡು. ನಾ ನನ್ನ ಗೆಜ್ಜೆ ತೆಗೆಯೊಲ್ಲ... ನನ್ನ ಫ್ರೆಂಡ್ಸ್ ಎಲ್ಲಾ ಹಾಕ್ಕೊಂಡು ಬರ್ತಾರೆ ಸ್ಕೂಲಿಗೆ. ನಾನೂ ನಾಳೆ ಹಾಕ್ಕೊಂಡೇ ಹೋಗ್ಬೇಕು.” ಎಂದು ಥಕಥೈ ಕುಣಿಯಲು ಘಲ್ ಘಲ್ ಸದ್ದು ಜೋರಾಗಿ, ಜಗುಲಿಯಲ್ಲಿದ್ದ ದೀಪ್ತಿಯ ಅಳುವನ್ನು ಅದು ತಾರಕಕ್ಕೇರಿಸಿತ್ತು.
“ನೋಡು ಅವ್ಳು ತೆಗ್ಯಲ್ವಂತೆ... ನಂಗೂ ಬೇಕು ಈಗ... ನಾನು ಗಾಯ ಮಾಡ್ಕೊಳ್ಳಲ್ಲ... ಕೊಡು ನಂಗೂ...” ಎಂದು ಬಿಕ್ಕಿ ಬಿಕ್ಕಿ ಅತ್ತಾಗ, ಅನಸೂಯಳ ಸಂಯಮದ ಕಟ್ಟೆ ಒಡೆದುಹೋಗಿತ್ತು. ದೀಪ್ತಿಯ ಬಳಿ ಧಾವಿಸಿ ಬಂದವಳೇ ಮಗಳ ಬೆನ್ನಿಗೆ ಸಮಾ ನಾಲ್ಕು ಬಾರಿಸಿ, ಕೊನೆಗವಳ ಪಕ್ಕದಲ್ಲೇ ಕುಕ್ಕರಿಸಿ ಕುಳಿತು, ತಾನೂ ಅಳತೊಡಗಿದ್ದಳು. ಗೆಜ್ಜೆ ಸಿಗದ ನಿರಾಸೆಯ ಅಳುವಿನ ಜಾಗವನ್ನೀಗ ಅಮ್ಮನ ಏಟಿನ ಉರಿ ಆಕ್ರಮಿಸಿಕೊಂಡುಬಿಟ್ಟಿತ್ತು. ಅಪರೂಪದಲ್ಲಿ ಅಪರೂಪಕ್ಕೆ ಕೈಯೆತ್ತಿದ್ದ ಅಮ್ಮಾ, ಇಂದು ಹೀಗೆ ಬಾರಿಸಿದ್ದು ಹುಡುಗಿಯನ್ನು ಅವಾಕಾಗಿಸಿಬಿಟ್ಟಿತ್ತು. ಅಕ್ಕನಿಗೆ ಬಿದ್ದ ಲತ್ತೆಗಳನ್ನು ನೋಡಿ, ಧೃತಿ ಪೆಚ್ಚಾಗಿ ನಿಂತು ಬಾಯಿಗೆ ಬೆರಳಿಟ್ಟುಕೊಂಡಿದ್ದಳು. ಅದೇ ಸಮಯಕ್ಕೇ ಗೇಟು ತೆರೆದುಕೊಂಡು ಅಲ್ಲಿಗೆ ಬಂದಿದ್ದ ಶ್ರೀಪಾದರು ತಮ್ಮ ಮುದ್ದಿನ ಮಗಳಿಗೆ ಪತ್ನಿ ಹೊಡೆಯುತ್ತಿರುವುದನ್ನು ನೋಡಿದ್ದೇ, ಅವರಿಗೆ ಸಿಟ್ಟು ನೆತ್ತಿಗೇರಿಬಿಟ್ಟಿತ್ತು.
“ಎಂಥಾ ರೋಗ ಬಡಿಯಿತೇ ನಿಂಗೆ ಅನ್ಸೂಯಾ? ಅದ್ಯಾಕೆ ಇವ್ಳನ್ನು ಹೀಗೆ ಚಚ್ತಿದ್ದೀಯಾ? ಅದೇನೇ ತಪ್ಪು ಮಾಡಿರ್ಲಿ ಹೀಗೆಲ್ಲಾ ಕೈ ಮಾಡ್ಬೇಡ ಅಂದಿದ್ದೆ ತಾನೇ?” ಮಕ್ಕಳಲ್ಲೇ ಇರುವುದನ್ನು ಕಂಡು, ಆದಷ್ಟು ಸಂಯಮ ತಂಡುಕೊಂಡು ಉಗ್ರನೋಟ ಬೀರಿದ್ದರು ಹೆಂಡತಿಯತ್ತ. ಆದರೆ ಅನಸೂಯಳ ಗಮನವೆಲ್ಲಾ ಮಗಳ ಮೇಲೆಯೇ ಇದ್ದಿತ್ತು. ಪಶ್ಚಾತ್ತಪದ ಉರಿಯಿಂದ ದೀಪ್ತಿಯನ್ನು ಎದೆಗವಚಿಕೊಂಡು ಭೋರೆಂದು ಅಳತೊಡಗಿದ್ದಳು. ಹೆಂಡತಿಯ ಯಾತನೆಯ ಅರಿವಿದ್ದುದರಿಂದ ಶ್ರೀಪಾದರೂ ತುಸು ಶಾಂತಗೊಂಡು ಅಲ್ಲೇ ಕುಳಿತುಕೊಂಡರು. ಧೃತಿಯೂ ಹೆದರುತ್ತಾ, ಗೆಜ್ಜೆಯ ಸದ್ದನ್ನು ಹೆಚ್ಚು ಮಾಡದೇ, ಮೆಲ್ಲನೆ ಅವರಲ್ಲಿಗೆ ಬಂದಿದ್ದಳು.
“ಅದ್ಯಾವ ಘಳಿಗೆಯಲ್ಲಿ ಆವತ್ತು ಇವ್ಳನ್ನ ಅಂಗ್ಳದಲ್ಲಿ ಆಡಲು ಬಿಟ್ಟೋದ್ನೋ! ಆ ಹಾಳು ಮಾವಿನ ಮರ ಹತ್ತೋಕೆ ಹೋಗಿ ಜಾರಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡ್ಕೊಂಡು ನಡ್ಯೋಕಾಗ್ದೇ ಜೀವ್ನಪೂರ್ತಿ ಅನುಭವ್ಸೋ ಹಾಗಾಗೋಯ್ತು ನಾವೆಲ್ಲಾ...” ತಲೆಚಚ್ಚಿಕೊಂಡವಳ ಹೆಗಲನ್ನು ಮೃದುವಾಗಿ ತಟ್ಟಿದ್ದರು ಶ್ರೀಪಾದರು.
“ಸಮಾಧಾನ ಮಾಡ್ಕೋ ಅನು, ನಮ್ಮ ನಿಯತಿಯಲ್ಲಿರೋದನ್ನ ತಪ್ಪಿಸೋಕೆ ಆಗತ್ತಾ? ಆವತ್ತು ನಾನೂ ಅಲ್ಲೇ ಇದ್ದಿದ್ದೆ ತಾನೇ? ಅರ್ಜೆಂಟು ಫೋನ್ ಬಂತು ಎಂದು ಒಳಗೆ ಹೋಗಿ, ಎರಡು ನಿಮಿಷ ಮಾತಾಡಿ ಬರೋವಷ್ಟರಲ್ಲೇ ಇವ್ಳು ಮರ ಹತ್ತೋಕೆ ಹೋಗಿ ಈ ದುರ್ಘಟನೆ ನಡ್ದು ಹೋಯ್ತು. ಎಷ್ಟು ಸಲ ನಾವಿದ್ರ ಬಗ್ಗೆ ಹಲುಬಿಲ್ಲ ಹೇಳು? ಮತ್ತೆ ಮತ್ತೆ ಅದದೇ ಪ್ರಲಾಪ್ ಇವ್ರುಗಳ ಮುಂದೆ ಬೇಕಾ?” ತುಸು ಬೇಸರಲ್ಲೇ ಸಮಾಧಾನಿಸಿದ್ದರು.
“ನಿಮ್ಗೆ ನನ್ನ ಸಂಕ್ಟ ಅರ್ಥವಾಗೊಲ್ಲಾರೀ... ಮನೆ ಮುಂದೆ ಕಣ್ಕುಕ್ತಿರೋ ಆ ಹಾಳು ಮರವ ಕಡ್ದು ಬಿಸಾಕಿ, ಇಲ್ಲಾ ಸುಡಿ ಅಂದ್ರೂ ನೀವು ಕೇಳೊಲ್ಲ... ಅತ್ತೆಯಮ್ಮನ ನೆನಪಲ್ಲಿ ನೆಟ್ಟಿದ್ದು ಅಂತ ಹಿಂಜರೀತಿರಾ. ಇನ್ನೊಂದು ತಿಂಗ್ಳು ನೋಡ್ತೇನೆ... ಆದ್ರೂ ಕಡ್ಸಿಲ್ಲ ಅಂದ್ರೆ ನಾನೇ ಖುದ್ದು ಆಳಿಗೆ ಮಾತಾಡಿ, ತೆಗ್ಸಿ ಬಿಡುವೆ ನೋಡ್ತಿರಿ...” ಎಂದವಳೇ, ಸಿಟ್ಟಿನಿಂದ ಅಲ್ಲಿಂದೆದ್ದು ಒಳಗೆ ನಡೆದುಬಿಟ್ಟಳು. 
ಅಮ್ಮನ ಅಳು, ಅಪ್ಪನ ಬಾಡಿದ ಮುಖ, ಪೆಚ್ಚಾದ ತಂಗಿ, ಇದನ್ನೆಲ್ಲಾ ನೋಡಿ ದೀಪ್ತಿಯ ಗೆಜ್ಜೆಯ ಹಠ ನೇಪಥ್ಯಕ್ಕೆ ಸರಿದುಬಿಟ್ಟಿತ್ತು. ಆದರೆ ಅಮ್ಮನ ಹೊಡೆತದ ಉರಿ ಮಾತ್ರ ಇನ್ನೂ ಬೆನ್ನಲ್ಲಿ ಚುರುಚುರು ಎನ್ನುತ್ತಿದ್ದರಿಂದ ತನ್ನ ಬಲಗೈಯನ್ನು ಬೆನ್ನ ಹಿಂದೆ ತಾಗಿಸಿಕೊಂಡು ಉಜ್ಜಿಕೊಳ್ಳತೊಡಗಿದ್ದಳು.
ಇದನ್ನು ಕಂಡಿದ್ದೇ ತಕ್ಷಣ ಎಚ್ಚೆತ್ತುಕೊಂಡ ಶ್ರೀಪಾದರು, ಜಗುಲಿಯ ಗೂಡಿನಲ್ಲಿಟ್ಟಿದ್ದ ತೆಂಗಿನೆಣ್ಣೆಯ ಗಿಂಡಿಯನ್ನು ತಂದು, ಮಗಳ ಬೆನ್ನಿಗೆ ಸವರಿದ್ದರು.
“ಅಪ್ಪಾ, ನನ್ನ ಗೆಜ್ಜೆ ತೆಗ್ದುಬಿಡು... ನಾ ನಾಳೆಯೇ ಹಾಕ್ಕೊಳ್ಳುವೆ” ಎಂದು ಸಣ್ಣ ಧ್ವನಿಯಲ್ಲಿ ಧೃತಿ ಹೇಳಲು, “ಬೇಡ ಬಿಡು, ಹಾಕ್ಕೊಂಡಿರು ನೀನು, ನಿನ್ನ ಕಾಲಿಗೆ ಚೆಂದ ಕಾಣ್ತಿದೆ.. ನಂದು ಸೊಟ್ಟ ಪಟ್ಟ ಇದೆ ನೋಡು... ಸರಿ ಆಗೊಲ್ಲ ಹಾಕ್ಕೊಂಡ್ರೂ...” ಎಂದು ತಂಗಿಯ ಕೆನ್ನೆಯನ್ನು ಸವರಿದವಳ ಗಲ್ಲಕ್ಕೊಂದು ಮುತ್ತಿಟ್ಟಿದ್ದರು ಶ್ರೀಪಾದರು. 
“ಬನ್ನಿ ಇಬ್ರೂ ಹೊರಗೆ ಅಂಗಳಕ್ಕೆ ಹೋಗುವ... ನಾನು ನಿಮಗಿಬ್ರಿಗೆ ಅಂತ ಜೋಕಾಲಿ ಮಣೆ ಮಾಡ್ಸಿದ್ದೇನೆ. ನಿಮ್ಗೆ ಗೊತ್ತಾ? ಅದ್ರ ಅಕ್ಕ-ಪಕ್ಕ, ಹಿಂದೆ-ಮುಂದೆ ಎಲ್ಲಾ ಹಿಡಿಕೆ ಇವೆ! ಹೀಗಾಗಿ ಬೀಳೋ ಭಯವೇ ಇಲ್ಲಾ. ಕೆಂಚ ಹೊತ್ಕೊಂಡು ಬರ್ತಿದ್ದಾನೆ... ಅಗೋ ಅಲ್ನೋಡಿ ಬಂದೇ ಬಿಟ್ಟ” ಎಂದು ಉಮೇದಿ ತೋರಲು. ಉತ್ಸಾಹದಿಂದ ಕುಣಿಯುತ್ತಾ ಧೃತಿ ಅಂಗಳಕ್ಕೆ ಓಡಲು, ಅಂಬೆಗಾಲಿನಲ್ಲಿ ತೆವಳುತ್ತಾ ಸಾಗತೊಡಗಿದ್ದ ದೀಪ್ತಿಯನ್ನು ಎತ್ತಿಕೊಂಡು ಧೃತಿಗಿಂತ ಮುಂದಾಗಿ ಓಡಿದ್ದರು ಶ್ರೀಪಾದರು.
“ಅಯ್ಯಾ, ಸಮಾ ಭಾರ ಇದೆ ಮಾರ್ರೆ... ಹೊತ್ಕೊಂಡ್ ಬರತನ್ಕಾ ನನ್ನ್ ಹೆಣ ಬಿದ್ದೋಯ್ತು! ಎಲ್ಲಿ ಕಟ್ಬೇಕ್ರಾ? ಬೆಗ್ನೆ ಹೇಳಿ, ನಂಗೆ ಪ್ಯಾಟಿ ಕಡೆ ಹೋಗೂಕದೆ...” ಕೆಂಚ ಅವಸರಿಸಲು, ಆಲೋಚನೆಗೆ ಬಿದ್ದುಬಿಟ್ಟರು ಶ್ರೀಪಾದರು. ಅವರೇನೋ ಅದನ್ನು ಗಟ್ಟಿಮುಟ್ಟಾಗಿರುವ ಮಾವಿನ ಮರದ ಗೆಲ್ಲಿಗೇ ಹಾಕಿಸಲು ತಂದಿದ್ದಾಗಿತ್ತು. ಆದರೆ ಇಂದು ಬಹಳ ಕಠಿಣವಾಗಿ ಹೆಂಡತಿ ತಾಕೀತು ಮಾಡಿದ್ದರಿಂದ ಸಂಕಟದ ಜೊತೆ ಹೊಸ ಚಿಂತೆಯೂ ಸೇರ್ಪಟ್ಟಿತ್ತು.
“ಹ್ವಾಯ್, ಯಾವ ಮರಕ್ಕೆ ಕಟ್ಟದ್ರಾ? ಈ ಮಾವಿನ ಮರನೇ ಸಮಾ ಆಯ್ತದೆ ಅನಿಸ್ತಪ ನಂಗೆ... ಪೇರ್ಲೆ ಮರ ಹಳೇತಾಗದೆ... ಅಲ್ನೋಡಿ ಲಡ್ಡಾಗೋಗದೆ ಮರ...” ಎನ್ನಲು ಅವರಿಗೂ ಹೌದೆನಿಸಿತ್ತು. ಆದದ್ದಾಗಲಿ, ಒಂದು ತಿಂಗಳವರೆಗಾದರೂ ಮಕ್ಕಳಾಡಿಕೊಳ್ಳಲಿ ಎಂದು ಕೆಂಚನಿಗೆ ಮಾವಿನ ಮರಕ್ಕೇ ಕಟ್ಟಲು ಆದೇಶಿಸಿದ್ದರು.
ತೀರಾ ತಳಮಟ್ಟಕ್ಕೂ ತಾಗದಂತೇ, ಅತಿ ಎತ್ತರಕ್ಕೂ ಹೋಗದಂತೇ, ಹದಾ ಮಧ್ಯಕ್ಕೇ ಬರುವಂತೇ ಅಳೆದು ಸುರಿದು ಹಗ್ಗ ಕಟ್ಟಿಸಿದ್ದರು. ಅದಕ್ಕೆ ಸುತ್ತಲೂ ಭದ್ರತೆ ಮಾಡಿಸಿದ್ದ ಜೋಕಾಲಿ ಮಣೆಯನ್ನು ಗಟ್ಟಿಯಾಗಿ ಬಿಗಿದು ಕಟ್ಟಿ ಕೂರಿಸಿದ್ದೇ ಮಕ್ಕಳಿಬ್ಬರೂ ಬೊಬ್ಬೆ ಹೊಡೆದು ಅದನ್ನೇರಿ ಜೀಕತೊಡಗಿದ್ದರು. ಅಗಲವಾದ ಗೆಲ್ಲುಗಳು, ಮೈತುಂಬಾ ತುಂಬಿದ ಹಸಿರೆಲೆಗಳಿಂದಾಗಿ ಮಟ ಮಧ್ಯಾಹ್ನದ ಬಿಸಿಲಲ್ಲೂ ಅಲ್ಲಿ ತಂಪೆರೆದಿತ್ತು. ಮಕ್ಕಳ ಕೇಕೆ, ನಗು, ಅಲೆಯಂತೆ ಸಾಗಿ, ಒಳಜಗುಲಿಯಲ್ಲೇನೋ ಕೆಲಸದಲ್ಲಿ ತೊಡಗಿದ್ದ ಅನಸೂಯೆಯ ಕಿವಿಯೊಳಗೆ ಹೊಕ್ಕು, ಅವಳ ಜೀವವನ್ನೂ ತುಸು ತಂಪಾಗಿಸಿತ್ತು. ಮೆಲ್ಲನೆ ಹೊರಬಂದು ನೋಡಿದ್ದಳು. ಗಂಡ ಮೆಲುವಾಗಿ ಜೋಕಾಲಿ ತೂಗುತ್ತಿದ್ದರೆ, ಮಕ್ಕಳಿಬ್ಬರೂ ಕಿಲಕಿಲ ನಗುತ್ತಿದ್ದರು. ಅಮ್ಮನನ್ನು ಕಂಡು ಮಕ್ಕಳಿಬ್ಬರೂ ಕೈ ಬೀಸಿದ್ದರೂ, ಅದನ್ನು ಕಟ್ಟಿದ್ದು ಅದೇ ಅನಿಷ್ಟ ಮಾವಿನ ಮರಕ್ಕೆಂದು ಸಿಟ್ಟಾಗಿ, ಹುಬ್ಬುಗಂಟಾಗಿಸಿಕೊಂಡು ತಕ್ಷಣ ಅಲ್ಲಿಂದ ಒಳನಡೆದುಬಿಟ್ಟಿದ್ದಳು. 
ಮನಸಾರೆ ಆಟವಾಡಿ, ಕೊನೆಗೆ ಹಸಿವಾಗಲು, ತಾನು ಮೊದಲು ಊಟಕ್ಕೆ ಓಡಿದ್ದಳು ಧೃತಿ. ಅಪ್ಪನ ತೊಡೆಯನ್ನೇರಿ ಕುಳಿತು, ಇನ್ನೂ ಅತ್ತಿಂದಿತ್ತ ಓಲಾಡುತ್ತಲಿದ್ದ ಉಯ್ಯಾಲೆಯನ್ನು ದಿಟ್ಟಿಸುತ್ತಿದ್ದ ದೀಪ್ತಿಗೆ ಹಸಿವು ನೀರಡಿಕೆಗಳೆಲ್ಲಾ ಮರೆತುಹೋಗಿದ್ದವು. ತನ್ನ ಬಹುದಿನದ ಕನಸಾಗಿದ್ದ ಜೋಕಾಲಿಯನ್ನು ಕಂಡು ಅವಳಿಗೆ ಹೊಟ್ಟೆ ತುಂಬಿದಂತಾಗಿತ್ತು.
“ಅಪ್ಪಾ, ನಾನು ಹಠ ಮಾಡಿದ್ರಿಂದ ಅಮ್ಮಂಗೆ ತುಂಬಾ ಬೇಜಾರಾಯ್ತೇನೋ ಅಲ್ವಾ? ಆದ್ರೆ, ನಾನೇನು ಮಾಡ್ಲಿ? ನಂಗೂ ಗೆಜ್ಜೆ ಬೇಕು ಅಂತ ಆಸೆ ಆಗ್ತದೆ... ಧೃತಿ ಹಾಕ್ಕೊಂಡು ಕುಣೀವಾಗೆಲ್ಲಾ ನಾನೂ ಕುಣೀಬೇಕು ಅನ್ನಿಸ್ತದೆ... ಅಮ್ಮಾ ಬೇಡ ಅಂತ ಬೈತಾಳೆ... ನನ್ನ ಕಾಲಿಗೆ ಯಾಕೆ ಬೇಗ ಗಾಯ ಆಗೋದು ಅಪ್ಪಾ? ನನ್ನ ಚರ್ಮ ಧೃತಿಯ ಹಾಗೇ ಇರ್ಬೇಕಿತ್ತು.” ಮುಖ ಮುದುಡಿಸಿಕೊಂಡು ಪ್ರಶ್ನಿಸಿದ್ದ ಮಗಳ ಕೆನ್ನೆಸವರಿ ಅಪ್ಪಿಕೊಂಡಿದ್ದರು ಶ್ರೀಪಾದರು.
“ಪುಟ್ಟಿ, ನಿಂಗೆ ಪರೀಕ್ಷೆಯಲ್ಲಿ ಬಿಟ್ಟಸ್ಥಳ ತುಂಬಿರಿ ಅಂತ ಕೊಡ್ತಾರೆ ಅಲ್ವಾ? ಅದ್ರ ಕೆಳ್ಗೆ ಒಂದ್ನಾಲ್ಕು ಉತ್ರ ಕೊಟ್ಟಿರ್ತಾರೆ ಸರಿಯಾ? ಅದ್ರಲ್ಲೊಂದು ಉತ್ರವನ್ನ ನೀನು ಆರಿಸ್ಕೊಳ್ತೀಯಾ... ಸರಿಯಾಗಿದ್ರೆ ರೈಟ್, ತಪ್ಪಾಗಿದ್ರೆ ರಾಂಗ್ ಹಾಕ್ತಾರೆ ಹೌದೋ?” ಎನ್ನಲು ಕುತೂಹಲದಿಂದ ತಲೆದೂಗಿದ್ದಳು ದೀಪ್ತಿ.
“ಹಾಂ, ಹಾಗೇ ಈಗ ನಿನ್ನ ಮುಂದೆ ಒಂದು ಪ್ರಶ್ನೆಯಿದೆ ಅಂತಿಟ್ಕೋ. ಅದೇನಂದ್ರೆ, ‘ನಮ್ಮ ದೀಪ್ತಿ ಪುಟ್ಟ ಕೂಸಾಗಿದ್ದಾಗ ಮರಹತ್ತಲು ಹೋಗಿ, ಏನೋ ಪರಾಮಶಿಯಾಗಿ, ಮೇಲಿಂದ ಬಿದ್ದು ಸೊಂಟಕ್ಕೆ ಏಟಾಗಿಹೋಯ್ತು. ಇದರಿಂದಾಗಿ ಅವಳಿಗೆ ಎಲ್ಲರಂತೇ ಆಡಲು ಆಗುತ್ತಿಲ್ಲ, ನಿಲ್ಲಲಾಗುತ್ತಿಲ್ಲ, ನಡೆಯಲಾಗುತ್ತಿಲ್ಲ, ಕಾಲಿಗೆ ಶಕ್ತಿ ಇಲ್ಲದ್ದರಿಂದ ಚರ್ಮ ಮೃದುವಾಗಿ ಬೇಗ ಗಾಯ ಮಾಗೋದಿಲ್ಲ. ಅವಳಿಗೆ ಕಾಲಿಗೆ ಡ್ಯಾಶ್ ಹಾಕಿಕೊಂಡರೆ ಪೆಟ್ಟಾಗುತ್ತದೆ’ ಎಂದು ಹೇಳಿದರೆ, ನೀನು ಆ ಡ್ಯಾಶಿನಲ್ಲಿ ಏನು ಉತ್ರ ಬರೀತಿಯಾ? ಉತ್ರ ಒಂದು ಚಪ್ಪಲು, ಉತ್ರ ಎರಡು ಗೆಜ್ಜೆ, ಉತ್ರ ಮೂರು ಎರಡೂ ಸರಿ, ಉತ್ರ ನಾಲ್ಕು ಎರಡೂ ತಪ್ಪು ಅಂತಿದೆ ಅಂದ್ಕೋ...” ಎಂದಿದ್ದೇ ಆಕೆ ಥಟ್ಟನೆ “ಉತ್ರ ಮೂರು” ಎಂದಿದ್ದಳು. ಆಗ ಮುಗುಳ್ನಕ್ಕ ಶ್ರೀಪಾದರು,
“ನೋಡು, ನೀನೇಷ್ಟು ಜಾಣೆ ಅಂತ! ನಿಂಗೇ ನಿನ್ನ ಸಮಸ್ಯೆ ಚೆನ್ನಾಗಿ ಗೊತ್ತಿದೆ... ನಮಗೆ ಯಾವುದ್ರಿಂದ ತೊಂದ್ರೆ ಎಂಬುದು ಗೊತ್ತಾಗಿಬಿಟ್ರೆ ಸಮಸ್ಯೆ ಅರ್ಧದಷ್ಟು ಪರಿಹಾರವಾದಂತೇ. ನಿಂಗೆ ಚಪ್ಪಲ್ ಹಾಕ್ಕೊಳೋಕೆ ಕಷ್ಟ, ಗೆಜ್ಜೆ ಆಗಿಬರಲ್ಲ ಎಂಬುದೆಲ್ಲಾ ಚೆನ್ನಾಗಿ ಗೊತ್ತಿದೆ. ಹಾಕ್ಕೊಂಡ್ರೆ ಏನೇನೆಲ್ಲಾ ಸಮಸ್ಯೆ ಆಗ್ತದೆ ಎಂಬುದೂ ತಿಳಿದಿದೆ.. ಅಲ್ಲಿಗೆ ಮುಗೀತಲ್ಲಾ! ಅವುಗಳಿಂದ ದೂರವಿದ್ದುಬಿಟ್ರೆ ಆಯ್ತಪ್ಪಾ, ಸಮಸ್ಯೆ ಬರೋದೇ ಇಲ್ಲಾ ಅಲ್ವಾ?” ಎನ್ನಲು ಹೌದೆಂದು ತಲೆಯಾಡಿಸಿ ನಕ್ಕಿದ್ದಳು ದೀಪ್ತಿ.
“ಈಗ ನಿನ್ನ ಕೈಗಳಿಗೆ ಏನನ್ನು ಹಾಕ್ಕೊಂಡ್ರೆ ತೊಂದ್ರೆ ಆಗತ್ತೆ?” ಎಂದು ಕೇಳಿದ್ದೇ, ಹುರುಪಿನಿಂದ “ಏನೂ ಇಲ್ಲಾ...” ಎಂದು ಕೂಗಲು, ಜೋರಾಗಿ ನಗುತ್ತಾ ತಮ್ಮ ಅಂಗಿಯ ಜೇಬಿನಿಂದ, ಗೆಜ್ಜೆ ಮಣಿಗಳನ್ನು ಪೋಣಿಸಿದ್ದ ನಾಲ್ಕು ಬೆಳ್ಳಿಯ ಬಳೆಗಳನ್ನು ತೆಗೆದು ತೊಡಿಸಿದ್ದರು. ಅವುಗಳ ಕಿಣಿಕಿಣಿ ಸದ್ದು ಕೇಳಿದ್ದೇ ದೀಪ್ತಿಯ ಕಣ್ಗಳು ಅರಳಿ ನಿಂತಿದ್ದವು. ತಿರುಗಣಿಯಿದ್ದಿದ್ದರಿಂದ ಅದರ ಗಾತ್ರವನ್ನು ಕುಗ್ಗಿಸಿ ಅವಳ ಎಳೆಯ ಕೈಗಳಿಗೆ ಪಟ್ಟಾಗಿ ಕೂರಿಸುವಂತೇ ಮಾಡಿದ್ದರು ಶ್ರೀಪಾದರು.
ಅಂದು ಸಂಜೆಯೇ ಆಕೆ ಮೊದಲ ಬಾರಿಗೆ, ಅಂಗಳದಲ್ಲಿ ಕುಳಿತು, ಘಲ್ ಘಲ್ ಎನ್ನುತ್ತಿದ್ದ ತನ್ನ ಕೈಗಳಿಂದ ಮಾವಿನ ಮರದ ಸುಂದರ ಚಿತ್ರವನ್ನು ಬರೆದಿದ್ದು, ಅದನ್ನು ಮರುದಿವಸ ಶಾಲೆಗೆ ಕೊಂಡೊಯ್ದು ಡ್ರಾಯಿಂಗ್ ಟೀಚರಿಗೆ ತೋರಿಸಿದಾಗ ಅವರು ನೋಡಿ ಬಹಳ ಮೆಚ್ಚಿ ಶಬ್ಬಾಸ್ ಕೊಟ್ಟಿದ್ದಲ್ಲದೇ, ನೋಟಿಸ್ ಬೋರ್‍ಡಿನಲ್ಲೂ ಹಾಕಿಸಿ ಹಲವರ ಮೆಚ್ಚುಗೆ ಗಳಿಸುವಂತೇ ಮಾಡಿದ್ದರು. ಈ ಸುದ್ದಿ ಅಪ್ಪನಿಗೂ ಮುಟ್ಟಲು, ಮಗಳನ್ನು ಮುದ್ದಾಡಿ ಪ್ರೋತ್ಸಾಹಿಸಿದ್ದು! ಮುಂದೆ, ಅದೇ ವರ್ಷ ನಡೆದಿದ್ದ ಜಿಲ್ಲಾ ಮಟ್ಟದ ಪ್ರೈಮರಿ ಶಾಲೆಯ ಚಿತ್ರಕಲಾ ಸ್ಪರ್ಧೆಯಲ್ಲಿ ದೀಪ್ತಿಗೆ ಎರಡನೆಯ ಬಹುಮಾನ ಸಿಗಲು, ಮುರುಟಿದ್ದ ಅವಳ ಕೆಲವು ಕನಸುಗಳಿಗೆ ಮರುಜೀವತುಂಬಿದಂತಾಗಿತ್ತು. ಮಗಳ ಒಲವು ಮತ್ತು ಪ್ರತಿಭೆ ಚಿತ್ರಕಲೆಯ ಮೇಲೆ ಇರುವುದು ತಿಳಿದು, ಅವಳಿಗೆ ಅದರಲ್ಲಿ ವಿಶೇಷ ತರಬೇತಿ ಕೊಡಿಸಿದ್ದರು ಶ್ರೀಪಾದರು. ಎಷ್ಟೋ ಬಾರಿ ಆಕೆ ಚಿತ್ರವನ್ನು ಬಿಡಿಸಲು ಆಯ್ದುಕೊಳ್ಳುವ ತಾಣ ಮಾತ್ರ ಅದೇ ಮಾವಿನಮರದ ಕಟ್ಟೆಯಾಗಿಬಿಡಲು, ಅಂತೂ ಅನಸೂಯಳ ಕೊಡಲಿಯೇಟಿನ ಭೀತಿಯಿಂದ ಆ ಬಡಪಾಯಿ ಮಾವಿನಮರ ಪಾರಾಗಿಬಿಟ್ಟಿತ್ತು. ಆಯುರ್ವೇದಿಕ್ ಚಿಕಿತ್ಸೆಯಿಂದ ದೀಪ್ತಿ ತಕ್ಕಮಟ್ಟಿಗೆ ನಿಂತು, ಮೆಲ್ಲನೆ ಊರುಗೋಲನ್ನು ಹಿಡಿದು ನಾಲ್ಕು ಹೆಜ್ಜೆಯನ್ನು ಹಾಕಲಾಗುವಷ್ಟರಲ್ಲೇ ಕಾರ್ಯದ ಮೇಲೆ ಶ್ರೀಪಾದರ ಕುಟುಂಬ ಪಟ್ಟಣಕ್ಕೆ ಸ್ಥಳಾಂತರವಾಗಲು, ದೀಪ್ತಿಯ ಪ್ರತಿಭೆಗೆ ಅದು ಮತ್ತಷ್ಟು ಸಹಾಯವನ್ನು ಮಾಡಿತ್ತು. ಅಲ್ಲಿಯ ಪ್ರಸಿದ್ಧ ಆರ್ಟ್ ಕಾಲೇಜಿಗೆ ಸೇರಿ, ಕ್ರಮೇಣ ನಾಡಿನ ಹೆಸರಾಂತ ಚಿಕ್ರಗಾರರಲ್ಲೋರ್ವಳೆನಿಸಿಕೊಂಡಿದ್ದಳು ದೀಪ್ತಿ. ಅವಳ ಕಲೆಗೆ, ಹೋರಾಟದ ಕೆಚ್ಚಿಗೆ ಮನಸೋತು, ಮನಸಾರೆ ಮೆಚ್ಚಿ ಅವಳನ್ನ ವರಿಸಿದ ರಾಜೀವನ ಮನೆ-ಮನವನ್ನು ಸೇರಿ, ಪುಟ್ಟ ಸಾನ್ವಿಯ ತಾಯಿಯಾಗಿ, ಈಗ ದಶಕಗಳೇ ಸಂದಿವೆ!
ಆ ವರ್ಷದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದೀಪ್ತಿಯ ಒಂದು ವಿಶಿಷ್ಟ ಚಿತ್ರಕ್ಕೆ ಪ್ರಥಮ ಬಹುಮಾನ ದೊರಕಿತ್ತು. ಅದರ ಅನಾವರಣ ಹಾಗೂ ಬಹುಮಾನ ವಿತರಣೆಯ ಸಮಾರಂಭಕ್ಕಾಗಿಯೇ ಅಂದು ಸಕುಟುಂಬ ಪರಿವಾರವಾಗಿ ಎಲ್ಲರೂ ಹೊರಟಿದ್ದರು. ಅವಳಿಗೋ ಮಗಳು ಸಾನ್ವಿ ತನ್ನ ಎಳೆಯ ಕಾಲ್ಗಳಿಗೆ ಗೆಜ್ಜೆಯ ತೊಟ್ಟು ಬಂದು, ಓಡಾಡಲೆಂಬ ಆಸೆ. ಆದರೆ ಸಾನ್ವಿ ನಿರಾಕರಿಸಲು, ಸಹಜವಾಗಿಯೇ ನಿರಾಸೆಯಾಗಿಬಿಟ್ಟಿತ್ತು.
_೩_
 “ದೀಪ್ತಿ, ಇಳಿ ಬೇಗ ಮಾರಾಯ್ತಿ. ಕಾರು ಪಾರ್ಕ್ ಮಾಡ್ಬೇಕು... ಟೈಮ್ ಬೇರೆ ಆಗಿದೆ...” ಗತಕಾಲದ ಕ್ಯಾನವಾಸಿನಲ್ಲಿ ನೆನಪುಗಳ ಚಿತ್ರ ಬಿಡಿಸುತ್ತಾ ಕಳೆದುಹೋಗಿದ್ದವಳು, ಪತಿಯ ಎಚ್ಚರಿಕೆಯಿಂದ ತಡಬಡಾಯಿಸಿ ಇಳಿಯ ಹೋಗಿ ಮುಗ್ಗಿರಿಸಲು, ರಾಜೀವ ಸಂಭಾಳಿಸಿದ.
“ಹುಶಾರು ಮಾರಾಯ್ತಿ, ಬಿದ್ದುಗಿದ್ದು ಏಟಾದ್ರೆ ಕಷ್ಟ...” ಎಂದು ಅವಳಿಗೆ ಕ್ಲಚಸ್ಗಳನ್ನು ನೀಡಲು ಅವುಗಳನ್ನಾಧರಿಸಿಕೊಂಡು ಮೆಲ್ಲನೆ ಹೆಜ್ಜೆ ಹಾಕಿದಳು ದೀಪ್ತಿ.
ಎದೆಯೊಳಗೆ ಅವಲಕ್ಕಿ ಕುಟ್ಟಿದಂಥ ಅನುಭವ. ಅಷ್ಟು ದೊಡ್ಡ ಸಭೆಯಲ್ಲಿ ತನ್ನ ಚಿತ್ರದ ಅನಾವರಣ! ಮೊದಲ ಬಾರಿ ಅವಳಿಗೆ ತುಸು ಆತಂಕವಾಗಿತ್ತು. ಪ್ರತಿಬಾರಿಯೂ ತಾನು ಬಿಡಿಸಿದ್ದನ್ನು ಫೋಟೋ ಹೊಡೆದುಕೊಂಡು ಅಪ್ಪನಿಗೆ, ರಾಜೀವನಿಗೆ ತೋರುತ್ತಿದ್ದವಳು. ಆದರೆ ಈಸಲವೇ ಅದು ಹೇಗೋ ಮರೆತುಹೋಗಿಬಿಟ್ಟಿದ್ದರಿಂದ ಈವರೆಗೂ ಯಾರೂ ನೋಡಿರಲಿಲ್ಲ! ಹೀಗಾಗಿ ಅವಳನ್ನು ಮತ್ತು ತೀರ್ಪುಗಾರರನ್ನು ಬಿಟ್ಟು ಉಳಿದವರಿಗೆಲ್ಲಾ ಇಂದು ಅದರ ಪ್ರಥಮ ದರ್ಶನವಾಗುವುದರಲ್ಲಿತ್ತು.
ಗಂಟೆ ನಾಲ್ಕೂವರೆಯಾಗತೊಡಗುತ್ತಿದ್ದಂತೇ ಕಾರ್ಯಕ್ರಮವು ಆರಂಭವಾಗುವ ಸೂಚನೆ ಸಿಕ್ಕಿತು. ಇನ್ನೂ ಮನೆಯವರು ಯಾರೂ ತಲುಪದ್ದು ಕಂಡು ತುಸು ದಿಗಿಲಿಗೆ ಬಿದ್ದಳು ದೀಪ್ತಿ. “ಛೇ, ನೋಡಿ ಇನ್ನೂ ಯಾರೂ ಬಂದಿಲ್ಲ! ಅತ್ತೆ ನಮ್ಮೊಂದಿಗೇ ಹೊರಟಿದ್ದಿದ್ರೆ ಸಾನ್ವಿಯೂ ಬಂದಿರೋಳು... ಅಪ್ಪ ಬೇಗ ಹೊರಟಿದ್ದನೋ ಇಲ್ವೋ, ಪೋನ್ ಮಾಡೋಣ್ವಾ?” ಎಂದು ಪೇಚಾಡುತ್ತಿರುವಾಗಲೇ ಹಿಂಬದಿಯಿಂದ “ಅಮ್ಮಾ” ಎಂದು ಕರೆದ ಸಾನ್ವಿಯ ಧ್ವನಿಗೆ ಥಟ್ಟನೆ ತಿರುಗಿದಳು ದೀಪ್ತಿ.
ಹತ್ತು ಹೆಜ್ಜೆ ದೂರದಲ್ಲಿದ್ದ ಸಾನ್ವಿ ನಸು ನಗುತ್ತಾ ಅಮ್ಮನ ಬಳಿ ಬರುತ್ತಿರಲು, ಘಲ್ ಘಲ್ ಸದ್ದು ಆ ಗದ್ದಲದಲ್ಲೂ ದೀಪ್ತಿಯ ಕಿವಿಗೆ ಬಡಿದಿತ್ತು. ಅಮ್ಮ ತನ್ನ ಪಾದದ ಕಡೆಗೇ ನೋಡುತ್ತಿರುವುದನ್ನು ಗಮನಿಸಿ, ತುಂಟ ನಗೆ ಬೀರಿದ ಸಾನ್ವಿ, ತನ್ನ ನೀಲಿ ಬಣ್ಣದ ಉದ್ದಲಂಗವನ್ನೆತ್ತಿ ನಿಂತಲ್ಲೇ ಸಣ್ಣದಾಗಿ ಜಂಪ್ ಮಾಡಲು, ಘಲ್ ಎಂದಿತು ಅವಳ ಕಾಲಂದುಗೆ! ಸೀದಾ ಓಡಿ ಬಂದವಳೇ ಅಮ್ಮನ ಕೊರಳಿಗೆ ಜೋತು ಬಿದ್ದವಳೇ ಅವಳ ಕೆನ್ನೆಗೊಂದು ಮುತ್ತು ಕೊಟ್ಟಳು. ದೀಪ್ತಿ ತನ್ನ ಕಣ್ಗಳಿಂದ ಉರುಳಲು ತಯಾರಾಗಿದ್ದ ಹನಿಗಳನ್ನು ಥಟ್ಟನೆ ಒರೆಸಿಕೊಂಡಳು.
“ಅಲ್ವೇ, ಎಂತಕ್ಕೆ ಸೊಕ್ಕು ಮಾಡಿದ್ದು ಆಗ ನೀನು? ಈಗ ನೋಡಿದ್ರೆ ಗೆಜ್ಜೆ ಹಾಕ್ಕೊಂಡು ಬಂದಿದ್ದೀಯಾ...” ಮಗಳ ಕಿವಿಯಲ್ಲಿ ಪಿಸುಗುಟ್ಟಿದಳು ದೀಪ್ತಿ.
“ಅದಾ, ಪೂಜೆಗಾದ್ರೆ ಹೌದಪ್ಪಾ... ಸುಮ್ನೇ ಇಲ್ಲಿಗೆಲ್ಲಾ ಯಾಕೆ  ಅಂತ ಬೇಡ ಅಂದಿದ್ದೆ. ಆದ್ರೆ ಶ್ರೀಪಾದಜ್ಜ ನಂಗೆ ತಿಳ್ಸಿ ಹೇಳ್ದ, ‘ಅಮ್ಮಂಗೆ ಗೆಜ್ಜೆ ಅಂದ್ರೆ ತುಂಬಾ ಇಷ್ಟ, ಸರ್ಪೈಸ್ ಕೊಡೋಣ ಹಾಕ್ಕೋ’ ಅಂತ. ನಂಗೂ ಹೌದು ಅನ್ನಿಸ್ತು ಹಾಕ್ಕೊಂಡೆ” ಎಂದು ಉತ್ತರಿಸಿ ಸೀದಾ ಅಜ್ಜಿಯ ಬಳಿ ಓಡಲು, ಪ್ರೀತಿಯಿಂದ ಅಪ್ಪನ ಕಡೆ ನೋಡಿದಳು ದೀಪ್ತಿ. ಆದರೆ ಶ್ರೀಪಾದರು ಬೀಗರ ಬಳಿ ಅದೇನೋ ಮಾತನಾಡುವದರಲ್ಲಿ ವ್ಯಸ್ಥರಾಗಿದ್ದರು.
ಮುಂದಿನ ಹತ್ತು ನಿಮಿಷದಲ್ಲಿ ವಿದ್ಯುಕ್ತವಾಗಿ ಸಭೆ ಆರಂಭವಾಗಿತ್ತು. ಪ್ರಾಥಮಿಕ ಕಲಾಪಗಳು, ಸ್ವಾಗತ ಭಾಷಗಳೆಲ್ಲಾ ಮುಗಿದು, ರೇಶಿಮೆಯ ವಸ್ತ್ರದಲ್ಲಿ ಮುಚ್ಚಿಟ್ಟಿದ್ದ ಅವಳ ಚಿತ್ರದ ದೊಡ್ಡ ಕ್ಯಾನವಾಸನ್ನು ಎದುರಿಗೆ ತಂದಿಟ್ಟರು. ಬಹುಮಾನ ವಿತರಣೆಯ ಸ್ವೀಕರಿಸಲು ದೀಪ್ತಿಯನ್ನು ವೇದಿಕೆಗೆ ಆಹ್ವಾನಿಸಲಾಯಿತು. ಪತಿಯ ಜೊತೆಗೂಡಿ ಮೆಲ್ಲನೆ ಮೇಲೇರುತ್ತಿದ್ದವಳ ಬಳೆಗಳೊಳಗಿನ ಗೆಜ್ಜೆ ಮಣಿಗಳು ಘಲ್‌ಘಲ್ ಎನ್ನುತ್ತಿದ್ದವು.
 ಅಂತೂ ಅವಳು ಬಿಡಿಸಿದ್ದ, ಬಹುಮಾನಿತ ಚಿತ್ರವನ್ನು ಅನಾವರಣಗೊಳಿಸುವ ಆ ಘಳಿಗೆ ಬಂದುಬಿಟ್ಟಿತು. ಹಳದಿ ಬಣ್ಣದ ರೇಶಿಮೆಯ ಮುಸುಕು ಮೆಲ್ಲನೆ ಮೇಲೆರಿದಂತೇ ಚಿತ್ರ ತೆರೆದುಕೊಳ್ಳತೊಡಗಿತು.
ಅನಂತದಾಚೆಯೆಲ್ಲೋ ಚಾಚಿರುವಂತೆ ತೋರುತ್ತಿದ್ದ ಬೃಹತ್ ಮಾವಿನ ಮರದ ಚಿತ್ರವದು! ಕಾಲ್ಗೆಜ್ಜೆಯ ಮಣಿಗಳೆಲ್ಲಾ ಸೇರಿ ಬೇರಿನ ಆಕಾರದಲ್ಲಿ ನೆಯ್ದುಕೊಂಡು, ಅದರ ದಪ್ಪ ಕಾಂಡದ ಮೂಲಕ ಸಾಗಿ, ಮೇಲೇರಿ, ಆಗಸದಲ್ಲೆಲ್ಲೋ ಮಾಯವಾಗಿಬಿಟ್ಟಿದ್ದವು. ಆ ಮರದ ತುದಿ ನೀಲಾಗಸದಾಚೆಯೂ ಬೆಳೆದು ಬಾನಗಲ ಚಾಚಿಕೊಂಡಿತ್ತು. ಪ್ರತಿ ಎಲೆಯ ತುದಿಗೂ ಮಂಜಿನ ಹನಿಯ ಬದಲು ಗೆಜ್ಜೆಯ ಮಣಿ ಹೊಳೆಯುತ್ತಿದ್ದರೆ, ತೊಟ್ಟಿನಲ್ಲಿ ಮಾವಿನ ಹಣ್ಣಿನಾಕಾರದಲ್ಲೂ ಗೆಜ್ಜೆಗಳಿದ್ದವು. 
ಆ ಬೃಹತ್ ಮರದ ಬುಡದಲ್ಲಿ ಕುಳಿತು, ತನ್ನ ತಲೆಯೆತ್ತಿ ಬೊಗಸೆಯೊಡ್ಡಿದ್ದಾಳೆ ಓರ್ವ ಪುಟ್ಟ ಹುಡುಗಿ. ಅವಳ ಕಾಲಿನ ಬೆರಳುಗಳೆಲ್ಲಾ ಬೆಳೆದು, ಮುಂದೆ ಸಾಗಿ, ಆ ಮರದ ಗೆಜ್ಜೆ ಬೇರುಗಳ ಜೊತೆ ಬೆಸೆದುಕೊಂಡಿವೆ. ಮರದ ಎಲೆಗಳಿಂದ ಉರುಳಿ ಬೀಳುತ್ತಿದ್ದ ಗೆಜ್ಜೆ ಹನಿಗಳಲ್ಲಿ ಹಲವು ಅವಳ ಬೊಗಸೆಯನ್ನೂ ತುಂಬಿ ನೆಲಕ್ಕೆ ತುಳುಕುತ್ತಿವೆ. ಹುಡುಗಿಯ ಬಲಬದಿಯ ಹುಲ್ಲು ಹಾಸಿನ ಮೇಲೆ ಗೆಜ್ಜೆ ಮಣಿಗಳಿಂದಲೇ ಬರೆದ ಒಂದು ಸಾಲಿನ ಕ್ಯಾಪ್ಷನ್... ‘ಕನಸುಗಳುದುರಿ ಘಲ್ಲೆನ್ನುತ್ತಿವೆ... ಹಿಡಿಯಬಹುದೆ ಅವುಗಳ ನಾದವ ಸಣ್ಣ ಬೊಗಸೆಯಲ್ಲಿ?!’
~ತೇಜಸ್ವಿನಿ ಹೆಗಡೆ*****_____*****


5 ಕಾಮೆಂಟ್‌ಗಳು:

Prateeksha ಹೇಳಿದರು...

ಏನು ಹೇಳಲಿ ಗೊತ್ತಾಗುತ್ತಿಲ್ಲಾ :) No words.

ತೇಜಸ್ವಿನಿ ಹೆಗಡೆ ಹೇಳಿದರು...

ಧನ್ಯವಾದಗಳು ಪ್ರತೀಕ್ಷಾ :)

ಮನಸು ಹೇಳಿದರು...

ತುಂಬಾ ಚೆನ್ನಾಗಿ ಕಥೆ ಪೋಣಿಸುತ್ತೀರಿ ತೇಜು. ಗೆಜ್ಜೆಗಳ ಚಿತ್ರಣ ಕಣ್ಣೆದುರು ಬಂತು. ಅಭಿನಂದನೆಗಳು

ತೇಜಸ್ವಿನಿ ಹೆಗಡೆ ಹೇಳಿದರು...

ಧನ್ಯವಾದಗಳು ಸುಗುಣಕ್ಕ :)

sunaath ಹೇಳಿದರು...

ವಾಹ್! ಆಶಯಗಳ ಸಫಲತೆಯನ್ನು ಸರಾಗವಾಗಿ ನಿರೂಪಿಸಿದ್ದೀರಿ.